![]() |
ಚಿತ್ರಕಲೆ : ವೈಶಾಲಿ ಶೇಷಪ್ಪ |
*ಶ್ರೇಷ್ಠ ಮದುಮಗಳು *
ಮುಗಿಲೂರಿನ ಮಗಳು
ಮನೆತುಂಬೋಕೆ ಹೊರಟಿಹಳು
ಗುಡುಗು ಮಿಂಚಿನ
ಹಿಮ್ಮೇಳದ ಜೋಡಿ
ಬೆಳೆಸಿಹಳು
ರವಿ ಚಂದ್ರರ ಸಹೋದರಿ
ಇಳೆಯೆಡೆ ತನ್ ಪಯಣ
ದೂರದೂರಿನ ನಂಟು
ದೂರ ಮಾಡದಿರಲಿ ಮನವ
ಮುಗಿಯುವೆ ಏನ್ ಕರವ
ಹರಸಿ ನೀಡಿರೆನಗೆ ವಚನವ
ಅಣ್ಣಂದಿರ,
ಚಿರಕಾಲ ಕಾಯಲಿ ನಿಮ್ಮನ್ನು
ನಮ್ಮನ್ನು ಬೆಸೆದ
ಬಂಧನದ ಗಂಟು
ಕೇಳು ಮುದ್ದೂ ತಂಗಮ್ಮ
ಸವಿಂದಾಚೆಗೂ ಸಾವಿರ ಕಾರ್ಯವಿರಲಿ,
ಹಗಲೊಡನೆ ರವಿ ಬರುವ...
ಲಕ್ಷ ಹೆಂಡಿರ ಸಹವಾಸವಿರಲಿ,
ಅವರೊಡನೆಯೇ ನಾ ಬರುವೆ...
ಅನುಗಾಲ ,
ತವರಿನ ಬಾಗಿಲಾಚೆಗೆ ಬಗ್ಗಿ
ನಿನ್ನ ಕಾಣೋಕೆ ನಾವ್ ಬರುವೆವು
ನಿನಗಿತ್ತ ವಚನವ ಉಳಿಸೇವು
ತಿಳಿ ಕಪ್ಪು ಅರಿವೇ ತೊಟ್ಟು ,
ಗೆಳತಿಯರೆಲ್ಲಾ ಒಂದೆಡೆ ಸೇರಿರಲು ..
ತೇಲಿ ಆಡಿದ ದಿನಗಳ ನೆನೆದು,
ಬಾಚಿ ತಬ್ಬಿ ಬೀಳ್ಕೊಡಲು
ಕಣ್ಣೀರ ನವ ರೂಪ ಧರಿಸಿದಳು ..
ಬಾನಂಗಳದಲಿ ಮದುಮಗಳು
ಮುನ್ನಡೆಯಲು ಗಾಳಿಯ ಸಾರಥ್ಯದಲ್ಲಿ
ಗಗನದೂರಿನ ಮಗಳ
ಧರೆ ಯೆಡೆಗಿನ ಪಯಣ ..
ನಲಿದಳು ಪಡೆದು,
ಹೊಸ ಜನುಮವ ,"ಹನಿ" ರೂಪವ
ಜಾರಿದಳು ಬಾನಿಂದ
ಭುವಿಯ ಚೊಚ್ಚಲ ಸೊಸೆಯಾಗಿ,
ಸೇರಿದಳು ಪೃಥ್ವಿಯ ಸಿರಿಯಾಗಿ
ಅವಳು ಅವಳಾಗಿರೋ
ಕೆಲ ಕ್ಷಣವ ಹಂಬಲಿಸಿ ...
ಆಗಾಗ ಬಸರಿನ ನೆಪವೊಡ್ಡಿ ,
ಆವಿಯಾಗಿ ತವರ ಸೇರುವಳು
ಸಾವಿರ "ಹನಿ -ಮುತ್ತು "ಗಳೊಂದಿಗೆ
ಧರೆ ಗೆ ಮರಳುವಳು
ತವರಿನಲಿ "ಮೋಡವಾಗಿ"
ಅತ್ತೆ ಮನೆಯಲಿ "ನೀರಾಗಿ "
"ಹನಿ "ಯಾಗಿದ್ದಾಗ ತಾನಾಗಿ
ತೀರ್ಥವಾಗಿ ,ಎಲ್ಲರ ಜೀವ ಜಲವಾಗಿ,
ಬದುಕುವಳು ಪವಿತ್ರೆ ಸಾರ್ಥಕವಾಗಿ!