Friday, November 2, 2012

"..........................


ಬೆಳಂಬೆಳಗೆ ನಿತ್ಯದ ಸ್ನಾನ ಕರ್ಮಾದಿಗಳ ಮುಗಿಸಿ ನನ್ನ ಕೋಣೆಗೆ ತಡವರಿಸಿ  ಹೆಜ್ಜೆಯನಿಡುತಿದ್ದಾಗ "ಬಿಸಿ ಬಿಸಿ ನೀರು ಹೊಯ್ಯಿಸ್ಕೊಂಡು  ಸುಸ್ತಾಗಿರುತ್ತೆ ಮೇಜಿನ ಮೇಲೆ ಹಾಲಿಟ್ಟಿದೀನಿ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ತಯ್ಯಾರಾಗು.ಇನ್ನು ಸಮಯವಿದೆ ಹತ್ತು ಗಂಟೆ ನಂತರವೇ ಪ್ರಶಸ್ತ ಮೂಹುರ್ತವಿರೋದು ಅಂದಿದ್ದಾರೆ  ಭಟ್ರು"ಅಮ್ಮ ಎಂದಿನ ಕಾಳಜಿ ಸ್ವರದಲ್ಲಿ  ಕೂಗಿ ಹೇಳಿದಳು.ಕನ್ನಡಿ ಬಳಿಯ ಕಿಟಕಿಯ ಒಳ ಹೊಕ್ಕುತಿದ್ದ ಸೂರ್ಯೋದಯದ ಎಳೆ  ಬಿಸಿಲ ಕಿರಣಗಳು ಮೈಯ್ಯ ತಾಕುತ್ತಿದ್ದಂತೆ ಮೊದ ಮೊದಲು ಹೆಣ್ಣಾದ ಸವಿ ಗಳಿಗೆಯ ನೆನಪು ಮರುಕಳಿಸಿ ನಾಚಿಕೆ ಉಕ್ಕಿದಂತಾಯ್ತು .ಕಿಟಕಿ ಪರದೆಯ ಸಂದಿಯಿಂದ ಇಣುಕುತ್ತಿದ್ದ ಸ್ನಿಗ್ದ ಬೆಳಕಿನ ನಡುವೆ ನನ್ನನ್ನು ನಾನೇ ಕನ್ನಡಿಯಲ್ಲಿ ನೋಡುತ್ತಾ ಹೊಟ್ಟೆಯ ನೆವರಿಸಿಕೊಂಡೆ.

ನಾ ತೊಟ್ಟಿದ್ದ ಅಣ್ಣ ಉಡುಗೊರೆಯಾಗಿ ಕೊಟ್ಟ  ಹಸಿರು ಸೆರಗಿನ ಕೆಂಪು ಬಣ್ಣದ ಸೀರೆಯು ಅರಳಿದ ಮೊಗದೊಡನೆ ಸ್ಪರ್ಧೆಗಿಳಿದು ಅದರ ರಂಗೆಚ್ಚಿಸಿ ಕಂಗೊಳಿಸುವಂತೆ ಮಾಡಿತು.ಸೀರೆಯುಡುವ ಬಗ್ಗೆ ಅಸಡ್ಡೆ ಧೋರಣೆ ತಾಳಿದ್ದ  ನಾನು ಈ ನಡುವೆ ಅದರ ವ್ಯಾಮೋಹ  ಹೆಚ್ಚಿಸಿಕೊಂಡು ದಿನಲೂ  ಅವನ್ನೇ ಬಯಸಿ ದರಿಸುವುದು ಪರಿಪಾಟಲಾಗಿದೆ.ತಿಂಗಳು ಕಳೆದಂತೆಲ್ಲಾ ಸೀರೆಯ ನೆರಿಗೆ ಕಮ್ಮಿಯಾಗುತ್ತಿದ್ದರೆ ಏನೋ ಒಂದು ತರನಾದ ಹೊಸ ಬಗೆಯ ಪುಳಕ ಕಾತುರ.ಜೀವನಶೈಲಿಯಲ್ಲೂ ಯೋಚನಾ ಲಹರಿಯಲ್ಲೂ ಅನೇಕಾನೇಕ ಬದಲಾವಣೆಗಳು.ನವ ಅತಿಥಿಯ ಸ್ವಾಗತಕ್ಕೆ ಮನಸಿನ ಆವರಣವು  ಬಗೆ ಬಗೆಯ ಹೂವಿನ ಹಾಸು ಹಾಸಿಕೊಂಡು ಸಜ್ಜಾಗಿದೆ."ಆಯ್ತಾ? ಯಾರನಾದ್ರು ಸಹಾಯಕ್ಕೆ ಕಳಿಸ್ಲ ?"ಕೇಳಿದಳು ಅಮ್ಮ."ಯಾರು ಬೇಡಮ್ಮ ಐದು ನಿಮಿಷ ಇಗೋ ನಾನೆ ಬಂದೆ"ಅನ್ನುತ್ತಾ ಕೋಣೆಯ ಗೋಡೆಗಳಿಗೆ ನೇತು ಹಾಕಿಕೊಂಡ ಬಾಯಲ್ಲಿ ಬೆರಳಿಟ್ಟು ಮಲಗಿದ್ದ ಹಸುಗೂಸು,ಅಂಬೆಗಾಲೂರಿ ನಿಂತ ಕಂದಮ್ಮ,ಕಿವಿ ಎಳೆದಾಡಿಕೊಳ್ಳುತಿದ್ದ ಅವಳಿ ಮಕ್ಕಳು,ತುಂಬು ಹಾಲ್ಗೆನ್ನೆಯ ಹೊತ್ತು ವಿವಿಧ ಭಂಗಿಯಲ್ಲಿ ಮನಸೂರೆಗೊಳಿಸುತ್ತಿದ್ದ ಕಿನ್ನರ ಸಮೂಹ ಮೊದಲಾದ ಚಿತ್ತಾಕರ್ಷಕ ಚಿತ್ರ ಪಟಗಳನ್ನ ತೆಗೆದು ಮೂಲೆಯಲ್ಲಿ ಜೋಡಿಸಿಟ್ಟೆ.ಇನ್ಮೆಲೆನಿದ್ದರು ನನ್ನ ಮುದ್ದುವಿನ ಮುದ್ದಾದ ಚಿತ್ರ ಪಟಗಳೇ  ಈ  ಕೋಣೆಯ  ಅಲಂಕರಿಸಬೇಕನ್ನೋ ಸಿಹಿ ಸ್ವಾರ್ಥ ನನ್ನದು.
ಚಿತ್ರಕೃಪೆ:ಮದನ್ ಕುಮಾರ್

ನವಮಾಸ ಕಳಿತೆಂಬ ಗಡಿಬಿಡಿ ಅವಸರವಿದ್ದರು ಅಚ್ಚುಕಟ್ಟಾಗಿ ವಿಜೃoಭಣೆಯಿಂದ ಸೀಮಂತ ಮಾಡಿ ಮುಗಿಸಿದ ಸಂಭ್ರಮದಲ್ಲಿದ್ದರು ಮನೆಯವರು. ನನಗೇಕೋ ಅಸಮದಾನ ಆತಂಕ.ಮುದ್ದು ಪ್ರತಿ ಸಲ ಕೈ ಕಾಲಾಡಿಸಿ ಒದ್ದಂತಾದಾಗ  ಅಪೂರ್ವವಾದ ಸಿಂಚನ ನರನಾಡಿಗಳಲ್ಲರಿದ ಅನುಭವವಾಗುತ್ತಿತ್ತು ಇಂದೇಕೋ ಬೆಳಗಿನಿಂದ ಒಂದು ಸಲವೂ ಮುದ್ದುವಿನ ಚಲನದ ಮಧುರ ಅನುಭೂತಿಯಾಗದಿದ್ದದ್ದು  ಹೃದಯವನ್ನು ಸಣ್ಣದಾಗಿ ಹಿಂಡಿ  ಹಿಪ್ಪೆಯಾಗಿಸಿತು.ಗಾಬರಿ ಉದ್ವೇಗದಿಂದಲೇ ಕೈಯಾ ಹೊಟ್ಟೆಯ ಮೇಲೆ ಸರಿಸಿ ಮೃದುವಾಗಿ ಮುಟ್ಟಿದೆ.ಮುದ್ದು ನನ್ನ ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತಿದಾಗೆ  ಉಫ್ ಎಂದು ಶ್ವಾಸ ಹೊರ ಹಾಕಿ ದ್ವಿಗುಣಗೊಂಡ ಎದೆ ಬಡಿತವನ್ನು ಹಿಡಿತಕ್ಕೆ ತಂದೆಯಾದರು ಮನದೊಳಗಿನ್ನು ಕಸಿವಿಸಿ,ಮೆದುಳಿನಲ್ಲಿ ವಿಚಿತ್ರ ಅಸ್ಪಷ್ಟತೆಯ ನೆರಳುಗಳು.ಅವುಗಳನ್ನು ಹೆಚ್ಚು ಕೆದಕುವ ಗೋಜಿಗೆ ಹೋಗಲಿಲ್ಲ.ಆ ಕ್ಷಣದ ಸಂತೋಷವನೆಲ್ಲಾ  ನನ್ನದಾಗಿಸುವ ಪ್ರಮಾಣವಿತ್ತಂತೆ ಯಾವುದೋ ಶಕ್ತಿ ಅವನ್ನು ತಡೆದು ನಿಲ್ಲಿಸಿರಬೇಕು.ಮೌನದಲ್ಲಿ ನಡೆಯುತಿರುವ ಗುದ್ದಾಟಗಳ ತಪ್ಪಿಸಿಕೊಂಡು ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಳಗೆ ನಡೆಯುವಂತ ಎಲ್ಲ ನವಿರಾದ ಚಟುವಟಿಕೆಗಳು ನನ್ನೊಳಗೂ ನಡೆಯುತ್ತಿದೆಯೆಂಬ ಉತ್ಸಾಹದಿಂದಲೇ  ಅರಿಶಿನ ಮೆತ್ತಿದ ಸೀರೆಯ ಅಂಚನ್ನು ಕೊಡಕದೆ ಆ ಸುಂದರ ಸಂಭ್ರಮದ  ನೆನಪಿನ ಬಿಲ್ಲೆಯನ್ನು ನಾಜುಕಾಗಿ  ಮಡೆಚಿ  ಕಪಾಟಿನೊಂದು  ಮೂಲೆಯಲ್ಲಿ ಎತ್ತಿರಿಸಿದೆ.

ಮರು ದಿನ ಮುದ್ದು ಗಾಗಿ ಅಮ್ಮ ಹಲವು ದಿನಗಳಿಂದ ನೆಯ್ಯುತ್ತಿದ್ದ  ಬೆಚ್ಚನೆ ಸ್ವೆಟರ್ ಸಾಕ್ಸ್ ಸಂಪೂರ್ಣ ರೂಪು ಪಡೆದು ಮುಗಿಯುವ ಹಂತ ತಲುಪಿತ್ತು.ಅವಳ  ತೊಡೆ ಮೇಲೆ ಮಲಗಿ ಅಲ್ಲಿಂದಲೇ ನೂಲಿನುಂಡೆಯ ಸ್ವೆಟರ್ ನ ಬಣ್ಣ ಅಕಾರವನೆಲ್ಲ ಅಸ್ವಾದಿಸುತ್ತ ಅದರ ಕೊನೆಯ ಅಂಚು ಇಂಚಿಂಚಾಗಿ  ಅಗಲವಾಗುತ್ತಿದ್ದದ ಆನಂದದಿಂದ ಹೃದಯ  ತುಂಬಿಕೊಳುತ್ತಿದ್ದಾಗಲೇ ನೋವು ಕಾಣಿಸಿಕೊಂಡು ತೀವ್ರವಾಯ್ತು.ನಾ ಹಾತೊರೆಯುತ್ತಿದ್ದ ಶುಭ ದಿನದ  ಕ್ಷಣ ಗಣನೆ ಪ್ರಾರಂಭವಾಗಿತ್ತು.ಆಸ್ಪತ್ರೆಯಲ್ಲಿ ಸುಲಲಿತ ಹೆರಿಗೆಯಾಗಿ  ಮುದ್ಧುವಿನ ಮುಖ ನೋಡಲು ಮತ್ತದರ  ಮೊದಲ ಸ್ಪರ್ಶಕ್ಕೆ ಕೈ ಚಾಚುತ್ತಿದ್ದಾಗೆ ಕಂಗಳು ಸೋತಂತಾದವು.
*
ಏನೋ ಅಡಚಣೆ ರೆಪ್ಪೆ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಆಗುತ್ತಿಲ್ಲ.ಕೈಯಾಡಿಸಲು ನೋಡಿದೇ  ಸೂಜಿ ಒತ್ತಿತು.ಕೆಲ ನಿಮಿಷಗಳು ನಿಶಕ್ತತತೆ ಆವರಿಸಿಕೊಂಡಂತಾಗಿ  ಕೈ ಎತ್ತಲು ಅಸಂಭವವೆನಿಸಿತು.ಹೇಗೋ ಇದ್ದ ಸಮಗ್ರ ಬಲವನೆಲ್ಲಾ  ಹಾಕಿ ಹೊಟ್ಟೆಯ ಮೇಲೆ ಕೈಯಿಟ್ಟೆ ...ಹೊಟ್ಟೆಗೂ ಪೈಪ್ ಚುಚ್ಚಿದ್ದಾರೆ! ಇದೇನಿದು ಮುದ್ಧು ಎಲ್ಲಿ? ಹೌದು  ಮುಖ ತೋರಿಸದೆ ಕೊಂಡೊಯ್ದರಲ್ವ?ನಡೆದ್ದದ್ದೇನು ಸರಿಯಾಗಿ ನೆನಪಿನಲ್ಲಿಲ್ಲ. ಮಗುವ ನೋಡುವ ತಳಮಳದಲ್ಲಿ ಭಾರವಾದ ಕಂಗಳ ಬಲವಂತವಾಗಿ ತೆರೆಯಲು ಮುಂದಾದೆ.ಬೆಡ್ ಆಚೆ ಬದಿಯ ಕುರ್ಚಿಯಲ್ಲಿ ಕುಳಿತ ಅಮ್ಮನ ಮುಖ ನೋಡಿ ತುಸು ನೆಮ್ಮದಿಯಾಯ್ತು .ಕರೆಯೋಣವೆಂದರೆ ಬಾಯಿ ಒಣಗಿ ಮಾತ್ ಹೊರಡುತ್ತಿಲ್ಲ.ಕೋಣೆ ಪೂರ್ತಿ ದೃಷ್ಟಿ ಹಾಯಿಸಿದಾಗ ಅಪ್ಪ ಅಣ್ಣ ಅಕ್ಕ ಡಾಕ್ಟರ ಬಾಗಿಲ್ಲಲ್ಲಿ ನಿಂತಿದ್ದು  ಕಂಡಿತು.

ಕಾಡಿದ ನಿಶಕ್ತಿಯ ಸಾವರಿಸಿಕೊಂಡು "ಅಮ್ಮ ಅಮ್ಮ .....ಮುದ್ಧು..." ನನ್ನ ಮಾತನ್ನು ತಡೆಯುವಂತೆ ಕೆನ್ನೆತಟ್ಟಿ "ಮುದ್ಧು ಮುದ್ದು ಸದ್ಯ ಕಣ್ ಬಿಟ್ಯಲ್ಲ"ಎಂದು ಗೆದ್ದವಳಂತೆ ನನ್ನ ಮುದ್ದಾಡಿದಳು.ಅದ ಗಮನಿಸಿದ ಡಾಕ್ಟರ ಬಳಿ ಬಂದು ಎದೆ ಬಡಿತ  ಪರೀಕ್ಷಿಸಿ "ಇನ್ನು ತೊಂದರೆ ಇಲ್ಲ,ಗರ್ಭಕೋಶದ ಜೊತೆಗೆ  ಅಲ್ಲಿ  ಹಬ್ಬಿದ ಕ್ಯಾನ್ಸರ್  ಕಣಗಳನ್ನ ತೆಗೆದಿದ್ದೇವೆ .ಮುಂದೆ ಬೇರೆಡೆ ಹರಡುವ ಸಾಧ್ಯತೆಗಳು ತೀರ ಕಡಿಮೆ ಯಾವುದಕ್ಕೂ ರಿಪೋರ್ಟ್ಸ ಬಂದ ನಂತರ ಗೊತ್ತಾಗುತ್ತೆ.ಇನ್ನೊಂದು ತಿಂಗಳು ಹಾಸಿಗೆ ಬಿಟ್ಟು ಏಳುವಂತಿಲ್ಲ ಆಮೇಲೆ ಮಾಮೂಲಿನಂತೆ ಓಡಾಡಬಹುದು" ಅಂತೇಳಿ ಧೈರ್ಯದ ನಗು ಬೀರಿ ಹೊರ ನಡೆದರು.ಇವರೇನು ಹೇಳ್ತಿದ್ದಾರೆ? ಅದಿರಲಿ ನನ್ನ ಮುದ್ದು ಎಲ್ಲಿ? ಆದರೆ... ಮುದ್ದು.. ಮುದ್ದು...ಯಾರು??ಮದುವೆ  ಆಗದ ನನಗೆ ಮಗುನ!? ಆ ಧೂರ್ತ ನೆನಪು ಸಾಕಾಗಿತ್ತು ಮನಸು ಮುರಿದು ವಾಸ್ತವಕ್ಕೆ ಎಳೆತರಲು.

ಕಣ್ಣು ಮಂಜಾಗಿ ಚಿಮ್ಮಿದ ಹನಿಗಳನ್ನ ಅಂಗೈಯಲ್ಲಿ ಒರಿಸುತ್ತಿದ್ದಾಗ ಆವರಿಸಿದ ನಿದ್ರೆಯ ಮಂಪರ ತಡೆಯುವ  ಮನಸಾಗಲಿಲ್ಲ.ಈ ಬಾರಿ ಬೀಳೋ ಕನಸಿನ್ನಲ್ಲಾದರು ಮುದ್ದುವಿನ ಮುದ್ದು ಮುಖ ನೋಡ ಸಿಗಬಹುದೆಂಬ ಹಂಬಲದಿಂದ ಒದ್ದೆ ಕಂಗಳ ಮುಚ್ಚಿದೆ.

.......................................................ಸ್ವಪ್ನ ಭಂಗ"

4 comments:

 1. good one nice writing style..welcome to blog world..!!

  ReplyDelete
 2. "ತಿಂಗಳು ಕಳೆದಂತೆಲ್ಲಾ ಸೀರೆಯ ನೆರಿಗೆ ಕಮ್ಮಿಯಾಗುತ್ತಿದ್ದರೆ ಏನೋ ಒಂದು ತರನಾದ ಹೊಸ ಬಗೆಯ ಪುಳಕ ಕಾತುರ..."
  ಈ ಕಾತುರದ ಏಣಿಯನ್ನು ನಿಧಾನವಾಗಿ ಹತ್ತುತ್ತ ಸಾಗಿದಂತೆ...ಚಾರ್ಮುಡಿ ಘಟ್ಟ ಸುತ್ತಿದ ಅನುಭವ.ಒಮ್ಮೆ ಏರು ಒಮ್ಮೆ ಇಳಿತ...ಆಹಾ ಸುಂದರವಾದ ತಿರುವುಗಳು..ಅಂತ್ಯ? ಏನು ಹೇಳೋಕೆ ಆಗದೆ ತೊಳಲಾಡುತ್ತಿರುವ ಮನಸು...ಲೇಖನದ ಪರಿ ಸೊಗಸಾಗಿದೆ.ನೀವು ಪತ್ತೆಧಾರಿ ಕತೆ ಬರೆದರೆ ಮೊದಲನೇ ಓದುಗ ನಾನಾಗುವ ಆಸೆ...ಸುಂದರ ಲೇಖನ..ಅನುಭವ, ಅನುಭೂತಿ, ತಾಯಿ ಮಮತೆ, ಹೃದಯ ಎಲ್ಲವು ಸಮವಾಗಿ ಕರಗಿ ಹರಿದಿದೆ..ಅಭಿನಂದನೆಗಳು

  ReplyDelete
 3. ತುಂಬಾ ಸೊಗಸಾದ ಬರವಣೆಗೆ ಹಾಗು ಅಚ್ಚುಕಟ್ಟಾದ ಕಲ್ಪನೆ ಭಾವ ನಿಜಕ್ಕೂ ಲೇಖನ ಒಂದು ಹೆಣ್ಣಿನ ಅತ್ಯಂತ ಹಿರಿಮೆಯ ಹಾಗು ತನ್ನ ಜನ್ಮ ಪಾವನವಗಿಸುವಂತ ಘಟ್ಟ ತಾಯ್ತನ ಆ ಕ್ಷಣಗಳ ಸುಂದರ ಅನುಭೂತಿ ಕಣ್ಣಿಗೆ ಕಟ್ಟಿದೆ
  ಶುಭಾವಾಗಲಿ ಚೆನ್ನಾಗಿದೆ

  ReplyDelete
 4. ಇತ್ತಿಚಿನ ದಿನಗಳಲ್ಲಿ ಸೆರ್ವಿಕಲ್(ಗರ್ಭಕೋಶದ) ಕ್ಯಾನ್ಸರ್ ಗೆ ಹೆಚ್ಚಿನ ಸಂಖ್ಯೆ ಯಲ್ಲಿ ಸಣ್ಣ ವಯಸಿನ ಹುಡುಗಿಯರೆ ತುತ್ತಾಗುತ್ತಿದ್ದಾರೆ.ಅಂತವರ ಮನಸ್ಥಿತಿ ವ್ಯಾಕುಲತೆ ಅರಳುವ ಮುನ್ನವೇ ಕಮರುವ ಕನಸುಗಳ ಬಗೆಗೆ ಬರದದ್ದು.ನಿಮ್ಮ ಮೆಚ್ಚಿನ ನುಡಿಗಳಿಗೆ ನನ್ನ ಧನ್ಯವಾದಗಳು.

  ReplyDelete