Friday, January 11, 2013

ಸಂಜೆಗತ್ತಲಲ್ಲಿ ಮಿನುಗಿದ ದೇವಗನ್ನಡಿ...

ನೆನ್ನೆ ಬೇಗ ಮನೆಗೆ ಬಂದವಳಿಗೆ ಏನೋ ನಿರುತ್ಸಾಹ ದಣಿವು ಸಂಕಟ ಆವರಿಸಿಕೊಂಡಿದ್ದರಿಂದ  ನೇರ ಹಾಸಿಗೆಯ  ಮೇಲೆ ಬೋರಲು ಬಿದ್ದೆ.ಅದೆಷ್ಟೊತ್ತು ಕಣ್ಣಚ್ಚಿದೇನೋ ಗೊತ್ತಾಗದೆ ಮೈ ಮುರಿಯುತ್ತ  ಗೋಡೆಗೆ ಜೋತು ಬಿದಿದ್ದ ಹಳೆಯ ಗಡಿಯಾರವನ್ನು ದಿಟ್ಟಿಸಿದೆ.ಅದಾಗಲೇ ಚಿಕ್ಕ ಮುಳ್ಳು  ೬ ಕ್ಕೆ ನೇಣು ಬಿಗಿದು ಕೊಂಡಿತ್ತು.ದೀಪ ಹಚ್ಚುವ ಸಮಯ ಮನೆಯಲ್ಲಿ ಮಲಗಬಾರದು ಅಮ್ಮನ ಮಾತುಗಳು ಸೈರನ್ನಿನಂತೆ ನೆನಪಾಗಿ ಚಂಗ್ ಎಂದು ಅರೆಕ್ಷಣದಲ್ಲಿ ಎದ್ದು ಅಮ್ಮನ ಹುಡುಕಿ ಹೊರಟೆ.ಅವಳೆಲ್ಲೂ ಆಚೀಚೆ ಕಾಣದಿದ್ದಾಗ ದೇವರ ಕೊಣೆ ಹೊಕ್ಕಿರುವುದು ಧೃಡವಾಗುತ್ತಿದಂತೆ ಸಣ್ಣ ನಿಟ್ಟುಸಿರು ಹೊರಬಂತು.ದಿನವೇ ಹಾಗಿತ್ತು,ಬೆಳಗ್ಗೆ ಎದ್ದಾಗಳಿಂದ ಆ ವರೆಗೂ ಸರಾಸರಿ ಮೂರು ಸಾವಿನ ಸುದ್ಧಿಗಳು ಅಪ್ಪಳಿಸಿದ್ದವು.ಸತ್ತಿದ್ದು ನನ್ನ ಪರಿಚಯದವರಲ್ಲ,ಪರಿಚಯಸ್ತರ ಪರಿಚಯದವರು.ಅವರಿಗೂ ಪರಿಚಯವಿತ್ತು ಎಂದು ಖಾತ್ರಿಯಾಗಿ ಹೇಳುವುದಕ್ಕೆ ಬರೋಲ್ಲ.ಕೆಲವರು ಶೂನ್ಯದಲ್ಲಿ ಒಂದಾಗಿ  ಕಣ್ಮರೆಯಾಗುತ್ತಾರೆ,ಹಲವರು ಖಂಡಮಂಸ ಸಮೇತ ಬದುಕಿರುವಾಗಲೇ  ಕಳೆದು ಹೋಗಿರುತ್ತಾರೆ ಅರ್ಥವಾಗದೆ ಉಳಿದುಬಿಡುತ್ತಾರೆ.

*
ಬೇಸರ ಕಳೆಯಲು ಹಳೆ ಚಟದಂತೆ ಆಯಾಸದ ಕಣ್ಣುಗಳೊಂದಿಗೆ ನನ್ನ ರೂಮಿನ ಬುಕ್ ಶೆಲ್ಫಿನತ್ತ ಕೈಯಾಡಿಸಲು ಮುಂದಾದೆ.ತಕ್ಷಣ ಎದುರಿಗೆ ಇಟ್ಟಿದ್ದ ಪುಟ್ಟ ಹೊಸ ಪುಸ್ತಕವೊಂದು ಸೆಳೆಯಿತು.ಮನೆಯಲ್ಲಿ ನನ್ನ ಬಿಟ್ಟರೆ ಇನ್ಯಾರು ಓದಿನ ಅಭಿರುಚಿ ಹೊಂದಿಲ್ಲ,ನಾನು ಇಡದೆ ಯಾವುದೇ ಹೊಸ ಪುಸ್ತಕ ಶೆಲ್ಫಿನಲ್ಲಿ ಜಾಗ ಮಾಡಿಕೊಳ್ಳುವುದು ಅಸಾಧ್ಯವಾದರೂ ಸತ್ಯವೆಂಬಂತೆ ಆ ಪುಸ್ತಕ ಮೊಳೆ ಹೊಡೆಸಿಕೊಂಡು ಅಲ್ಲಿ ಕುಳಿತಿತ್ತು.ಕೂತುಹಲದಿಂದಲೇ ಅದನ್ನೆತ್ತಿಕೊಂಡೆ.ಪುಸ್ತಕ ತೆರೆಯುತ್ತಿದಂತೆಯೇ ಪುಟಗಳಲ್ಲಿ ಅರಿಶಿನ ಕುಂಕುಮದ ಬೆರಳಚ್ಚುಗಳು!ಅದ ತಿರುವುತ್ತಿದಂಗೆ  ನೆನಪಾಯಿತು ಎರಡು ದಿನಗಳ ಹಿಂದೆಯಷ್ಟೇ ಕೆಲವು ಕನ್ನಡ ಪುಸ್ತಕಗಳನ್ನು ಆರ್ಡರ್ ಮಾಡಿದ್ದೆ.ಅವುಗಳು  ನಾನಿಲ್ಲದಾಗ ಮನೆಗೆ  ಡೆಲಿವರಿ ಆಗಿವೆ,ಆದರೆ ಎಂದೂ ಪುಸ್ತಕಗಳ ತೆಗೆದು ಓದದವರು  ಇದೇನಿದು ಅಚಾನಕ್ ಕವರ್ ತೆಗೆದು ಇಣುಕಿದಾರಲ್ಲ ಎಂದು ಆಶ್ಚರ್ಯ ಉಂಟಾಯಿತು.ಮುಖಪುಟದತ್ತ  ಗಮನವಿಟ್ಟು ನೋಡಿದಾಗ ಹೊಳೆಯಿತು ಈ ಬೆರಳಚ್ಚುಗಳ ಹಿಂದೆ ಅಮ್ಮನದೇ ಹಸ್ತವಿರಬೇಕು.ಯಾಕಂದರೆ "ದೇವರ ಹುಚ್ಚು" ಸ್ವಲ್ಪ ಅವಳಿಗೂ ಇದೆ,ಮುಖಪುಟದ ಮೇಲೂ,ಒಳಗಿನ ಬೆರಳಚ್ಚಿನ  ಬಣ್ಣದಲ್ಲೂ ಅದೇ ಪ್ರತಿಫಲಿಸುತಿತ್ತು.ದೇವರ ಹುಚ್ಚು ಪುಸ್ತಕವ ಹೊಸ ದೈವ ಸ್ತೋತ್ರವುಳ್ಳ  ಪುಸ್ತಕವೆಂಬ ತಪ್ಪು ಗ್ರಹಿಕೆಯೊಂದಿಗೆ  ಕಣ್ಣಾಡಿಸಿ ಗುರುತು ಬಿಟ್ಟಿದಳು ಅಮ್ಮ.ಹಾಗೆ ಅದು,ಅಮ್ಮನಿದ್ದ ಕಡೆಯಲ್ಲ ದೇವರ ಗುರುತಿರುತ್ತದೆ,ದೇವರಿದ್ದ ಕಡೆಯಲ್ಲ ಅಮ್ಮನ ನೆರಳು ಸೋಕಿರುತ್ತದೆ.ಅದೇಗೋ ಆ ಇಲ್ಲದ ದೇವರು ಅಮ್ಮನಿಗೆ ಸಿಕ್ಕಿಬಿಟ್ಟಿದ್ದ ಪೂರ್ಣವಾಗಿ ಅರ್ಥವಾಗಿಬಿಟ್ಟಿದ ಅಥವಾ ಅರ್ಥವಾಗಿದ್ದಾನೆ ಎಂಬ ಅನೂಹ್ಯ ಶ್ರದ್ದೆ ಭಕ್ತಿಯೊಳಗೆ  ನೆಮ್ಮದಿ  ಕಾಣುತ್ತಿದ್ದಳು.ಅದರಲ್ಲೇ  ತಲೀನಲಾಗುತ್ತಿದ್ದಳು  ಅಮ್ಮ.ಅವಳಿಗೆ ಅವನು ದಕ್ಕಿದಷ್ಟು ನನಗೆಂದು ದಕ್ಕಲಿಲ್ಲ.

ಶಾಲೆಯಲ್ಲಿ ಗುರುಗಳು ಅಮ್ಮನಲ್ಲಿ ದೇವರ ಕಾಣಬೇಕು ಎಂದು ಬೋಧಿಸಿಕೊಂಡೆ ಕಾಣದ ದೇವರ ಬಗ್ಗೆಯೂ ಭಕ್ತಿ ಆಸೆ ಎಲ್ಲೆ ಮೀರಿದ ನಿರೀಕ್ಷೆಗಳ ಹುಟ್ಟಿಸುತ್ತಿದ್ದರು,ಅದ ವಿಮರ್ಶಿಸಿ ಪ್ರಶ್ನಿಸುವಷ್ಟು  ಪ್ರಜ್ಞೆ  ಆಗಿರಲಿಲ್ಲ.ಬುದ್ಧಿ ಬಲಿತಂತೆಯೇ  ಮೂಡಿದ ಸರಣಿ ಅನುಮಾನಗಳಿಗೆ  ಉತ್ತರಿಸಲು ಅಂತಹ ಗುರುಗಳು ಮರು ಸಿಗಲಿಲ್ಲ,ಅದ್ಯಾಕೋ ಬಾಲ್ಯದಲ್ಲಿ ಕಲಿಸಿದ  ಅದೊಂದು ಪಾಠ ಮಾತ್ರ  ಮನಸಿನಲ್ಲಿ ಇಳಿದರು ಹೆಚ್ಚಿನ ಕಾಲ ಗಟ್ಟಿ ನಿಲ್ಲಲಿಲ್ಲ.ಮೊದಲಿಗೆ ಕಾಣದ ದೇವರ ವ್ಯಾಕರಿಣಿಸಿ ನಂತರ ಅಮ್ಮನಲ್ಲಿ ದೇವರ ಕಾಣುವುದನ್ನು ಕಲಿಸುವ ಅನಿವಾರ್ಯತೆಯಾದರು ಏನಿದೆ ಯಾರಿಗಾದರು? ನಂಗಂತೂ ಆ ಪಾಠ ಅನವಶ್ಯಕವೆನಿಸಿದಷ್ಟೇ  ಗೋಜಲು ಗೋಜಲುಮಯ.ಹಕ್ಕಿಗೆ ತನ್ನ ರೆಕ್ಕೆಯ ಮೌಲ್ಯವು ಹಾರುವುದು ಕರಗತವಾಗುತಿದ್ದಂತೆ ತಿಳಿಯದೆ ಹೋಗುವುದೇ? ಅರಿಯದೆ ಉಳಿಯುವುದು  ಭಾನಿನ ಎತ್ತರ.ಹಾರಿದಷ್ಟು ಮೇಲಕ್ಕೇರುವ ಭಾನು ಭ್ರಮೆಯೇ ಎನಿಸಲಾರಂಬಿಸುತ್ತದೆ.ಶಿಶು ಮಂದಿರದಲ್ಲಿ ಅನಾಥ ಶಿಶುಗಳ ಕಂಡ  ದಿನವೇ ದೇವರಂತ  ಅಮ್ಮ ಬೇಡವೆನಿಸಿದಳು ಅವಳು ಗಾಳಿಯಲ್ಲಿ ಲೀನವಾಗುವುದೋ  ಅಥವಾ ಕಲ್ಲಾಗುವುದೋ  ನನಗೆ ಬೇಕಿರಲಿಲ್ಲ.ಅಸಲಿಗೆ ಅಮ್ಮನಲ್ಲಿ ದೇವರಿಗಿಂತ,ದೇವರಲ್ಲಿ ಅಮ್ಮನನ್ನು  ಹುಡುಕುವ ತುರ್ತಿತ್ತು ನನಗೆ.

*
ಆ ಸಂಜೆಗತ್ತಲ ತಣ್ಣಗಿನ ನೀರವ  ಮೌನದಲ್ಲಿ ಅಮ್ಮ-ದೇವರುಗಳು ಜಂಜಾಟದ ಮಧ್ಯೆ  ರಾಧಾ ನೆನಪಾದಳು.ಎಲ್ಲರ ಬದುಕಲ್ಲಿ ಒಬ್ಬ ರಾಧೆ ಎಂದಾದರೂ ಬಂದೇ ತೀರುತ್ತಾಳೆ,ಬಂದಿಲ್ಲವಾದರೂ ಆಕೆಯ ಬಗ್ಗೆಗೆ ಎಲ್ಲಾದರೂ ಕೇಳಿಯೇ ತೀರುತ್ತೇವೆ.ಅವಳ ಬರುವಿಕೆಯಲ್ಲಿ ಇರುವಿಕೆಯಲ್ಲಿ ಸಾಂಗತ್ಯದಲ್ಲಿ ಮನಸಲ್ಲೊಂದು ವಿನೂತನ ಪ್ರೀತಿಯ ಅನುಭೂತಿ ಸಫಲಿಸುತ್ತದೆ ಅಂತವಳ ಪ್ರೀತಿ ತ್ಯಾಗದಿಂದಲೇ ಜಗತ್ತಿನ ಸಂಭಂದಗಳಲ್ಲಿ ಅನನ್ಯ ಭಾವವೊಂದು ಸಮ್ಮಿಲಿತವಾಗಿವೆ.ಹೌದು ರಾಧೆ ಹೆಣ್ಣಾಗಿ ಹೆಚ್ಚು ಸಲ್ಲುತ್ತಾಳೆ,ಹಾಗೆಂದು ಆಕೆ ಕೇವಲ ಹೆಣ್ಣಾಗಿಯೇ ಸಂಭವಿಸಬೇಕಂತಿಲ್ಲ.ರಾಧೆಯಂತೆ ಪ್ರೀತಿಯಲ್ಲಿ ಮಿಂದು ಅದರಲ್ಲೇ ಸಂಚರಿಸಿ ಕಳೆದು ಹೋಗುವ ಯಾವುದೇ ವಸ್ತುವಿನಲ್ಲಿ  ಪ್ರಾಣಿಯಲ್ಲಿ  ಮನುಷ್ಯನಲ್ಲಿ ರಾಧೆಯ ಅಂಶ  ಬೆರೆತಿರುತ್ತದೆ.ಆದರೆ  ನನ್ನರಿವಿನ ರಾಧೆ ಅಂದರೆ "ರಾಧಕ್ಕ" ವ್ಯಕ್ತಿ-ಪ್ರೀತಿಯಲ್ಲಿ ಮುಳುಗಿದ್ದ ಮಾಹಿತಿಯಿಲ್ಲ  ಆದರೆ ಅವಳ ಹೆಸರಂತೂ ರಾಧಾ,ಅವಳು ಕಳೆದು ಹೋಗಿದ್ದಳೆನ್ನುವುದು ಮಾತ್ರ ನಿಜ!

ಅದು ಕಾಲೇಜ್ ಸೇರಿದ ಮೊದಲ ದಿನಗಳು,ದೂರದ ಕಾಲೇಜ್ ಗೆ ನಿತ್ಯದ ಬಸ್ಸಿನ ಪ್ರಯಾಣದ ತೊಂದರೆಗಳು ಬೇಡವೆಂದು ಅಪ್ಪ ಮನೆಯ ಹತ್ತಿರವೇ  ಇದ್ದ ಪಿ ಯು ಕಾಲೇಜ್ಗೆ  ಸೇರಿಸಿದ್ದರು.ಮುಂದಿನ  ಶಿಕ್ಷಣಕ್ಕೆ ಯು ವಿ ಸಿ ಇ ಗೆ  ಸೇರಿ ಅದೇ ಪರಿಸ್ಥಿತಿ ಎದುರಾದಾಗ  ಅಷ್ಟು ಯೋಚಿಸಲಿಲ್ಲ ಅಪ್ಪ.ದಡ ಸೇರಬೇಕಾದರೆ ಸಮುದ್ರವನ್ನು ಒಮ್ಮೆಯಾದರು ಈಜಿಯೇ ತೀರಬೇಕು.ಆಳ ತಿಳಿಯದೆ ಸಮುದ್ರ ದಾಟಿಬಿಟ್ಟರೆ,ಅದ ದಾಟಿದ ಸಂಭ್ರಮದಲ್ಲಿ ಮನಸು ನಲಿಯುವುದಿಲ್ಲ,ಹೆಮ್ಮೆಯ ಭಾವವು ಹೊಮ್ಮುವುದಿಲ್ಲ.ಆದರು ಒಂದಿಂಚು ನೀರು ತಾಕದಂತೆ  ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಆದಷ್ಟು ಬೆನ್ನಿನ ಮೇಲೆ ಹೊತ್ತೊಯ್ದು ದಾಟಿಸಿ ಬಿಡಬೇಕೆಂಬ ಪೋಷಕರ ಹಂಬಲ,ತ್ಯಾಗ -ಪ್ರೀತಿಯ ಉದಾಹರಣೆಯ ಸಂಕೇತ.

ನಾನು ದಾಖಲಾಗಿದ್ದ ಪಿ ಯು ಕಾಲೇಜಿಗೆ  ತಲುಪಲು ಮನೆಯಿಂದ,ಮುಖ್ಯ ರಸ್ತೆ ಹಿಡಿದರೆ  ಸುಮಾರು ೨ ಕಿಲೋ ಮೀಟರ್,ಕಾಲು ದಾರಿಯಲ್ಲಾದರೆ ಒಂದೂವರೆ ಕಿಲೋ ಮೀಟರ್ ನಡೆದು ಸಾಗಬೇಕಿತ್ತು.ನಾವು ಗೆಳೆತಿಯರು ಸೇರಿದಂತೆ ನಮ್ಮ ಕಾಲೇಜ್ ಗೆ ಆ ಮಾರ್ಗವಾಗಿ ಬರುತ್ತಿದ್ದ ಬಹುತೇಕರು ಕಾಲು ದಾರಿಯೇ ಹಿಡಿಯುತ್ತಿದ್ದರು.ಧಾರ್ಮಿಕ ಭಾವನೆಗಳನ್ನು  ಶಾಲಾ ಕೊಟ್ಟಡಿಗಳ ಹೊಸ್ತಿಲೊಳಕ್ಕೆ  ದಾಟಿಸದ,ವಿಧ್ಯಾರ್ಥಿಗಳ  ಮನಸಿನೊಳಗೆ  ಭೇದಗಳ ಕಹಿ ನುಗ್ಗಿಸದ,ಧಾರ್ಮಿಕ ಸ್ಪರ್ಶವುಳ್ಳ ವಾತಾವರಣದಲ್ಲಿ ನೆಲೆನಿಂತ ವಿದ್ಯಾ ಸಂಸ್ಥೆಗಳು ಬಿತ್ತುವ ಶಿಕ್ಷಣ ಮೌಲ್ಯಧಾರಿತವಾಗಿರುತ್ತದೆ ಅನ್ನುವ ನಂಬಿಕೆವುಲ್ಲವಳು ಹಾಗೆಯೇ ಅಂತಹ ವಾತಾವರಣದಲ್ಲೇ  ಬೆಳೆದು ಬಂದವಳು ನಾನು.ಇದೊಂದು ವಿಚಾರದಲ್ಲಿ ದೇವರು ನಂಬಲಾರ್ಹ,ಸಹ್ಯ ವೆನಿಸುತ್ತಿದ್ದ,ಅಥವಾ ಅವನ ಸಹ್ಯವಾಗಿಸಲು ಇವೆಲ್ಲ ಬೆಳೆಸಿಕೊಂಡು ಬಂದರೆ? ಗೊತ್ತಿಲ್ಲ.ನಾನು ಶಾಲೆ ಕಲೆತದ್ದು  ಕ್ರಿಶ್ಚಿಯನ್ ಕಾನ್ವೆಂಟ್ ಒಂದರಲ್ಲಿ ಮತ್ತೆ ಪಿ ಯು ಸೇರಿದಾಗ ನಾವು ನಿತ್ಯ ಹಾದು ಹೋಗುತ್ತಿದ್ದ ಕಾಲೇಜಿನ  ಸಮೀಪದ ಕಾಲು ದಾರಿಯಲ್ಲಿ ಗಣೇಶ ದೇವಸ್ಥಾನವೊಂದು ಸ್ಥಾಪಿತವಾಗಿತ್ತು.ಅದೇ ದೇವಸ್ಥಾನ ಹಾದಿಯ ಆಸು ಪಾಸಿನಲ್ಲೋ  ಕಸದ ತೊಟ್ಟಿ ಬಳಿಯಲ್ಲೋ ಇತ್ತಿಚಿಗಿನ  ಕೆಲವು ವರ್ಷಗಳ  ಕೆಳಗೆ ಒಬ್ಬಳು ಸಿಗುತ್ತಿದಳು.ಹರಕಲು ಬಟ್ಟೆ,ಬಟ್ಟೆಯೋಳಗೊಂದು ಬಟ್ಟೆ ಮೇಲಿನ ಉಡುಪಿಗೂ ಕೆಳಗಿನ ಉಡುಪಿಗೂ ಯಾವುದೇ ಹೊಂದಿಕೆಯಿಲ್ಲದ ಬಣ್ಣ ಬಣ್ಣಗಳ ತೇಪೆವುಳ್ಳ  ಅಂಗಿ ಲಂಗ ಧರಿಸಿ ಒಮ್ಮೆ  ಹಲ್ಲುಕಿರಿಯುತ್ತಾ ಇನ್ನೊಮ್ಮೆ ಮುನಿಸಿಕೊಳ್ಳುತ್ತ ಮಗದೊಮ್ಮೆ ತನ್ನ ಕೆದರಿದ ಕೂದಲ ಗುಂಗುರನ್ನು ಬೆರಳಿಗಿಂತಲೂ ಒಂದಿಚ್ಚು ಉದ್ದ ಕಾಣುತ್ತಿದ್ದ ಉಗುರಿನಲ್ಲಿ ಆಡಿಸುತ್ತ  ವಿಲಕ್ಷಣ  ಮುಖಭಾವನೆ ಮೂಡಿಸಿ  ಚಿಕ್ಕವರೆಲ್ಲರಲ್ಲೂ  ಭಯ ಹುಟ್ಟಿಸುತ್ತಿದ್ದ  ೩೫ ವರ್ಷದ ಹೆಂಗಸವಳು,ಅವಳೇ  ನಮ್ಮ ರಾಧಕ್ಕ.         

ಮೊದಲ ದಿನ ರಾಧಕ್ಕ ನೋಡಿದಾಗ ಗುಂಪಿನಲ್ಲಿ  "ಅಯ್ಯೋ ಹುಚ್ಚಿ ರಾಧಕ್ಕಅಟ್ಟಿಸಿಕೊಂಡು ಬರುತ್ತಿದ್ದಾಳೆ ಓಡ್ರೋ" ಧ್ವನಿ ಕೇಳುತ್ತಲೇ ಎಲ್ಲರೊಂದಿಗೆ ಕಾಲು ಕಿತ್ತಿದ್ದೆ.
"ಯು ರಸ್ಕಾಲ್ ಕಿಡ್ಸ್,ಜಸ್ಟ್ ವೇಟ್ ಅಂಡ್ ಸೀ" ಅನ್ನುತ್ತ ಕಲ್ಲು ಹಿಡಿದು ನಮ್ಮಿಂದೇ  ಗದರುತ್ತಾ ಬರುತ್ತಿದ್ದಳು.ಅವಳನ್ನ ಪೋಷಿಸುತ್ತಿದ್ದದ್ದು ದೇವಸ್ಥಾನದ ಪ್ರಸಾದ,ಮೋರಿಗೆ ಬೀಳುತ್ತಿದ ಉಳಿದ ತಿಂಡಿ ತಿನಿಸುಗಳು.ಕೆಲವೊಮ್ಮೆ ತೀರ ದುಸ್ಥಿತಿಯಲ್ಲಿರುತ್ತಿದ್ದ ಅವಳಿಗೆ ಹತ್ತಿರದ ಮನೆಯ ಹೆಂಗಸರು ನೋಡಲಾಗದೆ  ಬಟ್ಟೆ ಊಟ ಕೊಡುತ್ತಿದ್ದರಂತೆ.

ಒಂದು ದಿನ ದೇವಸ್ಥಾನದ ಪ್ರಸಾದ ತಿನ್ನುತಿದ್ದ ಅವಳ ಬಳಿ, ಒಳಗೆ ಭಯ ಹೊರಗೆ ಕೃತಕ ಧೈರ್ಯ ತುಂಬಿಕೊಂಡು  ಬಿಮ್ಮನೆ ನಿಂತು ಬಿಟ್ಟೆ.ಪಕ್ಕದಲ್ಲೇ ಲೆಕ್ಕ ಮಾಡಿ ಕೂಡಿಸಿ ಇಟ್ಟಿಕೊಂಡಿದ್ದ ಕಲ್ಲುಗಳ ಆಯ್ದು ನನ್ನ ಮೇಲೆ ಎರಗಿದಳು.ಸಧ್ಯ ಕಲ್ಲೇ ತಾನೇ ಚಾಕು ಅಲ್ಲವಲ್ಲ ಏನು ಮಾಡುವಳೋ ನೋಡೋಣ ಎಂದು ಬಂಡತನದೊಂದಿಗೆ ಕಣ್ಮುಚಿ ನಿಂತಲ್ಲೇ  ಬೇರೂರಿದೆ.ಸ್ವಲ್ಪ ಸಮಯದ ನಂತರ ಕಣ್ಣ ತೆರೆದು ನೋಡಿದವಳಿಗೆ ಕಂಡಿದ್ದು ಕೆಳಗೆ ಬಿದ್ದ ನನ್ನ ದುಪ್ಪಟ್ಟವ ಮೃದುವಾಗಿ ಸವರುತ್ತಿದ್ದ ರಾಧಕ್ಕ. "ಹೌ ಮಚ್ ಇಟ್ ಕಾಸ್ಟ್?ನೈಸ್ ವೆರಿ ನೈಸ್" ಎಂದು ಜೋರು ನಗುತ್ತಿದಂತೆ ಅತ್ತು ಬಿಟ್ಟಿದಳು.

ಅವತ್ತಿನಿಂದ ರಾಧಕ್ಕನಿಗೆ ಹಿಡಿದ  ಹುಚ್ಚು ನನ್ನ ಕಣ್ಣಿನಲ್ಲಿ  ಗುಣವಾಗಿತ್ತು.ರಾಧಕ್ಕ ಯಾಕೆ ಹುಚ್ಚಿಯಾದಳು ಅವಳಿಗೆ ತನ್ನವರು ಅಂತ  ಯಾರು ಇರಲಿಲ್ಲವ? ಇವೆಲ್ಲವೂ ಕೊನೆಯ ವರೆಗೂ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿತ್ತು.ಎಷ್ಟು ಕೇಳಿದರು ಅವಳು ಹೇಳುತ್ತಿದ್ದದು,"ಐ ಆಮ್ ರಾಧಾ,ಬಿ.ಎ,ಡಿಗ್ರಿ" ಎಂದಷ್ಟೇ.ಎಲ್ಲಾದರೂ ಇಂಗ್ಲಿಷ್ ನ್ಯೂಸ್ ಪೇಪರ್ ಸಿಕ್ಕರೆ ಜೋರಾಗಿ ಓದಿ ಖುಷಿಯಿಂದ ನಲಿಯುತ್ತಿದ್ದಳು.ಕೆಲವರು ಅವಳ ಇಂಗ್ಲಿಷಿನ  ಧಾಟಿ ಕಂಡು ಹೊಟ್ಟೇ ಉರಿದು ಅವಳು ಓದಿ ಓದಿಯೇ ಹುಚ್ಚಿ ಆಗಿರಬೇಕು ಎಂದು ಆಡಿಕೊಳ್ಳುತ್ತಿದ್ದರು.ಅಸಲಿಗೆ ರಾಧಕ್ಕ ಕನ್ನಡಿಯಾಗಿದ್ದಳು,ಅವಳಿಗೆ ಅವಳು ಎಂದೂ ಕಾಣಲೇ ಇಲ್ಲ!ತಾನ್ಯಾರು ಎಂಬುವುದೇ ಮರೆತಿದ್ದಳು.ಭಯ ಬಿದ್ದು ಓಡಿದವರ ಹಿಂದೆ  ಆಕೆಯು ಓಡುತ್ತಿದ್ದಳು,ಕಲ್ಲು ಬೀಸಿದವರ ಮೇಲೆ ಕಲ್ಲು ಬೀಸುತ್ತಿದ್ದಳು.ನಿಂತವರ ಪಕ್ಕದಲ್ಲಿ ನಿಲ್ಲುತ್ತಿದ್ದಳು,ನಗುತ್ತಿದ್ದಳು ಅರಚುತ್ತಿದ್ದಳು ಅಳುತ್ತಿದ್ದಳು,ತಬ್ಬಿಕೊಂಡವರ ತಬ್ಬಿಕೊಳ್ಳುತ್ತಿದಳು.ಆದರೇಕೋ ಅತ್ಯಾಚಾರವೆಸಗಿದವರ ಮೇಲೆ ಅತ್ಯಾಚಾರವೆಸಗಳು ಅರಿಯದೆ ಸುಮ್ಮನಾಗಿಬಿಟ್ಟಿದಳು.ಕಡೆಗೆ ಭೂಮಿಗೆ ಬಾರದ ಕಂದಮ್ಮನೊಂದಿಗೆ  ನರಳಿ ಪ್ರಾಣಬಿಟ್ಟಿದಳು ಮುಗ್ದ ರಾಧೆ.
ನನ್ನೊಳಗೆ ಉಳಿದ  ರಾಧಾಳ ಪ್ರತಿಬಿಂಬ ನನ್ನ ದೃಷ್ಟಿಯಲ್ಲಿ ದೇವರನ್ನು ಕಲ್ಲಾಗಿಸಿತ್ತು.

*

"ಎಷ್ಟೊತ್ತು ಮಲಗೋದು?ಏನಾಯಿತು ಬಾಗಿಲು ತೆಗಿ"ಅಪ್ಪ  ಬಾಗಿಲು ಬಡೆಯುತ್ತಿದ್ದದು ಕೇಳಿತು.ದಿನದ ಆಯಾಸ  ಮರೆಯಲು ಮೂರು ಗಂಟೆ ಒಬ್ಬಳೇ ಚಿಲಕ ಹಾಕಿಕೊಂಡು ಲೋಕದ ಪರಿವಿಲ್ಲದಂತೆ ಯೋಚನೆಯಲ್ಲಿ ಮುಳುಗಿ ಹೋಗಿದ್ದವಳಿಗೆ ಎಚ್ಚರವಾಯಿತು.
"ಬಂದವಳು ಯಾರನ್ನು ಮಾತನಾಡಿಸದೆ ರೂಮಿನಲ್ಲಿ ಸೇರಿ ಇಷ್ಟೊತ್ತಾದರು ಎದ್ದಿಲ್ಲವೆಂದರೆ  ಏನು ತಿಳಿಯಬೇಕು ನಾವು" ಅಮ್ಮ ಸ್ವಲ್ಪ ಗಾಬರಿಯಲ್ಲಿ ಕೇಳಿದಳು.
"ಅರ್ಧ ಗಂಟೆಯಿಂದ ಬಾಗಿಲು ಬಡಿಸಿ ನೀ ಐದು ವರ್ಷದವಳಾಗಿದ್ದಾಗ ಮೆಜೆಸ್ಟಿಕ್ ನಲ್ಲಿ  ಕಳೆದು ಹೋದ ದೃಶ್ಯಗಳು ನೆನಪಾಗುವಂತೆ ಮಾಡಿದೆಯಲ್ಲ"ಅಂದರು ಅಪ್ಪ ಕಂಗಾಲಾಗಿ.

ಹೌದು... ನಾನು ಅಂದು ಕಳೆದು ಹೋಗಿದ್ದರೆ.............

ಕೊಚ್ಚಿದ ಎಳೆ ನೀರು ಕೈಗಿತ್ತು,ಕುಡಿದು ಊಟಕ್ಕೆ ಬಾ ಎನ್ನುತ್ತಾ ನಡೆದು ಹೋದ ಅಪ್ಪ ಅಮ್ಮನ ನೋಡಿ ಯಾಕೋ ದೇವರು ಕೆಲವರ ಪಾಲಿಗೆ ಅಮ್ಮನಂತಾಗುತ್ತಾನೆ ಅನಿಸಿಬಿಟ್ಟಿತು.......

*
ದೇವರು ರಾಧೆಯಾಗಿದ್ದ.



6 comments:

  1. ನಿಜ ಹತ್ತಿರದವರ ಸಾವುಗಳು ಮನಸನ್ನು ವಿಹ್ವಲ ನಾಡಿಡುತ್ತವೆ.

    ನಿಮ್ಮ ರಾಧಕ್ಕ ಓದಿದಾಗ ನನಗೆ ನೆನಪಾದದ್ದು ಮಲ್ಲೇಶ್ವರಂ ಶಾಲೆಯ ಪ್ರಾಂಶುಪಾಲನೊಬ್ಬ ಬೀದಿಗಟ್ಟಿದ್ದ ಅವರ ಮಡದಿಯ ಬಗೆಗೆ. ಆಕೆ ಎಲ್ಲೆಂದರಲ್ಲಿ ಹುಚ್ಚಿಯ ಹಾಗೆ ಅಲೆಯುತ್ತ, ಏನು ಸಿಕ್ಕರೂ ಅದನ್ನು ಬೀದಿಗೆ ತಳ್ಳಿದ ಭೂಪ ಗಂಡನಿಗೇ ಹೊತ್ತೋಯ್ಯುತ್ತಿದ್ದ ಚಿತ್ರ.

    ಬಹಳ ಕಾಡಿಸುತ್ತದೆ ನಿಮ್ಮ ಬರಹಗಳು.

    ReplyDelete
  2. ರಂಗ್ ದೇ ಬಸಂತಿ ಸಿನಿಮಾದಲ್ಲಿ ನಾಯಕ ಮಲಗಿದ್ದಾಗ ಅಂಗ್ಲ ನಾಯಕಿ ಹೇಳುತ್ತಾಳೆ.ಅವನು ಮಲಗಿಲ್ಲ...ಅಂತರಂಗದಲ್ಲಿ ಎಚ್ಚರವಾಗುತ್ತಿದ್ದಾನೆ ಎಂದು...ನಿಮ್ಮ ಲೇಖನದಲ್ಲೂ ಹಾಗೆ..ಒಳಗಿರುವ ಅಂತರಾತ್ಮವನ್ನು ಎಬ್ಬಿಸುತ್ತಲೇ ಕಾಣುವ ದೇವರನ್ನು ಕಾಣದ ದೇವರನ್ನು ಕಾಣಿಸುವ ಯಶಸ್ಸು ಕಾಣುತ್ತದೆ..ರೋಲರ್ ಕೋಸ್ಟರ್ ನಂತೆ ಪ್ರತಿಯೊಂದು ಮಾನವ ಭಾವಗಳ ಮೇಲೆ ಹರಿಯುವ ಪದಗಳ ಲಹರಿ ಮನಸಿಗೆ ಹಾಯ್ ಎನಿಸುತ್ತಲೇ ಪ್ರಪಂಚ ಏಕೆ ಕೆಲವರಿಗೆ ಘೋರ ಅನುಭವ ಕೊಡುತ್ತದೆ ಎನ್ನುವ ಪ್ರಶ್ನೆ ಉತ್ತರ ಸಿಗದೇ ಕೈ ಜಾರಿ ಹೋಗುತ್ತದೆ..
    ಸುಂದರ ಬರಹ..ಇಷ್ಟವಾಯಿತು...ಕಣ್ಣಂಚಲ್ಲಿ ಜಾರಿದ ಆ ಬಿಂದು ನಿಮ್ಮ ಲೇಖನ ಮನದಾಳಕ್ಕೆ ಇಳಿದಿದೆ ಎನ್ನುವುದಕ್ಕೆ ಪುರಾವೆ ಒದಗಿಸಿತು...

    ReplyDelete
  3. ಮಾನಸಲೋಕದ ಪರಿಗಳನ್ನು ಸಂಯಮದಿಂದ ಚಿತ್ರಿಸಿದ್ದೀರಿ. ಇದು ಒಳನೋಟದ ಬರಹ!

    ReplyDelete
  4. ಚೆನಾಗಿದೆ ಕಣೆ ವೈಶು...
    ಅಲ್ಲಿ ಬಳಿಸಿರುವ ಪದಗಳು ಬಹಳ ಇಷ್ಟವಾಯ್ತು...
    ಹಮ್..ಮಾನವ ದೊಡ್ಡದು ಅಷ್ಟೇ..
    ಬರೆಯುತ್ತಿರಿ..
    ಹಾಂ ಅಲ್ಲಿ ರಾಧಕ್ಕನ ಬಗ್ಗೆ ಹೇಳುತ್ತಾ ಇದ್ದವರು ನೇರವಾಗಿ ಅವಲು ಕನ್ನಡಿಯಾಗಿದ್ದಳು ಎಂಬಲ್ಲಿ ಯಾಕೋ ವೇಗ ಜಾಸ್ತಿಯಾಯಿತೇನೋ ಅನಿಸಿತು..ಗೊತ್ತಿಲ್ಲ ಅದನ್ನೇ ಬೇರೆ ಪ್ಯಾರಾ ಮಾಡಿದ್ದರೆ ಉಚಿತವಿತ್ತೇನೋ ಗೊತ್ತಿಲ್ಲ..ನೋಡಿ...
    ನಮಸ್ತೆ

    ReplyDelete
  5. ಒನ್ ಮೊರ್ ಟಿಪಿಕಲ್ ವೈಶು ಬರಹ.. :-)

    ಅಮ್ಮನನ್ನು ದೇವರೊಡನೆ ಥಳುಕು ಹಾಕಿ ಬರೆದ ಸಾಲುಗಳು ತುಂಬಾ ಹಿಡಿಸಿದವು.

    .

    ೧.) "ಭೂಮಿಗೆ ಬಾರದ ಕಂದಮ್ಮನೊಂದಿಗೆ ನರಳಿ ಪ್ರಾಣಬಿಟ್ಟಿದಳು ಮುಗ್ದ ರಾಧೆ.
    ನನ್ನೊಳಗೆ ಉಳಿದ ರಾಧಾಳ ಪ್ರತಿಬಿಂಬ ನನ್ನ ದೃಷ್ಟಿಯಲ್ಲಿ ದೇವರನ್ನು ಕಲ್ಲಾಗಿಸಿತ್ತು."

    .

    ೨.) "ಹೌದು... ನಾನು ಅಂದು ಕಳೆದು ಹೋಗಿದ್ದರೆ............. "

    .

    .

    ನೋಡು ವೈಶೂ .... ದೇವರ ಅಸ್ತಿತ್ವಕ್ಕಿರುವ ಅಂತರವೆಷ್ಟು ಅಂತ :-) {ಪರಿಶುದ್ಧ ಮಂದಹಾಸ}

    ಸಾಕಷ್ಟು ಬಾರಿ ಹೇಳಿದ್ದೀನಿ ನಿನಗೆ, ದೇವರು ಎಲ್ಲಿದ್ದಾನೆ ಅಂತ.

    ದೇವರು..............................

    फिर से उसे दोहराना ................. mmmm जरूरी हैं क्या।? }

    ReplyDelete
  6. ನನಗೆ ನಿನ್ನ ಬರಹಗಳಲ್ಲಿ ಇಷ್ಟು ದಿನಕ್ಕೆ ದಿ most favourite ಅನಿಸಿದ್ದು ಇದು. ಸತ್ಯವಾಗಲೂ..

    ಬಹಳ ಒಳ್ಳೆಯ ಲೇಖನ.. ದೇವರ ಹುಚ್ಚು ಪುಸ್ತಕ ಬಂದಿದೆ ಅಂತಾಯ್ತು. ನೇರ ಆ ಪುಸ್ತಕದಿಂದ ಅದನ್ನ ತಳುಕು ಹಾಕಿಕೊಂಡು ಸ್ಕೂಲು ಕಾಲೇಜಿನ ಧಾರ್ಮಿಕ ಮನೋಭಾವಗಳ ಕುರಿತು ಬೇಳಕು ಚೆಲ್ಲುತ್ತಾ.. ದಾರಿಯಲ್ಲಿನ ಗುಡಿ ಮತ್ತು ಅದರ ಮುಂದೆ ನಿನಗೆದುರಾದ ಆ ನಿಸ್ಸಹಾಯಕ ಹೆಣ್ಣು.. ಅದರ ಮೇಲಾದ ದೌರ್ಜನ್ಯ.. ಅದಕಾದ ಅನ್ಯಾಯಗಳನ್ನೆಲ್ಲ ಬಳಸಿಕೊಂಡು.. ಅದಕೆ ಕ್ರುದ್ದಳಾಗಿದ್ದ ಅವಳಲ್ಲಿ ದೇವರನ್ನು ಕಂಡ.. ಕೊನೆಗೆ ನೀನು ಅಮ್ಮನಲ್ಲಿ ದೇವರನ್ನ ಕಂಡ ಪರಿ ಬಹಳ ಜನಕ್ಕೆ ಸಾಧ್ಯವಿಲ್ಲ. ಈ ವಿಚಾರವನ್ನ ನನ್ನದೇ ಕೈಗಿತ್ತರೂ ಇದು ಇನ್ನೇನೋ ಆಗಿ ಕೊನೆಗೆ ರಾಧಕ್ಕನ ಸಾವಿನಲ್ಲೆ ಇದರ ಮುಂದಿನ ಆಯುಷ್ಯವನ್ನೂ ಹೂತು ಬಿಟ್ಟಿರುತ್ತಿದ್ದೆ.. ಅದನ್ನ ತೀರ ಒಂದು ಸಿಲ್ಲಿ ಅನ್ನಿಸೋ ಅಂತ್ಯ ಕಟ್ಟಿ ಕೊಟ್ಟು ಬಿಡುತ್ತಿದ್ದೆ.. ನೀನದನ್ನು ಮುಕ್ತಾಯ ಗೊಳಿಸಿದ ಪರಿ ಅಮೋಘ. ಮತ್ತೆ ಮತ್ತೆ ಇದನ್ನ ಮೂರು ಸಾರಿ ಓದಿಸಿ ಕೊಳ್ಳುವಂತೆ ಮಾಡಿತ್ತು. ಅದ್ಭುತ ಲೇಖನ.. ನಮ್ಮ ಕಲ್ಪನೆ ಮತ್ತು ಕುತೂಹಲಗಳನ್ನ ಮೀರಿಸಿ ಮತ್ತೆ ಮತ್ತೆ ನೀನು ನಿನ್ನ ಬಲ ಪ್ರದರ್ಶನ ಮಾಡ್ತಾ ನಿನ್ನ ಸಾಮರ್ಥ್ಯವನ್ನ ನಮಗೆ ತೋರಿಸ್ತಾ ಮಂತ್ರ ಮುಗ್ಧರನಾಗಿ ಮಾಡ್ತಾ ಇದ್ದೀಯ. ಅದು ನಿಜ. ಸಾವಿರ ಪಾಲು ನಿಜ.

    ಕಥೆ ಮುಗಿದರೂ.. ಬರೆದ ನೀನೂ, ಕಥೆಯೊಳಗಣ ರಾಧಕ್ಕನು.. ಒಂದು ವಿಧವಾಗಿ ಕಾಡ್ತಾ ಹೋಗ್ತೀರಿ. ಎರಡಕ್ಕೂ ಕಾರಣ ಹೇಳಬೇಕಾದ ಜರೂರತ್ತಿಲ್ಲ. ಮೆಜೆಸ್ಟಿಕ್ ನಲ್ಲಿ ಕಳೆದು ಹೋಗಿದ್ದ ನೀನು ಬಹುಷಃ ಮತ್ತೆಂದೂ ನಿನ್ನಾಪ್ತರಾರ ಕೈಗೆ ಸಿಗಲಾರದೆ ಹೋಗಿದ್ದಲ್ಲಿ ನಿನ್ನ ಕಥೆಯ ಸ್ವರೂಪವೂ ಬೇರೆಯೇ ಆಗಿರುತ್ತಿತ್ತೇನೋ..?? ನಿಜ ಕೆಲವರ ಪಾಲಿಗೆ ದೇವರಿರ್ತಾನೆ. ಕೆಲವರ ಪಾಲಿಗಿರೋದಿಲ್ಲ.

    ದೇವರು ರಾಧೆಯಾಗಿದ್ದ.. ಮುಕ್ತಾಯ ಬಹಳ ಇಷ್ಟವಾಯ್ತು. :)

    ReplyDelete