Sunday, December 23, 2012

ಮಡಿ ಮಡೆ ಸನ್ನಡೆ! - ಯಾವುದು ಹಿತವಯ್ಯ ನಿಮಗೆ ಈ ಮೂರರಲ್ಲಿ?

ಕುಮಾರ ಪರ್ವತ
ಕಳೆದ ವಾರದ ಮೊದಲ ಮೂರು ದಿನ ಅಪ್ಪನ ಊರಿನಲ್ಲಿ  ಕಳೆದೆವು.ಅಜ್ಜ ಅಜ್ಜಿಯ ಸಾವಿನ ನಂತರ ಊರಿನತ್ತ  ನಮ್ಮನ್ನು ಅತೀಯಾಗಿ  ಸೆಳೆಯುವವನೊಬ್ಬನೇ ಅವನೇ ನಮ್ಮ ಆತ್ಮೀಯ ಬಂಧು ಸುಬ್ಬಪ್ಪ.ಅದೇ ಕುಕ್ಕೆಯ ಸುಬ್ರಮಣ್ಯ ಅಲಿಯಾಸ್ ಕುಕ್ಕೆ ನಾಗಪ್ಪ.ನಮ್ಮ ರಾಘ(ರಾಘವ ಚಂದ್ರ) ನಿನಗೆ ಆ ಊರಿನ ಒಡನಾಟವಿದೆ  'ಮಡೆ ಮಡೆಸ್ನಾನ' ಬಗ್ಗೆ ಬರಿ ಅಂತ ಆದೇಶಿಸಿದ.ಬರೆಯುವ  ಮುನ್ನ ತುಂಬಾ ಆಲೋಚಿಸಿದ್ದೆ.ಧರ್ಮ,ದೇವರು,ಜಾತಿ,ಪಕ್ಷಗಳಲ್ಲಿನ ಭೇದ ಪ್ರಭೇದಗಳ ಗುರುತಿಸಲು ನನ್ನಿಂದ  ಇಂದಿಗೂ ಸಾಧ್ಯವಾಗಿಲ್ಲ.ಅಂತಹುದರಲ್ಲಿ ಒಂದು ಧರ್ಮ ಜಾತಿ ಅಲ್ಪ ಮಟ್ಟಿಗಿನ ರಾಜಿಕೀಯ  ಹಾಗು ನಂಬಿಕೆಗಳಿಗೆ ಸುತ್ತಿ ಹಾಕಿಕೊಂಡಂತಹ 'ಮಡೆ ಮಡೆಸ್ನಾನ' ಕುರಿತಾಗಿ  ಹೇಳುವುದು ತುಂಬಾ ಇದ್ದರೂ ವಿಷಾದ ಕಾಡುತ್ತಿತ್ತು.ಟಾಮ್(ಸತೀಶ್ ನಾಯಕ್) ನ ಬ್ಲಾಗಿನ  ಹಾಗೆ  ನನ್ನ ಬ್ಲಾಗಿಗೂ ದೊಡ್ದಪ್ಪ ರಾಘನೆ.ನಿನ್ನದೇ ಬ್ಲಾಗ್ ತೆರೆ ಅಂತ ರಾಘ ದುಂಬಾಲು ಬೀಳದಿದ್ದರೆ ಪ್ರಾಯಶ  ಈ ಬ್ಲಾಗ್ ಹುಟ್ಟುತ್ತಿರಲಿಲ್ಲ.ನಮ್ಮ ರಾಘನ ಸಂಪೂರ್ಣ ರಾಗಾವನ್ನು  ಇನ್ನೊಂದು ದಿನ ಹಾಡುತ್ತೇನೆ.ಸಧ್ಯಕ್ಕೆ ಅವನ ಮಾತನ್ನು ಮೀರಬಾರದೆಂದು ಈ ಬರಹ.


ಕುಮಾರ ಧಾರೆ

ಬೆಂಗಳೂರಿನಿಂದ  ಸಕಲೇಶಪುರ ತಲುಪಿ ಅಲ್ಲಿಂದ  ಶಿರಾಡಿ ಘಾಟಿನ ರಸ್ತೆ ಹಿಡಿದು ಅಂಕು ಡೊಂಕಿನ ತಿರುವುಗಳ ಉದ್ದಕ್ಕೂ ಕಾಣುವ  ವನ ರಾಶಿಯ  ಸೌಂದರ್ಯ ಸವಿಯುತ್ತ ೩೦ ಕಿಲೋಮೀಟರ್ ಕೆಳಗಿಳಿದರೆ  ಗುಂಡ್ಯ ಸಿಗುತ್ತದೆ.ಗುಂಡ್ಯದ ಸಮೀಪ ಎಡಕ್ಕೆ ಸಾಗುವ ನೇರ ದಾರಿಯಲ್ಲಿ ೨೨ ಕಿ-ಲೋಮೀಟರ್ ಚಲಿಸುತ್ತ ಹೋದರೆ ನಮ್ಮನ ಸ್ವಾಗತಿಸೋದು ಕುಮಾರ ಧಾರೆ ಹೊಳೆ.ಪ್ರಕೃತಿಯ ಮಡಿಲಿಂದ ನಿರ್ಮಲವಾಗಿ ಊರಿನತ್ತ  ಹರಿಯುವ ಹೊಳೆಯ ಮೇಲೆ ಗಟ್ಟಿಯಾಗಿ ಚಾಚಿಕೊಂಡಿರುವ ಸೇತುವೆ ದಾಟಿ  ಹೆಬ್ಬಾಗಿಲು ಸಮೀಪಿಸುತ್ತಲೇ  ತನ್ನ ತಾನೇ ಕಣ್ಣುಗಳು ಅರಳಿಕೊಳ್ಳುತ್ತವೆ ಕೈಗಳು ಪ್ರಕೃತಿಗೆ ವಂದಿಸುತ್ತವೆ ಮನದಲ್ಲೇನೋ ಪುಳಕ ಸುಬ್ಬಪ್ಪನನ್ನ ಕಾಣುವ ಕಾತುರ ಹಿಮ್ಮಡಿಗೊಳ್ಳುತ್ತೆ.ಸುಬ್ಬಪ್ಪ ನನಗ್ಯಾವತ್ತು ದೇವರೆನಿಸಲೇ ಇಲ್ಲ ಅವನು ಗೆಳೆಯನಷ್ಟೇ ಆಪ್ತ.ಎಂದಿಗೂ ಭಯ ಉಲ್ಬಣಿಸಿದಿಲ್ಲ ಭಕ್ತಿಗಿಂತ ಅವನಲ್ಲಿ  ಸ್ನೇಹ ಅಂಕುರಿಸಿದ್ದೆ ಜಾಸ್ತಿ.
ಕುಕ್ಕೆ ಸುಬ್ರಹ್ಮಣ್ಯ 


ಸಣ್ಣತರಲ್ಲಿ ನಾಗಪ್ಪ ಊರಿನ ನಮ್ಮ ಮನೆಯ  ಹಿತ್ತಲಿಗೆ ಬಂದಾಗ ಅಬ(ಅಜ್ಜಿ) ಒಂದು ಮೊಟ್ಟೆ ಇಟ್ಟು ಕೈ ಮುಗಿಯಲು ಹೇಳುತ್ತಿದ್ದಳು.ನಮ್ಮೂರಿನಲ್ಲಿ ಆ ದಿನಗಳಲ್ಲಿ ದಾರಿಗೊಂದು ಕೆರೆ ಹಾವು ನೋಡ ಸಿಗುತ್ತಿತ್ತು .ಕೆಲವೊಮ್ಮೆ ಸರ್ಪಾಧಿಪತಿ ನಾಗಪ್ಪನ ದರುಶನವು ಆಗುತ್ತಿತ್ತು.ಅಷ್ಟಿದ್ದರು ಅಲ್ಲಿ ಹಾವು ಕಡಿದು ತೊಂದರೆಗಿಡಾದವರು    ಮರಣವನಪ್ಪಿದವರೆ  ಇಲ್ಲ.ಮನೆ ಮಕ್ಕಳಿಗೆ ಇಷ್ಟು ಸಲುಗೆ ಕೊಟ್ಟಿರುವ ದೇವರಲ್ಲಿ  ಭಯ ಭೀತಿ ಎಲ್ಲಿಂದ ಆವರಿಸಿಕೊಳ್ಳಬೇಕು ಹೇಳಿ? ಹಾಗೆ,ನಾವೂ ಕೂಡ ಅದಕ್ಕೆ ಕಿಟಲೆ ಮಾಡುವುದಾಗಲಿ ತೊಂದರೆ ಕೊಡೋದಾಗ್ಲಿ ಮಾಡಿದ್ದಿಲ್ಲ ಬಿಡಿ.ಅದನ್ನ ಕಂಡು ತೀರ ಬೆದರೋದು ಇಲ್ಲ.ಅದರ ಸುದ್ಧಿಗೆ ನಾವು ಹೋಗಲ್ಲ ನಮ್ಮ ಸುದ್ಧಿಗೆ ಅದು ಬರೋಲ್ಲ ಥೇಟ್  ಬೆಂಗಳೂರಿನ ನೆರೆ ಕೆರೆಯವರಂತೆ!ಕಂಡಾಗ ಕೈ ಮುಗಿಯುವುದಷ್ಟೇ.ಎಲ್ಲಾ  ಪುಣ್ಯ ಕ್ಷೇತ್ರದಲ್ಲೂ ಇಂತದೊಂದು ಅದ್ಬುತ ಅಗೋಚರವೆನಿಸುವ  ಹುಬ್ಬೇರಿಸುವಂತ  ಸಂಗತಿಗಳು ಇದ್ದೆ ಇರುತ್ತವೆ.ನಾವು ಸಾಕ್ಷಿಯಾಗುವ ಅದ್ಬುತಗಳಿಗೆ ಅಲ್ಲಿನ ಜನರು ಪಾಲಿಸಿಕೊಂಡು ಬಂದಿರುವ  ಜೀವನಶೈಲಿ ಅವರಿಗೂ ಪರಿಸರಕ್ಕೂ ಇರುವ  ಸಂಪರ್ಕ ಹೊಂದಾಣಿಕೆಯೂ ಒಂದು  ಕಾರಣ,ಅದಕ್ಕೆ ಪೂರಕವಾಗಿ ಇವೆಲ್ಲ ಆಗುತ್ತವೆ ಅಂದರೆ  ಉತ್ಪ್ರೇಕ್ಷೆಯಲ್ಲ .ಹಿಂದೊಮ್ಮೆ ಇಡಿ ಭಾರತ ಭೂಮಿಯೇ ಪುಣ್ಯ ಕ್ಷೇತ್ರವಾಗಿತಂತ್ತೆ.ಈಗಾ ಹಾಗೆಂದರೆ ನಿಶ್ಚಯವಾಗಿ ಪಾಪ ಗಂಟು ಬೀಳಬಹುದು! ನಮ್ಮದು ಇಂದಿಗೂ ಪುಣ್ಯ ಭೂಮಿಯೇ ನಿಜ,ನಾವು ನಿವಾಸಿಗಳು ಪುಣ್ಯತ್ಮರಾಗಿ ಉಳಿದಿಲ್ಲವಷ್ಟೇ.


ಸಾಮಾನ್ಯವಾಗಿ  ಕುಕ್ಕೆ ಸುಬ್ಬಪ್ಪನಲ್ಲಿಗೆ   ಗ್ರಹ ದೋಷಗಳಿಂದ ನರಳುತಿರುವವರು ಮಕ್ಕಳಿಲ್ಲದವರು ಮದುವೆ ಆಗದವರು ಮತ್ತೆ ಪ್ರಮುಖವಾಗಿ ಅರೋಗ್ಯ ಸಮಸ್ಯೆಯಿಂದ ಅದರಲ್ಲೂ ಚರ್ಮ ರೋಗ ಭಾದಿತರು ಹರಸಿ ಕೊಳ್ಳುತ್ತಾರೆ ಮೂರೆ ಹೋಗುತ್ತಾರೆ.ದಿನಲೂ ಸಾವಿರಾರು ಜನರನ್ನು ಆಕರ್ಷಿಸುವ ಈ ದೇವರಿಗೆ ವರ್ಷಕೊಮ್ಮೆ ಮಾರ್ಗಶಿರ ಮಾಸದಲ್ಲಿ ಉತ್ಸವವೊಂದು ಜರಗುತ್ತದೆ.ಅದುವೇ ಚಂಪಾ ಷಷ್ಠಿ ಉತ್ಸವ.

ಬ್ರಹ್ಮರಥ - ಚಂಪಾ ಷಷ್ಠಿ,2012
ಈ ಚಂಪಾ ಷಷ್ಠಿ ಯಾ ಪ್ರಮುಖ ಮತ್ತು ಅನೋಖ ಅನಿಸಿದ ಸಧ್ಯಕ್ಕೆ ಸುದ್ಧಿಯಲ್ಲಿರುವ ಆಚರಣೆಯೆಂದರೆ "ಮಡೆಸ್ನಾನ".ಇದರಲ್ಲಿ ಮೂಲತಃ  ಮೂರು ಪ್ರಕಾರಗಳಿವೆ,ಮಡೆಸ್ನಾನ,ಮೂಲೆ ಮಡೆಸ್ನಾನ ಹಾಗು ಮಡೆ ಮಡೆಸ್ನಾನ.ಇವನ್ನು ಸತತ ಮೂರು ದಿನಗಳ ಕಾಲ  ಅಂದರೆ ಚೌತಿ,ಪಂಚಮಿ ಮತ್ತು ಷಷ್ಠಿ ಯಂದು ಭಕ್ತಾದಿಗಳು ಮಾಡುತ್ತಾರೆ.ಮಡೆಸ್ನಾನವೆಂದರೆ ಉರುಳು ಸೇವೆ ಎಂದರ್ಥ.ದೇವಸ್ತಾನದ ಹೆಬ್ಬಾಗಿಲ ಎದುರು ಹರಿಯುವ ಕುಮಾರ ಧಾರೆ ಹೊಳೆಯಲ್ಲಿ ಮುಳುಗಿ ಅಲ್ಲಿಂದ ಸುಮಾರು ೨ ಕಿಲೋಮೀಟರ್  ಉರುಳುತ್ತಲೇ  ದೇವಸ್ಥಾನದ ಗರ್ಭ ಗುಡಿಯ ಹೊರಗಿನ ಆವರಣ ತಲುಪುವ ಸೇವೆ ಇದು.ಕುಮಾರ ಪರ್ವತದ ತಪ್ಪಲಿನಲ್ಲಿ ಉಗಮಿಸುವ ಈ ಹೊಳೆಯು ಅಲ್ಲಿಂದ ಹರಿದು ಬರುವಾಗ ಅನೇಕ ಗಿಡಮುಲಿಕೆಯ ಸಾರವನ್ನು ಹೊತ್ತು ತರುತ್ತದೆ.ಔಷಧಿ ಗುಣವಿರುವ ಈ ಜಲ ಹಾಗು ನೆಲದಲ್ಲಿ ಮುಳುಗೆದ್ದರೆ ರೋಗ ರುಜಿನಗಳು ಅದರಲ್ಲೂ ಮುಖ್ಯವಾಗಿ ಚರ್ಮ ರೋಗದಿಂದ ಮುಕ್ತಿ ಹೊಂದಬಹುದೆಂಬ  ನಂಬಿಕೆ ಅನಾಧಿ ಕಾಲದಿಂದಲೂ ಚಾಲ್ತಿಯಲ್ಲಿದೆ.ಮೂಲೆ ಮಡೆಸ್ನಾನವೆಂದರೆ ದೇವಸ್ಥಾನದ ಒಳಾಂಗಣದ ನಾಲ್ಕು ಮೂಲೆ ಗಳಲ್ಲಿ ಮಾತ್ರ ಉರುಳಿ ದೇವರಿಗೆ ಸೇವೆ ಸಲ್ಲಿಸುವುದು.


ಮಡೆ ಮಡೆಸ್ನಾನ -ಚಂಪಾ ಷಷ್ಠಿ,2012
ಇನ್ನು "ಮಡೆ ಮಡೆಸ್ನಾನ"ವೆಂದರೆ ಎಂಜಲು('ಮಡೆ' ತುಳು ಭಾಷೆಯಲ್ಲಿ) ಮೇಲಿನ ಉರುಳು ಸೇವೆ ಎಂದರ್ಥ.ನಾವು ಗಮನಿಸಿದರೆ ಚರ್ಮ ರೋಗಗಳಿಗೆ ಮೂಲತಃ ದೇಹದ ಒಳಗಿನ ಚಿಕಿತ್ಸೆಯ ಜೊತೆ ಜೊತೆಗೆ  ಹೊರಗಿನ  ಭಾಗಕ್ಕೂ ಲೇಪನಗಳ ಹಚ್ಚಿ ಚಿಕಿತ್ಸೆ ನೀಡಲಾಗುತ್ತೆ.ಸುಬ್ರಮಣ್ಯಕ್ಕೆ ಭೇಟಿ ಕೊಟ್ಟವರೆಲ್ಲರೂ ದೇವಸ್ಥಾನದ ರುಚಿಕಟ್ಟಾದ  ಊಟವ  ಮೆಚ್ಚಿ ಬಾಯಿ ಚಪ್ಪರಿಸಿ ಹೊಗಳುವವರೇ.ಹಿಂದೆ ಈ ಮಡೆ ಸ್ನಾನಗಳು ಹುಟ್ಟಿದ ದಿನಗಳಲ್ಲಿ ಅಲ್ಲಿನ ನೆಲದಲ್ಲೇ ಬೆಳೆದ ಬತ್ತ ಹಾಗು ಇತರ ಪಧಾರ್ಥಗಳಿಂದ ಸಿದ್ದವಾಗುತ್ತಿದ್ದ ಸತ್ವಯುತ ಊಟದಲ್ಲಿ ರೋಗನಿರೋಧಕ ಅಂಶಗಳು ಎತೇಚವಾಗಿದ್ದವು.ಆ ಮೂಲಕ ಇಂತದೊಂದು ಆಚರಣೆ ರೂಢಿಗೆ ಬಂದಿರಬೇಕು.ಎಂಜಿಲು ಸಹ  ಔಷಧಿ ಗುಣವುಳ್ಳದ್ದಾದರು ಇಲ್ಲಿ  ಪರರ ಎಂಜಲಿಗೆ ಯಾವ ರೀತಿ  ಪ್ರಾಮುಖ್ಯತೆ ಮಹಾತ್ಮೆ ಇದೆ ಎಂಬುದು ಸ್ಪಷ್ಟವಾಗಿಲ್ಲ.ಚಂಪಾ ಷಷ್ಠಿಯಂದು ದೇವರಿಗೆ ಮಾಡಿ ಬಡಿಸಿದ ನೈವೇದ್ಯವನ್ನು ದೇವಸ್ಥಾನದ ಆವರಣದಲ್ಲಿ ಉಂಡು ಒಗೆದ  ಎಂಜಿಲೆಲೆಗೆ  ಶ್ರೇಷ್ಠತೆ ಅದೇಗೋ ಸಂಧಿ ಬಿಟ್ಟಿದೆ.ಈ ನಂಬಿಕೆ ಕಲ್ಪಿಸಿರುವ ಶ್ರೇಷ್ಟತೆಯೇ ಎಂಜಿಲೆಲೆಯ  ಮಡೆಸ್ನಾನಕ್ಕೆ ಬುನಾದಿ ಎನ್ನಬಹುದು.ಎಂಜಿಲೆಲೆಯ ಮಡೆಸ್ನಾನದ ಬಗ್ಗೆ ನನ್ನದೂ ಸಂಪೂರ್ಣ ಸಹಮತಿ ಇಲ್ಲದಿದ್ದರೂ ಹೈ ಕೋರ್ಟಿನ ಆಜ್ಞೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದಕ್ಕೆ  ಸಂಭ್ರಮಿಸಿದ್ದೆ.ನಮ್ಮ ಮಾನ್ಯ ಹೈ ಕೋರ್ಟ್ ಯಾರು ತಿನ್ನದ ಊಟದ ಎಡೆಗಳ  ಮೇಲೆ ಮಡೆ ಸ್ನಾನ ಮಾಡಲು ಆದೇಶ ಸೂಚಿಸಿದ್ದು ಎಂಜಿಲೆಲೆಯ ಮಡೆಸ್ನಾನಕ್ಕಿಂತಲೂ ಅನಿಷ್ಟ ಅಮಾನವೀಯ ಖಂಡನೀಯ ನನ್ನ ಪ್ರಕಾರ..ಅಲ್ಲಾ,ತಿನ್ನಲು ಅನ್ನವಿಲ್ಲದೆ  ಪೌಷ್ಟಿಕತೆಯ ಕೊರತೆಯಿಂದಾಗಿ ಸಾಯುವ ಜನರಿರುವ ದೇಶದಲ್ಲಿ ಯಾರಿಗಾದರು ಆಹಾರವಾಗಬಲ್ಲಂತಹ  ನೂರಾರು ಊಟದ ಎಲೆಗಳ ಬಡಿಸಿ ಉರುಳಾಡುವುದೆಂದರೆ?? ಆಚರಣೆಯ ರೂಪದಲ್ಲಿ ಅನ್ನಕ್ಕೆ ಮಾಡುವ ಅವಮಾನವೆ ಸರಿ ಅದು!

ಚಂಪಾ ಷಷ್ಠಿ,2012
ಮತ್ತೆ ಇಲ್ಲಿನ ಆವರಣದೊಳಗೆ ಊಟ ಮಾಡಲು ಒಂದು ಪ್ರತ್ಯೇಕ ಮೇಲ್ ವರ್ಗದವರಿಗೆ ಮಾತ್ರ  ಅವಕಾಶವಿದೆ.ಸಾಮಾನ್ಯ ಭಕ್ತಾ ವೃಂದ ಅವಕಾಶವಂಚಿತರಾಗಿದ್ದಾರೆ.ಇಲ್ಲಿ ನಿಜವಾದ ಫಲಾನುಭವಿಗಳು ದೇವರ ಸನ್ನಿಧಿಯಲ್ಲಿ  ಎಲೆ ಊಟ ಮಾಡಿದವರ ಅಥವಾ ಅದರಲ್ಲಿ ಉರುಳುವವರ ಅನ್ನೋದು ನನ್ನ ವಯಕ್ತಿಕ ಗೊಂದಲಗಳಲ್ಲೊಂದು.ಗರ್ಭಗುಡಿಯ  ಒಳಗಿನ  ಪ್ರವೇಶಕ್ಕಾದರು ಮಡಿ ಮೈಲಿಗೆ ಮೊದಲಾದ  ಸಬೂಬುಗಳು ಒಪ್ಪುವಂತದ್ದು,ಆದರೆ ದೇವಸ್ಥಾನದ ಆವರಣದೊಳಗೆ ಕೇವಲ ಒಂದು ವರ್ಗಕ್ಕೆ ಮಾತ್ರ ಪ್ರಸಾದ(ಎಲೆ ಊಟ) ಸ್ವೀಕರಿಸಲು ಹಕ್ಕು ನೀಡಿದ್ದಾರೆ.ಎಲ್ಲ ಜಾತಿ ಧರ್ಮದವರಿಗೂ ಓಡಾಡುವ ಅವಕಾಶವಿರುವಾಗ ಊಟದ  ವಿಷಯದಲ್ಲಿ ಮಾತ್ರ ಬೇರೆಲ್ಲರಿಗೂ ನಿರ್ಭಂದನೆ ಯಾಕೆ? ಇದಕ್ಕುತ್ತರ ಸಾಕ್ಷಾತ್ ನಮ್ಮ ಸುಬ್ಬಪ್ಪನೆ ನೀಡಬೇಕೆನೋ.ಆದರೆ ಯಾಕೋ ಏನೋ ಇವೆಲ್ಲದಕ್ಕಿಂತಲೂ  ಸುದ್ಧಿ ಆಗಿದ್ದು ಮಡೆ ಮಡೆಸ್ನಾನದಿಂದ ಮಲೆಕುಡಿಯ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ.

ಕುಕ್ಕೆ ಸುಬ್ಬಪ್ಪ ತಮ್ಮ ಇಷ್ಟಾರ್ಥ ನೆರವೇರಿಸಲಿಯೆಂದು ದೋಷ  ಕಾಯಿಲೆಗಳು  ಗುಣವಾಗಲೆಂದು ಹರಕೆ ಹೊರುವ ಅಥವಾ ನೆರವೇರಿಸಿದಾಗ  ಕೃತಜ್ಞರಾಗಿ  ಹರಕೆ ತೀರಿಸುವ ಪದ್ದತಿಯಾಗಿ ಈ ಮಡೆ ಸ್ನಾನಗಳು ಆಚರಣೆಗೆ ಬಂದವು.ಇದು ಶತಮಾನಗಳಿಂದಲೂ ಊರಿನನವರು ನಡೆಸಿಕೊಂಡು ಬಂದಿರುವಂತಹ ಸಂಪ್ರದಾಯ.ಅಸಲಿಗೆ ಇದರಲ್ಲಿ ತೊಡಗಿಸಿಕೊಳ್ಳೋಕೆ ಯಾವತ್ತು ಯಾರನ್ನು ಒತ್ತಾಯಿಸಿದಿಲ್ಲ.ಭಕ್ತರು ಸ್ವಯಿಚ್ಚೆಯಿಂದ  ಮನಸೋಪೂರ್ವಕವಾಗಿ ನಡಿಸುವ ಸೇವೆಯಿದು.ಮಜಾ ಏನಂದರೆ ಇಂದು ಇಲ್ಲಿ ಮಡೆಸ್ನಾನ ಸೇವೆಯಾಗಲಿ ಮಡೆ ಮಡೆಸ್ನಾನ  ಸೇವೆಯಾಗಲಿ ಅಲ್ಲಿನ ಮೂಲ ನಿವಾಸಿಗಳಿಗಿಂತಲೂ ಪರ ಊರಿನವರು ಮಾಡುವುದನ್ನ  ಹೆಚ್ಚು ಕಾಣಬಹುದು.ಇನ್ನು ಅವರನ್ನೆಲಾ ಬಲವಂತದಿಂದ ಮಾಡಿಸುವ ಪ್ರಶ್ನೆಯ ಏಳುವುದಿಲ್ಲ ಎಲ್ಲ ಅವರವರ ನಂಬಿಕೆಗೆ ಶ್ರದ್ದೆಗೆ  ಬಿಟ್ಟಂತ ವಿಚಾರಗಳು.ಆದರೆ ಎಲ್ಲೆಡೆ ಇದು ಪ್ರಚಾರವಾಗಿದ್ದು ಮಾತ್ರ ಕೇವಲ ಒಂದು ಜನಾಂಗ ನಡೆಸುತ್ತಿರುವ ಸೇವೆಯೆಂದು! ಪುರಾತನ ಕಾಲದಿಂದಲೂ ಸ್ವಯಿಚ್ಛೆಯಿಂದಲೇ ಮಡೆ ಮಡೆಸ್ನಾನವನ್ನು ಇಲ್ಲಿನ ಮಲೆಕುಡಿಯ ಜನಾಂಗದವರು ಸೇರಿದಂತೆ  ಬ್ರಾಹ್ಮಣರು ಆಚಾರಿಗಳು ಮುಸುಲ್ಮಾನರು ಬೇರೆ ಇತರರೂ ಮಾಡುತ್ತಾ ಬಂದಿದ್ದಾರೆ.

ಪಂಚಮಿ ರಥ - ಚಂಪಾ ಷಷ್ಠಿ,2012


ಆದರೆ ಇದೀಗ ಈ ಪುಣ್ಯ ಕ್ಷೇತ್ರ ದೇಶಾದ್ಯಂತ ಹೆಚ್ಚು ಪ್ರಸಿದ್ಧಿ ಹೊಂದಿದ್ದೆ ತಡ ಕಟ್ಟು ಕಥೆಗಳು ಹಬ್ಬತೊಡಗಿವೆ.ಕಳೆದ ವರ್ಷ ಮಡೆ ಸ್ನಾನದ ನೆಪದಲ್ಲಿ ದಲಿತರಾದ ಮಲೆಕುಡಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪ್ರತಿಬಿಂಬಿಸಲಾಯಿತು.ಕರ್ನಾಟಕ ತಮಿಳುನಾಡಿನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇದ್ದರೂ ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ ಅಲ್ಲವೇ? ಹಾಗೆಯೇ ಇಲ್ಲಿಯೂ ಆದದ್ದು ಎಂದುಕೊಳ್ಳಿ.ಮೇಲ್ ವರ್ಗದ ಜನ ಮತ್ತು ದಲಿತ ಮಲೆಕುಡಿಯರ ನಡುವೆ ಎಲ್ಲವೂ ಸರಿ ಇದೆ ಎನ್ನಲಾಗದು.ದೇವಸ್ಥಾನದ ಆಡಳಿತ ಪರಿವಿಧಿಯಲ್ಲಿ ಎಲ್ಲರಿಗೂ ಸಮಾನ  ಹಕ್ಕು,ಉದ್ಯೋಗಾವಕಾಶಗಳು ನೀಡಲಾಗಿಲ್ಲ ಎಂಬ ಕೂಗು ಇಲ್ಲಿ ಕೇಳಿ ಬರುತ್ತದೆ.ಒಳ ಜಗಳ, ಒಂದು ವರ್ಗದ ಮೇಲ್ಗೈ,ದಬ್ಬಾಳಿಕೆ ಇದ್ದದ್ದೇ ...ಹಾಗಂತ  ತಮ್ಮ ಅಸ್ಥಿತ್ವ ಪ್ರತಿನಿಧಿಸುವ ತಮ್ಮ ಹೊಟ್ಟೆಪಾಡು ನೀಗಿಸುತ್ತಿರುವ ಎಲ್ಲದಕ್ಕೂ ಮಿಗಿಲಾಗಿ ಭಾವನಾತ್ಮಕ ಸಂಭಂದವಿರುವ ದೇವಸ್ಥಾನದ  ಆಚರಣೆಗಳ ವಿರುದ್ದ ತಮ್ಮ ಜನಾಂಗದ  ಹೆಸರನ್ನು ಅಸ್ತ್ರವಾಗಿ ಬಳಸಿಕೊಂಡು ಇಲ್ಲದ ಆರೋಪಗಳ ಮಳೆಗರಿಸಿದರೆ ಯಾರು ತಾನೇ ಸುಮ್ಮನಿದ್ದಾರು ಹೇಳಿ? ಅಷ್ಟಕ್ಕೂ ಮಲೆಕುಡಿಯರಿಗೂ ಈ ದೇವರಿಗೂ ಹತ್ತಿರದ ನಂಟಿದೆ.ಊರಿನಲ್ಲಿ ಇವರನೊಳಕೊಂಡಂತೆ ಒಂದು ಕಥೆ ಕೇಳಿ ಬರುತ್ತದೆ.ಯುಗಗಳ ಹಿಂದೆ ಈ ಪ್ರದೇಶದ ಮಲೆಗಳಲ್ಲಿ ಕಾಡ್ಗಿಚ್ಚು ಹತ್ತಿಕೊಂಡಿತಂತೆ.ಬೆಂಕಿಯ ನಡುವೆ ದಿಗ್ಬಂದನವಾಗಿದ್ದ ದೇವ ಸರ್ಪವೊಂದರ ನರಳುವಿಕೆಯಾ ಕೂಗು ಭೇಟಿಗೆಂದು ಹೋಗಿದ್ದ  ಮಲೆಕುಡಿ ಜನಾಂಗದ ಪೂರ್ವಜರ ಕಿವಿಗೆ ಬಿದ್ದಿತಂತೆ.ಸರ್ಪದ ದಯನೀಯ ಸ್ಥಿತಿ ಕಂಡು ಅದನ್ನ ಬೆಂಕಿಯಿಂದ ರಕ್ಷಿಸಿ ತಾನು ತಂದ ಕುಕ್ಕೆ ಯಲ್ಲಿ ಇಟ್ಟುಕೊಂಡು ಬೆಟ್ಟದ ಕೆಳಗೆ ನಡೆಯುತ್ತಿದ್ದಾಗ ನಿನಗೆ ಭಾರವೆನಿಸಿದ ಜಾಗದಲ್ಲಿ ನನ್ನನಿಳಿಸು ಎಂಬ ಅಶರೀರ  ವಾಣಿ  ಕೇಳಿತಂತೆ.ಆ  ಮಾತಿನಂತೆ ಅದು  ಭಾರವಾಗ  ತೊಡಗಿದ ಜಾಗದಲ್ಲಿ ಇಳಿಸಲಾಯಿತು.ಆದರೆ ಆ ಸ್ಥಳ, ಬೆಂಕಿಯ ಭಯದಿಂದ ಬೆಂದಿದ್ದ ಸರ್ಪಕ್ಕೆ ಕ್ಷೇಮವೆನಿಸದ ಕಾರಣ ಅದು ಅಲ್ಲಿಂದ ಸುಮಾರು ಹೆಜ್ಜೆಯ ದೂರದಲ್ಲಿ  ಸುತ್ತಲೂ ನೀರು ಹರಿಯುವಂತ  ಸ್ಥಳದಲ್ಲಿ ತನ್ನನ್ನು ಬಿಡುವಂತೆ ಸೂಚಿಸಿತಂತೆ.ಸರ್ಪವನ್ನು ಮೂಲವಾಗಿ ಇಳಿಸಿದ ಸ್ಥಳವೆ 'ಆದಿ ಸುಬ್ರಹ್ಮಣ್ಯ' ಎಂದು ಪ್ರಸಿದ್ದವಾಯಿತು ಅಲ್ಲಿನ ಗರ್ಭ ಗುಡಿಯಲ್ಲಿ  ಇಂದಿಗೂ ಕೇವಲ ಹುತ್ತವನ್ನು ಮಾತ್ರ ಕಾಣಾಬಹುದಾಗಿದೆ.ದರ್ಪಣತೀರ್ಥ ಹಾಗು ಕುಮಾರ ಧಾರೆ ನದಿಯು ಕುಕ್ಕೆ ದೇವಸ್ಥಾನ  ಪ್ರದೇಶದ ಸುತ್ತಲೂ  ಹರಿದು ಹೋಗುತ್ತದೆ.ಕುಕ್ಕೆ ಯಲ್ಲಿ ಹೊತ್ತು ತಂದದ್ದಕ್ಕೆ ಸರ್ಪ ನೆಲೆಸಿದ ಸುತ್ತಲೂ ನೀರಿರುವ  ಜಾಗ "ಕುಕ್ಕೆ ಸುಬ್ರಹ್ಮಣ್ಯ" ಎಂದು ನಮಾಕರಣಗೊಂಡಿದೆ ಎಂಬುದಾಗಿ ಕಥೆ ಸಾರುತ್ತದೆ.ಹಾಗಾಗಿಯೇ ಇಲ್ಲಿನ ದೇವಸ್ಥಾನದ  ಪದ್ದತಿಯನ್ನು ದೂಷಿಸುತ್ತಿರುವವರ ಎದುರು ದೇವಸ್ಥಾನದ ಮಲೆಕುಡಿಯ ಕಾರ್ಮಿಕರು ಸಿಡಿದೆದ್ದಿದ್ದು.ಇಡಿ ಮಲೆಕುಡಿಯ ಸಮುದಾಯ ಇವರ ಬೆನ್ನ ಹಿಂದೆ ನಿಂತ್ತಿದ್ದು.ಅಂದು ಪ್ರತಿಭಟಿಸಲು ಬಂದ  ದಲಿತ ಮುಖಂಡರು, ತಮ್ಮ ವಿರುದ್ದ ನಿಂತ ದಲಿತ ಮಲೆಕುಡಿಯರ ಕುರಿತಾಗಿ,"ನೀವೆಲ್ಲಾ  ದೌರ್ಜನ್ಯವನ್ನು ಸಹಿಸುತ್ತಿರುವ ಅನಾಗರಿಕರು" ಎಂದಾಗಲೇ ಅವರೊಡನೆ  ಕೈ ಕೈ ಮಿಲಾಯಿಸಿ ಕಡೆಗೆ ಜೈಲಿಗೂ ಹೋಗಿ ಬಂದರು.ಮಲೆಕುಡಿಯರ ಈ ವರ್ತನೆ  ಹಿಂದೆ  ಮೇಲ್ವರ್ಗ ಜನರ ಆಡಳಿತ ಮಂಡಳಿಯ  ಕುಮ್ಮಕ್ಕಿತ್ತೆಂದು ಹೇಳುವವರು ಇದ್ದಾರೆ.ಅದು ಒಂದು ಮಟ್ಟಿಗೆ ಸರಿಯೂ ಹೌದು ಯಾಕಂದರೆ ಆರೋಪ ಮೇಲ್ವರ್ಗದ ಜನ ಹಾಗು ಮಲೆಕುಡಿಯರಿಬ್ಬರಿಗೂ ಸಂಭಂದಿಸಿದ್ದು ಇದಕ್ಕೆ ಇಬ್ಬರೂ ಕೂಡಿ ಪ್ರತಿಭಟಿಸಬೇಕಿತ್ತು.ಸರ್ವರೆದುರು ದಲಿತ ಸಂಘಟನೆಗಳು ನಿರ್ಮಿಸಿದ ಗೊಂದಲಕ್ಕೆ ಉತ್ತರಿಸಬೇಕಿತ್ತು ಹಾಗಾಗಿದ್ದರೆ ಇದು ಇಷ್ಟು ದೂರ ಮುಂದುವರೆಯುತ್ತಿರಲಿಲ್ಲವೇನೋ.ಆದರೆ ಅಂದು ಅವರು ಸಂಪೂರ್ಣವಾಗಿ ಹಿಂದೆ ಸರಿದು ಮೌನ ತಾಳಿದರು ಮಲೆಕುಡಿಯರಿಗೆ ನಿಮ್ಮ ದೇವರನ್ನು ನೀವೇ ಕಾಪಾಡಿಕೊಳ್ಳಿ ಎಂದು ಕಿಚ್ಚೆಬಿಸಿ ಉತ್ತರಿಸಲು ಮುಂದೆ ಬಿಟ್ಟಿದ್ದಾರೆ.ಅದೇನೇ ಆಗಲಿ ನಂತರ  ಜೈಲು ಸೇರಿದವರನ್ನ ರಾಜ ಮರ್ಯಾದೆ ಇಂದಲೇ ಕರೆತಂದರೆನ್ನಿ.ಅಂತು ಇಂತೂ  ಭಿನ್ನಾಭಿಪ್ರಾಯಗಳ ನಡುವೆಯೂ ಸ್ನೇಹ ಸೌಹಾರ್ದತೆಯಿಂದ ಬಾಳುತ್ತಿರುವ ಇಲ್ಲಿನವರ ನಡುವೆ ವಿಷ ಬೀಜ ನೆಡುವಲ್ಲಿ ವಿಫಲವಾಯಿತು ನಾಗರಿಕ(ಎನಿಸಿಕೊಂಡ) ಸಮಾಜ.

ಮಡೆ  ಮಡೆಸ್ನಾನ ದಿಂದ ಕಷ್ಟಗಳು ಪರಿಹಾರವಾಗಿತೆ,ಕಾಯಿಲೆಗಳು  ಗುಣವಾಗಿತೆ ಅನ್ನೋ ಪ್ರಶ್ನೆಗಳು ಹಲವರದ್ದು.ಹಾಲು ಕುಡಿಯುವ ಎಳೆಗೂಸು ಮಾತ್ರ ಅಮ್ಮನ ಹಾಲಿನ ರುಚಿ ಬಲ್ಲದು ಅಲ್ಲವೇ? ಅಂತೆಯೇ ಅದು ಕೆಟ್ಟಾಗ ಮಗುವಿನ ರುಚಿಗೆ  ಆರೋಗ್ಯಕ್ಕೆ ತಕ್ಕದಾಗಿ ಶೋಧಿಕರಿಸಿ ಉಣಿಸ ಬೇಕೇ  ಹೊರತು ನಾವು ದೊಡ್ಡವರ ನಾಲಿಗೆಗೆ ಅದು ಎಷ್ಟು ಸಲ್ಲುತ್ತದೆ ಅನ್ನೋದರ ಮೇಲಲ್ಲ.ಹಾಗೆ  ಧರ್ಮ ದೇವರನ್ನೋಳಗೊಂಡ ನಂಬಿಕೆಯೊಂದು  ಮೌಡ್ಯತೆ ಎಂದು  ಬಿಂಬಿತವಾದ ಹಿನ್ನಲೆಯಲ್ಲಿ  ಅದನ್ನು ಆಸ್ತಿಕರ ದೃಷ್ಟಿಕೋನದಿಂದ ಚರ್ಚಿಸಬೇಕೆ ವಿನಹ ನಾಸ್ತಿಕರ ದೃಷ್ಟಿಕೋನ ಇಟ್ಟುಕೊಂಡು ವಾದಕ್ಕಿಳಿಯುವುದು ಸಮಂಜಸವಲ್ಲ.ಮಡೆ ಸ್ನಾನದಿಂದ ಅರೋಗ್ಯ ವೃದ್ಧಿಸುತ್ತದೆ ರೋಗ ರುಜಿನಗಳು ಇಲ್ಲವಾಗುತ್ತದೆ ದೇವರ ಕೃಪೆಗೆ ಪಾತ್ರರಾಗುತ್ತೇವೆ  ಎಂಬುದು  ಜಾತ್ಯಾತಿತಾರಾದ  ಭಕ್ತರ  ನಂಬಿಕೆ.ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಮ್ಮ ಸಂವಿಧಾನ ಸರ್ಕಾರಕ್ಕೆ ನೀಡಿದೆ.ಧಾರ್ಮಿಕ ನಂಬಿಕೆಗಳನ್ನ ಒಬ್ಬರ ಮೇಲೆ  ಬಲವಂತಾವಾಗಿ ಹೇರಿದಾಗ ಅದರಿಂದಾಗಿ ಒಬ್ಬ ವ್ಯಕ್ತಿಗೆ ಅಥವಾ ಸಮೂಹಕ್ಕೆ ಮಾನಸಿಕ ದೈಹಿಕ ಹಿಂಸೆ ತೊಂದರೆಗಳಾದಾಗ  ಅಂತಹುಗಳನ್ನು ತಡೆಯುವ ನಿಷ್ಕ್ರಿಯೇಗೊಳಿಸುವ ಹಕ್ಕೂ  ಸರ್ಕಾರಕ್ಕಿದೆ.ಈ ಆಚರಣೆಯಲ್ಲಿ  'ಎಂಜಿಲಿನ' ಮೇಲೆ ಉರುಳುತಿದ್ದಾರೆ ಅನ್ನುವುದ ಬಿಟ್ಟರೆ ಬೇರೆ ಯಾವ ತರನಾದ ದೌರ್ಜನ್ಯವು ಯಾರ ಮೇಲೂ ನಡೆಯುತ್ತಿಲ್ಲ.ಹಾಗಾಗಿ ಇಡಿ ಆಚರಣೆಯನ್ನೇ ಸಾರಾಸಗಟು ವಿರೋಧಿಸುವುದು ಎಲ್ಲಿಯ ನ್ಯಾಯ? ಈ ವರ್ಷ ಎಂದಿನಂತೆ ಮಡೆ ಸ್ನಾನ ನಡೆಸಲು ಸುಪ್ರೀಂ ಕೋರ್ಟ್  ಹಸಿರು ನಿಶಾನೆ ತೋರಿಸಿತು.ಕೊಂಚ ತಿದ್ದು ಪಡಿಯೊಂದಿಗೆ ಇದನ್ನ ಮುಂದುವರಿಸುವುದು ಒಳಿತೆಂಬುದು ನನ್ನ ವಯಕ್ತಿವ ಭಾವನೆ.
    
ಸಾಮಾಜಿಕ ಸೋಂಕನ್ನ ತಡೆಗಟ್ಟುವ ಬದಲು ಅವನಿನ್ನೂ ದ್ವಿಗುಣಗೊಳಿಸುವ ಅಂತರವನ್ನು ಬೆಳೆಸಲು ಪುಷ್ಟಿ ಕೊಡುವ ಸಮೂಹಗಳ ಪ್ರಯತ್ನಗಳು ಆಗಾಗ  ನಡೆಯುತ್ತಲೆ ಇರುತ್ತಾವೆ.ಎಲ್ಲರಿಗು ಅವರವರದೇ ಸಮರ್ಥನೆಗಳಿರುವುದರಿಂದ ಇಲ್ಲಿ ಯಾರದ್ದು ತಪ್ಪುಯಾರದ್ದು ಸರಿ ಎಂದು ನಿರ್ದಿಷ್ಟವಾಗಿ ಹೇಳಾಲಾಗದು.ಮೇಲ್ ವರ್ಗದವರು ಹಾಗು ಆಡಳಿತ ಮಂಡಳಿಯೂ ಆರೋಪ ಹೊತ್ತರು ಸಂಯಮ ಕಾಯ್ದು ಕೊಂಡಿದ್ದು ಪ್ರಶಂಸನೀಯ.ಇನ್ನಾದರೂ ಅವರು  ದೇವಸ್ಥಾನದ ಕಾರ್ಯಗಳಲ್ಲಿನ  ಎಲ್ಲಾ ವಿಭಾಗದಲ್ಲೂ  ತೊಡಗಿಸಿಕೊಳ್ಳಲು ಊರಿನ ಇತರ  ವರ್ಗದ ಜನರಿಗೂ "ಸಮಾನವಕಾಶ" ದೊರಕಿಸಿಕೊಡುವಂತಾಗಲಿ.ಮಲೆಕುಡಿಯರು ತಾವು ಹಿಂದುಳಿದವರು ಅಂದು ಕೊಂಡರೆ ಎಂದಿಗೂ  ಹಿಂದೆಯೇ ಉಳಿದು ಬಿಡುತ್ತಾರೆ.ಅದನ್ನ ಬಿಟ್ಟು ಅವರು ಪರದೆಯ ಮುಂದೆ ಬರಬೇಕು.ಇದನ್ನು ಸಂಭಾಳಿಸಿದಂತೆ ಅವರೆಲ್ಲ  ಸಮಸ್ಯೆಗಳಿಗೂ ಸಂಘ ಸಂಸ್ಥೆಗಳ ನೆಚ್ಚದೆ  ತಾವೇ ಧೈರ್ಯವಾಗಿ ಮುನ್ನುಗ್ಗಿ ಪರಿಹಾರ ಹುಡುಕಿಕೊಳ್ಳುವಂತಾಗಬೇಕು.ಒಂದು ವರ್ಗಕ್ಕೆ ಅನ್ಯಾಯ ವಾಗುತ್ತಿದೆ ಎಂಬ ವಿಷಯ ಕಿವಿಮೀಟಿದಾಗ ಸಂಭಂದ ಪಟ್ಟ  ಸಂಘಟನೆಗಳು ಹೋರಾಟಕ್ಕಿಳಿಯುವುದು ಸಹಜವೇ.ದಲಿತ ಸಂಘಟನೆಯೂ ಅದನ್ನೇ ಮಾಡಿದೆ.ಆದರೆ ಅದಕ್ಕೂ ಮುನ್ನ ಬಂದ ಸುದ್ಧಿಗಳ ವಿಷಯ ಮಂಥನವಾಗಬೇಕಿತ್ತಲ್ಲವೇ? ಸತ್ಯಸಥ್ಯತೆಗಳ ಪರಿಶೀಲನೆ ನಡಿಸಬೇಕಿತ್ತು.ಯಾವುದೇ ಸಂಘದ ಹೋರಾಟವಾಗಿರಲಿ ಸುಮ್ಮನೆ ಗಲಭೆ ಸೃಷ್ಟಿಸುವ ಬದಲು ಅದನ್ನಾಶ್ರಯಿಸಿರುವ ಜನರ ಅಭಿವೃದ್ಧಿ ಪರನಾಗಿ ಚಿಂತನೆ ನಡಿಸಬೇಕು.ಪ್ರಚಲಿತವಾಗಿರುವ ಸುಳ್ಳಿನ ಪದರುಗಳ ಸರಿಸಿ ನಿಜ ಸಮಸ್ಯೆಯನ್ನು  ಸಂಘಟನೆಗಳು  ಗುರುತಿಸುವಂತಾಗಬೇಕು.

ಸಮಸ್ಯೆಗಳ ವಿರುದ್ದ  ಹೋರಾಡುವು ಮನೋಭಾವಕಿಂತಲೂ ಯಾವ ಸಮಸ್ಯೆಯನ್ನು ಆಯ್ದುಕೊಂಡರೆ ಎತ್ತಿಡಿದರೆ  ಅಧಿಕ ಜನರ ಗಮನ ಸೆಳೆಯಬಹುದು  ಬೆಂಬಲಗಳಿಸಬಹುದು  ಪ್ರಚಾರ ಗಿಟ್ಟಿಸಿಕೊಳ್ಳಬಹುದೆಂಬ ಲೆಕ್ಕಾಚಾರಗಳೇ ಮೇಲೈಸುತ್ತಿವೆ ಎಲ್ಲೆಡೆ.ಅಲ್ಲಿ ಸಮಸ್ಯೆ ಇರಲಿ ಬಿಡಲಿ ಹೆಚ್ಚು ಮನ್ನಣೆ ಸಿಗುವುದೆಂದರೆ  ಸಮಸ್ಯೆಗಳಿಗೆ ನವ ಹುಟ್ಟು ಕೊಟ್ಟು ಬಿಡುತ್ತಾರೆ.....ಅದಕ್ಕೊಂದು ನಿದರ್ಶನ ಮಡೆ ಮಡೆ ಸ್ನಾನದಲ್ಲಿನ ಮಲೆಕುಡಿಯರ ದೃಷ್ಟಾಂತ!

Sunday, December 16, 2012

ಸ್ಪೂರ್ತಿ

ಮೊನ್ನೆ ಕನಸಿನಲ್ಲಿ ನನ್ನ ಮೊದಲನೇ ಮಗು ಬಹಳ ನೊಂದುಕೊಂಡಿತ್ತು ...."ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯ" ಹಿನ್ನಲೆ ಗೀತೆಯೊಂದಿಗೆ!ಅರೆ ಇದ್ಯಾವ ಮಗು ಇವಳಿಗೆ  ಎಂದು ಗಾಬರಿಯಾಗಬೇಡಿ...  ಅದೇ ನಾ ಕನ್ನಡದಲ್ಲಿ ಬರೆದ ಮೊದಲ ಕವನ ಮತ್ತೆ ಕಾಡುತಿದೆ.ಮೊನ್ನೆ ಜಸಿಂತ ಎಂಬ ದೇಶೀ ಮೂಲದ ಮಹಿಳೆ ಇಂಗ್ಲಂಡಿನಲ್ಲಿ  ಆತ್ಮಹತ್ಯೆ ಮಾಡಿಕೊಂಡ ಸಾವನಪ್ಪಿದ ಸುದ್ಧಿ ಕಿವಿಗೆ ಬಿದ್ದಾಗಳಿಂದ.ಈ ಆತ್ಮಹತ್ಯೆಗಳು  ಪೂರ್ವನಿಯೋಜಿತವಾಗಿದ್ದರೂ,ಅದಕ್ಕೆ ತಯ್ಯಾರುಗೊಳಿಸುವ ಸಂದರ್ಭಗಳು ಮಾತ್ರ ಅನಿರೀಕ್ಷಿತವಾಗಿ ಎರಗುವಂತವು.ಅದ ಸಂಭಾಳಿಸಲಾಗದವರ ಬದುಕಿನಲ್ಲಿ  ಇಂತಹ ದೃಷ್ಟಾಂತಗಳು ಜರಗಿಬಿಡುತ್ತವೆ.ವರ್ಷಗಳ  ಹಿಂದೆ ನನ್ನ ಸ್ನೇಹಿತೆಯೊಬ್ಬಳು ಆತ್ಮಹತ್ಯೆಗೆ ಬಲಿಯಾದಳು.ಅದೇ ವಾರದಲ್ಲಿ ಅವಳ ಹುಟ್ಟುಹಬ್ಬದ ಟ್ರೀಟ್ ಪ್ಲಾನ್ ಮಾಡಿದ್ದ ನಮಗೆ ಸುದ್ಧಿ  ಅರಗಿಸಿಕೊಳ್ಳಲಾಗಲಿಲ್ಲ.ಹೊರ ನೋಟಕ್ಕೆ ಗಟ್ಟಿಗಿತ್ತಿಯೆನಿಸಿಕೊಂಡಿದ್ದ  ಅವಳು ಮಾನಸಿಕವಾಗಿ ಅಷ್ಟೊಂದು ದುರ್ಬಲಳಾಗಿದ್ದಳು ಅನ್ನೋದ ನಂಬಲು ಅಸಾಧ್ಯವೆನಿಸಿತ್ತು ನಮಗೆ.ಆಗಲೇ ಅರಿವಾಗಿದ್ದು  ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲ ಮನಸ್ಕರಾಗಿರುವುದಿಲ್ಲವೆಂದು.ನಿಜಸ್ಥಿತಿಯಲ್ಲಿ   ಅವರು ತಮ್ಮ ದೃಢ ಮನಸನ್ನು ನಕಾರಾತ್ಮಕ ಯೋಜನೆಗೆ ಬಳಿಸಿ ಕೊಂಡಿರುತ್ತಾರಷ್ಟೇ.ಸಾಯುವುದಕ್ಕೆ ಸಂಗ್ರಹಿಸುವ ಸಮಗ್ರ ಧೈರ್ಯದಲ್ಲಿನ  ಶೇಕಡ ೧೦ ಪಾಲರಷ್ಟು ಬದುಕಲಿಕ್ಕಾಗಿ ಅಹ್ವಾನಿಸಿಕೊಂಡರೆ  ಎಂತಹ ಕಷ್ಟಗಳನ್ನಾದರು  ಸಮರ್ಥವಾಗಿ ಎದುರಿಸಬಹುದು.ನಮ್ಮನಗಲಿದ  ಸ್ನೇಹಿತೆಯ  ಹುಟ್ಟುಹಬ್ಬದಂದು ಅವಳಿಗೆ ವಿಶಿಷ್ಟ ರೀತಿಯಲ್ಲಿ  ಶ್ರದ್ದಾಂಜಲಿ ಸಲಿಸುವ ಸಲುವಾಗಿ ಅಶ್ರಮವೊಂದಕ್ಕೆ ಭೇಟಿ ನೀಡಿದ್ದೆವು.ಸಾಯುವ ಮುನ್ನ ಅವಳು ಈ ಜಾಗಕ್ಕೆ  ಒಮ್ಮೆ ಬಂದಿದ್ದರೆ ಮಕ್ಕಳೊಂದಿಗೆ ಬೆರೆತಿದ್ದರೆ ಅಂಥದೊಂದು ದುರ್ಘಟನೆ ಆಗುತಿರಲಿಲ್ಲವೇನೋ ಅನ್ನೋ ಮಟ್ಟಿಗೆ ಅಲ್ಲಿನ ವಾತಾವರಣ ಮಕ್ಕಳು ನಮ್ಮ  ಮೇಲೆ ಪ್ರಭಾವ  ಬೀರಿದರು.ಅವರೊಡನೆ ಕಳೆದ ಕ್ಷಣಗಳು ಚಿರಸ್ಮರಣೀಯ ಅವಿಸ್ಮರಿಣೀಯ.ನಾನು ಕನ್ನಡದಲ್ಲಿ  ಬರೆದ ಈ ಮೊದಲ ಕವನಕ್ಕೂ ಅಲ್ಲಿನ  ಮಕ್ಕಳೇ  ಸ್ಪೂರ್ತಿ.ಈ ಹಿಂದೆ ಬರಿ ಇಂಗ್ಲಿಷ್ನಲ್ಲಿ ಬರಿತಿದ್ದೆ...ಇಗಾ ಮೊದಲು ಕನ್ನಡದಲ್ಲಿ ಬರೆದು ನನ್ನ ಕನ್ನಡೇತರ ಸ್ನೇಹಿತರು ಒತ್ತಾಯಿಸಿದರೆ ಇಂಗ್ಲಿಷ್ನಗೂ  ಭಾಷಾಂತರಗೊಳಿಸುತ್ತೇನೆ.
ಮತ್ತೀ ಕವನದಲ್ಲಿ ವಿಶಿಷ್ಟತೆಯೇನಿಲ್ಲ  ಹೆತ್ತ ನನಗೆ ಮೊದಲ ಮಗುವಿನ ಮೇಲೆ ಕೊಂಚ ಹೆಚ್ಚಿಗೆ ಪ್ರೀತಿ,ಎಲ್ಲಾ  ಮೊದ ಮೊದಲುಗಳೇ ಹಾಗಲ್ಲವೇ? ಮನಸಿನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಳ್ಳುತ್ತವೆ.ಅದಿಲ್ಲದೆ ನನ್ನ ಬ್ಲಾಗ್ ಅಪೂರ್ಣ ಅನಿಸತೊಡಗಿದೆ,ಆದರಿಂದ ಕವನದ ಯಾವ ರೂಪುಲಕ್ಷಣಗಳಿಲ್ಲದ  ನನ್ನ ಮೊದಲ ಕವನವನ್ನ ಅದರ ಇಂಗ್ಲಿಷ್ ಅವತರಣಿಕೆ ಜೊತೆಗೆ ಪ್ರಕಟಿಸುತ್ತಿದೇನೆ.
                                               ಸ್ಪೂರ್ತಿ (Awakening of the inner hope)
ಚಿತ್ರಕೃಪೆ : ಅಂತರ್ಜಾಲ
        

ಅದು ಬೇಸಿಗೆಯ ಮಧ್ಯಾನ,                                                "It was a Sunny noon and
ಎಲ್ಲೆಲ್ಲೂ ಉರಿಬಿಸಿಲು                                                        summer sun played its role
ಮನದಲ್ಲೇಕೋ ತುಂಬಿತ್ತು,                                                 But d gloomy dark clouds
ಮಳೆಯ ಕಾರ್ಮುಗಿಲು                                                  inside,captured the soul                                  
ಹೆಪ್ಪುಗಟ್ಟಿತ್ತು ನೋವು,                                                      The waves of pains n  disappointments
ನಿರಾಸೆಗಳ ಅಲೆ                                                              entrapped,freezed well
ಅದಾಗಲೇ ಹೆಣೆದಿದ್ದ ಜವರಾಯ,                                         Standing blue,the lord of death
ತನ್ನ ಬಲೆ                                                                       seemed to had casted his spell

ಸೋಲುಗಳು ನಿರ್ಧರಿಸಿದವು ಜೀವನದ,                                Defeats decided the new path
ಮುಂದಿನ ನಡೆ                                                                of life,deprived of smiles
ಚಿತೆಯೇರಲು ಬಯಸಿದ್ದ ತನು ನಡೆದಿತ್ತು ರೈಲು,                    The body craving for its grave,
ಕಂಬಿಯ ಕಡೆ                                                                 led towards the rails

ಬಾಳಿನ ಕೊನೆಯ ಕ್ಷಣವನ್ನು ಎಣಿಸುತ್ತ ಕುಳಿತಿದ್ದೆ,                   There i was seated counting
ಅಲ್ಲಿ ನಾನಂದು                                                               life's last moments with fraility
ಹಿಂದಿನಿಂದ ತಲೆಗೆ ಬಡಿದಿತ್ತು,                                            When a pebble came hitting,my
ಸಣ್ಣ ಕಲ್ಲೊಂದು                                                               back like a bolt from the blue wit velocity

ತಿರುಗಿ ಏನೆಂದು ನೋಡಲು ಕಂಡ,                                    Turning ma head in anguish,
ಆ ಹುಡುಗ                                                                     i found  a lil boy ...
ಆಡುತಾ ನಲಿಯುತಾ ಬಳಿ ಬಂದ,                                      who smiled n came hopping
ಆ ಸೊಬಗ                                                                    to me spoiling death's ploy!

ಆ ಮುದ್ದು ಮುಖವನು ನೋಡಿ ಮರಳಿತು,                           The  innocent sight of his,
ಕಿರುನಗು ಮೊಗದಲ್ಲಿ                                                      returned a smile on ma lip
ಇವನ್ಯಾರು?ಇಲ್ಲಿಗೇಕೆ ಬಂದನೆಂಬ,                                    Deep in me,Who is he? Y is he here?
ಕೂತುಹಲ ಕಣ್ಣಲ್ಲಿ                                                           curious questions flip
ತಿಂದಿತ್ತಂತೆ ಮಹಾಮಾರಿಯೊಂದು,                                 Here he stood,enstranged by
 ಅವನ ಸಂಬಂಧಿಕರನ್ನು                                                 all relations...
ಕ್ಷಣ ಬೆರಗಾದೆ ಕೇಳಿ ಅವನಾಡುತಿದ್ದ,                                 Bleak and empty yet in solitude
ಜೀವನುತ್ಸಾಹದ ಮಾತುಗಳನ್ನು                                  His eyes glared wit hopes to conquer the world,
                                                                                I was moved,as his story unfold

ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,                       The child i met,sprouted a
ಮಗುವಿನ ಮನಸು                                                        seed of his heart in me,
ನೆನಪಾಯಿತು  ಅಪ್ಪ -ಅಮ್ಮ ನನಗಾಗಿ,                             I remembered greener days of life
ಕಂಡ ಕನಸು                                                                Parents n their dreams for me

ಅರಿವಾಗಿತ್ತು ನನ್ನ ದುಡುಕು ನಿರ್ಧಾರವು,                           As the hibernation died...ma
ಅಷ್ಟರೊಳಗೆ                                                            Soul awakened and a ray of hope brightened
ಮರಳಿ ಹೆಜ್ಜೆ ಹಾಕಿದೆ ಮಮತೆ ತುಂಬಿದ,                           I Passed through the streets,i had
ಬೆಚ್ಚನೆಯ ಗೂಡಿನಕಡೆಗೆ                                               sweared i would never return to
ವಿಧಿಯನ್ನು ತಿರುಚಿ.......                                                Twisting the fate,killing the
ಗೆಲುವನ್ನು ಬಯಸಿ ......                                                decision made in haste........Sunday, December 9, 2012

ಚುಚ್ಚದ ಮುಳ್ಳು...ಗುಲಾಬಿ ಕಣ್ಣಿನ ಹುಡುಗಿ

ಚಿತ್ರಕೃಪೆ  : ಅಂತರ್ಜಾಲ 
ಆಗ  ಸಂಜೆ ಆರು.ಮನೆ ತಲುಪುವ ಕಾತುರದಲ್ಲಿ ಆಟೋ ಇಳಿದವಳೇ ಆತುರ ಆತುರವಾಗಿ ಬಸ್ ನಿಲ್ದಾಣದತ್ತ ಬಿರುಸಿನ ಹೆಜ್ಜೆ ಹಾಕಿದೆ.
ಮನಸು ಹಗುರವಾದರೆ  ಮೈಯ್ಯು ಹಗುರವೆಂಬಂತೆ  ಒಳಗೆ ಗುನಗುನಿಸುತ್ತಿದ ಜೀವದ ಅರಿವಿನ ಹರಿವು ಹೊರಗಿನ ವಾತಾವರಣದೊಂದಿಗೆ ಹದವಾಗಿ ಬೆರೆತು,ತುಂತುರು ಗಾಳಿ ಮಳೆಯಲ್ಲಿ ಚಲಿಸುತ್ತಿದ್ದ ನನ್ನ ಹೆಜ್ಜೆಯ ಬಡಿತದೊಂದಿಗೆ  ಬೀಸುತ್ತಿದ್ದ  ಕೈಗಳ ತಾಳ ಸಮ್ಮಿಳಿತವಾಗಿ  ರಾಗ ಶುರುವಚ್ಚಿಕೊಂಡಿದ್ದವು..ಅದೇ ಹುರುಪು ಕಾದುಕೊಂಡು ನಿಲ್ದಾಣ ಮುಟ್ಟುವಷ್ಟರಲ್ಲಿ ಆವರಿಸಿದ ಗಾಢ ಕಪ್ಪು ಮೋಡದ ಚಪ್ಪರದಿಂದಾಗಿ ನೋಡ ನೋಡುತ್ತಿದ್ದಂಗೆ ಅಲ್ಲೊಂದು ಕತ್ತಲ ಸಾಮ್ರಾಜ್ಯ ಉದಯಿಸಿತ್ತು.ಅದರೊಂದಿಗೆ ಸಣ್ಣ ಭಯವು ಕೂಡ.ಯಾಕಂದರೆ ಒಬ್ಬಳೇ ಹೀಗೆ ಯಾರಿಗೂ ಹೇಳದೆ ಇಷ್ಟು ದೂರ ಯಾವತ್ತು ಪ್ರಯಾಣಿಸಿದ್ದಿಲ್ಲ.

ಎಂದೂ ಮಾಡದ್ದನ್ನ  ಮಾಡಿಸಿಬಿಡುವ ಈ ಹಾಳು ಸಂದರ್ಭಗಳು ಅಚ್ಚಾನಕ್ಕಾಗಿ ಸೃಷ್ಟಿಸುವ ಅನಿವಾರ್ಯತೆಗಳು ಸಮಯ ಸಾಧಕಗಳೇ  ಸೈ.ಅದ್ಯಾವ ನಮೂನೇ ಹೊಂಚು ಹಾಕಿ ಗೆರೆ ದಾಟಲು ಉತ್ತೇಜಿಸುತ್ತಾವೆ.ನಂತರ ನಡೆಯುವುದ್ದೆಲ್ಲಾವು  ನಮ್ಮ ಕೈ ಮೀರಿದ್ದು.ಕಾಲದ ಹಿಡಿತಕ್ಕೆ ಸಿಲುಕಿದ  ಅನೂಹ್ಯ ಗಳಿಗೆಯಲ್ಲಿ ಮರು ಮರಳದಂತೆ ಎಂದಿಗೂ ಅಳಿಸಲಾಗದಂತೆ ಲೀನವಾಗುವಂತವು.

ಅಂದಿನಂತೆ ,ಇಂದಿನನಂತೆ.

ಆದರೆ ಇಂದಿನ ಮಟ್ಟಿಗೆ ಅಂತದೊಂದು ಸಂದರ್ಭ  ಅನಾಹುತದಲ್ಲಿ ಕೊನೆಗಾನಲ್ಲಿಲ್ಲವಷ್ಟೇ.ಈ ದಿನಕ್ಕಾಗೆ ಅಲ್ಲವೇ ವರುಷಗಳಿಂದ ಕಾದಿದ್ದು ನಾನು? ಅದಕ್ಕಾಗೆ ಅಲ್ಲವೇ ಯಾರಿಗೂ ತಿಳಿಸದೇ ಹೊರಟಿ ಇಷ್ಟು ದೂರ ಬರಬೇಕಾದದ್ದು? ತಿಳಿಸದಂತಹ ಗುಟ್ಟಿನ ವಿಷಯವೇನು ಇರಲಿಲ್ಲ.ಅವಳ ಬಗ್ಗೆ  ತಿಳಿದ ಕೂಡಲೇ ಹೊರಡುವ ಅವಸರದಲ್ಲಿ ಎಲ್ಲವ ಮರೆತ್ತಿದ್ದೆನಷ್ಟೇ.ಇಂದು ಅವಳ ನೋಡದ್ದಿದ್ದರೆ  ಮತ್ತೆ ಆ ಅವಕಾಶ ಎಂದೋ.ಅಷ್ಟರಲ್ಲಿ ಒಳಗಿನ ಉರಿ ನನ್ನನೇ ಬೂದಿ ಮಾಡಿ ಮುಗಿಸುತ್ತಿತ್ತೇನೋ.

ಸುಮಾರು ಹೊತ್ತು ಕಾದರೂ  ಒಂದು ಬಸ್ಸು ಬರದೆ ಹೋದ್ದದ್ದು ಮನಸ್ಥಿತಿಯನ್ನು ಕಂಗೆಡೆಸಿತು.ಹೀಗೆ ಕತ್ತಲಲ್ಲಿ ಕಾಯುವ ಪರಿಸ್ಥಿತಿ ನನ್ನ ಮಟ್ಟಿಗೆ ಹೊಸತೆ.ಹೊಸ ಸಮಸ್ಯೆಗಳ ಉದ್ಭವ  ಅಂದರೆ  ಹಳೆ ನಿರ್ಲಕ್ಷಿಸಿದ ಸಲಹೆಗಳಿಗೆ ಪುನರುತ್ಥಾನ.ಅದರ ಹುಟ್ಟು,ಇದಕ್ಕೆ  ಉಸಿರು....

ಛೆ! ನೆಟ್ಟಗೆ  ಗಾಡಿ ಓಡಿಸೋದ ಕಲ್ತಿದ್ರೆ  ಇಲ್ಲಿ ಹೀಗೆ ಕಾಯಬೇಕಾಗಿರಲಿಲ್ಲ!

ಮನೆಯಲ್ಲಿ ಗಾಡಿಯ ವಿಚಾರ ಬಂದಾಗಲೆಲ್ಲ, "ಟೂ ವೀಲರ್ ಬ್ಯಾಲೆನ್ಸಿಂಗ್ ಬರುತ್ತೆ,ಫೋರ್ ವೀಲರ್ ಸ್ಟೀರಿಂಗ್ ಕಂಟ್ರೋಲ್ ಸಹ ಇದೆ.ಟ್ರಾಫಿಕ್ ರೂಲ್ಸ್ ಬಗ್ಗೆ  ಚಾಚು ತಪ್ಪದೆ ಅರಿವಿದೆ.ಮೂರು ತಿಂಗಳು ಡ್ರೈವಿಂಗ್ ಕ್ಲಾಸಿಗೆ ಹೋಗಿ ಲೈಸೆನ್ಸ್ ಸಹ ಪಡೆದ್ದಿದ್ದಾಯಿತಲ್ಲ  ಇನ್ನೇನು?" ಅನ್ನೋ ಬಿಗುಮಾನದ ಮಾತುಗಳಾಡುತ್ತಿದ್ದೆ .

 " ಲೈಸೆನ್ಸ್ ಇದ್ದರೆ ಸಾಕಾಗೋಲ್ಲ ಮಗಳೇ.....  ಗಾಡಿ ಮೇನ್ ರೋಡಿಗೆ   ಇಳಿಸಲು ಕಲಿಯಬೇಕು ಮೊದಲು.ಲೈಸೆನ್ಸ್ ಇಲ್ಲದಿದ್ದರೂ ಗಾಡಿ ಓಡಿಸಬಹುದು.ಆದರೆ ಗಾಡಿ ಓಡಿಸದವರ ಬಳಿ ಲೈಸೆನ್ಸ್ ಇದ್ದರೆಷ್ಟು  ಬಿಟ್ಟರೆಷ್ಟು..." ಎಂಬ  ಅಪ್ಪನ ಕಿವಿ ಮಾತಿಗೂ,

 " ಗಾಡಿ ಮೇನ್ ರೋಡ್ ನಲ್ಲಿ ಓಡಿಸೋದ ಕಲಿತರೆ ಸಾಕಾಗದು ಅವೆನ್ಯೂ ರಸ್ತೆಯಂತ ಜನನಿಬಿಡ ಚಿಕ್ಕ ಜಾಗದಲ್ಲಿ  ಪಾರ್ಕ್ ಮಾಡೋದು  ಕರಗತವಾಗಬೇಕು.ಶಿವಾಜಿನಗರಂತಹ ಇಕ್ಕಟಿನ  ಸಂದಿ ಗೊಂದಿಯಾ ಗಲ್ಲಿಗಳಲ್ಲಿ ಚಲಾಯಿಸಿದ ಅನುಭವವಿರಬೇಕು"  ಅನ್ನೋ ಅಣ್ಣನ  ಮಾತುಗಳಿಗೂ  ರೂಪ ಬಂದು  ಉಸಿರಾಡುತ್ತಿದ್ದಾವೆ ಅನಿಸಿತು.

ನಾನು ಹೇಳಿದ್ದು  ನಗಣ್ಯವಲ್ಲದಿದ್ದರು ಅಷ್ಟೇನೂ ಮುಖ್ಯಪಾತ್ರ ವಯಿಸುವಂತವಲ್ಲ ಎಂದು ನನಗೂ  ಗೊತ್ತಿತ್ತು ಅದಕ್ಕೆ ಅವರೊಂದಿಗೆ  ವಾದ ಮುಂದುವರಿಸುತ್ತಿರಲಿಲ್ಲ .

ಎಷ್ಟಾದರೂ ನನ್ನ ಒಳತಿರುಳ ಬಲ್ಲವಳ್ಳಲವೇ ನಾನು? ಗುಡಿಸಿ ಸಾರಿಸೋದ ಕಲಿತವಳು,ರಂಗೋಲಿ ಹಾಕೋದ ಮರೆತವಳು!ಪರಿಶ್ರಮ ಪರಿಣಿತಿ ಎಷ್ಟಿದ್ದರೇನು ಮನೆ ಅಂಗಳ ಬೋಳು ಬೋಳೆ...


ಅಸಲಿಗೆ ಗಾಡಿಗೂ ಜೀವನದ ಬಂಡಿಗೂ ಇರುವ ಸಾಮ್ಯತೆ ಕಂಡು ಬೆಚ್ಚುತ್ತಿದ್ದೆ.ಅಪ್ಪನ ಮಾತಿನಲ್ಲೂ ಅಣ್ಣನ ಮಾತಿನಲ್ಲೂ ಅವೇ ಸಾಮತ್ಯೆ  ಮೇಲೈಸಿದ್ದಂತೆ ಯಾವುದೊ ಪಾಠ ಬೋಧಿಸುತ್ತಿರುವಂತೆ  ಭಾಸವಾಗುತಿತ್ತು!! ಅದಲ್ಲದೆ  ಎರಡರ ಡ್ರೈವಿಂಗ್ ಮಾಡಲು ಪ್ರಮುಖವಾಗಿ ಬೇಕಾಗೋದು ಆತ್ಮ ವಿಶ್ವಾಸ  ಗುಂಡಿಗೆ  ಮುನ್ನುಗ್ಗುವ ಪ್ರವೃತ್ತಿ ಎಂಬ ಸತ್ಯದಿಂದ ದೂರ ಸರಿಯುತ್ತಿದದ್ದು ಅದು ನನ್ನಲ್ಲಿ ಕಡಿಮೆ ಇದಿದ್ದರ ಪರಿಣಾಮದಿಂದಷ್ಟೇ! ಮನಸು ವ್ಯಾಕುಲ ಗೊಂಡಿತು... ಬ್ಯಾಗಿನಲ್ಲಿ ಹೂತು ಹೋಗಿದ್ದ ಡೈರಿಯನ್ನ ಹೊರ ತೆಗೆಯದೆ  ಮೇಲಿಂದಲೇ ಸ್ಪರ್ಶಿಸಿದೆ ಹಿಂದಿನಂತೆ ಕೈ ನಡುಗಳಿಲ್ಲ.ಕತ್ತಲೆಯ ಭಯವು  ಇಳಿಮುಖವಾಯಿತು .

ಓಹ್! ಇಷ್ಟು ದಿನ ಕತ್ತಲನ್ನೇ ಕಾವಲು ಕಾದು ಕುಳಿತವಳಿಗೆ ಈ ಸ್ವಲ್ಪ ಸಮಯದ ಒಬ್ಬಂಟಿ ಜಗತ್ತಿನ ಕತ್ತಲು ಯಾವ ಲೆಕ್ಕದ್ದು? ಕತ್ತಲೆಯೇ ಕತ್ತಲನ್ನ ಹೊರಗಟಿದ್ದ ಈಗಷ್ಟೆ ನೋಡಿ ಬಂದವಳಲ್ಲವೇ ನಾನು? ಇನ್ನು ಮುಂದೆ ಅಂತ ಕತ್ತಲೆ ನನ್ನ  ನೆರಳು  ಸೋಕಳು ಹೆದರ ಬೇಕು ಅಷ್ಟೊಂದು ಬೆಳಕನ್ನು  ತನ್ನ ಅಂತರ್ಯ ಬಗೆ ಬಗೆದು ತುಂಬಿಸಿ ಕಳಿಸಿದ್ದಾಳೆ "ಪೂರ್ಣಿಮಾ".

ದೂರದ ಊರಿನ  ಬಸ್ ನಿಲ್ದಾಣದಲ್ಲಿ  ಬೆಂಗಳೊರಿನ  ಬಸ್ಸಿಗಾಗಿ  ಕಾಯುತ್ತಿದ್ದವಳಿಗೆ   ಹಿಡಿದ ಜಡಿ ಮಳೆ ಹೀಗೆ ಏನೇನೋ ನೆನಪು ತರಿಸುತ್ತಿವೆ.

*
ಮಳೆಗಾಲದ ಮುಂಜಾವು ಶಾಲೆಗೆ ಹೋಗಲು ಅಣಿಯಾಗುವ ಮೊದಲು ಒಮ್ಮೆ ಮಳೆ ನೀರಲ್ಲಿ  ಆಡಿ ದೋಣಿ ತೇಲಿಸುವ ಅಭ್ಯಾಸವಿತ್ತು.ಅಂದು ಅಡುಗೆ ಮನೆಯಲ್ಲಿ ಚಾ ಮಾಡುತಿದ್ದ ಅಮ್ಮನ ಕಣ್ ತಪ್ಪಿಸಿ ರಾತ್ರಿ ಮಾಡಿಟ್ಟಿದ್ದ ಕಾಗದದ ದೋಣಿ  ಹಿಡಿದವಳೇ ಮನೆಯ ಗೇಟಿನ ಬಳಿ ಹೋದೆ.ಪ್ರಕೃತಿ ಆಗಷ್ಟೇ ಪವಿತ್ರ  ತೀರ್ಥ ಸ್ನಾನ ಮುಗಿಸಿಕೊಂಡಂತೆ  ಶುಭ್ರ ಚೆಲುವೊಂದಿಗೆ  ಕಂಗೊಳಿಸುತ್ತಿತ್ತು.ರಸ್ತೆಯ ಬದಿಯೇ  ಹರಿದು ಹೋಗುತ್ತಿದ್ದ ಕೆಂಪು ನೀರಿನಲ್ಲಿ ಇನ್ನೇನೂ ಕೈಲಿದ್ದ ದೋಣಿ ಬಿಡಬೇಕೆನ್ನುವಷ್ಟರಲ್ಲಿ ಅಮ್ಮ ಕಿಟಕಿಯಿಂದಲೇ "ಶಾಲೆಯ ಕೊನೆ ದಿನ.ಸೆಂಡ್ ಆಫ್ ಪಾರ್ಟಿಗೆ ಸೀರೆ ಉಟ್ಟು  ಹೋಗಬೇಕಾದವಳು,ಮುಂದೇ  ಕಾಲೇಜ್ ಮೆಟ್ಟಿಲು ಹತ್ತೊಳು ಹೀಗೆ ಎದ್ದವಳೇ ಮಕ್ಕಳಾಟಿಕೆ ಮಾಡ್ಕೊಂಡು ಕೂತಿದ್ಯಲ್ಲ ನಿನಗೆ ಬುದ್ಧಿ ಬೆಳೆದಿದೆ ಅನ್ನೋಕಾಗುತ್ತ?" ಎಂದು ಗದರಿದಳು.ಅದು ಕೇಳಿಸಿದರು ಅರ್ಥವಾಗದಂತೆ  ಅಮ್ಮನೆಡೆ  ಒಮ್ಮೆ ನೋಡಿ ನಕ್ಕು ದೋಣಿಯತ್ತ  ಗಮನ ಹರಿಬಿಟ್ಟೆ.ಅಯ್ಯೋ ಗಡಿಬಿಡಿಯಲ್ಲಿ ಕೈ ಜಾರಿದ ನನ್ನ ದೋಣಿ...ನೀರಿನಲ್ಲಿ ಮುಕ್ಕರಿಸಿ ಪೂರ್ತಿ ಒದ್ದೆಯ ಮುದ್ದೆಯಾಗಿತ್ತು.

ಅಷ್ಟರಲ್ಲೇ ಡ್ರಂಕ್ ಡ್ರಂಕ್ ಎಂಬ ಕೂಗು..ಬಾಡಿದ ಮನಸು ಹಿತಗೊಂಡಿತು.

ಅಲಿಂದ ಹೊರಟವಳೇ ಹಿತ್ತಲಿನ ಪುಟ್ಟ ತೊಟ್ಟಿಯಲ್ಲಿ ನನಗಾಗೆ ಕಾಯುತ್ತಿತ್ತೆಂದು ಭಾವಿಸಿ,ಮುದ್ದುಗರೆದು,ನನ್ನ  ಕಪ್ಪೆಯನ್ನು ಹಸ್ತದ ಮೇಲೆ ಇರಿಸಿಕೊಂಡೆ.ಅದು ಕೂಡ ಗುರುತು ಹಿಡಿದಂತೆ  ಹಪ್ ಎಂದು ಎರಡು ಬಾರಿ ನಿಂತಲ್ಲೇ  ಎಗುರಿತು.ಈ ಕಪ್ಪೆಯ ಹುಚ್ಚು ಹತ್ತಿಸಿದ್ದು ಅಜ್ಜಿ ಮತ್ತವಳ ಕಥೆ.ಆ ದಿನಗಳಲ್ಲಿ ನಾವು ಮಕ್ಕಳೆಲ್ಲ ಸೇರಿ ಅಜ್ಜಿಗೆ ಕತೆ ಹೇಳುವಂತೆ ದಿನ ರಚ್ಚೆ ಹಿಡಿಯುತ್ತಿದ್ದೆವು.ಪಾಪಾ ಅಜ್ಜಿ ಅತ್ಯುತ್ಸಾಹದಿಂದಲೇ ಜಾನಪದ ಕತೆ,ನೀತಿ ಕತೆ,ತನ್ನ ಹುಟ್ಟೂರಿನ ಕಥೆ,ತಾನು ಮೆಟ್ಟಿದೂರಿನ ಕಥೆ,ತರಂಗದಲ್ಲಿನ  ಕತೆ,ದಿನಪತ್ರಿಕೆಯಿಂದ ಆಯ್ದ ಕತೆ ಹೀಗೆ ಒಂದೇ ಎರಡೇ  ಬಗೆ ಬಗೆಯದ್ದು... ನಮಾಗಾಗಿ ಕೆಲವನ್ನು ನೆನಪಿಂದ ಕೆದಕಿ ಇನ್ನು ಕೆಲವಷ್ಟನ್ನ ಪುಸ್ತಕಗಳಿಂದ ಹೆರಕಿ ಹೇಳುತಿದ್ದಳು.

ಅವುಗಳ್ಳಲ್ಲಿ ಒಂದು ಕತೆ ಹೀಗಿತ್ತು, ಹುಡುಗಿಯೊಬ್ಬಳು ಕಪ್ಪೆ ಸ್ನೇಹ ಮಾಡುತ್ತಾಳೆ  ನಂತರ ಅದು ರಾಜಕುಮಾರನಾಗಿ ರೂಪಾಂತರಗೊಂಡು ಕೊನೆಗೆ ಅವರಿಬ್ಬರ ಮದುವೆ..ಅದೇ ಕಪ್ಪೆ ರಾಜಕುಮಾರನ ಕಥೆ..ನನ್ನ ಮತ್ತು ನನ್ನ ಕಪ್ಪೆಯಾ ಸ್ನೇಹಕ್ಕೆ ಮುನ್ನುಡಿ ಬರೆದ ಕಥೆ,ಅಂತ್ಯ ಹಾಡಿದ ಕಥೆ.ಆದರೆ ಅಲ್ಲೊಂದು ಮಜವಿತ್ತು.ನನಗೆ ನಿಜಕ್ಕೂ ಕಪ್ಪೆಯಲ್ಲಿ ಸ್ನೇಹ ಅದಮ್ಯ ಪ್ರೀತಿ ಅಂಕುರಿಸಿದ್ದು  ಕಥೆ ಕೇಳಿಯಲ್ಲ,ಬದಲಿಗೆ  ಅದರಲ್ಲಿನ ಕಪ್ಪೆನಾ ಬೇರೆಯಾರು  ಇಷ್ಟ ಪಡಲಿಲ್ಲವೆಂದು! ನಾಯಿ ಬೆಕ್ಕು ಅಚ್ಚಿಕೊಂಡಿದ್ದ  ಉಳಿದವರಿಗೆ  ಅಜ್ಜಿ ಹೇಳಿದ ವಕ್ರ ಮುಖದ  ಕಪ್ಪೆಯ ಬಗ್ಗೆ ಅಸ್ಸಯ್ಯ ತಾತ್ಸಾರ ಭಾವ.ಎಲ್ಲರೂ  ತೊರೆದಿರುವ ಯಾರಿಗೂ ಬೇಡವಾಗಿರುವದನ್ನ ಅಪ್ತವಾಗಿಸಿಕೊಳ್ಳೋದು ಮೊದಲಿನಿಂದಲೂ ನನಗಂಟಿಕೊಂಡ  ಬುದ್ಧಿ  ಆಗಿತಲ್ಲಾ?? ಹಾಗಾಗಿ ಈ ಕಪ್ಪೆಯೊಂದಿಗಿನ ಸಂಭಂದವು ಬೆಸೆಯಿತು.

ಹಾಗಂತ  ಇದು ಸುಲುಭದ ಸ್ನೇಹವಾಗಿರಲಿಲ್ಲ.ಅದು ಜಿಗಿದಲ್ಲೆಲ್ಲ ನಾನು ಅದರಿಂದಿಂದೆ ಓಡಾಬೇಕಿತ್ತು.ಯಾವ ಹೊತ್ತು ಹಿತ್ತಲ ಯಾವ ಮೂಲೆಯಲ್ಲಿ ಇರುತ್ತಿತ್ತೋ ಗೊತ್ತಾಗುತ್ತಿರಲಿಲ್ಲ...ಎಲ್ಲೆಡೆ ತಡಕಾಡಿದರು ಸಿಗುತಿರಲಿಲ್ಲ. ಹಾಗಾಗೆ ಕೆಲವೊಮ್ಮೆ ಅದನ್ನ ಬ್ಯಾಗ್ನಲ್ಲಿ ಇಟ್ಕೊಂಡು ಶಾಲೆಗೆ ಹೋಗೊ ರೂಡಿಯಿತ್ತು.ಆ ದಿನವು ಆಗಿದ್ದು ಅದೇ.ಸೀರೆ ಉಟ್ಟು ಶಾಲೆಗೆ  ಹೊರಡುವ ಸಂಭ್ರಮದಲ್ಲಿ ಮರೆಯಬಹುದೆಂದು ಬೆಳಗೆ ಎದ್ದವಳೇ  ನನ್ನ ಕಪ್ಪೆನ ಬ್ಯಾಗೊಳಗೆ ಹಾಕಿಕೊಂಡಿದ್ದೆ.ಮೊದಲೇ ದೋಣಿ ಕಪ್ಪೆ ಅಂತ ಸಮಯ ಕಳೆದಿದ್ದರಿಂದ ಗಡಿಬಿಡಿಯಲ್ಲೇ  ತಯ್ಯಾರಾಗಿ ಮನೆ ಬಿಟ್ಟವಳಿಗೆ ಅಡ್ಡ ಹಾದಿಯಲ್ಲಿ ಬರುತ್ತಿದ್ದ  ಪೂರ್ಣಿಮಾ ಅಂದ್ರೆ 'ಪೂರ್ಣಿ' ಸಿಕ್ಕಿದಳು.ಸೀರೆಯಲ್ಲಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದ  ಪೂರ್ಣಿಮಾ  ಅಗಲ ಕಣ್ಣಿನ ನೀಳಕಾಯದ  ಸುಂದರ ಹುಡುಗಿ.ನನ್ನ ಸಹಾಪಾಟಿಯಾದ ಆಕೆ  ಇಂತಿಪ ಎರಡು ವರ್ಷದ ಕೆಳಗೆ ನಮ್ಮ ಶಾಲೆ ಸೇರಿದವಳು.ಮೊದಲಿದ್ದ ಶಾಲೆ ಅವಳ ತಂದೆ ಮನೆಯ ಬಳಿ ಇತ್ತಂತೆ  ತಾಯಿಯಾ ಅಕಾಲಿಕ ಮರಣದಿಂದಾಗಿ ಅಜ್ಜಿ ಮನೆಗೆ ನಮ್ಮ ಶಾಲೆ ಹತ್ತಿರವಾಗುತ್ತದೆಂದು ಇಲ್ಲಿ ಸೇರಿಸಿದ್ದರು.ಅವಳೋ ಮೌನ ಗೌರಿಯಂತೆ ಯಾರೊಂದಿಗೂ ಹೆಚ್ಚು ಬೆರೆತವಳಲ್ಲ ಸ್ವಲ್ಪ ನಿಗೂಢ ಸ್ವಾಭಾವದವಳೆನಿಸುತ್ತಿದ್ದಳು ನಮಗೆಲ್ಲ.ಆದರೆ ಅಂದು ಹಾದಿಯಲ್ಲಿ  ಸಿಕ್ಕವಳು ನನ್ನ ತಡೆದು ಮಾತಿಗೆಳೆದಳು.

"ಸ್ಕೂಲ್ ಗೆ ಹೋಗ್ತಿದ್ಯ?" ಅವಳ ಕಣ್ಣಲೇನೋ ಅತೀವ ಸಂಕಟ ಅಡಗಿಸಿಕೊಂಡೆ ಕೇಳಿದಳು

"ಹೌದು ಯಾಕೆ  ನೀನು ಅಲ್ಲಿಗೆ ತಾನೇ ಹೊರಟಿರೋದು??"ಎಂದೆ.

"ಇಲ್ಲ,ಹೌದು! ಅಂದ್ರೆ ಸ್ವಲ್ಪ ತಡವಾಗಿ ಬರುತ್ತೇನೆ...ಒಂದು ಸಹಾಯ ಮಾಡೋಕ್ ಆಗುತ್ತ?" ಅಂದು ಎಂಜಲು ನುಂಗಿದಳು.

"ಏನದು ಹೇಳು? ಅಂತ ಕೆಲಸ ಏನು.. ಯಾಕೆ ತಡವಾಗುತ್ತೆ?" ಅಂದೆ.

"ಚಿಕ್ಕಮ್ಮನನ್ನ   ಮಾತಾಡಿಸಿ ಕೊಂಡು ಹೋಗು ಅಂತ ಅಪ್ಪ ಹೇಳಿದ್ದಾರೆ....ಈ ಡೈರಿ ಯಲ್ಲಿ ಅಮ್ಮನ ನೆನಪಿದೆ ಅಲ್ಲಿಗೆ ಎತ್ಕೊಂಡ್ ಹೋಗೋಕೆ ಮನಸೋಪ್ಪುತಿಲ್ಲ ಮನೆಯಲ್ಲೂ ಬಿಡೋಕೆ ಆಗೋಲ್ಲ.ಅರ್ಧ ಗಂಟೇಲಿ  ಬರುತ್ತೇನೆ.ಅಲ್ಲಿ ತನಕ ಹಿಡ್ಕೊಂದಿರು." ಅಂತೇಳಿ ನನ್ನ ಉತ್ತರಕ್ಕೂ ಕಾಯದೆ ಹೊರಟಳು .

" ಪೂರ್ಣಿ..ಲೇಟ್ ಮಾಡಬೇಡ ಸಿಸ್ಟರ್ ಬಯ್ತಾರೆ.ಬೇಗಾ ಬಾ" ಎಂದು ಆಗಲೇ ನಾಲ್ಕು ಹೆಜ್ಜೆ  ದೂರ ಇದ್ದವಳಿಗೆ   ಗಂಟಲ್ಲೆರಿಸಿ ಹೇಳಿದೆ.

"ಪ್ಲೀಸ್ ಡೈರಿ ಯಾರಿಗೂ ಕೊಡಬೇಡ.ನಾನು ಆದಷ್ಟು ಬೇಗ ಬರ್ತೀನಿ"  ಎಂದು ಮಳೆಯಲ್ಲಿ ಮರೆಯಾಗಿ ಹೋದಳು.

ಬೀಳುತ್ತಿದ್ದ  ಮಳೆಯಲ್ಲಿ ನೆನೆದು ಡೈರಿ ಹಾಳಾಗೋದು ಬೇಡವೆಂದು  ಅವಸರದಿಂದ  ಡೈರಿ ಬ್ಯಾಗನಲ್ಲಿ ಇರಿಸಿ ಕೊಂಡು ಶಾಲೆಗೆ ಹೋದೆ.ಆದರೆ ಪೂರ್ಣಿ ಪಾರ್ಟಿಗೆ ಬರಲೇ ಇಲ್ಲ.ಮನೆಗೆ ಬಂದವಳೇ ಬ್ಯಾಗ್ನಲ್ಲಿದ ನನ್ನ ಕಪ್ಪೆ ಆಚೆ ತೆಗೆಯಲು ನೋಡಿದರೆ ಕಪ್ಪೆ ಮಾಯಾ!! ಡೈರಿ ಮಾತ್ರ ಇದೆ.ಅದು ಡೈರಿ ಇಡುವಾಗ ಎಗರಿ ಹೋಗಿತ್ತು.ಆ ದಿನವೆಲ್ಲ ನನಗೆ ನಿದ್ರೇನೆ ಬರಲಿಲ್ಲ.ರಾತ್ರಿಯಿಡೆ ಮಗ್ಗುಲು ಬದಲಾಯಿಸುತ್ತ  ಪೂರ್ಣಿನ ಅವಳ ಡೈರಿನ ಬಯ್ದುಕೊಂಡೇ  ಮಲಗಿದೆ.ಪರೀಕ್ಷೆಗೆ ಇನೇನು ಮೂರು  ವಾರ ಬಾಕಿ ಉಳಿದಿತ್ತು.ಅದರ ಗುಂಗಿನಲ್ಲಿ ಡೈರಿ ಕಪ್ಪೆ ಎಲ್ಲವು ಮರೆತು ಹೋದವು.ನನ್ನದು  ಪೂರ್ಣಿದೂ ಪರೀಕ್ಷಾ  ಸೆಂಟರ್ ಬೇರೆ ಬೇರೆ ಆಗಿದ್ದರಿಂದ  ನಾವಿಬ್ಬರು ಭೇಟಿ ಆಗಲು ಸಾಧ್ಯವಾಗಲಿಲ್ಲ.ಪರೀಕ್ಷೆಯ ನಂತರ ನಾವೆಲ್ಲ ಶಾಲೆಯಲ್ಲಿ ಸೇರಬೇಕು ಅನ್ನೋ  ಪೂರ್ವ ಯೋಜನೆಯಿತ್ತಲ್ಲ ಆಗಾ ಡೈರಿ ಕೊಟ್ಟರಾಯ್ತು ಎಂದು ಸುಮ್ಮನಾದೆ.ಆದರೆ ಅಲ್ಲಿ ಅಂದು ತಿಳಿದದ್ದೇ ಬೇರೆ.ವಾಸ್ತವದಲ್ಲಿ ಪೂರ್ಣಿ ಪರೀಕ್ಷೆಯೇ ಬರೆದಿರಲಿಲ್ಲ! ಹೀಗೆ ಒಂದು ತಿಂಗಳಿಂದೇನೆ  ಅವಳು ಯಾರ ಜೊತೆಗೋ ಹೋಗಿಬಿಟ್ಟಿದ್ದಾಳೆ ಅಂತ  ಕೆಲವರು ಕಿಡ್ನಾಪ್ ಆಗಿದ್ದಾಳೆ ಅಂತ ಕೆಲವರು ಅವಳ ಚಿಕ್ಕಮ್ಮ ಮನೆ ಬಿಟ್ಟು ಓಡಿಸಿದ್ದಾರೆ  ಅಂತ  ಏನೇನೋ  ಸುದ್ದಿ ಹಬ್ಬಿದವು.ಪೂರ್ಣಿಯಾ ಅಜ್ಜಿ ಕಡೆಯವರು ಅವರಪ್ಪ ಎಲ್ಲರು ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದಾರೆ ಆದ್ರೆ ಪೂರ್ಣಿಯಾ ಪತ್ತೆ ಆಗಿಲ್ಲ.ಇದೆಲ್ಲ ಕೇಳಿ ಒಂದು ಕ್ಷಣ ನನಗೆ ತಲೆ ಗಿರ್ರ್ ಅಂದು ಬಾಯಿ ಒಣಗಿ ಹೋಯಿತು."ಯಾವ ದಿನದಿಂದ ಕಾಣ್ತಿಲ್ಲವಂತೆ? " ಅಂತ ಚೇತರಿಸಿಕೊಂಡು ಕೇಳಿದೆ. 

"ಅದೇ ನಮಗೆ ಜೂನಿಯರ್ಸ್ ಸೆಂಡ್  ಆಫ್ ಪಾರ್ಟಿ ಕೊಟ್ರಲ್ಲ... ಅವತ್ತೇ ಇವಳಿಗೂ ಪೂರ್ತಿ ಸೆಂಡ್ ಆಫ್ ಆದಂತೆ  ಅನಿಸುತ್ತೆ..ಬೆಳಗೆ ಶಾಲೆಗೆ ಅಂತ  ಹೊರಟವಳದು ಇವತ್ತಿನವರೆಗೂ ಸುಳಿವಿಲ್ಲವಂತೆ " ಎಂದು ಪಿಸುಗುಟ್ಟಿದಳು ಸುಧ.
ಮನೆಗೆ ಬಂದು ನೂರೆಂಟು ಆಲೋಚನೆಗಳು.ಎಲ್ಲೋದಳು ಈ ಹುಡುಗಿ? ಯಾವತ್ತು ಮಾತನಾಡಿಸದವಳು ಅಂದೇ ನನಗೆ ಸಿಗಬೇಕಿತ್ತ?ಅವಳ ವಸ್ತುವನ್ನ ನನ್ನ ಕೈಗಿತ್ತು ಹೋಗಬೇಕಿತ್ತ?ಅದ ಕಾಯಲು ನಾನೆ ಸಿಕ್ಕಿದ ಅವಳಿಗೆ?ನಾನಾದರು ಅದನ್ನ ಜೋಪಾನ ಮಾಡುವುದಕ್ಕೆ ಯಾಕೆ ಒಪ್ಪಿಕೊಂಡೆನೋ?ಹೋಗಲಿ...ಅವಳಜ್ಜಿಗೆ ಡೈರಿ ತಲುಪಿಸಿದರಾಯಿತು.....ಇಲ್ಲ..ಯಾರಿಗೂ ಕೊಡಬೇಡ ಅಂದಿದ್ದಾಳೆ.ಅದಿರಲಿ,ನನ್ನ ಅವಳ  ಭೇಟಿ ಬಗೆಗಾದರೂ ಹೇಳಬೇಕು ಅವರಿಗೆ ಅದಕ್ಕೂ  ಮೊದಲು ಅಮ್ಮನಿಗೆ. ಯಾಕೋ ಬೇಡ ಎಂದೆನಿಸಿತು! ಅವಳ ಬಗ್ಗೆ ನನಗೇನು ಗೊತ್ತು ಅಂತ?? ಏನಾದರು ಗೊತ್ತಿದ್ದರಲ್ಲವೆ ಯಾರಿಗಾದರೂ  ಹೇಳೋದು? ಅದ್ದಕಿಂತ ಸುಮ್ಮನಿರೋದು ವಾಸಿ ಎಂದು ನಿರ್ಧರಿಸಿದೆ.ಮನಸು ತಡೆಯಲಿಲ್ಲ ಅಮ್ಮನಿಗೆ ಎಲ್ಲಾ  ವಿಷಯ ಹೇಳಿದೆ  ಡೈರಿಯ ವಿಷಯವೊಂದನ್ನ ಬಿಟ್ಟು!ಕಪ್ಪೆಯೊಂದಿಗೆ ಮರೆಯಾದ ಪೂರ್ಣಿಯ ನೆನಪಿಗಾಗಿ ಅವಳ  ಡೈರಿಯನ್ನ ಕಪ್ಪೆ ಇದ್ದ ಹಿತ್ತಲ ಮೂಲೆಯಲ್ಲಿ ಮುಚ್ಚಿಟ್ಟೆ.ಮರೆತು ಹೋದೆ.
*
ಕಾಲೇಜ್ ದಿನಗಳೆಂದರೆ ಒಂಥರಾ  ಸ್ವತಂತ್ರ ನಂತರದ  ಭಾರತದ ಹಾಗೆ. ಹಳೆ ಮೌಡ್ಯ ಗಳನ್ನ ಉಲಂಘಿಸುತ್ತಲೇ  ಹೊಸದಕ್ಕೆ ಗಂಟು ಬೀಳುವ  ನಾಂದಿ ಹಾಡುವ ಹಾಗೆ.ಶಾಲೆಯಲ್ಲಿ ಸಹಿಸಿಕೊಂಡ ಒಂದಷ್ಟು ನಿರ್ಭಂದನೆಗಳ್ಳನ್ನ ಅಲ್ಲಿಯವರೆಗೂ  ಪಾಲಿಸಿಕೊಂಡು ಬಂದ ಅನಾವಶ್ಯಕವೆನಿಸಿದ  ಮೌಲ್ಯಗಳನ್ನ ಗಾಳಿಗೆ ತೂರಿಸಿ  ಪ್ರಗತಿ ಜಾಗತೀಕರಣದ ಮುಖವಾಡದೊಂದಿಗೆ   ಅವುಗಳೆದುರು ಬಂಡಾಯ ಏಳುವ ದಿನಗಳು.ಕಾಲೇಜ್ ಸೇರಿದ ಒಂದೂವರೆ ವರುಷದ ನಂತರ  ಸುಖಾಸುಮ್ಮನೆ ಹಳೆಯದನ್ನ ಕೆದಕಿಕೊಂಡಾಗ ಕಪ್ಪೆ,ಪೂರ್ಣಿ,ಡೈರಿ ನೆನಪಾದವು.ಬಂಡಾಯದ ಕಿಚ್ಚು ಹೆಚ್ಚಿತ್ತಳವೆ?ಎಲ್ಲದಕ್ಕೂ ಕಾರಣಗಳು ಬೇಕಾದವು! ಆ ಮುಚ್ಚಿಟ್ಟಿದ್ದ  ಡೈರಿ ಓದುವ ಕುತೂಹಲ ದುರಾಲೋಚನೆ ಬಂದಿದ್ದು ಆಗಲೇ.

ಹಿತ್ತಲ ಗೂಡಲ್ಲಿ ಎಲ್ಲಾ  ಋತುಮಾನಗಳನ್ನ ಸಹಿಸಿಕೊಂಡು ನರಳಿದ್ದ ಆ ಡೈರಿ ಓದಲು ಕಷ್ಟವೆನಿಸಿದರು ಅದು ನನ್ನಲ್ಲಿ ಅತ್ತಿಸಿದ ಪಾಪ ಪ್ರಜ್ಞೆಯ ಉರಿ  ಎಡಬಿಡದೆ ಕಾಡಿದ್ದು ಸತತ ನಾಲ್ಕು ವರ್ಷ.ಅದನ್ನ ಪ್ರತಿ ಭಾರಿ ಓದಿದಂತೆ  ಆ ಡೈರಿಯಲ್ಲಿ ದಾಖಲಿಸಿದ್ದ  ಹತಾಶೆ ತುಮುಲ ಸಂಘರ್ಷ ನನ್ನದೆನಿಸತೊಡಗಿತು.ಪೂರ್ಣಿ ಹೇಳಿದ  ಹಾಗೆ ಆ ಡೈರಿ ಯಲ್ಲಿ ಬರಿ ಅವಳ ತಾಯಿಯ ನೆನಪಿರಲಿಲ್ಲ.ಬದಲಿಗೆ ಅವಳ ಪ್ರೀತಿ ಪ್ರೇಮ ಜಗಳ  ಅದು ಮಾಡಿದ  ಆಘಾತ ಅದರ ವಿರುದ್ದದ ಹೋರಾಟಗಳಿಂದಲೇ  ತುಂಬಿಹೋಗಿತ್ತು.ಆ  ವಯಿಸಿನಲಿ ಅಂತ ಭಾವನೆಯನ್ನ ಹೇಗೆ ತಂದುಕೊಂಡಳು?ಯಾವಾಗಲು ಮೌನಿಯಾಗಿರುತ್ತಿದ್ದವಳ ಹೃದಯದಲ್ಲಿ ಇಷ್ಟೊಂದು ಮಾತುಗಳಿದ್ದವೇ?? ಎಳೆ ವಯಸಿನಲ್ಲಿ ಪ್ರೀತಿ ಪಾತ್ರರನ್ನ  ಅದರಲ್ಲೂ ತಾಯಿ ತಂದೆಯನ್ನ  ಕಳೆದುಕೊಂಡ ಮನುಷ್ಯ ಯಾವ ಮಟ್ಟಿಗೆ ದುರ್ಬಲನಾಗುತ್ತಾನೆ ಏಕಾಂಗಿಯಾಗುತ್ತಾನೆ ಪ್ರೀತಿಗಾಗಿ ಹಂಬಲಿಸುತ್ತಾನೆ  ಸುಲಭವಾಗಿ ಜಾಲಕ್ಕೆ ಬೀಳುತ್ತಾನೆ ಮೊಸಕ್ಕೊಳಗಾಗುತ್ತಾನೆ   ಹೇಗೆ ಕುಸಿಯುತ್ತಾನೆ ಎಂಬುದೆಲ್ಲ ಸಾರಿ ಸಾರಿ ಹೇಳುತಿತ್ತು ಅವಳ ಡೈರಿ.ಪೂರ್ಣಿನ ಆ ಹುಡುಗ ಬಲವಂತವಾಗಿ ಕರೆದೊಯ್ದನೆ? ಡೈರಿ ನನಗೆ ಕೊಟ್ಟಿದ್ದು... ಅದನ್ನ  ಅವಳಜ್ಜಿಗೆ  ತಲುಪಿಸಿ ಅವಳನ್ನ ಪಾರುಮಾಡಲಿರಬಹುದೇ? ಹಾಗಿದ್ದರೆ ಪ್ಲೀಸ್ ಯಾರಿಗೂ ಕೊಡಬೇಡ ಅಂತ ಹೇಳಿದ್ಯಾಕೆ? ಅವಳು ಇಷ್ಟ ಪಟ್ಟೆ  ಹೋದಳೆ ಅವಳೇ ಬಣ್ಣಿಸಿದ  ಆ ದ್ರೋಹಿಯೊಂದಿಗೆ?

 ಯಾವುದರ ಮಾಹಿತಿ ಪಡೆಯೋಕು ಅವಳ ಮನೆಯವರ ವಿಳಾಸ ನನ್ನ ಬಳಿ  ಇರಲಿಲ್ಲ .ಪೂರ್ಣಿ ಅನಂತರ ಏನಾದಳು ಎಂಬುದ ತಿಳಿಯದೆ  ಮನಸು ಆಗಾಗ ಪಶ್ಚ್ಯತಾಪದ ಬೇಗೆಯಲ್ಲಿ ಬಳಲುತಿತ್ತು  ಪೂರ್ಣಿಯ ತಂಗಿ  ಆಶ್ಚರ್ಯವೆಂಬಂತೆ ಆ ಭಾನುವಾರದ  ಬೆಳಗ್ಗೆ   ಮಾಲ್ ನಲ್ಲಿ  ಸಿಗುವವರೆಗೂ.

ಪೂರ್ಣಿ ತಂಗಿ ವಾಣಿ ನಮಗಿಂತಲೂ ೪ ವರ್ಷ ಕಿರಿಯವಳು ನೋಡೋಕೆ  ಪೂರ್ಣಿಯ  ಅಚ್ಚು . "ಪೂರ್ಣಿ ಮನೆಗೆ ಬಂದ್ಲ" ಎಂದು ಆಕೆಯನ್ನು  ವಿಚಾರಿಸಿದಾಗ ಇಗಾ ಮೂರು ತಿಂಗಳ ಹಿಂದಷ್ಟೇ ಬಂದು ಹೋದಳಕ್ಕ ಅಂದಳು!ಶಾಲೆಯಲ್ಲಿದ್ದಾಗ ನಡೆದ ಈ  ಸಂಗತಿ  ಆಗಿನ್ನೂ ೬ನೆ ತರಗತಿಯಲ್ಲಿದ್ದ ವಾಣಿಗೆ ತಿಳಿದಂತಿರಲಿಲ್ಲ.ಪೂರ್ಣಿ  ಕ್ಷೇಮವಾಗಿ ಇದ್ದಾಳೆ ಎಂದು ತಿಳಿದೇ ಯಾವುದೊ ಹೊರೆ ಭುಜದಿಂದ ಇಳಿದಂತ  ಅನುಭವವಾಯಿತು.ನನಗೆ ಪೂರ್ಣಿನ ನೋಡಬೇಕಿತ್ತು ಅವಳಲ್ಲಿ ಡೈರಿ ಓದಿದಕ್ಕೆ  ಕ್ಷಮೆ ಕೇಳಬೇಕಿತ್ತು. ಅವಳ ನಂಬರ್ ಅಡ್ರೆಸ್ ಪಡೆದ್ದಿದ್ದೆ ನೇರ ಬಸ್ ಹತ್ತಿ ಎಡೆಯೂರಿಗೆ ಬಂದಿಳಿದು ಪೂರ್ಣಿ ಫೋನಿನಲ್ಲಿ  ಸೂಚಿಸಿದಂತೆ  ಆಟೋ ಹತ್ತಿ ಅವಳ ಮನೆ ತಲುಪಿದೆ.

ಚಿತ್ರಕಲೆ : ವೈಶಾಲಿ ಶೇಷಪ್ಪ 


ವಿಶಾಲವಾಗಿ ಕಟ್ಟಿದ್ದ ಮನೆಯ ಬಾಗಿಲಲ್ಲೇ ನಿಂತ್ತಿದ್ದಳು ಪೂರ್ಣಿ.ಬಂದವಳೇ ಪಟ ಪಟ ಯೋಗಕ್ಷೇಮ ವಿಚಾರಿಸಿದಳು ಇವಳು ಅದೇ ಪೂರ್ಣಿನ ಮಾತಿನಲ್ಲೂ ಮುಖದಲ್ಲೂ ಎಷ್ಟೊಂದು ಬದಲಾವಣೆ.ಇವಳಿಗೆ ಹಳೆ ವಿಷಯ ಹೇಗೆ ಕೇಳೋದು ಡೈರಿ ಬಗ್ಗೆ ಆ ಹುಡುಗನ ಬಗ್ಗೆ ಮರೆತಿರ ಬಹುದು ಮತ್ತೆ ನೆನಪಿಸಿ ಘಾಸಿ ಯಾದರೆ ಅನ್ನೋ ಆಲೋಚನೆ ನನ್ನನ ಸುಮ್ಮನಾಗಿಸಿತು.

"ನಿನ್ನನ್ನ ಅವತ್ತೇ ಕೊನೆ ನೋಡಿದ್ದು..ಆಮೇಲೆ ನಾವಿಬ್ಬರು ಭೇಟಿ ಮಾಡೋಕೆ ಆಗಲೇ ಇಲ್ಲ ಅಲ್ವಾ?"ಎಂದು ಅವಳೇ ಹಳೆ ಪುಟಗಳಿಗೆ ಇಳಿದಳು.

"ಹೌದು ಪೂರ್ಣಿ ನಂಗೆ ನಿನ್ ಬಗ್ಗೆ ತಿಳಿದು ಬೇಸರವಾಗಿತ್ತು.ಆಮೇಲೆ ನಿನ್ನ ಮನೆಯ ವಿಳಾಸವು  ಗೊತ್ತಿರಲಿಲ್ಲ ನಮಗ್ಯಾರಿಗೂ ನಂತರದ  ಮಾಹಿತಿ ಸಿಗಲಿಲ್ಲ.ನಿಜ ಹೇಳು ಹೇಗಿದ್ದೀಯ?" ಅಂದೆ.

 "ಖುಷಿಯಾಗಿದ್ದೀನಿ ಕಣೆ,ಯಾಕೆ ಈ ಗಾಬರಿ.ನೀನು ನನ್ನ ಡೈರಿ ಓದಿದ್ಯ?"ಎಂದು ನಗುತ್ತ ಕೇಳಿದಳು.

"ಅದನ್ನ ನನ್ನ ಬಳಿ ಯಾಕೆ ಬಿಟ್ಟೆ?ಎಲ್ಲಿ ಹೋದೆ ಆ ದಿನ?

"ಅಪ್ಪನನ್ನ  ಹೋಗೋ ಮುಂಚೆ ನೋಡೋ ಆಸೆಯಾಗಿತ್ತು .ಮತ್ತೆ ಬಂದು ತೊಗೊಳೋ ಉದ್ದೇಶದಿಂದ ಕೊಟ್ಟೆ.ಆದರೆ ಇವರು ಸಂಶಯ ಬರಬಹುದು ಬೇಗ ಹೊರೋಡೋಣ ಅಂದ್ರು"

"...................." ಅವನೊಟ್ಟಿಗೆ ಹೋದಳ....ನಂಬಲಾಗಲಿಲ್ಲ... ಮಾತು ನುಂಗಿದೆ.


"ಅಂದ ಹಾಗೆ ಆ ಡೈರಿಯಾ ಮಾತುಗಳು ನನ್ನದಲ್ಲ" ಅಂದಳು.

 "ಹಾಗಂದ್ರೆ ?" ದಿಗ್ಬ್ರಂತಳಾದೆ.

"ಈಗ ಅದು ನನ್ನದಲ್ಲ ಕಣೆ ಹುಚ್ಚಿ" ಎಂದು ನಕ್ಕಳು."ಆಗ ಅದೆಲ್ಲಾ ನಡೆದದ್ದು ನಿಜ.ಅವರು ಹಾಗೆ ಇದ್ದರು ಈಗಲೂ ಸ್ವಲ್ಪ ಹಾಗೆ ಇದ್ದಾರೆ.ಆದರೆ...ನಾನು ನನ್ನನೆ ಬದಲಾಯಿಸಿಕೊಂಡಿದ್ದೀನಿ"

"ಓ ನಾಟಕೀಯ ಆದರ್ಶಗಳ ಬೆನ್ನೇರಿ ಜೀವನದೊಂದಿಗೆ ಒಪ್ಪಂದ ಮಾಡಿಕೊಂಡೆ ಅನ್ನು"

" ಇಲ್ಲ ಜೀವನವು ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ"

ಅಷ್ಟರಲ್ಲಿ ಯಾರೋ ಮೇಲಿಂದ  ಕೂಗಿದಂತಾಯಿತು ಪೂರ್ಣಿ ಟೆರೇಸ್ ಮೆಟ್ಟಲೇರುತ್ತಾ ನನ್ನನು ಅವಳಿಂದೆ ಬರುವಂತೆ ಕಣ್ಣಲ್ಲೇ ಸೂಚಿಸಿದಳು. ಅವಳು ಏರುತಿದ್ದ ಒಂದೊಂದು ಮೆಟ್ಟಿಲು ಅದರಲ್ಲಿನ ಅವಳ ನಡಿಗೆ,ಅದಾಗಲೇ ಜೀವನದ ಮೆಟ್ಟಿಲುಗಳನ್ನೇರಿ ದಿಗಂತ ತಲುಪಿದಂಗಿತ್ತು.
ಆ ದ್ವನಿ ಪುಟ್ಟ ಕಿಶೋರನದು.ಪೂರ್ಣಿಯ ಮಗ.ಚಿತ್ರ ಬಿಡಿಸುತ್ತ ಕುಳಿತಿದ್ದ.

"ಇಲ್ಲಿಂದ ಅಲ್ಲಿರೋ ಪುಟ್ಟ ಮನೆ ಹೇಗೆ ಕಾಣುತ್ತಿದೆ ನಿನಗೆ" ಅಂದಳು

"ಪುಟ್ಟ ಮನೆ ತರ" ಅಂದೆ

"ಆ ಮನೆಯನ್ನು,ನನ್ನ ಮನೆಯನ್ನು,ಬಹು ಮಾಡಿಯ ಕಟ್ಟಡಗಳನ್ನು   ಮೋಡಗಳ ಮೇಲೆ ನಿಂತು ನೋಡಿದರೆ ಹೇಗೆ ಕಾಣುತ್ತೆ" ಅಂದಳು.

"ಎಲ್ಲವು ಚಿಕ್ಕದಾಗಿ..ಒಂದೇ ರೀತಿ"ಅಂದೆ

"ಹಾಗೆ ನಾನು ಜೀವನವನ್ನ ನೋಡುತ್ತಿರೋದು.ಹತ್ತಿರವಿದ್ದರೂ ದೂರದಿಂದ.ಎಲ್ಲರೂ ಒಂದೇ ರೀತಿ ಅನಿಸುತ್ತಾರೆ.ಎಲ್ಲವು ಸುಂದರವಾಗಿದೆ ಅನ್ನಿಸುತ್ತದೆ"

"ಅದು ಸುಳ್ಳಲ್ಲವ?"

"ಚಂದ್ರ ಸುಂದರವಾಗಿದ್ದಾನೆ ಅನ್ನೋದು ಸುಳ್ಳಲ್ಲವ? ನಕ್ಷತ್ರಗಳು ರಾತ್ರಿ ಮಾತ್ರ ಮಿನುಗುತ್ತಾವೆ ಅನ್ನೋದು ಸುಳ್ಳಲ್ಲವ?ನೀನು ನಿನ್ನ ಮೇಲೆ  ಬರಬಹುದಾದಂತಹ ಆರೋಪ್ಪಕ್ಕೆ ಹೆದರಿ ಡೈರಿ ಮುಚ್ಚಿಟ್ಟೆ ಹೊರತು ನನಗೆ ಕೊಟ್ಟ ಮಾತಿಗೆ ಬದ್ದಳಾಗಿ ಅಲ್ಲ ಅಂದರೆ ಅದು ನಿಜವ? ಎಲ್ಲವ ನೋಡುವುದಕ್ಕೂ ಎರಡು ಕೋನಗಳಿರುತ್ತಾವಲ್ಲವೇ  ಆ ಆಯ್ಕೆ ನಮಗೆ ಬಿಟ್ಟದು.ಅದರಲ್ಲಿ ಸಂತಸ ತರುವುದನ್ನೇ  ಆಯ್ಕೆ ಮಾಡಿಕೊಂಡರೆ ಒಳಿತಲ್ಲವೇ? " ಅಂದಳು. 

"ಪೂರ್ಣಿ ನೀನು ತುಂಬಾ ಬದಲಾಗಿದ್ದೀಯ ಡೈರಿ ಯಲ್ಲಿ ನಾ ಕಂಡ ಪೂರ್ಣಿನೆ ಬೇರೆ.ಅಯ್ಯೋ ಅದ ಓದಿದಾಗಲೆಲ್ಲ ಅವಳಿಗೆ ಸಮಾಧಾನ ಮಾಡಲು ಎಷ್ಟು ಪ್ರಯತ್ನಿಸುತಿದ್ದೆ ಗೊತ್ತ?" ಎಂದು ನಕ್ಕೆ...ನಾನಿಷ್ಟು ದಿನ ನಂಬಿಕೊಂಡಿದ್ದ ಕೆಟ್ಟ ಸತ್ಯಗಳು ಸುಳ್ಳಾಗಿದ್ದವು.

"ನಾನು ಬದಲಾದ ದಿನವೇ ಮನೆ ಬಿಟ್ಟೆ.ಇಗಾ ಬದಲಾಗುತ್ತಿರೋದು ನೀನು!" ಎಂದವಳೇ  ಕಾಫಿ  ತರಲು  ಹೋದಳು.

ಹೊರಡುವಾಗ ಅವಳಿಗಿಂತಲೂ  ನನ್ನ ಬಳಿಯೇ ಹೆಚ್ಚು ಕಾಲ ಇದ್ದ ಡೈರಿಯನ್ನು ಪೂರ್ಣಿಯ ಕುರುಹಾಗೆ  ನನ್ನ ಜೊತೆ  ಕೊಂಡೊಯ್ಯುವ  ಮನಸಾಯಿತು.ಕೊನೆಗೂ ನನಗೆ ಅದನ್ನ ಬಿಟ್ಟು ಕೊಡುವ ಪ್ರಮಾದ ಬರಲಿಲ್ಲ ಯಾಕಂದರೆ ಅವಳಿಗೆ  ಅದನ್ನ ಇಟ್ಟುಕೊಳ್ಳುವ  ಇರಾದೆಯೇ ಇರಲಿಲ್ಲ.ಅದರ ಕೊನೆಯ ಪುಟದಲ್ಲಿ  ಕಿಶೋರನಿಂದ  "ಗುಲಾಬಿ ಕಣ್ನಿನ ಸುಂದರ ಬದುಕು ಕಟ್ಟಿಕೊಂಡ ಅಮ್ಮನ, ಪ್ರೀತಿಯ ಮಗು-ಕಿಶೋರ್" ಎಂದು ಕೈ ಹಿಡಿದು ಬರೆಸಿದೆ.    
*
ಮಳೆ ನಿಂತಿತು.ಬಸ್ ನಿಲ್ದಾಣದಲ್ಲಿ ಹರಿದು ಹೋಗುತಿದ್ದ ನೀರು ಎಂದಿನಂತೆ  ಸೆಳೆಯಿತು.ಬ್ಯಾಗ್ ನಿಂದ ಡೈರಿ ತೆಗೆದು ಮೊದಲ  ಪುಟಗಳಿಂದ ದೋಣಿ ಮಾಡಿದೆ...ನೀರಿನಲ್ಲಿ ಒಂದೊಂದೆ ದೋಣಿ ಬಿಟ್ಟೆ.ಅದರಲ್ಲಿ ಪೂರ್ಣಿ ಅವಳ ಗಂಡ ಮಗು  ಎಲ್ಲರು ಸುಖ ಪ್ರಯಾಣ ಹೊರಟಂತೆ ಅನಿಸಿತು.ಮನಸು ಸಂತೋಷದಿಂದ  ನೆನೆಯಿತು.

ಅಷ್ಟರಲ್ಲೇ ಡ್ರಂಕ್ ಡ್ರಂಕ ಸದ್ದು.......

ಹಿಂದಿನಿಂದ ಬಸ್ಸಿನ ಹೆಡ್ ಲೈಟ್ ಮಿಂಚಿತು.ಬೆಳಕಿಗೆ ಬೆಳಕು ಚೆಲ್ಲಿದಂತಾಯಿತು.ನಾನು ಅದರೊಳಗೊಂದಾಗಿ  ಮಿಂಚಿದೆ.

*

ನಿಜ ಪೂರ್ಣಿ ಹೇಳಿದ ಹಾಗೆ ನಾನು ಅಂದು ಬದಲಾದೆ .........ಹಾಗಂತ ಎಲ್ಲವೂ ಬದಲಾಗೋದಿಲ್ಲ ಕೊನೆಗಾನೋದಿಲ್ಲ.ಕೆಲವೊಂದು ದಾಖಲಿಸುತ್ತ ಹೋದಷ್ಟು  ಪುನರ್ ಲಿಖಿತ..... ಜೀವನದ ಕೊನೆ ಸ್ಟಾಪ್ ಬರುವವರೆಗೂ ಸಮಯದೊಳಗೆ  ಚಿರಂತನವಾಗಿ  ಬಂಧಿತ.....ನನ್ನ ರಚ್ಚೆ,ಹಠ ಸ್ವಭಾವದಂತೆ.....ಎಂಬತ್ತರ ಹೊಸ್ತಿಲ್ಲಲ್ಲೂ  ಅದಕ್ಕೆ ಮಣಿದು ಕತೆ ಹೇಳುವ ನನ್ನಜ್ಜಿಯ ಉತ್ಸಾಹದಂತೆ...ಮಕ್ಕಳಾಟಿಕೆ ಮಾಡೋ ನಿನಗೆ ಬುದ್ಧಿ ಬೆಳೆದಿದೆ  ಅನ್ನೋಕಾಗುತ್ತ ಅನ್ನೋ ಅಮ್ಮನ ಉವಾಚದಂತೆ.....