Tuesday, November 6, 2012

ಸಿಕ್ಕ ಸಿಕ್ಕ ಹೆಣ ಹೊರುತ್ತಿದ್ದವ!ಕಥೆಗಳ ಆಚೆಗೂ ಬದುಕ್ಕಿದ್ದವ!

ಸಾಯಂಕಾಲದ  ಪೂಜಾ ಕೈಂಕರ್ಯ ಸುಪ್ರಭಾತ ಇವ್ಯಾವುದರ ಲಕ್ಷಣವಿಲ್ಲದ ಮನೆಯಲ್ಲಿ ಬೋಳು ಮಂಡೆ ಮಗು ವಿನಾಕಾರಣ  ಆಭ್ಯಾಸವೆಂಬಂತೆ ತಲೆ ಕೆರೆದು ಮಂಕು ಮೂರೆ ಇಟ್ಕೊಂಡಂಗಿತ್ತು ನನ್ನ ಅವಸ್ಥೆ!ಇದ್ದಾಗ ಹಾಳು  ಕೆರೆತ ಅನಿಸುವುದು ಇಲ್ಲಿದಿದ್ದಾಗ ನವೆಯ ಸವಿ ನೆನಪಲ್ಲಿ ತೇಲಿಸುತ್ತೆ.ಅದೇ ಮತ್ತಿಗೆ ಸುಖಾ ಸುಮ್ಮನೆ ಕೆರೆದು ಕೊಳ್ಳೋದು.ಅಮ್ಮನಿಲ್ಲದ ಮನೆಯೂ  ಸಹಜವಾಗಿ ಅಂತದ್ದೊಂದು ಇಕ್ಕಟಿಗೆ ದೂಡುತ್ತೆ  ನನ್ನನ.ಅವಳು ಯಕ್ಷರನ್ನು  ಮೆಚ್ಚಿ ನೆಚ್ಚಿಕೊಂಡವಳಾದರೆ ನಾನು ಯಕ್ಷರಿಗೂ ಮೀಗಿಲಾಗಿ  ಪ್ರತ್ಯಕ್ಷರಲ್ಲಿ ನಂಬಿಕೆ ಇಟ್ಟವಳು ಅಪ್ತವಾಗಿಸಿಕೊಂಡವಳು.ಹಾಗಾಗಿ ಅಮ್ಮನ ಮೂರು ತಾಸಿನ ನಿತ್ಯದ ಪೂಜಾ ವೈಕರಿ ಅವಳ ಕೊಂಚ ಅತಿ ಎನ್ನುವಂತ ದೇವರ ಮೇಲಿನ ಶ್ರದ್ಧೆ ಭಕ್ತಿಯನ್ನು ಉಡಾಫೆ ಹಾರಿಸಿ ಹಂಗಿಸಿ ಅವಳ ಮೊಂಡು ಮೂಗಿನ ತುದಿಯ ಸವಿಸ್ತಾರವಾದ ಜಾಗದಲ್ಲಿ ಬರ್ರನೆ ಜಿನುಗುವ ಚೂಪು ಹುಸಿ ಮುನಿಸನ್ನ ಕೆಣಕಿ ವಿವಿದ ಬಗೆಯ ಅಷ್ಟಾರ್ಚನೆ ಶತನಾಮಾವಳಿ ಮಾಡಿಸಿಕೊಂಡು ಮುಖ ಊದಿಸಿಕೊಳ್ಳೋ  ನಾನು ಅವಳಿಲ್ಲಾದಾಗ ಮನಸಲ್ಲೇ ಅಳುತ್ತಾ ಕೊರಗೋದು ಅವಕ್ಕಾಗೆ!

ನಿಂಗೆ ನಾನಂದ್ರೆ ಕಿಂಚಿತ್ತು ಭಯ ಗೌರವವಿಲ್ಲ ನಮ್ಮ ಮನೇಲಿ ಇಂತ ತಲೆ ಹರಟೆ ಅದೇಗೆ ಹುಟ್ಟಿತೋ ಅಂತ ಮುನಿಯೂ ಅಮ್ಮ.ನಂತರ ನನ್ನ ತುಂಟ ಅರಗಿಣಿ ಇಲ್ಲದ  ಬದುಕು ನೀರಸ ಅನ್ನುತ್ತಾ ಆಲಂಗಿಸೋ ಅಮ್ಮ.ಇಬ್ಬರಿಗೂ ಭೇದ  ಬಗಿಯದೆ ಇಬ್ಬರನ್ನು ಹವಣಿಸೋ ನಾನು.ಒಟ್ಟಿನಲ್ಲಿ ಸದ್ದು ಗದ್ದಲಗಳಿಲ್ಲದ ಮೌನಿ ಮನೆ ನನಗೆ ರುಚಿಸುವುದಿಲ್ಲ.ಪುಣ್ಯಕ್ಕೆ ಎಂದಿನಂತ ವೈಪರಿತ್ಯದ ವಾತಾವರಣ ಮರಳಲಿತ್ತು.ಮೂರು ದಿನದ ನೆಂಟರ ಮನೆ ಸುತ್ತಾಟ ಮುಗಿಸಿ ಹಿಂದಿರುಗುವವರಿದ್ದ ಅಪ್ಪ ಅಮ್ಮನ ದಾರಿ ನೋಡುತ್ತಾ ಹೂವಿನ ಉರಲಿಗೆ ನೀರು ತುಂಬಿ ಸೇವಂತಿ ಹೂವಿಂದ ಅಲಂಕರಿಸುತ್ತ ಕುಳಿತ್ತಿದ್ದೆ.
*
ಹಗಲಿಗೆ ಪೂರ್ಣ ವಿರಾಮದ ಪರದೆ ಎಳೆದು ಇರಳು ತೆರೆದುಕೊಳ್ಳೋ ಹೊತ್ತಿನಲ್ಲಿ ವಿದ್ಯುತ್ ಕಡಿತದಿಂದಾಗಿ ಚೆಲ್ಲಿದ್ದ ಚಂದ್ರನ ದೀಪದ ಮಬ್ಬಲೇ ಮಿನುಗುತ್ತಿತ್ತು  ನಮ್ಮನೆ ಎದುರಿನ  ಡಂಬಾರು ರಸ್ತೆ.ಮೊರೊತ್ತು ಅಳುವ ಪಕ್ಕದ ಮನೆಯ ನಾಯಿ ಕುನ್ನಿ ಅಗಾಗ  ನೆಲ ಕೆರಿತಿದ್ದ ಅಡಿಗೆ ಮನೆ ಹೊಕ್ಕುತ್ತಿದ್ದ ಮೂಲೆ ಮನೆ ಆಂಟಿ ಸಾಕಿದ ಕಳ್ಳ ಬೆಕ್ಕು ಅವರಿವರ ಮನೆ ಕತೆಗಳ ಪಟ್ಟಾಂಗ ಹೊಡೆದು ಕಿವಿ ಕೊರೆಸಿಕೊಳ್ಳು ನಮ್ಮ ಬೀದಿಯ ಪಟಾಕಿ ಮಹಿಳಮಣಿಗಳು ಇವೆಲ್ಲವೂ  ಯಾವುದೊ ಸಾಮೂಹಿಕ ದಿಗ್ಬಂದನೆಗೊಳಗಾದಂತೆ  ಜಗತ್ತು ಸಂಜೆ ಏಳಕ್ಕೆ ಸ್ಮಶಾನ ರೂಪ ತಳೆದಿತ್ತು ಹೊರಗೆ.

ಅಮ್ಮನಿಲ್ಲದ ಮನೆ,ಆಗಷ್ಟೇ ಹಚ್ಚಿದ ಕ್ಯಾಂಡಲ್ ಬೆಳಕಿನಲ್ಲಿ ಕರಗುತಿದ್ದ ಗಾಢ ಕತ್ತಲು,ಬ್ಯಾಟರಿ ಮುಗಿದು ಸ್ವಿಚ್ ಆಫ್ ಆಗಿದ್ದ ಗ್ಯಾಜೆಟ್ಸ್,ಟಿವಿ ಸದ್ದಿಲ್ಲದ ನಿರ್ಜನ ಮನೆಯ ಏಕಾಂಗಿ ಮೌನದ  ಜೊತೆಗಾರ್ತಿ ಪರಿಮಳ ಬೀರದ ಸೇವಂತಿ.ಇಂತದ್ದೊಂದು ನೆನಪಿನಂಗಳಕ್ಕೆ  ಸರಾಗವಾಗಿ ಜಾರುವ ಅನುಕೂಲಕರ ವ್ಯವಸ್ತೆಯ ಮಧ್ಯೇ ನೆನಪಾದವ 'ಸಾದಿಕ್ ಅಜ್ಜ'.ಅದು ಹಾಗೆ ಒಬ್ಬ ಸಾಮಾನ್ಯ ವ್ಯಕ್ತಿ ನಾಯಕನೆನಿಸಿಕೊಳ್ಳಬೇಕಾದರೆ ಸದಾಚಾರಿ ಎನಿಸಿಕೊಳ್ಳಬೇಕಾದರೆ  ಅವನು ಒಂದೋ ಜೀವನುದ್ದಕೂ ಕಟಿನ ಬ್ರಹ್ಮಚಾರಿತ್ವ ಪಾಲಿಸಿರಬೇಕು ಅಥವಾ ಆದಷ್ಟು ಬೇಗ ನೆಲಕಚ್ಚಬೇಕು ಮಣ್ಣಲ್ಲಿ ಮಣ್ಣಾಗಬೇಕು.ಅವನಂದು ಹಾಗೆ ಸಾಯದಿದ್ದರೆ ಹೀಗೆಲ್ಲಾ ಅನಿಸುತ್ತಿರಲಿಲ್ಲವೇನೋ.ಆದರೆ ಅವನು ಈಗಿಲ್ಲ.ಅದರಿಂದಲೇ ಈ ನೆನಪು ಈ ಹೊಟ್ಟೆ ಕಲಸುವಿಕೆ.ಕಥೆ ಪುಸ್ತಕದ ಪುಟ್ಟಗಳ ಸೀಳಿ  ಹೊರ ನಡೆದಂತೆ  ಸಿನೆಮಾ ಪರದೆಗಳಲ್ಲಿ ಮಿಂಚುವ ಆದರ್ಶವಾದಿ ಪ್ರೇಕ್ಷಕರ ಎದುರು ಜೀವಂತ ನಿಂತಂತೆ.ಅದೆಂತದೋ ಹುಚ್ಚು ಕಾಟ  ಈ ಅಜ್ಜಂದು.ಮೌಲ್ಯಗಳು ಕುಸಿದಾಗ ಕಣ್  ಎದುರು ಬರುತ್ತಾನೆ.ಹಾಗಂತ ಅತಿಯಾಗಿ ಮಾಡಿಕೊಂಡು ಹೊರಟಾಗ ಎಚ್ಚರಿಕೆಯ ಗಂಟೆಯಂತೆ ನೆನಪಾಗ್ತಾನೆ.ಯಾವುದು ಬೇಡ ಅಂದುಕೊಳ್ಳುತ್ತಿದಾಗೆ ಕೋಲು ಹಿಡಿದು ಬಡಿದ್ದೆಬಿಸುತ್ತಾನೆ.
*
ಈ ಸಾದಿಕ್ ಅಜ್ಜ ನನ್ನೂರಿನವನು! ಅಪ್ಪ ಅಮ್ಮನ ಊರನ್ನ ನನ್ನದಲ್ಲದ ಊರನ್ನ ನನ್ನದು ಅನ್ನೋದಕ್ಕೆ ಸ್ವಾಭಿಮಾನ ಅಡಚಣಿಸಿದರು ಅನಾಯಾಸವಾಗಿ ಬಂದು ಬಿಡುವುದು."Home is where your heart lies" ಅನ್ನೋ ನಾಣ್ನುಡಿ ಒಮ್ಮೆ ಸಮಾದಾನಿಸಿದರು ನನ್ನ ಅಸ್ತಿತ್ವವ ಉಲ್ಲೇಕಿಸದ ನನ್ನ ಸಂಪೂರ್ಣ ಒಡನಾಟದ ಪರಿಚಯವಿಲ್ಲದ ಊರು ನನ್ನದೇಗೆ ಅನಿಸುವುದು ಉಂಟು.ಹಾಗೆ ಪರಿಗಣಿಸಿದರೆ ಬೃಹತ್ ಬೆಂಗಳೂರು ಸಹ ಅಷ್ಟೇ ತೂಕದ ಅನಾಮಿಕತನ ಪ್ರದರ್ಶಿಸುತ್ತೆ ನನ್ನ ಪಾಲಿಗೆ ನನ್ನಂತ ಅನೇಕರ ಪಾಲಿಗೆ.ನಾನು ಹುಟ್ಟಿದ್ದು ಓದಿದ್ದು ಬೆಳೆದಿದ್ದು ಆಡಿದ್ದು ಸೈಕಲ್ ಯಾನ ನಡೆಸಿದ್ದು ಕನಸು ಚಿಗುರೊಡೆದಿದ್ದು ಕಡೆಗೆ ಅವುಗಳು ನನಸಾಗುವುದು ಬೆಂಗಳೂರಲ್ಲೇ ನಾನು ಪ್ರೀತಿಸಿದ್ದು ಬೆಂಗಳೂರನ್ನೇ ಆದರೂ  ಮೈಕೆಸರು ಮಾಡಿ ದಿನವಿಡೀ ನಲಿದ್ದಿದ್ದು ಹೊಳೆಯಲ್ಲಿ ಮಿಂದಿದ್ದು ಕಾಡು ಬೇಧಿಸಿದ್ದು ಕೆಂಡ ಹಾರಿ ಕಾಲು ಸುಟ್ಟಿಕೊಂಡಿದ್ದು ಹುಲ್ಲು ಹಾಸೀನ ಬಯಲಲ್ಲಿ ರಾತ್ರಿಯಿಡಿ ನಕ್ಷತ್ರ ಎಣಿಸುತ್ತ ಹರಟೆ ಹೊಡೆದು ಮಲಗಿ ಪ್ರಕೃತಿಗೆ ಹತ್ತಿರವಾದದ್ದು ಮನಸು ಆಳಾವಾಗಿ ಬೇರೂರಿರುವುದು ಮಾತ್ರ ಹಳ್ಳಿಯಲ್ಲಿ.ಅಷ್ಟರ ಮಟ್ಟಗಿನ  ಹೈಬ್ರಿಡ್ ಸಂತತಿಯವಳು ನಾನು.ಮತ್ತೆ ಈ ಸಾದಿಕ್ ಅಜ್ಜನ  ಭೇಟಿ ಆದದ್ದು ಕೂಡ ಊರಿನ ಅಂತದ್ದೊಂದು ದಟ್ಟ ಬಯಲಿನ ಹಸಿರು ಜಗಲಿಯಲ್ಲಿ.ಮೊದಲ ನೋಟದಲ್ಲೇ ತೀರ ಪರಿಚಯಸ್ತನಂತೆ ಕಂಡಿದ್ದ ಅಜ್ಜ.

ಚಿತ್ರಕೃಪೆ:ಮದನ್ ಕುಮಾರ್


ನಾನು ಅಣ್ಣ ಮಾವನ ಮಕ್ಕಳು ಬೇಸಿಗೆಯ ಸಂಜೆ ಆರ ಕ್ಕೆಲ್ಲ ಊಟ ಮುಗಿಸಿ ಮಿಣು ಮಿಣು ಮಿಂಚುತ್ತಿದ್ದ ಮಿಂಚುಳದ ಬೆನ್ನತ್ತಿ ಬಯಲಿನೆಡೆಗೆ ಹೊರಟು ಬಿಡುತ್ತಿದ್ದೆವು.ಕಾಳಿ ದೇವಸ್ಥಾನದ ಬಳಿಯಿದ್ದ ವಿಶಾಲ ಬಯಲಿನಲ್ಲಿ ಆಕಾಶ ನೋಡುತ್ತಾ ಮಲಗಿರುತ್ತಿದ್ದ ಸಾದಿಕ್ ಅಜ್ಜನ ಪಕ್ಕ ಹೋಗಿ "ಏನಜ್ಜ ನೀನು ನಮ್ ಹಾಗೆ ಮೇಲೆ ನೋಡ್ತಾ ಮಲಗಿದ್ದ?ನಿಂಗೊತ್ತಾ ಬೆಂಗಳೂರಿನ ಬಾನೇ ಬೇರೆ ಇಲ್ಲಿಯ ಬಾನೆ ಬೇರೆ.ಅಲ್ಲಿನ ನಕ್ಷತ್ರಗಳೇ ಬೇರೆ ಇಲ್ಲಿನವೇ ಬೇರೆ"ಅಂತ ಏನೇನೋ ಆ  ವಯಸಿನಲ್ಲಿ ನಮಗೆ ಗೋಚರಿಸುತ್ತಿದ್ದ ಸೂಕ್ಷ್ಮ ವ್ಯತ್ಯಾಸಗಳನ್ನ ಕೌತುಕಗಳನೆಲ್ಲಾ  ಎಳೆದು ಎಳೆದು ರೆಕ್ಕೆ ಪುಕ್ಕ ಹಚ್ಚಿ ಆತನ ಕಿವಿ ತುಂಬುತ್ತಿದ್ದೆವು.ಅದನ್ನೆಲ್ಲಾ ಚೂರು ಚಿಟಿಕ್ ಪಿಟಿಕ್ ಅನ್ನದೆ ಬೆರಗುಗಣ್ಣಿನಿಂದ ಆಲಿಸಿ ತನ್ನ ಕಪ್ಪು ಮಿಶ್ರಿತ ಬಿಳಿ ಉದ್ದದ ಗಡ್ಡ ಸವರಿಕೊಳ್ಳುತ್ತಾ"ಹೌದ ಬಚ್ಚಾ?!" ಎಂದು ರಾಗವೆಳೆದು ನಸುನಗುತ್ತಿದ್ದ.

ಸಾದಿಕ್ ಅಜ್ಜ ಸಾಂಪ್ರದಾಯಿಕ ಮುಸ್ಲಿಂ  ಜನಾಂಗದವನು.ಊರಿನಲ್ಲಿ ಅಲ್ಪಸಂಖ್ಯಾತರ ಒಕ್ಕಲು ಬೆರೆಳೆಣಿಕೆ ಅಷ್ಟಿದ್ದವು.ಸಾದಿಕ್ ಅಜ್ಜ ಮುಸಲ್ಮಾನನಾಗಿ ಹುಟ್ಟಿ ಮುಸುಲ್ಮಾನಾಗೆ ಸತ್ತರೂ ಬದುಕ್ಕಿದ್ದಷ್ಟು ದಿನ ಮುಸಲ್ಮಾನನು ಆಗದೆ ಹಿಂದುವು  ಆಗದೆ ಕೇವಲ ಮನುಷ್ಯನಾಗೆ ಉಳಿದಿದ್ದ.ಅದು ಒಂದು ರೀತಿ ಆತನಿಗಿದ್ದ ಅನಿವಾರ್ಯತೆಯೂ ಹೌದು ಹಾಗೆ ಅವನಿಗೆ ಅಂಟಿಕೊಂಡಿದ್ದ ಆದರ್ಶವು ಹೌದು ಆತ ಲಾಲಿಸಿ ಪಲಿಸಿಕೊಂಡಿದ್ದ ಮನುಷ್ಯತ್ವ ಮೌಲ್ಯವನ್ನೊಳಗೊಂಡ  ಜೀವನಕ್ರಮವು ಹೌದು. ಯೌವನದಲ್ಲೇ ಹೆಂಡತಿ ಕಳೆದುಕೊಂಡ ಸಾದಿಕ್ ಅಜ್ಜ ಮರು ಮದುವೆ ಆಗದೆ ಅರ್ಧಂಬರ್ದ ಬ್ರಹ್ಮಚಾರಿಯಾಗಿ ಹೋಗಿದ್ದ.ಒಬ್ಬಂಟಿ ಅಜ್ಜನಿಗೆ ಒಡ ಹುಟ್ಟಿದವರು ದಾಯಾದಿ ಎನಿಸಿಕೊಂಡವರು ಆತನಿಗಾಗಿ ಚಡಪಡಿಸುವವರು ಯಾರು ಇರಲಿಲ್ಲ.ಇದ್ದರೂ ಅವರ ಸುಳಿವು  ಊರಿನವರಿಗಿರಲಿಲ್ಲ ಪಾಪ ಅಜ್ಜನಿಗೂ ಇರಲಿಲ್ಲವೇನೋ ಹಾಗಾಗೆ ಅದಕ್ಕೂ  ಇದಕ್ಕೂ  ಎಲ್ಲದಕ್ಕೂ ಆತ ಊರಿನವರನ್ನೇ ಹಚ್ಚಿಕೊಂಡು ಅವರಿಗಾಗೇ ಬದುಕ್ಕಿದವ.ಯಾರ ಹೆಣಕ್ಕಾದರು ಹೆಗಲು ಕೊಡುತ್ತಿದ್ದವ.ಅದರಲ್ಲೂ ಬದುಕಿದ್ದ ಹೆಣಗಳೇ ಹೆಚ್ಚಿನವು.ಅಲ್ಲಿಲ್ಲಿ ತೋಟದ ಕೆಲಸ ಮದುವೆ ಕೆಲಸ ಹೆಣ  ಸುಡೋಕೆ ಕಟ್ಟಿಗೆ ಕೂಡಿಸೋ ಕೆಲಸ ಹೀಗೆ ಅವನೇ ಕೊನೆಯ ಆಧಾರವೆನ್ನುವಂತೆ ಅರಸಿಕೊಂಡು  ಬರುತ್ತಿದ್ದವರು ಹಚ್ಚುತ್ತಿದ್ದ ಎಲ್ಲ ಕೆಲಸಗಳನ್ನು ಬಿಡಿಗಾಸು ಅಪೇಕ್ಷಿಸದೆ ಬೇಸರಿಸದೆ ಮಾಡುತ್ತಿದ್ದನೆಂದು ಅಮ್ಮನಲ್ಲಿ ಮಾವ ಆಗಾಗ ಹೇಳುತ್ತಿದ್ದರು.ಕಾಳಿ ಮಂದಿರ ಕಟ್ಟುವಾಗ ಆಳು ಮಕ್ಕಳ ಮುಖ್ಯಸ್ಥನನ್ನಾಗಿ ಇವನನ್ನೇ ನೇಮಕ ಮಾಡಿದ್ದರಂತೆ.ಅಂದಿನಿಂದ ಕಾಳಿ ಮಂದಿರ ಪಕ್ಕದಲ್ಲೇ ಒಂದು ಪುಟ್ಟ ಹೆಂಚಿನ  ಮನೆ ನಿರ್ಮಿಸಿಕೊಂಡು ಅಲ್ಲೇ ವಾಸಿಸುತ್ತಿದ್ದ  ಅಜ್ಜ.

ಅಜ್ಜ ನಾವು ಮಕ್ಕಳಿಗೂ ಅಷ್ಟೇ ಪ್ರೀತಿಪಾತ್ರನಾಗಿದ್ದ.ಅದರಲ್ಲೂ ನನಗೆ ಅಜ್ಜನಲ್ಲಿ ವಿಶೇಷ ಪ್ರೀತಿ.ಆ ಕಾಲದಲ್ಲಿ ಚಿಕ್ಕವರಿಂದ ಹಿಡಿದು ಮುತ್ತೈದೆಯಾಗಿ ಸಾಯದ ನನ್ನ ಅಜ್ಜಿಯ ಹಣೆಯಲ್ಲೂ  ರಾರಾಜಿಸುತ್ತಿದ್ದ ಗಂಧ ಅಂದರೆ ಏನೋ ಆಕರ್ಷಣೆ ಗೌರವ.ಗಂಧದ ಘಮಲು ಅಂದರೆ ಪಂಚಪ್ರಾಣವಾಗಿದ್ದ ನನಗೆ ಗಂಧದ ಕೊರಡು ತಂದು ಕೊಟ್ಟಿದ್ದ ಅಜ್ಜ.ದಪ್ಪ ಮೀಸೆ ವೀರಪ್ಪನ್ ಊರಿನಾಚೆ ಬೆಟ್ಟದ ಕಾಡಿನಲ್ಲಿ ನಿಗೂಢವಾಗಿ ಬೀಡು ಬಿಟ್ಟಿದ್ದಾನೆನ್ನುವ ಬಿಸಿ ಬಿಸಿ ಸುದ್ದಿ ಗೌಪ್ಯವಾಗಿ ಹಬ್ಬಿದ್ದ ದಿನಗಳವು.ಅಂತಹ ಪರಿಸ್ಥಿಯಲ್ಲೂ ಕಾಡಿನೊಳಕ್ಕೆ ಹೋಗುವ ನಮ್ಮ ಅಭಿಲಾಷೆಗೆ ನೀರೆರಚದೆ ಪೂರಕವಾಗಿ ಸೂತ್ರ ಬಿಗಿದು ಹಾರಿಸಿದವನು ಸಾದಿಕ್ ಅಜ್ಜ.ಗುಡ್ಡ ಚಾರಣಕ್ಕೆ ಅವನು ಒಂದು ಕೈಯಲ್ಲಿ ಕೊಲಿಡಿದು ಇನ್ನೊಂದು ಕೈಯಲ್ಲಿ ಒಣಗಿದ ಮುಳ್ಳು ಗಿಡಗಳ ಕಡೆಯಲು ಕತ್ತಿ ಹಿಡಿದು ನಮ್ಮ ದಾರಿಯಾಗಿ ಬುಡು ಬುಡು ಎಂದು ದಾಪುಗಾಲಿಟ್ಟು  ಮುನ್ನುಗ್ಗುತ್ತಿದ್ದರೆ  ಅವನಿಂದೆ ಕಲ್ಲು ಮುಳ್ಳಿನ ದಾರಿಯಲ್ಲಿ  ಟುಮು ಟುಮು ಹೆಜ್ಜೆ ಸಪ್ಪಳಿಸಿ ಓಡುತ್ತ ನೋಡ ಸಿಗುತ್ತಿದ್ದ ನವಿಲು ಮೂಲ ಉಡಗಳ ಜೊತೆಗಿಷ್ಟು ಕ್ಷೇಮ ಕುಶಲೋಪಚಾರಿಯ ಮಾತುಗಳನ್ನಾಡಿ ವನದೇವಿಯ ಅಪರೂಪದ ಪ್ರೀತಿ ಸೌಂದರ್ಯ ಸವಿಯುತ್ತಿದೆವು.ಅಲ್ಲಿಂದ ಬರುವಾಗ ಆಯಾಸವೆಂದವರನ್ನ  ಸರದಿ ಮೆರಿಗೆ ಭುಜದ ಮೇಲೇರಿಸಿಕೊಂಡು,ನಡೆಯುತ್ತಿದ್ದವರ ಉದ್ದೇಶಿಸಿ  "ಹುಷಾರ್ ಬಚ್ಚೋ ನಿಮ್ಮ ಮುದ್ದು ಬಿಳಿ ಕಾಲಿನ ಅಡಿ ಕೆಂಪಾದವು ನೋಡ್ಕೊಂಡ್ ನಡೀರಿ"ಅಂತೇಳಿ ಹೇಳಿನೆ ಸುಸ್ತಾಗುತ್ತಿದ್ದ ಸಾದಿಕಜ್ಜ.   
*
"ಇಡೀ ಊರಿನ ಜವಾಬ್ದಾರಿಯನ್ನ ಅವನೇ ತಲೆ ಮೇಲೆ ಹೊತ್ತಂತೆ ಕೆಲಸ ಮಾಡುತ್ತೆ ಸಾದಿಕಣ್ಣ.ಕೊನೆ ದಿನಗಳಲ್ಲಿ ಇವನ ಹೊರೋಕೆ ಅದ್ಯಾವ ಜನ ಬರುತ್ತಾರೋ ನೋಡಬೇಕು.ಎಲ್ಲಾ ಅವಕಾಶವಾದಿಗಳು ಹಿಂದು ಮುಂದು ಇಲ್ಲದ ಮುದುಕನನ್ನ ಮುಗಿ ಬಿದ್ದು ಉಪಯೋಗಿಸಿಕೊಳ್ಳುತ್ತಿದ್ದಾರೆ" ಅಂತ ಮಾವ ಶಕುನದ ಹಕ್ಕಿಯಂತೆ ಯಾವಾಗಲು ಉಚ್ಚರಿಸುತ್ತಿದ್ದ  ದಿನಗಳು ಸಾದಿಕಜ್ಜನಿಗೆ  ಬಂದೆರೆಗಿತು.ಆತನ ಋಣಕ್ಕೆ ಬಿದ್ದಿದ್ದವರಿಗೆಲ್ಲಾ  ಅಜ್ಜ  ಮುಸಲ್ಮಾನ್ ಎಂಬುದು ನೆನಪಾದದ್ದು ಆವಾಗಲೇ... ಅವನು ಹಾಸಿಗೆ ಹಿಡಿದಾಗಲೇ.... ಅವನ  ಆರೈಕೆ ಯಾರು ಮಾಡಬೇಕೆಂಬ ಪ್ರಶ್ನೆ ಎದ್ದಾಗಲೇ! ಅಜ್ಜನ ಕಾಳಜಿ ಮಾಡುವುದ ಮರೆತು ಇಂತಹ ಚರ್ಚೆಗಳ ನಡೆಸಿ ಅಜ್ಜನ ಮುಗ್ದ ಮನಕ್ಕೆ ಮೊಳೆ ಹೊಡೆದಿದ್ದರು.ಇನ್ನೂ,ಅಜ್ಜನ ಆಪ್ತರೆನಿಸಿಕೊಂಡ ಊರಿನ  ಮೂರು ಮತ್ತೊಂದು ಮುಸಲ್ಮಾನರು, ಜೀವನಪರ್ಯಂತ ನಮ್ಮ ಧರ್ಮವ ಕಡೆಗಣಿಸಿ ಹಿಂದೂಗಳ ಕೈಗೊಂಬೆಯಂತಿದ್ದ ಬೇಕಾದರೆ ಅವರಿಂದಲೇ ಚಾಕರಿ ಮಾಡಿಸಿಕೊಳ್ಳಲ್ಲಿ  ಅಂತ ಮೂಗು ಮುರಿದು, ಶೂಲಕ್ಕೇರಿಸಿ ಬಿಟ್ಟರು.ಅದರ ಪರಿಣಾಮವೆಂಬಂತೆ  ಅಜ್ಜನ ದೇಹದೊಡನೆ  ಮನಸೂ  ಕುಗ್ಗಿತು.

ಹೀಗೆ ಮಲಗಿದ್ದ ಅಜ್ಜನಿಗೆ ಕಾಳಿ ದೇವಸ್ಥಾನ ಪೂಜಾರಿ ಮಗ,ಹರೀಶ ಕೆಲವೊಮ್ಮೆ ನನ್ನ ಮಾವ ಗಂಜಿ ಕೊಟ್ಟು ಬರುತ್ತಿದ್ದರಂತೆ.ಅದೊಂದು ದಿನ ಊರಿಗೆ ಹೋದಾಗ ಗಂಜಿ ಕೊಟ್ಟು ಬರುತ್ತೀನೆಂದು ಹೋದ ನನಗೆ ಕೋಣೆಯ ಮೊಲೆಯಲ್ಲಿ ಮುದುರಿ ಮಲಗಿದ್ದ  ಮಗುಮನಸಿನ ಅಜ್ಜನ ಕಣ್ಣುಗಳಲ್ಲಿ ಎಂದಿನಂತ ಜೀವಂತಿಕೆ ಆಪ್ತತೆ ಕಾಣಲಿಲ್ಲ.ಪಾಪ ಬಿದ್ದಲ್ಲೇ ಬಿದ್ದ ಅಜ್ಜನ ಗಡ್ಡ ಕೂದಲಿನಲ್ಲಿ ಹೇನು ಹರಿದಾಡುತ್ತಿದ್ದವು.ಅದೆಷ್ಟೂ ಹಿಂಸೆ ಅನುಭವಿಸಿದ್ದನೋ."ಅಜ್ಜ ಗಂಜಿ ತಂದಿದ್ದೀನಿ ತಿಂದು ಮಲಗು ಹಾಗೆ ಗಡ್ಡ ಬೋಳಿಸಜ್ಜ ನಾನು ಮಾವನಿಗೆ ಹೇಳಲಾ?" ಅಂದಿದ್ದೆ ತಡ ಇಟ್ಟಿದ್ದ ಊಟದ ಡಬ್ಬಿಯನ್ನ ತಳ್ಳಿ "ಹೋಗು ಬಚ್ಚ ನೀನಿಲ್ಲಿಂದ ವಿನಾಕಾರಣ ಯಾರನ್ನು ಕನಿಕರಿಸಬೇಡ ನಡಿ ನಡಿ" ಅಂದು ಕೊಲಿಂದ ಆಚೆ ಅಟ್ಟಿಬಿಟ್ಟ .ಅಜ್ಜನ ಹುಚ್ಚು ವರ್ತನೆ ನೋಡಿ ಒಂದು ಕ್ಷಣ ದಿಗ್ಭ್ರಂತಳಾದೆ.ಕೋಪ ಬಿಕ್ಕಳಿಕೆ ಎರಡು ಒಟ್ಟೊಟ್ಟಿಗೆ ಉಕ್ಕಿ ಬಂದು ಮುಖ ತಿರುಗಿಸಿ ಹೋಗುತ್ತಿದ್ದವಳಿಗೆ ಕರಳು ಕಿವಿಚಿ ಮತ್ತೆ ಹಿಂದಿರುಗಿದಾಗಲೇ ಮರೆಯಲ್ಲಿ ಮಲಗಿದ್ದ ಅಜ್ಜನ ದೀನ ಕಣ್ಣಾಲಿಗಳಿಂದ ಹನಿ ನೀರು ಜಾರಿದ್ದ ಕಂಡಿದ್ದು. ಬದುಕು ಆತನಿಗೆ ಕಲಿಸಿದ ಪಾಠವ  ಯಾರಿಗೋ ರವಾನಿಸಿದ ತೃಪ್ತ ಭಾವದೊಂದಿಗೆ ಶೂನ್ಯ ದತ್ತ ನೋಡುತ್ತಾ ಮಲಗಿದ್ದ.ಅದ್ಯಾವುದು  ನನಗಂದು ಅರ್ಥವಾಗಲೇ ಇಲ್ಲ.ಅವನ ಮುಖದೆಡೆಗೆ ಹರಿಯುತ್ತಿದ್ದ ಹೇನಿನ ಸೈನ್ಯ ಅವನಿದ್ದ ಚಿಂತಾಜನಕ ಸ್ಥಿತಿ ಕಂಡು ಇದ್ದ ಕೋಪ ನುಣುಚಿ ಸಂಕಟ ತುಂಬಿಕೊಂಡು ಮನೆ ಕಡೆ ನಡೆದೆ.

ಇದೆಲ್ಲ ಆಗಿ ವರುಷಗಳೆ  ಉರಿಳಿದ್ದಾವೆ.ಆತ ಕೊಟ್ಟಿದ್ದ ಗಂಧದ ಕೊರಡು ಸವಿದು ಸವಿದು ನನ್ನ ಮನ ತಣಿಸಿ ಹಣೆ ತುಂಬಿಸಿ ತಾನು ದಿನೇ ದಿನೇ ತೆಳ್ಳಗಾಗುತ್ತಿದ್ದೆ.ಅಜ್ಜನ ಅಂದಿನ ಭಾವದ ಸಿಕ್ಕುಗಳನ್ನ ಬಿಡುಸುವಲ್ಲಿ ನಾನಿಂದು ಸಫಲಳಾಗಿದೇನೆ.ಈಗ ಅವನ ನೆನಪಾಗಿ ಉಳಿದಿರುವ ಕೊರಡನ್ನ  ಇನ್ನಷ್ಟು ಸವಿಸಲು ಹೃದಯ ಒಪ್ಪುತ್ತಿಲ್ಲ.ಅದು ಮೇಜಿನ ಡ್ರಾಯರ್ ಒಳಗೆ ತನ್ನ ಗಟ್ಟಿ ಸ್ಥಾನ ಕಾತರಿ ಪಡಿಸಿಕೊಂಡಿದೆಯಾದರು ಸವಿಯಲು ಘಮ ಸೂಸಲು ಹಾತೊರೆಯುತ್ತಿದ್ದಂತಿದೆ.ಯಾರನ್ನು ಕನಿಕರಿಸ ಬೇಡ ಅನ್ನುತ್ತಲೇ ನನ್ನ ಕನಿಕರಿಸಿದ ಅಜ್ಜ ಇವತ್ತಿಗೂ ನನ್ನಲ್ಲಿ  ಆಗಾಗ ಜೀವಂತವಾಗುತ್ತಾನೆ,ಎದ್ದು ನಿಲ್ಲುತ್ತಾನೆ,ಕೊಲಿಡಿದು ಅಟ್ಟುತ್ತಾನೆ!

8 comments:

  1. ತುಂಭಾ ಚೆನ್ನಾಗಿದೆ ರಚಿಸಿದ್ದಿರಿ ಅಭಿನಂದನೆಗಳು

    ReplyDelete
  2. ಸಾದಿಕ್ ಅಜ್ಜನ ಪಾತ್ರ "ಕಥೆಯಿಂದಾಚೆಗೂ" ಕಾಡುವ ಪಾತ್ರ..!! "ಕಥೆಯಿಂದಾಚೆಗೂ" ಕಾಡುವ ಇಂಥ ಪಾತ್ರವನ್ನ, ನೀನು ಬರೆದಿದ್ದರಲ್ಲಿ ಆಶ್ಚರ್ಯವಿಲ್ಲ. ಬೆಂಗಳೂರಿನ ಮತ್ತು ಹಳ್ಳಿಯ ಚಿತ್ರಣ ಸೊಗಸಾಗಿತ್ತು. ತುಂಬಾ ಮೌಲ್ಯಗಳನ್ನೊಳಗೊಂಡಿರುವ ಈ ಬರಹ ನನಗೆ ತುಂಬಾ ಇಷ್ಟವಾಯಿತು. "ಕನಿಕರಿಸಿದ ಅಜ್ಜ ಇವತ್ತಿಗೂ ನನ್ನಲ್ಲಿ ಆಗಾಗ ಜೀವಂತವಾಗುತ್ತಾನೆ,ಎದ್ದು ನಿಲ್ಲುತ್ತಾನೆ,ಕೊಲಿಡಿದು ಅಟ್ಟುತ್ತಾನೆ!" ಒಂದೇ ಸಾಲಿನಲ್ಲಿ ಏನೆಲ್ಲಾ ಹೇಳಿದೆ ನೀನು..!!

    ಈ ಒಂದು ಸಾಲನ್ನೇ ಇಟ್ಟುಕೊಂಡು ಇನ್ನೊಂದು ಬರಹವನ್ನೇ ಬರಿಯಬಹುದು.

    ಧನ್ಯವಾದಗಳು :-)

    ReplyDelete
  3. ಮಹೇಶ್ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು :-)

    ರಾಘ ಸಾದಿಕ್ ಅಜ್ಜ ಕೆಲವರಲ್ಲಿ ಜೀವಂತವಾಗಿ ಎದ್ದು ನಿಲ್ಲುತ್ತಾನೆ ಹಲವರಲ್ಲಿ ಅಂತಹ ಆಶಯವಿದ್ದರು ಅವನ ಕೋಲಿನ ಪೆಟ್ಟಿಗೆ ಹೆದರುವರೆನೋ ಅನಿಸುತ್ತೆ.....ನಿನ್ನ ಮೆಚ್ಚುಗೆಗೆ ಧನ್ಯವಾದಗಳು ಗೆಳೆಯ.:-)

    ReplyDelete
  4. ಕೆಲವು ವ್ಯಕ್ತಿಗಳು ಬೆಂಕಿಯ ಪೊಟ್ಟಣದ ಹಾಗೆ, ಕರ್ಪೂರದ ಹಾಗೆ...ಜಗಕ್ಕೆಲ್ಲ ಬೆಳಕು ನೀಡಿ ತಾವು ಕತ್ತಲಲ್ಲೇ ಅಳಿಯುತ್ತಾರೆ..ಮನ ತುಂಬಿ ಬರುತ್ತದೆ ಇಂತಹ ವ್ಯಕ್ತಿಗಳ ಬಗ್ಗೆ ಕೇಳಿದಾಗ ಒಡನಾಡಿದಾಗ..ಆ ನೆನಪುಗಳು ಸದಾ ಮಧುರ..ಭಾವ ಲಯಕ್ಕೆ ಲಗ್ಗೆ ಹಾಕುವ ನಿಮ್ಮ ಲೇಖನಗಳು ತುಂಬಾ ಇಷ್ಟವಾಗುತ್ತವೆ..

    ReplyDelete
  5. "ಕನಿಕರಿಸಿದ ಅಜ್ಜ ಇವತ್ತಿಗೂ ನನ್ನಲ್ಲಿ ಆಗಾಗ ಜೀವಂತವಾಗುತ್ತಾನೆ,ಎದ್ದು ನಿಲ್ಲುತ್ತಾನೆ,ಕೊಲಿಡಿದು ಅಟ್ಟುತ್ತಾನೆ!" ಈ ಸಾಲುಗಳು ಇಡೀ ಕಥೆಗೆ ಕಿರೀಟವಿದ್ದಂತೆ......ಮಾನವೀಯ ಮೌಲ್ಯಗಳ ಹೂರಣವನ್ನು ಸಾದಿಕ್ ಅಜ್ಜನ ಮೂಲಕ ಹೆಣೆದು ಸುಂದರ ನಿರೂಪಣೆಯೊಂದಿಗೆ ಸೊಗಸಾಗಿ ಮೂಡಿಬಂದ ಬರಹ......ನನಗೆ ಈಗಲೂ ಒಂದು ಸಂದೇಹ ...ಇದು ನೀನೆ ಬರೆದದ್ದಾ ??????

    ಅಭಿನಂದನೆಗಳು ಸಹೋದರಿ......

    ReplyDelete
  6. ನನಗೆ ಈಗಲೂ ಒಂದು ಸಂದೇಹ ...ಇದು ನೀನೆ ಬರೆದದ್ದಾ ??????

    ಅಶೋಕಣ್ಣನ ಈ ಅನುಮಾನ ನನ್ನದೂ ನನ್ನದೂ ಕೂಡ..!! :D :D :D

    ಸಾದಿಕ್ ಅಜ್ಜ ನನಗೂ ಪರಿಚಿತ.. ನಮ್ಮೂರಿನ ನರಸಿಂಹಣ್ಣ ನಾಗಿ. ಸಾದಿಕ್ ಅಜ್ಜನ ನಡವಳಿಕೆಯನ್ನ ಯಥಾವತ್ ಹೋಲುವ ನರಸಿಂಹಣ್ಣ ನದೂ ಒಂದು ಕರುಳು ಕಿವುಚುವ ಕಥೆ. ನಂಗೆ ಅದನ್ನ ಬರೆಯೋ ಆಸೆ.. ಮುಂದೆನ್ದಾದ್ರು ಒಮ್ಮೆ ಬರೆಯೋ ಪ್ರಯತ್ನ ಮಾಡ್ತೀನಿ.. ನರಸಿಂಹಣ್ಣ ನೂ ಸಾದಿಕ್ ಅಜ್ಜನ ಹಾಗೆ ಊಟದ ಸಮಯಕ್ಕೆ ಊರಿನವರೆಲ್ಲರಿಗೂ ಮಗ.. ಕೆಲಸಕ್ಕೆ ಆಳು.. ಆದ್ರೆ ಇನ್ನು ಇಹವನ್ನು ತ್ಯಜಿಸಿಲ್ಲವಷ್ಟೇ. ನಮ್ಮೂರಿಗೆ ಮಾತ್ರವಲ್ಲ ಸುತ್ತ ಆರೂರುಗಳಿಗೂ ಇವ ಸಾದಿಕ್ ಅಜ್ಜನೆ..


    ನಿಜಕ್ಕೂ ಸಾದಿಕ್ ಅಜ್ಜ ಕತೆಯಿಂದಾಚೆಗೂ ಬದುಕಿರುವ ಚಿರಂಜೀವಿಯೆ.. ತುಂಬ ಚೆನ್ನಾಗಿ ಬರೆದಿರುವೆ ಜೆರ್ರಿ.. ಇಷ್ಟ ಆಯಿತು.

    ReplyDelete
  7. ನಿಜ ನನಿಗೆ ಅಳುನೆ ಬಂತು ಅಜ್ಜನ ಕತೆ ಕೇಳಿ...
    ಚೆನ್ನಾಗಿದೆ ವೈಶುಜಿ...:)

    ReplyDelete
  8. ಚೆನಾಗಿದೆ...ಆಪ್ತವಾದ ಶೈಲಿ ಇಷ್ಟವಾಯ್ತು...ಇನ್ನಷ್ಟು ಬರೆಯಿರಿ ....ಹಾಂ ಕಪ್ಪೆಯ ಕಥೆ ಇಷ್ಟವಾಯ್ತು..ಕಣ್ಣಿನ ಚಿತ್ರವೂ ಸುಂದರ..ಮುಂದುವರೆಸಿ
    ನಮಸ್ತೆ

    ReplyDelete