Saturday, January 19, 2013

ಪುಟಾಣಿ....: ಕಥೆಯ ಒಳಾಂಗಣದ ಸುತ್ತಾ

ಚಿತ್ರಕಲೆ: ವೈಶಾಲಿ ಶೇಷಪ್ಪ
"ಎಲ್ಲ ರಾಮಾಯಣ ಮುಗಿಯುವಷ್ಟರಲ್ಲಿ ರಾತ್ರಿ ಎಂಟಾಗಿತ್ತು.ಬಿನ್ನಭಿಪ್ರಾಯಗಳಿಗೆ ಮುಕ್ತಿ ಹಾಡಿದ ಖುಷಿಯೊಂದಿಗೆ ಅಪ್ಪ ಎಂದಿನಂತೆ ಜಗಲಿ ಮೇಲೆ ಬೀಸುತಿದ್ದ ತಣ್ಣನೆ ತಂಗಾಳಿಗೆ ಮೈಯೊಡ್ಡಿ ಎಲೆ ಅಡಿಕೆ ಜಗಿಯುವುದರಲ್ಲಿ ಮಗ್ನರಾದರು"-- ಹೀಗೆ ಅನರ್ಘ್ಯ ತನ್ನ ಹೊಸ ಪುಸ್ತಕದ ಹನ್ನೊಂದನೆಯ ಭಾಗಕ್ಕೆ ಅಂತ್ಯ ಹಾಡಿ ರಶ್ಮಿ ತಂದಿಟ್ಟಿದ್ದ ಊಟದ ಬಾಕ್ಸ್ ತೆರೆದು ಶಾಸ್ತ್ರಕ್ಕೆ ಒಂದೆರೆಡು ತುತ್ತು ನುಂಗಿ ನಿದ್ರಾ ದೇವಿ ಮಡಿಲಿಗೆ ಜಾರಲು ಪ್ರಯತ್ನಿಸಿದಳು.

ಅನರ್ಘಳ "ಪುಟಾಣಿ" ಕಾದಂಬರಿಯ  ಮೂರು ಭಾಗಗಳು ಜನಪ್ರಿಯತೆಯ ಉತ್ತುಂಗಗಕ್ಕೆ ಏರಿ ಸಿಹಿ ತಿನಿಸಂತೆ  ಮಾರಟವಾದ ಹಿನ್ನಲೆಯಲ್ಲಿ ಪ್ರಕಾಶಕರು ಅದರ ನಾಲ್ಕನೆಯ ಭಾಗ ಹೊರ ತರಲು ಉತ್ಸುಕರಾಗಿದ್ದರಲ್ಲದೇ ಒಂದು ತಿಂಗಳಲ್ಲಿ ಮುಂದಿನ ಭಾಗವನ್ನು ಬರೆದು ಮುದ್ರಣಕ್ಕೆ ಕಳಿಸಿಕೊಡಬೇಕೆಂದು ಅನರ್ಘ್ಯಳ ಮೇಲೆ ಒತ್ತಡ ತಂದಿದ್ದರು.ಅನರ್ಘ್ಯಳಿಗೆ ತನ್ನ ಬ್ಯಾಂಕ್ ಕೆಲಸದ ನಡುವೆ ಬರವಣಿಗೆ ಎಂದು ಹೊರೆ ಎನಿಸಿರಲಿಲ್ಲ.ನಾಲ್ಕು ವರ್ಷದ ಅವಧಿಯಲ್ಲಿ ಆರಕ್ಕೂ ಹೆಚ್ಚು ಪುಸ್ತಕಗಳ ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಅತಿ ಕಿರಿಯ ಲೇಖಕಿ ಅವಳು.ಕವಿತೆ ಕಥೆ ನಾಟಕ ಹೀಗೆ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿ ಪರಿಣಿತಳೆನಿಸಿಕೊಂಡ ಅನರ್ಘ್ಯ ತನ್ನದೆಯಾದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಳು.ಅದರಲ್ಲೂ ಅವಳ ಮೊದಲ ಮುದ್ರಿತ ಕಾದಂಬರಿ "ಪುಟಾಣಿ" ಅನರ್ಘ್ಯಳಿಗೆ ದೊಡ್ಡ ಓದುಗರ ಬಳಗವನ್ನು ಕಟ್ಟಿಕೊಟ್ಟಿತ್ತು.

*

ಅತ್ತ ಆ ಜಗತ್ತಿನಲ್ಲಿ  ಎಲೆ ಅಡಿಕೆ ಜಗಿಯುತ್ತಿದ್ದ ಪುಟಾಣಿಯ ಅಪ್ಪನ ನೋಡಿ ಅಮ್ಮ ಮೂಗು ಚೂಪು ಮಾಡಿಕೊಂಡಳು.
"ಏನ್ರಿ ಇದು ನಿಮ್ಮದು ಇಷ್ಟೆಲ್ಲಾ ಅವಾಂತರಗಳು ನಡೆದ ನಂತರವೂ ಏನು ಆಗಿಲ್ಲವೆಂಬಂತೆ ತಣ್ಣಗೆ ಕೂತಿದ್ದಿರಲ್ಲ ....ಅಲ್ರಿ,ನಾಳೆಯ ಚಿಂತೆಯೇ ಇಲ್ಲವೇ ನಿಮಗೆ" ಎಂದು ಗೊಣಗಾಡಿದಳು.
"ಯಾಕೆ ಗೊಣಗುತ್ತೀಯ ಮಾರಾಯ್ತಿ,ಆ ದೇವರು ಇಟ್ಟಂಗೆ ಆಗುತ್ತೆ.ನಮೆಲ್ಲ ಯೋಜನೆಗಳನ್ನ ತಲೆ ಕೆಳಕ್ಕೆ ಮಾಡಲು ಅವನಿರುವಾಗ ನಾನ್ಯಾಕೆ ತಲೆ ಕೆಡಿಸಿಕೊಳ್ಳಲ್ಲಿ ಹೇಳು?ಅವನಂತೆಯೇ ಎಲ್ಲವು ನಡೆಯುವಾಗ ಚಿಂತೆ ಮಾಡಿ ಪ್ರಯೋಜನವಾದಿತೇ ?"ಅನ್ನುತ್ತ ಸಿಹಿ ಅಡಿಕೆಯ ನೀರನ್ನು  ಹೀರಿ ಕೊಂಡ.

ಅಪ್ಪ ಹಾಗೆ ಅಗಿದು ಅಗಿದು ಎಲೆ ಅಡಿಕೆ ಅಸ್ವಾಧಿಸುವ ಚಟ ಪುಟಾಣಿಯ ಅಮ್ಮನಿಗೆ  ಅಸಯ್ಯವೆನಿಸುತಿತ್ತು.ಆ ರೀತಿ ತಿನ್ನುವುದರಿಂದಲೇ ಆತ ಅಷ್ಟು ನಿಶ್ಚಿಂತೆಯಿಂದಿರಲು ಸಾಧ್ಯವಾಗುತ್ತಿರಬೇಕೆಂಬ  ಗುಮಾನಿ ಇದ್ದುದ್ದರಿಂದ ಅಪ್ಪನ  ಅಭ್ಯಾಸವನ್ನ  ಸಹಿಸಿಕೊಳ್ಳುತ್ತಿದ್ದಳು ಆಕೆ.

ಅಷ್ಟರಲ್ಲಿ ಎಡವುತ್ತಾ ಬಂದ ಪುಟಾಣಿಯ ತಮ್ಮ,"ನಿಮ್ಮದಾದರು ಪರವಾಗಿಲ್ಲ ಎಷ್ಟೋ ಸಲ "ತಮ್ಮ ಕುಣಿಯುತ್ತಿದ್ದ" ಅನ್ನೋದರಲ್ಲಿ ನನ್ನ ಕಥೆ ಅಂತ್ಯ ಗೊಳಿಸಿ,ದಿನಗಟ್ಟಲ್ಲೇ ಕುಣಿಯುತ್ತಲೇ ಇರಬೇಕಾದ ಪರಿಸ್ಥಿತಿಗೆ ದೂಡಿದ್ದಾನೆ ಗೊತ್ತ ಆ ನಿಮ್ಮ ತಿಕ್ಕಲು ದೇವರು" ಎಂದು ಮೂಗು ಮುರಿದ.ಆತ ಕೆಳಗಿಳಿದು ಬರಲಿ ಅವನ ಮೂಗು ಹಿಡಿದು ಕೇಳುತ್ತೇನೆ ಅಂತ ತನ್ನ ಪಾಡಿಗೆ ತಾನೆ ಏನೇನೋ ಮಾತಾಡಿಕೊಂಡ ಪುಟಾಣಿಯ ತಮ್ಮ.

"ಮೊನ್ನೆ ವಾಕಿಂಗೆಂದು ಹೋದಾಗ ಆ ದಾರಿ ಹೋಕ ಆಲ್ಕೆಮಿಸ್ಟ್ ಹುಡುಗ ಸಿಕ್ಕಿದ್ದ.ಅವನು ಮರುಭೂಮಿ,ಈಜಿಪ್ಟ್ ಎಲ್ಲಾ  ಸುತ್ತಿ ನಿಧಿಯೊಂದಿಗೆ ಮರಳಿ ಬಂದು ಇಲ್ಲಿ ಆ 
ನಾಲ್ಕನೆಯ ಮಹಡಿಯಲ್ಲಿ ವಾಸವಾಗಿದ್ದನಂತೆ.ಅವನಿಗಿರೋ ಅದೃಷ್ಟ ನಮಗಿಲ್ಲ ನೋಡು...ಅತ್ತ ದೇಶಾನು ಸುತ್ತಲಿಲ್ಲ ಇತ್ತ ಯಾವ ನಿಧಿಯು ದಕ್ಕಿಸಿಕೊಂಡಿಲ್ಲ"ಅಪ್ಪನ ಜಗಿತ ಇನ್ನು ಹೆಚ್ಚಾಗ ತೊಡಗಿತ್ತು.

"ನೀವು ಚಪ್ ಚಪ್ ಮಾಡಿದ್ದು ಸಾಕು ಸ್ವಲ್ಪ ಬಾಯಿಗೆ ಬಿಡುವು ಕೊಡಿ.ಹೋದ ಸಲ ಗಿರಿಜಾಳ ಸೀಮಂತದಲ್ಲಿ ಅವಳ ಪಕ್ಕದ ಕೆಂಪು ಮನೆಯ ಒಡತಿ ಜೊತೆ ಹರಟಿದ್ದೆ.ಅವಳ ಜೀವನಕ್ಕೆ ಹೋಲಿಸಿದರೆ  ನಮ್ಮದು ಸಾವಿರ ಪಾಲು ಮೇಲು.  ದೇವರ ಕೃಪೆಯಿಂದ ತಂಪಾಗಿದ್ದೀವಿ" ಅನ್ನುತ್ತ ಮಗ್ಗಲು ಬದಲಾಯಿಸಿದಳು ಅಮ್ಮ.

"ಮೇಲಿರುವವನ ಬಗ್ಗೆ ಹಾಗೆಲ್ಲ ಹಗುರವಾಗಿ ಆಡಿಕೊಳ್ಳಬೇಡಿರೋ ಅವನು ನಮ್ಮ ಹಣೆ ಬರಹ ಬರೆಯದೆ  ಹೋಗಿದ್ದರೆ ನಾವ್ಯಾರು ಹುಟ್ಟುತ್ತಲೇ  ಇರಲಿಲ್ಲ.ಬೇಡದ ಮಾತಾಡಿ ಬಾಯಿ ನೊವಿಸಿಕೊಳ್ಳೋ ಬದಲು ಸುಮ್ಮನೆ ಮಲಗಬಾರದ" ತನ್ನ ಕೊಣೆಯಿಂದ ಕೆಮ್ಮುತ್ತಲೇ ಗದರಿದ ತಾತನ ಮಾತು ಕೇಳಿ ಎಲ್ಲರು ಮೌನಕ್ಕೆ ಶರಣಾದರು.

ಈ ರಾತ್ರಿ ಎಷ್ಟುದ್ದ ಇರಬಹುದು? ಅಮ್ಮ ಹೇಳಿದ ಹಾಗೆ ಅಕ್ಕ ನಮ್ಮನೆಲ್ಲ ಬಂದು ಯಾವಾಗ ಸೇರಬಹುದು?ಎಂದು ಲೆಕ್ಕ ಹಾಕುತ್ತಿದಂಗೆ ತಲೆ ತೂಗಿ ರೆಪ್ಪೆ ಮುಚ್ಚಿದ ಪುಟಾಣಿಯ ತಮ್ಮ.

*

ಅನರ್ಘ್ಯಳಿಗೆ ಅಂದು ರಾತ್ರಿ ನಿದ್ದೆಯೇ ಹತ್ತಲಿಲ್ಲ.ರಶ್ಮಿ ಜೊತೆಗಿನ ಮಾತುಕತೆ  ಅವಳಿಗೆ ಹಳೆಯದೆಲ್ಲವನ್ನು ನೆನಪಿಸಿತ್ತು.
ರಶ್ಮಿ ತೀರ ಈ ನಡುವೆ ಅಂದರೆ ಅನರ್ಘ್ಯ ಲೇಖಕಿ ಎಂದು ಗುರುತಿಸಿಕೊಂಡ ನಂತರವಷ್ಟೇ ಅವಳಿದ್ದ ಮಹಿಳಾ ಹಾಸ್ಟೆಲ್ ಗೆ ಬಂದು ಹೋಗಿ ಮಾಡುತ್ತಿದ್ದಳು.ರಶ್ಮಿಯ ತಾಯಿ  ಮತ್ತು ಅನರ್ಘ್ಯಳ ಅಮ್ಮ ಜಾನಕಿ ಒಡ ಹುಟ್ಟಿದ್ದ ಅಕ್ಕ ತಂಗಿಯರು.

ಮಾಧವ ಜನಿಕಿಯರದ್ದು ಸುಖಿ ಸಂಸಾರ.ರಜನೀಶ ರಾಯರು ತಮ್ಮ ಕುಡಿಯಾದ ಮಾಧವ ರಾಯರಿಗೆ ಇದ್ದ ಅಪಾರ ಅಸ್ತಿಯನ್ನು ಬರೆದಿಟ್ಟು ವಿಧಿವಶರಾಗಿದ್ದರು.ಅನರ್ಘ್ಯ ಮಾಧವ ಜಾನಕಿ ದಂಪತಿಗಳ ಒಬ್ಬಳೇ ಮಗಳು.ಅನರ್ಘ್ಯ ಹುಟ್ಟಿದ್ದು ಕೊಪ್ಪದಲ್ಲಿ. ನಂತರ ವ್ಯವಹಾರಕ್ಕೆಂದು  ಮಾಧವ ರಾಯರು ಮನೆಯೊಂದನ್ನು ಬಿಟ್ಟು ತೋಟ ಗದ್ದೆ ಸೇರಿದಂತೆ ಎಲ್ಲ ಅಸ್ತಿಯನ್ನು ಮಾರಿ ಅದರ ಮೇಲೊಂದಿಷ್ಟು ಸಾಲ ಪಡೆದು ಹಾಸನದಲ್ಲಿ ಹೊಸ ಪ್ಲಾಸ್ಟಿಕ್ ಫ್ಯಾಕ್ಟರಿ ಒಂದನ್ನು ತೆರೆದಿದ್ದರು.ಹೀಗೆ ಸಂಸಾರ ಸಮೇತ ಅವರುಗಳು ಹಾಸನಕ್ಕೆ ವಲಸೆ ಬರಬೇಕಾಯಿತು.ಮಗಳನ್ನು  ಯಾವುದೇ ಕುಂದು ಕೊರತೆ ಇಲ್ಲದಂತೆ ಸುಖವಾಗಿ ಬೆಳೆಸಬೇಕೆಂಬ ಕನಸಿನ ಧೋಣಿ ಹತ್ತಿದ್ದ  ಮಾಧವ ದಂಪತಿಗಳು ಅದರಲ್ಲೇ  ವಿಹರಿಸುತ್ತಿದ್ದ ದಿನಗಳವು.ವರುಷಗಳು ಹರುಷದಲ್ಲಿ ಕಳೆದು ಹೋಗುತಿದ್ದವು,ಮುದ್ದು ಮಗಳು ಅನರ್ಘ್ಯಳನ್ನು ಅಲ್ಲಿಯೇ ಒಂದು ಶಾಲೆಗೇ ದಾಖಲಿಸಿದ್ದರು.

ತೊದಲು ನುಡಿಯ ಪುಟ್ಟ ಅನರ್ಘ್ಯ ಬೆಳೆಯ ತೊಡಗಿದಂತೆ ಶಾಲೆಯ ಸಹಪಾಟಿಗಳಿಗಿದ್ದ ಅಣ್ಣ ಅಕ್ಕ ತಂಗಿಯರೊಂದಿಗಿನ  ಒಡನಾಟವ ನೋಡಿ  ತನಗೂ ತಂಗಿ ತಮ್ಮ ಬೇಕೆನ್ನೋ ಆಸೆ ಅವಳಲ್ಲೂ  ಚಿಗುರೊಡೆಯಿತು.ಅವಳಿಗೆ ತಮ್ಮ ತಂಗಿಯಿಲ್ಲದ ಕೊರತೆ ಯಾವ ಮಟ್ಟಿಗೆ ಕಾಡಿತ್ತೆಂದರೆ ಯಾರಾದರು ನಿನಗೇನೂ ಬೇಕು ಪುಟಾಣಿ ಅಂತ ಕೇಳುವುದೇ ತಡ ಪಟ್ಟನೆ "ತಮ್ಮ ತಂಗಿ"ಎಂದು ಹಂಬಲದ ಕಣ್ಣುಗಳಿಂದ ಉತ್ತರಿಸುತ್ತಿದ್ದಳು.ಜಾನಕಿ ಎರಡನೇ ಮಗುವಿಗೆ ಗರ್ಭಿಣಿಯಾದಾಗ ಅಪ್ಪ ಅಮ್ಮ ತನಗಾಗಿ ತಮ್ಮ ತಂಗಿ ಕರೆದುಕೊಂಡು ಬರುವವರಿದ್ದಾರೆ ಎಂದು ಶಾಲೆಯಲ್ಲಿ ಎಲ್ಲರಿಗು ಹೇಳಿಕೊಂಡು ನಲಿದಿದ್ದಳು ಅನರ್ಘ್ಯ.ಆದರೆ ಜಾನಕಿಗೆ ನಾಲ್ಕು ತಿಂಗಳಾಗಿದ್ದಾಗ ಆ ಸುಖಿ ಸಂಸಾರಕ್ಕೆ ಬರ ಸಿಡಿಲು ಬಂದೊಡೆಯಿತು,ಮಾಧವ ರಾಯರು ನಡೆಸುತ್ತಿದ್ದ ಪ್ಲಾಸ್ಟಿಕ್ ಫ್ಯಾಕ್ಟರಿ ಬೆಂಕಿ ಅನಾಹುತದಲ್ಲಿ ಕರಗಿ ಹೋಗಿತ್ತು.ಹಾಗೊಂದು ಆಗಿ ಹೋದ ಅವಘಡದಿಂದ ಕೈ ಸುಟ್ಟು ಕೊಂಡು ವಿಪಾರಿತ ಸಾಲ ಬಾಧೆಯಿಂದ ತತ್ತರಿಸಿ ಹೋಗಿದ್ದ ರಾಯರು,ಮುಂದೆ ಪರಿಸ್ಥಿತಿ ಸುಧಾರಿಸದೆ ಹೋದರೆ ಮತ್ತೆ ಕೊಪ್ಪಕ್ಕೆ ಯಾವುದೊ ಧೃಡ ನಿರ್ಧಾರ ಮಾಡಿಕೊಂಡು ಮರಳೋದೆಂದು ನಿರ್ಧರಿಸಿದರು.ನಡೆದ ದುರಂತದ ಬಿಸಿ ಅನರ್ಘ್ಯಳಿಗೆ ತಟ್ಟದಂತೆ ಅಷ್ಟು ದಿನ ನೋಡಿಕೊಂಡ ಅವಳ  ಅಪ್ಪ ಅಮ್ಮ,ಕಡೆಗೂ ಸೋತು ಬೇರೆ ದಾರಿ ಇಲ್ಲದೆ  ಅಂದುಕೊಂಡ ಹಾಗೆ ಕೋಪಕ್ಕೆ ಬಂದಿಳಿದರು.ಅಲ್ಲಿ ನಡೆಯಲಿರುವ ದುರಂತದ ಸುಳಿವಿಲ್ಲದೆ ಹಸಿರು ಸಿರಿವಂತಿಕೆ ಹೊದ್ದು ನವ ವಧುವಿನಂತೆ ಕಂಗೊಳಿಸುತ್ತಿತ್ತು ಆ ಭಾಗದ ಮಲೆನಾಡು.ದಿನ ಅಳುತ್ತಿದ್ದ ಅಮ್ಮನ್ನ ಕಣೀರು ಓರೆಸುತ್ತಿದ್ದ  ಅನರ್ಘ್ಯ  ಮನೆಯ ದಾರಿಯಲ್ಲಿ  ಹೋಗುವಾಗ ಸುರಿಯುತ್ತಿದ್ದ ತುಂತುರು ಮಳೆಯನ್ನೂ ನೋಡಿ "ಮಳೆ ಅಂದ್ರೆ ಮೇಲೆ ಯಾರೋ ಅಳುತ್ತಿದ್ದರೆ ಅಲ್ಲವ ಅಪ್ಪ?ನಾನು ದೊಡ್ಡವಳಾದ ಮೇಲೆ ಅವರೆಲ್ಲರ ಕಣೀರು ಒರೆಸುವೆ" ಎಂಬವಳ ಮುಗ್ದ ಮಾತನ್ನು ಆಲಿಸಿದ ಮಾಧವ ರಾಯರು ತೋಳಲ್ಲಿದ್ದ ಅವಳನಿನ್ನು ಬಿಗಿಯಾಗಿ ತಬ್ಬಿ ಕಣ್ಣ ತುಂಬಿಕೊಂಡು ಮನೆ ಸೇರಿದರು.

ಸಂಜೆ  ಪಕ್ಕದ ಮನೆಯ ಪಚ್ಚಿ ಮತ್ತು ಚಿಟ್ಟೆಯೊಂದಿಗೆ ಆಟದಲ್ಲಿ ಮುಳುಗಿ ಹೋಗಿದ್ದ ಅನರ್ಘ್ಯಳನ್ನ ಜಾನಕೀ ರಾತ್ರಿ ಏಳಕೆಲ್ಲ ಊಟದ ನೆಪ ಹೇಳಿ ಮನೆಗೆ ಕರೆದೊಯ್ದಳು.ವಲ್ಲದ ಮನಸಿನಿಂದಲೇ ಅಳುತ್ತ ಬಂದ ಅನರ್ಘ್ಯಳಿಗೆ ಊಟ ಮಾಡಿಸಿ ಅಂಗಳದಲ್ಲಿದ್ದ ಚಂದಮಾಮನ ತೋರಿಸಿ ಸಮಾಧಾನ ಮಾಡಿದ್ದ ಜಾನಕಿಯ  ಮುಖದಲ್ಲಿ ಮೂಡಿದ್ದ ವಿಚಿತ್ರ ಮಂದಹಾಸ ಕಂಡ ಅನರ್ಘ್ಯ "ಯಾಕಮ್ಮ ಇಷ್ಟು ಖುಷಿಯಾಗಿದ್ದೀಯ" ಎಂದು ಕೇಳಿದ್ದಳು.
"ನಮ್ಮೆಲ್ಲ ಕಷ್ಟಗಳು ಇಂದು ಪರಿಹಾರವಾಗುತ್ತದೆ ಪುಟ್ಟ ಅದಕ್ಕೆ ಈ  ಖುಷಿ"ಎಂದು ಸುಮ್ಮನಾದಳು ಜಾನಕಿ.

ಅಂದು ರಾತ್ರಿ ಮಾಧವ ಜಾನಕಿ ಊಟ ಮುಗಿಸುತ್ತಿದಂತೆ ಮನೆ ಪಕ್ಕದಲ್ಲಿದ್ದ ಭಾವಿಯ ಬಳಿ  ಕುಳಿತು ಏನೇನೋ ಮಾತಾಡಿದರು.ಅನರ್ಘ್ಯ ಅದ್ಯಾವುದರ ಪರಿವಿಲ್ಲದೆ ತಾನು ಅಪ್ಪ ಅಮ್ಮ ಹೇಗೆ  ಕಾಣುತ್ತಿದ್ದೇವೆಂದು ತಿಳಿಯಾದ ಭಾವಿ ನೀರಿನಲ್ಲಿ ಬಗ್ಗಿ ಬಗ್ಗಿ ಪ್ರತಿಬಿಂಬ ಹುಡುಕಳು ಪ್ರಯತ್ನಿಸುತ್ತಿದಂತೆ ಮೇಲಿಂದ ಅಲಸಿನ ಮರದ ಎಳೆ ಕಾಯಿಗಳು ಭಾವಿಗೆ ಧುಮುಕಿ ನೀರನ್ನು ಕದಲಿಸಿ ಅವಳ ಮುದ್ದು ಮುಖವನ್ನು ಕೆಂಪಾಗಿಸಿದ್ದವು.

ಅಲ್ಲಿಂದ ಮೂವರು ಮನೆಯೊಳಕ್ಕೆ ಹೋಗುತಿದ್ದಂತೆ ಸೋತಂತಿದ್ದ ಜಾನಕಿಯ ಮುಖ ನೋಡಿ ತಾವೇ ಹಾಲು ತಂದು ಅನರ್ಘ್ಯಳಿಗೆ ಕುಡಿಸಿದರು ಮಾಧವ ರಾಯರು.ಹಾಲು ಕುಡಿದ ಅನರ್ಘ್ಯಳನ್ನ ಎಂದಿನಂತೆ ಮುದ್ದಾಡಿ ಮಧ್ಯದಲ್ಲಿ ಮಲಗಿಸಿಕೊಂಡು ಚಿರ ನಿದ್ರೆಗೆ ಜಾರಿದ್ದರು ಮಾಧವ ದಂಪತಿಗಳು.ಅನರ್ಘ್ಯ ಅವಳ ತಂದೆ ತಾಯಿಯನ್ನು ಜೀವಂತ ನೋಡಿದ್ದು ಅದೇ ಕೊನೆ.ಮಾಧವ ಜಾನಕೀ ಕಡೆಯ ಬಂಧುಗಳು ಪುಟ್ಟಾಣಿ ಅನರ್ಘ್ಯಳನ್ನು ಒಳ್ಳೆಯ ಆಡಳಿತವಿದ್ದ ಅನಾಥ ಮಕ್ಕಳ ಆಶ್ರಮಕ್ಕೆ ಸೇರಿಸಿದ್ದೆ ತಾವು ಮಾಡಿದ್ದ ದೊಡ್ಡ ಉಪಕಾರವೆಂಬಂತೆ ಬೀಗಿದ್ದರು.

ತನ್ನ ಅಪ್ಪ ಅಮ್ಮನೊಂದಿಗೆ ಕಳೆದ ಕ್ಷಣಗಳೇ ಒಂಟಿ ಅನರ್ಘ್ಯಳನ್ನ ಸದಾ ಜೀವಂತ ಇರಿಸಿದ್ದು.ಅಂದು ಅಪ್ಪನ ಬದಲು ಅಮ್ಮ ಹಾಲು ತಂದು ಕೊಟ್ಟಿದ್ದರೆ ತಾನು ಅಂದೇ ಅವರೊಂದಿಗೆ ಸಾಯುತ್ತಿದ್ದೆ ಅಪ್ಪನಿಗೆ ವಂಶ ಬೆಳೆಯುವುದೇ ಮುಖ್ಯವೆನಿಸಿತ್ತೇನೋ ಅಮ್ಮನಿಗೆ ಸುಳ್ಳು ಹೇಳಿ ನನ್ನ ಹಾಲಿನಲ್ಲಿ ವಿಷ ಬೆರೆಸದೆ ಕೊಟ್ಟು ಬಿಟ್ಟಿರಬೇಕು ಎಂದೆನಿಸಿತ್ತು ಅನರ್ಘ್ಯಳಿಗೆ.ಅವರ ಗುಂಗಿನಲ್ಲೇ ಓದಿನ ನಡುವೆ ಸಮಯ ಸಿಕ್ಕಾಗೆಲ್ಲ ಕಥೆಗಳ ಬರೆಯುತ್ತಿದ್ದಳು.ಅದರಲ್ಲಿ ಅಪ್ಪ ಅಮ್ಮ ಹುಟ್ಟದ ತಮ್ಮ ತಾತ ಜೀವಂತವಾಗುತ್ತಿದ್ದರು.ಆ ಕಥೆಗಳಲ್ಲೇ ಅವರೆಲ್ಲ ಜೀವಿಸ ತೊಡಗಿದರು.

ಅನರ್ಘ್ಯ ಬಿ ಕಾಂ ಮುಗಿಸಿ ಬ್ಯಾಂಕ್ ನೌಕರಿ ಹಿಡಿದಾಗ ಸಾಹಿತ್ಯ ಆಸಕ್ತಿ ಇಟ್ಟುಕೊಂಡಿದ್ದ ಅದೇ ಬ್ಯಾಂಕಿನ ಮ್ಯಾನೇಜರ್ ಪರಿಚಯಸ್ತ ಪ್ರಕಾಶಕರಿಗೆ ಅನರ್ಘ್ಯಳ ಪ್ರತಿಭೆಯ ಬಗ್ಗೆ ಹೇಳಿಕೊಂಡಿದ್ದರು.ಅಲ್ಲಿಂದ ಅನರ್ಘ್ಯ ಲೇಖಕಿಯಾಗಿ ದೊಡ್ಡ ಮಟ್ಟಿಗೆ  ಬೆಳೆದು ನಿಂತಳು.ಅನರ್ಘ್ಯಳ ಪುಟಾಣಿ ಕಾದಂಬರಿ ಹಾಗೆ ಇನ್ನು ಹಲವು ಕಥಾ ಸಂಕಲನಗಳು ಬಿಡುಗಡೆಯಾದವು.ಆದರೆ ಅನರ್ಘ್ಯಲಿಗೆ ಹೆಸರು ಕೀರ್ತಿ ತಂದು ಕೊಟ್ಟಿದ್ದು ಅವಳ "ಪುಟಾಣಿ" ಕಾದಂಬರಿ.ಅದಾಗಲೇ ಮೂರು ಭಾಗದಲ್ಲಿ ಹೊರ ಬಂದ ಆ ಕಾದಂಬರಿಯ ನಾಲ್ಕನೆ ಭಾಗದ ಬಿಡುಗಡೆಯ ಸಿದ್ದತೆಗಳು ನಡೆದಿದ್ದವು.ಅನರ್ಘ್ಯಳ "ಪುಟಾಣಿ" ಕಾದಂಬರಿ  ಲವಲವಿಕೆಯಿಂದ  ಕೂಡ್ಡಿದಾಗಿದ್ದು, ಅದರಲ್ಲಿನ ಕಥೆಗಳು ದುಃಖದಲ್ಲಿ ಕೊನೆಗೊಳ್ಳುತ್ತಿರಲಿಲ್ಲ.ಸಂಸಾರದ ಚಿಕ್ಕ ಪುಟ್ಟ ಹಾಸ್ಯ ಸನ್ನಿವೇಶಗಳನ್ನ ಸುಖಿ ಸಂಸಾರದ ಸೂತ್ರಗಳನ್ನ ಮನುಷ್ಯರ ನಡುವಿನ ಪರಸ್ಪರ ಬಾಂಧವ್ಯವನ್ನು ಸರಳವಾಗಿ ತೆರೆದಿಡುತ್ತಿದ್ದ ಆ ಕಾದಂಬರಿ ಎಲ್ಲರ ಮನ ಗೆದ್ದಿತ್ತು.ಅದು ಪುಟಾಣಿ ಎಂಬ ಲೇಖಕಿಯ ಆತ್ಮಕಥನ ಎಂದೇ ಜನರು ನಂಬಿಕೊಂಡಿದ್ದರು.ಎಷ್ಟೊಂದು ಸುಖಜೀವಿ ಈ ಪುಟಾಣಿ ಮತ್ತವಳ  ಸಂಸಾರ ಅದರಂತೆಯೇ  ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವಷ್ಟು ಪರಿಣಾಮ ಬೀರಿತ್ತು ಪುಟ್ಟಾಣಿ ಕಾದಂಬರಿ.

ಅನರ್ಘ್ಯ ಲೇಖಕಿಯಾಗಿ ಪ್ರಚಲಿತಕ್ಕೆ ಬಂದ ನಂತರ ಅವಳನ್ನು  ದೂರವಿಟ್ಟಿದ್ದ ನೆಂಟರೆಲ್ಲ ಹತ್ತಿರವಾಗ ತೊಡಗಿದರು.ಅದರಲ್ಲೂ ಅವಳ ಚಿಕ್ಕಮ್ಮನ ಮಗಳಾದ ರಶ್ಮಿಗೆ ಅನರ್ಘ್ಯಳೆಂದರೆ ವಿಶೇಷ ಪ್ರೀತಿ ಗೌರವ.ಕವನ ಕಥೆ ಬರೆಯುವ ಗೀಳಂಟ್ಟಿದ್ದ ರಶ್ಮಿಗೆ ಅನರ್ಘ್ಯಳೇ ತನ್ನ ಬರವಣಿಗೆಯ ಬೆಳವಣಿಗೆಗೆ ಸರಿಯಾದ  ಮಾರ್ಗದರ್ಶಿಯೆಂದು ಅವಳ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಳು. ವರ್ಷಗಳಿಂದ ಹಾಸ್ಟೆಲ್ ಊಟ ತಿನ್ನುತಿದ್ದ ಅನರ್ಘ್ಯಳಿಗೆ ತಾನೇ ಬಾಕ್ಸ್ ತಂದು ಬಲವಂತವಾಗಿ  ತಿನ್ನಿಸಿ ಹೋಗುತ್ತಿದ್ದಳು ರಶ್ಮಿ. ರಶ್ಮಿ ರಶ್ಮಿ ಯಂತಹ ಜನರು ಎಷ್ಟೇ ಹತ್ತಿರವಾಗಲು ಪ್ರಯತ್ನಿಸಿದರೂ ಅನರ್ಘ್ಯಳಿಗೆ ಮಾತ್ರ ತನ್ನ ಕಲ್ಪನೆಯ ಜಗತ್ತನ್ನೇ ಹಚ್ಚಿಕೊಂಡು ಅದರಲ್ಲೇ ಖುಷಿ ಕಾಣುತ್ತಿದ್ದಳು ಅವಳು.

ಆದರೆ ಮೊದಲ ಬಾರಿಗೆ ಅಂದು ರಶ್ಮಿ ಅನರ್ಘ್ಯಳನ್ನು ವಾಸ್ತವಕ್ಕೆ ಎಳೆಯಲು ಪ್ರಯತ್ನಿಸಿದ್ದಳು.
"ಅಕ್ಕ ತ್ರಿವೇಣಿ ತೇಜಸ್ವಿನಿ ವೈದೇಹಿ ಭಾಗ್ಯಲಕ್ಷ್ಮಿ ಇವುರುಗಳ ಸಾಲಿನಲ್ಲಿ  ನಿಲ್ಲುವ ಅರ್ಹತೆ ಇರುವವಳಾಗಿ ಅನರ್ಘ್ಯ ಅನ್ನೋ ಹೆಸರು ಬಿಟ್ಟು "ಪುಟಾಣಿ" ಎಂದು ಪರಿಚಯಿಸಿಕೊಳ್ಳುತಿಯಲ್ಲ,ಪೆದ್ದು ಕಣೆ ನೀನು" ತಲೆ ಕುಟುಕಿದ್ದಳು ರಶ್ಮಿ.ರಶ್ಮಿಯ ಮಾತಿಗೆ ಅನರ್ಘ್ಯ ಪ್ರತಿಕ್ರಿಯಿಸಿರಲಿಲ್ಲ.
"ಅಲ್ಲವೇ ನನ್ನನ್ನೇ ನೋಡು ನದಿ ಗುಡಿ ಬೆಟ್ಟ ಗುಡ್ಡ  ಸೂರ್ಯ ಚಂದ್ರ ಅವನು ಇವನು ಬಾಹ್ಯ ಮುಖ ಅಂತರಾತ್ಮ ಬಾಳು ಬಾಂಧವ್ಯ ಹೀಗೆ ಏನೆಲ್ಲಾ ಬರೆಯುತ್ತೇನೆ ಆದರು ನಿನ್ನ ಬರವಣಿಗೆಯ ಮುಂದೆ ನಂದೆಲ್ಲ ಸಪ್ಪೆ ಅನಿಸಿಬಿಡುತ್ತದೆ,ಅಂತಹ ನಾನೇ ವಿರಾಂಗಿನಿ ಅನ್ನೋ ಕವ್ಯನಾಮದೊಂದಿಗೆ ಕವಿಯತ್ರಿ ಅಂತ ಬೀಗುವಾಗ ನಿನ್ಯಾಕೆ ಈ "ಪುಟ್ಟಾಣಿ" ಅಂತ ಸಿಲ್ಲಿ ಹೆಸರಿನಲ್ಲಿ ಬರೆಯುತ್ತಿರುವೆ?? ಯುವ ಲೇಖಕರನ್ನ ಗುರುತಿಸುವುದೇ ಕಡಿಮೆ ಅಂತದರಲ್ಲಿ ನಿನಗೆ ಸನ್ಮಾನಗಳಿಗೆ ಕರೆ ಬಂದರು ನಿರಾಕರಿಸುತ್ತಿ,ನಿನ್ನ ಧೋರಣೆ ಸ್ವಲ್ಪವು ಸರಿ ಕಾಣೋಲ್ಲ.ನನ್ನ ಕಾಲೇಜಿನಲ್ಲಿ ನಿನಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ..ಅವರಿಗೆಲ್ಲ ಪುಟಾಣಿ ನನ್ನ ಅಕ್ಕ ಅನರ್ಘ್ಯ ಅಂದರೆ ಯಾರು ನಂಬಲು ತಯ್ಯಾರೆ ಇಲ್ಲ ಗೊತ್ತ?ದೊಡ್ಡ ಮಟ್ಟದಲ್ಲಿ ಮುಖಸಹ ಪರಿಚಯ ಮಾಡಿಕೊಳ್ಳೋಕೆ ನಿನಗೇನೆ?"
"ನನಗದ್ಯಾವುದು ಬೇಕಿಲ್ಲ ಕಣೆ,ನಾನು ಬರೆಯೋದು ನನ್ನ ಖುಷಿಗೆ ನಾನು ನನ್ನಿಷ್ಟದಂತೆ ಅದರಲ್ಲಿ ಸಂತೋಷವಾಗಿ ಜೀವಿಸೋಕೆ"ಎಂದಿದ್ದಳು ಅನರ್ಘ್ಯ.
"ಕಥೆಗಾರ ಮುಖಕ್ಕಿಂತ ತನ್ನ  ಪ್ರತಿಭೆಗೆ ಮಾನ್ಯತೆ ಸಿಗಬೇಕೆಂದು ಅದು ಎಲ್ಲಡೆ ಪಸರಿಸಬೇಕೆಂದು ಅಶಿಸುತ್ತಾನೆ ನಿಜ ಆದರು ನಿನ್ನ ಕಾದಂಬರಿಯಂತೆ ನಿನ್ನ ಸುಂದರ ಮುಖವು ಜನರಿಗೆ ಪರಿಚಯವಾಗೋದು ಬೇಡವೇನೆ?ನೀನೆರಿರುವ  ಎತ್ತರ ನಿನಗೆ ತಿಳಿದಿಲ್ಲ. ಸರಿ,ನಾಳೆ ನನ್ನ ಪತ್ರಿಕಾ ಮಿತ್ರನೊಬ್ಬ  ನಿನ್ನ ಸಂದರ್ಶನ ತಗೊಳಕ್ಕೆ ಬರುತ್ತಾನೆ ನೀನು ತಯ್ಯಾರಿರು" ಎಂದು ಹೇಳಿ ಹೋಗಿದ್ದಳು ರಶ್ಮಿ.

*

 "ನಿಮ್ಮ ಹೆಸರು ಪುಟಾಣಿನ?"  ಆ ಘೋಸ್ಟ್ ರೈಟರ್ ಇವಳೇನಾ ಅನ್ನೋ ಅನುಮಾನದಿಂದಲೇ ಕೇಳಿದ ಸಂದರ್ಶನಕಾರ.
"ಹೌದು...ಅಲ್ಲ.....ನನ್ನ ಹುಟ್ಟು ಹೆಸರು ಅನರ್ಘ್ಯ,ಚಿಕ್ಕವಳಿದ್ದಾಗ ಪ್ರೀತಿಯಿಂದ ಪುಟಾಣಿ ಎಂದು ಕರೆಯುತ್ತಿದ್ದರು"
"ವಾಹ್! ಅನರ್ಘ್ಯ ಎಷ್ಟು ಚೆಂದದ ಹೆಸರು,ಅದೇ ಸೊಗಾಸಗಿದೆ ಅಲ್ವೇ?"
"ನನಗೇನೋ ಪುಟಾಣಿಯೇ ಚೆಂದ ಎನಿಸುತ್ತದೆ"
"ಓ....ಆಯ್ತು,'ಪುಟಾಣಿ'ಯವರೇ ತಾವು ಹುಟ್ಟಿದ್ದು ಯಾವ ವರುಷ?"
"ನಾನಿನ್ನು ಹುಟ್ಟಲಿಲ್ಲ"
" ಅಂದರೆ??"
"ಎಲ್ಲರು ಸತ್ತ ದಿನ ಹುಟ್ಟುತ್ತಾರೆ,ನಾನು ಹಾಗೆಯೆ."
"ಅಂದರೆ????"
"ಜನರ ನಿಜವಾದ ಪರಿಚಯವಾಗೋದು ಸತ್ತ ದಿನ ತಾನೇ? "
"ನೀವು ಹುಟ್ಟಲೇ ಇಲ್ಲ ಅಂದ್ರೆ ಸಾಯೋದು ಹೇಗೆ?"
"ಹುಟ್ಟಿಲ್ಲ ಹೌದು ಆದರೆ ಉಸಿರಾಡುತ್ತಿದ್ದಿನಲ್ಲ....ಹಾಗಾಗಿ ಸಾಯುತ್ತೇನೆ."
"ನೀವು ತುಂಬಾ ವಿಚಿತ್ರವಾಗಿ ಮಾತಾಡುತ್ತೀರ 'ಅನರ್ಘ್ಯ'....ಅದಿರಲಿ,ನೀವು ಇಷ್ಟು ದಿನ ಸಂದರ್ಶನ ಕೊಡಲು  ನಿರಾಕರಿಸುತ್ತಿದ್ದಿದ್ದು??"
"ಎಲ್ಲಿ ಕೊಲೆಯಾಗಿ ಹೋಗ್ತೀನೋ ಅನ್ನೋ ಭೀತಿಯಿಂದ,ನನಗೆ ಸಹಜ ಸಾವು ಇಷ್ಟ ನೋಡಿ"
ಅನರ್ಘ್ಯಳ ಮಾತು ಕೇಳಿ ಕಕ್ಕಾಬಿಕ್ಕಿಯಾದವ ಚೇತರಿಸಿಕೊಂಡು,
" ಎಲ್ಲಿ ನಿಮ್ಮ ಅಮ್ಮ ಅಪ್ಪ ತಮ್ಮ ತಾತ ಕಾಣುತಿಲ್ಲವಲ್ಲ,ಸ್ವಲ್ಪ ಅವರ ಪರಿಚಯವೂ ಮಾಡಿ ಕೊಡಿ.ನಿಮ್ಮ ಕಥೆಗಳಲ್ಲಿ ಅವರು ನಮ್ಮನ ಸಕತ್ ನಗಿಸುತ್ತಾರೆ ಒಮೊಮ್ಮೆ ಅಳಸುತ್ತಾರೆ,ಅದರಲ್ಲೂ ನಿಮ್ಮ ತಾತ ಅಂತೂ ಕಾಡಿಸುತ್ತಾರೆ."
"ನಿಜವ?ಸಂತಸದ ವಿಷಯ,ಆದರೆ ನನಗಿನ್ನು ಅವರ ಪರಿಚಯ ಸರಿಯಾಗಿ ಆಗಿಲ್ಲ"
"ಅಂದರೆ ಪುಟಾಣಿ ನಿಮ್ಮ ಆತ್ಮ ಚರಿತ್ರೆ ಅಲ್ಲವೇ? ಕಾಲ್ಪನಿಕವೇ?"
"ಹಾಂ....ಉಂಹು...ಅವರು ಇದ್ದಾರೆ...ಇಲ್ಲಿ ನೋಡಿ ನಾನು ಉಸಿರಾಡುತ್ತಿರುವುದಕ್ಕೆ ಅವರೇ  ಕಾರಣ.ಆದರವರ ಸಂಪರ್ಕ ಸಾಧ್ಯವಾಗುತ್ತಿಲ್ಲವಷ್ಟೇ."
  "ಒಹ್...ನಿಮಗೆ ಮದುವೆ ಆಗಿದೆಯೇ?"
"ನೀವು ನನ್ನ ಪುಸ್ತಕಗಳ ಬಗ್ಗೆ ಕೇಳಿದರೆ ಒಳಿತು"
"ಅವುಗಳ ಬಗ್ಗೆ ನೀವು ಗೊಂದಲವಾಗಿ ಉತ್ತರಿಸುತ್ತೀರಾ,ಅದೇನೇ ಇರಲಿ ನೀವು ಅತ್ಯುತ್ತಮ ಲೇಖಕಿ ಅನ್ನುವುದರಲ್ಲಿ ಸಂಶಯವಿಲ್ಲ,ನಿಮ್ಮ ಮೊದಲ ಸಂದರ್ಶನ ನನಗೆ ಸಿಕ್ಕಿದ್ದು ನನ್ನ ಪುಣ್ಯ"ಎಂದು ಅನರ್ಘ್ಯಳ ಫೋಟೋ ತೆಗೆಯುವುದರಲ್ಲಿ ಅದೊಂದು ಸಂದರ್ಶನ ಮುಕ್ತಾಯಗೊಂಡಿತು.
 
*

"ಮದುವೆ ಮನೆಯಿಂದ ಹಿಂದಿರುಗಿದ ಅಮ್ಮ ಅಪ್ಪ ಪುಟಾಣಿಯನ್ನು ಮನೆಯಲ್ಲಿ ಕಂಡು ಸಂತೋಷಿಸಿದರು,ಅವರೆಲ್ಲ ಎಂದಿನಂತೆ ಕ್ಯಾರಂ ಆಟದಲ್ಲಿ ನಿರತರಾದರು"---ಅನರ್ಘ್ಯ ಕಾದಂಬರಿಯ ಅಂತ್ಯ ಹಾಡಿ ನಿರ್ಲಿಪ್ತ ಭಾವದೊಂದಿಗೆ ಕುಳಿತಳು.ಅದನ್ನೆಲ್ಲ  ಮೇಲ್ ಮಾಡಿ ಗಾಡಿಯಲ್ಲಿ ಹಾಸನಕ್ಕೆ ತೆರಳಿದಳು.

ವೇಗದ ಗಾಳಿಯನ್ನು ಸೀಳಿಕೊಂಡು ಹೊರಟ  ಅನರ್ಘ್ಯಳ ಗಾಡಿ ಅವಳ ಹಳೆ ಮನೆಯ ಮುಂದೆ ಬಂದು ನಿಂತಿತು.ಕಾರ್ ಇಳಿದು ಮನೆಯತ್ತ ನಡೆದು ಹೋಗುವಾದ  ಮೂಗಿಗೆ ಬಡೆದ ಮಾವಿನ ಚಿಗುರಿನ ವಾಸನೆ ಅಲ್ಲೇನು ಬದಲಾಗಿಲ್ಲ ಎಂದು ಸೂಚಿಸಿತ್ತು  ಅನರ್ಘ್ಯಳಿಗೆ.ಮನೆಯ ಅಂಗಳದಲ್ಲಿದ್ದ ಭಾವಿಯಲ್ಲಿ ಅನರ್ಘ್ಯ ತನ್ನ ಮುಖವನ್ನು ನೋಡುತ್ತಾ ಕುಳಿತಳು.ಅಪ್ಪ ಅಮ್ಮನ ಮಾತು ಕಥೆ ಶುರುವಾಗಿತ್ತು.ಅಲ್ಲಿಂದ ಅಪ್ಪ ಅಮ್ಮ ಅನರ್ಘ್ಯ ಒಳಗೆ ನಡೆದರು,ಅಮ್ಮ ಸೋತ ಮುಖದೊಂದಿಗೆ ತಾನೇ ಹಾಲು ತಂದು ಅನರ್ಘ್ಯಳಿಗೆ ಕುಡಿಸಿದಳು.ಅನರ್ಘ್ಯಳನ್ನು ಎಂದಿನಂತೆ ಮುದ್ದಾಡಿ ಮಧ್ಯದಲ್ಲಿ ಮಲಗಿಸಿಕೊಂಡು ಚಿರ ನಿದ್ರೆಗೆ ಜಾರಿದರು.

ಅನರ್ಘ್ಯ ಮತ್ತೆಂದು ಕಣ್ನ್ ತೆರೆಯಲೇ ಇಲ್ಲ.

*

ಕೊನೆಗೂ ಬಂದ  ಪುಟಾಣಿಯನ್ನು  ನೋಡಿ  ತಮ್ಮ  ಕುಣಿದಾಡಿದ.ಮದುವೆ ಮನೆಯಿಂದ ಹಿಂದಿರುಗಿದ ಅಮ್ಮ ಅಪ್ಪ ಪುಟಾಣಿಯನ್ನು ಮನೆಯಲ್ಲಿ ಕಂಡು ಸಂತೋಷಿಸಿದರು.ಅಪ್ಪ ಅಮ್ಮ ತಮ್ಮ ಪುಟಾಣಿ ಕ್ಯಾರಂ ಆಟ ಆಡುವುದರಲ್ಲಿ ನಿರತರಾದರು.ಅನರ್ಘ್ಯ ತನ್ನ ಹೊಸ ಜಗತ್ತಿನಲ್ಲಿ ಲೀನಳಾದಳು.

5 comments:

  1. The best till date.....idanna oda bedadittu..athiyaagi kaadutide e baraha.

    ReplyDelete
  2. ನಿನ್ನ ಕಥೆಯಲ್ಲಿ ಬರೋ ಎರಡ್ಮೂರು ಟ್ವಿಸ್ಟ್ ಗಳು ನನಗೆ ಸರಿಯಾಗಿ ಅರ್ಥವ ಆಗಲೇ ಇಲ್ಲ ನೋಡು. ಮೂರು ಸಾರಿ ಓದಿದ ಮೇಲೆಯೇ ಒಂದು ಹಂತಕ್ಕೆ ಅರ್ಥವಾದದ್ದು. ಪಿಚ್ ಅನ್ನಿಸ್ತು. ಆ ಹುಡುಗಿ ಅನರ್ಘ್ಯ ಮನಸ್ಸು ಮಾಡಿದ್ರೆ ಬಂಗಾರದಂಥಾ ಬಾಳಿತ್ತು ಅವಳಿಗೆ. ನಿನ್ನ ಕಥೆಯ ಮೊದಲೇ ಸಾಲೇ ಕ್ಲೈಮ್ಯಾಕ್ಸ್ ನ ಮೊದಲ ಹಂತ ಅನ್ನೋದು ಅಷ್ಟು ಸುಲಭಕ್ಕೆ ಗೊತ್ತಾಗ್ಲಿಲ್ಲ ನೋಡು..

    ಅವಳ ಮೊದಲ ಸಂದರ್ಶನವೇ ಕೊನೆಯ ಸಂದರ್ಶನವೂ ಆದದ್ದು ಖೇದದ ವಿಚಾರ. ಒಂದೊಳ್ಳೆ ಕಥೆಯನ್ನ ಈ ರೀತಿ ಅಂತ್ಯ ಗೊಳಿಸಿದ್ದಕ್ಕೆ ಸ್ವಲ್ಪ ಬೇಸರವೇ ಆಯ್ತು ನೋಡು. [ಕಥಾ ನಾಯಕಿಯ, ಅಂತ ಒಳ್ಳೆ ಲೇಖಕಿಯ ಸಾವಿನ ಕುರಿತಾದ ಬೇಸರ]
    ಅಷ್ಟಲ್ಲದೆಯೂ ನಿನ್ನ ಕಥೆ ಹಲವು ವಸ್ತು ನಿಷ್ಠ ವಿಚಾರಗಳ ಕಡೆ ಬೆಳಕು ಚೆಲ್ಲಿದ್ದು ಗಮನೀಯ ವಿಚಾರ. ಹೊಸದೊಬ್ಬ ಯಶಸ್ವಿ ಲೇಖಕಿ ಕೀರ್ತಿ, ಹೆಸರುಗಳಿಗಾಸೆ ಪಡದೆ ಕೇವಲ ತನ್ನ ಖುಶಿಗಷ್ಟೇ ಬರೆದು ಓದುಗರನ್ನೂ ಖುಷಿ ಪಡಿಸುವ ಕಲೆ ಎಲ್ಲರಿಗೂ ಒಲಿಯಲಾರದು.

    ಒಟ್ಟಾರೆ ಒಳ್ಳೆ ಕಥಾವಸ್ತು.. ಉತ್ತಮ ನಿರೂಪಣೆಯೊಂದಿಗಿನ ಈ ರಚನೆ ಬಹಳಾನೇ ಇಷ್ಟ ಆಯಿತು. ಹಾಗೆ ಯಾವ ರೀತಿ ಏನೇನು ಬರೆಯಬೇಕು ಅನ್ನೋ ನಿನ್ನ ಟ್ವಿಸ್ಟ್ ಗಳು ಕೂಡ. ಮುಂದಿನದ್ದನ್ನ ಎದುರು ನೋಡ್ತಾ ಇದೇನೇ ಅತಿ ಶೀಘ್ರ ಬರಲಿ.

    ReplyDelete
  3. ಕತೆ ಹಾಗು ರಚನಾತಂತ್ರ ತುಂಬ ಇಷ್ಟವಾದವು.

    ReplyDelete
  4. ಹಾಯ್ ವೈಶು .....

    ಮತ್ತೊಂದು ಕೇವಲ ನೀನು ಮಾತ್ರ ಬರೆಯಬಲ್ಲ ಬರಹ.....ಎಂದಿನಂತೆ ವಿಶಿಷ್ಟ ರೀತಿಯ ಚಿಂತನೆ, ನಿರೂಪಣೆ.....ಅರ್ಥ ಮಾಡಿಕೊಳ್ಳಲು ಮೇಲೆ ಕೆಳಗೆ ಹೋಗಿ ಮತ್ತೆ ,ಮತ್ತೆ ಓದಬೇಕಾಗಿದ್ದು ನಿಜ.....ಬರಹದಿಂದ ಬರಹಕ್ಕೆ ಪ್ರಭುದ್ಧತೆ ಹೆಚ್ಚಾಗುತ್ತಿದೆ.....ಒಂದು ಉತ್ತಮ ಕಥೆಗೆ ಧನ್ಯವಾದಗಳು..... ನಿನ್ನ ಹಡಗಿನ ಪಯಣ ಹೀಗೆ ಮುಂದುವರಿಯಲಿ.....ನಾವೆಲ್ಲರೂ ನಿನ್ನ ಜೊತೆ ಜೊತೆಗೆ ಪಯಣಿಸುತ್ತೇವೆ....

    ReplyDelete
    Replies
    1. ತುಂಬಾ ಕಡೆ ಪುಟ್ಟಾಣಿ ಅಂತಾ ಟೈಪ್ ಮಾಡಿದಿಯಾ :d ಪುಟಾಣಿ ಆಗ್ಬೇಕು,

      Well , " ನಾನಿದನ್ನ, ಮೊದಲು ಅರ್ಥಾ ಮಾಡಿಕೊಂಡ ರೀತಿಯನ್ನ ನೆನೆಸಿಕೊಂಡರೆ, ಕೊಂಚ ವಿಸ್ಮಯ ಅಂತಾ ಅನಿಸಿದರೂ ಕೂಡ "ಆ" ನನ್ನ ಮೊದಲಿನ ವಿಮರ್ಶೆಯ ಪರಛಾಯಿ ಈ ಬರಹದ ಮೇಲೆ ಇನ್ನೂ ಹಾಗೆ ಇದೆ. ಈ ಬರಹದ ಹಿಂದಿರುವ ಸ್ಫೂರ್ತಿ ಕೂಡಾ ಅದೇ ಇದ್ದಿರಬಹುದಾ ಅನ್ನೋ ಗುಮಾನಿ ಕೂಡ [ಕೊನೆಪಕ್ಷ ೧೦% ಆದ್ರು ]

      ಇರಲಿ, ಕಥೆಯನ್ನ ನಿನ್ನದೇ ರೀತಿಯಲ್ಲಿ ನಿರೂಪಿಸಿದಿಯ, ಇಷ್ಟವಾಯಿತು.... ಮಿಕ್ಕಿದ್ದೆಲ್ಲ ಹಿಂದೆನೇ ಹೇಳಿದೀನಿ....

      "ಕಥೆಯೊಳಗೆ ಕಥೆಯಾದ" ರೀತಿಯನ್ನ .........................


      Delete