Tuesday, January 22, 2013

ಸಮಾನತೆಯೆಂಬ ಕತ್ತಲಿಂದ,ಬೆಳಕೆಂಬ ಅಪರಿಚಿತನೆಡೆಗೆ !

ಸೂರ್ಯ ರಶ್ಮಿಯ  ಸ್ಪರ್ಶ ಉಷ್ಣತೆಯ ಅರಿಯದ  ದಟ್ಟವಾದ ಕಾಡದು.ಹಗಲೋತ್ತಲೇ ಕೊಳ್ಳಿ ಹಿಡಿದು ಸಾಲು ಸಾಲು ಜಾಣ ಜೀವಿಗಳು ಬೆವರುತ್ತ ಮರಗುತ್ತ ಪ್ರಾರ್ಥಿಸುತ್ತ ನಡೆಯುತ್ತಿದ್ದಾರೆ.ಕೆಲವು ಜಾಣರಿಗೆ ಸೂರ್ಯನ ಬೆಳಕು ಕವಿಯ ಕಲ್ಪನೆಯ ಸಾಲುಗಳಲ್ಲಿ ಪ್ರಾಸಕ್ಕಾಗಿ ಅರಳುವ  ಮಿಥ್ಯ,ಇತರರಿಗೆ ಅದು ಆ ಕಾಡಿನಷ್ಟೇ ಅಪೂರ್ವ ಸತ್ಯ.
ಅದರಲೊಂದಷ್ಟು ಜಾಣರು "ಈ ಪಂಜನ್ನು ಹಿಡಿದಿರುವುದಾದರು ಯಾಕೆ? ಇದಿಲ್ಲದೆಯೂ ಇಷ್ಟು ಕಾಲ ಏಕತೆಯ ಕತ್ತಲ್ಲಿನಲ್ಲಿ ಜೀವಿಸಿಲ್ಲವೇ "ಎಂದು,ಅದನ್ನೆಸೆದು ಅಲ್ಲೇ ತಟಸ್ಥರಾದರು.
ತಾವು ಹಿಡಿದಿರುವ  ಮಾಧಕ ಬೆಳಕಿನಲ್ಲಿ  ವಿಕ್ಷಿಪ್ತ  ಆಕರ್ಷಣೆಯಿದೆ,ಆ ರವಿಕಿರಣಗಳನೊಮ್ಮೆ  ದರ್ಶಿಸಲೇ ಬೇಕೆಂದು  ಪಣ ತೊಟ್ಟು ಇತರ ಜಾಣರು ವೇಗಾವಾಗಿ ಮುನ್ನಡೆದರು.
"ನೋಡಿದಿರಾ,ಏಕತಾನತೆಯ ಮುರಿದ  ಈ ಬೆಳಕಿನಲ್ಲಿ  ನಾವೆಲ್ಲ ಬೇರೆ ಬೇರೆಯಾಗೇ ಕಾಣುತ್ತಿದೇವೆ,ವರ್ತಿಸುತ್ತಿದೇವೆ...ದೀವಟಿಗೆಯ ದಿವ್ಯಾಗ್ನಿ ಅನನ್ಯತೆಯ ಸಾರುತ್ತಿದೆ"   ಉದ್ಧರಿಸಿದ  ಒಬ್ಬ .
"ಬೆಳಕಿನ ಹುಡುಕಾಟದಲ್ಲಿ  ಎಷ್ಟೊತ್ತು ಹೀಗೆ ಸಾಗೋದು? ಹಚ್ಚಿದ ಕೊಳ್ಳಿ ಇನ್ನೇನು  ಆರಿ ಹೋಗುವುದರಲ್ಲಿದೆ...ಆಮೇಲೆ ಎತ್ತ ಸಾಗುತ್ತಿದೇವೆ ಅನ್ನೋ ಅರಿವಿಲ್ಲದೆ  ಚಲಿಸಬೇಕಾಗಬಹುದು"  ಹಲುಬಿದ ಇನ್ನೊಬ್ಬ.
"ಸರಿ ಹಾಗಿದ್ದರೆ,ಬೆಳಕ್ಕನ್ನು ನಮ್ಮಿಂದ ಕಿತ್ತುಕೊಂಡದ್ದು ಈ ಕತ್ತಲು ಕಾಡು,ಇದನ್ನೇ ಕೊಳ್ಳಿಯಿಂದ ಸುಟ್ಟು  ಸೇಡು ತೀರಿಸಿಕೊಳ್ಳೋಣ"ಎಂದವನೇ ಕಾಡಿಗೆ ಕಿಡಿ ಹಚ್ಚಿದ.ಅವನ ಮಾತಿಗೆ ಒಮ್ಮತಿಸಿ ಉಳಿದ ಸಂಗಡಿಗರು  ಕಾಡನ್ನು ಉರಿಸಿದರು.
ಇಡಿ ಕಾಡು ಉರಿಯಲಾರಂಭಿಸಿತು,ಅಲ್ಲಿದ್ದ ಹಲವರು ಉರಿದು ಬೂಧಿಯಾದರು.
*
ದೂರದಲ್ಲಿ ತಟಸ್ಥರಾದವರು, ಅರ್ಧ ಬೆಂದವರು ಬೋಳು ಬಯಲಿನಲ್ಲಿ  ಚೆಲ್ಲಿದ ಸೂರ್ಯನ ಉಜ್ವಲ ಬೆಳಕ ಕಂಡು ಬೆದರಿ ಬೆಚ್ಚಿ ಕಿರುಚುತ್ತ  ಸತ್ತ  ಕಾಡನ್ನು ಅರಸುತ್ತಾ  ಓಟಕಿತ್ತರು.

6 comments:

  1. ಎರಡು ಕೋನದಲ್ಲಿ ಗಮನಿಸುವುದಾದರೇ:
    ಪ್ರಸಕ್ತ ರಾಜಕೀಯ ಸ್ಥಿತಿ ಮತ್ತು ಭೂಮಿಯನ್ನು ನಾವು ಬಳಸಿಕೊಳ್ಳುತ್ತಿರುವ ಪರಿ.

    ಅತ್ಯಂತ ಮಾರ್ಮಿಕ ಬರಹ.

    ReplyDelete
  2. ತಾನು ಕೂತಿದ್ದ ಕೊಂಬೆಯ ಕಡಿದ 'ಜಾಣ'ನ ನೆನಪಾಯಿತು
    ನಿಮ್ಮ ಶೈಲಿ ವಿಶಿಷ್ಟವಾಗಿದೆ
    ಮುಂದುವರೆಸಿ

    ReplyDelete
    Replies
    1. ನಿಮ್ಮ ಕಥೆಯನ್ನ ಮತ್ತೆ ಇಂದು ಓದಿದಾಗ ಅನಿಸಿದ್ದು :
      ಕತ್ತಲೆ ಎಲ್ಲರಿಗೂ ಸಮಾನ ಅಲ್ಲಿ ಎಲ್ಲವೂ ಕಪ್ಪು
      ಬೆಳಕಲ್ಲಿ ಎಂದಿಗೂ ಸಮಾನತೆ ಇಲ್ಲ
      ವಿಪರ್ಯಾಸ
      ಕತ್ತಲೆ ಇಂದ ಬೆಳಕಿಗೆ ಬಂದ ಜಾಣ ಸೃಷ್ಟಿಸಿದ ಸಮಸ್ಯೆಗಳು ಜಗವನ್ನ ಅವನತಿಯತ್ತ ಕೊಂಡೋಯ್ಯುತ್ತಿವೆ

      Delete
  3. ತುಂಬ ಮಾರ್ಮಿಕವಾದ ಪುಟ್ಟ ಕತೆ!

    ReplyDelete
  4. This comment has been removed by the author.

    ReplyDelete
  5. ನೀನು ಈ ಸಣ್ಣ ಕಥೆ ಬರೆಯುವಾಗ ಎಷ್ಟೆಲ್ಲಾ ಕೋನಗಳ ಮನಸಿನಲ್ಲಿ ಇಳಿಸಿಕೊಂಡು ಬರೆದಿರುವೆಯೆಂದು ಕೇಳಿ ಬೆರಗಾದೆ.

    ೧.ಮನುಷ್ಯನು ದೂರದ ತನ್ನರಿವಿಗೆ ನಿಲುಕದನ್ನು ದಕ್ಕಿಸಿಕೊಳ್ಳಲು ತನ್ನ ಬಳಿ ಇರುವುದನೆಲ್ಲವನ್ನು ಕಳೆದು ಕೊಳ್ಳುತ್ತಿದ್ದಾನೆ.೨. ಸ್ವಾರ್ಥಿ ಮನುಷ್ಯ ಪ್ರಕೃತಿಯನ್ನು ವಿಕೃತ ಗೊಳ್ಳುಸುತ್ತಿರುವ ರೀತಿ ಇತರರ ಮೇಲೆ ಅದರಿಂದಾಗುತ್ತಿರುವ ಪರಿಣಾಮಗಳು.೩.ಆ ಅನನ್ಯತೆಯ saarida ಜಾಣ ಜನರು ನಮ್ಮ ನಡುವಿನ ಕೆಲ'ಬುದ್ಧಿಜೀವಿ'ಗಳಂತೆ,ಸೆಕುಲರಿಸ್ಮ್ ಯೆಂಬ ಕೊಳ್ಳಿಯ ಬೆಳಕಿನಲಿ ಕಾಣುತ್ತಿರುವ ಅಸಮಾನತೆಗೆ ಉಪ್ಪು ಸುರಿದು ಶಾಂತಿ ಹಾಗು ಮನಸುಗಳನ್ನ ರಾಡಿ ಮಾಡುತ್ತಿದ್ದಾರೆ.೪.ಸಧ್ಯದ ಕೆಟ್ಟ ರಾಜಾಕೀಯ ಒಳನೋಟ .೫. ಭಾವುಕತೆಯ ಮೆಣದಬತ್ತಿ ಹಿಡಿದು ಹೊರಟಿರುವ ನಾವುಗಳು ಕೇಳುತ್ತಿರುವ ನ್ಯಾಯ ಅದೇ ತಾಲಿಬಾನ್ ರೀತಿಯ ಉಗ್ರ ಶಿಕ್ಷಾಪದ್ದತಿ ನಿಜವಾಗಲು ಜಾರಿಗೆ ಬಂದಿದ್ದೆಯಾದರೆ ಮುಂದೊಂದು ದಿನ ಅದರ ಬಿಸಿ ನಮೆಲ್ಲರಿಗೂ ತಟ್ಟಿಯೇ ತಟ್ಟುತ್ತದೆ.೬.ಹಿಂದೆ ನೀನು ಸಾವಿನ ಅಂತಕರಣ ತೆರೆದಿಟ್ಟಿದ್ದ ಪರಿ,ಹುಟ್ಟಿನಷ್ಟೇ ಸಾವಿನ ಮೇಲೆಯೂ ಪ್ರೀತಿ ಅನುಕಂಪ ತರಿಸಿತ್ತು ನನಗೆ.ಈಗ ಬೆಳಕಿನ ಎದುರು ಕತ್ತಲೆಯ ಶ್ರೇಷ್ಟತೆಯ ಈ ಬರಹದ ಮೂಲಕ ಮೆರೆಸುತ್ತಿದ್ದೀಯ. ೭.ಮತ್ತೊಂದು ಕೋನ ಕಾಡು 'ಮಾನವೀಯತೆ'. ಸೂರ್ಯನ ಬೆಳಕು 'ದೇವರು',ಪಂಜಿನ ಬೆಳಕು ವಿವಿಧ ಮತಗಳ ಪ್ರತೀಕ.ಅದೇ ಪಂಜಿನ ನೆಪ ಮಾಡಿ ಮಾನವಿಯತೆ ಕೊಲ್ಲುತ್ತಿರುವ ಮನುಷ್ಯ. ನಿಜ ದೇವರು ಕಣ್ಣೆದುರು ಬಂದರೆ ನಾವುಗಳು ಹೀಗೆ ಎದ್ದು ಬಿದ್ದು ಓಡುವುದರಲ್ಲಿ ಸಂಶಯವಿಲ್ಲ.

    ಒಂದು ಸಲಹೆ "ಇನ್ನಮುಂದೆ ಒಂದೊಂದೇ ಪಾಯಿಂಟ್ಸ್ ಇಟ್ಕೊಂಡ್ ಬರಿ" ನೀ ಬರೆದದ್ದನ್ನ ಅರ್ಥ ಮಾಡಿಕೊಳ್ಳುವಷ್ಟು ಮೇಧಾವಿ ನಾನಲ್ಲ.

    ತಮಾಷೆಗೆ ಹಾಗಂದೆ.ನಿನ್ನ ಚಿಂತನೆಗೆ ಒಂದು ಸಲಾಂ,ಹೀಗೆ ಬರೆಯುತ್ತಿರು ನಿರಂತರ.:)

    ReplyDelete