Thursday, November 1, 2012

ಹೊಸ ನೀರು : ಹಳೆ ನೀರ ರಭಸಕ್ಕೆ ಮಡಿದವರೆಷ್ಟೋ , ಹೊಸ ನೀರ ಸುಳಿಗೆ ಸಿಲುಕುವವರೆಷ್ಟೋ!

ಕಿಕ್ಕಿರಿದ  ಜನರ  ನೂಕುನುಗ್ಗಲು  ಮಧ್ಯೆ  ನುಸುಳಿ  ಹೇಗೋ  ಸೀಟ್  ಹಿಡಿದ  ಕೇಶವನಿಗೆ  ಹೋದ   ಉಸಿರು  ಬಂದಂತಾಯಿತು.ಜೀವನದಲ್ಲಿ  ಸದಾ  ಹೊಸತನ  ಬಯಸುವ  ಸಾಹಸಗಾರ  ಹೋರಾಟ  ಮನೋಭಾವದ  ಬಿಸಿ  ರಕ್ತದ  ಯುವಕನಿಗೆ  ಶುರುವಿನಲ್ಲೇ  ಎದುರಾದ  ಇರುಸು  ಮುರುಸನ್ನು  ಕಿತ್  ಒಗೆಯುವಂತೆ  ಜನಜಂಗುಳಿಗೆ  ಸಿಕ್ಕಿ  ಮುದ್ದೆಯಾದ  ತನ್ನ ಇಸ್ತ್ರಿ  ಮಾಡಿದ   ಬಿಳಿ  ಅಂಗಿಯ ವಿಶ್ವಾಸದಿಂದ  ಕೊಡವಿದ.ದಕ್ಕಿಸಿಕೊಂಡ  ಒಂದು  ವಾರದ  ರಜೆಯನ್ನು  "ಈ   ಬಾರಿ  ಹಳ್ಳಿಯಲ್ಲಿ  ಕಳಿಯುವೆ"  ಅಂದು, ಮನೆಯವರಿಗೆಲ್ಲಾ  ಆಶ್ಚರ್ಯವನ್ನುಂಟು  ಮಾಡಿದ್ದ  ಕೇಶವ  ಬಸ್  ಏರಿ  ಹೊರಟಿರುವುದು ತನ್ನ  ಹುಟ್ಟೂರಿಗೆ.ಯುಗಾದಿ  ಹಬ್ಬಕ್ಕೆಂದು   ಊರುಗಳಿಗೆ  ಹೊರಟವರ  ಸಂಕೆ  ಎಂದಿಗಿಂತಲೂ  ಹೆಚ್ಚಿದ್ದರಿಂದ  ಕಡಿಬಕ್ಕೆ  ಪ್ರಯಾಣಿಕರನ್ನು ಒಯ್ಯುತ್ತಿದ್ದ  ಆ  ಬಸ್  ನವಮಾಸದ  ಗರ್ಭಿಣಿಯಂತೆ  ಮಂದ ಗತಿಯಲ್ಲಿ  ಸಾಗುತಿದೆ.


ಇತ್ತ  ಪಕ್ಕದ  ಸೀಟಿನಲ್ಲಿ   ತೂಕಡಿಸುತ್ತಿದ್ದ  ಇಳಿ  ವಯಸಿನ  ದಡೂತಿ  ಸಾಹೇಬರು, ಕೇಶವನ  ಮೈಯಿಗೆ  ಪ್ರತಿ ಬಾರಿ ಒರಗಿದಾಗ  ಅವನ  ತೊಡೆಗೆ  ಒತ್ತುತ್ತಿದ್ದ   ಕಾರ್ ಕೀ  ಬಾಲ್ಯದಂತೆ   ಊರಿಗೆ  ಬಸ್ಸಿನಲ್ಲೇ   ತೆರಳಬೇಕೆನ್ನುವ  ಆತನ   ನಿರ್ಧಾರವನ್ನು   ಅಣಿಕಿಸಿ   ಅದರ  ಫಲವಾಗಿ  ಪ್ರಾಪ್ತಿಸಿದ  ಅವಸ್ಥೆ   ನೋಡಿ  ಚುಚ್ಚಿ  ಚುಚ್ಚಿ   ಗಹಗಹಿಸಿದಂತಿದೆ.ಆದರೆ  ಅವನಿಗ್ಯಾಕೋ  ನೋವಿನಲ್ಲೂ  ಹಿತಾನುಭವ. ಕೀ ಯನ್ನ ತನ್ನ  ಜೇಬಿನಿಂದ  ತೆಗೆಯುವ ಮನಸಿರಲಿಲ್ಲ.ಆಗಾಗ   ಜೋತು  ಬೀಳುತ್ತಿದ್ದ  ಸಾಹೇಬರ  ಕುತ್ತಿಗೆಯ ತಾಳಕ್ಕೆ  ಮೂಗಿನ  ತುದಿಯವರೆಗು  ಜಾರಿ ಬರುತ್ತಿದ್ದ   ಕನ್ನಡಕವು  ತನ್ನ  ಮೂಗು  ತುದಿಯ  ಕೋಪದ  ಅಜ್ಜನ  ನೆನಪಿಸಿರಬೇಕು.ಹಾಗಾಗಿ ಅವರ  ನಿದ್ರೆಗೆಡಿಸುವ  ಉಸಾಬರಿಗೂ  ಹೋಗಲಿಲ್ಲ ಆತ. ಹಿಂದಿನ  ಸೀಟಿನಲ್ಲಿ  ಕಂಕುಳಿಗೆ  ಮಗುವನ್ನೆರಿಸಿಕೊಂಡು   ಬಾಳೆ  ಹಣ್ಣು   ತಿನ್ನಿಸುತ್ತಾ  ಮಗುವಿನ ಭಾಷೆಯಲ್ಲಿ  ಸಂವಾದಿಸುತಿರೋ ಹೆಂಗಸು  ಕೇಶವನಿಗೆ ತನ್ನಜ್ಜಿಯ ಮನೆಗೆ  ಬಂದೊಗುತ್ತಿದ್ದ   ಸಾವಿತ್ರಿ  ಅತ್ತೆಯಂತೆ  ಕಂಡಳು.ಎದುರಿನ  ಸೀಟಿನಲ್ಲಿ  ಬಾಲ್  ಆಡುತ್ತಿರುವ ಮಕ್ಕಳು  ಅವರನ್ನ ಗದರಿಸುತ್ತಿದ ವ್ಯಕ್ತಿ  ಮೂಲೆ ಮನೆಯ  ರಂಗಜ್ಜ  ಮತ್ತವನ  ಮೊಮ್ಮಕಳಲ್ಲವೇ? ಛೆ ಅವರಾಗಿರಲಿಕಿಲ್ಲ! ಅವರೆಲ್ಲ ಇಲ್ಲಿಗೇಕೆ  ಬರುತ್ತಾರೆ?ಅದು  ಅಲ್ಲದೆ  ರಂಗಜ್ಜನಿಗೆ  ಸಾವಿತ್ರತ್ತೆಗೆ  ವಯಸಾಗಿ  ಯಾವ್  ಕಾಲವಾಯ್ತು  ಬದುಕಿದ್ದಾರೋ  ಸತ್ತಿದ್ದರೋ ಎಂಬುದು   ನಿರ್ದಿಷ್ಟವಾಗಿ  ತಿಳಿದಿಲ್ಲ  ಅಂದುಕೊಂಡು  ಸುಮ್ಮನಾದ.


 ಕಿತ್ತಿಟ್ಟ  ಹೆಜ್ಜೆಯ  ಸಾಗಿ  ಬಂದ  ದಾರಿಯ  ಮತ್ತೆ  ಮೆಟ್ಟಿದಾಗಲೇ  ಜೀವನ  ನಿಜ  ಸ್ವರೂಪದಲ್ಲಿ  ಎಷ್ಟೊಂದು ಬದಲಾಗಿದೆ ಅನ್ನೋ  ವಾಸ್ತವತೆಯ  ಪರಿಚಯವಾಗೋದು. ಅಂತಹ ಬದಲಾವಣೆಯ ಅರಿಯುವ,ಸದ್ರುಷ್ಯವಾಗಿಸುವ ಹುಮ್ಮಸ್ಸಿನಿಂದ ಸಾಗಿತ್ತು  ಕೇಶವನ  ಪಯಣ.ಬಸ್ಸಿನ  ಚಕ್ರ  ಮುಂದಕ್ಕೆ  ತಿರುಗಿ  ತಿರುಗಿ  ಸಾಗಿದಂತೆ  ಕೇಶವನ  ನೆನಪಿನ  ಚಕ್ರ  ಹಿಂದಕ್ಕೆ  ತಿರುಗಿ  ತಿರುಗಿ ತಂದು  ನಿಲ್ಲಿಸಿದ್ದು  ಅಜ್ಜನ  ಮನೆಯ  ಎದುರು.

*

ಕೇಶವ  ಹುಟ್ಟಿದಾಗ  ಅವನ  ತಾಯಿಗೆ  ಬಾಣಂತಿ  ಸನ್ನಿ  ಬಡಿದ್ದಿದ್ದರಿಂದ  ಅಳಿಯನಿಗೆ  ಅವಳನ್ನು  ಮಗುವನ್ನು  ಸಂಭಾಳಿಸಲು ಕಷ್ಟವಾಗಬಹುದೆಂದು ಅಜ್ಜ ಅವರಿಬ್ಬರನ್ನು  ಕೆಲ ವರುಷಗಳು  ಕಡಿಬದಲ್ಲೇ  ಇರಿಸಿಕೊಂಡಿದ್ದರು.ತಂದೆ ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ.ಊರಿನ  ಪ್ರತಿಯೊಂದು  ಮರ  ಗಿಡಕ್ಕೂ  ಪಾರಿಜಾತ  ಹೂವಿನ ಸುತ್ತ  ಬೆಸ್ತು  ತಿರುಗುತ್ತಿದ್ದ  ಚಿಟ್ಟೆಗೂ   ಹೊಳೆಯಲ್ಲಿ  ಈಜುತಿದ್ದ   ಮೀನುಗಳಿಗೂ  ಬಂಡೆ  ಅಡಿಯಿಂದಲೇ ಮಿರಿ ಮಿರಿ ಇಣುಕುತ್ತಿದ್ದ  ಏಡಿಗೂ ಪುಟ್ಟ  ಕೇಶವ  ಚಿರಪರಿಚಿತ  ಮುಖ.ಅದರಲ್ಲೂ  ತೋಟದ  ಕೆಲಸಕ್ಕೆಂದು   ನೇಮಿಸಿಕೊಂಡ  ಹರಿಜನ  ಕೇರಿಯ  ಮುಬ್ಬನ  ಸಣ್ಣ  ವಯಸಿನ  ಹೆಂಡತಿ  ಗೌರಿ  ಕಂಡರೆ  ಎಲ್ಲಿಲ್ಲದ  ಆತ್ಮೀಯತೆ ಪ್ರೀತಿ.


ಗೌರಿ ತಿಳಿಗೆಂಪು  ಮೈಬಣ್ಣದ  ಸಣ್ಣ  ನಡುವಿನ  ಮುದ್ದು  ಮೋರೆಯ ಜಿಂಕೆ  ಕಣ್ಣಿನ ಮುಗ್ದ ಹುಡುಗಿ .ಆಕೆಯ ಚಪ್ಪಟೆ  ಮೂಗಿಗೆ  ಬೆಸೆದುಕೊಂಡಿದ್ದ  ಚಂದ್ರ  ಬಣ್ಣದ  ಕಲ್ಲಿನ  ಮೂಗುತ್ತಿಯಷ್ಟೇ   ಶುಭ್ರ ವ್ಯಕ್ತಿತ್ವದ  ಚೆಲುವಿ ಅವಳು.ಅವಳ  ವಾರಿಗೆಯ   ಹುಡುಗಿಯರೆಲ್ಲಾ   ಜುಟ್ಟು  ಕುಣಿಸುತ್ತಾ  ಬಿನ್ನಾಣದ  ನಡು ಬಳುಕಿಸಿ  ಚೆಲ್ಲಾಟವಾಡಿಕೊಂಡಿದ್ದರೆ ಇವಳು  ಮಾತ್ರ  ತನ್ನುದ್ದದ ಕೂದಲನ್ನ  ಬಿಗಿದು ಗಂಟು  ಹಾಕಿ ಅದಕ್ಕೊಂದು ಮಲ್ಲೆ  ಹೂ ಸಿಕ್ಕಿಸಿಕೊಂಡು ನಡುವಿನಲ್ಲೂ  ನಡುವಳಿಕೆಯಲ್ಲೂ  ವಯಸ್ಸಿಗೆ ಮೀರಿದ ಗಾಂಭಿರ್ಯತೆ  ಕಾಪಾಡಿಕೊಂಡಿದ್ದಳು.ಮನಸಿನಂತೆ ಕೆಲಸದಲ್ಲೂ ಅಷ್ಟೇ ನಾಜೂಕು ಮಡಿಯ ಹುಡುಗಿ ಗೌರಿಯೇ ಒಂದು  ರೀತಿಯಲ್ಲಿ  ಸನ್ನಿ  ಹಿಡಿದ  ತಾಯಿ  ಮಗುವಿನ  ಆರೈಕೆ   ಮಾಡಿದ್ದು.ಮನೆ  ಒಳಕ್ಕೆ ಆಕೆಯ  ಸೇರಿಸಿಕೊಳ್ಳದಿದ್ದರು ಭಟ್ಟರ  ಮನೆಯಾಚೆಗಿನ  ಕಾರ್ಯಗಳಿಗೆ  ಇವಳದೇ ಉಸ್ತುವಾರಿಯಿತ್ತು. ವಯಿಸಿದ ಎಲ್ಲಾ  ಕೆಲಸಗಳನ್ನು  ತನ್ನ  ಒಡ  ಹುಟ್ಟಿದ  ಅಕ್ಕನ ಮನೆಯೆಂಬಂತೆ  ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.ಯಾವ  ಹರಿಜನ  ಹೆಂಗಸಿಗೂ  ಸಿಗದ  ಭಟ್ಟರ  ಮಗುವಿನ  ಸಾಮಿಪ್ಯ  ಮಕ್ಕಳಿಲ್ಲದ  ಗೌರಿ ಪಾಲಿಗೆ  ದೊರಕಿದ್ದು  ತಿರುಕನಿಗೆ  ರಾಜ್ಯ  ಸಿಕ್ಕಿದಷ್ಟೇ  ಅತೀವ  ಹೆಮ್ಮೆ  ಖುಷಿ  ಕೊಟ್ಟಿತ್ತು.ಬಾನ ಚಂದಿರನ  ನೋಡಿ  ಆನಂದಿಸುವ  ಪ್ರೇಮಿಯಂತೆ  ಗೌರಿ  ಒಂದಡಿ  ದೂರದಿಂದಲೇ   ಕೇಶವನನ್ನು    ಮುದ್ದುಗರೆಯುತ್ತಿದ್ದಳು.ಅಂಗಳ,ತೋ
ಟದ  ಕೆಲಸದ  ನಡುವೆಯೂ  ಕೇಶವನ  ಆಟೋಪಾಚಾರಗಳನ್ನ ಅಸ್ವಾದಿಸುತ್ತಿದ್ದಳು.ಮೆಲ್ಲಗೆ ಯಾರು ಇಲ್ಲದಿದ್ದ ಸಮಯ ನೋಡಿಕೊಂಡು  ಮುತ್ತು ಕದಿಯುತ್ತಿದ್ದಳು.


 ಮದುವೆಯಾಗಿ  ನಾಲ್ಕು  ವರುಷಗಳಾದರೂ ಅವಳಿಗೆ ಮಕ್ಕಳಾಗಿರಲಿಲ್ಲ.ಗೌರಿ ಕೇಶವನನ್ನು ತೀರ ಮಗನಂತೆ ಅಚ್ಚಿಕೊಳ್ಳಲು ಆದುವು ಒಂದು ಪ್ರಮುಖ  ಕಾರಣವಾಗಿತ್ತು.ಮಗು  ಆಗಲಿಲ್ಲವೆಂದು  ಆಡಿಕೊಳ್ಳುತ್ತಿದ್ದ   ಸಮಾಜದ ನಾಲಿಗೆಗೆ  ಸಿಕ್ಕಿ ರೋಸಿ  ಹೋಗಿದ್ದ  ಗೌರಿಗೆ  ಮನೆಯಲ್ಲೂ  ಯಾವ  ನೆಮ್ಮದಿ ಪ್ರಾಪ್ತಿಯಾಗಲಿಲ್ಲ.ಕೆಡುಕ  ಗಂಡ  ದಿನ  ಕುಡಿದು  ಬಂದು  ಬಾಸುಂಡೆ   ಬರುವ  ಹಾಗೆ  ಹೊಡೆಯುತ್ತಿದ್ದ  ವಿಷಯವನ್ನು  ಸಂಕಟದಿಂದ  ಕೇಶವನ  ತಾಯಿಯೊಡನೆ  ತೋಡಿಕೊಂಡಾಗ  ಮುಬ್ಬನ  ಕರಿಸಿ  ಅಜ್ಜ  ಅದೆಷ್ಟು  ಬಾರಿ  ನ್ಯಾಯ  ತೀರ್ಮಾನ  ಮಾಡಿಸಿದರು  ಚಾಳಿ ಬಿಡದೆ  ದೌರ್ಜನ್ಯ  ನಿರಂತರವಾಗಿ   ಮುಂದುವರಿಸಿದ್ದನು .ಹೀಗೆ  ಮುಬ್ಬನ  ಕೈಯಿಂದ   ಬಡಿಸಿಕೊಂಡು ಆಗಾಗ ಜ್ವರವೇರಿ  ಮಲಗುತ್ತಿದ್ದ   ಗೌರಿಯು  ಮನೆ ಕಡೆ  ಬರದಿದ್ದಾಗ  ಏಳು  ವರುಷದ  ಕೇಶವ  ಮಕ್ಕಳ  ಕೂಡಿ  ಅಜ್ಜಿ  ಮನೆ  ಹಿಂದಿನಿಂದ  ಒಂದಷ್ಟು  ದೂರ  ಊರಿನಾಚೆ  ಮುಳ್ಳಿನ   ಕಾಲುದಾರಿಯಲ್ಲಿ  ಸಾಗಿ  ಅವಳ  ಸಂಸಾರ  ನೆಲೆನಿಂತ  ಕೇರಿ  ಮನೆಯೊಳಗೇ  'ಎಲ್ಲಿದಿಯೇ ಗೌರಿ ಯಾಕೆ ಮಲಗಿದ್ಯೆ?ಚೆಂಡಾಟ ಆಡೋಣ ಬಾ 'ಎಂದು ತುಂಟತನದಿಂದ ಆರ್ಭಟಿಸುತ್ತ  ಹೊಕ್ಕುತ್ತಿದ್ದ. ಹೀಗೆ  ಕೇರಿಗೆ  ಬಂದ್ದಿದ್ದು  ಹುಡುಗನ  ಕಡೆಯವರಿಗೆ  ತಿಳಿದರೆ  ಅವಳದೇ   ಕುಮ್ಮಕ್ಕು ಎಂದೆನಿಸಿ  ಅವನ್ನನ್ನು ಅವಳಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆಂಬ  ಭಯದಿಂದ  ಆತನನ್ನು  ಆಲಂಗಿಸದೆ   'ಮೊದ್ಲು ಹೋಗ್ರಿ ಚಿಕ್ ಬುದಿ ಸಂಜಿ ಮನೆಕಡೆ ನಾನೆ ಬರ್ತೀನಿ' ಅಂತೇಳಿ  ಮನವೊಲಿಸಿ ವಲ್ಲದ  ಮನಸ್ಸಿಂದಲೇ  ಅವನ ಸಾಗ್ ಹಾಕುತ್ತಿದ್ದಳು.

*


ಕೇಶವನ  ಮನೆ  ಕೆಲಸ  ಬಿಟ್ಟರೆ  ಗೌರಿ  ಹೆಚ್ಚು  ಸಮಯ  ಮೀಸಲಿಡುತ್ತಿದ್ದದ್ದು  ಆ  "ಜಲಪಾತಕ್ಕೆ".ಕೇಶವನ  ಅಜ್ಜನ  ಮನೆ  ಮತ್ತು  ಹೊಲಗೇರಿಯ  ಗಡಿಯಂತೆ ಅವೆರಡರ  ನಡುವಿನ ಸಾಮಾಜಿಕ ಅಂತರವನ್ನು  ಸಾರುವಂತೆ ಹರಿಯುತ್ತಿದ್ದ  ಹೊಳೆಯ  ಒಂದು  ಬದಿಯಲ್ಲಿದ್ದ  ಜಲಪಾತವದು. ಅದೇ  ಜಲಪಾತದಡಿ  ನಿಂತು ಗೌರಿ  ಗಂಗೆಗೆ  ಕೈ  ಮುಗಿದು  ಮಗುವಿಗಾಗಿ  ಪ್ರಾರ್ಥಿಸಿ ತಾಸುಗಟ್ಟಲೆ  ನೀರಿನಲ್ಲಿ  ಆಡುತ್ತಿದ್ದಳು.ನೀರಿನಿಂದ  ಎದ್ದು   ಬಂಡೆಯಾಚೆಗೆ   ನಡೆದಂಗೂ  ಗಂಟು  ತೆಗೆದ  ಆಕೆಯ  ಚೆಂಡಿ  ನೀಲಾಗೂದಳು ತೊಟ್ಟಿಕ್ಕುತ್ತಾ  ಬಂಡೆಗಳ  ಮೇಲಾಯ್ದು  ಆಕೆಯ  ಮನೆಗಿನ  ದಾರಿಯವರೆಗೂ  ಹನಿಚುಕ್ಕಿಯ  ಚಿತ್ತಾರ  ಬಿಡಿಸಿ  ಪುಟ್ಟ  ಮಕ್ಕಳನ್ನೆಲ್ಲಾ ತನ್ನೆಡೆಗೆ ಅಹ್ವಾನಿಸುತ್ತಿರುವಂತೆ  ಅನಿಸುತ್ತಿತ್ತು .


ಅಲ್ಲಿನ  ಆ ಜಲಪಾತ "ಗೌರಿ-ಜಾಲಪಾತ"ವೆಂದೆ ಪ್ರಸಿದ್ದವಾಗಿತ್ತು,ಜಲಪಾತ ನಿರ್ಮಿತ ಹೊಂಡ  ಅವಳದೇ  ಅವಿಷ್ಕಾರವೆಂದು  ಎಲ್ಲರೂ  ಮಾತಾಡಿಕೊಳ್ಳುತಿದ್ದರು.ಇನ್ನೂ  ಒಳಕ್ಕೆ   ಬಂಡೆ  ಜಿಗಿಯುತ್ತಾ   ಕಾಡಿನತ್ತ  ಡೊಂಕಿನ  ಹೆಜ್ಜೆ  ಹಾಕಿದರೆ  ಹಲವಾರು  ಚಿಕ್ಕ  ಪುಟ್ಟ  ಜಲಪಾತ  ಮಾದರಿಯ  ನೀರಿನ  ಹೊಂಡಗಳು  ಇದ್ದವು.ಆದರೆ  ಗೌರಿ ಜಲಪಾತ  ಅವೆಲ್ಲಕ್ಕಿಂತಲೂ ಎತ್ತರದ್ದು ವಿಸ್ತಾರವಾದದ್ದು.ಅದರ ಮೇಲಿನ ಬಂಡೆಗಳಿಂದ  ಪುಟಿ  ಪುಟಿದು ಹಾಲ್ನೊರೆಯಂತೆ ನೀರು ದುಮ್ಮುಕ್ಕುತಿತ್ತು. ಇಬ್ಬರು  ನಿಂತು  ಮೈ  ತಂಡಿ ಗೊಳಿಸಬಹುದಾದಷ್ಟು   ಜಾಗವನ್ನೋಳಗೊಂಡ್ದಿತ್ತು.


ಸಾಮಾಜಿಕ ಗಡಿಯ ಅರಿವಿಲ್ಲದ ಪುಟ್ಟ ಬಾಲಕ  ಕೇಶವನಿಗೆ ಎಲ್ಲಾ ಗಡಿ ದಾಟುವ ಬಯಕೆ.ಗೌರಿ ಆಡುತ್ತಿದ್ದ   ಜಲಪಾತದಲ್ಲಿ  ತಾನು  ಮುಳುಗೇಳಾ ಬೇಕೆನ್ನೋ ಹುಚ್ಚು ಹಠ ಅವನದು.ಅದನ್ನು ಮನಗೊಂಡ ಅಜ್ಜ "ಗೌರಿಜಲಪಾತ  ನೀರು  ಮುಟ್ಟಿದರೆ  ಕೈಗೆ  ಬರೆ  ಹಾಕ್ತೀನಿ"  ಅಂದ್ದಿದ್ದ  ಮಾತನ್ನು  ಮೀರಿ  ಅಲ್ಲಿಗೆ  ಸುಮಾರು  ಬಾರಿ  ದೌಡಾಯಿಸಿದ್ದ.ಆದರೆ  ಗೌರಿ  ಸಿಟ್ಟಿನ ಯಜಮಾನ್ರು ಮಗುವಿಗೆ  ಏನ್ ಅನಾಹುತ  ಮಾಡಿಬಿಡುತ್ತಾರೋ ಎಂಬ ಭೀತಿಯಿಂದ  ಆತನನ್ನು   ಅವಳಲ್ಲಿರುವಷ್ಟು   ಸಮಯ  ಆಸು  ಪಾಸು  ಬಾರದಂತೆ  ತಡೆಯುತ್ತಿದ್ದಳು .

*

ಕೇಶವ ಎಂಟು ವರುಷದವನಿದ್ದಾಗ ಗೌರಿಗೆ ಒಂದು ಆಘಾತ ಕಾದಿತ್ತು.ಅಜ್ಜನ  ಮರಣದ  ಬಳಿಕ ಭಟ್ಟರ  ಸಂಸಾರ ಬೆಂಗಳೊರಿಗೆ ತೆರೆಳುವ ನಿರ್ಧಾರಕ್ಕೆ ಬಂದಿದ್ದರು.ಅದರಂತೆ ಅಜ್ಜಿ ಅಮ್ಮನೊಟ್ಟಿಗೆ ಅಪ್ಪನಿದ್ದ  ಬೆಂಗಳೂರಿನಲ್ಲಿ  ನೆಲೆಸಲು  ಹೊರಟಿದ್ದ  ಕೇಶವನ   ಅಗಲಿಕೆ  ತಾಳಲಾರದೆ  ಅವನಪ್ಪಿ  ಮುದ್ದಾಡುವ ಅವಕಾಶವಿಲ್ಲದೆ  ಗೌರಿ  ಎಡಬಿಡದೆ ಸುರಿಯುತ್ತಿದ್ದ  ಕಣ್ಣೀರಾ  ಮುಚ್ಚಿಡಲು  ಅಲ್ಲಿಂದ  ಹೊರಟವಳೇ  ಗೌರಿ ಜಲಪಾತದ  ನೀರಿನಲ್ಲಿ ಅದನಡಗಿಸಿ ನಿಂತು  ಬಿಟ್ಟಳು.ಅದೇ   ದಾರಿಯಲ್ಲಿ  ಬಸ್  ನಿಲ್ದಾಣದತ್ತ  ಹೋಗುತ್ತಿದ್ದ  ಕೇಶವ  ಸಪ್ಪೆ  ಮೋರೆಯೊಂದಿಗೆ  ನದಿಯಲ್ಲಿ  ನಿಂತ  ಗೌರಿಯ  ಉದ್ದೇಶಿಸಿ "ಕೊನೆಗೂ  ಅಲ್ಲಿ  ಮೀಯಲು ಬಿಡಲಿಲ್ಲ  ನೀನು'' ಅಂದ್ದಿದ್ದ .ಅದರಲ್ಲಿ ತನ್ನದೇನು ತಪ್ಪಿಲ್ಲವೆಂದು ತಿಳಿಸಲೂ ಆಗದೆ  ಅವನ  ದುಃಖದ  ಮುಖವ  ನೋಡಲೂ ಆಗದೆ ಬೆನ್  ಹಿಂದಾಕಿ ನೀರಿನಲ್ಲಿ ಕಾಣುತ್ತಿದ್ದ ಆತನ ಕದಲಿದ ಬಿಂಬವ ನೋಡುತ್ತಾ ಯಾತನೆಯೊಂದಿಗೆ"ರಜಕ್ಕೆ  ಬರ್ತಿಯಲ್ಲ  ಮಗ, ನಗ್ತಾ  ಹೋಗು.ನನ್ನಾಣೆ  ಇನ್ಮುಂದೆ  ಈ  ಜಲಪಾತಕ್ಕೆ  ವಾರಸುದಾರ  ನೀನೆ! " ಎಂದ್ದಿದ್ದಳು.


ಅದೇ ಕೊನೆ ಕೇಶವ ಗೌರಿಯನ್ನು ಮತ್ತೇನೆಂದು ಸಂದಿಸಲಿಲ್ಲ.ಅವರೂರು ಬಿಟ್ಟ  ವರ್ಷವೆ  ಗೌರಿ  ಸತ್ತ  ಸುದ್ಧಿ  ದೂರವಾಣಿ  ಮೂಲಕ  ಕೇಶವನ  ತಾಯಿಗೆ  ತಲುಪಿತು.ಇವತ್ತಿಗೂ ಅವಳ  ಸಾವಿನ  ರಹಸ್ಯ  ಒಗಟಾಗೆ  ಉಳಿದು  ಹೋಗಿದೆ.ಅತಿಯಾಗಿ  ವ್ಯಮೊಹಿಸಿದ  ನೀರೇ   ಅವಳ  ಲಾವಣ್ಯಕ್ಕೆ   ಮಾರು  ಹೋಗಿ  ಕತ್ತಲ್ಲಲ್ಲಿ   ಓಲೈಸಿ ನುಂಗಿ  ಹಾಕ್ತೋ  ಇಲವೋ  ಮಕ್ಕಳಿಲ್ಲದವಳೆಂದು  ಹೊಲಸು  ಸಮಾಜ  ತಿಂದು  ಮುಗಿಸಿತ್ತೋ  ಅಥವಾ  ಮುಬ್ಬನೆ  ಕೊಂದು  ನೀರಿಗೆಸೆದನೋ ಯಾರಿಗೂ  ಗೊತ್ತಿಲ್ಲ  ಎರಡು  ದಿನ  ಬಿದ್ದ  ದೊಡ್ಡ  ಮಳೆಗೆ  ಅವಳ  ದೇಹ  ತೇಲಿ  ಕೊಳೆತ  ಸ್ಥಿತಿಯಲ್ಲಿ  ಸಿಕ್ಕಿತ್ತು .ನಂತರ  ಅದನ್ನ  ಹೂಣಿ  ಹಾಕ್ಕಿದ್ದರು.

*

ಸಂಜೆ  ಸೂರ್ಯ  ಬಣ್ಣ  ಉಗುಳುತ್ತಿದ್ದ  ಸಮಯಕ್ಕೆ  ಬಸ್ಸು  ಊರ  ಮುಂಬಾಗಿಲಿಗೆ  ನಿಲ್ಲುತ್ತಿದ್ದಂಗೆ  ಕೇಶವ   ಬ್ಯಾಗ್  ಏರಿಸಿಕೊಂಡು  ಬಾಡಿಗೆಗೆ  ಬಿಟ್ಟಿದ್ದ  ಅಜ್ಜನ  ಹಳೆ  ಮನೆಯತ್ತ  ಸಾಗಿದ.ಇಲ್ಲೆಲ್ಲಾ  ಎಷ್ಟು ಬದಲಾಗಿದೆ ಅಂದು ಕೊಳ್ಳುತ್ತಾ ಮುನ್ನಡೆದ ಕೇಶವನಿಗೆ ಉರಾಚೆಗೆ ಯಾವುದೇ  ಕೇರಿ  ಕಾಣಲಿಲ್ಲ.ಅಲ್ಲೊಂದು ದಲಿತ ಹಕ್ಕುಗಳ ಕೇಂದ್ರ ಸ್ಥಾಪಿತವಾಗಿದೆ,ಖಾಕ ನ ಅಂಗಡಿಯಿದ್ದ  ಜಾಗದಲ್ಲಿ  ಮಹಿಳಾ ಸಂರಕ್ಷಣಾ  ಸಂಸ್ಥೆ  ಎದ್ದು  ನಿಂತಿದೆ.ಅದರ  ಪಕ್ಕದಲ್ಲೇ  ಅರೋಗ್ಯ  ತಪಾಸಣೆ  ಕೇಂದ್ರದ "ನಾವಿಬ್ಬರು  ನಮಗಿಬ್ಬರು"  ಪಲಕದ  ಕೆಳಗೆ  ಕೆಂಪಾಕ್ಷರದಲ್ಲಿ  ಮೂಡಿದ್ದ  "ಮಕ್ಕಳಾಗದಿರುವುದಕ್ಕೆ   ಹೆಣ್ಣು ಮಾತ್ರವಲ್ಲ  ಗಂಡಿನಲಿರೋ  ದೋಷವು  ಕಾರಣವಿರಬಹುದು ಅಗತ್ಯವಾಗಿ  ತಪಾಸಣೆ  ಮಾಡಿಸಿಕೊಳ್ಳಿ" ಅನ್ನೋ  ಅಡಿ  ಬರಹವ  ಮಹಿಳಾ   ಸಮಾಜದ  ಗೋಡೆಯ ಮೇಲೂ ವಿಸ್ತಾರವಾಗುವಂತೆ  ಬರೆಸಿದ್ದಾರೆ.


ಛೆ! ಗೌರಿ  ಈ  ಕಾಲಮಾನದಲ್ಲಿ  ಜನಿಸ ಬಾರದಿತ್ತ  ಮನಸಿನಲ್ಲಿ  ಮೂಡುತ್ತಿದ್ದ  ಭಾವೊದ್ವೇಗ ಭರಿತ  ಪ್ರಶ್ನೆಗಳೊಂದಿಗೆ  ಹಲವು  ಸಂವತ್ಸರಗಳ ಬಳಿಕ   ಮತ್ತದೇ   ಮನೆಯ  ಹೊಳೆಯ  ಹಾದಿ  ಮುಟ್ಟುತ್ತಿದ್ದಂತೆ ಆಹ್ವಾನಿಸಿದ  ಹೊಳೆಯಲ್ಲಿ  ಪ್ರಯಾಣದ  ದಣಿವಾರಿಸಲು  ಹಿಡಿದ  ಬ್ಯಾಗನ್ನು  ಕೆಳಗಿರಿಸಿ ನೀರಿನಲ್ಲಿ  ಕಾಲಿರಿಸಿದ್ದೇ  ತಡ  ಗೌರಿಜಲಪಾತದ   ನೆನಪಾಗಿ  ಆಚೀಚೆ   ಕಣ್ಣಾಡಿಸಿದ.


ಹಳೆ ನೀರು ಅಲಲ್ಲಿ  ಹಲವೆಡೆ ಇನ್ನಷ್ಟು ಕಲುಷಿತವಾಗಿ ಹೆಪ್ಪುಗಟ್ಟಿ ನಿಂತಿದೆ. ಆದರೆ ಗೌರಿಜಲಪಾತ  ಕುರುಹೇ  ಇಲ್ಲದಂತೆ  ಹಬೆಯಾಡುತ್ತಿದ್ದ ಬಂಡೆಗಳ  ರಾಜ್ಯದಲ್ಲಿ  ಕಾಣಿಯಾಗಿದೆ.ಮತ್ತೊಂದು ಅಂತರವ ಸೃಷ್ಟಿಸಲು ಅಲ್ಲೇ ಕಾಲು ದಾರಿಯ ಕಳ್ಳ ಕಣಿವೆಯಿಂದ  ಸಣ್ಣದಾಗಿ  ಹೊಳೆಯತ್ತ ಹೊಸ  ನೀರು  ಹರಿಯುತ್ತಿತ್ತು.ಹರಿದು  ಬರುತ್ತಿದ್ದ   ಹೊಸ  ನೀರಿಗೆ  ಅದರದೇ  ಆದ   ಹೊಸ  ಹರಿತ  ಹೊಸ  ತಿವಿತ.ಒಂದು  ಜೋರು  ಮಳೆ  ಹುಯ್ದರೆ  ಇನ್ಯಾವ  ಸಮೂಹವನ್ನಾದರು   ಸಂಮೊಹಿಸುವ  ಸಂಚೂಡಿ   ಮುಂಬರುವ  ಅಹುತಿಗಾಗಿ  ಬಂಡೆಯನ್ನ  ತಣ್ಣಗಾಗಿಸುತ್ತಾ  ತಾನು  ಬಿಸಿ  ಏರಿಸಿಕೊಂಡು  ಸಾಗುತ್ತಿದೆ.ಬೀಸುತ್ತಿದ್ದ ವೈಶಾಖ ಮಾಸದ ಗಾಳಿಯೊಂದಿಗೆ   ಬಿಸಿಲು  ಮಳೆ  ಶುರುವಾಗುತ್ತಿದ್ದಂತೆಯೇ  'ಮಗ  ಇನ್ಮುಂದೆ  ಇದರ ವಾರಸುದಾರ   ನೀನೆ" ಅನ್ನೋ  ಮಾತುಗಳು ಕೇಶವನ  ಕಿವಿಯೊಳಗೆ  ಪುನಃ  ಪುನಃ  ಉಚ್ಚರಿಸಿದಂತಾಗಿ ಬದಲಾದ ಸಮಾಜದ  ಧ್ಯೋತಕದಂತೆ  ಸಣ್ಣಗೆ  ಹರಿಯುತ್ತಿದ್ದ  ಹೊಸ ನೀರಿನ ತಿವಿತಕ್ಕೆ  ಬೆಚ್ಚಿ  ಭಾರದ  ಬ್ಯಾಗನ್ನು  ಹೆಗಲೇರಿಸಿಕೊಂಡು  ಮನೆಯತ್ತ  ವೇಗದ ಹೆಜ್ಜೆ  ಹಾಕಿದ.

4 comments:

  1. ."ಬಸ್ಸಿನ ಚಕ್ರ ಮುಂದಕ್ಕೆ ತಿರುಗಿ ತಿರುಗಿ ಸಾಗಿದಂತೆ ಕೇಶವನ ನೆನಪಿನ ಚಕ್ರ ಹಿಂದಕ್ಕೆ ತಿರುಗಿ ತಿರುಗಿ ನಿಲ್ಲಿಸಿದ್ದು" ಕ್ರಿಯಾತ್ಮಕ :D

    ಆ ಗೌರಿಯ ಪಾತ್ರವನ್ನ ವರಿಸಿರುವ ರೀತಿ ನೋಡಿದರೆ, ನನಗೆ "ಸುಧಾ ಮೂರ್ತಿ" ಅವರ ಸಾಲುಗಳು ನೆನಪಾದರೆ ಖಂಡಿತ ಅತಿಶಯೋಕ್ತಿಯಲ್ಲ.

    "ಜಲಪಾತವೇ ಒಂದು ಪಾತ್ರವಾಗಿದ್ದೂ " ಕೂಡಾ ಗಮನಾರ್ಹ :-) ನಿಜಕ್ಕೂ ಒಂದೊಳ್ಳೆ ಸಂದೇಶವಿರುವ ಬರಹ. ಅಂದಹಾಗೆ, ನಾನು ಆವತ್ತು ಸೂಚಿಸಿದ್ದ ಬದಲಾವನೆಯನ್ನ ಮಾಡಿಲ್ಲಾ ನೀನು...!! :-o ಯಾಕೆ...? "ಸಮಾಜದಲ್ಲಿರುವ ಮೇಲು ಕೀಳು, ಜಾತಿ ಪದ್ದತಿಯ ವ್ಯತ್ಯಾಸಗಳನ್ನೇ ಪ್ರತಿನಿಧಿಸುವಂತೆಯೇ ಇರುವ ಆ ನೀರಿನ ಮಟ್ಟ" ದ ಮೇಲೆ ನೀನು ಸ್ವಲ್ಪ ವಿವರವಾಗಿ ಬೆಳಕು ಚೆಲ್ಲಿದ್ದರೆ ಇನ್ನೂ ಹತ್ತಿರವಾಗುತ್ತಿತ್ತು ಈ ಬರಹ. :-)

    "ಇನ್ಮುಂದೆ ಇದರ ವಾರಸುದಾರ ನೀನೆ"

    ವಾಹ್ .......!!! ಎಷ್ಟು ಚಿಕ್ಕ ಮಾತಿನಲ್ಲಿ ಎಂಥಹ ಅರ್ಥ...!! ಇದನ್ನ ಸ್ವಲ್ಪ ವಿವರವಾಗಿ ಹೇಳು. :-)

    ReplyDelete
  2. ರಾಗಾ ನನ್ನ ಬರಹದ ಸಾಲುಗಳನ್ನ ಸುಧಾ ಮೂರ್ತಿ ಯವರ ಸಾಲುಗಳಿಗೆ ಹೋಲಿಸಿರುವುದು ಅತಿಶಯೋಕ್ತಿಯೇ ಸರಿ!ಎಲ್ಲಿಯಾ ರಾಜಗೋಪುರ ಎಲ್ಲಿಯಾ ನಡು ಮನೆ ಕಲಶ! ಕಥೆ ಮೆಚ್ಚಿದಕ್ಕೆ ಧನ್ಯವಾದಗಳು..ಹಾಗೆ ನಿನ್ನ ಅಭಿಪ್ರಾಯವು ಸರಿಯಿದೆ,ಕಥೆ ಒಳಾರ್ಥದ ಜಾಡು ಹಿಡಿದಿರುವುದರಿಂದ ಕಥೆಯ ಅಂತರಂಗ ಅರ್ಥವಾಗದೆ ಹತ್ತಿರವಾಗದೆ ಉಳಿದುಬಿಡಬಹುದು.ಅದರೂ ಸೂಕ್ಷ್ಮಗಳನ್ನ ಬಿಡಿ ಬಿಡಿಯಾಗಿ ಬಿಡಿಸಿಡುವುದು ಬೇಡವೆನಿಸಿತು ಹಾಗಾಗಿ ಈ ಸಾಲಿನಲ್ಲಿ ಹೇಳಿ ಮುಗಿಸಿದೆ- "ಕೇಶವನ ಅಜ್ಜನ ಮನೆ ಮತ್ತು ಹೊಲಗೇರಿಯ ನಡುವೆ ಗಡಿಯಂತೆ ಅವೆರಡರ ನಡುವಿನ ಅಂತರವನ್ನು ಸಾರುವಂತೆ ಹರಿಯುತ್ತಿದ್ದ ಹೊಳೆಯ ಒಂದು ಬದಿಯಲ್ಲಿದ್ದ ಜಲಪಾತವದು"

    ಲಿಂಗ ತಾರತಮ್ಯ ದೀನ ದಲಿತರ ಶೋಷಣೆ ಇವೆಲ್ಲವೂ ಕಾಲದ ಹರಿತಕ್ಕೆ ಬದಲಾಗುತಿವೆಯಾದರು ಕೆಲವೆಡೆ ಇಂದಿಗೂ ಅಷ್ಟೇ ಪ್ರಸ್ತುತ.ಇನ್ನು ಸಂಪೂರ್ಣವಾಗಿ ಬದಲಾಗಬೇಕಿದೆ-(ಹೆಪ್ಪುಗಟ್ಟಿದ ನೀರು).ಬದಲಾವಣೆಯ byproducts ಗಳಾದ ಹೆಣ್ಣಿನ ಪರನಾದ ಕಾನೂನುಗಳ ದುರ್ಬಲಿಕೆ,reservation ಪದ್ಧತಿ ಇವುಗಳಿಂದಾಗುತಿರುವ ಕಿರಿಕಿರಿಗಳು-(ಗೌರಿ ಜಲಪಾತದ ಹೊಸ ನೀರು).

    ಇವೆಲ್ಲಾದರ ನಡುವೆ ಮನು ಧರ್ಮದ ತಳಹದಿವುಳ್ಳ ಭಾರತ ಸಮಾಜ ಸಮಾನತೆ ಘಟ್ಟ ತಲುಪುವುದೆಂದೋ! ಸದ್ಯಕ್ಕೆ ನಾ ಆದರ್ಶಿಸುವ ಕುವೆಂಪುರವರ ಮನುಜ ಮತ ವಿಶ್ವ ಪಥ ಕೃತಿ ಯಾ "ಮನು ನಿನಗೆ ನೀನು" ಸಾಲುಗಳು ನೆನಪಾಗ್ತಿವೆ :-)

    ReplyDelete
  3. ಒಂದು ಊರು ಸುತ್ತಿ.ಕೋಶ ಓದಿ...ಮನ ಮಿಡಿದು ಭಾವಗಳ ಜಲಪಾತದಲ್ಲಿ ಮಿಂದ ಅನುಭವ ಕೊಟ್ಟಿದೆ ನಿಮ್ಮ ಲೇಖನ..ಸುಂದರವಾಗಿದೆ..

    ReplyDelete
  4. ವೈಶು ,

    ಕಥೆ ಓದಿದಾಗ ಮೊದಲಿಗೆ ನನ್ನ ಮನಸ್ಸಿಗೆ ಬಂದದ್ದು ಇದು ನೀನೇ ಬರದ ಕಥೆಯೇ ಎಂಬ ಸಂದೇಹ. ಏಕೆಂದರೆ ಇಂಗ್ಲಿಷ್ ವಾಕ್ಯಗಳನ್ನು ಕೊಟ್ಟು ಅಣ್ಣಾ ಇದನ್ನು ಕನ್ನಡದಲ್ಲಿ ಬರೆದು ಕೊಡಿ ಎಂದು ಹೇಳುತಿದ್ದವಳು ಇದೇ ವೈಶು ವಲ್ಲವೇ ???? ನಿಜಕ್ಕೂ ನೀನು ಬಳಸಿದ ಕೆಲವು ಶಬ್ಧಗಳು ನನಗೆ ಆಶ್ಚರ್ಯ ವನ್ನುಂಟು ಮಾಡಿತು. ಕಥೆಯನ್ನು ಕುರಿತು ಹೇಳಬೇಕೆಂದರೆ ಕಥೆಯ ಮೂಲಕ ಹೊರಬರಬೇಕಾಗಿದ್ದ ಕೆಲವು ಸಾಮಾಜಿಕ ಕಳಕಳಿಯ ವಿಚಾರಗಳು ಅಸ್ಪಷ್ಟವಾಗಿದ್ದವು. ಗಡಿಬಿಡಿಯಲ್ಲಿ ಕಥೆಯನ್ನು ಬರೆದು ಮುಗಿಸಿದಂತೆ ಅನ್ನಿಸಿತು. ಓದುಗರನ್ನು ಸರಾಗವಾಗಿ ಓಡಿಸಿಕೊಂಡು ಹೋಗುವಲ್ಲಿ ಸ್ವಲ್ಪ ಎಡವಿತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದು ಉತ್ತಮ ಪ್ರಯತ್ನ ಎಂದು ಖಂಡಿತ ಹೇಳಬಯಸುತ್ತೇನೆ. ಕಥೆಯಲ್ಲಿ ಬರುವ ಕೆಲವು ಪಾತ್ರಗಳ ಮೇಲೆ ಇನ್ನು ಹೆಚ್ಚು ಬೆಳಕು ಬೀರುವ ಅಗತ್ಯವಿತ್ತು.......ಹಾಗೆಯೇ ಸ್ಪೆಲ್ಲಿಂಗ್ ಮೇಲೂ ಧ್ಯಾನವಿರಲಿ....... ನೀನು ಇದಕ್ಕಿಂತಲೂ ಉತ್ತಮವಾಗಿ ಬರೆಯಲು ಅರ್ಹಳು ಎಂಬುವುದನ್ನು ಬಲ್ಲವನಾಗಿರುವುದರಿಂದ ಈ ಮಾತುಗಳನ್ನು ಹೇಳುತಿದ್ದೇನೆ ಅಷ್ಟೇ.....ಉತ್ತಮ ಪ್ರಯತ್ನ.....

    ReplyDelete