Friday, January 25, 2013

ಸಿದ್ಧಾರ್ಥನ ಮಡದಿ ಯಶೋಧರೆ!

ಚಳಿಗಾಲದ ಸಂಜೆ ಅದು.ಜನನಿಬಿಡವಿಲ್ಲದೆ  ನೀರವ ಮೌನ ಆವರಿಸಿದ ಪಾರ್ಕಿನ ಒಂದು ಕಲ್ಲು ಬೆಂಚು ಅವಳ ಉಪಸ್ಥಿತಿಯಿಂದ ಬೆಚ್ಚಗಾಗಿದೆ.ಹಳದಿ ಹೂವಿನ ರಾಶಿ ಹರಡಿಕೊಂಡು ಕೈಲಿದ್ದ ಸೆವಂತಿಯ ಪಕಳೆಗಳ ಒಂದೊಂದೇ  ಕೀಳುತ್ತ  ಮೆಲ್ಲಗೆ ಮನಸಿನಲ್ಲಿ ಹೇಳಿಕೊಳ್ಳುವಂತೆ ಮಾತುಗಳ ಉಸುರುತ್ತ ಕುಳಿತ್ತಿದ್ದಾಳೆ ಆಕೆ.ಮೃದು ಹಸಿರು ಬಣ್ಣದ ಸೀರೆ,ಅಲ್ಲಲ್ಲಿ ಸೇವಂತಿ ಹೂವಿನ ಚಿತ್ತಾರವಿರುವ ಕಪ್ಪನೆಯ ಸ್ವೆಟರ್,ಹಸ್ತಗಳಿಗೆ ಅದೇ ಬಣ್ಣದ ಮ್ಯಾಚಿಂಗ್ ವುಲನ್ ಗ್ಲೌಸ್,ಪಾದಗಳಿಗೆ  ಸಾಕ್ಸ್ ತೊಟ್ಟು ಕೊಳದಲ್ಲಿ ಹಲ್ಲು ಕಿರಿಯುತ್ತಿದ್ದ  ಸೂರ್ಯನ ಬಂಗಾರದ ರೂಪವ ನೋಡುತ್ತಿದ್ದ  ಅವಳ ಕಳೆಗುಂದಿದ ಕಣ್ಣುಗಳಲ್ಲಿ  ವಿಶ್ವಾಸವಿಲ್ಲ.ಆದರೆ ಬೆರಳುಗಳಿಗಿವೆ! ಅದರಿಂದಲೇ ಅವುಗಳು ಆ ಸೇವಂತಿ ದಳಗಳನ್ನು  ಹವಿಸಾಗಿ ಅರ್ಪಿಸುತ್ತಿದ್ದಾವೆ.

ಬೆಳಗೆ ನಡೆದ ಜಗಳ ಅವನ ಮೇಲಿದ್ದ ಅಷ್ಟು ವರ್ಷದ  ಪ್ರೀತಿಯನ್ನು ಕಿತ್ತುತಿಂದಿತ್ತು.ಎಷ್ಟು ದಿನ ಅಂತ ನೋವನ್ನು ಸಹಿಸಿಕೊಳ್ಳೋದು ಅತ್ತೆಯ ಚುಚ್ಚು ಮಾತುಗಳು,ಅವನ ನಿರ್ಲಕ್ಷತೆ.ನಾನೇ  ಎಲ್ಲಾದರು   ದೂರ ಮರೆಯಾಗಿ ಹೊರಟುಬಿಡಬೇಕು ಅನ್ನೋ ಆಲೋಚನೆಯಲ್ಲಿ  ಮುಳುಗಿತ್ತು ಅವಳ ಮನಸು.

ಮತ್ತೊಮ್ಮೆ, ಬೆರಳುಗಳು  "ಹೋಗುವುದಾ? ಬೇಡವ?... ಹೋಗುವುದಾ? ಬೇಡವ?... ಹೋಗುವುದಾ? ಬೇಡವ?......"ಎಂದು  ಒಂದೊಂದಾಗೆ ಹೂವುಗಳ ಬಲಿಕೊಡುವ ಆಟ ಶುರು ಮಾಡಿದ್ದವು.

 'ಇಲ್ಲ!!' ಬೆರಳುಗಳು  ಸ್ಥಬ್ದವಾದವು.ನನ್ನ ಹುಚ್ಚು ಮನಸಿನ ಚಂಚಲತೆಗೆ ಇವುಗಳಾದರು ಯಾಕೆ ಬಲಿಯಾಗಬೇಕು? 'ನನ್ನ ಅವನ  ಪ್ರೀತಿಯ  ಭಾರಿ ಮೊತ್ತವ  ನಾವೇ ತೆತ್ತುತ್ತೇವೆ' ಅನ್ನುತ್ತಾ  ಛಿದ್ರವಾಗದೆ ಉಳಿದ ಹೂವಗಳ  ಹೆಕ್ಕಿಕೊಂಡು ಕೊಳಕ್ಕೆ ಹಾಕುವ ಇರಾದೆಯಿಂದ ಅಲ್ಲಿಂದ ಏಳಲು ಹೊರಟ ಅವಳನ್ನು ಹಿಂದಿನಿಂದ  ಯಾರೋ ಕೈ ಹಿಡಿದು ಎಳೆದರು.

ಅವಳು ಬೆಂಚಿನಿಂದ ಅಲುಗಾಡಲಿಲ್ಲ.'ಈ ನಿರ್ಜನ ಸ್ಥಳದಲ್ಲಿ ಇದ್ಯಾರು ನನ್ನ ಕೈ ಹಿಡಿದವರು'ಒಳಗಿಂದ ಬಂದ ಆ ಮಾತು ತಾನಿಲ್ಲಿ ಒಂಟಿ ಹೆಂಗಸು ಎಂಬುದ ನೆನಪಿಸಿದ ಅರೆಕ್ಷಣದಲ್ಲಿ ಆ  ಭೀಕರ ಚಳಿಯಲ್ಲೂ  ಬೆವರ ತೊಡಗಿದಳು.ಕೂತ್ತಲ್ಲೇ ನಡುಗಿದಳು,ಗಾಬರಿಗೆ  ಹೃದಯದ ಬಡಿತವು  ಹೆಚ್ಚಾಯಿತು.

ಕಳ್ಳನಿರಬಹುದು?ಕಟುಕನ?ಅಥವಾ ದುಷ್ಟನ? ತಿರುಗಿ ನೋಡೇ ಬಿಡೋಣ ಅನಿಸಿತು.ಆದರೆ ಧೈರ್ಯ ಸಾಲದೇ ಮೆಲ್ಲಗೆ ಕಣ್ಣಂಚನ್ನು  ಓರೆ ಮಾಡಿ ನೋಡಲು ಪ್ರಯತ್ನಿಸಿದಳು,ಏನು ಕಾಣಲಿಲ್ಲ.ಅತ್ತಿದ್ದರ ಪ್ರಭಾವವೋ ಏನೋ  ಕಣ್ಣುಗಳೆಲ್ಲ ಪದರು ಪದರು ಅಂದುಕೊಳ್ಳುತ್ತಾ,ನೆಲಕ್ಕೆ ಕಣ್ಣು ನೆಟ್ಟಳು,ಅವಕ್ಕೆ ಚರ್ಮದ ಚಪ್ಪಲಿ ಧರಿಸಿದ  ಪಾದಗಳು ಸೆರೆಯಾದವು.ಓ ಗಂಡಸೆ! ಎದೆ ಧಗ್ ಎಂದಿತು.ಸಾವರಿಸಿಕೊಂಡು ಇನ್ನೊಮ್ಮೆ ಕಣ್ಣು ಚಿಕ್ಕ ಮಾಡಿ ಸೂಕ್ಷ್ಮಾವಾಗಿ ಪಾದಗಳನ್ನು ಗಮನಿಸಿದಳು.ಸುಕ್ಕಾದ ಮೈ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ ಉಗುರು ಸುತ್ತು,ಏನಿದ್ದರು ಎಪ್ಪತ್ತರ ಆಸು ಪಾಸಿನ ಮುದುಕ,ಸಧ್ಯ ನಿರುಪದ್ರವಿ ಎಂದು ಅವನೆಡೆಗೆ ಮುಖ ತಿರುಗಿಸಿದಳು.
 
"ಯಾರು ನೀವು?ನನ್ನ ಕೈ ಯಾಕೆ ಹಿಡಿದಿರಿ?" ಸಿಟ್ಟು ತಂದುಕೊಂಡು ಕೇಳಿದಳು ಅವಳು.
 "ನಾನು ಇಲ್ಲೇ ಆಚೆ ಬೀದಿಯಲ್ಲಿ ಮನೆ.ನೀವ್ಯಾರು? ಹೀಗ್ಯಾಕೆ ಒಬ್ಬರೇ ಈ ಮರದಡಿ ಕೂತಿದ್ದೀರ?" ಗಂಭೀರವಾಗಿ ಪ್ರಶ್ನಿಸಿದ ಮುದುಕ.

"ನಿಮಗ್ಯಾಕೆ ಅದೆಲ್ಲ? ನೀವೇನು ನನ್ನ ನೆಂಟರೆ? ಈ ಪಾರ್ಕ್ ನಿಮ್ಮದೇ?ಅಥವಾ ಈ ಮರ ನಿಮ್ಮದೇ?" ಅಂದಳು.ಅಷ್ಟಕ್ಕೂ ಯಾರು ಈ  ಮುದುಕ? ತುಂಬಾ ಹೊತ್ತಿನಿಂದ ನನ್ನ ಚಲನವಲನಗಳ  ಗಮನಿಸಿರಬೇಕು,ನಾನೆಲ್ಲಿ ಕೊಳ್ಳಕ್ಕೆ ಹಾರಿಕೊಳ್ಳುತ್ತೇನೋ ಅನ್ನೋ ಭಯದಿಂದ ಕೈ ಹಿಡಿದಿದ್ದಾನೆ ಅನಿಸುತ್ತೆ.

"ಹಾಗಲ್ಲ ಈ ಜಾಗ ಅಷ್ಟು ಸುರಿಕ್ಷಿತವಾಗಿಲ್ಲ,ಒಂಟಿಯಾಗಿ ಇಲ್ಲೆಲ್ಲಾ ಬರಬಾರದು ಕಣಮ್ಮ"  ಕೈಯಿಂದಲೇ ಸ್ವಲ್ಪ ಜರಗಿ ಅಂತ ಸೂಚಿಸಿ ಬೆಂಚಿನ ಮೇಲೆ ಅವಳ ಬಲಕ್ಕೆ ಕುಳಿತ.

"ನೋಡಿ ಇವ್ರೆ...ನನಗೆ ಬುದ್ಧಿ ಹೇಳೋ ಅಗತ್ಯ ಇಲ್ಲ ಅದೇನಿದ್ದರು ನನ್ನ ಗಂಡನಿಗೆ ಹೇಳಿ.ಅವನಿಂದಲೇ ಈ  ಸ್ಥಿತಿ ಬಂದಿರೋದು"

"ಓ ಹಾಗ,ಸರಿ ಅವನ ಹೆಸರೇನು?ಎಲ್ಲಿಯವನು? ನಿಮ್ಮಿಬ್ಬರ ಮಧ್ಯ ಬಂದಿರುವ ಸಮಸ್ಯೆಯಾದರೂ ಏನಮ್ಮ?"

 "ಅವನ ಹೆಸರು ಸಿದ್ಧಾರ್ಥ.ನೋಡಿ ಇವ್ರೆ...ನಿಜ ಹೇಳ್ತೀನಿ,ನನ್ನ ಗಂಡನಿಗೆ ಸ್ವಲ್ಪವು ಜವಾಬ್ದಾರಿ ಇಲ್ಲ.ತುಂಬಾ ನಿರ್ಲಕ್ಷೆತೆವುಳ್ಳ  ಮನುಷ್ಯ ಅವನ ಕಾಯಕವೇ ಅವನಿಗೆ ದೊಡ್ಡದು. ಕೆಲಸದ ನೆಪ ಹೇಳಿ ಮುಂಬೈಗೆ ಹೋಗಿದ್ದಾನೆ.ಹೋದವನು ಈ ಕಡೆ ಮುಖ ಹಾಕಿಲ್ಲ.ಮತ್ತೆ ಮನೇಲಿ ಅತ್ತೆಯ ಪಿರಿಪಿರಿ ಬೇರೆ ಹಾಗಾಗೆ ಎಲ್ಲರನ್ನು ಬಿಟ್ಟು ತೆರಳುವ ಯೋಚನೆ ಮಾಡಿದ್ದೀನಿ ಅಂದಾಗೆ ನಿಮ್ಮ ಹೆಸರು?" ಒಂದೇ ಉಸಿರಿನಲ್ಲಿ ಉತ್ತರ ಹೇಳಿ ಪ್ರಶ್ನೆಯು ಹಾಕಿದಳು.

"ಹೌದೌದು ಗಂಡ ಹೆಂಡಿರ ನಡುವೆ ಅತ್ತೆ ಮಾವಂದಿರು ಮೂಗು ತೂರಿಸಬಾರದು.ವಯಸ್ಸಾದ ಮೇಲೆ ಮಕ್ಕಳನ್ನು ದೂರದಿಂದಲೇ ನೋಡಿ ಸಂತೋಷಿಸಬೇಕು.ಗಂಡನಾಗಿ ಅವನು ನಿನ್ನನ್ನು ತನ್ನೊಂದಿಗೆ ಕರೆದುಕೊಂಡು  ಹೋಗಬೇಕಿತ್ತು ಅದುವೇ  ಧರ್ಮ,ಸರಿಯಾಗಿದೆ ನಿನ್ನ ಹಂಬಲ.ನನಗ್ಯಾಕೋ ನಿನ್ನ ಗಂಡ ಸರಿಯಿಲ್ಲ ಅನಿಸುತ್ತಿದೆ.",

"ನೋಡಿದ್ರ ಇವ್ರೆ, ನಿಮಗೂ ಹಾಗೆ ಅನಿಸಿದೆ.ಮದುವೆಯಾದ ಹೊಸತರಲ್ಲಿ ಎಷ್ಟು ಖುಷಿಯಿತ್ತು ಗೊತ್ತ? ದಿನ ಗುಲಾಬಿ ಹೂವು ತಂದು ಮೂಡಿಸುತ್ತಿದ್ದ ತುಂಬಾ ಪ್ರೀತಿಸುತ್ತಿದ್ದ.ನೀ ದಾರಿ ತಪ್ಪಿದರೆ  ಆ ದಾರಿಗೆ ಸವಾಲಾಕುತ್ತೇನೆ ಹೊರತು ನಿನ್ನನೆಂದು  ದುಷಿಸೋಲ್ಲ ಎಂದಿಗೂ ಮನಸ ನೋವಿಸಲ್ಲ.ಯಾವುದೇ ವಿಷ ಗಳಿಗೆ ಎದುರಾದರು ನಿನ್ನ  ಕೈ ಮಾತ್ರ ಬಿಡೋಲ್ಲ ಅನ್ನುತ್ತಿದ್ದ.ಆಮೇಲೆ ಏನಾಯ್ತು ಅಂದ್ರೆ... ಎಲ್ಲಂದರಲ್ಲಿ ಯಾರ ಯಾರ ಮನೆಯಲ್ಲೋ ಅಪರಿಚಿತರ ನಡುವೆ ಇರಲು ಬಿಟ್ಟು ಮರೆಯಾಗಿದ್ದಾನೆ ನನಗೂ ಸಾಕಾಗಿದೆ.ಅಷ್ಟಿಷ್ಟು ಪಾಡು ಪಟ್ಟಿಲ್ಲ ನಾನು ಮಗುವ ಕಟ್ಟಿಕೊಂಡು.ಮೊದಲೆಲ್ಲ ಗುಲಾಬಿ ಹೂವಿನ ದಳಗಳ ಕಿಳುತ್ತ ಅವನಿಗಾಗಿ ಕಾಯುತ್ತಿದ್ದೆ.ಇಗಾ  ಸೇವಂತಿಗೆಗೆ ಬಂದಿದ್ದೇನೆ.ಅಂದಾಗೆ ನಿಮ್ಮ ಹೆಸರು?" ಕಣ್ಣೀರಾಡಿದಳು.

"ನನ್ನ ಹೆಸರ........?? ನೆನಪಿಲ್ಲ.....ವಯಸ್ಸಾಯ್ತು ಒಂದೂ ನೆನಪಿರೋಲ್ಲ....ನನ್ನ ಹೆಸರು ಬಂದು...ಅದಿರಲಿ ನೀನು ಕಣ್ನೀರಿಡೊದನ್ನ ಮೊದಲು ನಿಲ್ಲಿಸು.ನೀನೆಳುವುದ ನೋಡಿದರೆ ನಿನ್ನ ಗಂಡ ನೀಚನೆ ಇರಬೇಕು,ಎಷ್ಟೊಂದು ಮಾನಸಿಕ ಉಪಟಳ ನೀಡಿದ್ದಾನೆ.ಅಂತವನನ್ನ ಬಿಟ್ಟು ಬಂದಿದ್ದೆ ಒಳ್ಳೆದಾಯ್ತು ಬಿಡು."

ಅವಳ  ಸೆರಗಲಿದ್ದ ಹೊವಗಳ ಕಂಡು,ತಡಿ ಆ ಹೂವುಗಳನ್ನ ನಾನೇ ಕೊಳಕ್ಕೆ ಹಾಕುತ್ತೇನೆ ಎನ್ನುತ್ತಾ ಪಕ್ಕದಲ್ಲಿದ್ದ ಕೊಳ್ಳದ ನೀರಿನಲ್ಲಿ  ಅವನೆಲ್ಲಾ ತೇಲಿ ಬಿಟ್ಟ.

ಅಲ್ಲಾ,ಯಾಕೆ ಈ ಮುದುಕ ಒಂದೇ ಸಲ ನನ್ನ ಗಂಡ ಕೆಟ್ಟವನು ಅನೋದನ್ನ ಒಪ್ಪಿದ?ನನ್ನ ಓಲೈಸಲು ನೋಡುತ್ತಿರಬಹುದೇ? ಛೆ...ಈ ವಯಸ್ಸಿನಲ್ಲಿ ಅಂತ ದುರ್ಬುದ್ದಿ ಇರಲಿಕ್ಕಿಲ್ಲ.

"ಮುದುಕಪ್ಪ ನಿಮ್ಮ ಮನೆ ಎಲ್ಲಿದೆ? ನಿವ್ಯಾಕೆ ಇಲ್ಲಿಗೆ ಬಂದಿರುವಿರಿ? ನಿಮ್ಮ ಮಕ್ಕಳು ಹೆಂಡತಿ ಯಾರು ಜೊತೆ ಬರಲಿಲ್ಲವೇ?"

"ಮಗ ಸೊಸೆ ಲಂಡನ್ನಲ್ಲಿದ್ದಾರೆ.ಎರಡು ವರ್ಷಕೊಮ್ಮೆ ಬರುತ್ತಾರೆ.ಕಂಪ್ಯೂಟರನಲ್ಲಿ ವಾರಕೊಮ್ಮೆ ಮಾತಿಗೆ ಸಿಗ್ತಾರೆ.ನನ್ನ ಹೆಂಡತಿಗೆ ಅದೆ ಕೊರಗು,ಜೊತೆಗೆ ವಿಚಿತ್ರ ಕಾಯಿಲೆ ಬೇರೆ,ಯಾವುದೋ ಹಳೆ ಗುಂಗಿನಲ್ಲಿರುತ್ತಾಳೆ.ಮಾನಸಿಕವಾಗಿ ತುಂಬಾ ದುರ್ಬಳಲು.ಆಗಾಗ ನನ್ನಿಂದ  ದೂರವಾಗ್ತಾಳೆ.ಅವಳಿಲ್ಲದೆ ಮನೆ ಮನಸು ಎಲ್ಲ ಖಾಲಿ ಎನಿಸಲು ಶುರುವಾಗುತ್ತೆ.ಈ ಜಗತ್ತಿನಲ್ಲಿ ಒಬ್ಬರದ್ದು ಒಂದೊಂದು ಸಮಸ್ಯೆ ಕಣಮ್ಮ."
ಪರವಾಗಿಲ್ವೆ ಈ ಮುದುಕ ಈ ವಯಸ್ಸಿನಲ್ಲೂ ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಾನೆ.ಮತ್ತೆ ಇವರ ಸೊಸೆಗಿಂತಲೂ ನಾನೆ ಮೇಲೂ ಒಬ್ಬಳನ್ನೇ ಬೇಡ ಅತ್ತೆ ಮಾವರನ್ನು ಕರೆದುಕೊಂಡು ಹೋಗೋಣ ಅಂದಿದ್ದೆ.ಅಲ್ಲ,ಅವರಿಬ್ಬರನ್ನು ಬಿಟ್ಟು ನಾನು ತಾನೇ ಹೇಗಿರಲಿ? ಮದುವೆಯಾದ ಮೊದಲನೆಯ ದಿನವೇ ವಯಸ್ಸಾದ ಕಾಲಕ್ಕೆ ಇಲ್ಲಿಗೆ ಬಂದು ಸಾಯುವ ನಿರ್ಧಾರ ಮಾಡಿ ಆಗಿದೆ,ಇಗಾ ನಿನ್ನೊಡನೆ ಮುಂಬೈಗೆ ಕರೆದುಕೊಂಡು ಹೋಗು ಅಂದ್ರೆ ಸುತರಾಮ್ ಒಪಲಿಲ್ಲ. ಫೋನಿನಲ್ಲೂ  ಆಗೋಲ್ಲ ಅಂತ ಜಗಳಕ್ಕಿಳಿಯುತ್ತಾನೆ.ಗಂಡನಿಲ್ಲದೆ ಹೀಗೆ  ಯಾರ ಯಾರ ಮನೆಲೋ ಇರಬೇಕು.ಅವಳಿಗೆ ಸಂಕಟ ತಡೆಯಲಾಗಲಿಲ್ಲ ಕಣ್ಣೀರು ಉಕ್ಕಿ ಬಂತು.ಅಲ್ಲಿಂದ ಏಳಲು ನೋಡಿದಳು.

ಅಷ್ಟರಲ್ಲಿ "ಕುಳಿತುಕೊಂಡೆ ಮಾತಾನಾಡೋಣವ?"

"ಹಹಹ...ನಾನೇನು ಆತ್ಮಹತ್ಯೆ ಮಾಡಿಕೊಳ್ಳೋಲ್ಲ ಹೆದರ ಬೇಡಿ.ಮುಖ ತೊಳೆದು ಬರುತ್ತೇನೆ"ಎಂದಳು.

"ಹಾಗಲಮ್ಮ ಅದು...ಕೊಳದ ಬಳಿ ಸಂಜೆ ಹೊತ್ತು ಹೆಣ್ಣು ಮಕ್ಕಳು ಅಡ್ಡಾಡ ಬಾರದು.ಅದರಲ್ಲೂ ಮುಖ ತೊಳಿಯುವುದಾಗಲಿ ನೋಡಿಕೊಳ್ಳುವುದಾಗಲಿ ಮಾಡಲೇ ಕೂಡದು."ಅನ್ನುತ್ತ ಸ್ವಲ್ಪ ಸಮಯ ಮೌನಕ್ಕೆ  ಶರಣಾದ.
ಅಯ್ಯೋ ಕತ್ತಲಾಯ್ತಲ್ಲವ ಈ ಮುದುಕಪ್ಪನ ಪ್ರವೇಶದಿಂದ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ.ಇಲ್ಲಿಂದ ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಿದ್ದಾಗಲೆ,
"ನೋಡಮ್ಮ ಕತ್ತಲಾಗ್ತಿದೆ ಮನೆ ಬಿಟ್ಟು ಬಂದಿದ್ದೀಯ.ಇಲ್ಲಿ ಈ ಮರದಡಿ ವಿಪರೀತ ಚಳಿ.ಬೇಕಿದ್ದರೆ ಇವತ್ತೊಂದು ದಿನ ನನ್ನ ಮನೇಲಿ ಇರುವಂತೆ,ನಾಳೆ ನಿನ್ನ ಗಂಡ ಅದೇ ಆ ಬೇಜವಾಬ್ದಾರಿ ಮನುಷ್ಯನ ಕರಿಸಿ ನ್ಯಾಯ ಪಂಚಾಯತಿ ಮಾಡೋಣವಂತೆ ಏನಂತಿಯಾ ?"

 "ನೋಡಿ ಇವ್ರೆ...ನಿಮ್ಮಂತವರೆ ನನ್ನ ಪಾಲಿಗೆ ನಿಲ್ಲೋದು,ಕಷ್ಟಕ್ಕೆ ನೆರವಾಗೋದು.ಹೀಗೆ ಯಾವಾಗಲು ಎಲ್ಲೆಲ್ಲೊ ಯಾರ ಯಾರಾ ಮನೆಯಲೋ ಇರಬೇಕಾಗುತ್ತೆ.ಹೆಸರು ಮುಖಗಳು ನೆನಪಿಗೆ ಹೊಳಿತಿಲ್ಲ.ಆದರೆ ಎಷ್ಟೋ ತಿಂಗಳಿಂದ ಈ ತಿರುಗಾಟ ನಡೆದಿದೆ."
 "ಪರವಾಗಿಲ್ಲ ಬಿಡಮ್ಮ ನನಗೇನು ತೊಂದರೆ ಇಲ್ಲ.ಆದರೆ ಒಂದು ಮಾತು ಕೊಡಬೇಕು,ಇಲ್ಲಿಂದ ಹೊರಟ ಮೇಲೆ ಮತ್ತೆ ಅಳ ಬಾರದು ಆಯ್ತಾ?." ಆಯಿತು ಎಂಬಂತೆ ಆಕೆ  ತಲೆ ಆಡಿಸಿದಳು.

"ನಡಿ ಹೊರೋಡೋಣ ", ಪಕ್ಕದಲ್ಲಿ ಇಟ್ಟಿದ್ದ  ಕನ್ನಡಕವ ನೋಡಿ ಅದನ್ನ ಎತ್ತಿಕೊಳ್ಳಲು ಸೂಚಿಸಿದ.ಅದು ನನ್ನದಲ್ಲ ಎಂದೇಳಿ ಅಲ್ಲಿಂದ ರಭಸವಾಗಿ ಎದ್ದಳು.ಕಾಲು ಹಿಡಿದುಕೊಂಡಿತು.ಅವಳಿಗೆ ಮುಂದೆ ನಡೆಯುವ ಬಲ ಬರಲಿಲ್ಲ.ಅಷ್ಟರಲ್ಲೇ ಮುದುಕ ದೂರದ ಬೆಂಚಿನ ಮೇಲಿದ್ದ ಇನ್ನೊಂದು ವಾಕಿಂಗ್ ಸ್ಟಿಕ್ ತಂದು ಕೊಟ್ಟ,

"ನಿಧಾನವಾಗಿ ನಡಿ.ಇಲ್ಲೇ  ಪಕ್ಕದ ಬೀದಿಯಲ್ಲೇ ಮನೆ." ಅನ್ನುತ್ತಾ,ಅವಳ ಬೆಂಚಿನ ಮೆಲ್ಲಿದ್ದ ಕನ್ನಡಕವ ತನ್ನ ಕುರ್ತಾ ಜೇಬಿಗೆ ಇಳಿಸಿಕೊಂಡ.

 *

ಐದು ವರ್ಷಗಳಿಂದ ಜರಗುತ್ತಿರುವ ಈ ದೃಶ್ಯಕ್ಕೆ ಸಾಕ್ಷಿಯಾಗುವ ಸೂರ್ಯನಿಗೆ ಮಾತ್ರ ವಯಸ್ಸಾದರೂ ಮರುವಿನ ರೋಗ ಹತ್ತಲೇ ಇಲ್ಲ.ಎಂದಿನಂತೆ ಆ ಜೋಡಿ ನಡೆದು ಹೊಗುವುದನ್ನ  ಮಂಜು ಮಂಜಾಗಿಸಿಕೊಂಡೇ  ನೋಡುತ್ತಾ ಕಣ್ಣು ಮುಚ್ಚಿದ.   

6 comments:

  1. ಕಥಾ ನಿರೂಪಣೆಯಲ್ಲಿ ವೈಶಾಲಿ ಮತ್ತೆ ಗೆದ್ದಿದ್ದಾರೆ...ಒಳ್ಳೆ ಪತ್ತೇದಾರಿ ಕಥೆಯ ಹಾಗೆ ನಡೆಯುವ ಪ್ರಸಂಗ..ಕಡೆ ವಾಕ್ಯ ಇಲ್ಲದೆ ಹೋಗಿದ್ದರೆ ಇದಕ್ಕೆ ಬೇರೆಯದೇ ಅಂತ್ಯವಿರುತಿತ್ತು...ಇಡಿ ಕಥೆಯ ಜೀವಾಳ ಆ ಕಡೆಯ ವಾಕ್ಯ...ಸೂಪರ್..ಸಿದ್ಧಾರ್ಥನ ಮಡದಿ ಯಶೋದರೆ..ಕಥೆ ಮೂಡಿದ್ದು "ವೈಶಾಲಿ"ಯ ಮನದಲ್ಲಿ...ಸೂಪರ್

    ReplyDelete
  2. This comment has been removed by the author.

    ReplyDelete
  3. ತುಂಬಾ ಚೆನ್ನಾಗಿದೆ ವೈಶು.ರಚಿಸಿರುವ ರೀತಿ ಸಿಂಪ್ಲಿ ಸುಪರ್ಬ್!!
    ಕಾಲ ಚಕ್ರದ "ಒಂದು ನಿರ್ದಿಷ್ಟ" ಅವಧಿಯಲ್ಲಿ ಸಿಲುಕಿ ಅದೇ ಗುಂಗಿನಲ್ಲಿ ಜೀವನ ದೂಡುತ್ತಿರುವ ಅವಳು ಇಷ್ಟವಾದಳು.ಆ ಮುದುಕಪ್ಪನಿಗೆ ತಾನು ಹಿಂದೆ ಹೇಗೆಲ್ಲ ವರ್ತಿಸಿದ್ದೆ ಅನ್ನೋದರ ಮನವರಿಕೆಯಾಗಿದಂತಿದೆ.ಅದೇ ಪಶ್ಚ್ಯತಾಪದಲ್ಲಿ ತನನ್ನು ತಾನೆ ನೀಚ ಎಂದು ಸಂಭೋದಿಸಿದ್ದಾನೆ!
    ಅವಳಿಗೆ ಮಗನ ಅಗಲಿಕೆಯ ನೋವಿನಿಂದ ಇಂತದ್ದೊಂದು ಮಾನಸಿಕವೇದನೆ ಪ್ರಾಪ್ತಿಯಾಗಿದೆ.ನಿಜ ಮನಸು ಆಘಾತಕ್ಕೊಳಗಾದಾಗ ಎಷ್ಟೋ ಸಲ ಹೀಗಾಗುವುದುಂಟು.
    ಇಲ್ಲಿ ಮುದುಕ ಅವಳ ಮನಸ್ಥಿತಿಗೆ ತೊಂದರೆಯಾಗದಂತೆ ಮನವೊಲಿಸಿ ಮನೆಗೆ ಕರೆದೊಯ್ಯುವ ಪರಿ ಪತ್ತೆಧಾರಿ ಕಥೆಯಂತೆ ಹೊರನೋಟಕ್ಕೆ ಕಂಡರು,ಒಳ ಹರಿವಿನಲ್ಲಿ ಬುದ್ಧನ ಮಡದಿ ಯಶೋಧರೆಯ ಯಾತನೆ ಸಣ್ಣಗೆ ಬಂದು ಹೋಗುತ್ತದೆ.ಆದರೆ ಒಂದು ವಿಷಯ ಅರ್ಥವಾಗಲಿಲ್ಲ,ಅವಳನ್ನ ಕೊಳದ ಬಳಿ ಹೋಗದಾಗೆ ಎರಡು ಬಾರಿಯೂ ಯಾಕೆ ತಡೆದ ಮುದುಕ?ಅದರ ಹಿನ್ನಲೆ ಏನು?? ಆ ಕನ್ನಡಕ ಜೇಬಿಗೆ ಜಾರಿಸಿಕೊಂಡ ಸನ್ನಿವೇಶ ಮನಸಿಗೆ ಹತ್ತಿರವಾಯ್ತು.ಒಟ್ಟಿನಲ್ಲಿ ಮುದುಕ ಮುದುಕಿ ಇಬ್ಬರು ಹಿಡಿಸಿದರು.

    ReplyDelete
  4. ನಾನು ದಿನ ಪಾರ್ಕಿನಲ್ಲಿ ಗಮನಿಸುವ ಇಂತಹ ಘಟನೆಗಳ ಬಗೆಗೆ ನಾನೂ ಕಿವಿಗೊಡುತ್ತೇನೆ. ಧನ್ಯವಾದಗಳು.

    ReplyDelete
  5. :)ಇದುವರೆಗಿನ ನಿಮ್ಮ ಕಥೆಗಳಲ್ಲಿ ತುಂಬಾ ಇಷ್ಟವಾದ ಕಥೆ ಅಂತ ಮಾತ್ರ ಹೇಳಬಲ್ಲೆ.
    "ನೀ ಹೀಂಗ ನೋಡ ಬೇಡ ನನ್ನ "

    ReplyDelete
    Replies
    1. ವೈಶೂ ನಿರೂಪಣೆ ತುಂಬಾ ಇಷ್ಟವಾಯ್ತು. ಮನಕಲುಕುವ ಹಾಗೆ ಚಿತ್ರಿಸಿದ ಸಾಲುಗಳು.

      ಕೊನೆ ಸಾಲುಗಳಂತೂ ತುಂಬಾನೇ ಹಿಡಿಸಿದ್ವು

      "ಅವರಿಬ್ಬರೂ ಗಂಡ ಹೆಂಡತಿ" ಅಂತಾ ತಿಳ್ಕೊಳೋಕೆ, Mentos Fresh दिमाग की बत्ती जलादे ನ, ತಿನಬೇಕಾಯ್ತು :d

      Delete