Thursday, March 23, 2017

ಕಾಣದ ಬೇಡಿ: ಬಂಧನದ ಹಂಗಿಲ್ಲ

ಚಿತ್ರ ಕೃಪೆ: ಮದನ್ ಕುಮರ್
ಆ ದೈತ್ಯ ಬಿಲ್ಡಿಂಗಿನ  ಒಂಬತ್ತನೇ ಮಹಡಿಯ ಒಂದು  ಬೃಹತ್ ಗಾಜಿನ ಕಿಟಕಿಯ ಒಳ ಇಣುಕಿದರೆ ಎದುರಾಗುವುದು ಶುಭ್ರ ಬಿಳಿಯ ವಾತಾವರಣವುಳ್ಳ ಕೊಠಡಿ. ಅಲ್ಲಿರುವ ಪ್ರತಿಯೊಂದು ವಸ್ತುವು ಎಲ್ಲ ಬಣ್ಣಗಳನ್ನು ತನ್ನೊಳಗೆ ಅಡಗಿಸಿಕೊಂಡ ಬಿಳಿಯ ಬಣ್ಣದಾಗಿದ್ದವು.ಅಲ್ಲೇ ಬಲಕ್ಕೆ ಒಂದು ಮೂಲೆಯಲ್ಲಿ ಮೇಲಿಂದ ಕೆಳಕ್ಕೆ ಜೋತುಬಿದ್ದಂತಿದ್ದ ಬಿಳಿ ಬಣ್ಣದ ಪರದೆಗಳ ನಡುವೆ ಮಲಗಿದ್ದ ರಚನ  ಕಣ್ಣು ಬಿಟ್ಟು ಒಮ್ಮೆ ಕೊಠಡಿಯ ಸುತ್ತಾ ನೋಡಿದಳು. ತನ್ನ ಬೆಡ್ಡಿನ ಪಕ್ಕದ ಮೇಜಿನ ಮೇಲಿದ್ದ  ಖಾಲಿ ಪುಸ್ತಕದ ಹಾಳೆಯ ಮೇಲೇ ತನಗೆ ಆಗಷ್ಟೇ ಬಿದ್ದ  ಕನಸನ್ನು ದಾಖಲಿಸಲು ಮುಂದಾದಳು. ಅವಳೆಲ್ಲಾ ಕನಸುಗಳನ್ನು  ಹೀಗೆ  ಬರೆದಿಡುತ್ತಿರಲಿಲ್ಲ. ತುಂಬಾ ದಿನಗಳ ನಂತರ  ತನ್ನ  ದೀರ್ಘಕಾಲದ ಅನಾರೋಗ್ಯಕ್ಕೆ ಬಿಡುಗಡೆ ಸಿಕ್ಕಿರುವ  ಸೂಚನೆ ಇತ್ತು, ಅವಳು ಅಂದು ಕಂಡ ಆ  ಹಗಲುಗನಸಿನಲ್ಲಿ. ಅದಲ್ಲದೆ ಅಂದು  ಮುಂಜಾನೆಯಷ್ಟೇ ಡಾಕ್ಟರ್ ಅವಳು  ಚೇತರಿಸಿಕೊಂಡಿರುವ ಬಗ್ಗೆ  ಸಂತಸ ಪಟ್ಟು ಅಸ್ಪತ್ರೆಯವಾಸದಿಂದ ಮುಕ್ತಗೊಳ್ಳಬಹುದೆಂಬ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ರಚನಾ ಪುಸ್ತಕದ ಪಕದಲ್ಲೇ ಇದ್ದ ಪೆನ್ ಹಿಡಿದು  ಬರೆಯ ತೊಡಗಿದಳು. ಯಾಕೋ ಬರೆಯುವ ಶುರು ಶುರುವಿನಲ್ಲಿ ಆಕೆಯ ಕೈ ನಡುಗಿದವು......ಒಂದು ಕಡುಗತ್ತಲ ಭಾವಿಯಲ್ಲಿ ರಚನಾಳನ್ನು ಆಕೆಯ ಪತಿ ಹರ್ಷ, ತನ್ನ ತೋಳುಗಳಿಂದ ಮೇಲೆತ್ತಿದ್ದಾನೆ.ಹಾಗೆ ಎತ್ತಿದ್ದ  ರಚನಾಳ  ಕೈಗೆ ಸಿಕ್ಕ ಬಳ್ಳಿಯೊಂದನ್ನು ಹಿಡಿದು ಅವಳಲ್ಲಿದ್ದ ಶಕ್ತಿಯನ್ನೆಲ್ಲ ಪ್ರಯೋಗಿಸಿ ಮೇಲೇರುತ್ತಿದ್ದಾಳೆ . ಆಯಾಸವಾದಗೆಲ್ಲ ಆಕೆ ಒಮ್ಮೆ ಹಿಂದಿರುಗಿ  ನೋಡುತ್ತಿದ್ದಳು. ಹರ್ಷ ಅವಳತ್ತ  ಮುಗುಳ್ನಗುತ್ತಾ ಮೇಲೆರಲು ಪ್ರೇರೇಪಿಸುತ್ತಿದ್ದ  . ಆ ನಗು ನೋಡುತ್ತಿದ್ದಂತೆ ರಚನಾ ಇನ್ನಷ್ಟು ಬಲ ಹಾಕಿ ಮೇಲೇರುತ್ತಿದ್ದಳು. ಅದೆಷ್ಟೋ ಗಳಿಗೆಯ ಸತತ ಪ್ರಯತ್ನದ ನಂತರ ಕಡೆಗೂ ಭಾವಿಯ ಮೇಲ್ತುದಿ ತಲುಪಿದಳು. ಇನ್ನೇನು ಅಲ್ಲಿಂದ ಹೊರಬಂದು ಆ ಅದ್ಭುತ ಜಗತ್ತನೊಮ್ಮೆ ನೋಡಬೇಕ್ಕೇನ್ನುವಷ್ಟರಲ್ಲಿ ಆ ಬಳ್ಳಿ ಕಳಚಿ ರಚನಾ ಮತ್ತೊಮ್ಮೆ ಕತ್ತಲ ಕಂದರದೊಳಗೆ ಬಿದ್ದಳು. ರಚನಾ ಇದನ್ನು ಬರೆಯುವಾಗ ಬೆವರುತಿದ್ದಳು....ಬಿದ್ದ ರಚನಾಳನ್ನು ಹರ್ಷ ಗಟ್ಟಿ ತಬ್ಬಿ ಸಮಾಧಾನಿಸಿದ,ಮಣ್ಣನ್ನು ಅಗೆದು ಹೊಸ ದಾರಿ ಮಾಡಿಕೊಂಡು  ಹೋಗೋಣವಂತೆ ಚಿಂತಿಸಬೇಡ ಎಂದು ಮುಗುಳ್ನಕ್ಕ .ಇಬ್ಬರು ಮಣ್ಣನ್ನು ಕೊರೆಯಲು ಶುರುವಚ್ಚಿಕೊಂಡರು. ಹಗಲು ರಾತ್ರಿ ಹಸಿವು ಬಿಸಿಲು ಮಳೆ ಸಿಡಿಲು ಇದ್ಯಾವುಗಳ ಪರವೇ ಇಲ್ಲದಂತೆ ಅದೆಷ್ಟು ಲೆಕ್ಕವಿಲ್ಲದಷ್ಟು ದಿನ ಅಗೆದರೋ ಕಡೆಗೂ ಸೂರ್ಯನ ಒಂದು ಕಿರಣ ಗೋಚರಿಸಿತು. ಹರ್ಷ ಒಮ್ಮೆ ಹೊರ ನೋಡಿ ರಚನಾಳನ್ನು ಮೊದಲು ಮೆಲ್ಲನೆ ಹೊರದೂಡಿದ. ರಚನಾ ಹೂವಿನ ತೋಟ ಒಂದರಲ್ಲಿ ನಿಂತಿದ್ದಳು.ಪಕ್ಕದಲ್ಲಿ ಹಣ್ಣಿನ ತೋಟವು ಇತ್ತು. ಹರ್ಷನನ್ನು ಹೊರಕ್ಕೆಳೆದು  ಅಲ್ಲಿದ್ದ ಹಣ್ಣೊoದನ್ನು ಕೊಟ್ಟಳು .ಅಮೃತದಂತೆ ಸಿಹಿ ಇದ್ದ ಆ ಹಣ್ಣನ್ನು ಇಬ್ಬರು  ತಿಂದರು. 
"ಇದು ಸ್ವರ್ಗವೇ??!"


ಎಂದು ಆಶ್ಚರ್ಯದಿಂದ  ಹುಬ್ಬೇರಿಸಿದಳು  ರಚನ...

ಹರ್ಷ ಮತ್ತೆ ನಕ್ಕ. "ಇದೇನೇ ಆಗಿರಲಿ ಆ ಭಾವಿಯಾಚೆಗಿನ ಜಗತ್ತು ಇದ್ದಕ್ಕಿಂತಲೂ ಅದ್ಭುತವಾಗಿರಲು ಸಾಧ್ಯವೇ ಇಲ್ಲ  ಬಂಗಾರಿ"ಎಂದ. 


ರಚನಾ ಮೊದಲ ಬಾರಿ ಆ ರಾತ್ರಿ ಅತ್ತಿದ್ದಳು 
"ನೀವೇನೇ ಹೇಳಿ , ಆ ಜಗತ್ತು ಈ ಜಗತ್ತು ಹೇಗೆ ಇರಲಿ, ಅಲ್ಲಿಂದ ಇಲ್ಲಿಯವರೆಗಿನ ನಿಮ್ಮೊಂದಿಗಿನ ರೋಚಕ ಪ್ರಯಾಣವೇ ಒಂದು  ಅದ್ಭುತ" ಎಂದು ಕಣ್ಣರಳಿಸಿದಳು.
ಹರ್ಷ ಅವಳ ಮೇಲೆ ಹೂವಿನ ಮಳೆ ಸುರಿಸಿದ.ಇಬ್ಬರು ನಕ್ಕರು.


ರಚನಾ ಎಲ್ಲವನ್ನೂ ದಾಖಲಿಸಿ  ಸ್ವಲ್ಪ ವಿಶ್ರಮಿಸಲು ಮುಂದಾದಳು. ಅವಳಿಗಿನ್ನೂ  ನಿದ್ದೆಯ  ಮಂಪರು  ಬಿಟ್ಟಿರಲಿಲ್ಲ...
ಅಷ್ಟರಲ್ಲಿ ಒಂದು ಹುಡುಗಿ ರಚನಳಗಿಂತಲೂ ವಯಸ್ಸಿನಲ್ಲಿ ಚಿಕ್ಕವಳು, ಅವಳ ಕೋಣೆಯ ಕಡೆ ಬರುತ್ತಿರುವುದನ್ನು ಗಮನಿಸಿದಳು. ಬಂದವಳೇ ನೇರವಾಗಿ ರಚನಾಳನ್ನು ಮಾತನಾಡಿಸಲು ಮುಂದಾದಳು... 


"ಅಕ್ಕಾ ನೀವು ರಚನ ನಾ? " 

"ಹೌದು.. ನೀವ್ಯಾರು ಅಂತ ಗೊತ್ತಾಗ್ಲಿಲ್ಲ" ಅಂದಳು ರಚನ. ಪಕ್ಕದಲ್ಲೇ ಇದ್ದ ಚೇರ್ ಎಳೆದು ಇಲ್ಲಿ ಕೂರಬಹುದಾ, ಎಂದು ಸನ್ನೆ ಮಾಡಿದಳು. 
ರಚನ ಶಂಕಿಸುತ್ತ, "ಯಾರು ನೀವು?" ಎಂದು ಕೂರಲು ಅನುಮತಿ ಕೊಟ್ಟಳು. 

"ಗಾಬರಿ ಬೇಡ ಅಕ್ಕಾ.. ನಾನು ಆಶಾ ಅಂತ. ಇಲ್ಲಿಗೆ ಡಾಕ್ಟರ್ ನ ನೋಡೋಕೆ ಅಂತ ಬಂದಿದ್ದೆ, ನಿಮಗಿರುವ ಖಾಯಿಲೆ ನನಗೂ ಆವರಿಸಿದೆ. ಡಾಕ್ಟರ್  ನಿಮ್ಮ ಬಗ್ಗೆ ಹೇಳಿದ್ರು... 
ನೀವಿನ್ನೇನು ಗುಣಮುಖರಾಗಿ ಹೊರಡುವವರಿದ್ದೀರಿ ಎಂದು ತಿಳೀತು. ಅದಕ್ಕೆ  ಮಾತಾಡಿಸೋಣಾ ಅಂತ ಬಂದೆ. 
ನಿಜಕ್ಕೂ ಈ ಖಾಯಿಲೆಯಿಂದ ಬಿಡುಗಡೆ ಸಿಕ್ಕಿದೆಯಾ?" ಎಂದು ಹತಾಶೆಯಿಂದ ಕೇಳಿದಳು."ನನಗೆ ಈ ವಿಪರೀತ ತಲೆ ನೋವು ಸಾಕಾಗಿ ಹೋಗಿದೆ..  ಜೀವನ ಪರ್ಯಂತ ಈ ಬಾಧೆ ಹೇಗೆ ತಡೆಯೋದು.? ತಗೋಳೋ ಮೆಡಿಸಿನ್ ಗಳಿಂದ ಡಿಪ್ರೆಶನ್ ಕೂಡಾ ಅಪ್ಪಿಕೊಂಡಿದೆ.! ಬದುಕೇ ಬೇಡವೆನ್ನುವಷ್ಟು ಜಿಗುಪ್ಸೆಗೆ ಒಳಗಾಗಿಬಿಟ್ಟಿದ್ದೀನಿ. ಅದರಲ್ಲೂ ಇತ್ತೀಚೆಗೆ ಕನಸುಗಳು ಲೆಕ್ಕವಿಲ್ಲದಷ್ಟು ಬೀಳುತ್ತವೆ.... ಎಷ್ಟರ ಮಟ್ಟಿಗೆ ಅಂದ್ರೆ, ಯಾವುದು  ಕನಸು, ಯಾವುದು ನನಸು ಅಂತಾನೂ ತಿಳಿಯಲು ಅಸಾಧ್ಯವಾಗಿಬಿಟ್ಟಿದೆ..! ಒಂದರ ಹಿಂದೆ ಮತ್ತೊಂದು ಹೀಗೆ.... ಸದ್ಯಕ್ಕೆ ನೆಮ್ಮದಿಯ ಸಾವೊಂದಷ್ಟೇ ಮುನ್ನೋಡುತ್ತಿದ್ದೇನೆ." ಎಂದು ಒಂದೇ ಸಲಕ್ಕೆ ಎಲ್ಲಾ ನೋವ ತೋಡಿಕೊಂಡು  ಮೂಕಿಯಂತೆ ಕೂತಳು..  


ರಚನಳಿಗೆ ತಾನು ಏಳು ತಿಂಗಳಿಂದ ಪಟ್ಟ ನರಕಯಾತನೆ ನೆನಪಾಗಿ ಮತ್ತೆ ಮೈ ಜುಮ್ಮ್ ಎಂದಿತು. 
ಆ ಕ್ಷಣ ಆ ಹುಡುಗಿ ಅವಳಿಗೆ ತನ್ನಂತೆಯೇ ಕಂಡಳು.

ಅವಳ ಕಣ್ಣಲ್ಲಿ ನೀರು ಹರಿಯುತ್ತಿತ್ತು. 
ರಚನ ಅವಳ ಕೈ ಹಿಡಿದು "ನೋಡು ನಾನು ಈ  ಖಾಯಿಲೆಯಿಂದ ಆದಷ್ಟು ಚೇತರಿಸಿಕೊಂಡಿದ್ದೀನಿ, ನನ್ನಂತೆ ನೀನೂ ಈ ಯುದ್ಧವನ್ನು ಗೆದ್ದೇ ಗೆಲ್ಲುತ್ತೀಯಾ, ಮೆಡಿಸಿನ್ ನಿನ್ನ ಗುಣ ಮಾಡುತ್ತದೆ ಅನ್ನೋ ನಂಬಿಕೆ ಇಟ್ಕೊ. ಆದರೆ ಈ ಡಿಪ್ರೆಶನ್'ನೊಂದಿಗೆ ನೀನೇ ಹೋರಾಡಬೇಕು.ಮಾನಸಿಕ  ಸ್ಥೈರ್ಯ ಎಂದಿಗೂ  ಕಳೆದುಕೊಳ್ಬೇಡ.. ಇನ್ನು, ಕನಸು-ನನಸು ಈ ಎರಡರ ನಡುವಿನ ವ್ಯತ್ಯಾಸದ ಚಿಂತೆ ಬಿಟ್ಟುಬಿಡು. ಎರಡರಲ್ಲೂ ನೀ ಸಂಪೂರ್ಣವಾಗಿ  ಬದುಕು,ಎರಡರಲ್ಲೂ  ಗೆಲ್ಲುವುದೊಂದನ್ನೇ ಗುರಿ ಮಾಡಿಕೊ, ಆಗ ನೋಡು ಇದ್ಯಾವುದರ ಚಿಂತೆಯಿಲ್ಲದೇ ನೆಮ್ಮದಿಯಾಗಿರಬಹುದು. ನೀನು ಪೂರ್ತಿಯಾಗಿ ಗುಣ ಆಗಬಲ್ಲೆ ಎಂಬ ನಂಬಿಕೆಯನ್ನು ಸದಾ ಪೋಷಿಸು, ಖಂಡಿತ ಗುಣಮುಖಳಾಗುತ್ತೀಯ" ಎಂದು ಆ ಹುಡುಗಿಯನ್ನು ಸಮಾಧಾನಿಸಿ ಕಳುಹಿಸಿ ಕೊಟ್ಟಳು


ಅಷ್ಟರಲ್ಲಿ ಹರ್ಷ ಆಸ್ಪತ್ರೆಯ ಬಿಲ್ ಪಾವತಿಸಿ ಬಂದಿದ್ದ. ಬಂದವನೇ, "ಎದ್ದು ಬಿಟ್ಟಿದ್ದೀಯ, ಸಾರಿ ತುಂಬಾ ಜನ ಇದ್ದಿದ್ರಿಂದ ಬಿಲ್ಲಿಂಗ್ ಲೇಟ್ ಆಯ್ತು, ಒಬ್ಳನ್ನೇ ಬಿಟ್ಟು ಹೋಗಿದಕ್ಕೆ ಬೇಜಾರಿಲ್ಲ ತಾನೇ ಬಂಗಾರಿ?" ಅಂದ. 


'ಇಲ್ಲಾ' ಎಂದು ತಲೆಯಾಡಿಸುತ್ತ ಕಣ್ಣುಜ್ಜಿ ಕೊಂಡು, "ನಾನು ಎದ್ದು ಸುಮಾರ್ ಹೊತ್ತಾಯಿತು. ರೀ , ನೀವು ಆ ಹುಡುಗಿಯನ್ನ ನೋಡಿದ್ರಾ?"  ಕೇಳಿದಳು.

"ಯಾವ್ ಹುಡ್ಗಿ ಹೇಳು?" 

"ರೀ ಸ್ವಲ್ಪ ಹೊತ್ತಿಗೆ ಮುಂಚೆ  ನನಗೊಂದು ಸೊಗಸಾದ  ಕನಸು ಬಿದಿತ್ತು ಈಗ ನೆನಪಾಗ್ತಿಲ್ಲ, ಅಲ್ಲಿ ಆ ಪೇಪರಿನಲ್ಲಿ ಬರೆದಿಟ್ಟಿದಿನಿ ಆಮೇಲೆ ಓದಿಕೊಳ್ಳಿ. ಮತ್ತೆ ಈಗಷ್ಟೇ ಹೋದಳಲ್ಲ ಆ ಹುಡುಗಿಯನ್ನು  ನೋಡಿದ್ರಾ?" ಎಂದು ಮತ್ತೊಮ್ಮೆ ಕೇಳಿದಳು.

ಹರ್ಷ, "ಹ್ಮ್ಮ್" ಎಂದು ತಲೆಯಾಡಿಸುತ್ತ,  ಏನನ್ನೋ ಯೋಚಿಸತೊಡಗಿದ. ಮಂಜಾಗಿದ್ದ ತನ್ನ ಕನ್ನಡಕವನ್ನ ತೆಗೆದು ಬಟ್ಟೆಯಲ್ಲಿ ಒರೆಸಿಕೊಂಡು ಆ ಬೃಹತ್ ಗಾಜಿನ ಕಿಟಕಿಯ ಬಳಿ ಮೆಲ್ಲನೆ ಹೋಗಿ ನಿಂತ...ಏಳು ತಿಂಗಳ ಹಿಂದೆ ಮೊದಲ ಬಾರಿ ರಚನ ಆ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಇಂಥದ್ದೇ ಕಿಟಕಿಯ  ಬಳಿ ನಿಂತು ಎದುರಿಗೆ ಕಾಣುತ್ತಿದ್ದ ಹಸಿರು ಮರಗಳ ಸಾಲು ನೋಟವ ಕಂಡು, ತನ್ನ  ದುಃಖವನ್ನೆಲ್ಲಾ ನುಂಗಿದ್ದ. 
ಇಂದೇಕೋ ಆ ಮರದ ಸಾಲುಗಳ ನೋಟ ಅವನಿಗೆ ಜಿಗುಪ್ಸೆ ತರುತ್ತಿವೇ.. 

"ರೀ ಅವಳ್ಯಾಕೆ ಬಂದಿದ್ಳು ಅಂತ ಕೇಳೋಲ್ವಾ??" ನಡೆದುದ್ದೆಲ್ಲವನ್ನ ಹೇಳುವ ಕುತೂಹಲದಲ್ಲಿ ಕೇಳಿದಳು ರಚನ. 

'ಹಾ... ಬಂಗಾರಿ.ಆ ಮರದ ಸಾಲುಗಳನ್ನು ನೋಡಿದ್ಯಾ? ಸುತ್ತಲೂ ನಿಂತಿರೋ ಈ ಕಾಂಕ್ರೀಟ್ ಸಿಟಿ  ಮಧ್ಯೆ ಅದು ಬಂಧಿತವಾದಂತಿದೆ ಅಲ್ವಾ. ಅದೆಷ್ಟು ಉಸಿರು ಗಟ್ಟಿಕೊಂಡು ವಾಸಿಸುತ್ತಿದೆಯೋ " 

"ರೀ...." ಒಂದು ಕ್ಷಣ ಮೌನವಾಗಿ ಆ ಬೃಹತ್ ಕಿಟಕಿಯ ಹೊರಗೆ ದೂರದಲ್ಲಿ ಬೇಲಿಯಂತೆ ಕಂಡ ಆ ಮರಗಳ ಸಾಲುಗಳ ನೋಡಿದಳು.

"ನಂಗೇನೋ ಈ ಬಿಲ್ಡಿಂಗೇ ಬಂಧಿತ ಅಂತ ಅನಿಸ್ತಿದೆ. ಆ ಮರಗಳು ಎಷ್ಟು ಸ್ವಚ್ಚಂದವಾಗಿವೆಯಲ್ಲ" ಎಂದ ಅವಳ ಮಾತಿಗೆ ಹರ್ಷ 'ಇಲ್ಲ ' ಎಂಬಂತೆ  ತಲೆಯಾಡಿಸಿ  ಮತ್ತೆ ಮಂಜಾದ ಕನ್ನಡಕವನ್ನ ಒರೆಸಿಕೊಂಡ.

 ಅಷ್ಟರಲ್ಲಿ, "ರೀ ರೀ ಅಲ್ಲಿ ನೋಡಿ ನಿಮ್ಮ ಬಂಧಿತ   ಮರವೊಂದರಿಂದ ಈಗಷ್ಟೇ ಯಾವುದೊ ಹಕ್ಕಿ ಬಾನಿಗೆ ಹಾರಿತು....." 
ರಚನ ಹಾಗನ್ನುತ್ತಿದಂತೆ ಹರ್ಷ  ರಚನಾಳ ಬಳಿ ಹೋಗಿ ಅವಳನ್ನು ತಬ್ಬಿ ಹಿಡಿದ....
"ರೀ ಏನಾಯ್ತು.....? ಅದಿರ್ಲಿ,  ನಿಮಗೆ ಗೊತ್ತಾ? ಆ ಹುಡುಗಿಗೂ ನನ್ನಂತೆಯೇ ಖಾಯಿಲೆ, ನೀವು ನನಗೆ ಧೈರ್ಯ ತುಂಬಿದ ಹಾಗೆ ನಾನು ಅವಳಿಗೆ ಧೈರ್ಯವಾಗಿರಲು ಹೇಳಿದ್ದೀನಿ...
ನಾ ಮಾಡಿದ್ದು ಸರಿ ಅಲ್ವಾ..!?" ಅಂದಳು. ಹರ್ಷನಿಗೆ ಮಾತು ಬರಲಿಲ್ಲ... ಒಂದು ಕೈಯಲ್ಲಿ ಅವಳನ್ನು ಹಾಗೆಯೇ ತಬ್ಬಿ ಹಿಡಿದು ಇನ್ನೊಂದು ಕೈಯಲ್ಲಿ ಆ ಖಾಲಿ ಹಾಳೆಯನ್ನ ಬೆಡ್ಡಿನ ಕೆಳಗೆ ಅವಿಸಿಟ್ಟ........ 

ರಚನ ಮತ್ತೊಮ್ಮೆ ಅವನ ತೋಳಿನಲ್ಲೇ ನಿದ್ರೆಗೆ ಜಾರಿದಳು.......

Thursday, November 5, 2015

"ಅಮ್ಮ ಕಾಯುತ್ತಾಳೆ..."

ಚಿತ್ರಕೃಪೆ: ಮದನ್ ಕುಮಾರ್ 

ಅಮ್ಮ ಕಾಯುತ್ತಾಳೆ ...
ಎಣ್ಣೆ ತುಂಬಿದ,
ದೀಪವಿಡಿದು,
ಸರ್ವೋದಯದ...
ಸುಖಕ್ಕಾಗಿ !

ಅಲ್ಲೆಲೋ ಕುಂತಿ ಮಕ್ಕಳಂತೆ,
ಐವರು ಮತ್ತೋರ್ವನಿರಬಹುದು,
ಬೇರೆ ಬೇರೆಯಾಗಿ
ಸಾಲಿನಲಿ ..
ಯಾರಿಂದಲೋ ಎರವಲು ಪಡೆದ,
ಪಂಜೆಂಬ,
ಅಫೀಮನು ಹಿಡಿದು ಇತ್ತಲೇ ಬರುತ್ತಿದ್ದಾರಂತೆ..

ಅಮ್ಮ ಕಾಯುತ್ತಾಳೆ ...
ಎಣ್ಣೆ ತುಂಬಿದ,
ದೀಪವಿಡಿದು,
ಸರ್ವೋದಯದ...
ಸುಖಕ್ಕಾಗಿ !

ಒಬ್ಬ ಮುಂದೆಂದರೆ ...
ಇನ್ನೊಬ್ಬನ್ನನ್ನು ಹಿಂದಿಕ್ಕಿರಲೇ ಬೇಕು,
ಹಿಂದುಳಿದಿದ್ದು ಯಾರೆಂಬುದ....
ತಿಳಿಯದಂತೆ!

ಕನವರಿಕೆಯಲಿ...
ತಾ ಮುಂದು ನಾ ಮುಂದು,
ಜಿಗಿಯುತ್ತಲೇ  ಮುನ್ನುಗುತ್ತಿದ್ದಾರೆ,
ಯಾರಿಂದಲೋ ಎರವಲು ಪಡೆದ,
ಪಂಜೆಂಬ,
ಅಫೀಮಿನ ಉನ್ಮಾದದಲಿ...

ಮುಂದಿರುವವರು ಹಿಂದಿರುವನೊಬ್ಬನನ್ನು ,
ಸುಟ್ಟೇ ಬಿಟ್ಟಿದ್ದಾರೆ...
ಅಷ್ಟರಲ್ಲೊಬ್ಬ ಆರ್ಭಟಿಸುತ್ತಾನೆ,
"ರಾವಣನನ್ನು ಸುಟ್ಟಿದಾಯ್ತೆ .. "

ಸುಟ್ಟವನನ್ನು  ಹಿಂದಿಕ್ಕಿ
ಮತ್ತೆ ಜಿಗಿಯುತ್ತಲೇ ಸಾಗುತ್ತಿದ್ದಾರೆ
ತಾ ಮುಂದು ನಾ ಮುಂದು ..
ಒಬ್ಬ ಮುಂದೆಂದರೆ ...
ಇನ್ನೊಬ್ಬ ಹಿಂದಿರಲೇ ಬೇಕೆಂಬ,
ಅರಿವಿಲ್ಲದಂತೆ ..
ನಿಜ ಗಮ್ಯದ ಪರಿವಿಲ್ಲದಂತೆ!

ಅಮ್ಮ ಒಳಗೊಳಗೇ ಆಶಿಸುತ್ತಾಳೆ,
ದಮಯಂತಿ ನಳರಂತೆ,
ಶಕುಂತಲೆ ದುಷ್ಯಂತರಂತೆ,
ರಾಮ ಅಹಲ್ಯೆಯರಂತೆ ,
ಶಬರಿಯಂತೆ....
ಶಾಪ - ವಿಮೋಚನೆಗಳೆರಡು
ಇರಬಹುದಂತೆ.

ಅಮ್ಮನ ಮಕ್ಕಳoತು
ದಾರಿಯುದ್ದಕ್ಕೂ ಒಬ್ಬೊಬ್ಬರನ್ನು ಸುಡುತ್ತಾ
ಇವನೇ ಸತ್ತನೆಂದು ಅವನು
ಅವನೇ ಸತ್ತಿರಬೇಕೆಂದು ಇವನು
ತಾ ಮುಂದು ನಾ ಮುಂದು...
ಸಾಗಿರುವರು ಜಿಗಿಯುತ್ತಲಿ
ಉನ್ಮಾದದಲಿ...

ಓಯ್! ಗೊತ್ತಿಲ್ಲ ಯಾರಿಗೂ
ಅಲ್ಲಿ ಸಾಗುತ್ತಿರುವುದು ..
ಬರಿಯ ಶವಗಳ ಮೆರವಣಿಗೆಯಂತೆ!

ಮತ್ತೆ ಅಮ್ಮ??
ಅವಳಿನ್ನೂ ಕಾಯುತ್ತಿದ್ದಾಳೆ,
ಎಣ್ಣೆ ತುಂಬಿದ,
ದೀಪವಿಡಿದು,
ಸರ್ವೋದಯದ...
ಸುಖಕ್ಕಾಗಿ!

Thursday, March 21, 2013

ಮೋಹಿನಿ ಗಾನ :

ಚಿತ್ರಕೃಪೆ : ಅಂತರ್ಜಾಲ


ದೇಹದೊಳಗೊಂದು ಮನಸ
ಮನಸಿನೊಳಗೊಂದು ದೇಹವ
ಹೊತ್ತು ನಡೆಯುವ ಹರಿಣಿ
ಸಂತೆ ಹಾದಿಯಲಿ ಸಿಕ್ಕಲೊಬ್ಬಳು
ಅಲಂಕಾರಿಣಿ

ಸುಕೋಮಲ ಚರ್ಮದವಳಲ್ಲ
ನುನುಪಿನ ಗಲ್ಲ ಅವಳಿಗಿಲ್ಲ
ಗುನುಗುವ ಕಂಠವೋ ಬಲು ಗಡಸು
ಆದರೇನು ಮನದೊಳಗೆ ಸ್ಪುರಿಸುವುದು
ಮೃದು ಭಾವದ ಮೋಹಿನಿ ಗಾನ!

ಅವಳಂದಳು,
ಮುಚ್ಚಿಡಲಾರದೆ ತೆರೆದಿಟ್ಟೆ
ಬಿಕ್ಕಲ್ಲಾರದೆ ಅರಚಿ ನಿಟ್ಟುಸಿರಬಿಟ್ಟೆ
ಹುಟ್ಟ ಮನೆಗೆ ಕಳ್ಳ ಅತಿಥಿಯಾದೆ
ನೆರಳಿಲ್ಲದೆ ಫಲವಿಲ್ಲದೆ
ಊರಿಗೆ ದಂಧೆಯ ಸರಕಾದೆ
ಬೇಡುತ ಸೆರಗೊಡ್ದುವೆ
ಧರ್ಮವಿದ್ದರೆ ಕೊಟ್ಟುಬಿಡು,
ಹಿಡಿಗಾಸ


ಬರಿ ಬೀಜ ಹೊತ್ತರೆ ಮಾತ್ರ ಮರವೇನೆ?
ಮರವೆಂದರೆ ನೂರು ಬೇರು ಹತ್ತು ರೆಂಬೆ
ಬಳ್ಳಿಗೆ ಆಶ್ರಯ ನೀಡಬಲ್ಲ ಕರುಳು
ಜೀವಿಗೆ ತಂಪನುಣಿಸುವ ನೆರಳು

ಬಿಟ್ಟುಬಿಡು,
ಧರ್ಮ ದೂರವಿಟ್ಟ ಋತು
ಮರ ಬೇಡದ ನೆರಳು
ನಿನಗೇಕೆ,ಅದಕೆ ಕೊರಗೇಕೆ?

ಅವಳಂದಳು ,
ಬೆಳಕಿನ ಮದುಮಗಳ ನಿಶೆಯ ಹವಣಿಕೆಗೆ
ಅಂದು ಸುತ್ತಲು ಬೆಂಕಿ
ಹೃದಯದ ಮುದ್ದಣಕೆ ಹೊರಗಿನ ಕಾವು
ಕತ್ತಲ ವಿಧವೆಯ ಗೆಜ್ಜೆಯ ಕಂಪನಕೆ
ನೆಲವದು ಸಡಿಲು
ನೃತ್ಯದ ಅಮಲಿಗೆ ಕೆಂಪಿನ ಹೊನಲು

ಬಲ್ಲೆಯಾ ಇಂತಹ ಅನುರಾಗವಾ?
ಕಂಡೆಯ ಈ ಪರಿ ಆರ್ತನಾದವಾ?

ಎರಡು ಜೀವಗಳ ಒಂದಾಗಿಸಿ
ಹುಟ್ಟಿದೆವು ನಾವೆಲ್ಲ
ಎರಡು ಜನ್ಮವ ಒಂದಾಗಿಸಿ
ಅವತರಿಸಿರುವೆ ನೀ
ಪಡೆದಿದ್ದಕಲ್ಲ ಶಾಪವ
ಹರಸುವ ದಿವ್ಯ ಕರ್ಮಕ್ಕಾಗಿ
ಕಳೆಯಲಿಕ್ಕಲ್ಲ ಪಾಪವ
ಗಳಿಸುವ ಸೆರಗಿನ ಪುಣ್ಯಕ್ಕಾಗಿ

ಅವಳ ಸೆರಗಿಗೆ ಕೈಗೆ ಸಿಕ್ಕಿದಷ್ಟು ತುರುಕಿ
ಪಿಸುಗುಟ್ಟಿದೆ
ಕೇಳು,ಅರಿವಿದೆ ಹೆಣ್ಣು ಜನ್ಮಕೆಲ್ಲಾ
ನಮ್ಮಯ ಮನದ ದೀಪವು ಒಂದೇ
ಅದರ ಜ್ವಾಲೆಯ ಮೂಲವು ಒಂದೇ.

Sunday, March 10, 2013

ಹೊಸ ನೀರು : ಹಳೆ ನೀರ ರಭಸಕ್ಕೆ ಮಡಿದವರೆಷ್ಟೋ,ಹೊಸ ನೀರ ಸುಳಿಗೆ ಸಿಲುಕುವವರೆಷ್ಟೋ!

(ಹೊಸದೇನು ಬರೆಯಲಾಗಲಿಲ್ಲ ಹಾಗಾಗಿ ಹಳೆದೊಂದು ಕಥೆ )

ಕಿಕ್ಕಿರಿದ  ಜನರ  ನೂಕುನುಗ್ಗಲು  ಮಧ್ಯೆ  ನುಸುಳಿ  ಹೇಗೋ  ಸೀಟ್  ಹಿಡಿದ  ಕೇಶವನಿಗೆ  ಹೋದ   ಉಸಿರು  ಬಂದಂತಾಯಿತು.ಜೀವನದಲ್ಲಿ  ಸದಾ  ಹೊಸತನ  ಬಯಸುವ  ಸಾಹಸಗಾರ  ಹೋರಾಟ  ಮನೋಭಾವದ  ಬಿಸಿ  ರಕ್ತದ  ಯುವಕನಿಗೆ  ಶುರುವಿನಲ್ಲೇ  ಎದುರಾದ  ಇರುಸು  ಮುರುಸನ್ನು  ಕಿತ್  ಒಗೆಯುವಂತೆ  ಜನಜಂಗುಳಿಗೆ  ಸಿಕ್ಕಿ  ಮುದ್ದೆಯಾದ  ತನ್ನ ಇಸ್ತ್ರಿ  ಮಾಡಿದ   ಬಿಳಿ  ಅಂಗಿಯ ವಿಶ್ವಾಸದಿಂದ  ಕೊಡವಿದ.ದಕ್ಕಿಸಿಕೊಂಡ  ಒಂದು  ವಾರದ  ರಜೆಯನ್ನು  "ಈ   ಬಾರಿ  ಹಳ್ಳಿಯಲ್ಲಿ  ಕಳಿಯುವೆ"  ಅಂದು, ಮನೆಯವರಿಗೆಲ್ಲಾ  ಆಶ್ಚರ್ಯವನ್ನುಂಟು  ಮಾಡಿದ್ದ  ಕೇಶವ  ಬಸ್  ಏರಿ  ಹೊರಟಿರುವುದು ತನ್ನ  ಹುಟ್ಟೂರಿಗೆ.ಯುಗಾದಿ  ಹಬ್ಬಕ್ಕೆಂದು   ಊರುಗಳಿಗೆ  ಹೊರಟವರ  ಸಂಕೆ  ಎಂದಿಗಿಂತಲೂ  ಹೆಚ್ಚಿದ್ದರಿಂದ  ಕಡಿಬಕ್ಕೆ  ಪ್ರಯಾಣಿಕರನ್ನು ಒಯ್ಯುತ್ತಿದ್ದ  ಆ  ಬಸ್  ನವಮಾಸದ  ಗರ್ಭಿಣಿಯಂತೆ  ಮಂದ ಗತಿಯಲ್ಲಿ  ಸಾಗುತಿದೆ.


ಇತ್ತ  ಪಕ್ಕದ  ಸೀಟಿನಲ್ಲಿ   ತೂಕಡಿಸುತ್ತಿದ್ದ  ಇಳಿ  ವಯಸಿನ  ದಡೂತಿ  ಸಾಹೇಬರು, ಕೇಶವನ  ಮೈಯಿಗೆ  ಪ್ರತಿ ಬಾರಿ ಒರಗಿದಾಗ  ಅವನ  ತೊಡೆಗೆ  ಒತ್ತುತ್ತಿದ್ದ   ಕಾರ್ ಕೀ  ಬಾಲ್ಯದಂತೆ   ಊರಿಗೆ  ಬಸ್ಸಿನಲ್ಲೇ   ತೆರಳಬೇಕೆನ್ನುವ  ಆತನ   ನಿರ್ಧಾರವನ್ನು   ಅಣಿಕಿಸಿ   ಅದರ  ಫಲವಾಗಿ  ಪ್ರಾಪ್ತಿಸಿದ  ಅವಸ್ಥೆ   ನೋಡಿ  ಚುಚ್ಚಿ  ಚುಚ್ಚಿ   ಗಹಗಹಿಸಿದಂತಿದೆ.ಆದರೆ  ಅವನಿಗ್ಯಾಕೋ  ನೋವಿನಲ್ಲೂ  ಹಿತಾನುಭವ. ಕೀ ಯನ್ನ ತನ್ನ  ಜೇಬಿನಿಂದ  ತೆಗೆಯುವ ಮನಸಿರಲಿಲ್ಲ.ಆಗಾಗ   ಜೋತು  ಬೀಳುತ್ತಿದ್ದ  ಸಾಹೇಬರ  ಕುತ್ತಿಗೆಯ ತಾಳಕ್ಕೆ  ಮೂಗಿನ  ತುದಿಯವರೆಗು  ಜಾರಿ ಬರುತ್ತಿದ್ದ   ಕನ್ನಡಕವು  ತನ್ನ  ಮೂಗು  ತುದಿಯ  ಕೋಪದ  ಅಜ್ಜನ  ನೆನಪಿಸಿರಬೇಕು.ಹಾಗಾಗಿ ಅವರ  ನಿದ್ರೆಗೆಡಿಸುವ  ಉಸಾಬರಿಗೂ  ಹೋಗಲಿಲ್ಲ ಆತ. ಹಿಂದಿನ  ಸೀಟಿನಲ್ಲಿ  ಕಂಕುಳಿಗೆ  ಮಗುವನ್ನೆರಿಸಿಕೊಂಡು   ಬಾಳೆ  ಹಣ್ಣು   ತಿನ್ನಿಸುತ್ತಾ  ಮಗುವಿನ ಭಾಷೆಯಲ್ಲಿ  ಸಂವಾದಿಸುತಿರೋ ಹೆಂಗಸು  ಕೇಶವನಿಗೆ ತನ್ನಜ್ಜಿಯ ಮನೆಗೆ  ಬಂದೊಗುತ್ತಿದ್ದ   ಸಾವಿತ್ರಿ  ಅತ್ತೆಯಂತೆ  ಕಂಡಳು.ಎದುರಿನ  ಸೀಟಿನಲ್ಲಿ  ಬಾಲ್  ಆಡುತ್ತಿರುವ ಮಕ್ಕಳು  ಅವರನ್ನ ಗದರಿಸುತ್ತಿದ ವ್ಯಕ್ತಿ  ಮೂಲೆ ಮನೆಯ  ರಂಗಜ್ಜ  ಮತ್ತವನ  ಮೊಮ್ಮಕಳಲ್ಲವೇ? ಛೆ ಅವರಾಗಿರಲಿಕಿಲ್ಲ! ಅವರೆಲ್ಲ ಇಲ್ಲಿಗೇಕೆ  ಬರುತ್ತಾರೆ?ಅದು  ಅಲ್ಲದೆ  ರಂಗಜ್ಜನಿಗೆ  ಸಾವಿತ್ರತ್ತೆಗೆ  ವಯಸಾಗಿ  ಯಾವ್  ಕಾಲವಾಯ್ತು  ಬದುಕಿದ್ದಾರೋ  ಸತ್ತಿದ್ದರೋ ಎಂಬುದು   ನಿರ್ದಿಷ್ಟವಾಗಿ  ತಿಳಿದಿಲ್ಲ  ಅಂದುಕೊಂಡು  ಸುಮ್ಮನಾದ.


 ಕಿತ್ತಿಟ್ಟ  ಹೆಜ್ಜೆಯ  ಸಾಗಿ  ಬಂದ  ದಾರಿಯ  ಮತ್ತೆ  ಮೆಟ್ಟಿದಾಗಲೇ  ಜೀವನ  ನಿಜ  ಸ್ವರೂಪದಲ್ಲಿ  ಎಷ್ಟೊಂದು ಬದಲಾಗಿದೆ ಅನ್ನೋ  ವಾಸ್ತವತೆಯ  ಪರಿಚಯವಾಗೋದು. ಅಂತಹ ಬದಲಾವಣೆಯ ಅರಿಯುವ,ಸದ್ರುಷ್ಯವಾಗಿಸುವ ಹುಮ್ಮಸ್ಸಿನಿಂದ ಸಾಗಿತ್ತು  ಕೇಶವನ  ಪಯಣ.ಬಸ್ಸಿನ  ಚಕ್ರ  ಮುಂದಕ್ಕೆ  ತಿರುಗಿ  ತಿರುಗಿ  ಸಾಗಿದಂತೆ  ಕೇಶವನ  ನೆನಪಿನ  ಚಕ್ರ  ಹಿಂದಕ್ಕೆ  ತಿರುಗಿ  ತಿರುಗಿ ತಂದು  ನಿಲ್ಲಿಸಿದ್ದು  ಅಜ್ಜನ  ಮನೆಯ  ಎದುರು.

*

ಕೇಶವ  ಹುಟ್ಟಿದಾಗ  ಅವನ  ತಾಯಿಗೆ  ಬಾಣಂತಿ  ಸನ್ನಿ  ಬಡಿದ್ದಿದ್ದರಿಂದ  ಅಳಿಯನಿಗೆ  ಅವಳನ್ನು  ಮಗುವನ್ನು  ಸಂಭಾಳಿಸಲು ಕಷ್ಟವಾಗಬಹುದೆಂದು ಅಜ್ಜ ಅವರಿಬ್ಬರನ್ನು  ಕೆಲ ವರುಷಗಳು  ಕಡಿಬದಲ್ಲೇ  ಇರಿಸಿಕೊಂಡಿದ್ದರು.ತಂದೆ ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ.ಊರಿನ  ಪ್ರತಿಯೊಂದು  ಮರ  ಗಿಡಕ್ಕೂ  ಪಾರಿಜಾತ  ಹೂವಿನ ಸುತ್ತ  ಬೆಸ್ತು  ತಿರುಗುತ್ತಿದ್ದ  ಚಿಟ್ಟೆಗೂ   ಹೊಳೆಯಲ್ಲಿ  ಈಜುತಿದ್ದ   ಮೀನುಗಳಿಗೂ  ಬಂಡೆ  ಅಡಿಯಿಂದಲೇ ಮಿರಿ ಮಿರಿ ಇಣುಕುತ್ತಿದ್ದ  ಏಡಿಗೂ ಪುಟ್ಟ  ಕೇಶವ  ಚಿರಪರಿಚಿತ  ಮುಖ.ಅದರಲ್ಲೂ  ತೋಟದ  ಕೆಲಸಕ್ಕೆಂದು   ನೇಮಿಸಿಕೊಂಡ  ಹರಿಜನ  ಕೇರಿಯ  ಮುಬ್ಬನ  ಸಣ್ಣ  ವಯಸಿನ  ಹೆಂಡತಿ  ಗೌರಿ  ಕಂಡರೆ  ಎಲ್ಲಿಲ್ಲದ  ಆತ್ಮೀಯತೆ ಪ್ರೀತಿ.


ಗೌರಿ ತಿಳಿಗೆಂಪು  ಮೈಬಣ್ಣದ  ಸಣ್ಣ  ನಡುವಿನ  ಮುದ್ದು  ಮೋರೆಯ ಜಿಂಕೆ  ಕಣ್ಣಿನ ಮುಗ್ದ ಹುಡುಗಿ .ಆಕೆಯ ಚಪ್ಪಟೆ  ಮೂಗಿಗೆ  ಬೆಸೆದುಕೊಂಡಿದ್ದ  ಚಂದ್ರ  ಬಣ್ಣದ  ಕಲ್ಲಿನ  ಮೂಗುತ್ತಿಯಷ್ಟೇ   ಶುಭ್ರ ವ್ಯಕ್ತಿತ್ವದ  ಚೆಲುವಿ ಅವಳು.ಅವಳ  ವಾರಿಗೆಯ   ಹುಡುಗಿಯರೆಲ್ಲಾ   ಜುಟ್ಟು  ಕುಣಿಸುತ್ತಾ  ಬಿನ್ನಾಣದ  ನಡು ಬಳುಕಿಸಿ  ಚೆಲ್ಲಾಟವಾಡಿಕೊಂಡಿದ್ದರೆ ಇವಳು  ಮಾತ್ರ  ತನ್ನುದ್ದದ ಕೂದಲನ್ನ  ಬಿಗಿದು ಗಂಟು  ಹಾಕಿ ಅದಕ್ಕೊಂದು ಮಲ್ಲೆ  ಹೂ ಸಿಕ್ಕಿಸಿಕೊಂಡು ನಡುವಿನಲ್ಲೂ  ನಡುವಳಿಕೆಯಲ್ಲೂ  ವಯಸ್ಸಿಗೆ ಮೀರಿದ ಗಾಂಭಿರ್ಯತೆ  ಕಾಪಾಡಿಕೊಂಡಿದ್ದಳು.ಮನಸಿನಂತೆ ಕೆಲಸದಲ್ಲೂ ಅಷ್ಟೇ ನಾಜೂಕು ಮಡಿಯ ಹುಡುಗಿ ಗೌರಿಯೇ ಒಂದು  ರೀತಿಯಲ್ಲಿ  ಸನ್ನಿ  ಹಿಡಿದ  ತಾಯಿ  ಮಗುವಿನ  ಆರೈಕೆ   ಮಾಡಿದ್ದು.ಮನೆ  ಒಳಕ್ಕೆ ಆಕೆಯ  ಸೇರಿಸಿಕೊಳ್ಳದಿದ್ದರು ಭಟ್ಟರ  ಮನೆಯಾಚೆಗಿನ  ಕಾರ್ಯಗಳಿಗೆ  ಇವಳದೇ ಉಸ್ತುವಾರಿಯಿತ್ತು. ವಯಿಸಿದ ಎಲ್ಲಾ  ಕೆಲಸಗಳನ್ನು  ತನ್ನ  ಒಡ  ಹುಟ್ಟಿದ  ಅಕ್ಕನ ಮನೆಯೆಂಬಂತೆ  ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.ಯಾವ  ಹರಿಜನ  ಹೆಂಗಸಿಗೂ  ಸಿಗದ  ಭಟ್ಟರ  ಮಗುವಿನ  ಸಾಮಿಪ್ಯ  ಮಕ್ಕಳಿಲ್ಲದ  ಗೌರಿ ಪಾಲಿಗೆ  ದೊರಕಿದ್ದು  ತಿರುಕನಿಗೆ  ರಾಜ್ಯ  ಸಿಕ್ಕಿದಷ್ಟೇ  ಅತೀವ  ಹೆಮ್ಮೆ  ಖುಷಿ  ಕೊಟ್ಟಿತ್ತು.ಬಾನ ಚಂದಿರನ  ನೋಡಿ  ಆನಂದಿಸುವ  ಪ್ರೇಮಿಯಂತೆ  ಗೌರಿ  ಒಂದಡಿ  ದೂರದಿಂದಲೇ   ಕೇಶವನನ್ನು    ಮುದ್ದುಗರೆಯುತ್ತಿದ್ದಳು.ಅಂಗಳ,ತೋ
ಟದ  ಕೆಲಸದ  ನಡುವೆಯೂ  ಕೇಶವನ  ಆಟೋಪಾಚಾರಗಳನ್ನ ಅಸ್ವಾದಿಸುತ್ತಿದ್ದಳು.ಮೆಲ್ಲಗೆ ಯಾರು ಇಲ್ಲದಿದ್ದ ಸಮಯ ನೋಡಿಕೊಂಡು  ಮುತ್ತು ಕದಿಯುತ್ತಿದ್ದಳು.


 ಮದುವೆಯಾಗಿ  ನಾಲ್ಕು  ವರುಷಗಳಾದರೂ ಅವಳಿಗೆ ಮಕ್ಕಳಾಗಿರಲಿಲ್ಲ.ಗೌರಿ ಕೇಶವನನ್ನು ತೀರ ಮಗನಂತೆ ಅಚ್ಚಿಕೊಳ್ಳಲು ಆದುವು ಒಂದು ಪ್ರಮುಖ  ಕಾರಣವಾಗಿತ್ತು.ಮಗು  ಆಗಲಿಲ್ಲವೆಂದು  ಆಡಿಕೊಳ್ಳುತ್ತಿದ್ದ   ಸಮಾಜದ ನಾಲಿಗೆಗೆ  ಸಿಕ್ಕಿ ರೋಸಿ  ಹೋಗಿದ್ದ  ಗೌರಿಗೆ  ಮನೆಯಲ್ಲೂ  ಯಾವ  ನೆಮ್ಮದಿ ಪ್ರಾಪ್ತಿಯಾಗಲಿಲ್ಲ.ಕೆಡುಕ  ಗಂಡ  ದಿನ  ಕುಡಿದು  ಬಂದು  ಬಾಸುಂಡೆ   ಬರುವ  ಹಾಗೆ  ಹೊಡೆಯುತ್ತಿದ್ದ  ವಿಷಯವನ್ನು  ಸಂಕಟದಿಂದ  ಕೇಶವನ  ತಾಯಿಯೊಡನೆ  ತೋಡಿಕೊಂಡಾಗ  ಮುಬ್ಬನ  ಕರಿಸಿ  ಅಜ್ಜ  ಅದೆಷ್ಟು  ಬಾರಿ  ನ್ಯಾಯ  ತೀರ್ಮಾನ  ಮಾಡಿಸಿದರು  ಚಾಳಿ ಬಿಡದೆ  ದೌರ್ಜನ್ಯ  ನಿರಂತರವಾಗಿ   ಮುಂದುವರಿಸಿದ್ದನು .ಹೀಗೆ  ಮುಬ್ಬನ  ಕೈಯಿಂದ   ಬಡಿಸಿಕೊಂಡು ಆಗಾಗ ಜ್ವರವೇರಿ  ಮಲಗುತ್ತಿದ್ದ   ಗೌರಿಯು  ಮನೆ ಕಡೆ  ಬರದಿದ್ದಾಗ  ಏಳು  ವರುಷದ  ಕೇಶವ  ಮಕ್ಕಳ  ಕೂಡಿ  ಅಜ್ಜಿ  ಮನೆ  ಹಿಂದಿನಿಂದ  ಒಂದಷ್ಟು  ದೂರ  ಊರಿನಾಚೆ  ಮುಳ್ಳಿನ   ಕಾಲುದಾರಿಯಲ್ಲಿ  ಸಾಗಿ  ಅವಳ  ಸಂಸಾರ  ನೆಲೆನಿಂತ  ಕೇರಿ  ಮನೆಯೊಳಗೇ  'ಎಲ್ಲಿದಿಯೇ ಗೌರಿ ಯಾಕೆ ಮಲಗಿದ್ಯೆ?ಚೆಂಡಾಟ ಆಡೋಣ ಬಾ 'ಎಂದು ತುಂಟತನದಿಂದ ಆರ್ಭಟಿಸುತ್ತ  ಹೊಕ್ಕುತ್ತಿದ್ದ. ಹೀಗೆ  ಕೇರಿಗೆ  ಬಂದ್ದಿದ್ದು  ಹುಡುಗನ  ಕಡೆಯವರಿಗೆ  ತಿಳಿದರೆ  ಅವಳದೇ   ಕುಮ್ಮಕ್ಕು ಎಂದೆನಿಸಿ  ಅವನ್ನನ್ನು ಅವಳಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆಂಬ  ಭಯದಿಂದ  ಆತನನ್ನು  ಆಲಂಗಿಸದೆ   'ಮೊದ್ಲು ಹೋಗ್ರಿ ಚಿಕ್ ಬುದಿ ಸಂಜಿ ಮನೆಕಡೆ ನಾನೆ ಬರ್ತೀನಿ' ಅಂತೇಳಿ  ಮನವೊಲಿಸಿ ವಲ್ಲದ  ಮನಸ್ಸಿಂದಲೇ  ಅವನ ಸಾಗ್ ಹಾಕುತ್ತಿದ್ದಳು.

*


ಕೇಶವನ  ಮನೆ  ಕೆಲಸ  ಬಿಟ್ಟರೆ  ಗೌರಿ  ಹೆಚ್ಚು  ಸಮಯ  ಮೀಸಲಿಡುತ್ತಿದ್ದದ್ದು  ಆ  "ಜಲಪಾತಕ್ಕೆ".ಕೇಶವನ  ಅಜ್ಜನ  ಮನೆ  ಮತ್ತು  ಹೊಲಗೇರಿಯ  ಗಡಿಯಂತೆ ಅವೆರಡರ  ನಡುವಿನ ಸಾಮಾಜಿಕ ಅಂತರವನ್ನು  ಸಾರುವಂತೆ ಹರಿಯುತ್ತಿದ್ದ  ಹೊಳೆಯ  ಒಂದು  ಬದಿಯಲ್ಲಿದ್ದ  ಜಲಪಾತವದು. ಅದೇ  ಜಲಪಾತದಡಿ  ನಿಂತು ಗೌರಿ  ಗಂಗೆಗೆ  ಕೈ  ಮುಗಿದು  ಮಗುವಿಗಾಗಿ  ಪ್ರಾರ್ಥಿಸಿ ತಾಸುಗಟ್ಟಲೆ  ನೀರಿನಲ್ಲಿ  ಆಡುತ್ತಿದ್ದಳು.ನೀರಿನಿಂದ  ಎದ್ದು   ಬಂಡೆಯಾಚೆಗೆ   ನಡೆದಂಗೂ  ಗಂಟು  ತೆಗೆದ  ಆಕೆಯ  ಚೆಂಡಿ  ನೀಲಾಗೂದಳು ತೊಟ್ಟಿಕ್ಕುತ್ತಾ  ಬಂಡೆಗಳ  ಮೇಲಾಯ್ದು  ಆಕೆಯ  ಮನೆಗಿನ  ದಾರಿಯವರೆಗೂ  ಹನಿಚುಕ್ಕಿಯ  ಚಿತ್ತಾರ  ಬಿಡಿಸಿ  ಪುಟ್ಟ  ಮಕ್ಕಳನ್ನೆಲ್ಲಾ ತನ್ನೆಡೆಗೆ ಅಹ್ವಾನಿಸುತ್ತಿರುವಂತೆ  ಅನಿಸುತ್ತಿತ್ತು .


ಅಲ್ಲಿನ  ಆ ಜಲಪಾತ "ಗೌರಿ-ಜಾಲಪಾತ"ವೆಂದೆ ಪ್ರಸಿದ್ದವಾಗಿತ್ತು,ಜಲಪಾತ ನಿರ್ಮಿತ ಹೊಂಡ  ಅವಳದೇ  ಅವಿಷ್ಕಾರವೆಂದು  ಎಲ್ಲರೂ  ಮಾತಾಡಿಕೊಳ್ಳುತಿದ್ದರು.ಇನ್ನೂ  ಒಳಕ್ಕೆ   ಬಂಡೆ  ಜಿಗಿಯುತ್ತಾ   ಕಾಡಿನತ್ತ  ಡೊಂಕಿನ  ಹೆಜ್ಜೆ  ಹಾಕಿದರೆ  ಹಲವಾರು  ಚಿಕ್ಕ  ಪುಟ್ಟ  ಜಲಪಾತ  ಮಾದರಿಯ  ನೀರಿನ  ಹೊಂಡಗಳು  ಇದ್ದವು.ಆದರೆ  ಗೌರಿ ಜಲಪಾತ  ಅವೆಲ್ಲಕ್ಕಿಂತಲೂ ಎತ್ತರದ್ದು ವಿಸ್ತಾರವಾದದ್ದು.ಅದರ ಮೇಲಿನ ಬಂಡೆಗಳಿಂದ  ಪುಟಿ  ಪುಟಿದು ಹಾಲ್ನೊರೆಯಂತೆ ನೀರು ದುಮ್ಮುಕ್ಕುತಿತ್ತು. ಇಬ್ಬರು  ನಿಂತು  ಮೈ  ತಂಡಿ ಗೊಳಿಸಬಹುದಾದಷ್ಟು   ಜಾಗವನ್ನೋಳಗೊಂಡ್ದಿತ್ತು.


ಸಾಮಾಜಿಕ ಗಡಿಯ ಅರಿವಿಲ್ಲದ ಪುಟ್ಟ ಬಾಲಕ  ಕೇಶವನಿಗೆ ಎಲ್ಲಾ ಗಡಿ ದಾಟುವ ಬಯಕೆ.ಗೌರಿ ಆಡುತ್ತಿದ್ದ   ಜಲಪಾತದಲ್ಲಿ  ತಾನು  ಮುಳುಗೇಳಾ ಬೇಕೆನ್ನೋ ಹುಚ್ಚು ಹಠ ಅವನದು.ಅದನ್ನು ಮನಗೊಂಡ ಅಜ್ಜ "ಗೌರಿಜಲಪಾತ  ನೀರು  ಮುಟ್ಟಿದರೆ  ಕೈಗೆ  ಬರೆ  ಹಾಕ್ತೀನಿ"  ಅಂದ್ದಿದ್ದ  ಮಾತನ್ನು  ಮೀರಿ  ಅಲ್ಲಿಗೆ  ಸುಮಾರು  ಬಾರಿ  ದೌಡಾಯಿಸಿದ್ದ.ಆದರೆ  ಗೌರಿ  ಸಿಟ್ಟಿನ ಯಜಮಾನ್ರು ಮಗುವಿಗೆ  ಏನ್ ಅನಾಹುತ  ಮಾಡಿಬಿಡುತ್ತಾರೋ ಎಂಬ ಭೀತಿಯಿಂದ  ಆತನನ್ನು   ಅವಳಲ್ಲಿರುವಷ್ಟು   ಸಮಯ  ಆಸು  ಪಾಸು  ಬಾರದಂತೆ  ತಡೆಯುತ್ತಿದ್ದಳು .

*

ಕೇಶವ ಎಂಟು ವರುಷದವನಿದ್ದಾಗ ಗೌರಿಗೆ ಒಂದು ಆಘಾತ ಕಾದಿತ್ತು.ಅಜ್ಜನ  ಮರಣದ  ಬಳಿಕ ಭಟ್ಟರ  ಸಂಸಾರ ಬೆಂಗಳೊರಿಗೆ ತೆರೆಳುವ ನಿರ್ಧಾರಕ್ಕೆ ಬಂದಿದ್ದರು.ಅದರಂತೆ ಅಜ್ಜಿ ಅಮ್ಮನೊಟ್ಟಿಗೆ ಅಪ್ಪನಿದ್ದ  ಬೆಂಗಳೂರಿನಲ್ಲಿ  ನೆಲೆಸಲು  ಹೊರಟಿದ್ದ  ಕೇಶವನ   ಅಗಲಿಕೆ  ತಾಳಲಾರದೆ  ಅವನಪ್ಪಿ  ಮುದ್ದಾಡುವ ಅವಕಾಶವಿಲ್ಲದೆ  ಗೌರಿ  ಎಡಬಿಡದೆ ಸುರಿಯುತ್ತಿದ್ದ  ಕಣ್ಣೀರಾ  ಮುಚ್ಚಿಡಲು  ಅಲ್ಲಿಂದ  ಹೊರಟವಳೇ  ಗೌರಿ ಜಲಪಾತದ  ನೀರಿನಲ್ಲಿ ಅದನಡಗಿಸಿ ನಿಂತು  ಬಿಟ್ಟಳು.ಅದೇ   ದಾರಿಯಲ್ಲಿ  ಬಸ್  ನಿಲ್ದಾಣದತ್ತ  ಹೋಗುತ್ತಿದ್ದ  ಕೇಶವ  ಸಪ್ಪೆ  ಮೋರೆಯೊಂದಿಗೆ  ನದಿಯಲ್ಲಿ  ನಿಂತ  ಗೌರಿಯ  ಉದ್ದೇಶಿಸಿ "ಕೊನೆಗೂ  ಅಲ್ಲಿ  ಮೀಯಲು ಬಿಡಲಿಲ್ಲ  ನೀನು'' ಅಂದ್ದಿದ್ದ .ಅದರಲ್ಲಿ ತನ್ನದೇನು ತಪ್ಪಿಲ್ಲವೆಂದು ತಿಳಿಸಲೂ ಆಗದೆ  ಅವನ  ದುಃಖದ  ಮುಖವ  ನೋಡಲೂ ಆಗದೆ ಬೆನ್  ಹಿಂದಾಕಿ ನೀರಿನಲ್ಲಿ ಕಾಣುತ್ತಿದ್ದ ಆತನ ಕದಲಿದ ಬಿಂಬವ ನೋಡುತ್ತಾ ಯಾತನೆಯೊಂದಿಗೆ"ರಜಕ್ಕೆ  ಬರ್ತಿಯಲ್ಲ  ಮಗ, ನಗ್ತಾ  ಹೋಗು.ನನ್ನಾಣೆ  ಇನ್ಮುಂದೆ  ಈ  ಜಲಪಾತಕ್ಕೆ  ವಾರಸುದಾರ  ನೀನೆ! " ಎಂದ್ದಿದ್ದಳು.


ಅದೇ ಕೊನೆ ಕೇಶವ ಗೌರಿಯನ್ನು ಮತ್ತೇನೆಂದು ಸಂದಿಸಲಿಲ್ಲ.ಅವರೂರು ಬಿಟ್ಟ  ವರ್ಷವೆ  ಗೌರಿ  ಸತ್ತ  ಸುದ್ಧಿ  ದೂರವಾಣಿ  ಮೂಲಕ  ಕೇಶವನ  ತಾಯಿಗೆ  ತಲುಪಿತು.ಇವತ್ತಿಗೂ ಅವಳ  ಸಾವಿನ  ರಹಸ್ಯ  ಒಗಟಾಗೆ  ಉಳಿದು  ಹೋಗಿದೆ.ಅತಿಯಾಗಿ  ವ್ಯಮೊಹಿಸಿದ  ನೀರೇ   ಅವಳ  ಲಾವಣ್ಯಕ್ಕೆ   ಮಾರು  ಹೋಗಿ  ಕತ್ತಲ್ಲಲ್ಲಿ   ಓಲೈಸಿ ನುಂಗಿ  ಹಾಕ್ತೋ  ಇಲವೋ  ಮಕ್ಕಳಿಲ್ಲದವಳೆಂದು  ಹೊಲಸು  ಸಮಾಜ  ತಿಂದು  ಮುಗಿಸಿತ್ತೋ  ಅಥವಾ  ಮುಬ್ಬನೆ  ಕೊಂದು  ನೀರಿಗೆಸೆದನೋ ಯಾರಿಗೂ  ಗೊತ್ತಿಲ್ಲ  ಎರಡು  ದಿನ  ಬಿದ್ದ  ದೊಡ್ಡ  ಮಳೆಗೆ  ಅವಳ  ದೇಹ  ತೇಲಿ  ಕೊಳೆತ  ಸ್ಥಿತಿಯಲ್ಲಿ  ಸಿಕ್ಕಿತ್ತು .ನಂತರ  ಅದನ್ನ  ಹೂಣಿ  ಹಾಕ್ಕಿದ್ದರು.

*

ಸಂಜೆ  ಸೂರ್ಯ  ಬಣ್ಣ  ಉಗುಳುತ್ತಿದ್ದ  ಸಮಯಕ್ಕೆ  ಬಸ್ಸು  ಊರ  ಮುಂಬಾಗಿಲಿಗೆ  ನಿಲ್ಲುತ್ತಿದ್ದಂಗೆ  ಕೇಶವ   ಬ್ಯಾಗ್  ಏರಿಸಿಕೊಂಡು  ಬಾಡಿಗೆಗೆ  ಬಿಟ್ಟಿದ್ದ  ಅಜ್ಜನ  ಹಳೆ  ಮನೆಯತ್ತ  ಸಾಗಿದ.ಇಲ್ಲೆಲ್ಲಾ  ಎಷ್ಟು ಬದಲಾಗಿದೆ ಅಂದು ಕೊಳ್ಳುತ್ತಾ ಮುನ್ನಡೆದ ಕೇಶವನಿಗೆ ಉರಾಚೆಗೆ ಯಾವುದೇ  ಕೇರಿ  ಕಾಣಲಿಲ್ಲ.ಅಲ್ಲೊಂದು ದಲಿತ ಹಕ್ಕುಗಳ ಕೇಂದ್ರ ಸ್ಥಾಪಿತವಾಗಿದೆ,ಖಾಕ ನ ಅಂಗಡಿಯಿದ್ದ  ಜಾಗದಲ್ಲಿ  ಮಹಿಳಾ ಸಂರಕ್ಷಣಾ  ಸಂಸ್ಥೆ  ಎದ್ದು  ನಿಂತಿದೆ.ಅದರ  ಪಕ್ಕದಲ್ಲೇ  ಅರೋಗ್ಯ  ತಪಾಸಣೆ  ಕೇಂದ್ರದ "ನಾವಿಬ್ಬರು  ನಮಗಿಬ್ಬರು"  ಪಲಕದ  ಕೆಳಗೆ  ಕೆಂಪಾಕ್ಷರದಲ್ಲಿ  ಮೂಡಿದ್ದ  "ಮಕ್ಕಳಾಗದಿರುವುದಕ್ಕೆ   ಹೆಣ್ಣು ಮಾತ್ರವಲ್ಲ  ಗಂಡಿನಲಿರೋ  ದೋಷವು  ಕಾರಣವಿರಬಹುದು ಅಗತ್ಯವಾಗಿ  ತಪಾಸಣೆ  ಮಾಡಿಸಿಕೊಳ್ಳಿ" ಅನ್ನೋ  ಅಡಿ  ಬರಹವ  ಮಹಿಳಾ   ಸಮಾಜದ  ಗೋಡೆಯ ಮೇಲೂ ವಿಸ್ತಾರವಾಗುವಂತೆ  ಬರೆಸಿದ್ದಾರೆ.


ಛೆ! ಗೌರಿ  ಈ  ಕಾಲಮಾನದಲ್ಲಿ  ಜನಿಸ ಬಾರದಿತ್ತ  ಮನಸಿನಲ್ಲಿ  ಮೂಡುತ್ತಿದ್ದ  ಭಾವೊದ್ವೇಗ ಭರಿತ  ಪ್ರಶ್ನೆಗಳೊಂದಿಗೆ  ಹಲವು  ಸಂವತ್ಸರಗಳ ಬಳಿಕ   ಮತ್ತದೇ   ಮನೆಯ  ಹೊಳೆಯ  ಹಾದಿ  ಮುಟ್ಟುತ್ತಿದ್ದಂತೆ ಆಹ್ವಾನಿಸಿದ  ಹೊಳೆಯಲ್ಲಿ  ಪ್ರಯಾಣದ  ದಣಿವಾರಿಸಲು  ಹಿಡಿದ  ಬ್ಯಾಗನ್ನು  ಕೆಳಗಿರಿಸಿ ನೀರಿನಲ್ಲಿ  ಕಾಲಿರಿಸಿದ್ದೇ  ತಡ  ಗೌರಿಜಲಪಾತದ   ನೆನಪಾಗಿ  ಆಚೀಚೆ   ಕಣ್ಣಾಡಿಸಿದ.


ಹಳೆ ನೀರು ಅಲಲ್ಲಿ  ಹಲವೆಡೆ ಇನ್ನಷ್ಟು ಕಲುಷಿತವಾಗಿ ಹೆಪ್ಪುಗಟ್ಟಿ ನಿಂತಿದೆ. ಆದರೆ ಗೌರಿಜಲಪಾತ  ಕುರುಹೇ  ಇಲ್ಲದಂತೆ  ಹಬೆಯಾಡುತ್ತಿದ್ದ ಬಂಡೆಗಳ  ರಾಜ್ಯದಲ್ಲಿ  ಕಾಣಿಯಾಗಿದೆ.ಮತ್ತೊಂದು ಅಂತರವ ಸೃಷ್ಟಿಸಲು ಅಲ್ಲೇ ಕಾಲು ದಾರಿಯ ಕಳ್ಳ ಕಣಿವೆಯಿಂದ  ಸಣ್ಣದಾಗಿ  ಹೊಳೆಯತ್ತ ಹೊಸ  ನೀರು  ಹರಿಯುತ್ತಿತ್ತು.ಹರಿದು  ಬರುತ್ತಿದ್ದ   ಹೊಸ  ನೀರಿಗೆ  ಅದರದೇ  ಆದ   ಹೊಸ  ಹರಿತ  ಹೊಸ  ತಿವಿತ.ಒಂದು  ಜೋರು  ಮಳೆ  ಹುಯ್ದರೆ  ಇನ್ಯಾವ  ಸಮೂಹವನ್ನಾದರು   ಸಂಮೊಹಿಸುವ  ಸಂಚೂಡಿ   ಮುಂಬರುವ  ಅಹುತಿಗಾಗಿ  ಬಂಡೆಯನ್ನ  ತಣ್ಣಗಾಗಿಸುತ್ತಾ  ತಾನು  ಬಿಸಿ  ಏರಿಸಿಕೊಂಡು  ಸಾಗುತ್ತಿದೆ.ಬೀಸುತ್ತಿದ್ದ ವೈಶಾಖ ಮಾಸದ ಗಾಳಿಯೊಂದಿಗೆ   ಬಿಸಿಲು  ಮಳೆ  ಶುರುವಾಗುತ್ತಿದ್ದಂತೆಯೇ  'ಮಗ  ಇನ್ಮುಂದೆ  ಇದರ ವಾರಸುದಾರ   ನೀನೆ" ಅನ್ನೋ  ಮಾತುಗಳು ಕೇಶವನ  ಕಿವಿಯೊಳಗೆ  ಪುನಃ  ಪುನಃ  ಉಚ್ಚರಿಸಿದಂತಾಗಿ ಬದಲಾದ ಸಮಾಜದ  ಧ್ಯೋತಕದಂತೆ  ಸಣ್ಣಗೆ  ಹರಿಯುತ್ತಿದ್ದ  ಹೊಸ ನೀರಿನ ತಿವಿತಕ್ಕೆ  ಬೆಚ್ಚಿ  ಭಾರದ  ಬ್ಯಾಗನ್ನು  ಹೆಗಲೇರಿಸಿಕೊಂಡು  ಮನೆಯತ್ತ  ವೇಗದ ಹೆಜ್ಜೆ  ಹಾಕಿದ.

Wednesday, February 20, 2013

ಅರಿಶಿನವಲ್ಲದ ಹಳದಿ....ಕುಂಕುಮವಿಲ್ಲದ ಕೆಂಪು!


ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ  ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ  ಪ್ರಜ್ವಲಿಸುವುದವನಂದೇ      

ನಿಮ್ಮದೋ ಹಳದಿ ಕೆಂಪು ನಾನಾ ಬಣ್ಣಗಳು 
ನಡುಮಧ್ಯೆ ಗಾಜಿನ ಸೂರುಗಳು,
ಕಾವಲಿಗೆ ಬೆದರು ಗೊಂಬೆಗಳ ಸಾಲುಗಳು
ಗುಮ್ಮನೆ ಕೂತ ಅವನಿಗೂ ಕಳ್ಳರ ಭಯ ನಿಮ್ಮಲ್ಲಿ 
ಚಿಲಕವಿರುವ ಗುಡಿಯೊಳಗೂ ತೀರದ ಬವಣೆಗಳು  

ನಿಮ್ಮಯ ಒಂದು ಊಟಕ್ಕೋ,
ಕುದುರೆ ಓಟಕ್ಕೋ,ಆಳುವ ಚಟಕ್ಕೋ
ಅವನು ನುಚ್ಚಾದ,ಮಿನುಗುವ ನೂರಾದ  
ಇಂಚಿಂಚು ಬಿಂಬದೊಳು ಕತ್ತರಿಸಿದ ಕೈಯಾದ,
ಬರಿಯ ಕಣ್ಣು ಕುಕ್ಕುವ ಮೆರಗಾದ.

ಅಲ್ಲೊಬ್ಬ ಕುಂಟ ಅಜ್ಜ,
ಕೂರುತ್ತಾನೆ ಅವನ ಕಾಯುತ್ತಾನೆ
ಹಸ್ತವ ಚಾಚುತ್ತಾನೆ ಕೇಳಿದರೆ ಹುಡುಕುತ್ತಾನೆ 
ಕಡೆಗೆ ದೇವರೆಂದು ನಿಮಗೆ ತಲೆ ಬಾಗುತ್ತಾನೆ

ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ  ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ  ಪ್ರಜ್ವಲಿಸುವುದವನಂದೇ!   

Saturday, February 2, 2013

ಕಾಳಿ(ಕಲಿ)ಯುಗ

ಚಿತ್ರಕೃಪೆ:- ಅಂತರ್ಜಾಲ
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ

ಮುಖಕ್ಕೊಂದು  ಬೆನ್ನು
ಬೆನ್ನಿಗೆ ಸಾವಿರ ಮುಖ
ಬೆನ್ನಿಗೇ ಬೆನ್ನಚ್ಚಿ ಕೂತೆವಲ್ಲಾ 

ಕಣ್ಣುಗಳು ಕಣ್ಣನ್ನೇ 
ಕುಕ್ಕದೇ  ಬಿಡುವುದೆನಯ್ಯ?    

ಊರಿಗೆ  ಕೇರಿಗೆ
ಝಗಮಗಿಸೋ ನಸುಕಿನ ನಾಡಿಗೆ 
ಪ್ರವಾಹವದು ಬಡಿದಿಹುದು
ಸೊಂಕೊಂದ  ತಂದಿಹುದು
ಕಂಗೆಟ್ಟ ದಾರಿಯಿದು
ಮುಸುಕಿನಲಿ ಸಾಗಿಹುದು,ಹಿತ್ತಲ ಗಿಡದಾಶ್ರಯಕೆ
  
ಇಲ್ಲಿಯ ರೋಗಗ್ರಸ್ತ ಹಿತ್ತಲಿಗೆ 
ಯಾವ ಬೇರಿನ ಮದ್ದಯ್ಯ?

ಪ್ರಕೃತಿಯ ಸೆರಗಿನಲಿ 
ವಿಕೃತಿಯು ಅವಿತಿಹುದು
ಭೇದಕ್ಕೆ ಏನಿಹುದು ಮಾನದಂಡ
ಕಡೆಯಿಲ್ಲದ ಪಂಚೀಗಳು
ಬಾಯಿಲ್ಲದ ಹಂಸಗಳು
ಅಳೆಯಲಿಕೆ ಎಲ್ಲಿಹುದು ನ್ಯಾಯದಂಡ

ನಂಬಿದ ವಿಹಂಗಮ ಧೂತರೆಲ್ಲಾ  
ಯಾರ ದನಿಗೆ ಕಾದಿಹರಯ್ಯ?

ದ್ವಾಪರ ತ್ರೇತಗಳೆಲ್ಲ  ಅವನದೆಂದು  ಬೀಗದಿರಿ
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ
ಲೋಕದ ಕಾಳಿ ಕಲಿಗಳೇ ಅಂತ್ಯಕ್ಕೆ ಕೂಡುವರು 
ದಿಕ್ಕಿಲ್ಲದ  ಕೋಣೆ  ಕೋಣೆಗಳ  ಕತ್ತಲಿಂದಲೇ
ಉದ್ಭವಿಸುವಳು  ಅವಳು

ಸದೆಬಡೆದು ಪಳಗಿಸುವಳು ನಿಮ್ಮಯ ಪೌರುಷವ
ಪ್ರದರ್ಶನಕಿಟ್ಟೀರಿ ಜೋಕೆ  ಅಮಾನುಷ 
ಪುರುಷತ್ವವ.

 ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ
 

Thursday, January 31, 2013

ಸೋಕದ ಸೂರ್ಯನ ಪ್ರೀತಿ,ಸಂಬಂಧವೆಂಬ ಮರ ಮಾತಾಡಿದಾಗ...

ಚಿತ್ರಕಲೆ : ಮದನ್ ಕುಮಾರ್
ಮಾಗಿಯ ಚಳಿಗೆ ಅವಳು ಕಂಗಾಲು.ತುಟಿಗಳು ಕೆನೆ ವ್ಯಸ್ಲಿನ್ ನೋಡದ ದಿನವೇ ಇಲ್ಲ.ಈಗೀಗ ಚರ್ಮವು ಬಿರುಕು ಬಿಡುತಿದೆ.ಅದಾಗಲೇ ಸಮಯವೂ ಜಾರಿ ಸೂರ್ಯ ನೆತ್ತಿಗೆ ಬಂದು ನಿಂತಿದ್ದಾನೆ.ಹರುಷದಿ ಇವಳು ಜಿಗಿಯುತ್ತಾ ಬಂದು ಅಂಗಳದಲ್ಲಿ ಸೂರ್ಯನಿಗೆ ಮೈವೊಡ್ಡಿ ಬಿಸಿಲ ನಿರೀಕ್ಷೆಯಲ್ಲಿ ಕುಳಿತು ಕೊಂಡಳು.ಮನೆಯ ಸುತ್ತಿದ್ದ ಮರಗಳು ಬೀಸುತ್ತಿದ್ದ ಗಾಳಿಗೆ ತಲೆದೂಗುತ್ತಿವೆ ಸೂರ್ಯ ಅವುಗಳ ಮಧ್ಯೆ ನುಸುಳಿ ಇವಳ ಮೈ ಸ್ಪರ್ಶಿಸುವಲ್ಲಿ ಎಡವುತ್ತಿದ್ದಾನೆ.ಇವಳು ಆ ಗೋಡೆಗಳೇ ಎಷ್ಟೋ ಬೆಚ್ಚನೆಯ ಭಾವ ನೀಡಿದ್ದವು ಅಂತ ಸಿಟ್ಟಾದಳು.ಅಂಗಳದೆಲ್ಲೆಡೆ ಎಡತಾಕಿದರು ಉಪಯೋಗವಾಗಲಿಲ್ಲ.ಬೀದಿಗೆ ನಿಲ್ಲಲ್ಲು ಸಾಧ್ಯವಿಲ್ಲದ ಮಾತು,ಮನೆಯ ಬೇಲಿಯು ಬಲಿಷ್ಟವೆ,ಏನಿದ್ದರು ತನ್ನ ಪರಿಮಿತಿಯಲ್ಲೇ ಎಲ್ಲವ ದಕ್ಕಿಸಿಕೊಳ್ಳಬೇಕು.ಕೋಪ ನೆತ್ತಿಗೆರುತ್ತಿದಂಗೆ ಕಣ್ಣು ಕೆಂಪಾಗಿಸಿಕೊಂಡು ಮರದ ಬಳಿ ಬಂದು ನಿಂತಳು.ಸಿಹಿ ಸಿಹಿ ನೆನಪುಗಳು ಅವಳ ಆವರಿಸಿತು.ಆಗಿನ್ನೂ ಪುಟ್ಟವಳು ಅಪ್ಪ ಗಿಡಗಳ ಅದೆಲ್ಲಿಂದಲೋ ತಂದು ನೆಟ್ಟಿದ್ದ,ದಿನ ನೀರು  ಹುಯ್ಯುತ್ತ ಅದರ ಆರೈಕೆ ಮಾಡುತ್ತಿದ್ದ.ಇವಳೋ ಅಪ್ಪನ ಮಗಳು,ಅವನು ಬಿಂದಿಗೆ ನೀರು ಸುರಿದರೆ ಇವಳು ತನ್ನ ಪುಟ್ಟ ಕೈಗಳ ತುಂಬಾ ತಂಬಿಗೆ ಹಿಡಿದು ನೀರೆರೆಯುತ್ತಿದ್ದಳು.ಆ ಗಿಡಗಳೇನು ಬೇಡಿಕೊಂಡಿರಲಿಲ್ಲ,ಅವುಗಳು ಅವಳಂತೆ ಆಗಿನ್ನೂ ಮಾತು ಕಲಿತಿರಲಿಲ್ಲ.ಅವಳು ದೊಡ್ಡವಳಾದಾಗ ಅಜ್ಜಿ ಪೂಜೆಗೆ ಮೂಲೆಯಲ್ಲಿದ್ದ ಅಲಸಿನ ಮರ ಆಯ್ದು ಕೊಂಡಿದ್ದರು.ಇವಳು ಪೂಜೆ ಮಾಡಿ ಮುಗಿಸಿದಳು.ಇವಳಿಗೆ ಮಾತು ಚೆನ್ನಾಗಿಯೇ ಹೊರುಳುತ್ತಿತ್ತು ಆದರೆ ಆಯ್ಕೆಯ ಸ್ವತಂತ್ರವಿರಲಿಲ್ಲ.ಆ ಮರವೇನು ಕೇಳಿಕೊಂಡಿರಲಿಲ್ಲ,ಅದಿನ್ನೂ ಮಾತು ಕಲಿತಿರಲಿಲ್ಲ.ತದನಂತರ ಆ ಮರ ಫಲವತ್ತಾಗಿ ಬೆಳೆದು ಅದರಲ್ಲಿ ರುಚಿಕರ ಹಣ್ಣುಗಳು ಬಿಡಲಾರಂಬಿಸಿತು.ನೋಡಿದೀರ  ನನ್ನ ಮೊಮ್ಮಗಳು ಪೂಜೆ ಮಾಡಿದ ಮರ ಅದಕ್ಕೆ ಇಷ್ಟೊಂದು ರುಚಿ ಅದರ ಹಣ್ಣುಗಳು ಎಂದು ಅಜ್ಜಿ ಹಣ್ಣು ಚಪ್ಪರಿಸಿದ್ದಾಗಲೆಲ್ಲ ಸಿಕ್ಕ ಸಿಕ್ಕವರಿಗೆ ಹೇಳಲು ಮರೆಯಲಿಲ್ಲ.ಇವಳಿಗೂ ಹಾಗೇ ಅನಿಸ ತೊಡಗಿತು ಆ ಮರ ತನ್ನ ಋಣದಲ್ಲಿದೆ ಅನ್ನೋ ದರ್ಪ ಮನೆ ಕಟ್ಟಿತ್ತು.ಚಳಿಗೆ ರೋಮ ಸೆಟೆದು ನಿಂತವು,ಸಿಟ್ಟೇರಿ ಈ ಮರವ ಇಂದು ಕಡಿದೆ ಬಿಡಬೇಕೆಂದು ಕೊಡಲಿ ಕೈಗೆತ್ತಿಕೊಂಡಳು.ಸುಡುವ ಬೇಸಿಗೆಯ ನೆನಪಾಯ್ತು,ಮರದ ತಂಗಾಳಿ ಆಗವಳಿಗೆ ಹಿತ ನೀಡುತ್ತಿದ್ದವು.ಕೊಡಲಿ ಜಾರಿತು.ಮರ ತನ್ನನ್ನು ತನಗಾಗಿ ಯಾರು ಬೆಳೆಸಲಿಲ್ಲ ಪ್ರೀತಿಸಲಿಲ್ಲವೆಂದು ಕೊನೆಗೂ ಮೌನವ ಮುರಿದು ಜೋರು ಅಳತೊಡಗಿತು.ಪರಿತಪನೆಯೋ.. ಪಶ್ಚ್ಯತಾಪವೋ...ಗೊತ್ತಾಗದಂತೆ,ಇವಳೂ  ಅಳ ತೊಡಗಿದಳು.ಸುತ್ತಲಿದ್ದ ಮರಗಳು ಸ್ಪಂದಿಸುವಂತೆ ಅಳ ತೊಡಗಿದವು.ಊರಿನೆಲ್ಲಾ ಮರಗಳು ಜೋರು ಕೂಗಲಾರಂಬಿಸಿದವು.ಅಳು ಕೂಗಾಯಿತು.ವಿವಿಧ ಭಾವಗಳು ಸೇರಿ  ಕೂಗನ್ನು ಇಂಪಾಗಿಸಿದವು.
*
ಜನರೆಲ್ಲಾ ಆ ಸಮೂಹ ಆಲಾಪನೆಯ ಆಲಿಸುವಲ್ಲಿ ಮಗ್ನರಾದರು.ಮುಂದೊಂದು ದಿನ  ಕೂಗು ಸತ್ತೊಯ್ತು.ಅವಳ,ಮರದ, ಗೋಳು ಯಾರ ಕಿವಿಗೂ ಬೀಳಲೇ ಇಲ್ಲ.