Sunday, December 23, 2012

ಮಡಿ ಮಡೆ ಸನ್ನಡೆ! - ಯಾವುದು ಹಿತವಯ್ಯ ನಿಮಗೆ ಈ ಮೂರರಲ್ಲಿ?

ಕುಮಾರ ಪರ್ವತ
ಕಳೆದ ವಾರದ ಮೊದಲ ಮೂರು ದಿನ ಅಪ್ಪನ ಊರಿನಲ್ಲಿ  ಕಳೆದೆವು.ಅಜ್ಜ ಅಜ್ಜಿಯ ಸಾವಿನ ನಂತರ ಊರಿನತ್ತ  ನಮ್ಮನ್ನು ಅತೀಯಾಗಿ  ಸೆಳೆಯುವವನೊಬ್ಬನೇ ಅವನೇ ನಮ್ಮ ಆತ್ಮೀಯ ಬಂಧು ಸುಬ್ಬಪ್ಪ.ಅದೇ ಕುಕ್ಕೆಯ ಸುಬ್ರಮಣ್ಯ ಅಲಿಯಾಸ್ ಕುಕ್ಕೆ ನಾಗಪ್ಪ.ನಮ್ಮ ರಾಘ(ರಾಘವ ಚಂದ್ರ) ನಿನಗೆ ಆ ಊರಿನ ಒಡನಾಟವಿದೆ  'ಮಡೆ ಮಡೆಸ್ನಾನ' ಬಗ್ಗೆ ಬರಿ ಅಂತ ಆದೇಶಿಸಿದ.ಬರೆಯುವ  ಮುನ್ನ ತುಂಬಾ ಆಲೋಚಿಸಿದ್ದೆ.ಧರ್ಮ,ದೇವರು,ಜಾತಿ,ಪಕ್ಷಗಳಲ್ಲಿನ ಭೇದ ಪ್ರಭೇದಗಳ ಗುರುತಿಸಲು ನನ್ನಿಂದ  ಇಂದಿಗೂ ಸಾಧ್ಯವಾಗಿಲ್ಲ.ಅಂತಹುದರಲ್ಲಿ ಒಂದು ಧರ್ಮ ಜಾತಿ ಅಲ್ಪ ಮಟ್ಟಿಗಿನ ರಾಜಿಕೀಯ  ಹಾಗು ನಂಬಿಕೆಗಳಿಗೆ ಸುತ್ತಿ ಹಾಕಿಕೊಂಡಂತಹ 'ಮಡೆ ಮಡೆಸ್ನಾನ' ಕುರಿತಾಗಿ  ಹೇಳುವುದು ತುಂಬಾ ಇದ್ದರೂ ವಿಷಾದ ಕಾಡುತ್ತಿತ್ತು.ಟಾಮ್(ಸತೀಶ್ ನಾಯಕ್) ನ ಬ್ಲಾಗಿನ  ಹಾಗೆ  ನನ್ನ ಬ್ಲಾಗಿಗೂ ದೊಡ್ದಪ್ಪ ರಾಘನೆ.ನಿನ್ನದೇ ಬ್ಲಾಗ್ ತೆರೆ ಅಂತ ರಾಘ ದುಂಬಾಲು ಬೀಳದಿದ್ದರೆ ಪ್ರಾಯಶ  ಈ ಬ್ಲಾಗ್ ಹುಟ್ಟುತ್ತಿರಲಿಲ್ಲ.ನಮ್ಮ ರಾಘನ ಸಂಪೂರ್ಣ ರಾಗಾವನ್ನು  ಇನ್ನೊಂದು ದಿನ ಹಾಡುತ್ತೇನೆ.ಸಧ್ಯಕ್ಕೆ ಅವನ ಮಾತನ್ನು ಮೀರಬಾರದೆಂದು ಈ ಬರಹ.


ಕುಮಾರ ಧಾರೆ

ಬೆಂಗಳೂರಿನಿಂದ  ಸಕಲೇಶಪುರ ತಲುಪಿ ಅಲ್ಲಿಂದ  ಶಿರಾಡಿ ಘಾಟಿನ ರಸ್ತೆ ಹಿಡಿದು ಅಂಕು ಡೊಂಕಿನ ತಿರುವುಗಳ ಉದ್ದಕ್ಕೂ ಕಾಣುವ  ವನ ರಾಶಿಯ  ಸೌಂದರ್ಯ ಸವಿಯುತ್ತ ೩೦ ಕಿಲೋಮೀಟರ್ ಕೆಳಗಿಳಿದರೆ  ಗುಂಡ್ಯ ಸಿಗುತ್ತದೆ.ಗುಂಡ್ಯದ ಸಮೀಪ ಎಡಕ್ಕೆ ಸಾಗುವ ನೇರ ದಾರಿಯಲ್ಲಿ ೨೨ ಕಿ-ಲೋಮೀಟರ್ ಚಲಿಸುತ್ತ ಹೋದರೆ ನಮ್ಮನ ಸ್ವಾಗತಿಸೋದು ಕುಮಾರ ಧಾರೆ ಹೊಳೆ.ಪ್ರಕೃತಿಯ ಮಡಿಲಿಂದ ನಿರ್ಮಲವಾಗಿ ಊರಿನತ್ತ  ಹರಿಯುವ ಹೊಳೆಯ ಮೇಲೆ ಗಟ್ಟಿಯಾಗಿ ಚಾಚಿಕೊಂಡಿರುವ ಸೇತುವೆ ದಾಟಿ  ಹೆಬ್ಬಾಗಿಲು ಸಮೀಪಿಸುತ್ತಲೇ  ತನ್ನ ತಾನೇ ಕಣ್ಣುಗಳು ಅರಳಿಕೊಳ್ಳುತ್ತವೆ ಕೈಗಳು ಪ್ರಕೃತಿಗೆ ವಂದಿಸುತ್ತವೆ ಮನದಲ್ಲೇನೋ ಪುಳಕ ಸುಬ್ಬಪ್ಪನನ್ನ ಕಾಣುವ ಕಾತುರ ಹಿಮ್ಮಡಿಗೊಳ್ಳುತ್ತೆ.ಸುಬ್ಬಪ್ಪ ನನಗ್ಯಾವತ್ತು ದೇವರೆನಿಸಲೇ ಇಲ್ಲ ಅವನು ಗೆಳೆಯನಷ್ಟೇ ಆಪ್ತ.ಎಂದಿಗೂ ಭಯ ಉಲ್ಬಣಿಸಿದಿಲ್ಲ ಭಕ್ತಿಗಿಂತ ಅವನಲ್ಲಿ  ಸ್ನೇಹ ಅಂಕುರಿಸಿದ್ದೆ ಜಾಸ್ತಿ.
ಕುಕ್ಕೆ ಸುಬ್ರಹ್ಮಣ್ಯ 


ಸಣ್ಣತರಲ್ಲಿ ನಾಗಪ್ಪ ಊರಿನ ನಮ್ಮ ಮನೆಯ  ಹಿತ್ತಲಿಗೆ ಬಂದಾಗ ಅಬ(ಅಜ್ಜಿ) ಒಂದು ಮೊಟ್ಟೆ ಇಟ್ಟು ಕೈ ಮುಗಿಯಲು ಹೇಳುತ್ತಿದ್ದಳು.ನಮ್ಮೂರಿನಲ್ಲಿ ಆ ದಿನಗಳಲ್ಲಿ ದಾರಿಗೊಂದು ಕೆರೆ ಹಾವು ನೋಡ ಸಿಗುತ್ತಿತ್ತು .ಕೆಲವೊಮ್ಮೆ ಸರ್ಪಾಧಿಪತಿ ನಾಗಪ್ಪನ ದರುಶನವು ಆಗುತ್ತಿತ್ತು.ಅಷ್ಟಿದ್ದರು ಅಲ್ಲಿ ಹಾವು ಕಡಿದು ತೊಂದರೆಗಿಡಾದವರು    ಮರಣವನಪ್ಪಿದವರೆ  ಇಲ್ಲ.ಮನೆ ಮಕ್ಕಳಿಗೆ ಇಷ್ಟು ಸಲುಗೆ ಕೊಟ್ಟಿರುವ ದೇವರಲ್ಲಿ  ಭಯ ಭೀತಿ ಎಲ್ಲಿಂದ ಆವರಿಸಿಕೊಳ್ಳಬೇಕು ಹೇಳಿ? ಹಾಗೆ,ನಾವೂ ಕೂಡ ಅದಕ್ಕೆ ಕಿಟಲೆ ಮಾಡುವುದಾಗಲಿ ತೊಂದರೆ ಕೊಡೋದಾಗ್ಲಿ ಮಾಡಿದ್ದಿಲ್ಲ ಬಿಡಿ.ಅದನ್ನ ಕಂಡು ತೀರ ಬೆದರೋದು ಇಲ್ಲ.ಅದರ ಸುದ್ಧಿಗೆ ನಾವು ಹೋಗಲ್ಲ ನಮ್ಮ ಸುದ್ಧಿಗೆ ಅದು ಬರೋಲ್ಲ ಥೇಟ್  ಬೆಂಗಳೂರಿನ ನೆರೆ ಕೆರೆಯವರಂತೆ!ಕಂಡಾಗ ಕೈ ಮುಗಿಯುವುದಷ್ಟೇ.ಎಲ್ಲಾ  ಪುಣ್ಯ ಕ್ಷೇತ್ರದಲ್ಲೂ ಇಂತದೊಂದು ಅದ್ಬುತ ಅಗೋಚರವೆನಿಸುವ  ಹುಬ್ಬೇರಿಸುವಂತ  ಸಂಗತಿಗಳು ಇದ್ದೆ ಇರುತ್ತವೆ.ನಾವು ಸಾಕ್ಷಿಯಾಗುವ ಅದ್ಬುತಗಳಿಗೆ ಅಲ್ಲಿನ ಜನರು ಪಾಲಿಸಿಕೊಂಡು ಬಂದಿರುವ  ಜೀವನಶೈಲಿ ಅವರಿಗೂ ಪರಿಸರಕ್ಕೂ ಇರುವ  ಸಂಪರ್ಕ ಹೊಂದಾಣಿಕೆಯೂ ಒಂದು  ಕಾರಣ,ಅದಕ್ಕೆ ಪೂರಕವಾಗಿ ಇವೆಲ್ಲ ಆಗುತ್ತವೆ ಅಂದರೆ  ಉತ್ಪ್ರೇಕ್ಷೆಯಲ್ಲ .ಹಿಂದೊಮ್ಮೆ ಇಡಿ ಭಾರತ ಭೂಮಿಯೇ ಪುಣ್ಯ ಕ್ಷೇತ್ರವಾಗಿತಂತ್ತೆ.ಈಗಾ ಹಾಗೆಂದರೆ ನಿಶ್ಚಯವಾಗಿ ಪಾಪ ಗಂಟು ಬೀಳಬಹುದು! ನಮ್ಮದು ಇಂದಿಗೂ ಪುಣ್ಯ ಭೂಮಿಯೇ ನಿಜ,ನಾವು ನಿವಾಸಿಗಳು ಪುಣ್ಯತ್ಮರಾಗಿ ಉಳಿದಿಲ್ಲವಷ್ಟೇ.


ಸಾಮಾನ್ಯವಾಗಿ  ಕುಕ್ಕೆ ಸುಬ್ಬಪ್ಪನಲ್ಲಿಗೆ   ಗ್ರಹ ದೋಷಗಳಿಂದ ನರಳುತಿರುವವರು ಮಕ್ಕಳಿಲ್ಲದವರು ಮದುವೆ ಆಗದವರು ಮತ್ತೆ ಪ್ರಮುಖವಾಗಿ ಅರೋಗ್ಯ ಸಮಸ್ಯೆಯಿಂದ ಅದರಲ್ಲೂ ಚರ್ಮ ರೋಗ ಭಾದಿತರು ಹರಸಿ ಕೊಳ್ಳುತ್ತಾರೆ ಮೂರೆ ಹೋಗುತ್ತಾರೆ.ದಿನಲೂ ಸಾವಿರಾರು ಜನರನ್ನು ಆಕರ್ಷಿಸುವ ಈ ದೇವರಿಗೆ ವರ್ಷಕೊಮ್ಮೆ ಮಾರ್ಗಶಿರ ಮಾಸದಲ್ಲಿ ಉತ್ಸವವೊಂದು ಜರಗುತ್ತದೆ.ಅದುವೇ ಚಂಪಾ ಷಷ್ಠಿ ಉತ್ಸವ.

ಬ್ರಹ್ಮರಥ - ಚಂಪಾ ಷಷ್ಠಿ,2012
ಈ ಚಂಪಾ ಷಷ್ಠಿ ಯಾ ಪ್ರಮುಖ ಮತ್ತು ಅನೋಖ ಅನಿಸಿದ ಸಧ್ಯಕ್ಕೆ ಸುದ್ಧಿಯಲ್ಲಿರುವ ಆಚರಣೆಯೆಂದರೆ "ಮಡೆಸ್ನಾನ".ಇದರಲ್ಲಿ ಮೂಲತಃ  ಮೂರು ಪ್ರಕಾರಗಳಿವೆ,ಮಡೆಸ್ನಾನ,ಮೂಲೆ ಮಡೆಸ್ನಾನ ಹಾಗು ಮಡೆ ಮಡೆಸ್ನಾನ.ಇವನ್ನು ಸತತ ಮೂರು ದಿನಗಳ ಕಾಲ  ಅಂದರೆ ಚೌತಿ,ಪಂಚಮಿ ಮತ್ತು ಷಷ್ಠಿ ಯಂದು ಭಕ್ತಾದಿಗಳು ಮಾಡುತ್ತಾರೆ.ಮಡೆಸ್ನಾನವೆಂದರೆ ಉರುಳು ಸೇವೆ ಎಂದರ್ಥ.ದೇವಸ್ತಾನದ ಹೆಬ್ಬಾಗಿಲ ಎದುರು ಹರಿಯುವ ಕುಮಾರ ಧಾರೆ ಹೊಳೆಯಲ್ಲಿ ಮುಳುಗಿ ಅಲ್ಲಿಂದ ಸುಮಾರು ೨ ಕಿಲೋಮೀಟರ್  ಉರುಳುತ್ತಲೇ  ದೇವಸ್ಥಾನದ ಗರ್ಭ ಗುಡಿಯ ಹೊರಗಿನ ಆವರಣ ತಲುಪುವ ಸೇವೆ ಇದು.ಕುಮಾರ ಪರ್ವತದ ತಪ್ಪಲಿನಲ್ಲಿ ಉಗಮಿಸುವ ಈ ಹೊಳೆಯು ಅಲ್ಲಿಂದ ಹರಿದು ಬರುವಾಗ ಅನೇಕ ಗಿಡಮುಲಿಕೆಯ ಸಾರವನ್ನು ಹೊತ್ತು ತರುತ್ತದೆ.ಔಷಧಿ ಗುಣವಿರುವ ಈ ಜಲ ಹಾಗು ನೆಲದಲ್ಲಿ ಮುಳುಗೆದ್ದರೆ ರೋಗ ರುಜಿನಗಳು ಅದರಲ್ಲೂ ಮುಖ್ಯವಾಗಿ ಚರ್ಮ ರೋಗದಿಂದ ಮುಕ್ತಿ ಹೊಂದಬಹುದೆಂಬ  ನಂಬಿಕೆ ಅನಾಧಿ ಕಾಲದಿಂದಲೂ ಚಾಲ್ತಿಯಲ್ಲಿದೆ.ಮೂಲೆ ಮಡೆಸ್ನಾನವೆಂದರೆ ದೇವಸ್ಥಾನದ ಒಳಾಂಗಣದ ನಾಲ್ಕು ಮೂಲೆ ಗಳಲ್ಲಿ ಮಾತ್ರ ಉರುಳಿ ದೇವರಿಗೆ ಸೇವೆ ಸಲ್ಲಿಸುವುದು.


ಮಡೆ ಮಡೆಸ್ನಾನ -ಚಂಪಾ ಷಷ್ಠಿ,2012
ಇನ್ನು "ಮಡೆ ಮಡೆಸ್ನಾನ"ವೆಂದರೆ ಎಂಜಲು('ಮಡೆ' ತುಳು ಭಾಷೆಯಲ್ಲಿ) ಮೇಲಿನ ಉರುಳು ಸೇವೆ ಎಂದರ್ಥ.ನಾವು ಗಮನಿಸಿದರೆ ಚರ್ಮ ರೋಗಗಳಿಗೆ ಮೂಲತಃ ದೇಹದ ಒಳಗಿನ ಚಿಕಿತ್ಸೆಯ ಜೊತೆ ಜೊತೆಗೆ  ಹೊರಗಿನ  ಭಾಗಕ್ಕೂ ಲೇಪನಗಳ ಹಚ್ಚಿ ಚಿಕಿತ್ಸೆ ನೀಡಲಾಗುತ್ತೆ.ಸುಬ್ರಮಣ್ಯಕ್ಕೆ ಭೇಟಿ ಕೊಟ್ಟವರೆಲ್ಲರೂ ದೇವಸ್ಥಾನದ ರುಚಿಕಟ್ಟಾದ  ಊಟವ  ಮೆಚ್ಚಿ ಬಾಯಿ ಚಪ್ಪರಿಸಿ ಹೊಗಳುವವರೇ.ಹಿಂದೆ ಈ ಮಡೆ ಸ್ನಾನಗಳು ಹುಟ್ಟಿದ ದಿನಗಳಲ್ಲಿ ಅಲ್ಲಿನ ನೆಲದಲ್ಲೇ ಬೆಳೆದ ಬತ್ತ ಹಾಗು ಇತರ ಪಧಾರ್ಥಗಳಿಂದ ಸಿದ್ದವಾಗುತ್ತಿದ್ದ ಸತ್ವಯುತ ಊಟದಲ್ಲಿ ರೋಗನಿರೋಧಕ ಅಂಶಗಳು ಎತೇಚವಾಗಿದ್ದವು.ಆ ಮೂಲಕ ಇಂತದೊಂದು ಆಚರಣೆ ರೂಢಿಗೆ ಬಂದಿರಬೇಕು.ಎಂಜಿಲು ಸಹ  ಔಷಧಿ ಗುಣವುಳ್ಳದ್ದಾದರು ಇಲ್ಲಿ  ಪರರ ಎಂಜಲಿಗೆ ಯಾವ ರೀತಿ  ಪ್ರಾಮುಖ್ಯತೆ ಮಹಾತ್ಮೆ ಇದೆ ಎಂಬುದು ಸ್ಪಷ್ಟವಾಗಿಲ್ಲ.ಚಂಪಾ ಷಷ್ಠಿಯಂದು ದೇವರಿಗೆ ಮಾಡಿ ಬಡಿಸಿದ ನೈವೇದ್ಯವನ್ನು ದೇವಸ್ಥಾನದ ಆವರಣದಲ್ಲಿ ಉಂಡು ಒಗೆದ  ಎಂಜಿಲೆಲೆಗೆ  ಶ್ರೇಷ್ಠತೆ ಅದೇಗೋ ಸಂಧಿ ಬಿಟ್ಟಿದೆ.ಈ ನಂಬಿಕೆ ಕಲ್ಪಿಸಿರುವ ಶ್ರೇಷ್ಟತೆಯೇ ಎಂಜಿಲೆಲೆಯ  ಮಡೆಸ್ನಾನಕ್ಕೆ ಬುನಾದಿ ಎನ್ನಬಹುದು.ಎಂಜಿಲೆಲೆಯ ಮಡೆಸ್ನಾನದ ಬಗ್ಗೆ ನನ್ನದೂ ಸಂಪೂರ್ಣ ಸಹಮತಿ ಇಲ್ಲದಿದ್ದರೂ ಹೈ ಕೋರ್ಟಿನ ಆಜ್ಞೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದಕ್ಕೆ  ಸಂಭ್ರಮಿಸಿದ್ದೆ.ನಮ್ಮ ಮಾನ್ಯ ಹೈ ಕೋರ್ಟ್ ಯಾರು ತಿನ್ನದ ಊಟದ ಎಡೆಗಳ  ಮೇಲೆ ಮಡೆ ಸ್ನಾನ ಮಾಡಲು ಆದೇಶ ಸೂಚಿಸಿದ್ದು ಎಂಜಿಲೆಲೆಯ ಮಡೆಸ್ನಾನಕ್ಕಿಂತಲೂ ಅನಿಷ್ಟ ಅಮಾನವೀಯ ಖಂಡನೀಯ ನನ್ನ ಪ್ರಕಾರ..ಅಲ್ಲಾ,ತಿನ್ನಲು ಅನ್ನವಿಲ್ಲದೆ  ಪೌಷ್ಟಿಕತೆಯ ಕೊರತೆಯಿಂದಾಗಿ ಸಾಯುವ ಜನರಿರುವ ದೇಶದಲ್ಲಿ ಯಾರಿಗಾದರು ಆಹಾರವಾಗಬಲ್ಲಂತಹ  ನೂರಾರು ಊಟದ ಎಲೆಗಳ ಬಡಿಸಿ ಉರುಳಾಡುವುದೆಂದರೆ?? ಆಚರಣೆಯ ರೂಪದಲ್ಲಿ ಅನ್ನಕ್ಕೆ ಮಾಡುವ ಅವಮಾನವೆ ಸರಿ ಅದು!

ಚಂಪಾ ಷಷ್ಠಿ,2012
ಮತ್ತೆ ಇಲ್ಲಿನ ಆವರಣದೊಳಗೆ ಊಟ ಮಾಡಲು ಒಂದು ಪ್ರತ್ಯೇಕ ಮೇಲ್ ವರ್ಗದವರಿಗೆ ಮಾತ್ರ  ಅವಕಾಶವಿದೆ.ಸಾಮಾನ್ಯ ಭಕ್ತಾ ವೃಂದ ಅವಕಾಶವಂಚಿತರಾಗಿದ್ದಾರೆ.ಇಲ್ಲಿ ನಿಜವಾದ ಫಲಾನುಭವಿಗಳು ದೇವರ ಸನ್ನಿಧಿಯಲ್ಲಿ  ಎಲೆ ಊಟ ಮಾಡಿದವರ ಅಥವಾ ಅದರಲ್ಲಿ ಉರುಳುವವರ ಅನ್ನೋದು ನನ್ನ ವಯಕ್ತಿಕ ಗೊಂದಲಗಳಲ್ಲೊಂದು.ಗರ್ಭಗುಡಿಯ  ಒಳಗಿನ  ಪ್ರವೇಶಕ್ಕಾದರು ಮಡಿ ಮೈಲಿಗೆ ಮೊದಲಾದ  ಸಬೂಬುಗಳು ಒಪ್ಪುವಂತದ್ದು,ಆದರೆ ದೇವಸ್ಥಾನದ ಆವರಣದೊಳಗೆ ಕೇವಲ ಒಂದು ವರ್ಗಕ್ಕೆ ಮಾತ್ರ ಪ್ರಸಾದ(ಎಲೆ ಊಟ) ಸ್ವೀಕರಿಸಲು ಹಕ್ಕು ನೀಡಿದ್ದಾರೆ.ಎಲ್ಲ ಜಾತಿ ಧರ್ಮದವರಿಗೂ ಓಡಾಡುವ ಅವಕಾಶವಿರುವಾಗ ಊಟದ  ವಿಷಯದಲ್ಲಿ ಮಾತ್ರ ಬೇರೆಲ್ಲರಿಗೂ ನಿರ್ಭಂದನೆ ಯಾಕೆ? ಇದಕ್ಕುತ್ತರ ಸಾಕ್ಷಾತ್ ನಮ್ಮ ಸುಬ್ಬಪ್ಪನೆ ನೀಡಬೇಕೆನೋ.ಆದರೆ ಯಾಕೋ ಏನೋ ಇವೆಲ್ಲದಕ್ಕಿಂತಲೂ  ಸುದ್ಧಿ ಆಗಿದ್ದು ಮಡೆ ಮಡೆಸ್ನಾನದಿಂದ ಮಲೆಕುಡಿಯ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ.

ಕುಕ್ಕೆ ಸುಬ್ಬಪ್ಪ ತಮ್ಮ ಇಷ್ಟಾರ್ಥ ನೆರವೇರಿಸಲಿಯೆಂದು ದೋಷ  ಕಾಯಿಲೆಗಳು  ಗುಣವಾಗಲೆಂದು ಹರಕೆ ಹೊರುವ ಅಥವಾ ನೆರವೇರಿಸಿದಾಗ  ಕೃತಜ್ಞರಾಗಿ  ಹರಕೆ ತೀರಿಸುವ ಪದ್ದತಿಯಾಗಿ ಈ ಮಡೆ ಸ್ನಾನಗಳು ಆಚರಣೆಗೆ ಬಂದವು.ಇದು ಶತಮಾನಗಳಿಂದಲೂ ಊರಿನನವರು ನಡೆಸಿಕೊಂಡು ಬಂದಿರುವಂತಹ ಸಂಪ್ರದಾಯ.ಅಸಲಿಗೆ ಇದರಲ್ಲಿ ತೊಡಗಿಸಿಕೊಳ್ಳೋಕೆ ಯಾವತ್ತು ಯಾರನ್ನು ಒತ್ತಾಯಿಸಿದಿಲ್ಲ.ಭಕ್ತರು ಸ್ವಯಿಚ್ಚೆಯಿಂದ  ಮನಸೋಪೂರ್ವಕವಾಗಿ ನಡಿಸುವ ಸೇವೆಯಿದು.ಮಜಾ ಏನಂದರೆ ಇಂದು ಇಲ್ಲಿ ಮಡೆಸ್ನಾನ ಸೇವೆಯಾಗಲಿ ಮಡೆ ಮಡೆಸ್ನಾನ  ಸೇವೆಯಾಗಲಿ ಅಲ್ಲಿನ ಮೂಲ ನಿವಾಸಿಗಳಿಗಿಂತಲೂ ಪರ ಊರಿನವರು ಮಾಡುವುದನ್ನ  ಹೆಚ್ಚು ಕಾಣಬಹುದು.ಇನ್ನು ಅವರನ್ನೆಲಾ ಬಲವಂತದಿಂದ ಮಾಡಿಸುವ ಪ್ರಶ್ನೆಯ ಏಳುವುದಿಲ್ಲ ಎಲ್ಲ ಅವರವರ ನಂಬಿಕೆಗೆ ಶ್ರದ್ದೆಗೆ  ಬಿಟ್ಟಂತ ವಿಚಾರಗಳು.ಆದರೆ ಎಲ್ಲೆಡೆ ಇದು ಪ್ರಚಾರವಾಗಿದ್ದು ಮಾತ್ರ ಕೇವಲ ಒಂದು ಜನಾಂಗ ನಡೆಸುತ್ತಿರುವ ಸೇವೆಯೆಂದು! ಪುರಾತನ ಕಾಲದಿಂದಲೂ ಸ್ವಯಿಚ್ಛೆಯಿಂದಲೇ ಮಡೆ ಮಡೆಸ್ನಾನವನ್ನು ಇಲ್ಲಿನ ಮಲೆಕುಡಿಯ ಜನಾಂಗದವರು ಸೇರಿದಂತೆ  ಬ್ರಾಹ್ಮಣರು ಆಚಾರಿಗಳು ಮುಸುಲ್ಮಾನರು ಬೇರೆ ಇತರರೂ ಮಾಡುತ್ತಾ ಬಂದಿದ್ದಾರೆ.

ಪಂಚಮಿ ರಥ - ಚಂಪಾ ಷಷ್ಠಿ,2012


ಆದರೆ ಇದೀಗ ಈ ಪುಣ್ಯ ಕ್ಷೇತ್ರ ದೇಶಾದ್ಯಂತ ಹೆಚ್ಚು ಪ್ರಸಿದ್ಧಿ ಹೊಂದಿದ್ದೆ ತಡ ಕಟ್ಟು ಕಥೆಗಳು ಹಬ್ಬತೊಡಗಿವೆ.ಕಳೆದ ವರ್ಷ ಮಡೆ ಸ್ನಾನದ ನೆಪದಲ್ಲಿ ದಲಿತರಾದ ಮಲೆಕುಡಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪ್ರತಿಬಿಂಬಿಸಲಾಯಿತು.ಕರ್ನಾಟಕ ತಮಿಳುನಾಡಿನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇದ್ದರೂ ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ ಅಲ್ಲವೇ? ಹಾಗೆಯೇ ಇಲ್ಲಿಯೂ ಆದದ್ದು ಎಂದುಕೊಳ್ಳಿ.ಮೇಲ್ ವರ್ಗದ ಜನ ಮತ್ತು ದಲಿತ ಮಲೆಕುಡಿಯರ ನಡುವೆ ಎಲ್ಲವೂ ಸರಿ ಇದೆ ಎನ್ನಲಾಗದು.ದೇವಸ್ಥಾನದ ಆಡಳಿತ ಪರಿವಿಧಿಯಲ್ಲಿ ಎಲ್ಲರಿಗೂ ಸಮಾನ  ಹಕ್ಕು,ಉದ್ಯೋಗಾವಕಾಶಗಳು ನೀಡಲಾಗಿಲ್ಲ ಎಂಬ ಕೂಗು ಇಲ್ಲಿ ಕೇಳಿ ಬರುತ್ತದೆ.ಒಳ ಜಗಳ, ಒಂದು ವರ್ಗದ ಮೇಲ್ಗೈ,ದಬ್ಬಾಳಿಕೆ ಇದ್ದದ್ದೇ ...ಹಾಗಂತ  ತಮ್ಮ ಅಸ್ಥಿತ್ವ ಪ್ರತಿನಿಧಿಸುವ ತಮ್ಮ ಹೊಟ್ಟೆಪಾಡು ನೀಗಿಸುತ್ತಿರುವ ಎಲ್ಲದಕ್ಕೂ ಮಿಗಿಲಾಗಿ ಭಾವನಾತ್ಮಕ ಸಂಭಂದವಿರುವ ದೇವಸ್ಥಾನದ  ಆಚರಣೆಗಳ ವಿರುದ್ದ ತಮ್ಮ ಜನಾಂಗದ  ಹೆಸರನ್ನು ಅಸ್ತ್ರವಾಗಿ ಬಳಸಿಕೊಂಡು ಇಲ್ಲದ ಆರೋಪಗಳ ಮಳೆಗರಿಸಿದರೆ ಯಾರು ತಾನೇ ಸುಮ್ಮನಿದ್ದಾರು ಹೇಳಿ? ಅಷ್ಟಕ್ಕೂ ಮಲೆಕುಡಿಯರಿಗೂ ಈ ದೇವರಿಗೂ ಹತ್ತಿರದ ನಂಟಿದೆ.ಊರಿನಲ್ಲಿ ಇವರನೊಳಕೊಂಡಂತೆ ಒಂದು ಕಥೆ ಕೇಳಿ ಬರುತ್ತದೆ.ಯುಗಗಳ ಹಿಂದೆ ಈ ಪ್ರದೇಶದ ಮಲೆಗಳಲ್ಲಿ ಕಾಡ್ಗಿಚ್ಚು ಹತ್ತಿಕೊಂಡಿತಂತೆ.ಬೆಂಕಿಯ ನಡುವೆ ದಿಗ್ಬಂದನವಾಗಿದ್ದ ದೇವ ಸರ್ಪವೊಂದರ ನರಳುವಿಕೆಯಾ ಕೂಗು ಭೇಟಿಗೆಂದು ಹೋಗಿದ್ದ  ಮಲೆಕುಡಿ ಜನಾಂಗದ ಪೂರ್ವಜರ ಕಿವಿಗೆ ಬಿದ್ದಿತಂತೆ.ಸರ್ಪದ ದಯನೀಯ ಸ್ಥಿತಿ ಕಂಡು ಅದನ್ನ ಬೆಂಕಿಯಿಂದ ರಕ್ಷಿಸಿ ತಾನು ತಂದ ಕುಕ್ಕೆ ಯಲ್ಲಿ ಇಟ್ಟುಕೊಂಡು ಬೆಟ್ಟದ ಕೆಳಗೆ ನಡೆಯುತ್ತಿದ್ದಾಗ ನಿನಗೆ ಭಾರವೆನಿಸಿದ ಜಾಗದಲ್ಲಿ ನನ್ನನಿಳಿಸು ಎಂಬ ಅಶರೀರ  ವಾಣಿ  ಕೇಳಿತಂತೆ.ಆ  ಮಾತಿನಂತೆ ಅದು  ಭಾರವಾಗ  ತೊಡಗಿದ ಜಾಗದಲ್ಲಿ ಇಳಿಸಲಾಯಿತು.ಆದರೆ ಆ ಸ್ಥಳ, ಬೆಂಕಿಯ ಭಯದಿಂದ ಬೆಂದಿದ್ದ ಸರ್ಪಕ್ಕೆ ಕ್ಷೇಮವೆನಿಸದ ಕಾರಣ ಅದು ಅಲ್ಲಿಂದ ಸುಮಾರು ಹೆಜ್ಜೆಯ ದೂರದಲ್ಲಿ  ಸುತ್ತಲೂ ನೀರು ಹರಿಯುವಂತ  ಸ್ಥಳದಲ್ಲಿ ತನ್ನನ್ನು ಬಿಡುವಂತೆ ಸೂಚಿಸಿತಂತೆ.ಸರ್ಪವನ್ನು ಮೂಲವಾಗಿ ಇಳಿಸಿದ ಸ್ಥಳವೆ 'ಆದಿ ಸುಬ್ರಹ್ಮಣ್ಯ' ಎಂದು ಪ್ರಸಿದ್ದವಾಯಿತು ಅಲ್ಲಿನ ಗರ್ಭ ಗುಡಿಯಲ್ಲಿ  ಇಂದಿಗೂ ಕೇವಲ ಹುತ್ತವನ್ನು ಮಾತ್ರ ಕಾಣಾಬಹುದಾಗಿದೆ.ದರ್ಪಣತೀರ್ಥ ಹಾಗು ಕುಮಾರ ಧಾರೆ ನದಿಯು ಕುಕ್ಕೆ ದೇವಸ್ಥಾನ  ಪ್ರದೇಶದ ಸುತ್ತಲೂ  ಹರಿದು ಹೋಗುತ್ತದೆ.ಕುಕ್ಕೆ ಯಲ್ಲಿ ಹೊತ್ತು ತಂದದ್ದಕ್ಕೆ ಸರ್ಪ ನೆಲೆಸಿದ ಸುತ್ತಲೂ ನೀರಿರುವ  ಜಾಗ "ಕುಕ್ಕೆ ಸುಬ್ರಹ್ಮಣ್ಯ" ಎಂದು ನಮಾಕರಣಗೊಂಡಿದೆ ಎಂಬುದಾಗಿ ಕಥೆ ಸಾರುತ್ತದೆ.ಹಾಗಾಗಿಯೇ ಇಲ್ಲಿನ ದೇವಸ್ಥಾನದ  ಪದ್ದತಿಯನ್ನು ದೂಷಿಸುತ್ತಿರುವವರ ಎದುರು ದೇವಸ್ಥಾನದ ಮಲೆಕುಡಿಯ ಕಾರ್ಮಿಕರು ಸಿಡಿದೆದ್ದಿದ್ದು.ಇಡಿ ಮಲೆಕುಡಿಯ ಸಮುದಾಯ ಇವರ ಬೆನ್ನ ಹಿಂದೆ ನಿಂತ್ತಿದ್ದು.ಅಂದು ಪ್ರತಿಭಟಿಸಲು ಬಂದ  ದಲಿತ ಮುಖಂಡರು, ತಮ್ಮ ವಿರುದ್ದ ನಿಂತ ದಲಿತ ಮಲೆಕುಡಿಯರ ಕುರಿತಾಗಿ,"ನೀವೆಲ್ಲಾ  ದೌರ್ಜನ್ಯವನ್ನು ಸಹಿಸುತ್ತಿರುವ ಅನಾಗರಿಕರು" ಎಂದಾಗಲೇ ಅವರೊಡನೆ  ಕೈ ಕೈ ಮಿಲಾಯಿಸಿ ಕಡೆಗೆ ಜೈಲಿಗೂ ಹೋಗಿ ಬಂದರು.ಮಲೆಕುಡಿಯರ ಈ ವರ್ತನೆ  ಹಿಂದೆ  ಮೇಲ್ವರ್ಗ ಜನರ ಆಡಳಿತ ಮಂಡಳಿಯ  ಕುಮ್ಮಕ್ಕಿತ್ತೆಂದು ಹೇಳುವವರು ಇದ್ದಾರೆ.ಅದು ಒಂದು ಮಟ್ಟಿಗೆ ಸರಿಯೂ ಹೌದು ಯಾಕಂದರೆ ಆರೋಪ ಮೇಲ್ವರ್ಗದ ಜನ ಹಾಗು ಮಲೆಕುಡಿಯರಿಬ್ಬರಿಗೂ ಸಂಭಂದಿಸಿದ್ದು ಇದಕ್ಕೆ ಇಬ್ಬರೂ ಕೂಡಿ ಪ್ರತಿಭಟಿಸಬೇಕಿತ್ತು.ಸರ್ವರೆದುರು ದಲಿತ ಸಂಘಟನೆಗಳು ನಿರ್ಮಿಸಿದ ಗೊಂದಲಕ್ಕೆ ಉತ್ತರಿಸಬೇಕಿತ್ತು ಹಾಗಾಗಿದ್ದರೆ ಇದು ಇಷ್ಟು ದೂರ ಮುಂದುವರೆಯುತ್ತಿರಲಿಲ್ಲವೇನೋ.ಆದರೆ ಅಂದು ಅವರು ಸಂಪೂರ್ಣವಾಗಿ ಹಿಂದೆ ಸರಿದು ಮೌನ ತಾಳಿದರು ಮಲೆಕುಡಿಯರಿಗೆ ನಿಮ್ಮ ದೇವರನ್ನು ನೀವೇ ಕಾಪಾಡಿಕೊಳ್ಳಿ ಎಂದು ಕಿಚ್ಚೆಬಿಸಿ ಉತ್ತರಿಸಲು ಮುಂದೆ ಬಿಟ್ಟಿದ್ದಾರೆ.ಅದೇನೇ ಆಗಲಿ ನಂತರ  ಜೈಲು ಸೇರಿದವರನ್ನ ರಾಜ ಮರ್ಯಾದೆ ಇಂದಲೇ ಕರೆತಂದರೆನ್ನಿ.ಅಂತು ಇಂತೂ  ಭಿನ್ನಾಭಿಪ್ರಾಯಗಳ ನಡುವೆಯೂ ಸ್ನೇಹ ಸೌಹಾರ್ದತೆಯಿಂದ ಬಾಳುತ್ತಿರುವ ಇಲ್ಲಿನವರ ನಡುವೆ ವಿಷ ಬೀಜ ನೆಡುವಲ್ಲಿ ವಿಫಲವಾಯಿತು ನಾಗರಿಕ(ಎನಿಸಿಕೊಂಡ) ಸಮಾಜ.

ಮಡೆ  ಮಡೆಸ್ನಾನ ದಿಂದ ಕಷ್ಟಗಳು ಪರಿಹಾರವಾಗಿತೆ,ಕಾಯಿಲೆಗಳು  ಗುಣವಾಗಿತೆ ಅನ್ನೋ ಪ್ರಶ್ನೆಗಳು ಹಲವರದ್ದು.ಹಾಲು ಕುಡಿಯುವ ಎಳೆಗೂಸು ಮಾತ್ರ ಅಮ್ಮನ ಹಾಲಿನ ರುಚಿ ಬಲ್ಲದು ಅಲ್ಲವೇ? ಅಂತೆಯೇ ಅದು ಕೆಟ್ಟಾಗ ಮಗುವಿನ ರುಚಿಗೆ  ಆರೋಗ್ಯಕ್ಕೆ ತಕ್ಕದಾಗಿ ಶೋಧಿಕರಿಸಿ ಉಣಿಸ ಬೇಕೇ  ಹೊರತು ನಾವು ದೊಡ್ಡವರ ನಾಲಿಗೆಗೆ ಅದು ಎಷ್ಟು ಸಲ್ಲುತ್ತದೆ ಅನ್ನೋದರ ಮೇಲಲ್ಲ.ಹಾಗೆ  ಧರ್ಮ ದೇವರನ್ನೋಳಗೊಂಡ ನಂಬಿಕೆಯೊಂದು  ಮೌಡ್ಯತೆ ಎಂದು  ಬಿಂಬಿತವಾದ ಹಿನ್ನಲೆಯಲ್ಲಿ  ಅದನ್ನು ಆಸ್ತಿಕರ ದೃಷ್ಟಿಕೋನದಿಂದ ಚರ್ಚಿಸಬೇಕೆ ವಿನಹ ನಾಸ್ತಿಕರ ದೃಷ್ಟಿಕೋನ ಇಟ್ಟುಕೊಂಡು ವಾದಕ್ಕಿಳಿಯುವುದು ಸಮಂಜಸವಲ್ಲ.ಮಡೆ ಸ್ನಾನದಿಂದ ಅರೋಗ್ಯ ವೃದ್ಧಿಸುತ್ತದೆ ರೋಗ ರುಜಿನಗಳು ಇಲ್ಲವಾಗುತ್ತದೆ ದೇವರ ಕೃಪೆಗೆ ಪಾತ್ರರಾಗುತ್ತೇವೆ  ಎಂಬುದು  ಜಾತ್ಯಾತಿತಾರಾದ  ಭಕ್ತರ  ನಂಬಿಕೆ.ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಮ್ಮ ಸಂವಿಧಾನ ಸರ್ಕಾರಕ್ಕೆ ನೀಡಿದೆ.ಧಾರ್ಮಿಕ ನಂಬಿಕೆಗಳನ್ನ ಒಬ್ಬರ ಮೇಲೆ  ಬಲವಂತಾವಾಗಿ ಹೇರಿದಾಗ ಅದರಿಂದಾಗಿ ಒಬ್ಬ ವ್ಯಕ್ತಿಗೆ ಅಥವಾ ಸಮೂಹಕ್ಕೆ ಮಾನಸಿಕ ದೈಹಿಕ ಹಿಂಸೆ ತೊಂದರೆಗಳಾದಾಗ  ಅಂತಹುಗಳನ್ನು ತಡೆಯುವ ನಿಷ್ಕ್ರಿಯೇಗೊಳಿಸುವ ಹಕ್ಕೂ  ಸರ್ಕಾರಕ್ಕಿದೆ.ಈ ಆಚರಣೆಯಲ್ಲಿ  'ಎಂಜಿಲಿನ' ಮೇಲೆ ಉರುಳುತಿದ್ದಾರೆ ಅನ್ನುವುದ ಬಿಟ್ಟರೆ ಬೇರೆ ಯಾವ ತರನಾದ ದೌರ್ಜನ್ಯವು ಯಾರ ಮೇಲೂ ನಡೆಯುತ್ತಿಲ್ಲ.ಹಾಗಾಗಿ ಇಡಿ ಆಚರಣೆಯನ್ನೇ ಸಾರಾಸಗಟು ವಿರೋಧಿಸುವುದು ಎಲ್ಲಿಯ ನ್ಯಾಯ? ಈ ವರ್ಷ ಎಂದಿನಂತೆ ಮಡೆ ಸ್ನಾನ ನಡೆಸಲು ಸುಪ್ರೀಂ ಕೋರ್ಟ್  ಹಸಿರು ನಿಶಾನೆ ತೋರಿಸಿತು.ಕೊಂಚ ತಿದ್ದು ಪಡಿಯೊಂದಿಗೆ ಇದನ್ನ ಮುಂದುವರಿಸುವುದು ಒಳಿತೆಂಬುದು ನನ್ನ ವಯಕ್ತಿವ ಭಾವನೆ.
    
ಸಾಮಾಜಿಕ ಸೋಂಕನ್ನ ತಡೆಗಟ್ಟುವ ಬದಲು ಅವನಿನ್ನೂ ದ್ವಿಗುಣಗೊಳಿಸುವ ಅಂತರವನ್ನು ಬೆಳೆಸಲು ಪುಷ್ಟಿ ಕೊಡುವ ಸಮೂಹಗಳ ಪ್ರಯತ್ನಗಳು ಆಗಾಗ  ನಡೆಯುತ್ತಲೆ ಇರುತ್ತಾವೆ.ಎಲ್ಲರಿಗು ಅವರವರದೇ ಸಮರ್ಥನೆಗಳಿರುವುದರಿಂದ ಇಲ್ಲಿ ಯಾರದ್ದು ತಪ್ಪುಯಾರದ್ದು ಸರಿ ಎಂದು ನಿರ್ದಿಷ್ಟವಾಗಿ ಹೇಳಾಲಾಗದು.ಮೇಲ್ ವರ್ಗದವರು ಹಾಗು ಆಡಳಿತ ಮಂಡಳಿಯೂ ಆರೋಪ ಹೊತ್ತರು ಸಂಯಮ ಕಾಯ್ದು ಕೊಂಡಿದ್ದು ಪ್ರಶಂಸನೀಯ.ಇನ್ನಾದರೂ ಅವರು  ದೇವಸ್ಥಾನದ ಕಾರ್ಯಗಳಲ್ಲಿನ  ಎಲ್ಲಾ ವಿಭಾಗದಲ್ಲೂ  ತೊಡಗಿಸಿಕೊಳ್ಳಲು ಊರಿನ ಇತರ  ವರ್ಗದ ಜನರಿಗೂ "ಸಮಾನವಕಾಶ" ದೊರಕಿಸಿಕೊಡುವಂತಾಗಲಿ.ಮಲೆಕುಡಿಯರು ತಾವು ಹಿಂದುಳಿದವರು ಅಂದು ಕೊಂಡರೆ ಎಂದಿಗೂ  ಹಿಂದೆಯೇ ಉಳಿದು ಬಿಡುತ್ತಾರೆ.ಅದನ್ನ ಬಿಟ್ಟು ಅವರು ಪರದೆಯ ಮುಂದೆ ಬರಬೇಕು.ಇದನ್ನು ಸಂಭಾಳಿಸಿದಂತೆ ಅವರೆಲ್ಲ  ಸಮಸ್ಯೆಗಳಿಗೂ ಸಂಘ ಸಂಸ್ಥೆಗಳ ನೆಚ್ಚದೆ  ತಾವೇ ಧೈರ್ಯವಾಗಿ ಮುನ್ನುಗ್ಗಿ ಪರಿಹಾರ ಹುಡುಕಿಕೊಳ್ಳುವಂತಾಗಬೇಕು.ಒಂದು ವರ್ಗಕ್ಕೆ ಅನ್ಯಾಯ ವಾಗುತ್ತಿದೆ ಎಂಬ ವಿಷಯ ಕಿವಿಮೀಟಿದಾಗ ಸಂಭಂದ ಪಟ್ಟ  ಸಂಘಟನೆಗಳು ಹೋರಾಟಕ್ಕಿಳಿಯುವುದು ಸಹಜವೇ.ದಲಿತ ಸಂಘಟನೆಯೂ ಅದನ್ನೇ ಮಾಡಿದೆ.ಆದರೆ ಅದಕ್ಕೂ ಮುನ್ನ ಬಂದ ಸುದ್ಧಿಗಳ ವಿಷಯ ಮಂಥನವಾಗಬೇಕಿತ್ತಲ್ಲವೇ? ಸತ್ಯಸಥ್ಯತೆಗಳ ಪರಿಶೀಲನೆ ನಡಿಸಬೇಕಿತ್ತು.ಯಾವುದೇ ಸಂಘದ ಹೋರಾಟವಾಗಿರಲಿ ಸುಮ್ಮನೆ ಗಲಭೆ ಸೃಷ್ಟಿಸುವ ಬದಲು ಅದನ್ನಾಶ್ರಯಿಸಿರುವ ಜನರ ಅಭಿವೃದ್ಧಿ ಪರನಾಗಿ ಚಿಂತನೆ ನಡಿಸಬೇಕು.ಪ್ರಚಲಿತವಾಗಿರುವ ಸುಳ್ಳಿನ ಪದರುಗಳ ಸರಿಸಿ ನಿಜ ಸಮಸ್ಯೆಯನ್ನು  ಸಂಘಟನೆಗಳು  ಗುರುತಿಸುವಂತಾಗಬೇಕು.

ಸಮಸ್ಯೆಗಳ ವಿರುದ್ದ  ಹೋರಾಡುವು ಮನೋಭಾವಕಿಂತಲೂ ಯಾವ ಸಮಸ್ಯೆಯನ್ನು ಆಯ್ದುಕೊಂಡರೆ ಎತ್ತಿಡಿದರೆ  ಅಧಿಕ ಜನರ ಗಮನ ಸೆಳೆಯಬಹುದು  ಬೆಂಬಲಗಳಿಸಬಹುದು  ಪ್ರಚಾರ ಗಿಟ್ಟಿಸಿಕೊಳ್ಳಬಹುದೆಂಬ ಲೆಕ್ಕಾಚಾರಗಳೇ ಮೇಲೈಸುತ್ತಿವೆ ಎಲ್ಲೆಡೆ.ಅಲ್ಲಿ ಸಮಸ್ಯೆ ಇರಲಿ ಬಿಡಲಿ ಹೆಚ್ಚು ಮನ್ನಣೆ ಸಿಗುವುದೆಂದರೆ  ಸಮಸ್ಯೆಗಳಿಗೆ ನವ ಹುಟ್ಟು ಕೊಟ್ಟು ಬಿಡುತ್ತಾರೆ.....ಅದಕ್ಕೊಂದು ನಿದರ್ಶನ ಮಡೆ ಮಡೆ ಸ್ನಾನದಲ್ಲಿನ ಮಲೆಕುಡಿಯರ ದೃಷ್ಟಾಂತ!

Sunday, December 16, 2012

ಸ್ಪೂರ್ತಿ

ಮೊನ್ನೆ ಕನಸಿನಲ್ಲಿ ನನ್ನ ಮೊದಲನೇ ಮಗು ಬಹಳ ನೊಂದುಕೊಂಡಿತ್ತು ...."ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯ" ಹಿನ್ನಲೆ ಗೀತೆಯೊಂದಿಗೆ!ಅರೆ ಇದ್ಯಾವ ಮಗು ಇವಳಿಗೆ  ಎಂದು ಗಾಬರಿಯಾಗಬೇಡಿ...  ಅದೇ ನಾ ಕನ್ನಡದಲ್ಲಿ ಬರೆದ ಮೊದಲ ಕವನ ಮತ್ತೆ ಕಾಡುತಿದೆ.ಮೊನ್ನೆ ಜಸಿಂತ ಎಂಬ ದೇಶೀ ಮೂಲದ ಮಹಿಳೆ ಇಂಗ್ಲಂಡಿನಲ್ಲಿ  ಆತ್ಮಹತ್ಯೆ ಮಾಡಿಕೊಂಡ ಸಾವನಪ್ಪಿದ ಸುದ್ಧಿ ಕಿವಿಗೆ ಬಿದ್ದಾಗಳಿಂದ.ಈ ಆತ್ಮಹತ್ಯೆಗಳು  ಪೂರ್ವನಿಯೋಜಿತವಾಗಿದ್ದರೂ,ಅದಕ್ಕೆ ತಯ್ಯಾರುಗೊಳಿಸುವ ಸಂದರ್ಭಗಳು ಮಾತ್ರ ಅನಿರೀಕ್ಷಿತವಾಗಿ ಎರಗುವಂತವು.ಅದ ಸಂಭಾಳಿಸಲಾಗದವರ ಬದುಕಿನಲ್ಲಿ  ಇಂತಹ ದೃಷ್ಟಾಂತಗಳು ಜರಗಿಬಿಡುತ್ತವೆ.ವರ್ಷಗಳ  ಹಿಂದೆ ನನ್ನ ಸ್ನೇಹಿತೆಯೊಬ್ಬಳು ಆತ್ಮಹತ್ಯೆಗೆ ಬಲಿಯಾದಳು.ಅದೇ ವಾರದಲ್ಲಿ ಅವಳ ಹುಟ್ಟುಹಬ್ಬದ ಟ್ರೀಟ್ ಪ್ಲಾನ್ ಮಾಡಿದ್ದ ನಮಗೆ ಸುದ್ಧಿ  ಅರಗಿಸಿಕೊಳ್ಳಲಾಗಲಿಲ್ಲ.ಹೊರ ನೋಟಕ್ಕೆ ಗಟ್ಟಿಗಿತ್ತಿಯೆನಿಸಿಕೊಂಡಿದ್ದ  ಅವಳು ಮಾನಸಿಕವಾಗಿ ಅಷ್ಟೊಂದು ದುರ್ಬಲಳಾಗಿದ್ದಳು ಅನ್ನೋದ ನಂಬಲು ಅಸಾಧ್ಯವೆನಿಸಿತ್ತು ನಮಗೆ.ಆಗಲೇ ಅರಿವಾಗಿದ್ದು  ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲ ಮನಸ್ಕರಾಗಿರುವುದಿಲ್ಲವೆಂದು.ನಿಜಸ್ಥಿತಿಯಲ್ಲಿ   ಅವರು ತಮ್ಮ ದೃಢ ಮನಸನ್ನು ನಕಾರಾತ್ಮಕ ಯೋಜನೆಗೆ ಬಳಿಸಿ ಕೊಂಡಿರುತ್ತಾರಷ್ಟೇ.ಸಾಯುವುದಕ್ಕೆ ಸಂಗ್ರಹಿಸುವ ಸಮಗ್ರ ಧೈರ್ಯದಲ್ಲಿನ  ಶೇಕಡ ೧೦ ಪಾಲರಷ್ಟು ಬದುಕಲಿಕ್ಕಾಗಿ ಅಹ್ವಾನಿಸಿಕೊಂಡರೆ  ಎಂತಹ ಕಷ್ಟಗಳನ್ನಾದರು  ಸಮರ್ಥವಾಗಿ ಎದುರಿಸಬಹುದು.ನಮ್ಮನಗಲಿದ  ಸ್ನೇಹಿತೆಯ  ಹುಟ್ಟುಹಬ್ಬದಂದು ಅವಳಿಗೆ ವಿಶಿಷ್ಟ ರೀತಿಯಲ್ಲಿ  ಶ್ರದ್ದಾಂಜಲಿ ಸಲಿಸುವ ಸಲುವಾಗಿ ಅಶ್ರಮವೊಂದಕ್ಕೆ ಭೇಟಿ ನೀಡಿದ್ದೆವು.ಸಾಯುವ ಮುನ್ನ ಅವಳು ಈ ಜಾಗಕ್ಕೆ  ಒಮ್ಮೆ ಬಂದಿದ್ದರೆ ಮಕ್ಕಳೊಂದಿಗೆ ಬೆರೆತಿದ್ದರೆ ಅಂಥದೊಂದು ದುರ್ಘಟನೆ ಆಗುತಿರಲಿಲ್ಲವೇನೋ ಅನ್ನೋ ಮಟ್ಟಿಗೆ ಅಲ್ಲಿನ ವಾತಾವರಣ ಮಕ್ಕಳು ನಮ್ಮ  ಮೇಲೆ ಪ್ರಭಾವ  ಬೀರಿದರು.ಅವರೊಡನೆ ಕಳೆದ ಕ್ಷಣಗಳು ಚಿರಸ್ಮರಣೀಯ ಅವಿಸ್ಮರಿಣೀಯ.ನಾನು ಕನ್ನಡದಲ್ಲಿ  ಬರೆದ ಈ ಮೊದಲ ಕವನಕ್ಕೂ ಅಲ್ಲಿನ  ಮಕ್ಕಳೇ  ಸ್ಪೂರ್ತಿ.ಈ ಹಿಂದೆ ಬರಿ ಇಂಗ್ಲಿಷ್ನಲ್ಲಿ ಬರಿತಿದ್ದೆ...ಇಗಾ ಮೊದಲು ಕನ್ನಡದಲ್ಲಿ ಬರೆದು ನನ್ನ ಕನ್ನಡೇತರ ಸ್ನೇಹಿತರು ಒತ್ತಾಯಿಸಿದರೆ ಇಂಗ್ಲಿಷ್ನಗೂ  ಭಾಷಾಂತರಗೊಳಿಸುತ್ತೇನೆ.
ಮತ್ತೀ ಕವನದಲ್ಲಿ ವಿಶಿಷ್ಟತೆಯೇನಿಲ್ಲ  ಹೆತ್ತ ನನಗೆ ಮೊದಲ ಮಗುವಿನ ಮೇಲೆ ಕೊಂಚ ಹೆಚ್ಚಿಗೆ ಪ್ರೀತಿ,ಎಲ್ಲಾ  ಮೊದ ಮೊದಲುಗಳೇ ಹಾಗಲ್ಲವೇ? ಮನಸಿನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಳ್ಳುತ್ತವೆ.ಅದಿಲ್ಲದೆ ನನ್ನ ಬ್ಲಾಗ್ ಅಪೂರ್ಣ ಅನಿಸತೊಡಗಿದೆ,ಆದರಿಂದ ಕವನದ ಯಾವ ರೂಪುಲಕ್ಷಣಗಳಿಲ್ಲದ  ನನ್ನ ಮೊದಲ ಕವನವನ್ನ ಅದರ ಇಂಗ್ಲಿಷ್ ಅವತರಣಿಕೆ ಜೊತೆಗೆ ಪ್ರಕಟಿಸುತ್ತಿದೇನೆ.
                                               ಸ್ಪೂರ್ತಿ (Awakening of the inner hope)
ಚಿತ್ರಕೃಪೆ : ಅಂತರ್ಜಾಲ
        

ಅದು ಬೇಸಿಗೆಯ ಮಧ್ಯಾನ,                                                "It was a Sunny noon and
ಎಲ್ಲೆಲ್ಲೂ ಉರಿಬಿಸಿಲು                                                        summer sun played its role
ಮನದಲ್ಲೇಕೋ ತುಂಬಿತ್ತು,                                                 But d gloomy dark clouds
ಮಳೆಯ ಕಾರ್ಮುಗಿಲು                                                  inside,captured the soul                                  
ಹೆಪ್ಪುಗಟ್ಟಿತ್ತು ನೋವು,                                                      The waves of pains n  disappointments
ನಿರಾಸೆಗಳ ಅಲೆ                                                              entrapped,freezed well
ಅದಾಗಲೇ ಹೆಣೆದಿದ್ದ ಜವರಾಯ,                                         Standing blue,the lord of death
ತನ್ನ ಬಲೆ                                                                       seemed to had casted his spell

ಸೋಲುಗಳು ನಿರ್ಧರಿಸಿದವು ಜೀವನದ,                                Defeats decided the new path
ಮುಂದಿನ ನಡೆ                                                                of life,deprived of smiles
ಚಿತೆಯೇರಲು ಬಯಸಿದ್ದ ತನು ನಡೆದಿತ್ತು ರೈಲು,                    The body craving for its grave,
ಕಂಬಿಯ ಕಡೆ                                                                 led towards the rails

ಬಾಳಿನ ಕೊನೆಯ ಕ್ಷಣವನ್ನು ಎಣಿಸುತ್ತ ಕುಳಿತಿದ್ದೆ,                   There i was seated counting
ಅಲ್ಲಿ ನಾನಂದು                                                               life's last moments with fraility
ಹಿಂದಿನಿಂದ ತಲೆಗೆ ಬಡಿದಿತ್ತು,                                            When a pebble came hitting,my
ಸಣ್ಣ ಕಲ್ಲೊಂದು                                                               back like a bolt from the blue wit velocity

ತಿರುಗಿ ಏನೆಂದು ನೋಡಲು ಕಂಡ,                                    Turning ma head in anguish,
ಆ ಹುಡುಗ                                                                     i found  a lil boy ...
ಆಡುತಾ ನಲಿಯುತಾ ಬಳಿ ಬಂದ,                                      who smiled n came hopping
ಆ ಸೊಬಗ                                                                    to me spoiling death's ploy!

ಆ ಮುದ್ದು ಮುಖವನು ನೋಡಿ ಮರಳಿತು,                           The  innocent sight of his,
ಕಿರುನಗು ಮೊಗದಲ್ಲಿ                                                      returned a smile on ma lip
ಇವನ್ಯಾರು?ಇಲ್ಲಿಗೇಕೆ ಬಂದನೆಂಬ,                                    Deep in me,Who is he? Y is he here?
ಕೂತುಹಲ ಕಣ್ಣಲ್ಲಿ                                                           curious questions flip
ತಿಂದಿತ್ತಂತೆ ಮಹಾಮಾರಿಯೊಂದು,                                 Here he stood,enstranged by
 ಅವನ ಸಂಬಂಧಿಕರನ್ನು                                                 all relations...
ಕ್ಷಣ ಬೆರಗಾದೆ ಕೇಳಿ ಅವನಾಡುತಿದ್ದ,                                 Bleak and empty yet in solitude
ಜೀವನುತ್ಸಾಹದ ಮಾತುಗಳನ್ನು                                  His eyes glared wit hopes to conquer the world,
                                                                                I was moved,as his story unfold

ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,                       The child i met,sprouted a
ಮಗುವಿನ ಮನಸು                                                        seed of his heart in me,
ನೆನಪಾಯಿತು  ಅಪ್ಪ -ಅಮ್ಮ ನನಗಾಗಿ,                             I remembered greener days of life
ಕಂಡ ಕನಸು                                                                Parents n their dreams for me

ಅರಿವಾಗಿತ್ತು ನನ್ನ ದುಡುಕು ನಿರ್ಧಾರವು,                           As the hibernation died...ma
ಅಷ್ಟರೊಳಗೆ                                                            Soul awakened and a ray of hope brightened
ಮರಳಿ ಹೆಜ್ಜೆ ಹಾಕಿದೆ ಮಮತೆ ತುಂಬಿದ,                           I Passed through the streets,i had
ಬೆಚ್ಚನೆಯ ಗೂಡಿನಕಡೆಗೆ                                               sweared i would never return to
ವಿಧಿಯನ್ನು ತಿರುಚಿ.......                                                Twisting the fate,killing the
ಗೆಲುವನ್ನು ಬಯಸಿ ......                                                decision made in haste........Sunday, December 9, 2012

ಚುಚ್ಚದ ಮುಳ್ಳು...ಗುಲಾಬಿ ಕಣ್ಣಿನ ಹುಡುಗಿ

ಚಿತ್ರಕೃಪೆ  : ಅಂತರ್ಜಾಲ 
ಆಗ  ಸಂಜೆ ಆರು.ಮನೆ ತಲುಪುವ ಕಾತುರದಲ್ಲಿ ಆಟೋ ಇಳಿದವಳೇ ಆತುರ ಆತುರವಾಗಿ ಬಸ್ ನಿಲ್ದಾಣದತ್ತ ಬಿರುಸಿನ ಹೆಜ್ಜೆ ಹಾಕಿದೆ.
ಮನಸು ಹಗುರವಾದರೆ  ಮೈಯ್ಯು ಹಗುರವೆಂಬಂತೆ  ಒಳಗೆ ಗುನಗುನಿಸುತ್ತಿದ ಜೀವದ ಅರಿವಿನ ಹರಿವು ಹೊರಗಿನ ವಾತಾವರಣದೊಂದಿಗೆ ಹದವಾಗಿ ಬೆರೆತು,ತುಂತುರು ಗಾಳಿ ಮಳೆಯಲ್ಲಿ ಚಲಿಸುತ್ತಿದ್ದ ನನ್ನ ಹೆಜ್ಜೆಯ ಬಡಿತದೊಂದಿಗೆ  ಬೀಸುತ್ತಿದ್ದ  ಕೈಗಳ ತಾಳ ಸಮ್ಮಿಳಿತವಾಗಿ  ರಾಗ ಶುರುವಚ್ಚಿಕೊಂಡಿದ್ದವು..ಅದೇ ಹುರುಪು ಕಾದುಕೊಂಡು ನಿಲ್ದಾಣ ಮುಟ್ಟುವಷ್ಟರಲ್ಲಿ ಆವರಿಸಿದ ಗಾಢ ಕಪ್ಪು ಮೋಡದ ಚಪ್ಪರದಿಂದಾಗಿ ನೋಡ ನೋಡುತ್ತಿದ್ದಂಗೆ ಅಲ್ಲೊಂದು ಕತ್ತಲ ಸಾಮ್ರಾಜ್ಯ ಉದಯಿಸಿತ್ತು.ಅದರೊಂದಿಗೆ ಸಣ್ಣ ಭಯವು ಕೂಡ.ಯಾಕಂದರೆ ಒಬ್ಬಳೇ ಹೀಗೆ ಯಾರಿಗೂ ಹೇಳದೆ ಇಷ್ಟು ದೂರ ಯಾವತ್ತು ಪ್ರಯಾಣಿಸಿದ್ದಿಲ್ಲ.

ಎಂದೂ ಮಾಡದ್ದನ್ನ  ಮಾಡಿಸಿಬಿಡುವ ಈ ಹಾಳು ಸಂದರ್ಭಗಳು ಅಚ್ಚಾನಕ್ಕಾಗಿ ಸೃಷ್ಟಿಸುವ ಅನಿವಾರ್ಯತೆಗಳು ಸಮಯ ಸಾಧಕಗಳೇ  ಸೈ.ಅದ್ಯಾವ ನಮೂನೇ ಹೊಂಚು ಹಾಕಿ ಗೆರೆ ದಾಟಲು ಉತ್ತೇಜಿಸುತ್ತಾವೆ.ನಂತರ ನಡೆಯುವುದ್ದೆಲ್ಲಾವು  ನಮ್ಮ ಕೈ ಮೀರಿದ್ದು.ಕಾಲದ ಹಿಡಿತಕ್ಕೆ ಸಿಲುಕಿದ  ಅನೂಹ್ಯ ಗಳಿಗೆಯಲ್ಲಿ ಮರು ಮರಳದಂತೆ ಎಂದಿಗೂ ಅಳಿಸಲಾಗದಂತೆ ಲೀನವಾಗುವಂತವು.

ಅಂದಿನಂತೆ ,ಇಂದಿನನಂತೆ.

ಆದರೆ ಇಂದಿನ ಮಟ್ಟಿಗೆ ಅಂತದೊಂದು ಸಂದರ್ಭ  ಅನಾಹುತದಲ್ಲಿ ಕೊನೆಗಾನಲ್ಲಿಲ್ಲವಷ್ಟೇ.ಈ ದಿನಕ್ಕಾಗೆ ಅಲ್ಲವೇ ವರುಷಗಳಿಂದ ಕಾದಿದ್ದು ನಾನು? ಅದಕ್ಕಾಗೆ ಅಲ್ಲವೇ ಯಾರಿಗೂ ತಿಳಿಸದೇ ಹೊರಟಿ ಇಷ್ಟು ದೂರ ಬರಬೇಕಾದದ್ದು? ತಿಳಿಸದಂತಹ ಗುಟ್ಟಿನ ವಿಷಯವೇನು ಇರಲಿಲ್ಲ.ಅವಳ ಬಗ್ಗೆ  ತಿಳಿದ ಕೂಡಲೇ ಹೊರಡುವ ಅವಸರದಲ್ಲಿ ಎಲ್ಲವ ಮರೆತ್ತಿದ್ದೆನಷ್ಟೇ.ಇಂದು ಅವಳ ನೋಡದ್ದಿದ್ದರೆ  ಮತ್ತೆ ಆ ಅವಕಾಶ ಎಂದೋ.ಅಷ್ಟರಲ್ಲಿ ಒಳಗಿನ ಉರಿ ನನ್ನನೇ ಬೂದಿ ಮಾಡಿ ಮುಗಿಸುತ್ತಿತ್ತೇನೋ.

ಸುಮಾರು ಹೊತ್ತು ಕಾದರೂ  ಒಂದು ಬಸ್ಸು ಬರದೆ ಹೋದ್ದದ್ದು ಮನಸ್ಥಿತಿಯನ್ನು ಕಂಗೆಡೆಸಿತು.ಹೀಗೆ ಕತ್ತಲಲ್ಲಿ ಕಾಯುವ ಪರಿಸ್ಥಿತಿ ನನ್ನ ಮಟ್ಟಿಗೆ ಹೊಸತೆ.ಹೊಸ ಸಮಸ್ಯೆಗಳ ಉದ್ಭವ  ಅಂದರೆ  ಹಳೆ ನಿರ್ಲಕ್ಷಿಸಿದ ಸಲಹೆಗಳಿಗೆ ಪುನರುತ್ಥಾನ.ಅದರ ಹುಟ್ಟು,ಇದಕ್ಕೆ  ಉಸಿರು....

ಛೆ! ನೆಟ್ಟಗೆ  ಗಾಡಿ ಓಡಿಸೋದ ಕಲ್ತಿದ್ರೆ  ಇಲ್ಲಿ ಹೀಗೆ ಕಾಯಬೇಕಾಗಿರಲಿಲ್ಲ!

ಮನೆಯಲ್ಲಿ ಗಾಡಿಯ ವಿಚಾರ ಬಂದಾಗಲೆಲ್ಲ, "ಟೂ ವೀಲರ್ ಬ್ಯಾಲೆನ್ಸಿಂಗ್ ಬರುತ್ತೆ,ಫೋರ್ ವೀಲರ್ ಸ್ಟೀರಿಂಗ್ ಕಂಟ್ರೋಲ್ ಸಹ ಇದೆ.ಟ್ರಾಫಿಕ್ ರೂಲ್ಸ್ ಬಗ್ಗೆ  ಚಾಚು ತಪ್ಪದೆ ಅರಿವಿದೆ.ಮೂರು ತಿಂಗಳು ಡ್ರೈವಿಂಗ್ ಕ್ಲಾಸಿಗೆ ಹೋಗಿ ಲೈಸೆನ್ಸ್ ಸಹ ಪಡೆದ್ದಿದ್ದಾಯಿತಲ್ಲ  ಇನ್ನೇನು?" ಅನ್ನೋ ಬಿಗುಮಾನದ ಮಾತುಗಳಾಡುತ್ತಿದ್ದೆ .

 " ಲೈಸೆನ್ಸ್ ಇದ್ದರೆ ಸಾಕಾಗೋಲ್ಲ ಮಗಳೇ.....  ಗಾಡಿ ಮೇನ್ ರೋಡಿಗೆ   ಇಳಿಸಲು ಕಲಿಯಬೇಕು ಮೊದಲು.ಲೈಸೆನ್ಸ್ ಇಲ್ಲದಿದ್ದರೂ ಗಾಡಿ ಓಡಿಸಬಹುದು.ಆದರೆ ಗಾಡಿ ಓಡಿಸದವರ ಬಳಿ ಲೈಸೆನ್ಸ್ ಇದ್ದರೆಷ್ಟು  ಬಿಟ್ಟರೆಷ್ಟು..." ಎಂಬ  ಅಪ್ಪನ ಕಿವಿ ಮಾತಿಗೂ,

 " ಗಾಡಿ ಮೇನ್ ರೋಡ್ ನಲ್ಲಿ ಓಡಿಸೋದ ಕಲಿತರೆ ಸಾಕಾಗದು ಅವೆನ್ಯೂ ರಸ್ತೆಯಂತ ಜನನಿಬಿಡ ಚಿಕ್ಕ ಜಾಗದಲ್ಲಿ  ಪಾರ್ಕ್ ಮಾಡೋದು  ಕರಗತವಾಗಬೇಕು.ಶಿವಾಜಿನಗರಂತಹ ಇಕ್ಕಟಿನ  ಸಂದಿ ಗೊಂದಿಯಾ ಗಲ್ಲಿಗಳಲ್ಲಿ ಚಲಾಯಿಸಿದ ಅನುಭವವಿರಬೇಕು"  ಅನ್ನೋ ಅಣ್ಣನ  ಮಾತುಗಳಿಗೂ  ರೂಪ ಬಂದು  ಉಸಿರಾಡುತ್ತಿದ್ದಾವೆ ಅನಿಸಿತು.

ನಾನು ಹೇಳಿದ್ದು  ನಗಣ್ಯವಲ್ಲದಿದ್ದರು ಅಷ್ಟೇನೂ ಮುಖ್ಯಪಾತ್ರ ವಯಿಸುವಂತವಲ್ಲ ಎಂದು ನನಗೂ  ಗೊತ್ತಿತ್ತು ಅದಕ್ಕೆ ಅವರೊಂದಿಗೆ  ವಾದ ಮುಂದುವರಿಸುತ್ತಿರಲಿಲ್ಲ .

ಎಷ್ಟಾದರೂ ನನ್ನ ಒಳತಿರುಳ ಬಲ್ಲವಳ್ಳಲವೇ ನಾನು? ಗುಡಿಸಿ ಸಾರಿಸೋದ ಕಲಿತವಳು,ರಂಗೋಲಿ ಹಾಕೋದ ಮರೆತವಳು!ಪರಿಶ್ರಮ ಪರಿಣಿತಿ ಎಷ್ಟಿದ್ದರೇನು ಮನೆ ಅಂಗಳ ಬೋಳು ಬೋಳೆ...


ಅಸಲಿಗೆ ಗಾಡಿಗೂ ಜೀವನದ ಬಂಡಿಗೂ ಇರುವ ಸಾಮ್ಯತೆ ಕಂಡು ಬೆಚ್ಚುತ್ತಿದ್ದೆ.ಅಪ್ಪನ ಮಾತಿನಲ್ಲೂ ಅಣ್ಣನ ಮಾತಿನಲ್ಲೂ ಅವೇ ಸಾಮತ್ಯೆ  ಮೇಲೈಸಿದ್ದಂತೆ ಯಾವುದೊ ಪಾಠ ಬೋಧಿಸುತ್ತಿರುವಂತೆ  ಭಾಸವಾಗುತಿತ್ತು!! ಅದಲ್ಲದೆ  ಎರಡರ ಡ್ರೈವಿಂಗ್ ಮಾಡಲು ಪ್ರಮುಖವಾಗಿ ಬೇಕಾಗೋದು ಆತ್ಮ ವಿಶ್ವಾಸ  ಗುಂಡಿಗೆ  ಮುನ್ನುಗ್ಗುವ ಪ್ರವೃತ್ತಿ ಎಂಬ ಸತ್ಯದಿಂದ ದೂರ ಸರಿಯುತ್ತಿದದ್ದು ಅದು ನನ್ನಲ್ಲಿ ಕಡಿಮೆ ಇದಿದ್ದರ ಪರಿಣಾಮದಿಂದಷ್ಟೇ! ಮನಸು ವ್ಯಾಕುಲ ಗೊಂಡಿತು... ಬ್ಯಾಗಿನಲ್ಲಿ ಹೂತು ಹೋಗಿದ್ದ ಡೈರಿಯನ್ನ ಹೊರ ತೆಗೆಯದೆ  ಮೇಲಿಂದಲೇ ಸ್ಪರ್ಶಿಸಿದೆ ಹಿಂದಿನಂತೆ ಕೈ ನಡುಗಳಿಲ್ಲ.ಕತ್ತಲೆಯ ಭಯವು  ಇಳಿಮುಖವಾಯಿತು .

ಓಹ್! ಇಷ್ಟು ದಿನ ಕತ್ತಲನ್ನೇ ಕಾವಲು ಕಾದು ಕುಳಿತವಳಿಗೆ ಈ ಸ್ವಲ್ಪ ಸಮಯದ ಒಬ್ಬಂಟಿ ಜಗತ್ತಿನ ಕತ್ತಲು ಯಾವ ಲೆಕ್ಕದ್ದು? ಕತ್ತಲೆಯೇ ಕತ್ತಲನ್ನ ಹೊರಗಟಿದ್ದ ಈಗಷ್ಟೆ ನೋಡಿ ಬಂದವಳಲ್ಲವೇ ನಾನು? ಇನ್ನು ಮುಂದೆ ಅಂತ ಕತ್ತಲೆ ನನ್ನ  ನೆರಳು  ಸೋಕಳು ಹೆದರ ಬೇಕು ಅಷ್ಟೊಂದು ಬೆಳಕನ್ನು  ತನ್ನ ಅಂತರ್ಯ ಬಗೆ ಬಗೆದು ತುಂಬಿಸಿ ಕಳಿಸಿದ್ದಾಳೆ "ಪೂರ್ಣಿಮಾ".

ದೂರದ ಊರಿನ  ಬಸ್ ನಿಲ್ದಾಣದಲ್ಲಿ  ಬೆಂಗಳೊರಿನ  ಬಸ್ಸಿಗಾಗಿ  ಕಾಯುತ್ತಿದ್ದವಳಿಗೆ   ಹಿಡಿದ ಜಡಿ ಮಳೆ ಹೀಗೆ ಏನೇನೋ ನೆನಪು ತರಿಸುತ್ತಿವೆ.

*
ಮಳೆಗಾಲದ ಮುಂಜಾವು ಶಾಲೆಗೆ ಹೋಗಲು ಅಣಿಯಾಗುವ ಮೊದಲು ಒಮ್ಮೆ ಮಳೆ ನೀರಲ್ಲಿ  ಆಡಿ ದೋಣಿ ತೇಲಿಸುವ ಅಭ್ಯಾಸವಿತ್ತು.ಅಂದು ಅಡುಗೆ ಮನೆಯಲ್ಲಿ ಚಾ ಮಾಡುತಿದ್ದ ಅಮ್ಮನ ಕಣ್ ತಪ್ಪಿಸಿ ರಾತ್ರಿ ಮಾಡಿಟ್ಟಿದ್ದ ಕಾಗದದ ದೋಣಿ  ಹಿಡಿದವಳೇ ಮನೆಯ ಗೇಟಿನ ಬಳಿ ಹೋದೆ.ಪ್ರಕೃತಿ ಆಗಷ್ಟೇ ಪವಿತ್ರ  ತೀರ್ಥ ಸ್ನಾನ ಮುಗಿಸಿಕೊಂಡಂತೆ  ಶುಭ್ರ ಚೆಲುವೊಂದಿಗೆ  ಕಂಗೊಳಿಸುತ್ತಿತ್ತು.ರಸ್ತೆಯ ಬದಿಯೇ  ಹರಿದು ಹೋಗುತ್ತಿದ್ದ ಕೆಂಪು ನೀರಿನಲ್ಲಿ ಇನ್ನೇನೂ ಕೈಲಿದ್ದ ದೋಣಿ ಬಿಡಬೇಕೆನ್ನುವಷ್ಟರಲ್ಲಿ ಅಮ್ಮ ಕಿಟಕಿಯಿಂದಲೇ "ಶಾಲೆಯ ಕೊನೆ ದಿನ.ಸೆಂಡ್ ಆಫ್ ಪಾರ್ಟಿಗೆ ಸೀರೆ ಉಟ್ಟು  ಹೋಗಬೇಕಾದವಳು,ಮುಂದೇ  ಕಾಲೇಜ್ ಮೆಟ್ಟಿಲು ಹತ್ತೊಳು ಹೀಗೆ ಎದ್ದವಳೇ ಮಕ್ಕಳಾಟಿಕೆ ಮಾಡ್ಕೊಂಡು ಕೂತಿದ್ಯಲ್ಲ ನಿನಗೆ ಬುದ್ಧಿ ಬೆಳೆದಿದೆ ಅನ್ನೋಕಾಗುತ್ತ?" ಎಂದು ಗದರಿದಳು.ಅದು ಕೇಳಿಸಿದರು ಅರ್ಥವಾಗದಂತೆ  ಅಮ್ಮನೆಡೆ  ಒಮ್ಮೆ ನೋಡಿ ನಕ್ಕು ದೋಣಿಯತ್ತ  ಗಮನ ಹರಿಬಿಟ್ಟೆ.ಅಯ್ಯೋ ಗಡಿಬಿಡಿಯಲ್ಲಿ ಕೈ ಜಾರಿದ ನನ್ನ ದೋಣಿ...ನೀರಿನಲ್ಲಿ ಮುಕ್ಕರಿಸಿ ಪೂರ್ತಿ ಒದ್ದೆಯ ಮುದ್ದೆಯಾಗಿತ್ತು.

ಅಷ್ಟರಲ್ಲೇ ಡ್ರಂಕ್ ಡ್ರಂಕ್ ಎಂಬ ಕೂಗು..ಬಾಡಿದ ಮನಸು ಹಿತಗೊಂಡಿತು.

ಅಲಿಂದ ಹೊರಟವಳೇ ಹಿತ್ತಲಿನ ಪುಟ್ಟ ತೊಟ್ಟಿಯಲ್ಲಿ ನನಗಾಗೆ ಕಾಯುತ್ತಿತ್ತೆಂದು ಭಾವಿಸಿ,ಮುದ್ದುಗರೆದು,ನನ್ನ  ಕಪ್ಪೆಯನ್ನು ಹಸ್ತದ ಮೇಲೆ ಇರಿಸಿಕೊಂಡೆ.ಅದು ಕೂಡ ಗುರುತು ಹಿಡಿದಂತೆ  ಹಪ್ ಎಂದು ಎರಡು ಬಾರಿ ನಿಂತಲ್ಲೇ  ಎಗುರಿತು.ಈ ಕಪ್ಪೆಯ ಹುಚ್ಚು ಹತ್ತಿಸಿದ್ದು ಅಜ್ಜಿ ಮತ್ತವಳ ಕಥೆ.ಆ ದಿನಗಳಲ್ಲಿ ನಾವು ಮಕ್ಕಳೆಲ್ಲ ಸೇರಿ ಅಜ್ಜಿಗೆ ಕತೆ ಹೇಳುವಂತೆ ದಿನ ರಚ್ಚೆ ಹಿಡಿಯುತ್ತಿದ್ದೆವು.ಪಾಪಾ ಅಜ್ಜಿ ಅತ್ಯುತ್ಸಾಹದಿಂದಲೇ ಜಾನಪದ ಕತೆ,ನೀತಿ ಕತೆ,ತನ್ನ ಹುಟ್ಟೂರಿನ ಕಥೆ,ತಾನು ಮೆಟ್ಟಿದೂರಿನ ಕಥೆ,ತರಂಗದಲ್ಲಿನ  ಕತೆ,ದಿನಪತ್ರಿಕೆಯಿಂದ ಆಯ್ದ ಕತೆ ಹೀಗೆ ಒಂದೇ ಎರಡೇ  ಬಗೆ ಬಗೆಯದ್ದು... ನಮಾಗಾಗಿ ಕೆಲವನ್ನು ನೆನಪಿಂದ ಕೆದಕಿ ಇನ್ನು ಕೆಲವಷ್ಟನ್ನ ಪುಸ್ತಕಗಳಿಂದ ಹೆರಕಿ ಹೇಳುತಿದ್ದಳು.

ಅವುಗಳ್ಳಲ್ಲಿ ಒಂದು ಕತೆ ಹೀಗಿತ್ತು, ಹುಡುಗಿಯೊಬ್ಬಳು ಕಪ್ಪೆ ಸ್ನೇಹ ಮಾಡುತ್ತಾಳೆ  ನಂತರ ಅದು ರಾಜಕುಮಾರನಾಗಿ ರೂಪಾಂತರಗೊಂಡು ಕೊನೆಗೆ ಅವರಿಬ್ಬರ ಮದುವೆ..ಅದೇ ಕಪ್ಪೆ ರಾಜಕುಮಾರನ ಕಥೆ..ನನ್ನ ಮತ್ತು ನನ್ನ ಕಪ್ಪೆಯಾ ಸ್ನೇಹಕ್ಕೆ ಮುನ್ನುಡಿ ಬರೆದ ಕಥೆ,ಅಂತ್ಯ ಹಾಡಿದ ಕಥೆ.ಆದರೆ ಅಲ್ಲೊಂದು ಮಜವಿತ್ತು.ನನಗೆ ನಿಜಕ್ಕೂ ಕಪ್ಪೆಯಲ್ಲಿ ಸ್ನೇಹ ಅದಮ್ಯ ಪ್ರೀತಿ ಅಂಕುರಿಸಿದ್ದು  ಕಥೆ ಕೇಳಿಯಲ್ಲ,ಬದಲಿಗೆ  ಅದರಲ್ಲಿನ ಕಪ್ಪೆನಾ ಬೇರೆಯಾರು  ಇಷ್ಟ ಪಡಲಿಲ್ಲವೆಂದು! ನಾಯಿ ಬೆಕ್ಕು ಅಚ್ಚಿಕೊಂಡಿದ್ದ  ಉಳಿದವರಿಗೆ  ಅಜ್ಜಿ ಹೇಳಿದ ವಕ್ರ ಮುಖದ  ಕಪ್ಪೆಯ ಬಗ್ಗೆ ಅಸ್ಸಯ್ಯ ತಾತ್ಸಾರ ಭಾವ.ಎಲ್ಲರೂ  ತೊರೆದಿರುವ ಯಾರಿಗೂ ಬೇಡವಾಗಿರುವದನ್ನ ಅಪ್ತವಾಗಿಸಿಕೊಳ್ಳೋದು ಮೊದಲಿನಿಂದಲೂ ನನಗಂಟಿಕೊಂಡ  ಬುದ್ಧಿ  ಆಗಿತಲ್ಲಾ?? ಹಾಗಾಗಿ ಈ ಕಪ್ಪೆಯೊಂದಿಗಿನ ಸಂಭಂದವು ಬೆಸೆಯಿತು.

ಹಾಗಂತ  ಇದು ಸುಲುಭದ ಸ್ನೇಹವಾಗಿರಲಿಲ್ಲ.ಅದು ಜಿಗಿದಲ್ಲೆಲ್ಲ ನಾನು ಅದರಿಂದಿಂದೆ ಓಡಾಬೇಕಿತ್ತು.ಯಾವ ಹೊತ್ತು ಹಿತ್ತಲ ಯಾವ ಮೂಲೆಯಲ್ಲಿ ಇರುತ್ತಿತ್ತೋ ಗೊತ್ತಾಗುತ್ತಿರಲಿಲ್ಲ...ಎಲ್ಲೆಡೆ ತಡಕಾಡಿದರು ಸಿಗುತಿರಲಿಲ್ಲ. ಹಾಗಾಗೆ ಕೆಲವೊಮ್ಮೆ ಅದನ್ನ ಬ್ಯಾಗ್ನಲ್ಲಿ ಇಟ್ಕೊಂಡು ಶಾಲೆಗೆ ಹೋಗೊ ರೂಡಿಯಿತ್ತು.ಆ ದಿನವು ಆಗಿದ್ದು ಅದೇ.ಸೀರೆ ಉಟ್ಟು ಶಾಲೆಗೆ  ಹೊರಡುವ ಸಂಭ್ರಮದಲ್ಲಿ ಮರೆಯಬಹುದೆಂದು ಬೆಳಗೆ ಎದ್ದವಳೇ  ನನ್ನ ಕಪ್ಪೆನ ಬ್ಯಾಗೊಳಗೆ ಹಾಕಿಕೊಂಡಿದ್ದೆ.ಮೊದಲೇ ದೋಣಿ ಕಪ್ಪೆ ಅಂತ ಸಮಯ ಕಳೆದಿದ್ದರಿಂದ ಗಡಿಬಿಡಿಯಲ್ಲೇ  ತಯ್ಯಾರಾಗಿ ಮನೆ ಬಿಟ್ಟವಳಿಗೆ ಅಡ್ಡ ಹಾದಿಯಲ್ಲಿ ಬರುತ್ತಿದ್ದ  ಪೂರ್ಣಿಮಾ ಅಂದ್ರೆ 'ಪೂರ್ಣಿ' ಸಿಕ್ಕಿದಳು.ಸೀರೆಯಲ್ಲಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದ  ಪೂರ್ಣಿಮಾ  ಅಗಲ ಕಣ್ಣಿನ ನೀಳಕಾಯದ  ಸುಂದರ ಹುಡುಗಿ.ನನ್ನ ಸಹಾಪಾಟಿಯಾದ ಆಕೆ  ಇಂತಿಪ ಎರಡು ವರ್ಷದ ಕೆಳಗೆ ನಮ್ಮ ಶಾಲೆ ಸೇರಿದವಳು.ಮೊದಲಿದ್ದ ಶಾಲೆ ಅವಳ ತಂದೆ ಮನೆಯ ಬಳಿ ಇತ್ತಂತೆ  ತಾಯಿಯಾ ಅಕಾಲಿಕ ಮರಣದಿಂದಾಗಿ ಅಜ್ಜಿ ಮನೆಗೆ ನಮ್ಮ ಶಾಲೆ ಹತ್ತಿರವಾಗುತ್ತದೆಂದು ಇಲ್ಲಿ ಸೇರಿಸಿದ್ದರು.ಅವಳೋ ಮೌನ ಗೌರಿಯಂತೆ ಯಾರೊಂದಿಗೂ ಹೆಚ್ಚು ಬೆರೆತವಳಲ್ಲ ಸ್ವಲ್ಪ ನಿಗೂಢ ಸ್ವಾಭಾವದವಳೆನಿಸುತ್ತಿದ್ದಳು ನಮಗೆಲ್ಲ.ಆದರೆ ಅಂದು ಹಾದಿಯಲ್ಲಿ  ಸಿಕ್ಕವಳು ನನ್ನ ತಡೆದು ಮಾತಿಗೆಳೆದಳು.

"ಸ್ಕೂಲ್ ಗೆ ಹೋಗ್ತಿದ್ಯ?" ಅವಳ ಕಣ್ಣಲೇನೋ ಅತೀವ ಸಂಕಟ ಅಡಗಿಸಿಕೊಂಡೆ ಕೇಳಿದಳು

"ಹೌದು ಯಾಕೆ  ನೀನು ಅಲ್ಲಿಗೆ ತಾನೇ ಹೊರಟಿರೋದು??"ಎಂದೆ.

"ಇಲ್ಲ,ಹೌದು! ಅಂದ್ರೆ ಸ್ವಲ್ಪ ತಡವಾಗಿ ಬರುತ್ತೇನೆ...ಒಂದು ಸಹಾಯ ಮಾಡೋಕ್ ಆಗುತ್ತ?" ಅಂದು ಎಂಜಲು ನುಂಗಿದಳು.

"ಏನದು ಹೇಳು? ಅಂತ ಕೆಲಸ ಏನು.. ಯಾಕೆ ತಡವಾಗುತ್ತೆ?" ಅಂದೆ.

"ಚಿಕ್ಕಮ್ಮನನ್ನ   ಮಾತಾಡಿಸಿ ಕೊಂಡು ಹೋಗು ಅಂತ ಅಪ್ಪ ಹೇಳಿದ್ದಾರೆ....ಈ ಡೈರಿ ಯಲ್ಲಿ ಅಮ್ಮನ ನೆನಪಿದೆ ಅಲ್ಲಿಗೆ ಎತ್ಕೊಂಡ್ ಹೋಗೋಕೆ ಮನಸೋಪ್ಪುತಿಲ್ಲ ಮನೆಯಲ್ಲೂ ಬಿಡೋಕೆ ಆಗೋಲ್ಲ.ಅರ್ಧ ಗಂಟೇಲಿ  ಬರುತ್ತೇನೆ.ಅಲ್ಲಿ ತನಕ ಹಿಡ್ಕೊಂದಿರು." ಅಂತೇಳಿ ನನ್ನ ಉತ್ತರಕ್ಕೂ ಕಾಯದೆ ಹೊರಟಳು .

" ಪೂರ್ಣಿ..ಲೇಟ್ ಮಾಡಬೇಡ ಸಿಸ್ಟರ್ ಬಯ್ತಾರೆ.ಬೇಗಾ ಬಾ" ಎಂದು ಆಗಲೇ ನಾಲ್ಕು ಹೆಜ್ಜೆ  ದೂರ ಇದ್ದವಳಿಗೆ   ಗಂಟಲ್ಲೆರಿಸಿ ಹೇಳಿದೆ.

"ಪ್ಲೀಸ್ ಡೈರಿ ಯಾರಿಗೂ ಕೊಡಬೇಡ.ನಾನು ಆದಷ್ಟು ಬೇಗ ಬರ್ತೀನಿ"  ಎಂದು ಮಳೆಯಲ್ಲಿ ಮರೆಯಾಗಿ ಹೋದಳು.

ಬೀಳುತ್ತಿದ್ದ  ಮಳೆಯಲ್ಲಿ ನೆನೆದು ಡೈರಿ ಹಾಳಾಗೋದು ಬೇಡವೆಂದು  ಅವಸರದಿಂದ  ಡೈರಿ ಬ್ಯಾಗನಲ್ಲಿ ಇರಿಸಿ ಕೊಂಡು ಶಾಲೆಗೆ ಹೋದೆ.ಆದರೆ ಪೂರ್ಣಿ ಪಾರ್ಟಿಗೆ ಬರಲೇ ಇಲ್ಲ.ಮನೆಗೆ ಬಂದವಳೇ ಬ್ಯಾಗ್ನಲ್ಲಿದ ನನ್ನ ಕಪ್ಪೆ ಆಚೆ ತೆಗೆಯಲು ನೋಡಿದರೆ ಕಪ್ಪೆ ಮಾಯಾ!! ಡೈರಿ ಮಾತ್ರ ಇದೆ.ಅದು ಡೈರಿ ಇಡುವಾಗ ಎಗರಿ ಹೋಗಿತ್ತು.ಆ ದಿನವೆಲ್ಲ ನನಗೆ ನಿದ್ರೇನೆ ಬರಲಿಲ್ಲ.ರಾತ್ರಿಯಿಡೆ ಮಗ್ಗುಲು ಬದಲಾಯಿಸುತ್ತ  ಪೂರ್ಣಿನ ಅವಳ ಡೈರಿನ ಬಯ್ದುಕೊಂಡೇ  ಮಲಗಿದೆ.ಪರೀಕ್ಷೆಗೆ ಇನೇನು ಮೂರು  ವಾರ ಬಾಕಿ ಉಳಿದಿತ್ತು.ಅದರ ಗುಂಗಿನಲ್ಲಿ ಡೈರಿ ಕಪ್ಪೆ ಎಲ್ಲವು ಮರೆತು ಹೋದವು.ನನ್ನದು  ಪೂರ್ಣಿದೂ ಪರೀಕ್ಷಾ  ಸೆಂಟರ್ ಬೇರೆ ಬೇರೆ ಆಗಿದ್ದರಿಂದ  ನಾವಿಬ್ಬರು ಭೇಟಿ ಆಗಲು ಸಾಧ್ಯವಾಗಲಿಲ್ಲ.ಪರೀಕ್ಷೆಯ ನಂತರ ನಾವೆಲ್ಲ ಶಾಲೆಯಲ್ಲಿ ಸೇರಬೇಕು ಅನ್ನೋ  ಪೂರ್ವ ಯೋಜನೆಯಿತ್ತಲ್ಲ ಆಗಾ ಡೈರಿ ಕೊಟ್ಟರಾಯ್ತು ಎಂದು ಸುಮ್ಮನಾದೆ.ಆದರೆ ಅಲ್ಲಿ ಅಂದು ತಿಳಿದದ್ದೇ ಬೇರೆ.ವಾಸ್ತವದಲ್ಲಿ ಪೂರ್ಣಿ ಪರೀಕ್ಷೆಯೇ ಬರೆದಿರಲಿಲ್ಲ! ಹೀಗೆ ಒಂದು ತಿಂಗಳಿಂದೇನೆ  ಅವಳು ಯಾರ ಜೊತೆಗೋ ಹೋಗಿಬಿಟ್ಟಿದ್ದಾಳೆ ಅಂತ  ಕೆಲವರು ಕಿಡ್ನಾಪ್ ಆಗಿದ್ದಾಳೆ ಅಂತ ಕೆಲವರು ಅವಳ ಚಿಕ್ಕಮ್ಮ ಮನೆ ಬಿಟ್ಟು ಓಡಿಸಿದ್ದಾರೆ  ಅಂತ  ಏನೇನೋ  ಸುದ್ದಿ ಹಬ್ಬಿದವು.ಪೂರ್ಣಿಯಾ ಅಜ್ಜಿ ಕಡೆಯವರು ಅವರಪ್ಪ ಎಲ್ಲರು ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದಾರೆ ಆದ್ರೆ ಪೂರ್ಣಿಯಾ ಪತ್ತೆ ಆಗಿಲ್ಲ.ಇದೆಲ್ಲ ಕೇಳಿ ಒಂದು ಕ್ಷಣ ನನಗೆ ತಲೆ ಗಿರ್ರ್ ಅಂದು ಬಾಯಿ ಒಣಗಿ ಹೋಯಿತು."ಯಾವ ದಿನದಿಂದ ಕಾಣ್ತಿಲ್ಲವಂತೆ? " ಅಂತ ಚೇತರಿಸಿಕೊಂಡು ಕೇಳಿದೆ. 

"ಅದೇ ನಮಗೆ ಜೂನಿಯರ್ಸ್ ಸೆಂಡ್  ಆಫ್ ಪಾರ್ಟಿ ಕೊಟ್ರಲ್ಲ... ಅವತ್ತೇ ಇವಳಿಗೂ ಪೂರ್ತಿ ಸೆಂಡ್ ಆಫ್ ಆದಂತೆ  ಅನಿಸುತ್ತೆ..ಬೆಳಗೆ ಶಾಲೆಗೆ ಅಂತ  ಹೊರಟವಳದು ಇವತ್ತಿನವರೆಗೂ ಸುಳಿವಿಲ್ಲವಂತೆ " ಎಂದು ಪಿಸುಗುಟ್ಟಿದಳು ಸುಧ.
ಮನೆಗೆ ಬಂದು ನೂರೆಂಟು ಆಲೋಚನೆಗಳು.ಎಲ್ಲೋದಳು ಈ ಹುಡುಗಿ? ಯಾವತ್ತು ಮಾತನಾಡಿಸದವಳು ಅಂದೇ ನನಗೆ ಸಿಗಬೇಕಿತ್ತ?ಅವಳ ವಸ್ತುವನ್ನ ನನ್ನ ಕೈಗಿತ್ತು ಹೋಗಬೇಕಿತ್ತ?ಅದ ಕಾಯಲು ನಾನೆ ಸಿಕ್ಕಿದ ಅವಳಿಗೆ?ನಾನಾದರು ಅದನ್ನ ಜೋಪಾನ ಮಾಡುವುದಕ್ಕೆ ಯಾಕೆ ಒಪ್ಪಿಕೊಂಡೆನೋ?ಹೋಗಲಿ...ಅವಳಜ್ಜಿಗೆ ಡೈರಿ ತಲುಪಿಸಿದರಾಯಿತು.....ಇಲ್ಲ..ಯಾರಿಗೂ ಕೊಡಬೇಡ ಅಂದಿದ್ದಾಳೆ.ಅದಿರಲಿ,ನನ್ನ ಅವಳ  ಭೇಟಿ ಬಗೆಗಾದರೂ ಹೇಳಬೇಕು ಅವರಿಗೆ ಅದಕ್ಕೂ  ಮೊದಲು ಅಮ್ಮನಿಗೆ. ಯಾಕೋ ಬೇಡ ಎಂದೆನಿಸಿತು! ಅವಳ ಬಗ್ಗೆ ನನಗೇನು ಗೊತ್ತು ಅಂತ?? ಏನಾದರು ಗೊತ್ತಿದ್ದರಲ್ಲವೆ ಯಾರಿಗಾದರೂ  ಹೇಳೋದು? ಅದ್ದಕಿಂತ ಸುಮ್ಮನಿರೋದು ವಾಸಿ ಎಂದು ನಿರ್ಧರಿಸಿದೆ.ಮನಸು ತಡೆಯಲಿಲ್ಲ ಅಮ್ಮನಿಗೆ ಎಲ್ಲಾ  ವಿಷಯ ಹೇಳಿದೆ  ಡೈರಿಯ ವಿಷಯವೊಂದನ್ನ ಬಿಟ್ಟು!ಕಪ್ಪೆಯೊಂದಿಗೆ ಮರೆಯಾದ ಪೂರ್ಣಿಯ ನೆನಪಿಗಾಗಿ ಅವಳ  ಡೈರಿಯನ್ನ ಕಪ್ಪೆ ಇದ್ದ ಹಿತ್ತಲ ಮೂಲೆಯಲ್ಲಿ ಮುಚ್ಚಿಟ್ಟೆ.ಮರೆತು ಹೋದೆ.
*
ಕಾಲೇಜ್ ದಿನಗಳೆಂದರೆ ಒಂಥರಾ  ಸ್ವತಂತ್ರ ನಂತರದ  ಭಾರತದ ಹಾಗೆ. ಹಳೆ ಮೌಡ್ಯ ಗಳನ್ನ ಉಲಂಘಿಸುತ್ತಲೇ  ಹೊಸದಕ್ಕೆ ಗಂಟು ಬೀಳುವ  ನಾಂದಿ ಹಾಡುವ ಹಾಗೆ.ಶಾಲೆಯಲ್ಲಿ ಸಹಿಸಿಕೊಂಡ ಒಂದಷ್ಟು ನಿರ್ಭಂದನೆಗಳ್ಳನ್ನ ಅಲ್ಲಿಯವರೆಗೂ  ಪಾಲಿಸಿಕೊಂಡು ಬಂದ ಅನಾವಶ್ಯಕವೆನಿಸಿದ  ಮೌಲ್ಯಗಳನ್ನ ಗಾಳಿಗೆ ತೂರಿಸಿ  ಪ್ರಗತಿ ಜಾಗತೀಕರಣದ ಮುಖವಾಡದೊಂದಿಗೆ   ಅವುಗಳೆದುರು ಬಂಡಾಯ ಏಳುವ ದಿನಗಳು.ಕಾಲೇಜ್ ಸೇರಿದ ಒಂದೂವರೆ ವರುಷದ ನಂತರ  ಸುಖಾಸುಮ್ಮನೆ ಹಳೆಯದನ್ನ ಕೆದಕಿಕೊಂಡಾಗ ಕಪ್ಪೆ,ಪೂರ್ಣಿ,ಡೈರಿ ನೆನಪಾದವು.ಬಂಡಾಯದ ಕಿಚ್ಚು ಹೆಚ್ಚಿತ್ತಳವೆ?ಎಲ್ಲದಕ್ಕೂ ಕಾರಣಗಳು ಬೇಕಾದವು! ಆ ಮುಚ್ಚಿಟ್ಟಿದ್ದ  ಡೈರಿ ಓದುವ ಕುತೂಹಲ ದುರಾಲೋಚನೆ ಬಂದಿದ್ದು ಆಗಲೇ.

ಹಿತ್ತಲ ಗೂಡಲ್ಲಿ ಎಲ್ಲಾ  ಋತುಮಾನಗಳನ್ನ ಸಹಿಸಿಕೊಂಡು ನರಳಿದ್ದ ಆ ಡೈರಿ ಓದಲು ಕಷ್ಟವೆನಿಸಿದರು ಅದು ನನ್ನಲ್ಲಿ ಅತ್ತಿಸಿದ ಪಾಪ ಪ್ರಜ್ಞೆಯ ಉರಿ  ಎಡಬಿಡದೆ ಕಾಡಿದ್ದು ಸತತ ನಾಲ್ಕು ವರ್ಷ.ಅದನ್ನ ಪ್ರತಿ ಭಾರಿ ಓದಿದಂತೆ  ಆ ಡೈರಿಯಲ್ಲಿ ದಾಖಲಿಸಿದ್ದ  ಹತಾಶೆ ತುಮುಲ ಸಂಘರ್ಷ ನನ್ನದೆನಿಸತೊಡಗಿತು.ಪೂರ್ಣಿ ಹೇಳಿದ  ಹಾಗೆ ಆ ಡೈರಿ ಯಲ್ಲಿ ಬರಿ ಅವಳ ತಾಯಿಯ ನೆನಪಿರಲಿಲ್ಲ.ಬದಲಿಗೆ ಅವಳ ಪ್ರೀತಿ ಪ್ರೇಮ ಜಗಳ  ಅದು ಮಾಡಿದ  ಆಘಾತ ಅದರ ವಿರುದ್ದದ ಹೋರಾಟಗಳಿಂದಲೇ  ತುಂಬಿಹೋಗಿತ್ತು.ಆ  ವಯಿಸಿನಲಿ ಅಂತ ಭಾವನೆಯನ್ನ ಹೇಗೆ ತಂದುಕೊಂಡಳು?ಯಾವಾಗಲು ಮೌನಿಯಾಗಿರುತ್ತಿದ್ದವಳ ಹೃದಯದಲ್ಲಿ ಇಷ್ಟೊಂದು ಮಾತುಗಳಿದ್ದವೇ?? ಎಳೆ ವಯಸಿನಲ್ಲಿ ಪ್ರೀತಿ ಪಾತ್ರರನ್ನ  ಅದರಲ್ಲೂ ತಾಯಿ ತಂದೆಯನ್ನ  ಕಳೆದುಕೊಂಡ ಮನುಷ್ಯ ಯಾವ ಮಟ್ಟಿಗೆ ದುರ್ಬಲನಾಗುತ್ತಾನೆ ಏಕಾಂಗಿಯಾಗುತ್ತಾನೆ ಪ್ರೀತಿಗಾಗಿ ಹಂಬಲಿಸುತ್ತಾನೆ  ಸುಲಭವಾಗಿ ಜಾಲಕ್ಕೆ ಬೀಳುತ್ತಾನೆ ಮೊಸಕ್ಕೊಳಗಾಗುತ್ತಾನೆ   ಹೇಗೆ ಕುಸಿಯುತ್ತಾನೆ ಎಂಬುದೆಲ್ಲ ಸಾರಿ ಸಾರಿ ಹೇಳುತಿತ್ತು ಅವಳ ಡೈರಿ.ಪೂರ್ಣಿನ ಆ ಹುಡುಗ ಬಲವಂತವಾಗಿ ಕರೆದೊಯ್ದನೆ? ಡೈರಿ ನನಗೆ ಕೊಟ್ಟಿದ್ದು... ಅದನ್ನ  ಅವಳಜ್ಜಿಗೆ  ತಲುಪಿಸಿ ಅವಳನ್ನ ಪಾರುಮಾಡಲಿರಬಹುದೇ? ಹಾಗಿದ್ದರೆ ಪ್ಲೀಸ್ ಯಾರಿಗೂ ಕೊಡಬೇಡ ಅಂತ ಹೇಳಿದ್ಯಾಕೆ? ಅವಳು ಇಷ್ಟ ಪಟ್ಟೆ  ಹೋದಳೆ ಅವಳೇ ಬಣ್ಣಿಸಿದ  ಆ ದ್ರೋಹಿಯೊಂದಿಗೆ?

 ಯಾವುದರ ಮಾಹಿತಿ ಪಡೆಯೋಕು ಅವಳ ಮನೆಯವರ ವಿಳಾಸ ನನ್ನ ಬಳಿ  ಇರಲಿಲ್ಲ .ಪೂರ್ಣಿ ಅನಂತರ ಏನಾದಳು ಎಂಬುದ ತಿಳಿಯದೆ  ಮನಸು ಆಗಾಗ ಪಶ್ಚ್ಯತಾಪದ ಬೇಗೆಯಲ್ಲಿ ಬಳಲುತಿತ್ತು  ಪೂರ್ಣಿಯ ತಂಗಿ  ಆಶ್ಚರ್ಯವೆಂಬಂತೆ ಆ ಭಾನುವಾರದ  ಬೆಳಗ್ಗೆ   ಮಾಲ್ ನಲ್ಲಿ  ಸಿಗುವವರೆಗೂ.

ಪೂರ್ಣಿ ತಂಗಿ ವಾಣಿ ನಮಗಿಂತಲೂ ೪ ವರ್ಷ ಕಿರಿಯವಳು ನೋಡೋಕೆ  ಪೂರ್ಣಿಯ  ಅಚ್ಚು . "ಪೂರ್ಣಿ ಮನೆಗೆ ಬಂದ್ಲ" ಎಂದು ಆಕೆಯನ್ನು  ವಿಚಾರಿಸಿದಾಗ ಇಗಾ ಮೂರು ತಿಂಗಳ ಹಿಂದಷ್ಟೇ ಬಂದು ಹೋದಳಕ್ಕ ಅಂದಳು!ಶಾಲೆಯಲ್ಲಿದ್ದಾಗ ನಡೆದ ಈ  ಸಂಗತಿ  ಆಗಿನ್ನೂ ೬ನೆ ತರಗತಿಯಲ್ಲಿದ್ದ ವಾಣಿಗೆ ತಿಳಿದಂತಿರಲಿಲ್ಲ.ಪೂರ್ಣಿ  ಕ್ಷೇಮವಾಗಿ ಇದ್ದಾಳೆ ಎಂದು ತಿಳಿದೇ ಯಾವುದೊ ಹೊರೆ ಭುಜದಿಂದ ಇಳಿದಂತ  ಅನುಭವವಾಯಿತು.ನನಗೆ ಪೂರ್ಣಿನ ನೋಡಬೇಕಿತ್ತು ಅವಳಲ್ಲಿ ಡೈರಿ ಓದಿದಕ್ಕೆ  ಕ್ಷಮೆ ಕೇಳಬೇಕಿತ್ತು. ಅವಳ ನಂಬರ್ ಅಡ್ರೆಸ್ ಪಡೆದ್ದಿದ್ದೆ ನೇರ ಬಸ್ ಹತ್ತಿ ಎಡೆಯೂರಿಗೆ ಬಂದಿಳಿದು ಪೂರ್ಣಿ ಫೋನಿನಲ್ಲಿ  ಸೂಚಿಸಿದಂತೆ  ಆಟೋ ಹತ್ತಿ ಅವಳ ಮನೆ ತಲುಪಿದೆ.

ಚಿತ್ರಕಲೆ : ವೈಶಾಲಿ ಶೇಷಪ್ಪ 


ವಿಶಾಲವಾಗಿ ಕಟ್ಟಿದ್ದ ಮನೆಯ ಬಾಗಿಲಲ್ಲೇ ನಿಂತ್ತಿದ್ದಳು ಪೂರ್ಣಿ.ಬಂದವಳೇ ಪಟ ಪಟ ಯೋಗಕ್ಷೇಮ ವಿಚಾರಿಸಿದಳು ಇವಳು ಅದೇ ಪೂರ್ಣಿನ ಮಾತಿನಲ್ಲೂ ಮುಖದಲ್ಲೂ ಎಷ್ಟೊಂದು ಬದಲಾವಣೆ.ಇವಳಿಗೆ ಹಳೆ ವಿಷಯ ಹೇಗೆ ಕೇಳೋದು ಡೈರಿ ಬಗ್ಗೆ ಆ ಹುಡುಗನ ಬಗ್ಗೆ ಮರೆತಿರ ಬಹುದು ಮತ್ತೆ ನೆನಪಿಸಿ ಘಾಸಿ ಯಾದರೆ ಅನ್ನೋ ಆಲೋಚನೆ ನನ್ನನ ಸುಮ್ಮನಾಗಿಸಿತು.

"ನಿನ್ನನ್ನ ಅವತ್ತೇ ಕೊನೆ ನೋಡಿದ್ದು..ಆಮೇಲೆ ನಾವಿಬ್ಬರು ಭೇಟಿ ಮಾಡೋಕೆ ಆಗಲೇ ಇಲ್ಲ ಅಲ್ವಾ?"ಎಂದು ಅವಳೇ ಹಳೆ ಪುಟಗಳಿಗೆ ಇಳಿದಳು.

"ಹೌದು ಪೂರ್ಣಿ ನಂಗೆ ನಿನ್ ಬಗ್ಗೆ ತಿಳಿದು ಬೇಸರವಾಗಿತ್ತು.ಆಮೇಲೆ ನಿನ್ನ ಮನೆಯ ವಿಳಾಸವು  ಗೊತ್ತಿರಲಿಲ್ಲ ನಮಗ್ಯಾರಿಗೂ ನಂತರದ  ಮಾಹಿತಿ ಸಿಗಲಿಲ್ಲ.ನಿಜ ಹೇಳು ಹೇಗಿದ್ದೀಯ?" ಅಂದೆ.

 "ಖುಷಿಯಾಗಿದ್ದೀನಿ ಕಣೆ,ಯಾಕೆ ಈ ಗಾಬರಿ.ನೀನು ನನ್ನ ಡೈರಿ ಓದಿದ್ಯ?"ಎಂದು ನಗುತ್ತ ಕೇಳಿದಳು.

"ಅದನ್ನ ನನ್ನ ಬಳಿ ಯಾಕೆ ಬಿಟ್ಟೆ?ಎಲ್ಲಿ ಹೋದೆ ಆ ದಿನ?

"ಅಪ್ಪನನ್ನ  ಹೋಗೋ ಮುಂಚೆ ನೋಡೋ ಆಸೆಯಾಗಿತ್ತು .ಮತ್ತೆ ಬಂದು ತೊಗೊಳೋ ಉದ್ದೇಶದಿಂದ ಕೊಟ್ಟೆ.ಆದರೆ ಇವರು ಸಂಶಯ ಬರಬಹುದು ಬೇಗ ಹೊರೋಡೋಣ ಅಂದ್ರು"

"...................." ಅವನೊಟ್ಟಿಗೆ ಹೋದಳ....ನಂಬಲಾಗಲಿಲ್ಲ... ಮಾತು ನುಂಗಿದೆ.


"ಅಂದ ಹಾಗೆ ಆ ಡೈರಿಯಾ ಮಾತುಗಳು ನನ್ನದಲ್ಲ" ಅಂದಳು.

 "ಹಾಗಂದ್ರೆ ?" ದಿಗ್ಬ್ರಂತಳಾದೆ.

"ಈಗ ಅದು ನನ್ನದಲ್ಲ ಕಣೆ ಹುಚ್ಚಿ" ಎಂದು ನಕ್ಕಳು."ಆಗ ಅದೆಲ್ಲಾ ನಡೆದದ್ದು ನಿಜ.ಅವರು ಹಾಗೆ ಇದ್ದರು ಈಗಲೂ ಸ್ವಲ್ಪ ಹಾಗೆ ಇದ್ದಾರೆ.ಆದರೆ...ನಾನು ನನ್ನನೆ ಬದಲಾಯಿಸಿಕೊಂಡಿದ್ದೀನಿ"

"ಓ ನಾಟಕೀಯ ಆದರ್ಶಗಳ ಬೆನ್ನೇರಿ ಜೀವನದೊಂದಿಗೆ ಒಪ್ಪಂದ ಮಾಡಿಕೊಂಡೆ ಅನ್ನು"

" ಇಲ್ಲ ಜೀವನವು ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ"

ಅಷ್ಟರಲ್ಲಿ ಯಾರೋ ಮೇಲಿಂದ  ಕೂಗಿದಂತಾಯಿತು ಪೂರ್ಣಿ ಟೆರೇಸ್ ಮೆಟ್ಟಲೇರುತ್ತಾ ನನ್ನನು ಅವಳಿಂದೆ ಬರುವಂತೆ ಕಣ್ಣಲ್ಲೇ ಸೂಚಿಸಿದಳು. ಅವಳು ಏರುತಿದ್ದ ಒಂದೊಂದು ಮೆಟ್ಟಿಲು ಅದರಲ್ಲಿನ ಅವಳ ನಡಿಗೆ,ಅದಾಗಲೇ ಜೀವನದ ಮೆಟ್ಟಿಲುಗಳನ್ನೇರಿ ದಿಗಂತ ತಲುಪಿದಂಗಿತ್ತು.
ಆ ದ್ವನಿ ಪುಟ್ಟ ಕಿಶೋರನದು.ಪೂರ್ಣಿಯ ಮಗ.ಚಿತ್ರ ಬಿಡಿಸುತ್ತ ಕುಳಿತಿದ್ದ.

"ಇಲ್ಲಿಂದ ಅಲ್ಲಿರೋ ಪುಟ್ಟ ಮನೆ ಹೇಗೆ ಕಾಣುತ್ತಿದೆ ನಿನಗೆ" ಅಂದಳು

"ಪುಟ್ಟ ಮನೆ ತರ" ಅಂದೆ

"ಆ ಮನೆಯನ್ನು,ನನ್ನ ಮನೆಯನ್ನು,ಬಹು ಮಾಡಿಯ ಕಟ್ಟಡಗಳನ್ನು   ಮೋಡಗಳ ಮೇಲೆ ನಿಂತು ನೋಡಿದರೆ ಹೇಗೆ ಕಾಣುತ್ತೆ" ಅಂದಳು.

"ಎಲ್ಲವು ಚಿಕ್ಕದಾಗಿ..ಒಂದೇ ರೀತಿ"ಅಂದೆ

"ಹಾಗೆ ನಾನು ಜೀವನವನ್ನ ನೋಡುತ್ತಿರೋದು.ಹತ್ತಿರವಿದ್ದರೂ ದೂರದಿಂದ.ಎಲ್ಲರೂ ಒಂದೇ ರೀತಿ ಅನಿಸುತ್ತಾರೆ.ಎಲ್ಲವು ಸುಂದರವಾಗಿದೆ ಅನ್ನಿಸುತ್ತದೆ"

"ಅದು ಸುಳ್ಳಲ್ಲವ?"

"ಚಂದ್ರ ಸುಂದರವಾಗಿದ್ದಾನೆ ಅನ್ನೋದು ಸುಳ್ಳಲ್ಲವ? ನಕ್ಷತ್ರಗಳು ರಾತ್ರಿ ಮಾತ್ರ ಮಿನುಗುತ್ತಾವೆ ಅನ್ನೋದು ಸುಳ್ಳಲ್ಲವ?ನೀನು ನಿನ್ನ ಮೇಲೆ  ಬರಬಹುದಾದಂತಹ ಆರೋಪ್ಪಕ್ಕೆ ಹೆದರಿ ಡೈರಿ ಮುಚ್ಚಿಟ್ಟೆ ಹೊರತು ನನಗೆ ಕೊಟ್ಟ ಮಾತಿಗೆ ಬದ್ದಳಾಗಿ ಅಲ್ಲ ಅಂದರೆ ಅದು ನಿಜವ? ಎಲ್ಲವ ನೋಡುವುದಕ್ಕೂ ಎರಡು ಕೋನಗಳಿರುತ್ತಾವಲ್ಲವೇ  ಆ ಆಯ್ಕೆ ನಮಗೆ ಬಿಟ್ಟದು.ಅದರಲ್ಲಿ ಸಂತಸ ತರುವುದನ್ನೇ  ಆಯ್ಕೆ ಮಾಡಿಕೊಂಡರೆ ಒಳಿತಲ್ಲವೇ? " ಅಂದಳು. 

"ಪೂರ್ಣಿ ನೀನು ತುಂಬಾ ಬದಲಾಗಿದ್ದೀಯ ಡೈರಿ ಯಲ್ಲಿ ನಾ ಕಂಡ ಪೂರ್ಣಿನೆ ಬೇರೆ.ಅಯ್ಯೋ ಅದ ಓದಿದಾಗಲೆಲ್ಲ ಅವಳಿಗೆ ಸಮಾಧಾನ ಮಾಡಲು ಎಷ್ಟು ಪ್ರಯತ್ನಿಸುತಿದ್ದೆ ಗೊತ್ತ?" ಎಂದು ನಕ್ಕೆ...ನಾನಿಷ್ಟು ದಿನ ನಂಬಿಕೊಂಡಿದ್ದ ಕೆಟ್ಟ ಸತ್ಯಗಳು ಸುಳ್ಳಾಗಿದ್ದವು.

"ನಾನು ಬದಲಾದ ದಿನವೇ ಮನೆ ಬಿಟ್ಟೆ.ಇಗಾ ಬದಲಾಗುತ್ತಿರೋದು ನೀನು!" ಎಂದವಳೇ  ಕಾಫಿ  ತರಲು  ಹೋದಳು.

ಹೊರಡುವಾಗ ಅವಳಿಗಿಂತಲೂ  ನನ್ನ ಬಳಿಯೇ ಹೆಚ್ಚು ಕಾಲ ಇದ್ದ ಡೈರಿಯನ್ನು ಪೂರ್ಣಿಯ ಕುರುಹಾಗೆ  ನನ್ನ ಜೊತೆ  ಕೊಂಡೊಯ್ಯುವ  ಮನಸಾಯಿತು.ಕೊನೆಗೂ ನನಗೆ ಅದನ್ನ ಬಿಟ್ಟು ಕೊಡುವ ಪ್ರಮಾದ ಬರಲಿಲ್ಲ ಯಾಕಂದರೆ ಅವಳಿಗೆ  ಅದನ್ನ ಇಟ್ಟುಕೊಳ್ಳುವ  ಇರಾದೆಯೇ ಇರಲಿಲ್ಲ.ಅದರ ಕೊನೆಯ ಪುಟದಲ್ಲಿ  ಕಿಶೋರನಿಂದ  "ಗುಲಾಬಿ ಕಣ್ನಿನ ಸುಂದರ ಬದುಕು ಕಟ್ಟಿಕೊಂಡ ಅಮ್ಮನ, ಪ್ರೀತಿಯ ಮಗು-ಕಿಶೋರ್" ಎಂದು ಕೈ ಹಿಡಿದು ಬರೆಸಿದೆ.    
*
ಮಳೆ ನಿಂತಿತು.ಬಸ್ ನಿಲ್ದಾಣದಲ್ಲಿ ಹರಿದು ಹೋಗುತಿದ್ದ ನೀರು ಎಂದಿನಂತೆ  ಸೆಳೆಯಿತು.ಬ್ಯಾಗ್ ನಿಂದ ಡೈರಿ ತೆಗೆದು ಮೊದಲ  ಪುಟಗಳಿಂದ ದೋಣಿ ಮಾಡಿದೆ...ನೀರಿನಲ್ಲಿ ಒಂದೊಂದೆ ದೋಣಿ ಬಿಟ್ಟೆ.ಅದರಲ್ಲಿ ಪೂರ್ಣಿ ಅವಳ ಗಂಡ ಮಗು  ಎಲ್ಲರು ಸುಖ ಪ್ರಯಾಣ ಹೊರಟಂತೆ ಅನಿಸಿತು.ಮನಸು ಸಂತೋಷದಿಂದ  ನೆನೆಯಿತು.

ಅಷ್ಟರಲ್ಲೇ ಡ್ರಂಕ್ ಡ್ರಂಕ ಸದ್ದು.......

ಹಿಂದಿನಿಂದ ಬಸ್ಸಿನ ಹೆಡ್ ಲೈಟ್ ಮಿಂಚಿತು.ಬೆಳಕಿಗೆ ಬೆಳಕು ಚೆಲ್ಲಿದಂತಾಯಿತು.ನಾನು ಅದರೊಳಗೊಂದಾಗಿ  ಮಿಂಚಿದೆ.

*

ನಿಜ ಪೂರ್ಣಿ ಹೇಳಿದ ಹಾಗೆ ನಾನು ಅಂದು ಬದಲಾದೆ .........ಹಾಗಂತ ಎಲ್ಲವೂ ಬದಲಾಗೋದಿಲ್ಲ ಕೊನೆಗಾನೋದಿಲ್ಲ.ಕೆಲವೊಂದು ದಾಖಲಿಸುತ್ತ ಹೋದಷ್ಟು  ಪುನರ್ ಲಿಖಿತ..... ಜೀವನದ ಕೊನೆ ಸ್ಟಾಪ್ ಬರುವವರೆಗೂ ಸಮಯದೊಳಗೆ  ಚಿರಂತನವಾಗಿ  ಬಂಧಿತ.....ನನ್ನ ರಚ್ಚೆ,ಹಠ ಸ್ವಭಾವದಂತೆ.....ಎಂಬತ್ತರ ಹೊಸ್ತಿಲ್ಲಲ್ಲೂ  ಅದಕ್ಕೆ ಮಣಿದು ಕತೆ ಹೇಳುವ ನನ್ನಜ್ಜಿಯ ಉತ್ಸಾಹದಂತೆ...ಮಕ್ಕಳಾಟಿಕೆ ಮಾಡೋ ನಿನಗೆ ಬುದ್ಧಿ ಬೆಳೆದಿದೆ  ಅನ್ನೋಕಾಗುತ್ತ ಅನ್ನೋ ಅಮ್ಮನ ಉವಾಚದಂತೆ.....

Wednesday, November 28, 2012

ಧರಣಿಯ ತಣಿಸುವ : 'ಶ್ರೇಷ್ಠ ಮದುಮಗಳು'

ಸಾಮಾನ್ಯವಾಗಿ ನಮ್ಮೆಲ್ಲರ 'ಕಲ್ಪನೆ'ಗಳು  ಕಾಲಕ್ರಮೇಣ ಮರೆಯಾಗುತ್ತವೆ  ಅಥವಾ  ಧೃಡ ನಂಬಿಕೆಯಾಗಿ ಪರಿವರ್ತನೆಗೊಳ್ಳುತ್ತವೆ.ಅಂತಹ ಕೆಲ ನಂಬಿಕೆಗಳು ಅಪ್ತವೆನಿಸಿಕೊಳ್ಳುತ್ತವೆ ವಾಸ್ತವವೆನಿಸತೊಡಗುತ್ತವೆ.ನನ್ನ ಅಂತದ್ದೊಂದು 'ಕಲ್ಪನೆಯಲ್ಲದ ನಂಬಿಕೆ,ವಾಸ್ತವವೆಂದು ನಂಬಿಕೊಂಡ  ಕಲ್ಪನೆ'ಯನ್ನು ಜನಪದ ಶೈಲಿಯ ಕವನಕ್ಕಿಳಿಸಲು ಪ್ರಯತ್ನಿಸಿದ್ದೇನೆ.

ಚಿತ್ರಕಲೆ : ವೈಶಾಲಿ ಶೇಷಪ್ಪ 


*ಶ್ರೇಷ್ಠ  ಮದುಮಗಳು *

ಮುಗಿಲೂರಿನ  ಮಗಳು
ಮನೆತುಂಬೋಕೆ ಹೊರಟಿಹಳು
ಗುಡುಗು  ಮಿಂಚಿನ 
ಹಿಮ್ಮೇಳದ  ಜೋಡಿ  
ಬೆಳೆಸಿಹಳು  
ರವಿ  ಚಂದ್ರರ  ಸಹೋದರಿ
ಇಳೆಯೆಡೆ  ತನ್ ಪಯಣ

ದೂರದೂರಿನ   ನಂಟು  
ದೂರ  ಮಾಡದಿರಲಿ  ಮನವ 
ಮುಗಿಯುವೆ  ಏನ್  ಕರವ
ಹರಸಿ ನೀಡಿರೆನಗೆ  ವಚನವ 
ಅಣ್ಣಂದಿರ,
ಚಿರಕಾಲ  ಕಾಯಲಿ  ನಿಮ್ಮನ್ನು
ನಮ್ಮನ್ನು   ಬೆಸೆದ 
ಬಂಧನದ  ಗಂಟು 

ಕೇಳು  ಮುದ್ದೂ ತಂಗಮ್ಮ
ಸವಿಂದಾಚೆಗೂ ಸಾವಿರ  ಕಾರ್ಯವಿರಲಿ,
ಹಗಲೊಡನೆ ರವಿ ಬರುವ...  
ಲಕ್ಷ  ಹೆಂಡಿರ  ಸಹವಾಸವಿರಲಿ,
ಅವರೊಡನೆಯೇ ನಾ ಬರುವೆ... 
ಅನುಗಾಲ ,  
ತವರಿನ  ಬಾಗಿಲಾಚೆಗೆ  ಬಗ್ಗಿ
ನಿನ್ನ  ಕಾಣೋಕೆ  ನಾವ್  ಬರುವೆವು  
ನಿನಗಿತ್ತ  ವಚನವ  ಉಳಿಸೇವು

ತಿಳಿ  ಕಪ್ಪು  ಅರಿವೇ  ತೊಟ್ಟು ,
ಗೆಳತಿಯರೆಲ್ಲಾ  ಒಂದೆಡೆ  ಸೇರಿರಲು ..
ತೇಲಿ  ಆಡಿದ  ದಿನಗಳ  ನೆನೆದು,  
ಬಾಚಿ  ತಬ್ಬಿ ಬೀಳ್ಕೊಡಲು
ಕಣ್ಣೀರ ನವ  ರೂಪ  ಧರಿಸಿದಳು ..
ಬಾನಂಗಳದಲಿ  ಮದುಮಗಳು
 

ಮುನ್ನಡೆಯಲು  ಗಾಳಿಯ  ಸಾರಥ್ಯದಲ್ಲಿ
ಗಗನದೂರಿನ  ಮಗಳ
ಧರೆ ಯೆಡೆಗಿನ  ಪಯಣ ..
ನಲಿದಳು ಪಡೆದು, 
ಹೊಸ  ಜನುಮವ ,"ಹನಿ" ರೂಪವ
ಜಾರಿದಳು  ಬಾನಿಂದ
ಭುವಿಯ  ಚೊಚ್ಚಲ  ಸೊಸೆಯಾಗಿ,
ಸೇರಿದಳು  ಪೃಥ್ವಿಯ  ಸಿರಿಯಾಗಿ

ಅವಳು  ಅವಳಾಗಿರೋ
ಕೆಲ  ಕ್ಷಣವ  ಹಂಬಲಿಸಿ ...
ಆಗಾಗ  ಬಸರಿನ  ನೆಪವೊಡ್ಡಿ ,
ಆವಿಯಾಗಿ  ತವರ  ಸೇರುವಳು
ಸಾವಿರ  "ಹನಿ -ಮುತ್ತು "ಗಳೊಂದಿಗೆ
ಧರೆ ಗೆ  ಮರಳುವಳು

ತವರಿನಲಿ "ಮೋಡವಾಗಿ"
ಅತ್ತೆ  ಮನೆಯಲಿ  "ನೀರಾಗಿ "
"ಹನಿ "ಯಾಗಿದ್ದಾಗ  ತಾನಾಗಿ
ತೀರ್ಥವಾಗಿ ,ಎಲ್ಲರ  ಜೀವ  ಜಲವಾಗಿ,
ಬದುಕುವಳು  ಪವಿತ್ರೆ  ಸಾರ್ಥಕವಾಗಿ!

Thursday, November 22, 2012

*ಹೀಗಿಬ್ಬರು ಕಳಂಕಿನಿಯರು* - ಮತ್ತೊಂದು ಹಳೆ ಕವನ

ಚಿತ್ರಕಲೆ  : ವೈಶಾಲಿ ಶೇಷಪ್ಪ
*ಹೀಗಿಬ್ಬರು ಕಳಂಕಿನಿಯರು* 


ಕತ್ತಲಿನಲ್ಲಿಬ್ಬರು  ಬೆಳಕಿನಲ್ಲೊಬ್ಬರು  ಬೆತ್ತಲಾಗುವ ಆಟ
ಸತ್ಯ ನಂಬಿಕೆ ಎಂಬೆರಡರ ನಡುವಿನ ರಂಗಿನಾಟ
ಇರುಳು ಸರಿದಿತ್ತು ಹಗಲು ಮೂಡಿತ್ತು
ನಂಬಿಕೆಯೂ ಮರೆಯಾಗಿತ್ತು  ಸತ್ಯ ಮರುಗಿತ್ತು

ಕುಸಿದ ಮೌಲ್ಯ ಮುರಿದ ಮನಸು ಬಿಡದ ಏಕಾಂತ
ಶ್ರಾವಣದ ಮಳೆ ಸುರಿದಿತ್ತು,ಮಿಂಚೊಂದು ಬಡಿದಿತ್ತು
ಹೊಸ  ಚಿಗುರು,ಉಸಿರಿನಲ್ಲೊಂದು ಉಸಿರು,ಚಿಲಿಪಿಲಿ ಹಕ್ಕಿ
ಮರೆಯಾದ ಪ್ರೀತಿಯ ಸ್ವರೂಪ ಸೇರಿತು ಮಡಿಲಿನಲಿ
ಸಂಭ್ರಮಿಸಿದಳು ದಿವ್ಯ ಮೌನದಲಿ,ಸಮಾಜದ ಕಳಂಕಿನಿ!

ಚಂಚಲೆಯೆಂಬ ಚುಕ್ಕೆ ಇಟ್ಟವರೆಷ್ಟೋ
ಜಾರಿಣಿಯೆಂಬ ಗೆರೆಯ ಕೂಡಿಸಿದವರೆಷ್ಟೋ
ವಿಕೃತಿಯ ಚಿತ್ತಾರಕ್ಕೆ ಬಣ್ಣ ತುಂಬಿ
ಪರಿಮಿತಿಯ ಮೀರಿ ನಾಲಿಗೆಯ ಅಶುದ್ದ ಮಾಡಿಕೊಂಡವರೆಷ್ಟೋ

ಗೆಜ್ಜೆ ಕಟ್ಟಿ ಲಜ್ಜೆ ಬಿಟ್ಟಳೆಂದು ಸತ್ಯ'ಕ್ಕೆ ಸೂಳೆಯೆಂಬ ಅಲಂಕಾರದ ಟೀಕೆ   
ನಂಬಿಕೆ'ಯೇ ನಿನಗೆ ಮಾತ್ರ ರಸಿಕ ಸೂಳೆ ಮಗನೆಂಬ ಕಿರೀಟವೇಕೆ
ನಿನ್ನಯ ಪತಿತತನ ಮರೆಮಾಚಲೂ ತಾಯಿಯೆಂಬ ಹೆಣ್ಣಿನ ಸೆರಗು ಬೇಕೆ
ಮನ ಬಂದಂತೆ ಪರರ ವ್ಯಕ್ತಿತ್ವಕ್ಕೆ ಕೆಸರೆರೆಚುವ ಚಪಲವೇಕೆ

ಈ ದೊಂಬರಾಟಕ್ಕೆ ಸಿಲುಕಿದ
ಜೀವವೊಂದು ಬಾಡಿ,ಪಿಸುಗುಟ್ಟಿತು  
ನಂಬಿಕೆಯೆಂಬ ಅಪ್ಪನೆ 
ನೀ ಜೋಡಿ ನಡೆದಿದ್ದರೆ
ಅನನ್ಯತೆ ಮೆರೆದ್ದಿದ್ದರೆ
ಸತ್ಯಯೆಂಬ ನನ್ನ  ಅಮ್ಮನು 
ಅನಿಸಿಕೊಳ್ಳುತ್ತಿದ್ದಳಲ್ಲವೇ ಪತಿಯ ಪತಿತೆ!

-ವೈಶಾಲಿ ಶೇಷಪ್ಪ

Friday, November 16, 2012

ಹವಣಿಕೆ! ಭೂಮಿ ಸೂರ್ಯ ಚಂದ್ರ ಸಾಲಿನಲಿ ನಿಂತಾಗ....

"ದೇಹವನ್ನಾದರು ಸುಲಭದಲ್ಲಿ ಪರರೆದುರಿಗೆ ತೆರೆದಿಡಬಹುದೇನೋ ಆದರೆ ಆತ್ಮವನ್ನು ತೆರೆದಿಡುವುದು ಅತ್ಯಂತ ಕಠಿಣ"- ನನ್ನನ  ಅತೀಯಾಗಿ ಕಾಡುವ ವಾಕ್ಯವಿದು.ಈ ಒಂದು ಸಾಲು ಮನುಷ್ಯನಿಗೆ ತನ್ನ ಬಗ್ಗೆ ಹಾಗು ಇತರರ ಬಗ್ಗೆ ತನಗಿರೋ  ಬಲವಾದ ನಂಬಿಕೆ ವಿಶ್ವಾಸಗಳನ್ನೇ ಅಲುಗಾಡಿಸಿ ಬಿಡುವಂತದ್ದು.ಅಬ್ಬಾ!ಯಾರೆದುರಿಗಾದರು ನಮ್ಮ ಪ್ರತಿ ಆಲೋಚನೆ ಮನಸಿನ ತುಡಿತ ಆತ್ಮ ಚಟುವಟಿಕೆ ಸಹಿತವಾದ ನಿಜ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತೆರೆದಿಡುವುದೆಂದರೆ ಸುಲಭದ ಮಾತಲ್ಲ.ಅದರಲ್ಲೂ ಹತ್ತಿರದ ಗಾಢ ಸಂಭಂದಗಳಂತು ಸದಾ ಇಂತಹ ಮುಕ್ತತೆಯ ಅನುಭೂತಿಯೊಂದರ  ನೀರಿಕ್ಷೆಯಲ್ಲಿರುತ್ತವೆ.ನಮಗಿರುವ ಅನಿವಾರ್ಯತೆ  ಭಯ ಒತ್ತಡ ಇತ್ಯಾದಿಗಳಿಂದ ಬೇಕಂತಲೇ ಮುಚ್ಚಿಡುವ ದೊಡ್ಡ ಸೂಕ್ಷ್ಮ ವಿಚಾರಗಳ ಸಂಗತಿ ಒತ್ತಟಿಗಿರಲಿ ಕೆಲವೊಂದು ಬಾರಿ ಸಣ್ಣ ಪುಟ್ಟ ವಿಷಯಗಳು ಸಮಯಕ್ಕೆ ನೆನಪಿಗೆ ಬಾರದಿದ್ದದಕ್ಕೋ ಅಥವಾ ಕ್ಷುಲಕವೆನಿಸಿಯೋ ಪರಸ್ಪರ ಹಂಚಿಕೊಳ್ಳದಿದ್ದಾಗ ಆಕಾರಕ್ಕಿಂತಲೂ ದೊಡ್ಡದಾಗಿ ಪರಿವರ್ತನೆಗೊಂಡು ಸಂಭಂದಗಳ ದೋಣಿಯನ್ನೇ ಮುಳುಗಿಸುವಷ್ಟು ತಾಕತ್ತನ್ನ ಪ್ರದರ್ಶಿಸಲು ನಿಂತು ಬಿಡುತ್ತವೆ.

ಹೊರ ಜಗತ್ತಿನ ಮುಂದಿರಲಿ ಮೌನದಲ್ಲಿ ಎಷ್ಟು ಬಾರಿ ನಾವುಗಳು ನಮ್ಮಲ್ಲಿರುವ ಅಭಿವ್ಯಕ್ತಿಗೆ ಸ್ವತಂತ್ರ ಕೊಟ್ಟಿರಬಹುದು?ಅವನೆಲ್ಲಾ ಸ್ವವಿಮರ್ಶಕನ  ಎದುರೆಳೆದು ನಮ್ಮನ್ನು ನಾವೇ ಇಡಿಯಾಗಿ ವಿಮರ್ಶಿಸಿರಬಹುದು? ಯಾವಾಗಲು ರೇಸಿಗೆ  ಬಿದ್ದಂತೆ ಮತ್ತೊಬ್ಬರ ಮುಖವಾಡ ಕಳಚೋ ಹಿಂದಿರುವ ನಾವುಗಳು ನಮ್ಮೊಳಗಿರುವ ಮುಖವಾಡಗಳ ಎಳೆಯೋ ಪ್ರಯತ್ನ ಪಡುವುದು ವಿರಳ.ನಾನು ಕಣ್ಣು ಮುಚ್ಚಿ ಅಂತದ್ದೊಂದು ಪ್ರಯತ್ನ ಮಾಡಿದಾಗೆಲ್ಲ ಅವಳೇ ನೆನಪಾಗುತ್ತಾಳೆ.ಅಮ್ಮ ಅಪ್ಪ ಅಜ್ಜಿನ ಹೊರತು ಪಡಿಸಿ ಅವಳೊಬ್ಬಳೇ ನನ್ನ ಉಸಿರಿನ ಏರಿಳಿತಗಳ ಮೇರಿಗೆ ಮನಸಿನ ಸ್ಥಿತಿಗತಿಗಳ ತಾನೆ ಅನುಭವಿಸಿದಷ್ಟು ನಿಕರವಾಗಿ ಹೇಳಿಬಿಡುತ್ತಿದ್ದವಳು.ಇಂತಹ ಗೆಳತಿ ಗೆಳತಿಗಿಂತಲೂ ಹೆಚ್ಚು ಆತ್ಮ ಸಹೋದರಿ ಎನಿಸಿಕೊಂಡವಳಿಗೂ ಸಹ ನನ್ನದೊಂದು  ವಿಚಿತ್ರ ಸ್ವಭಾವದ ಪರಿಚಯವಿರಲಿಲ್ಲ.ಅದೇನಂದರೆ ನಾನು ಕೆಲವೊಮ್ಮೆ ಕಾರಣವೇ ಇಲ್ಲದ ಕಾರಣಕ್ಕೆ ಯಾರೋ ಎಂದೋ ಚುಚ್ಚಿದ ಮಾಸದ ಗಾಯದ ಕನವರಿಕೆಗಳಿಗೆ ನನ್ನದೇ ಕೆಲವು ದೋಷಗಳಿಂದ ಬಿದ್ದ ಪೆಟ್ಟಿನ ಕಲೆಗಳಿಗೆ ಸುತ್ತಮುತ್ತಲಿನೆಲ್ಲರು ಹಕ್ಕುದಾರರೆನ್ನುವಂತೆ ನನ್ನ ಅಪ್ತರಿಂದ ದೂರ ಸರಿದು ಬಿಡುತ್ತೇನೆ.


ನಾನು ಚಿಕ್ಕವಳಿದ್ದಾಗ ಆಲೂ ಬಟಾಟ ಪುರಿ ಬಾಯಿಚಪ್ಪರಿಸಿ ಆಸೆ ಪಟ್ಟು ತಿನ್ನುತ್ತಿದ್ದೆ .ಒಮ್ಮೆ ಅಮ್ಮ ನನ್ನ ತಟ್ಟೆಯಿಂದ ಅದನ್ನ ತಿನ್ನಲ್ಲು ನೋಡಿದಳು,ಅಷ್ಟೇ ಆಗಿದ್ದು,ಅಂದಿನಿಂದ ಆಲೂ ಚಾಟ್ ಮುಟ್ಟಿದವಳಲ್ಲ ನಾನು!ನಂಗಿಷ್ಟ ಅಂತ ಎಷ್ಟು ಸಲ ಆಲೂ ಚಾಟ್ ಅಪ್ಪನಿಗೆ ಹೇಳಿ ತರಿಸಿ ಅಮ್ಮನಿಗೆ ತಿನ್ನಿಸಿದ್ದೇನೋ ಲೆಕ್ಕವಿಲ್ಲ ಆದರೆ ನಾನು ಮಾತ್ರ ಅದನ್ನ ಪೂರ್ತಿ ತ್ಯಜಿಸಿದೀನಿ.ನಾನು ಹೆಚ್ಚು ಇಷ್ಟಪಡುವುದನ್ನು ನನ್ನವರೆ ಆಯ್ದು ಕೊಂಡರೆ ಅದನ್ನು ನಾನು ಕೈ ಬಿಟ್ಟು ಅವರ ಮೂಲಕವೇ ಅನುಭವಿಸುವ ಸುಡುಗಾಡು ಭಾವವೋ ದುರ್ಬುದ್ಧಿಯೋ ಅಂತೂ ಅಪ್ತರನ್ನು ದೂರ ಮಾಡಿಕೊಳ್ಳೋ ಮತ್ತೊಂದು ವಿಧವು  ಬೆಳೆದುಕೊಂಡಿದೆ.ಹೀಗೆ ಅನೇಕಾನೇಕ ವೈವಿದ್ಯಮಯ ಕಾರಣಗಳಿಂದಾಗಿ ಸಣ್ಣ  ವೈರಾಗ್ಯವ ಅಪ್ಪಿಕೊಂಡೇ ಬದುಕುವ ಚಟವತ್ತಿಸಿಕೊಂಡಿದ್ದೇನೋ ಚಟವತ್ತಿಸಿಬಿಡುತ್ತಾರೋ  ಗೊತ್ತಿಲ್ಲ ಒಟ್ಟಾರೆ ಚಟವಂತು ಇದ್ದೆ ಇದೆ! ಈ ನಡವಳಿಕೆಯೂ ಸುಮಾರು ಸಲ ಉಪಯೋಗಕ್ಕೆ(ತಿಂಡಿ ∝ ತೂಕ) ಬಂದದ್ದು ಉಂಟು ಅದರಿಂದಾಗಿ ಉತ್ತಮ ಸ್ನೇಹ ಕಸಿದು ಹೋದದ್ದು ಉಂಟು. ಆದರೆ ಅವಳಿದ್ದಾಳಲ್ಲ... ಅವಳು ಮಾತ್ರ ಹೀಗೇಕೆ? ಅವಳೇ "ಅವನಿ".ಅವಳು ಅದೆಷ್ಟು ಮುನಿಸಿಕೊಂಡಿದ್ದಾಳೋ ಒಳಗೊಳಗೇ ವ್ಯಥೆ ಪಟ್ಟಿದ್ದಾಳೋ ನೆಪಕ್ಕಾದರು ಯಾರ ಮುಂದೆಯೂ ಚಕಾರವೆತ್ತಿರುವ ಸುದ್ದಿ ಬಂದಿಲ್ಲ ನೇರ ನನ್ನನ್ನೇ ಕಟುವಾಗಿ ಪ್ರಶ್ನಿಸಿದ್ದು ಇಲ್ಲ.ಅವನಿ' ಮೌನವನ್ನೂ ಮಾತಾಡಿಸ ಬಲ್ಲಂತಹ  ಸಂವೇದನಶೀಲತೆವುಳ್ಳ ವ್ಯಕ್ತಿತ್ವದವಳು.ನೂರು ಸುಳ್ಳುಗಳ ನಡುವೆ ಒದ್ದಾಡುತ್ತಿರುವ ಒಂದು ಸತ್ಯವ ಹೆಕ್ಕಿ ಅದರಂತರಾಳವ ಅರಿಯುವ ಸಿದ್ದಿ ಅವಳಿಗೆ ಮಾತ್ರ ಸಂದಿರುವಂತೆ ಪ್ರೀತಿಸುವ ಜಾಯಮಾನದವಳು!ನನಗೆ ಇಂತವಳ ಪರಿಚಯವಾಗಿ ಅದಾಗಲೇ ಹತ್ತೊಂಬತ್ತು ವಸಂತಗಳಾಗಿವೆ.ಚಿತ್ರಕೃಪೆ:ಮದನ್ ಕುಮಾರ್


ಒಂದೇ ಓಣಿ  ಒಂದೇ ಶಾಲೆ ಒಂದೇ ಟುಷ್ಯನ್ ಅಂತ ಒಟ್ಟೊಟ್ಟಿಗೆ ಬೆಳೆದ ಹುಡುಗಿಯರು ನಾವು.ಶಾಲೆಯಲ್ಲಿ ನಾವಿಬ್ಬರು ಪರಸ್ಪರ ವಿನಿಮಯಿಸಿಕೊಳ್ಳುತ್ತಿದ್ದ ನಗೆ ತಪ್ಪಿದರೆ ಒಂದೆರೆಡು ಮೊಟಕು ಮಾತುಗಳಿಗಷ್ಟೇ ಪರಿಚಯಸ್ತರು ಅನ್ನಿಸಿಕೊಂಡಿದ್ದೆವು.ಅದಕ್ಕೂ ಮೀರಿದ ನಿಜ ಸ್ವರೂಪದ ನವಿರಾದ ಗೆಳೆತನ ಬೆಳೆದಿದ್ದು ನಂತರದ ದಿನಗಳಲ್ಲಿ ಎಂಟು ವರುಷಗಳ ಕೆಳಗೆ.ಈ ಎಂಟು ವರುಷದ ಸುಧೀರ್ಘ ಗೆಳೆತನದಲ್ಲಿ ನಾವಿಬ್ಬರು ಒಬ್ಬರನೊಬ್ಬರು ನೋಡದಂತ ನಡೆದ ನಿತ್ಯದ ರಾಮಾಯಣಗಳನ್ನ ಹಂಚಿಕೊಳ್ಳದಂತ ದಿನವೇ ಹುಟ್ಟಿರಲಿಲ್ಲ.ಅವನಿ ಮುಗ್ದ ಹುಡುಗಿಯಾದರೂ ಚುರುಕು ಸ್ವಭಾವದವಳು ವ್ಯವಹಾರ ವಿಷಯಗಳಲ್ಲಿ ನನಗಿಂತ ಚಾಣಾಕ್ಷೆ ನನಗಿಂತಲೂ ಒಂದು ಕೈ ಹೆಚ್ಚು ಧೈರ್ಯವಂತೆ.ಗಡುಸುಗಾರ್ತಿ ಮಾತುಗಾರ್ತಿ  'ಭೂಮಿ'ಯಷ್ಟೇ ಸಂಯಮವುಳ್ಳ ನನ್ನ 'ಅವನಿ' ಎಲ್ಲರ ಮನಸಲ್ಲೂ ಸುಲುಭದಲ್ಲಿ ನೆಲೆಯೂರಿಬಿಡುತ್ತಿದ್ದ ಸ್ನೇಹಮಯಿ.

ದಿನಾಂಕದ ವಿಚಾರದಲ್ಲಿ ಅತಿ ಮರಗುಳಿಯಾದ ನನಗೆ ಪ್ರತಿಯೊಂದನ್ನು ತಪ್ಪದೆ ನೆನಪಿಸಿ ನಾನು ಯಾವುದೇ ವಿಶೇಷ ದಿನಗಳನ್ನ ಕಾರ್ಯಗಳನ್ನ ಮರೆಯದಂತೆ ನೋಡಿಕೊಳ್ಳುತ್ತಿದ್ದಳು.ಅದೆಷ್ಟರ ಮಟ್ಟಿಗೆಂದರೆ ಅವನಿ'ಯ ಹುಟ್ಟು ಹಬ್ಬವನ್ನೂ ಅವಳೇ ನೆನಪಿಸಬೇಕಿತ್ತು " ಸ್ವೀಟಿ ಸಂಜೆ ಮನೆಗೆ ಬಾರೋ ಪಾರ್ಟಿ ಇದೆ....ಅದಿರಲಿ ನನಗೆ ವಿಶ್ ಮಾಡೋಲ್ವ ನೀನು?" ನಗುತ್ತಲೇ ಕೊಂಚವೂ ಮುನಿಸಿಲ್ಲದೆ ವರ್ಷ ವರ್ಷ ಫೋನ್ ಅಚ್ಚುತ್ತಿದ್ದಳು ಅವನಿ.ಇನ್ನು ನನ್ನ ಹುಟ್ಟು ಹಬ್ಬಕ್ಕೆ  ಸ್ನೇಹಿತೆಯರ  ಪೈಕಿ ಮೊದಲನೇ ವಿಶ್ ಅವಳದೆ! ಅವಳು ತೋರುತ್ತಿದ್ದ ಕಾಳಜಿ ಮೆರೆಯುತ್ತಿದ್ದ  ಹೃದಯ ವಿಶಾಲತೆ  ಯಾವುದಕ್ಕೂ ನನ್ನ ಬಿಟ್ಟು ಕೊಡದ ಅವಳ ಅಮ್ಮನಂಥ ಆಪ್ತತೆಯೇ ನಾನು ಬಹುವಾಗಿ ಹಚ್ಚಿಕೊಂಡಿದ್ದು.ಒಡ ಹುಟ್ಟಿದ ಸಹೋದರಿ ಭಾಗ್ಯ ಕಾಣದ   ನನಗೆ ಒಂದು ವರುಷ ಹಿರಿಯವಳಾದ ಅವನಿ'ಯೇ ಅಕ್ಕ ಆದಳು.ಇಂತಿಪ ಅವನಿ'ಯನ್ನು ನಾ ದೂರ ಮಾಡಿಕೊಂಡಿದ್ದಾದರು ಯಾಕೆ ಅನ್ನೋ ನಿರ್ದಿಷ್ಟ ಕಾರಣ  ನನಗೂ  ತಿಳಿದಿಲ್ಲ.ನಮ್ಮಿಬ್ಬರ ನಡುವೆ ಅಂತದ್ದೊಂದು ಕಡೆ ಕೊನೆಯಿಲ್ಲದ ಮೌನ ಸೃಷ್ಟಿ ಮಾಡಿ ನಿಲ್ಲಿಸಿರುವುದಕ್ಕೆ ಯಾರದೋ ವೈಯುಕ್ತಿಕ ಹಿತಾಸಕ್ತಿಗಳಿದ್ದಿರಬಹುದು ಒಳಸಂಚಿದ್ದಿರಬಹುದು ಅದೇನಿದ್ದರು    ಇವೆಲ್ಲದಕ್ಕೂ ನನ್ನ ಅವನಿ'ಯ ಸುಂದರ ಮಧುರ ಗೆಳೆತನವಂತು ಕಾರಣವಲ್ಲವೆಂಬ ಸತ್ಯದ ಅರಿವು ಮಾತ್ರ ನನಗಿತ್ತು ಅವಳಿಗೂ ಇದ್ದಂಗಿತ್ತು.ಅದುವೇ ನನ್ನನ್ನು ಇಂದಿಗೂ ಆ ಮೌನ ಕಾಪಾಡಲು ಪ್ರೇರೇಪಿಸುತ್ತದೆ ಅಂತೆಯೇ ಅವಳಿಗೆ ಆ ಮೌನ ಮುರಿಯಲು!


ನನ್ನ ಇತರೆ ಸ್ನೇಹಿತರು ಬಂಧುಗಳು ಕೂಡ ನನ್ನೀ ತರ ತರನಾದ ವೈರಾಗ್ಯಕ್ಕೆ ಅಂಟಿಕೊಳ್ಳುವ ಸ್ವಭಾವದ ರುಚಿ ನೋಡಿದ್ದುಂಟು ಅವೆಲ್ಲವೂ ಒಂದೆರೆಡು ದಿನ ವಾರದೊಳಗೆ ಮುಗಿಯುತ್ತಿತ್ತು.ಅದೇಕೋ ಅವನಿ'ಯ ವಿಚಾರದಲ್ಲಿ ತುಸು ಜಾಸ್ತಿ ಎಂಬಂತೆ ಸಾಗಿ ಬಿಟ್ಟಿದೆ.ನಾನು ಅವಳನ್ನೆಷ್ಟೇ  ದೂರವಿಟ್ಟರು ಅವಳು ನನ್ನನು ಎಂದಿನಂತೆ ಪ್ರೀತಿಸುತ್ತಾಳೆ ಮುಂದೆಂದ್ದಾದರು ಅವಳೆದುರು ನಿಂತರೆ ಹಿಂದಿನ ಹಾಗೆ ಆಲಂಗಿಸುತ್ತಾಳೆ ಅನ್ನೋ ಧೃಡ ನಂಬಿಕೆಯೇ?ನಮ್ಮಿಬ್ಬರ ಸ್ನೇಹದ ಪರೀಕ್ಷೆಯೇ? ಅಥವಾ ನನ್ನ ಆವರಿಸಿಕೊಂಡಿರುವ ವಿಚಿತ್ರ ಸ್ವಭಾವ ಪಡೆದಿರುವ ವಿರಾಟ ಸ್ವರೂಪದ ನರ್ತನವೇ? ಗೊತ್ತಿಲ್ಲ! ಸದ್ಯದ ನನ್ನ  ಈ ಮೌನಕ್ಕೆ ಮೂರು ವರ್ಷ ಆರು ತಿಂಗಳ ಪ್ರೌಡತೆ! ಮೊದಲೆಲ್ಲ ಮನೆಗೆ ಹುಡುಕಿಕೊಂಡು ಬಂದು ಬಿಡುತ್ತಿದ್ದವಳನ್ನ ಕೆಲವೊಮ್ಮೆ ಮನೆಯಲ್ಲಿ ಇದ್ದುಕೊಂಡೆ ನನ್ನ  ಕೋಣೆ ಮೂಲೆ ಸೇರಿ ಅಮ್ಮ ಅಪ್ಪನ ಬಾಯಲ್ಲಿ ಇಲ್ಲವೆಂದು ಸುಳ್ಳು ಆಡಿಸಿ ಕಳಿಸಿ ಬಿಡುತ್ತಿದ್ದೆ.ಮನೆಯವರಿಗೂ ನಂದು ಅತಿರೇಕದ ನಡವಳಿಕೆ ಅನಿಸಿ ಬಯ್ದಾಡುತಿದ್ದರಾದರು  ಮನಸಿಗೆ ತೋಚಿದಂತೆ ಆಡೋ ನನ್ನ ಬುದ್ಧಿಗೆ ಅವರೆಲ್ಲ ಸೋತು ಎಂದೋ ಶರಣಾಗಿದ್ದಾರೆ.ಆದರೆ ಅವನಿ'ಗೆ ಅವಮಾನಿಸಿ ಕಳಿಸೋದು ನನಗೆ  ಕೊಂಚವೂ ಇಷ್ಟವಿಲ್ಲದಿದ್ದ ಕಾರಣ ಪರಿಹಾರವೆಂಬಂತೆ ಮನಸು ಮಾಡಿ ಕೊನೆಗೂ ಒಂದು ಮೆಸೇಜ್ ಕಳಿಸಿ ಬಿಟ್ಟಿದ್ದೆ"ಇತ್ತೀಚಿಗೆ ತುಂಬಾ ಬ್ಯುಸಿ ಆಗಿದ್ದೀನಿ ಮನೇಲಿ ಇರೋದು ಕಡಿಮೆ ಬರೋ ಮುಂಚೆ ಮೆಸೇಜ್ ಕಳಿಸಿ ನಾನಿರುವುದ  ಕಾತರಿ ಪಡಿಸಿಕೊಂಡು ಬಾ ಸುಮ್ಮನೆ ಬರೋ ತೊಂದರೆ ಬೇಡ ನಿನಗೆ.ಜೋಪಾನ ಮಾಡು." ಈಗ  ಅವನಿ'ಗೂ ಅವಳದೇ ಆದ ಕೆಲಸ ಅಲ್ಲಿನ ಸ್ನೇಹಿತರಿದ್ದಾರೆ ಹಾಗಿದ್ದರು ವಾರಕ್ಕೆ ಎರಡು ಸಲ ಪರ್ಸನಲ್ ಮೆಸೇಜ್ ಮೇಲ್ ರವಾನಿಸೋದ ಮರೆತಿಲ್ಲ."ಹೇಯ್ ಹನಿ ಊಟ ಆಯ್ತಾ? ಹೇಗಿದ್ದೀಯ?ನಿನ್ನ ನೋಡಬೇಕಂತ ಆಸೆ ಆಗಿದೆ.ಪ್ಲೀಸ್ ಈ ವೀಕೆಂಡಾದರು ಸಿಗುತ್ತಿಯ?" ಅನ್ನೋ ಅವಳ ಮೆಸೇಜ್ ಗಳಿಗೆ ಮನಸಿನಲ್ಲೇ ಉತ್ತರಿಸಿಕೊಳ್ಳುತ್ತೇನೆ.ಈ ದಿನದವರೆಗೂ ಅವಳಿಗೆ ಮೆಸೇಜ್ ನಲ್ಲಿ ಉತ್ತರಿಸೋದು ಅವಳ ಕರೆ ಕಟ್ ಮಾಡಿದ್ದಾಗ ಅಥವಾ ಆಕೆಯ "ಮನೆಗೆ ಬರಲಾ?" ಎಂಬ ಆರ್ತ ಬಿನ್ನಹಗಳ ಎಸಎಂಎಸ ಬಂದಾಗ ಮಾತ್ರ.

ಈ ರೋಧನೆ ಹಿಂದೆಯೂ ಕಾಣದ ಮುಗುಳ್ನಗೆ ಪ್ರೀತಿ ಅರಳುತ್ತಿದೆ.ನನ್ನ ಮೌನಕ್ಕೆ ಯಾರದೋ ಮಾತುಗಳಿಗೆ ಸೇತುವೆ ಆದ ಸಾರ್ಥಕತೆಯಿದೆ.ಹಪ ಹಪಿಸಿ ಬರೊ ಬಿಕ್ಕಳಿಕೆಗಳಿಗೆ ಅವನಿಯ ನೆನಪಿನ ಲೇಪನವಿದೆ.ಒಟ್ಟಿನಲ್ಲಿ ನಾ ಅವನಿ ಮುಂದೆ ಧರಿಸಿರುವ ಮುಖವಾಡ ಒಂಥರಾ ಹಿತಾನುಭವ ಅಷ್ಟೇ ಕಾಡುವ ದುಃಖದ ಕಣ್ಣೇರುಗಳು ನೀಡುತ್ತಿದೆ.ಎಲ್ಲದಕ್ಕೂ ಮಿಗಿಲಾಗಿ ಅವನಿ ಇಲ್ಲದ ಬದುಕು ಹಲವು ಪಾಠ ಕಲಿಸಿದೆ.ಇತ್ತೀಚಿಗೆ ಸ್ವಲ್ಪ ಪೆದ್ದುತನ ಕಳಚಿ ಹೋಗಿ ಅದರ ಬದಲಿಗೆ ಸಾಸಿವೆಯಷ್ಟು ಚುರುಕುತನ ಬೆಟ್ಟದಷ್ಟು ಮೊಂಡುತನ ಕುಕ್ಕರಿಸಿದೆ.ಹಿಂದಿಗಿಂತಲೂ ಹೆಚ್ಚು ಧೈರ್ಯವಂತಳಂತೆ ನಟಿಸಲು ಕಲಿತಿರುವೆ.ಹಾಗೆಯೇ ಎಲ್ಲಾ ಮುಖ್ಯ ಕಾರ್ಯಕ್ರಮಗಳ ದಿನಾಂಕಗಳನ್ನು  ಕಡ್ಡಾಯವಾಗಿ ಬರೆದಿಟ್ಟುಕೊಂಡು ನೆನಪಿಗೆ ತಂದುಕೊಳ್ಳುವ ಯತ್ನ ನಡೆಸುತ್ತೇನೆ ಇನ್ನು ಕೆಲವನ್ನು ಎಂದಿನಂತೆ ಅವನಿ ಇಂದಿಗೂ ಮೆಸೇಜ್ ಮಾಡಿ ನೆನೆಪಿಸುವುದ ಮರೆತಿಲ್ಲ.ಮೊನ್ನೆ ರಾತ್ರಿ 12 ಆಗುತ್ತಿದಂತೆಯೇ ಅವನಿಯ ಹುಟ್ಟು ಹಬ್ಬ ಜೀವನದಲ್ಲೇ ಮೊಟ್ಟ ಮೊದಲ ಬಾರಿಗೆ ನೆನಪಿನಲ್ಲಿ  ನಿಂತ್ತಿತ್ತು!ಅದೇ ಖುಷಿಯಲ್ಲಿ ಫೋನ್ನಲ್ಲಿ  ನಂಬರ್ ಕೀ ಒತ್ತುತಲೇ ..ಯಾವುದೊ ದುಃಖ ಉಮ್ಮೆಳಿಸಿ ತುಟಿ ಕಚ್ಚಿ ನುಂಗಿ ಫೋನ್ ಆಚೆ ಎಸೆದೆ."ಹೇಯ್ ಡಿಯರ್ ವಿಶ್  ಮಾಡೋಲ್ವಾ?ಮನೆಗೆ ಬಾರೋ" ಮೆಸೇಜ್ ಗಾಗಿ ಮುನ್ನೋಡುತ್ತ ಕೂತಲ್ಲೇ ನಿದುರೆಗೆ ಜಾರಿ ಹೋದೆ...  


"ಬೆಳಕಿನ ಬೆನ್ ಹಿಂದೆಯೇ,
ಕತ್ತಲಿರುವಂತೆ.....
ಎಲ್ಲಾ  ಶ್ರೇಷ್ಟ ಪ್ರೀತಿಗೂ,
ಸ್ವಾರ್ಥದ ಸೆರಗುಂಟು.....
ತ್ಯಾಗದ ದೇಣಿಗೆ ಉಂಟು....
ಎಲ್ಲಾ ನಲಿವಿನ ಮುನ್ನುಡಿಯಲ್ಲೇ,
ಕೇಳದ ಚಿತ್ಕಾರದ ನೆರಳುಂಟು.....
ಎಲ್ಲಾ ಸತ್ಯದ ಗರ್ಭದಲ್ಲೂ,
ಚಿಕ್ಕ ಸುಳ್ಳಿನ ಕಿಡಿಯುಂಟು...."

ಹವಣಿಕೆ! ಭೂಮಿ ಸೂರ್ಯ ಚಂದ್ರ ಸಾಲಿನಲಿ ನಿಂತಾಗ....


Sunday, November 11, 2012

ಹಳೆಯದೊಂದು ಕವನ

ಚಿತ್ರ ಕೃಪೆ : ಅಂತರ್ಜಾಲ ನಿರಂತರ!

ಎತ್ತರದ ಗೋಡೆಗಳ ಕೋಟೆ
ಅಂಗಳದಲಿ ಬಾಡಿದ ಹೂವಿನ ಮೋರೆ
ಗೊಡವೆ ಇಲ್ಲದೆ ನೆಲ್ಲಕ್ಕೆ ಚಿದಿರಿದ ದೇಹ
ಕಳಚಿದಂತಿದೆ ಯವ್ವನದ ಪೊರೆ
ಚೆಲುವಿಗೆ ಹಿಂದೊಮ್ಮೆ ಇವಳೇ ಅರಸಿ!

ಹೊರ, ಹಸಿರು ಬಳ್ಳಿಯ
ಒಣಪು ಬಿನ್ನಾಣದ ಸುಂದರ ವನ
ಹೆಮ್ಮರಗಳ ಆಸರೆಯ
ತೋಳ ತೆಕ್ಕೆಗೆ
ತೇವ ನೆಲದ ಆರೈಕೆಗೆ                                                                                                                                                                                        ಅರಳಿದ ನೂರಾರು ಹೂ ಮನ 
ಅಂದೆಲ್ಲೋ ದಟ್ಟ ಕಾಡಿನ ಗರ್ಭದೊಳು
ಸುಗಂಧ ಬರಿತ ಹೂವಾಗಿ ನಿಂತು
ಸೆಳೆದಿದ್ದು ಬರಿಯ ವಿಷ ಮನವನೆ
ಮುಳ್ಳಿನ ನಡುವೆಯೇ ನಗುವ
ಕೇದಿಗೆಯ ಬಾಳು

ಪ್ರೀತಿಗಾಗಿ ಬಂದವರೆಲ್ಲ
ದೇವತೆ ಎಂದು ಬಣ್ಣಿಸಿದರಲ್ಲಾ
ಕೊನೆಗೂ ಸ್ಥಾಪಿಸಿದ್ದು
ಮನದಲ್ಲಲ್ಲ ಮನೆಯಲ್ಲಲ್ಲ
ಗುಡಿಯಲ್ಲೇ!
ದರ್ಶನಕ್ಕಾಗಿ
ನಿತ್ಯದ ಕರ್ಮಕ್ಕಾಗಿ

ಪರದೆ ಎಳೆಯುವ ಮುನ್ನವೇ
ಮುಗಿದ ಕಥೆಯ
ಪಾತ್ರಧಾರಿಗಳೆಲ್ಲ ಬರಿಯ
ಉಸಿರಾಡೋ ಶವ

ಏನಾದರು ನಟಿಸಲೇ ಬೇಕು
ನಟಿಸಿ ಮೆಚ್ಚಿಸಲೇಬೇಕು
ಏಷ್ಟಾದರೂ ಕಥೆಯಿಲ್ಲದ ನಾಟಕಕ್ಕೂ
ಸೂತ್ರಧಾರಿಯು ಅವನೇ ತಾನೇ (ನಗು)

ಬಿಸಿಲಲ್ಲೋ ಮಳೆಯಲ್ಲೋ
ತನ್ ಹೆಸರ ನೆರಳಲ್ಲೋ
ನರಳಿಸಿ ಬೇಯಿಸಿ ಅವಮಾನಿಸಿ
ಹೇಗೋ ಬದುಕಿಸಿ ಬಿಟ್ಟ
ವ್ರಧ್ಯಪ್ಯದ ಅಂಚಿನಲಿ
ಕೋಟೆ ಬೇಲಿಯ ಬಾಳಿಗೆ ಬಿಡುಗಡೆಯನಿಟ್ಟ

ಅವಳು ಹೊರ ನಡೆದಂತೆ
ಕಂಡಿದ್ದು ಅವಳದೇ ಹಳೆ ಪ್ರತಿಬಿಂಬ
ಒಳ ಹೊಕ್ಕಿದ ದೃಶ್ಯ
ಕೂಗಲು ದ್ವನಿ ಇಲ್ಲ
ಹಿಡಿದು ನಿಲ್ಲಿಸಲು ಬಲವಿಲ್ಲ
ಗೋಡೆಗಳ ಮಧ್ಯೆ
ಮತ್ತದೆ ಕಥೆಯಿಲ್ಲದ ನಾಟಕಕ್ಕೆ
ರಂಗ ಸಜ್ಜು

ಇಷ್ಟಾದರೂ
ಸೂತ್ರಧಾರಿಯು ಅವನೇ ತಾನೇ (ಅಕ್ರೋಶ)

Tuesday, November 6, 2012

ಸಿಕ್ಕ ಸಿಕ್ಕ ಹೆಣ ಹೊರುತ್ತಿದ್ದವ!ಕಥೆಗಳ ಆಚೆಗೂ ಬದುಕ್ಕಿದ್ದವ!

ಸಾಯಂಕಾಲದ  ಪೂಜಾ ಕೈಂಕರ್ಯ ಸುಪ್ರಭಾತ ಇವ್ಯಾವುದರ ಲಕ್ಷಣವಿಲ್ಲದ ಮನೆಯಲ್ಲಿ ಬೋಳು ಮಂಡೆ ಮಗು ವಿನಾಕಾರಣ  ಆಭ್ಯಾಸವೆಂಬಂತೆ ತಲೆ ಕೆರೆದು ಮಂಕು ಮೂರೆ ಇಟ್ಕೊಂಡಂಗಿತ್ತು ನನ್ನ ಅವಸ್ಥೆ!ಇದ್ದಾಗ ಹಾಳು  ಕೆರೆತ ಅನಿಸುವುದು ಇಲ್ಲಿದಿದ್ದಾಗ ನವೆಯ ಸವಿ ನೆನಪಲ್ಲಿ ತೇಲಿಸುತ್ತೆ.ಅದೇ ಮತ್ತಿಗೆ ಸುಖಾ ಸುಮ್ಮನೆ ಕೆರೆದು ಕೊಳ್ಳೋದು.ಅಮ್ಮನಿಲ್ಲದ ಮನೆಯೂ  ಸಹಜವಾಗಿ ಅಂತದ್ದೊಂದು ಇಕ್ಕಟಿಗೆ ದೂಡುತ್ತೆ  ನನ್ನನ.ಅವಳು ಯಕ್ಷರನ್ನು  ಮೆಚ್ಚಿ ನೆಚ್ಚಿಕೊಂಡವಳಾದರೆ ನಾನು ಯಕ್ಷರಿಗೂ ಮೀಗಿಲಾಗಿ  ಪ್ರತ್ಯಕ್ಷರಲ್ಲಿ ನಂಬಿಕೆ ಇಟ್ಟವಳು ಅಪ್ತವಾಗಿಸಿಕೊಂಡವಳು.ಹಾಗಾಗಿ ಅಮ್ಮನ ಮೂರು ತಾಸಿನ ನಿತ್ಯದ ಪೂಜಾ ವೈಕರಿ ಅವಳ ಕೊಂಚ ಅತಿ ಎನ್ನುವಂತ ದೇವರ ಮೇಲಿನ ಶ್ರದ್ಧೆ ಭಕ್ತಿಯನ್ನು ಉಡಾಫೆ ಹಾರಿಸಿ ಹಂಗಿಸಿ ಅವಳ ಮೊಂಡು ಮೂಗಿನ ತುದಿಯ ಸವಿಸ್ತಾರವಾದ ಜಾಗದಲ್ಲಿ ಬರ್ರನೆ ಜಿನುಗುವ ಚೂಪು ಹುಸಿ ಮುನಿಸನ್ನ ಕೆಣಕಿ ವಿವಿದ ಬಗೆಯ ಅಷ್ಟಾರ್ಚನೆ ಶತನಾಮಾವಳಿ ಮಾಡಿಸಿಕೊಂಡು ಮುಖ ಊದಿಸಿಕೊಳ್ಳೋ  ನಾನು ಅವಳಿಲ್ಲಾದಾಗ ಮನಸಲ್ಲೇ ಅಳುತ್ತಾ ಕೊರಗೋದು ಅವಕ್ಕಾಗೆ!

ನಿಂಗೆ ನಾನಂದ್ರೆ ಕಿಂಚಿತ್ತು ಭಯ ಗೌರವವಿಲ್ಲ ನಮ್ಮ ಮನೇಲಿ ಇಂತ ತಲೆ ಹರಟೆ ಅದೇಗೆ ಹುಟ್ಟಿತೋ ಅಂತ ಮುನಿಯೂ ಅಮ್ಮ.ನಂತರ ನನ್ನ ತುಂಟ ಅರಗಿಣಿ ಇಲ್ಲದ  ಬದುಕು ನೀರಸ ಅನ್ನುತ್ತಾ ಆಲಂಗಿಸೋ ಅಮ್ಮ.ಇಬ್ಬರಿಗೂ ಭೇದ  ಬಗಿಯದೆ ಇಬ್ಬರನ್ನು ಹವಣಿಸೋ ನಾನು.ಒಟ್ಟಿನಲ್ಲಿ ಸದ್ದು ಗದ್ದಲಗಳಿಲ್ಲದ ಮೌನಿ ಮನೆ ನನಗೆ ರುಚಿಸುವುದಿಲ್ಲ.ಪುಣ್ಯಕ್ಕೆ ಎಂದಿನಂತ ವೈಪರಿತ್ಯದ ವಾತಾವರಣ ಮರಳಲಿತ್ತು.ಮೂರು ದಿನದ ನೆಂಟರ ಮನೆ ಸುತ್ತಾಟ ಮುಗಿಸಿ ಹಿಂದಿರುಗುವವರಿದ್ದ ಅಪ್ಪ ಅಮ್ಮನ ದಾರಿ ನೋಡುತ್ತಾ ಹೂವಿನ ಉರಲಿಗೆ ನೀರು ತುಂಬಿ ಸೇವಂತಿ ಹೂವಿಂದ ಅಲಂಕರಿಸುತ್ತ ಕುಳಿತ್ತಿದ್ದೆ.
*
ಹಗಲಿಗೆ ಪೂರ್ಣ ವಿರಾಮದ ಪರದೆ ಎಳೆದು ಇರಳು ತೆರೆದುಕೊಳ್ಳೋ ಹೊತ್ತಿನಲ್ಲಿ ವಿದ್ಯುತ್ ಕಡಿತದಿಂದಾಗಿ ಚೆಲ್ಲಿದ್ದ ಚಂದ್ರನ ದೀಪದ ಮಬ್ಬಲೇ ಮಿನುಗುತ್ತಿತ್ತು  ನಮ್ಮನೆ ಎದುರಿನ  ಡಂಬಾರು ರಸ್ತೆ.ಮೊರೊತ್ತು ಅಳುವ ಪಕ್ಕದ ಮನೆಯ ನಾಯಿ ಕುನ್ನಿ ಅಗಾಗ  ನೆಲ ಕೆರಿತಿದ್ದ ಅಡಿಗೆ ಮನೆ ಹೊಕ್ಕುತ್ತಿದ್ದ ಮೂಲೆ ಮನೆ ಆಂಟಿ ಸಾಕಿದ ಕಳ್ಳ ಬೆಕ್ಕು ಅವರಿವರ ಮನೆ ಕತೆಗಳ ಪಟ್ಟಾಂಗ ಹೊಡೆದು ಕಿವಿ ಕೊರೆಸಿಕೊಳ್ಳು ನಮ್ಮ ಬೀದಿಯ ಪಟಾಕಿ ಮಹಿಳಮಣಿಗಳು ಇವೆಲ್ಲವೂ  ಯಾವುದೊ ಸಾಮೂಹಿಕ ದಿಗ್ಬಂದನೆಗೊಳಗಾದಂತೆ  ಜಗತ್ತು ಸಂಜೆ ಏಳಕ್ಕೆ ಸ್ಮಶಾನ ರೂಪ ತಳೆದಿತ್ತು ಹೊರಗೆ.

ಅಮ್ಮನಿಲ್ಲದ ಮನೆ,ಆಗಷ್ಟೇ ಹಚ್ಚಿದ ಕ್ಯಾಂಡಲ್ ಬೆಳಕಿನಲ್ಲಿ ಕರಗುತಿದ್ದ ಗಾಢ ಕತ್ತಲು,ಬ್ಯಾಟರಿ ಮುಗಿದು ಸ್ವಿಚ್ ಆಫ್ ಆಗಿದ್ದ ಗ್ಯಾಜೆಟ್ಸ್,ಟಿವಿ ಸದ್ದಿಲ್ಲದ ನಿರ್ಜನ ಮನೆಯ ಏಕಾಂಗಿ ಮೌನದ  ಜೊತೆಗಾರ್ತಿ ಪರಿಮಳ ಬೀರದ ಸೇವಂತಿ.ಇಂತದ್ದೊಂದು ನೆನಪಿನಂಗಳಕ್ಕೆ  ಸರಾಗವಾಗಿ ಜಾರುವ ಅನುಕೂಲಕರ ವ್ಯವಸ್ತೆಯ ಮಧ್ಯೇ ನೆನಪಾದವ 'ಸಾದಿಕ್ ಅಜ್ಜ'.ಅದು ಹಾಗೆ ಒಬ್ಬ ಸಾಮಾನ್ಯ ವ್ಯಕ್ತಿ ನಾಯಕನೆನಿಸಿಕೊಳ್ಳಬೇಕಾದರೆ ಸದಾಚಾರಿ ಎನಿಸಿಕೊಳ್ಳಬೇಕಾದರೆ  ಅವನು ಒಂದೋ ಜೀವನುದ್ದಕೂ ಕಟಿನ ಬ್ರಹ್ಮಚಾರಿತ್ವ ಪಾಲಿಸಿರಬೇಕು ಅಥವಾ ಆದಷ್ಟು ಬೇಗ ನೆಲಕಚ್ಚಬೇಕು ಮಣ್ಣಲ್ಲಿ ಮಣ್ಣಾಗಬೇಕು.ಅವನಂದು ಹಾಗೆ ಸಾಯದಿದ್ದರೆ ಹೀಗೆಲ್ಲಾ ಅನಿಸುತ್ತಿರಲಿಲ್ಲವೇನೋ.ಆದರೆ ಅವನು ಈಗಿಲ್ಲ.ಅದರಿಂದಲೇ ಈ ನೆನಪು ಈ ಹೊಟ್ಟೆ ಕಲಸುವಿಕೆ.ಕಥೆ ಪುಸ್ತಕದ ಪುಟ್ಟಗಳ ಸೀಳಿ  ಹೊರ ನಡೆದಂತೆ  ಸಿನೆಮಾ ಪರದೆಗಳಲ್ಲಿ ಮಿಂಚುವ ಆದರ್ಶವಾದಿ ಪ್ರೇಕ್ಷಕರ ಎದುರು ಜೀವಂತ ನಿಂತಂತೆ.ಅದೆಂತದೋ ಹುಚ್ಚು ಕಾಟ  ಈ ಅಜ್ಜಂದು.ಮೌಲ್ಯಗಳು ಕುಸಿದಾಗ ಕಣ್  ಎದುರು ಬರುತ್ತಾನೆ.ಹಾಗಂತ ಅತಿಯಾಗಿ ಮಾಡಿಕೊಂಡು ಹೊರಟಾಗ ಎಚ್ಚರಿಕೆಯ ಗಂಟೆಯಂತೆ ನೆನಪಾಗ್ತಾನೆ.ಯಾವುದು ಬೇಡ ಅಂದುಕೊಳ್ಳುತ್ತಿದಾಗೆ ಕೋಲು ಹಿಡಿದು ಬಡಿದ್ದೆಬಿಸುತ್ತಾನೆ.
*
ಈ ಸಾದಿಕ್ ಅಜ್ಜ ನನ್ನೂರಿನವನು! ಅಪ್ಪ ಅಮ್ಮನ ಊರನ್ನ ನನ್ನದಲ್ಲದ ಊರನ್ನ ನನ್ನದು ಅನ್ನೋದಕ್ಕೆ ಸ್ವಾಭಿಮಾನ ಅಡಚಣಿಸಿದರು ಅನಾಯಾಸವಾಗಿ ಬಂದು ಬಿಡುವುದು."Home is where your heart lies" ಅನ್ನೋ ನಾಣ್ನುಡಿ ಒಮ್ಮೆ ಸಮಾದಾನಿಸಿದರು ನನ್ನ ಅಸ್ತಿತ್ವವ ಉಲ್ಲೇಕಿಸದ ನನ್ನ ಸಂಪೂರ್ಣ ಒಡನಾಟದ ಪರಿಚಯವಿಲ್ಲದ ಊರು ನನ್ನದೇಗೆ ಅನಿಸುವುದು ಉಂಟು.ಹಾಗೆ ಪರಿಗಣಿಸಿದರೆ ಬೃಹತ್ ಬೆಂಗಳೂರು ಸಹ ಅಷ್ಟೇ ತೂಕದ ಅನಾಮಿಕತನ ಪ್ರದರ್ಶಿಸುತ್ತೆ ನನ್ನ ಪಾಲಿಗೆ ನನ್ನಂತ ಅನೇಕರ ಪಾಲಿಗೆ.ನಾನು ಹುಟ್ಟಿದ್ದು ಓದಿದ್ದು ಬೆಳೆದಿದ್ದು ಆಡಿದ್ದು ಸೈಕಲ್ ಯಾನ ನಡೆಸಿದ್ದು ಕನಸು ಚಿಗುರೊಡೆದಿದ್ದು ಕಡೆಗೆ ಅವುಗಳು ನನಸಾಗುವುದು ಬೆಂಗಳೂರಲ್ಲೇ ನಾನು ಪ್ರೀತಿಸಿದ್ದು ಬೆಂಗಳೂರನ್ನೇ ಆದರೂ  ಮೈಕೆಸರು ಮಾಡಿ ದಿನವಿಡೀ ನಲಿದ್ದಿದ್ದು ಹೊಳೆಯಲ್ಲಿ ಮಿಂದಿದ್ದು ಕಾಡು ಬೇಧಿಸಿದ್ದು ಕೆಂಡ ಹಾರಿ ಕಾಲು ಸುಟ್ಟಿಕೊಂಡಿದ್ದು ಹುಲ್ಲು ಹಾಸೀನ ಬಯಲಲ್ಲಿ ರಾತ್ರಿಯಿಡಿ ನಕ್ಷತ್ರ ಎಣಿಸುತ್ತ ಹರಟೆ ಹೊಡೆದು ಮಲಗಿ ಪ್ರಕೃತಿಗೆ ಹತ್ತಿರವಾದದ್ದು ಮನಸು ಆಳಾವಾಗಿ ಬೇರೂರಿರುವುದು ಮಾತ್ರ ಹಳ್ಳಿಯಲ್ಲಿ.ಅಷ್ಟರ ಮಟ್ಟಗಿನ  ಹೈಬ್ರಿಡ್ ಸಂತತಿಯವಳು ನಾನು.ಮತ್ತೆ ಈ ಸಾದಿಕ್ ಅಜ್ಜನ  ಭೇಟಿ ಆದದ್ದು ಕೂಡ ಊರಿನ ಅಂತದ್ದೊಂದು ದಟ್ಟ ಬಯಲಿನ ಹಸಿರು ಜಗಲಿಯಲ್ಲಿ.ಮೊದಲ ನೋಟದಲ್ಲೇ ತೀರ ಪರಿಚಯಸ್ತನಂತೆ ಕಂಡಿದ್ದ ಅಜ್ಜ.

ಚಿತ್ರಕೃಪೆ:ಮದನ್ ಕುಮಾರ್


ನಾನು ಅಣ್ಣ ಮಾವನ ಮಕ್ಕಳು ಬೇಸಿಗೆಯ ಸಂಜೆ ಆರ ಕ್ಕೆಲ್ಲ ಊಟ ಮುಗಿಸಿ ಮಿಣು ಮಿಣು ಮಿಂಚುತ್ತಿದ್ದ ಮಿಂಚುಳದ ಬೆನ್ನತ್ತಿ ಬಯಲಿನೆಡೆಗೆ ಹೊರಟು ಬಿಡುತ್ತಿದ್ದೆವು.ಕಾಳಿ ದೇವಸ್ಥಾನದ ಬಳಿಯಿದ್ದ ವಿಶಾಲ ಬಯಲಿನಲ್ಲಿ ಆಕಾಶ ನೋಡುತ್ತಾ ಮಲಗಿರುತ್ತಿದ್ದ ಸಾದಿಕ್ ಅಜ್ಜನ ಪಕ್ಕ ಹೋಗಿ "ಏನಜ್ಜ ನೀನು ನಮ್ ಹಾಗೆ ಮೇಲೆ ನೋಡ್ತಾ ಮಲಗಿದ್ದ?ನಿಂಗೊತ್ತಾ ಬೆಂಗಳೂರಿನ ಬಾನೇ ಬೇರೆ ಇಲ್ಲಿಯ ಬಾನೆ ಬೇರೆ.ಅಲ್ಲಿನ ನಕ್ಷತ್ರಗಳೇ ಬೇರೆ ಇಲ್ಲಿನವೇ ಬೇರೆ"ಅಂತ ಏನೇನೋ ಆ  ವಯಸಿನಲ್ಲಿ ನಮಗೆ ಗೋಚರಿಸುತ್ತಿದ್ದ ಸೂಕ್ಷ್ಮ ವ್ಯತ್ಯಾಸಗಳನ್ನ ಕೌತುಕಗಳನೆಲ್ಲಾ  ಎಳೆದು ಎಳೆದು ರೆಕ್ಕೆ ಪುಕ್ಕ ಹಚ್ಚಿ ಆತನ ಕಿವಿ ತುಂಬುತ್ತಿದ್ದೆವು.ಅದನ್ನೆಲ್ಲಾ ಚೂರು ಚಿಟಿಕ್ ಪಿಟಿಕ್ ಅನ್ನದೆ ಬೆರಗುಗಣ್ಣಿನಿಂದ ಆಲಿಸಿ ತನ್ನ ಕಪ್ಪು ಮಿಶ್ರಿತ ಬಿಳಿ ಉದ್ದದ ಗಡ್ಡ ಸವರಿಕೊಳ್ಳುತ್ತಾ"ಹೌದ ಬಚ್ಚಾ?!" ಎಂದು ರಾಗವೆಳೆದು ನಸುನಗುತ್ತಿದ್ದ.

ಸಾದಿಕ್ ಅಜ್ಜ ಸಾಂಪ್ರದಾಯಿಕ ಮುಸ್ಲಿಂ  ಜನಾಂಗದವನು.ಊರಿನಲ್ಲಿ ಅಲ್ಪಸಂಖ್ಯಾತರ ಒಕ್ಕಲು ಬೆರೆಳೆಣಿಕೆ ಅಷ್ಟಿದ್ದವು.ಸಾದಿಕ್ ಅಜ್ಜ ಮುಸಲ್ಮಾನನಾಗಿ ಹುಟ್ಟಿ ಮುಸುಲ್ಮಾನಾಗೆ ಸತ್ತರೂ ಬದುಕ್ಕಿದ್ದಷ್ಟು ದಿನ ಮುಸಲ್ಮಾನನು ಆಗದೆ ಹಿಂದುವು  ಆಗದೆ ಕೇವಲ ಮನುಷ್ಯನಾಗೆ ಉಳಿದಿದ್ದ.ಅದು ಒಂದು ರೀತಿ ಆತನಿಗಿದ್ದ ಅನಿವಾರ್ಯತೆಯೂ ಹೌದು ಹಾಗೆ ಅವನಿಗೆ ಅಂಟಿಕೊಂಡಿದ್ದ ಆದರ್ಶವು ಹೌದು ಆತ ಲಾಲಿಸಿ ಪಲಿಸಿಕೊಂಡಿದ್ದ ಮನುಷ್ಯತ್ವ ಮೌಲ್ಯವನ್ನೊಳಗೊಂಡ  ಜೀವನಕ್ರಮವು ಹೌದು. ಯೌವನದಲ್ಲೇ ಹೆಂಡತಿ ಕಳೆದುಕೊಂಡ ಸಾದಿಕ್ ಅಜ್ಜ ಮರು ಮದುವೆ ಆಗದೆ ಅರ್ಧಂಬರ್ದ ಬ್ರಹ್ಮಚಾರಿಯಾಗಿ ಹೋಗಿದ್ದ.ಒಬ್ಬಂಟಿ ಅಜ್ಜನಿಗೆ ಒಡ ಹುಟ್ಟಿದವರು ದಾಯಾದಿ ಎನಿಸಿಕೊಂಡವರು ಆತನಿಗಾಗಿ ಚಡಪಡಿಸುವವರು ಯಾರು ಇರಲಿಲ್ಲ.ಇದ್ದರೂ ಅವರ ಸುಳಿವು  ಊರಿನವರಿಗಿರಲಿಲ್ಲ ಪಾಪ ಅಜ್ಜನಿಗೂ ಇರಲಿಲ್ಲವೇನೋ ಹಾಗಾಗೆ ಅದಕ್ಕೂ  ಇದಕ್ಕೂ  ಎಲ್ಲದಕ್ಕೂ ಆತ ಊರಿನವರನ್ನೇ ಹಚ್ಚಿಕೊಂಡು ಅವರಿಗಾಗೇ ಬದುಕ್ಕಿದವ.ಯಾರ ಹೆಣಕ್ಕಾದರು ಹೆಗಲು ಕೊಡುತ್ತಿದ್ದವ.ಅದರಲ್ಲೂ ಬದುಕಿದ್ದ ಹೆಣಗಳೇ ಹೆಚ್ಚಿನವು.ಅಲ್ಲಿಲ್ಲಿ ತೋಟದ ಕೆಲಸ ಮದುವೆ ಕೆಲಸ ಹೆಣ  ಸುಡೋಕೆ ಕಟ್ಟಿಗೆ ಕೂಡಿಸೋ ಕೆಲಸ ಹೀಗೆ ಅವನೇ ಕೊನೆಯ ಆಧಾರವೆನ್ನುವಂತೆ ಅರಸಿಕೊಂಡು  ಬರುತ್ತಿದ್ದವರು ಹಚ್ಚುತ್ತಿದ್ದ ಎಲ್ಲ ಕೆಲಸಗಳನ್ನು ಬಿಡಿಗಾಸು ಅಪೇಕ್ಷಿಸದೆ ಬೇಸರಿಸದೆ ಮಾಡುತ್ತಿದ್ದನೆಂದು ಅಮ್ಮನಲ್ಲಿ ಮಾವ ಆಗಾಗ ಹೇಳುತ್ತಿದ್ದರು.ಕಾಳಿ ಮಂದಿರ ಕಟ್ಟುವಾಗ ಆಳು ಮಕ್ಕಳ ಮುಖ್ಯಸ್ಥನನ್ನಾಗಿ ಇವನನ್ನೇ ನೇಮಕ ಮಾಡಿದ್ದರಂತೆ.ಅಂದಿನಿಂದ ಕಾಳಿ ಮಂದಿರ ಪಕ್ಕದಲ್ಲೇ ಒಂದು ಪುಟ್ಟ ಹೆಂಚಿನ  ಮನೆ ನಿರ್ಮಿಸಿಕೊಂಡು ಅಲ್ಲೇ ವಾಸಿಸುತ್ತಿದ್ದ  ಅಜ್ಜ.

ಅಜ್ಜ ನಾವು ಮಕ್ಕಳಿಗೂ ಅಷ್ಟೇ ಪ್ರೀತಿಪಾತ್ರನಾಗಿದ್ದ.ಅದರಲ್ಲೂ ನನಗೆ ಅಜ್ಜನಲ್ಲಿ ವಿಶೇಷ ಪ್ರೀತಿ.ಆ ಕಾಲದಲ್ಲಿ ಚಿಕ್ಕವರಿಂದ ಹಿಡಿದು ಮುತ್ತೈದೆಯಾಗಿ ಸಾಯದ ನನ್ನ ಅಜ್ಜಿಯ ಹಣೆಯಲ್ಲೂ  ರಾರಾಜಿಸುತ್ತಿದ್ದ ಗಂಧ ಅಂದರೆ ಏನೋ ಆಕರ್ಷಣೆ ಗೌರವ.ಗಂಧದ ಘಮಲು ಅಂದರೆ ಪಂಚಪ್ರಾಣವಾಗಿದ್ದ ನನಗೆ ಗಂಧದ ಕೊರಡು ತಂದು ಕೊಟ್ಟಿದ್ದ ಅಜ್ಜ.ದಪ್ಪ ಮೀಸೆ ವೀರಪ್ಪನ್ ಊರಿನಾಚೆ ಬೆಟ್ಟದ ಕಾಡಿನಲ್ಲಿ ನಿಗೂಢವಾಗಿ ಬೀಡು ಬಿಟ್ಟಿದ್ದಾನೆನ್ನುವ ಬಿಸಿ ಬಿಸಿ ಸುದ್ದಿ ಗೌಪ್ಯವಾಗಿ ಹಬ್ಬಿದ್ದ ದಿನಗಳವು.ಅಂತಹ ಪರಿಸ್ಥಿಯಲ್ಲೂ ಕಾಡಿನೊಳಕ್ಕೆ ಹೋಗುವ ನಮ್ಮ ಅಭಿಲಾಷೆಗೆ ನೀರೆರಚದೆ ಪೂರಕವಾಗಿ ಸೂತ್ರ ಬಿಗಿದು ಹಾರಿಸಿದವನು ಸಾದಿಕ್ ಅಜ್ಜ.ಗುಡ್ಡ ಚಾರಣಕ್ಕೆ ಅವನು ಒಂದು ಕೈಯಲ್ಲಿ ಕೊಲಿಡಿದು ಇನ್ನೊಂದು ಕೈಯಲ್ಲಿ ಒಣಗಿದ ಮುಳ್ಳು ಗಿಡಗಳ ಕಡೆಯಲು ಕತ್ತಿ ಹಿಡಿದು ನಮ್ಮ ದಾರಿಯಾಗಿ ಬುಡು ಬುಡು ಎಂದು ದಾಪುಗಾಲಿಟ್ಟು  ಮುನ್ನುಗ್ಗುತ್ತಿದ್ದರೆ  ಅವನಿಂದೆ ಕಲ್ಲು ಮುಳ್ಳಿನ ದಾರಿಯಲ್ಲಿ  ಟುಮು ಟುಮು ಹೆಜ್ಜೆ ಸಪ್ಪಳಿಸಿ ಓಡುತ್ತ ನೋಡ ಸಿಗುತ್ತಿದ್ದ ನವಿಲು ಮೂಲ ಉಡಗಳ ಜೊತೆಗಿಷ್ಟು ಕ್ಷೇಮ ಕುಶಲೋಪಚಾರಿಯ ಮಾತುಗಳನ್ನಾಡಿ ವನದೇವಿಯ ಅಪರೂಪದ ಪ್ರೀತಿ ಸೌಂದರ್ಯ ಸವಿಯುತ್ತಿದೆವು.ಅಲ್ಲಿಂದ ಬರುವಾಗ ಆಯಾಸವೆಂದವರನ್ನ  ಸರದಿ ಮೆರಿಗೆ ಭುಜದ ಮೇಲೇರಿಸಿಕೊಂಡು,ನಡೆಯುತ್ತಿದ್ದವರ ಉದ್ದೇಶಿಸಿ  "ಹುಷಾರ್ ಬಚ್ಚೋ ನಿಮ್ಮ ಮುದ್ದು ಬಿಳಿ ಕಾಲಿನ ಅಡಿ ಕೆಂಪಾದವು ನೋಡ್ಕೊಂಡ್ ನಡೀರಿ"ಅಂತೇಳಿ ಹೇಳಿನೆ ಸುಸ್ತಾಗುತ್ತಿದ್ದ ಸಾದಿಕಜ್ಜ.   
*
"ಇಡೀ ಊರಿನ ಜವಾಬ್ದಾರಿಯನ್ನ ಅವನೇ ತಲೆ ಮೇಲೆ ಹೊತ್ತಂತೆ ಕೆಲಸ ಮಾಡುತ್ತೆ ಸಾದಿಕಣ್ಣ.ಕೊನೆ ದಿನಗಳಲ್ಲಿ ಇವನ ಹೊರೋಕೆ ಅದ್ಯಾವ ಜನ ಬರುತ್ತಾರೋ ನೋಡಬೇಕು.ಎಲ್ಲಾ ಅವಕಾಶವಾದಿಗಳು ಹಿಂದು ಮುಂದು ಇಲ್ಲದ ಮುದುಕನನ್ನ ಮುಗಿ ಬಿದ್ದು ಉಪಯೋಗಿಸಿಕೊಳ್ಳುತ್ತಿದ್ದಾರೆ" ಅಂತ ಮಾವ ಶಕುನದ ಹಕ್ಕಿಯಂತೆ ಯಾವಾಗಲು ಉಚ್ಚರಿಸುತ್ತಿದ್ದ  ದಿನಗಳು ಸಾದಿಕಜ್ಜನಿಗೆ  ಬಂದೆರೆಗಿತು.ಆತನ ಋಣಕ್ಕೆ ಬಿದ್ದಿದ್ದವರಿಗೆಲ್ಲಾ  ಅಜ್ಜ  ಮುಸಲ್ಮಾನ್ ಎಂಬುದು ನೆನಪಾದದ್ದು ಆವಾಗಲೇ... ಅವನು ಹಾಸಿಗೆ ಹಿಡಿದಾಗಲೇ.... ಅವನ  ಆರೈಕೆ ಯಾರು ಮಾಡಬೇಕೆಂಬ ಪ್ರಶ್ನೆ ಎದ್ದಾಗಲೇ! ಅಜ್ಜನ ಕಾಳಜಿ ಮಾಡುವುದ ಮರೆತು ಇಂತಹ ಚರ್ಚೆಗಳ ನಡೆಸಿ ಅಜ್ಜನ ಮುಗ್ದ ಮನಕ್ಕೆ ಮೊಳೆ ಹೊಡೆದಿದ್ದರು.ಇನ್ನೂ,ಅಜ್ಜನ ಆಪ್ತರೆನಿಸಿಕೊಂಡ ಊರಿನ  ಮೂರು ಮತ್ತೊಂದು ಮುಸಲ್ಮಾನರು, ಜೀವನಪರ್ಯಂತ ನಮ್ಮ ಧರ್ಮವ ಕಡೆಗಣಿಸಿ ಹಿಂದೂಗಳ ಕೈಗೊಂಬೆಯಂತಿದ್ದ ಬೇಕಾದರೆ ಅವರಿಂದಲೇ ಚಾಕರಿ ಮಾಡಿಸಿಕೊಳ್ಳಲ್ಲಿ  ಅಂತ ಮೂಗು ಮುರಿದು, ಶೂಲಕ್ಕೇರಿಸಿ ಬಿಟ್ಟರು.ಅದರ ಪರಿಣಾಮವೆಂಬಂತೆ  ಅಜ್ಜನ ದೇಹದೊಡನೆ  ಮನಸೂ  ಕುಗ್ಗಿತು.

ಹೀಗೆ ಮಲಗಿದ್ದ ಅಜ್ಜನಿಗೆ ಕಾಳಿ ದೇವಸ್ಥಾನ ಪೂಜಾರಿ ಮಗ,ಹರೀಶ ಕೆಲವೊಮ್ಮೆ ನನ್ನ ಮಾವ ಗಂಜಿ ಕೊಟ್ಟು ಬರುತ್ತಿದ್ದರಂತೆ.ಅದೊಂದು ದಿನ ಊರಿಗೆ ಹೋದಾಗ ಗಂಜಿ ಕೊಟ್ಟು ಬರುತ್ತೀನೆಂದು ಹೋದ ನನಗೆ ಕೋಣೆಯ ಮೊಲೆಯಲ್ಲಿ ಮುದುರಿ ಮಲಗಿದ್ದ  ಮಗುಮನಸಿನ ಅಜ್ಜನ ಕಣ್ಣುಗಳಲ್ಲಿ ಎಂದಿನಂತ ಜೀವಂತಿಕೆ ಆಪ್ತತೆ ಕಾಣಲಿಲ್ಲ.ಪಾಪ ಬಿದ್ದಲ್ಲೇ ಬಿದ್ದ ಅಜ್ಜನ ಗಡ್ಡ ಕೂದಲಿನಲ್ಲಿ ಹೇನು ಹರಿದಾಡುತ್ತಿದ್ದವು.ಅದೆಷ್ಟೂ ಹಿಂಸೆ ಅನುಭವಿಸಿದ್ದನೋ."ಅಜ್ಜ ಗಂಜಿ ತಂದಿದ್ದೀನಿ ತಿಂದು ಮಲಗು ಹಾಗೆ ಗಡ್ಡ ಬೋಳಿಸಜ್ಜ ನಾನು ಮಾವನಿಗೆ ಹೇಳಲಾ?" ಅಂದಿದ್ದೆ ತಡ ಇಟ್ಟಿದ್ದ ಊಟದ ಡಬ್ಬಿಯನ್ನ ತಳ್ಳಿ "ಹೋಗು ಬಚ್ಚ ನೀನಿಲ್ಲಿಂದ ವಿನಾಕಾರಣ ಯಾರನ್ನು ಕನಿಕರಿಸಬೇಡ ನಡಿ ನಡಿ" ಅಂದು ಕೊಲಿಂದ ಆಚೆ ಅಟ್ಟಿಬಿಟ್ಟ .ಅಜ್ಜನ ಹುಚ್ಚು ವರ್ತನೆ ನೋಡಿ ಒಂದು ಕ್ಷಣ ದಿಗ್ಭ್ರಂತಳಾದೆ.ಕೋಪ ಬಿಕ್ಕಳಿಕೆ ಎರಡು ಒಟ್ಟೊಟ್ಟಿಗೆ ಉಕ್ಕಿ ಬಂದು ಮುಖ ತಿರುಗಿಸಿ ಹೋಗುತ್ತಿದ್ದವಳಿಗೆ ಕರಳು ಕಿವಿಚಿ ಮತ್ತೆ ಹಿಂದಿರುಗಿದಾಗಲೇ ಮರೆಯಲ್ಲಿ ಮಲಗಿದ್ದ ಅಜ್ಜನ ದೀನ ಕಣ್ಣಾಲಿಗಳಿಂದ ಹನಿ ನೀರು ಜಾರಿದ್ದ ಕಂಡಿದ್ದು. ಬದುಕು ಆತನಿಗೆ ಕಲಿಸಿದ ಪಾಠವ  ಯಾರಿಗೋ ರವಾನಿಸಿದ ತೃಪ್ತ ಭಾವದೊಂದಿಗೆ ಶೂನ್ಯ ದತ್ತ ನೋಡುತ್ತಾ ಮಲಗಿದ್ದ.ಅದ್ಯಾವುದು  ನನಗಂದು ಅರ್ಥವಾಗಲೇ ಇಲ್ಲ.ಅವನ ಮುಖದೆಡೆಗೆ ಹರಿಯುತ್ತಿದ್ದ ಹೇನಿನ ಸೈನ್ಯ ಅವನಿದ್ದ ಚಿಂತಾಜನಕ ಸ್ಥಿತಿ ಕಂಡು ಇದ್ದ ಕೋಪ ನುಣುಚಿ ಸಂಕಟ ತುಂಬಿಕೊಂಡು ಮನೆ ಕಡೆ ನಡೆದೆ.

ಇದೆಲ್ಲ ಆಗಿ ವರುಷಗಳೆ  ಉರಿಳಿದ್ದಾವೆ.ಆತ ಕೊಟ್ಟಿದ್ದ ಗಂಧದ ಕೊರಡು ಸವಿದು ಸವಿದು ನನ್ನ ಮನ ತಣಿಸಿ ಹಣೆ ತುಂಬಿಸಿ ತಾನು ದಿನೇ ದಿನೇ ತೆಳ್ಳಗಾಗುತ್ತಿದ್ದೆ.ಅಜ್ಜನ ಅಂದಿನ ಭಾವದ ಸಿಕ್ಕುಗಳನ್ನ ಬಿಡುಸುವಲ್ಲಿ ನಾನಿಂದು ಸಫಲಳಾಗಿದೇನೆ.ಈಗ ಅವನ ನೆನಪಾಗಿ ಉಳಿದಿರುವ ಕೊರಡನ್ನ  ಇನ್ನಷ್ಟು ಸವಿಸಲು ಹೃದಯ ಒಪ್ಪುತ್ತಿಲ್ಲ.ಅದು ಮೇಜಿನ ಡ್ರಾಯರ್ ಒಳಗೆ ತನ್ನ ಗಟ್ಟಿ ಸ್ಥಾನ ಕಾತರಿ ಪಡಿಸಿಕೊಂಡಿದೆಯಾದರು ಸವಿಯಲು ಘಮ ಸೂಸಲು ಹಾತೊರೆಯುತ್ತಿದ್ದಂತಿದೆ.ಯಾರನ್ನು ಕನಿಕರಿಸ ಬೇಡ ಅನ್ನುತ್ತಲೇ ನನ್ನ ಕನಿಕರಿಸಿದ ಅಜ್ಜ ಇವತ್ತಿಗೂ ನನ್ನಲ್ಲಿ  ಆಗಾಗ ಜೀವಂತವಾಗುತ್ತಾನೆ,ಎದ್ದು ನಿಲ್ಲುತ್ತಾನೆ,ಕೊಲಿಡಿದು ಅಟ್ಟುತ್ತಾನೆ!

Saturday, November 3, 2012

ಸಾವಿಲ್ಲದ್ದು

ನನ್ನ ಹುಟ್ಟು ತುಂಬಾ ನಿರೀಕ್ಷಿತವಾದದ್ದು,ಆದರೆ ಯಾವ ಆದರದ ಸ್ವಾಗತವು ಅದರ ಪಾಲಿಗಿರಲಿಲ್ಲ!

ಸ್ವಾಗತದ ವೈಭವವೇನು ಬೇಕಿರಲಿಲ್ಲ, ನಾನುಟ್ಟಿದ್ದು ಇವರಿಗೆ ಗೋಚರಿಸಿದರೆ ಸಾಕಿತ್ತು ಅಂದೆನಗೆ!

ಯಾಕಂದರೆ ನನಗೂ  ಮನವರಿಕೆಯಾಗಿತ್ತು...... ಅವಳ ಕೊಂದು ನಾನು ಹುಟ್ಟಿದ್ದೆನಂತ!

ಆದರಿಂದಲೋ ಏನೋ ನಾ ಹುಟ್ಟಿದ ಗಳಿಗೆಯಿಂದಲೂ  ಕೇಳಿದ್ದು ಬರಿ ಅಕ್ರಂದನವೇ......

ಆದರೆ ನಾನೇನು ಮಾಡಲಿ...........ವಿಧಿ ನಿಯಮವೇ ಹಾಗಿರುವಾಗ?

ಅವಳಿರುವಾಗಲೇ  ನಾನು ಹುಟ್ಟುವಂತಿರಲಿಲ್ಲ!

ನಾ  ಬರೆಸಿ ಕೊಂಡು ಬಂದ ಭಾಗ್ಯವೇ ಇಷ್ಟು,ಅಂತ ಬೇಜಾರಾಗುತ್ತಿತ್ತು  ಒಮ್ಮೊಮ್ಮೆ!

ಅಂದು ಎಲ್ಲರೂ ಕೂಗಿ ಕೂಗಿ ನನ್ನ ಹುಟ್ಟನ್ನು ಶಪಿಸುತ್ತಿದ್ದಾಗ  ನನಗೂ  ಜೋರು ಅಳು ಬರುತಿತ್ತು....

ಆದರೆ ನಾನವಳoತಲ್ಲ! ಹುಟ್ಟಿದಾಕ್ಷಣ ಹಾಗೆಲ್ಲ ರಂಪ ರಾಮಾಯಣ ಮಾಡುವುದನ್ನ ವ್ಯರ್ಥ ಪ್ರಲಾಪಗಳ ನಡೆಸುವುದನ್ನ ಮೈಗೂಡಿಸಿಕೊಂಡವಳಲ್ಲ!

ನನ್ನ ಕಂಡರೆ ಇಲ್ಯಾರಿಗೂ ಆಗುತ್ತಿರಲಿಲ್ಲ! ಆಗಾಗ ಹೋದವಳ ನೆನಪಿಸಿಕೊಂಡು ಅಳ್ತಿದ್ರು.....

ಈ ತಾರತಮ್ಯದ ಗಾಳಿ ಹೆಚ್ಚಿದಂಗು ನನ್ನ ಉದರದಲಿನ ಬೆಂಕಿ ಧಗ ಧಗಿಸಿ ಉರಿಯುತ್ತಿತ್ತು!

ಆದರು ಉಸಿರೆತ್ತಲಿಲ್ಲ...ನೋವನ್ನು ಪ್ರದರ್ಶನಕ್ಕಿಡುವ ವ್ಯಕ್ತಿತ್ವ ನನ್ನದಾಗಿರಲಿಲ್ಲ... ನಾನವಳoತಲ್ಲ!

ದಿನ ಕಳೆದಂಗು ನಾನಿವರೆಲ್ಲರ ನೆನಪಿನಿಂದ ಮರೆಯಾಗುತ್ತಿದ್ದೆ....ಅವಳಿನ್ನು ಕೆಲವರ ಮನಸಿನಲಿ ತಣ್ಣಗೆ ಹಾಸಿಕೊಂಡು ಮಲಗಿದ್ದಳು!

ನನಗೀಗೆಲ್ಲ ಅಭ್ಯಾಸವಾಗಿ ಹೋಗಿದೆ ಮೊದಲಿನಂತೆ ಕೀಳರಿಮೆ ಕಾಡೋದಿಲ್ಲ..... ಜಿಗುಪ್ಸೆಯೂ ಮೂಡೋದಿಲ್ಲ...

ಎಲ್ಲಾ ಪಡೆದ ಅವಳು ಸಾಧಿಸಿದ್ದು ಕೆಲ ದಿನದ ಅವಳೆಸರಿನ ಸಂತಾಪದ ಕನವರಿಕೆಗಳನ್ನ...

ಯಾವುದನ್ನೂ ಪಡೆಯದ ನಾನು ನಿತ್ಯ ಸಂತಾಪದ ಸುಳಿಯಲ್ಲಿ ಸಿಕ್ಕಿ ಹುಟ್ಟಿನಿಂದಲೂ ಸತ್ತಂತ್ತಿದ್ದರು ಸಾಯದೆ ಉಳಿದ್ದಿದ್ದೆ ನನ್ನ  ಸಾಧನೆ!

ಇಂತಿ
ಮರಣ

Friday, November 2, 2012

"..........................


ಬೆಳಂಬೆಳಗೆ ನಿತ್ಯದ ಸ್ನಾನ ಕರ್ಮಾದಿಗಳ ಮುಗಿಸಿ ನನ್ನ ಕೋಣೆಗೆ ತಡವರಿಸಿ  ಹೆಜ್ಜೆಯನಿಡುತಿದ್ದಾಗ "ಬಿಸಿ ಬಿಸಿ ನೀರು ಹೊಯ್ಯಿಸ್ಕೊಂಡು  ಸುಸ್ತಾಗಿರುತ್ತೆ ಮೇಜಿನ ಮೇಲೆ ಹಾಲಿಟ್ಟಿದೀನಿ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ತಯ್ಯಾರಾಗು.ಇನ್ನು ಸಮಯವಿದೆ ಹತ್ತು ಗಂಟೆ ನಂತರವೇ ಪ್ರಶಸ್ತ ಮೂಹುರ್ತವಿರೋದು ಅಂದಿದ್ದಾರೆ  ಭಟ್ರು"ಅಮ್ಮ ಎಂದಿನ ಕಾಳಜಿ ಸ್ವರದಲ್ಲಿ  ಕೂಗಿ ಹೇಳಿದಳು.ಕನ್ನಡಿ ಬಳಿಯ ಕಿಟಕಿಯ ಒಳ ಹೊಕ್ಕುತಿದ್ದ ಸೂರ್ಯೋದಯದ ಎಳೆ  ಬಿಸಿಲ ಕಿರಣಗಳು ಮೈಯ್ಯ ತಾಕುತ್ತಿದ್ದಂತೆ ಮೊದ ಮೊದಲು ಹೆಣ್ಣಾದ ಸವಿ ಗಳಿಗೆಯ ನೆನಪು ಮರುಕಳಿಸಿ ನಾಚಿಕೆ ಉಕ್ಕಿದಂತಾಯ್ತು .ಕಿಟಕಿ ಪರದೆಯ ಸಂದಿಯಿಂದ ಇಣುಕುತ್ತಿದ್ದ ಸ್ನಿಗ್ದ ಬೆಳಕಿನ ನಡುವೆ ನನ್ನನ್ನು ನಾನೇ ಕನ್ನಡಿಯಲ್ಲಿ ನೋಡುತ್ತಾ ಹೊಟ್ಟೆಯ ನೆವರಿಸಿಕೊಂಡೆ.

ನಾ ತೊಟ್ಟಿದ್ದ ಅಣ್ಣ ಉಡುಗೊರೆಯಾಗಿ ಕೊಟ್ಟ  ಹಸಿರು ಸೆರಗಿನ ಕೆಂಪು ಬಣ್ಣದ ಸೀರೆಯು ಅರಳಿದ ಮೊಗದೊಡನೆ ಸ್ಪರ್ಧೆಗಿಳಿದು ಅದರ ರಂಗೆಚ್ಚಿಸಿ ಕಂಗೊಳಿಸುವಂತೆ ಮಾಡಿತು.ಸೀರೆಯುಡುವ ಬಗ್ಗೆ ಅಸಡ್ಡೆ ಧೋರಣೆ ತಾಳಿದ್ದ  ನಾನು ಈ ನಡುವೆ ಅದರ ವ್ಯಾಮೋಹ  ಹೆಚ್ಚಿಸಿಕೊಂಡು ದಿನಲೂ  ಅವನ್ನೇ ಬಯಸಿ ದರಿಸುವುದು ಪರಿಪಾಟಲಾಗಿದೆ.ತಿಂಗಳು ಕಳೆದಂತೆಲ್ಲಾ ಸೀರೆಯ ನೆರಿಗೆ ಕಮ್ಮಿಯಾಗುತ್ತಿದ್ದರೆ ಏನೋ ಒಂದು ತರನಾದ ಹೊಸ ಬಗೆಯ ಪುಳಕ ಕಾತುರ.ಜೀವನಶೈಲಿಯಲ್ಲೂ ಯೋಚನಾ ಲಹರಿಯಲ್ಲೂ ಅನೇಕಾನೇಕ ಬದಲಾವಣೆಗಳು.ನವ ಅತಿಥಿಯ ಸ್ವಾಗತಕ್ಕೆ ಮನಸಿನ ಆವರಣವು  ಬಗೆ ಬಗೆಯ ಹೂವಿನ ಹಾಸು ಹಾಸಿಕೊಂಡು ಸಜ್ಜಾಗಿದೆ."ಆಯ್ತಾ? ಯಾರನಾದ್ರು ಸಹಾಯಕ್ಕೆ ಕಳಿಸ್ಲ ?"ಕೇಳಿದಳು ಅಮ್ಮ."ಯಾರು ಬೇಡಮ್ಮ ಐದು ನಿಮಿಷ ಇಗೋ ನಾನೆ ಬಂದೆ"ಅನ್ನುತ್ತಾ ಕೋಣೆಯ ಗೋಡೆಗಳಿಗೆ ನೇತು ಹಾಕಿಕೊಂಡ ಬಾಯಲ್ಲಿ ಬೆರಳಿಟ್ಟು ಮಲಗಿದ್ದ ಹಸುಗೂಸು,ಅಂಬೆಗಾಲೂರಿ ನಿಂತ ಕಂದಮ್ಮ,ಕಿವಿ ಎಳೆದಾಡಿಕೊಳ್ಳುತಿದ್ದ ಅವಳಿ ಮಕ್ಕಳು,ತುಂಬು ಹಾಲ್ಗೆನ್ನೆಯ ಹೊತ್ತು ವಿವಿಧ ಭಂಗಿಯಲ್ಲಿ ಮನಸೂರೆಗೊಳಿಸುತ್ತಿದ್ದ ಕಿನ್ನರ ಸಮೂಹ ಮೊದಲಾದ ಚಿತ್ತಾಕರ್ಷಕ ಚಿತ್ರ ಪಟಗಳನ್ನ ತೆಗೆದು ಮೂಲೆಯಲ್ಲಿ ಜೋಡಿಸಿಟ್ಟೆ.ಇನ್ಮೆಲೆನಿದ್ದರು ನನ್ನ ಮುದ್ದುವಿನ ಮುದ್ದಾದ ಚಿತ್ರ ಪಟಗಳೇ  ಈ  ಕೋಣೆಯ  ಅಲಂಕರಿಸಬೇಕನ್ನೋ ಸಿಹಿ ಸ್ವಾರ್ಥ ನನ್ನದು.
ಚಿತ್ರಕೃಪೆ:ಮದನ್ ಕುಮಾರ್

ನವಮಾಸ ಕಳಿತೆಂಬ ಗಡಿಬಿಡಿ ಅವಸರವಿದ್ದರು ಅಚ್ಚುಕಟ್ಟಾಗಿ ವಿಜೃoಭಣೆಯಿಂದ ಸೀಮಂತ ಮಾಡಿ ಮುಗಿಸಿದ ಸಂಭ್ರಮದಲ್ಲಿದ್ದರು ಮನೆಯವರು. ನನಗೇಕೋ ಅಸಮದಾನ ಆತಂಕ.ಮುದ್ದು ಪ್ರತಿ ಸಲ ಕೈ ಕಾಲಾಡಿಸಿ ಒದ್ದಂತಾದಾಗ  ಅಪೂರ್ವವಾದ ಸಿಂಚನ ನರನಾಡಿಗಳಲ್ಲರಿದ ಅನುಭವವಾಗುತ್ತಿತ್ತು ಇಂದೇಕೋ ಬೆಳಗಿನಿಂದ ಒಂದು ಸಲವೂ ಮುದ್ದುವಿನ ಚಲನದ ಮಧುರ ಅನುಭೂತಿಯಾಗದಿದ್ದದ್ದು  ಹೃದಯವನ್ನು ಸಣ್ಣದಾಗಿ ಹಿಂಡಿ  ಹಿಪ್ಪೆಯಾಗಿಸಿತು.ಗಾಬರಿ ಉದ್ವೇಗದಿಂದಲೇ ಕೈಯಾ ಹೊಟ್ಟೆಯ ಮೇಲೆ ಸರಿಸಿ ಮೃದುವಾಗಿ ಮುಟ್ಟಿದೆ.ಮುದ್ದು ನನ್ನ ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತಿದಾಗೆ  ಉಫ್ ಎಂದು ಶ್ವಾಸ ಹೊರ ಹಾಕಿ ದ್ವಿಗುಣಗೊಂಡ ಎದೆ ಬಡಿತವನ್ನು ಹಿಡಿತಕ್ಕೆ ತಂದೆಯಾದರು ಮನದೊಳಗಿನ್ನು ಕಸಿವಿಸಿ,ಮೆದುಳಿನಲ್ಲಿ ವಿಚಿತ್ರ ಅಸ್ಪಷ್ಟತೆಯ ನೆರಳುಗಳು.ಅವುಗಳನ್ನು ಹೆಚ್ಚು ಕೆದಕುವ ಗೋಜಿಗೆ ಹೋಗಲಿಲ್ಲ.ಆ ಕ್ಷಣದ ಸಂತೋಷವನೆಲ್ಲಾ  ನನ್ನದಾಗಿಸುವ ಪ್ರಮಾಣವಿತ್ತಂತೆ ಯಾವುದೋ ಶಕ್ತಿ ಅವನ್ನು ತಡೆದು ನಿಲ್ಲಿಸಿರಬೇಕು.ಮೌನದಲ್ಲಿ ನಡೆಯುತಿರುವ ಗುದ್ದಾಟಗಳ ತಪ್ಪಿಸಿಕೊಂಡು ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಳಗೆ ನಡೆಯುವಂತ ಎಲ್ಲ ನವಿರಾದ ಚಟುವಟಿಕೆಗಳು ನನ್ನೊಳಗೂ ನಡೆಯುತ್ತಿದೆಯೆಂಬ ಉತ್ಸಾಹದಿಂದಲೇ  ಅರಿಶಿನ ಮೆತ್ತಿದ ಸೀರೆಯ ಅಂಚನ್ನು ಕೊಡಕದೆ ಆ ಸುಂದರ ಸಂಭ್ರಮದ  ನೆನಪಿನ ಬಿಲ್ಲೆಯನ್ನು ನಾಜುಕಾಗಿ  ಮಡೆಚಿ  ಕಪಾಟಿನೊಂದು  ಮೂಲೆಯಲ್ಲಿ ಎತ್ತಿರಿಸಿದೆ.

ಮರು ದಿನ ಮುದ್ದು ಗಾಗಿ ಅಮ್ಮ ಹಲವು ದಿನಗಳಿಂದ ನೆಯ್ಯುತ್ತಿದ್ದ  ಬೆಚ್ಚನೆ ಸ್ವೆಟರ್ ಸಾಕ್ಸ್ ಸಂಪೂರ್ಣ ರೂಪು ಪಡೆದು ಮುಗಿಯುವ ಹಂತ ತಲುಪಿತ್ತು.ಅವಳ  ತೊಡೆ ಮೇಲೆ ಮಲಗಿ ಅಲ್ಲಿಂದಲೇ ನೂಲಿನುಂಡೆಯ ಸ್ವೆಟರ್ ನ ಬಣ್ಣ ಅಕಾರವನೆಲ್ಲ ಅಸ್ವಾದಿಸುತ್ತ ಅದರ ಕೊನೆಯ ಅಂಚು ಇಂಚಿಂಚಾಗಿ  ಅಗಲವಾಗುತ್ತಿದ್ದದ ಆನಂದದಿಂದ ಹೃದಯ  ತುಂಬಿಕೊಳುತ್ತಿದ್ದಾಗಲೇ ನೋವು ಕಾಣಿಸಿಕೊಂಡು ತೀವ್ರವಾಯ್ತು.ನಾ ಹಾತೊರೆಯುತ್ತಿದ್ದ ಶುಭ ದಿನದ  ಕ್ಷಣ ಗಣನೆ ಪ್ರಾರಂಭವಾಗಿತ್ತು.ಆಸ್ಪತ್ರೆಯಲ್ಲಿ ಸುಲಲಿತ ಹೆರಿಗೆಯಾಗಿ  ಮುದ್ಧುವಿನ ಮುಖ ನೋಡಲು ಮತ್ತದರ  ಮೊದಲ ಸ್ಪರ್ಶಕ್ಕೆ ಕೈ ಚಾಚುತ್ತಿದ್ದಾಗೆ ಕಂಗಳು ಸೋತಂತಾದವು.
*
ಏನೋ ಅಡಚಣೆ ರೆಪ್ಪೆ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಆಗುತ್ತಿಲ್ಲ.ಕೈಯಾಡಿಸಲು ನೋಡಿದೇ  ಸೂಜಿ ಒತ್ತಿತು.ಕೆಲ ನಿಮಿಷಗಳು ನಿಶಕ್ತತತೆ ಆವರಿಸಿಕೊಂಡಂತಾಗಿ  ಕೈ ಎತ್ತಲು ಅಸಂಭವವೆನಿಸಿತು.ಹೇಗೋ ಇದ್ದ ಸಮಗ್ರ ಬಲವನೆಲ್ಲಾ  ಹಾಕಿ ಹೊಟ್ಟೆಯ ಮೇಲೆ ಕೈಯಿಟ್ಟೆ ...ಹೊಟ್ಟೆಗೂ ಪೈಪ್ ಚುಚ್ಚಿದ್ದಾರೆ! ಇದೇನಿದು ಮುದ್ಧು ಎಲ್ಲಿ? ಹೌದು  ಮುಖ ತೋರಿಸದೆ ಕೊಂಡೊಯ್ದರಲ್ವ?ನಡೆದ್ದದ್ದೇನು ಸರಿಯಾಗಿ ನೆನಪಿನಲ್ಲಿಲ್ಲ. ಮಗುವ ನೋಡುವ ತಳಮಳದಲ್ಲಿ ಭಾರವಾದ ಕಂಗಳ ಬಲವಂತವಾಗಿ ತೆರೆಯಲು ಮುಂದಾದೆ.ಬೆಡ್ ಆಚೆ ಬದಿಯ ಕುರ್ಚಿಯಲ್ಲಿ ಕುಳಿತ ಅಮ್ಮನ ಮುಖ ನೋಡಿ ತುಸು ನೆಮ್ಮದಿಯಾಯ್ತು .ಕರೆಯೋಣವೆಂದರೆ ಬಾಯಿ ಒಣಗಿ ಮಾತ್ ಹೊರಡುತ್ತಿಲ್ಲ.ಕೋಣೆ ಪೂರ್ತಿ ದೃಷ್ಟಿ ಹಾಯಿಸಿದಾಗ ಅಪ್ಪ ಅಣ್ಣ ಅಕ್ಕ ಡಾಕ್ಟರ ಬಾಗಿಲ್ಲಲ್ಲಿ ನಿಂತಿದ್ದು  ಕಂಡಿತು.

ಕಾಡಿದ ನಿಶಕ್ತಿಯ ಸಾವರಿಸಿಕೊಂಡು "ಅಮ್ಮ ಅಮ್ಮ .....ಮುದ್ಧು..." ನನ್ನ ಮಾತನ್ನು ತಡೆಯುವಂತೆ ಕೆನ್ನೆತಟ್ಟಿ "ಮುದ್ಧು ಮುದ್ದು ಸದ್ಯ ಕಣ್ ಬಿಟ್ಯಲ್ಲ"ಎಂದು ಗೆದ್ದವಳಂತೆ ನನ್ನ ಮುದ್ದಾಡಿದಳು.ಅದ ಗಮನಿಸಿದ ಡಾಕ್ಟರ ಬಳಿ ಬಂದು ಎದೆ ಬಡಿತ  ಪರೀಕ್ಷಿಸಿ "ಇನ್ನು ತೊಂದರೆ ಇಲ್ಲ,ಗರ್ಭಕೋಶದ ಜೊತೆಗೆ  ಅಲ್ಲಿ  ಹಬ್ಬಿದ ಕ್ಯಾನ್ಸರ್  ಕಣಗಳನ್ನ ತೆಗೆದಿದ್ದೇವೆ .ಮುಂದೆ ಬೇರೆಡೆ ಹರಡುವ ಸಾಧ್ಯತೆಗಳು ತೀರ ಕಡಿಮೆ ಯಾವುದಕ್ಕೂ ರಿಪೋರ್ಟ್ಸ ಬಂದ ನಂತರ ಗೊತ್ತಾಗುತ್ತೆ.ಇನ್ನೊಂದು ತಿಂಗಳು ಹಾಸಿಗೆ ಬಿಟ್ಟು ಏಳುವಂತಿಲ್ಲ ಆಮೇಲೆ ಮಾಮೂಲಿನಂತೆ ಓಡಾಡಬಹುದು" ಅಂತೇಳಿ ಧೈರ್ಯದ ನಗು ಬೀರಿ ಹೊರ ನಡೆದರು.ಇವರೇನು ಹೇಳ್ತಿದ್ದಾರೆ? ಅದಿರಲಿ ನನ್ನ ಮುದ್ದು ಎಲ್ಲಿ? ಆದರೆ... ಮುದ್ದು.. ಮುದ್ದು...ಯಾರು??ಮದುವೆ  ಆಗದ ನನಗೆ ಮಗುನ!? ಆ ಧೂರ್ತ ನೆನಪು ಸಾಕಾಗಿತ್ತು ಮನಸು ಮುರಿದು ವಾಸ್ತವಕ್ಕೆ ಎಳೆತರಲು.

ಕಣ್ಣು ಮಂಜಾಗಿ ಚಿಮ್ಮಿದ ಹನಿಗಳನ್ನ ಅಂಗೈಯಲ್ಲಿ ಒರಿಸುತ್ತಿದ್ದಾಗ ಆವರಿಸಿದ ನಿದ್ರೆಯ ಮಂಪರ ತಡೆಯುವ  ಮನಸಾಗಲಿಲ್ಲ.ಈ ಬಾರಿ ಬೀಳೋ ಕನಸಿನ್ನಲ್ಲಾದರು ಮುದ್ದುವಿನ ಮುದ್ದು ಮುಖ ನೋಡ ಸಿಗಬಹುದೆಂಬ ಹಂಬಲದಿಂದ ಒದ್ದೆ ಕಂಗಳ ಮುಚ್ಚಿದೆ.

.......................................................ಸ್ವಪ್ನ ಭಂಗ"

Thursday, November 1, 2012

ಹೊಸ ನೀರು : ಹಳೆ ನೀರ ರಭಸಕ್ಕೆ ಮಡಿದವರೆಷ್ಟೋ , ಹೊಸ ನೀರ ಸುಳಿಗೆ ಸಿಲುಕುವವರೆಷ್ಟೋ!

ಕಿಕ್ಕಿರಿದ  ಜನರ  ನೂಕುನುಗ್ಗಲು  ಮಧ್ಯೆ  ನುಸುಳಿ  ಹೇಗೋ  ಸೀಟ್  ಹಿಡಿದ  ಕೇಶವನಿಗೆ  ಹೋದ   ಉಸಿರು  ಬಂದಂತಾಯಿತು.ಜೀವನದಲ್ಲಿ  ಸದಾ  ಹೊಸತನ  ಬಯಸುವ  ಸಾಹಸಗಾರ  ಹೋರಾಟ  ಮನೋಭಾವದ  ಬಿಸಿ  ರಕ್ತದ  ಯುವಕನಿಗೆ  ಶುರುವಿನಲ್ಲೇ  ಎದುರಾದ  ಇರುಸು  ಮುರುಸನ್ನು  ಕಿತ್  ಒಗೆಯುವಂತೆ  ಜನಜಂಗುಳಿಗೆ  ಸಿಕ್ಕಿ  ಮುದ್ದೆಯಾದ  ತನ್ನ ಇಸ್ತ್ರಿ  ಮಾಡಿದ   ಬಿಳಿ  ಅಂಗಿಯ ವಿಶ್ವಾಸದಿಂದ  ಕೊಡವಿದ.ದಕ್ಕಿಸಿಕೊಂಡ  ಒಂದು  ವಾರದ  ರಜೆಯನ್ನು  "ಈ   ಬಾರಿ  ಹಳ್ಳಿಯಲ್ಲಿ  ಕಳಿಯುವೆ"  ಅಂದು, ಮನೆಯವರಿಗೆಲ್ಲಾ  ಆಶ್ಚರ್ಯವನ್ನುಂಟು  ಮಾಡಿದ್ದ  ಕೇಶವ  ಬಸ್  ಏರಿ  ಹೊರಟಿರುವುದು ತನ್ನ  ಹುಟ್ಟೂರಿಗೆ.ಯುಗಾದಿ  ಹಬ್ಬಕ್ಕೆಂದು   ಊರುಗಳಿಗೆ  ಹೊರಟವರ  ಸಂಕೆ  ಎಂದಿಗಿಂತಲೂ  ಹೆಚ್ಚಿದ್ದರಿಂದ  ಕಡಿಬಕ್ಕೆ  ಪ್ರಯಾಣಿಕರನ್ನು ಒಯ್ಯುತ್ತಿದ್ದ  ಆ  ಬಸ್  ನವಮಾಸದ  ಗರ್ಭಿಣಿಯಂತೆ  ಮಂದ ಗತಿಯಲ್ಲಿ  ಸಾಗುತಿದೆ.


ಇತ್ತ  ಪಕ್ಕದ  ಸೀಟಿನಲ್ಲಿ   ತೂಕಡಿಸುತ್ತಿದ್ದ  ಇಳಿ  ವಯಸಿನ  ದಡೂತಿ  ಸಾಹೇಬರು, ಕೇಶವನ  ಮೈಯಿಗೆ  ಪ್ರತಿ ಬಾರಿ ಒರಗಿದಾಗ  ಅವನ  ತೊಡೆಗೆ  ಒತ್ತುತ್ತಿದ್ದ   ಕಾರ್ ಕೀ  ಬಾಲ್ಯದಂತೆ   ಊರಿಗೆ  ಬಸ್ಸಿನಲ್ಲೇ   ತೆರಳಬೇಕೆನ್ನುವ  ಆತನ   ನಿರ್ಧಾರವನ್ನು   ಅಣಿಕಿಸಿ   ಅದರ  ಫಲವಾಗಿ  ಪ್ರಾಪ್ತಿಸಿದ  ಅವಸ್ಥೆ   ನೋಡಿ  ಚುಚ್ಚಿ  ಚುಚ್ಚಿ   ಗಹಗಹಿಸಿದಂತಿದೆ.ಆದರೆ  ಅವನಿಗ್ಯಾಕೋ  ನೋವಿನಲ್ಲೂ  ಹಿತಾನುಭವ. ಕೀ ಯನ್ನ ತನ್ನ  ಜೇಬಿನಿಂದ  ತೆಗೆಯುವ ಮನಸಿರಲಿಲ್ಲ.ಆಗಾಗ   ಜೋತು  ಬೀಳುತ್ತಿದ್ದ  ಸಾಹೇಬರ  ಕುತ್ತಿಗೆಯ ತಾಳಕ್ಕೆ  ಮೂಗಿನ  ತುದಿಯವರೆಗು  ಜಾರಿ ಬರುತ್ತಿದ್ದ   ಕನ್ನಡಕವು  ತನ್ನ  ಮೂಗು  ತುದಿಯ  ಕೋಪದ  ಅಜ್ಜನ  ನೆನಪಿಸಿರಬೇಕು.ಹಾಗಾಗಿ ಅವರ  ನಿದ್ರೆಗೆಡಿಸುವ  ಉಸಾಬರಿಗೂ  ಹೋಗಲಿಲ್ಲ ಆತ. ಹಿಂದಿನ  ಸೀಟಿನಲ್ಲಿ  ಕಂಕುಳಿಗೆ  ಮಗುವನ್ನೆರಿಸಿಕೊಂಡು   ಬಾಳೆ  ಹಣ್ಣು   ತಿನ್ನಿಸುತ್ತಾ  ಮಗುವಿನ ಭಾಷೆಯಲ್ಲಿ  ಸಂವಾದಿಸುತಿರೋ ಹೆಂಗಸು  ಕೇಶವನಿಗೆ ತನ್ನಜ್ಜಿಯ ಮನೆಗೆ  ಬಂದೊಗುತ್ತಿದ್ದ   ಸಾವಿತ್ರಿ  ಅತ್ತೆಯಂತೆ  ಕಂಡಳು.ಎದುರಿನ  ಸೀಟಿನಲ್ಲಿ  ಬಾಲ್  ಆಡುತ್ತಿರುವ ಮಕ್ಕಳು  ಅವರನ್ನ ಗದರಿಸುತ್ತಿದ ವ್ಯಕ್ತಿ  ಮೂಲೆ ಮನೆಯ  ರಂಗಜ್ಜ  ಮತ್ತವನ  ಮೊಮ್ಮಕಳಲ್ಲವೇ? ಛೆ ಅವರಾಗಿರಲಿಕಿಲ್ಲ! ಅವರೆಲ್ಲ ಇಲ್ಲಿಗೇಕೆ  ಬರುತ್ತಾರೆ?ಅದು  ಅಲ್ಲದೆ  ರಂಗಜ್ಜನಿಗೆ  ಸಾವಿತ್ರತ್ತೆಗೆ  ವಯಸಾಗಿ  ಯಾವ್  ಕಾಲವಾಯ್ತು  ಬದುಕಿದ್ದಾರೋ  ಸತ್ತಿದ್ದರೋ ಎಂಬುದು   ನಿರ್ದಿಷ್ಟವಾಗಿ  ತಿಳಿದಿಲ್ಲ  ಅಂದುಕೊಂಡು  ಸುಮ್ಮನಾದ.


 ಕಿತ್ತಿಟ್ಟ  ಹೆಜ್ಜೆಯ  ಸಾಗಿ  ಬಂದ  ದಾರಿಯ  ಮತ್ತೆ  ಮೆಟ್ಟಿದಾಗಲೇ  ಜೀವನ  ನಿಜ  ಸ್ವರೂಪದಲ್ಲಿ  ಎಷ್ಟೊಂದು ಬದಲಾಗಿದೆ ಅನ್ನೋ  ವಾಸ್ತವತೆಯ  ಪರಿಚಯವಾಗೋದು. ಅಂತಹ ಬದಲಾವಣೆಯ ಅರಿಯುವ,ಸದ್ರುಷ್ಯವಾಗಿಸುವ ಹುಮ್ಮಸ್ಸಿನಿಂದ ಸಾಗಿತ್ತು  ಕೇಶವನ  ಪಯಣ.ಬಸ್ಸಿನ  ಚಕ್ರ  ಮುಂದಕ್ಕೆ  ತಿರುಗಿ  ತಿರುಗಿ  ಸಾಗಿದಂತೆ  ಕೇಶವನ  ನೆನಪಿನ  ಚಕ್ರ  ಹಿಂದಕ್ಕೆ  ತಿರುಗಿ  ತಿರುಗಿ ತಂದು  ನಿಲ್ಲಿಸಿದ್ದು  ಅಜ್ಜನ  ಮನೆಯ  ಎದುರು.

*

ಕೇಶವ  ಹುಟ್ಟಿದಾಗ  ಅವನ  ತಾಯಿಗೆ  ಬಾಣಂತಿ  ಸನ್ನಿ  ಬಡಿದ್ದಿದ್ದರಿಂದ  ಅಳಿಯನಿಗೆ  ಅವಳನ್ನು  ಮಗುವನ್ನು  ಸಂಭಾಳಿಸಲು ಕಷ್ಟವಾಗಬಹುದೆಂದು ಅಜ್ಜ ಅವರಿಬ್ಬರನ್ನು  ಕೆಲ ವರುಷಗಳು  ಕಡಿಬದಲ್ಲೇ  ಇರಿಸಿಕೊಂಡಿದ್ದರು.ತಂದೆ ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ.ಊರಿನ  ಪ್ರತಿಯೊಂದು  ಮರ  ಗಿಡಕ್ಕೂ  ಪಾರಿಜಾತ  ಹೂವಿನ ಸುತ್ತ  ಬೆಸ್ತು  ತಿರುಗುತ್ತಿದ್ದ  ಚಿಟ್ಟೆಗೂ   ಹೊಳೆಯಲ್ಲಿ  ಈಜುತಿದ್ದ   ಮೀನುಗಳಿಗೂ  ಬಂಡೆ  ಅಡಿಯಿಂದಲೇ ಮಿರಿ ಮಿರಿ ಇಣುಕುತ್ತಿದ್ದ  ಏಡಿಗೂ ಪುಟ್ಟ  ಕೇಶವ  ಚಿರಪರಿಚಿತ  ಮುಖ.ಅದರಲ್ಲೂ  ತೋಟದ  ಕೆಲಸಕ್ಕೆಂದು   ನೇಮಿಸಿಕೊಂಡ  ಹರಿಜನ  ಕೇರಿಯ  ಮುಬ್ಬನ  ಸಣ್ಣ  ವಯಸಿನ  ಹೆಂಡತಿ  ಗೌರಿ  ಕಂಡರೆ  ಎಲ್ಲಿಲ್ಲದ  ಆತ್ಮೀಯತೆ ಪ್ರೀತಿ.


ಗೌರಿ ತಿಳಿಗೆಂಪು  ಮೈಬಣ್ಣದ  ಸಣ್ಣ  ನಡುವಿನ  ಮುದ್ದು  ಮೋರೆಯ ಜಿಂಕೆ  ಕಣ್ಣಿನ ಮುಗ್ದ ಹುಡುಗಿ .ಆಕೆಯ ಚಪ್ಪಟೆ  ಮೂಗಿಗೆ  ಬೆಸೆದುಕೊಂಡಿದ್ದ  ಚಂದ್ರ  ಬಣ್ಣದ  ಕಲ್ಲಿನ  ಮೂಗುತ್ತಿಯಷ್ಟೇ   ಶುಭ್ರ ವ್ಯಕ್ತಿತ್ವದ  ಚೆಲುವಿ ಅವಳು.ಅವಳ  ವಾರಿಗೆಯ   ಹುಡುಗಿಯರೆಲ್ಲಾ   ಜುಟ್ಟು  ಕುಣಿಸುತ್ತಾ  ಬಿನ್ನಾಣದ  ನಡು ಬಳುಕಿಸಿ  ಚೆಲ್ಲಾಟವಾಡಿಕೊಂಡಿದ್ದರೆ ಇವಳು  ಮಾತ್ರ  ತನ್ನುದ್ದದ ಕೂದಲನ್ನ  ಬಿಗಿದು ಗಂಟು  ಹಾಕಿ ಅದಕ್ಕೊಂದು ಮಲ್ಲೆ  ಹೂ ಸಿಕ್ಕಿಸಿಕೊಂಡು ನಡುವಿನಲ್ಲೂ  ನಡುವಳಿಕೆಯಲ್ಲೂ  ವಯಸ್ಸಿಗೆ ಮೀರಿದ ಗಾಂಭಿರ್ಯತೆ  ಕಾಪಾಡಿಕೊಂಡಿದ್ದಳು.ಮನಸಿನಂತೆ ಕೆಲಸದಲ್ಲೂ ಅಷ್ಟೇ ನಾಜೂಕು ಮಡಿಯ ಹುಡುಗಿ ಗೌರಿಯೇ ಒಂದು  ರೀತಿಯಲ್ಲಿ  ಸನ್ನಿ  ಹಿಡಿದ  ತಾಯಿ  ಮಗುವಿನ  ಆರೈಕೆ   ಮಾಡಿದ್ದು.ಮನೆ  ಒಳಕ್ಕೆ ಆಕೆಯ  ಸೇರಿಸಿಕೊಳ್ಳದಿದ್ದರು ಭಟ್ಟರ  ಮನೆಯಾಚೆಗಿನ  ಕಾರ್ಯಗಳಿಗೆ  ಇವಳದೇ ಉಸ್ತುವಾರಿಯಿತ್ತು. ವಯಿಸಿದ ಎಲ್ಲಾ  ಕೆಲಸಗಳನ್ನು  ತನ್ನ  ಒಡ  ಹುಟ್ಟಿದ  ಅಕ್ಕನ ಮನೆಯೆಂಬಂತೆ  ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.ಯಾವ  ಹರಿಜನ  ಹೆಂಗಸಿಗೂ  ಸಿಗದ  ಭಟ್ಟರ  ಮಗುವಿನ  ಸಾಮಿಪ್ಯ  ಮಕ್ಕಳಿಲ್ಲದ  ಗೌರಿ ಪಾಲಿಗೆ  ದೊರಕಿದ್ದು  ತಿರುಕನಿಗೆ  ರಾಜ್ಯ  ಸಿಕ್ಕಿದಷ್ಟೇ  ಅತೀವ  ಹೆಮ್ಮೆ  ಖುಷಿ  ಕೊಟ್ಟಿತ್ತು.ಬಾನ ಚಂದಿರನ  ನೋಡಿ  ಆನಂದಿಸುವ  ಪ್ರೇಮಿಯಂತೆ  ಗೌರಿ  ಒಂದಡಿ  ದೂರದಿಂದಲೇ   ಕೇಶವನನ್ನು    ಮುದ್ದುಗರೆಯುತ್ತಿದ್ದಳು.ಅಂಗಳ,ತೋ
ಟದ  ಕೆಲಸದ  ನಡುವೆಯೂ  ಕೇಶವನ  ಆಟೋಪಾಚಾರಗಳನ್ನ ಅಸ್ವಾದಿಸುತ್ತಿದ್ದಳು.ಮೆಲ್ಲಗೆ ಯಾರು ಇಲ್ಲದಿದ್ದ ಸಮಯ ನೋಡಿಕೊಂಡು  ಮುತ್ತು ಕದಿಯುತ್ತಿದ್ದಳು.


 ಮದುವೆಯಾಗಿ  ನಾಲ್ಕು  ವರುಷಗಳಾದರೂ ಅವಳಿಗೆ ಮಕ್ಕಳಾಗಿರಲಿಲ್ಲ.ಗೌರಿ ಕೇಶವನನ್ನು ತೀರ ಮಗನಂತೆ ಅಚ್ಚಿಕೊಳ್ಳಲು ಆದುವು ಒಂದು ಪ್ರಮುಖ  ಕಾರಣವಾಗಿತ್ತು.ಮಗು  ಆಗಲಿಲ್ಲವೆಂದು  ಆಡಿಕೊಳ್ಳುತ್ತಿದ್ದ   ಸಮಾಜದ ನಾಲಿಗೆಗೆ  ಸಿಕ್ಕಿ ರೋಸಿ  ಹೋಗಿದ್ದ  ಗೌರಿಗೆ  ಮನೆಯಲ್ಲೂ  ಯಾವ  ನೆಮ್ಮದಿ ಪ್ರಾಪ್ತಿಯಾಗಲಿಲ್ಲ.ಕೆಡುಕ  ಗಂಡ  ದಿನ  ಕುಡಿದು  ಬಂದು  ಬಾಸುಂಡೆ   ಬರುವ  ಹಾಗೆ  ಹೊಡೆಯುತ್ತಿದ್ದ  ವಿಷಯವನ್ನು  ಸಂಕಟದಿಂದ  ಕೇಶವನ  ತಾಯಿಯೊಡನೆ  ತೋಡಿಕೊಂಡಾಗ  ಮುಬ್ಬನ  ಕರಿಸಿ  ಅಜ್ಜ  ಅದೆಷ್ಟು  ಬಾರಿ  ನ್ಯಾಯ  ತೀರ್ಮಾನ  ಮಾಡಿಸಿದರು  ಚಾಳಿ ಬಿಡದೆ  ದೌರ್ಜನ್ಯ  ನಿರಂತರವಾಗಿ   ಮುಂದುವರಿಸಿದ್ದನು .ಹೀಗೆ  ಮುಬ್ಬನ  ಕೈಯಿಂದ   ಬಡಿಸಿಕೊಂಡು ಆಗಾಗ ಜ್ವರವೇರಿ  ಮಲಗುತ್ತಿದ್ದ   ಗೌರಿಯು  ಮನೆ ಕಡೆ  ಬರದಿದ್ದಾಗ  ಏಳು  ವರುಷದ  ಕೇಶವ  ಮಕ್ಕಳ  ಕೂಡಿ  ಅಜ್ಜಿ  ಮನೆ  ಹಿಂದಿನಿಂದ  ಒಂದಷ್ಟು  ದೂರ  ಊರಿನಾಚೆ  ಮುಳ್ಳಿನ   ಕಾಲುದಾರಿಯಲ್ಲಿ  ಸಾಗಿ  ಅವಳ  ಸಂಸಾರ  ನೆಲೆನಿಂತ  ಕೇರಿ  ಮನೆಯೊಳಗೇ  'ಎಲ್ಲಿದಿಯೇ ಗೌರಿ ಯಾಕೆ ಮಲಗಿದ್ಯೆ?ಚೆಂಡಾಟ ಆಡೋಣ ಬಾ 'ಎಂದು ತುಂಟತನದಿಂದ ಆರ್ಭಟಿಸುತ್ತ  ಹೊಕ್ಕುತ್ತಿದ್ದ. ಹೀಗೆ  ಕೇರಿಗೆ  ಬಂದ್ದಿದ್ದು  ಹುಡುಗನ  ಕಡೆಯವರಿಗೆ  ತಿಳಿದರೆ  ಅವಳದೇ   ಕುಮ್ಮಕ್ಕು ಎಂದೆನಿಸಿ  ಅವನ್ನನ್ನು ಅವಳಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆಂಬ  ಭಯದಿಂದ  ಆತನನ್ನು  ಆಲಂಗಿಸದೆ   'ಮೊದ್ಲು ಹೋಗ್ರಿ ಚಿಕ್ ಬುದಿ ಸಂಜಿ ಮನೆಕಡೆ ನಾನೆ ಬರ್ತೀನಿ' ಅಂತೇಳಿ  ಮನವೊಲಿಸಿ ವಲ್ಲದ  ಮನಸ್ಸಿಂದಲೇ  ಅವನ ಸಾಗ್ ಹಾಕುತ್ತಿದ್ದಳು.

*


ಕೇಶವನ  ಮನೆ  ಕೆಲಸ  ಬಿಟ್ಟರೆ  ಗೌರಿ  ಹೆಚ್ಚು  ಸಮಯ  ಮೀಸಲಿಡುತ್ತಿದ್ದದ್ದು  ಆ  "ಜಲಪಾತಕ್ಕೆ".ಕೇಶವನ  ಅಜ್ಜನ  ಮನೆ  ಮತ್ತು  ಹೊಲಗೇರಿಯ  ಗಡಿಯಂತೆ ಅವೆರಡರ  ನಡುವಿನ ಸಾಮಾಜಿಕ ಅಂತರವನ್ನು  ಸಾರುವಂತೆ ಹರಿಯುತ್ತಿದ್ದ  ಹೊಳೆಯ  ಒಂದು  ಬದಿಯಲ್ಲಿದ್ದ  ಜಲಪಾತವದು. ಅದೇ  ಜಲಪಾತದಡಿ  ನಿಂತು ಗೌರಿ  ಗಂಗೆಗೆ  ಕೈ  ಮುಗಿದು  ಮಗುವಿಗಾಗಿ  ಪ್ರಾರ್ಥಿಸಿ ತಾಸುಗಟ್ಟಲೆ  ನೀರಿನಲ್ಲಿ  ಆಡುತ್ತಿದ್ದಳು.ನೀರಿನಿಂದ  ಎದ್ದು   ಬಂಡೆಯಾಚೆಗೆ   ನಡೆದಂಗೂ  ಗಂಟು  ತೆಗೆದ  ಆಕೆಯ  ಚೆಂಡಿ  ನೀಲಾಗೂದಳು ತೊಟ್ಟಿಕ್ಕುತ್ತಾ  ಬಂಡೆಗಳ  ಮೇಲಾಯ್ದು  ಆಕೆಯ  ಮನೆಗಿನ  ದಾರಿಯವರೆಗೂ  ಹನಿಚುಕ್ಕಿಯ  ಚಿತ್ತಾರ  ಬಿಡಿಸಿ  ಪುಟ್ಟ  ಮಕ್ಕಳನ್ನೆಲ್ಲಾ ತನ್ನೆಡೆಗೆ ಅಹ್ವಾನಿಸುತ್ತಿರುವಂತೆ  ಅನಿಸುತ್ತಿತ್ತು .


ಅಲ್ಲಿನ  ಆ ಜಲಪಾತ "ಗೌರಿ-ಜಾಲಪಾತ"ವೆಂದೆ ಪ್ರಸಿದ್ದವಾಗಿತ್ತು,ಜಲಪಾತ ನಿರ್ಮಿತ ಹೊಂಡ  ಅವಳದೇ  ಅವಿಷ್ಕಾರವೆಂದು  ಎಲ್ಲರೂ  ಮಾತಾಡಿಕೊಳ್ಳುತಿದ್ದರು.ಇನ್ನೂ  ಒಳಕ್ಕೆ   ಬಂಡೆ  ಜಿಗಿಯುತ್ತಾ   ಕಾಡಿನತ್ತ  ಡೊಂಕಿನ  ಹೆಜ್ಜೆ  ಹಾಕಿದರೆ  ಹಲವಾರು  ಚಿಕ್ಕ  ಪುಟ್ಟ  ಜಲಪಾತ  ಮಾದರಿಯ  ನೀರಿನ  ಹೊಂಡಗಳು  ಇದ್ದವು.ಆದರೆ  ಗೌರಿ ಜಲಪಾತ  ಅವೆಲ್ಲಕ್ಕಿಂತಲೂ ಎತ್ತರದ್ದು ವಿಸ್ತಾರವಾದದ್ದು.ಅದರ ಮೇಲಿನ ಬಂಡೆಗಳಿಂದ  ಪುಟಿ  ಪುಟಿದು ಹಾಲ್ನೊರೆಯಂತೆ ನೀರು ದುಮ್ಮುಕ್ಕುತಿತ್ತು. ಇಬ್ಬರು  ನಿಂತು  ಮೈ  ತಂಡಿ ಗೊಳಿಸಬಹುದಾದಷ್ಟು   ಜಾಗವನ್ನೋಳಗೊಂಡ್ದಿತ್ತು.


ಸಾಮಾಜಿಕ ಗಡಿಯ ಅರಿವಿಲ್ಲದ ಪುಟ್ಟ ಬಾಲಕ  ಕೇಶವನಿಗೆ ಎಲ್ಲಾ ಗಡಿ ದಾಟುವ ಬಯಕೆ.ಗೌರಿ ಆಡುತ್ತಿದ್ದ   ಜಲಪಾತದಲ್ಲಿ  ತಾನು  ಮುಳುಗೇಳಾ ಬೇಕೆನ್ನೋ ಹುಚ್ಚು ಹಠ ಅವನದು.ಅದನ್ನು ಮನಗೊಂಡ ಅಜ್ಜ "ಗೌರಿಜಲಪಾತ  ನೀರು  ಮುಟ್ಟಿದರೆ  ಕೈಗೆ  ಬರೆ  ಹಾಕ್ತೀನಿ"  ಅಂದ್ದಿದ್ದ  ಮಾತನ್ನು  ಮೀರಿ  ಅಲ್ಲಿಗೆ  ಸುಮಾರು  ಬಾರಿ  ದೌಡಾಯಿಸಿದ್ದ.ಆದರೆ  ಗೌರಿ  ಸಿಟ್ಟಿನ ಯಜಮಾನ್ರು ಮಗುವಿಗೆ  ಏನ್ ಅನಾಹುತ  ಮಾಡಿಬಿಡುತ್ತಾರೋ ಎಂಬ ಭೀತಿಯಿಂದ  ಆತನನ್ನು   ಅವಳಲ್ಲಿರುವಷ್ಟು   ಸಮಯ  ಆಸು  ಪಾಸು  ಬಾರದಂತೆ  ತಡೆಯುತ್ತಿದ್ದಳು .

*

ಕೇಶವ ಎಂಟು ವರುಷದವನಿದ್ದಾಗ ಗೌರಿಗೆ ಒಂದು ಆಘಾತ ಕಾದಿತ್ತು.ಅಜ್ಜನ  ಮರಣದ  ಬಳಿಕ ಭಟ್ಟರ  ಸಂಸಾರ ಬೆಂಗಳೊರಿಗೆ ತೆರೆಳುವ ನಿರ್ಧಾರಕ್ಕೆ ಬಂದಿದ್ದರು.ಅದರಂತೆ ಅಜ್ಜಿ ಅಮ್ಮನೊಟ್ಟಿಗೆ ಅಪ್ಪನಿದ್ದ  ಬೆಂಗಳೂರಿನಲ್ಲಿ  ನೆಲೆಸಲು  ಹೊರಟಿದ್ದ  ಕೇಶವನ   ಅಗಲಿಕೆ  ತಾಳಲಾರದೆ  ಅವನಪ್ಪಿ  ಮುದ್ದಾಡುವ ಅವಕಾಶವಿಲ್ಲದೆ  ಗೌರಿ  ಎಡಬಿಡದೆ ಸುರಿಯುತ್ತಿದ್ದ  ಕಣ್ಣೀರಾ  ಮುಚ್ಚಿಡಲು  ಅಲ್ಲಿಂದ  ಹೊರಟವಳೇ  ಗೌರಿ ಜಲಪಾತದ  ನೀರಿನಲ್ಲಿ ಅದನಡಗಿಸಿ ನಿಂತು  ಬಿಟ್ಟಳು.ಅದೇ   ದಾರಿಯಲ್ಲಿ  ಬಸ್  ನಿಲ್ದಾಣದತ್ತ  ಹೋಗುತ್ತಿದ್ದ  ಕೇಶವ  ಸಪ್ಪೆ  ಮೋರೆಯೊಂದಿಗೆ  ನದಿಯಲ್ಲಿ  ನಿಂತ  ಗೌರಿಯ  ಉದ್ದೇಶಿಸಿ "ಕೊನೆಗೂ  ಅಲ್ಲಿ  ಮೀಯಲು ಬಿಡಲಿಲ್ಲ  ನೀನು'' ಅಂದ್ದಿದ್ದ .ಅದರಲ್ಲಿ ತನ್ನದೇನು ತಪ್ಪಿಲ್ಲವೆಂದು ತಿಳಿಸಲೂ ಆಗದೆ  ಅವನ  ದುಃಖದ  ಮುಖವ  ನೋಡಲೂ ಆಗದೆ ಬೆನ್  ಹಿಂದಾಕಿ ನೀರಿನಲ್ಲಿ ಕಾಣುತ್ತಿದ್ದ ಆತನ ಕದಲಿದ ಬಿಂಬವ ನೋಡುತ್ತಾ ಯಾತನೆಯೊಂದಿಗೆ"ರಜಕ್ಕೆ  ಬರ್ತಿಯಲ್ಲ  ಮಗ, ನಗ್ತಾ  ಹೋಗು.ನನ್ನಾಣೆ  ಇನ್ಮುಂದೆ  ಈ  ಜಲಪಾತಕ್ಕೆ  ವಾರಸುದಾರ  ನೀನೆ! " ಎಂದ್ದಿದ್ದಳು.


ಅದೇ ಕೊನೆ ಕೇಶವ ಗೌರಿಯನ್ನು ಮತ್ತೇನೆಂದು ಸಂದಿಸಲಿಲ್ಲ.ಅವರೂರು ಬಿಟ್ಟ  ವರ್ಷವೆ  ಗೌರಿ  ಸತ್ತ  ಸುದ್ಧಿ  ದೂರವಾಣಿ  ಮೂಲಕ  ಕೇಶವನ  ತಾಯಿಗೆ  ತಲುಪಿತು.ಇವತ್ತಿಗೂ ಅವಳ  ಸಾವಿನ  ರಹಸ್ಯ  ಒಗಟಾಗೆ  ಉಳಿದು  ಹೋಗಿದೆ.ಅತಿಯಾಗಿ  ವ್ಯಮೊಹಿಸಿದ  ನೀರೇ   ಅವಳ  ಲಾವಣ್ಯಕ್ಕೆ   ಮಾರು  ಹೋಗಿ  ಕತ್ತಲ್ಲಲ್ಲಿ   ಓಲೈಸಿ ನುಂಗಿ  ಹಾಕ್ತೋ  ಇಲವೋ  ಮಕ್ಕಳಿಲ್ಲದವಳೆಂದು  ಹೊಲಸು  ಸಮಾಜ  ತಿಂದು  ಮುಗಿಸಿತ್ತೋ  ಅಥವಾ  ಮುಬ್ಬನೆ  ಕೊಂದು  ನೀರಿಗೆಸೆದನೋ ಯಾರಿಗೂ  ಗೊತ್ತಿಲ್ಲ  ಎರಡು  ದಿನ  ಬಿದ್ದ  ದೊಡ್ಡ  ಮಳೆಗೆ  ಅವಳ  ದೇಹ  ತೇಲಿ  ಕೊಳೆತ  ಸ್ಥಿತಿಯಲ್ಲಿ  ಸಿಕ್ಕಿತ್ತು .ನಂತರ  ಅದನ್ನ  ಹೂಣಿ  ಹಾಕ್ಕಿದ್ದರು.

*

ಸಂಜೆ  ಸೂರ್ಯ  ಬಣ್ಣ  ಉಗುಳುತ್ತಿದ್ದ  ಸಮಯಕ್ಕೆ  ಬಸ್ಸು  ಊರ  ಮುಂಬಾಗಿಲಿಗೆ  ನಿಲ್ಲುತ್ತಿದ್ದಂಗೆ  ಕೇಶವ   ಬ್ಯಾಗ್  ಏರಿಸಿಕೊಂಡು  ಬಾಡಿಗೆಗೆ  ಬಿಟ್ಟಿದ್ದ  ಅಜ್ಜನ  ಹಳೆ  ಮನೆಯತ್ತ  ಸಾಗಿದ.ಇಲ್ಲೆಲ್ಲಾ  ಎಷ್ಟು ಬದಲಾಗಿದೆ ಅಂದು ಕೊಳ್ಳುತ್ತಾ ಮುನ್ನಡೆದ ಕೇಶವನಿಗೆ ಉರಾಚೆಗೆ ಯಾವುದೇ  ಕೇರಿ  ಕಾಣಲಿಲ್ಲ.ಅಲ್ಲೊಂದು ದಲಿತ ಹಕ್ಕುಗಳ ಕೇಂದ್ರ ಸ್ಥಾಪಿತವಾಗಿದೆ,ಖಾಕ ನ ಅಂಗಡಿಯಿದ್ದ  ಜಾಗದಲ್ಲಿ  ಮಹಿಳಾ ಸಂರಕ್ಷಣಾ  ಸಂಸ್ಥೆ  ಎದ್ದು  ನಿಂತಿದೆ.ಅದರ  ಪಕ್ಕದಲ್ಲೇ  ಅರೋಗ್ಯ  ತಪಾಸಣೆ  ಕೇಂದ್ರದ "ನಾವಿಬ್ಬರು  ನಮಗಿಬ್ಬರು"  ಪಲಕದ  ಕೆಳಗೆ  ಕೆಂಪಾಕ್ಷರದಲ್ಲಿ  ಮೂಡಿದ್ದ  "ಮಕ್ಕಳಾಗದಿರುವುದಕ್ಕೆ   ಹೆಣ್ಣು ಮಾತ್ರವಲ್ಲ  ಗಂಡಿನಲಿರೋ  ದೋಷವು  ಕಾರಣವಿರಬಹುದು ಅಗತ್ಯವಾಗಿ  ತಪಾಸಣೆ  ಮಾಡಿಸಿಕೊಳ್ಳಿ" ಅನ್ನೋ  ಅಡಿ  ಬರಹವ  ಮಹಿಳಾ   ಸಮಾಜದ  ಗೋಡೆಯ ಮೇಲೂ ವಿಸ್ತಾರವಾಗುವಂತೆ  ಬರೆಸಿದ್ದಾರೆ.


ಛೆ! ಗೌರಿ  ಈ  ಕಾಲಮಾನದಲ್ಲಿ  ಜನಿಸ ಬಾರದಿತ್ತ  ಮನಸಿನಲ್ಲಿ  ಮೂಡುತ್ತಿದ್ದ  ಭಾವೊದ್ವೇಗ ಭರಿತ  ಪ್ರಶ್ನೆಗಳೊಂದಿಗೆ  ಹಲವು  ಸಂವತ್ಸರಗಳ ಬಳಿಕ   ಮತ್ತದೇ   ಮನೆಯ  ಹೊಳೆಯ  ಹಾದಿ  ಮುಟ್ಟುತ್ತಿದ್ದಂತೆ ಆಹ್ವಾನಿಸಿದ  ಹೊಳೆಯಲ್ಲಿ  ಪ್ರಯಾಣದ  ದಣಿವಾರಿಸಲು  ಹಿಡಿದ  ಬ್ಯಾಗನ್ನು  ಕೆಳಗಿರಿಸಿ ನೀರಿನಲ್ಲಿ  ಕಾಲಿರಿಸಿದ್ದೇ  ತಡ  ಗೌರಿಜಲಪಾತದ   ನೆನಪಾಗಿ  ಆಚೀಚೆ   ಕಣ್ಣಾಡಿಸಿದ.


ಹಳೆ ನೀರು ಅಲಲ್ಲಿ  ಹಲವೆಡೆ ಇನ್ನಷ್ಟು ಕಲುಷಿತವಾಗಿ ಹೆಪ್ಪುಗಟ್ಟಿ ನಿಂತಿದೆ. ಆದರೆ ಗೌರಿಜಲಪಾತ  ಕುರುಹೇ  ಇಲ್ಲದಂತೆ  ಹಬೆಯಾಡುತ್ತಿದ್ದ ಬಂಡೆಗಳ  ರಾಜ್ಯದಲ್ಲಿ  ಕಾಣಿಯಾಗಿದೆ.ಮತ್ತೊಂದು ಅಂತರವ ಸೃಷ್ಟಿಸಲು ಅಲ್ಲೇ ಕಾಲು ದಾರಿಯ ಕಳ್ಳ ಕಣಿವೆಯಿಂದ  ಸಣ್ಣದಾಗಿ  ಹೊಳೆಯತ್ತ ಹೊಸ  ನೀರು  ಹರಿಯುತ್ತಿತ್ತು.ಹರಿದು  ಬರುತ್ತಿದ್ದ   ಹೊಸ  ನೀರಿಗೆ  ಅದರದೇ  ಆದ   ಹೊಸ  ಹರಿತ  ಹೊಸ  ತಿವಿತ.ಒಂದು  ಜೋರು  ಮಳೆ  ಹುಯ್ದರೆ  ಇನ್ಯಾವ  ಸಮೂಹವನ್ನಾದರು   ಸಂಮೊಹಿಸುವ  ಸಂಚೂಡಿ   ಮುಂಬರುವ  ಅಹುತಿಗಾಗಿ  ಬಂಡೆಯನ್ನ  ತಣ್ಣಗಾಗಿಸುತ್ತಾ  ತಾನು  ಬಿಸಿ  ಏರಿಸಿಕೊಂಡು  ಸಾಗುತ್ತಿದೆ.ಬೀಸುತ್ತಿದ್ದ ವೈಶಾಖ ಮಾಸದ ಗಾಳಿಯೊಂದಿಗೆ   ಬಿಸಿಲು  ಮಳೆ  ಶುರುವಾಗುತ್ತಿದ್ದಂತೆಯೇ  'ಮಗ  ಇನ್ಮುಂದೆ  ಇದರ ವಾರಸುದಾರ   ನೀನೆ" ಅನ್ನೋ  ಮಾತುಗಳು ಕೇಶವನ  ಕಿವಿಯೊಳಗೆ  ಪುನಃ  ಪುನಃ  ಉಚ್ಚರಿಸಿದಂತಾಗಿ ಬದಲಾದ ಸಮಾಜದ  ಧ್ಯೋತಕದಂತೆ  ಸಣ್ಣಗೆ  ಹರಿಯುತ್ತಿದ್ದ  ಹೊಸ ನೀರಿನ ತಿವಿತಕ್ಕೆ  ಬೆಚ್ಚಿ  ಭಾರದ  ಬ್ಯಾಗನ್ನು  ಹೆಗಲೇರಿಸಿಕೊಂಡು  ಮನೆಯತ್ತ  ವೇಗದ ಹೆಜ್ಜೆ  ಹಾಕಿದ.