Thursday, January 31, 2013

ಸೋಕದ ಸೂರ್ಯನ ಪ್ರೀತಿ,ಸಂಬಂಧವೆಂಬ ಮರ ಮಾತಾಡಿದಾಗ...

ಚಿತ್ರಕಲೆ : ಮದನ್ ಕುಮಾರ್
ಮಾಗಿಯ ಚಳಿಗೆ ಅವಳು ಕಂಗಾಲು.ತುಟಿಗಳು ಕೆನೆ ವ್ಯಸ್ಲಿನ್ ನೋಡದ ದಿನವೇ ಇಲ್ಲ.ಈಗೀಗ ಚರ್ಮವು ಬಿರುಕು ಬಿಡುತಿದೆ.ಅದಾಗಲೇ ಸಮಯವೂ ಜಾರಿ ಸೂರ್ಯ ನೆತ್ತಿಗೆ ಬಂದು ನಿಂತಿದ್ದಾನೆ.ಹರುಷದಿ ಇವಳು ಜಿಗಿಯುತ್ತಾ ಬಂದು ಅಂಗಳದಲ್ಲಿ ಸೂರ್ಯನಿಗೆ ಮೈವೊಡ್ಡಿ ಬಿಸಿಲ ನಿರೀಕ್ಷೆಯಲ್ಲಿ ಕುಳಿತು ಕೊಂಡಳು.ಮನೆಯ ಸುತ್ತಿದ್ದ ಮರಗಳು ಬೀಸುತ್ತಿದ್ದ ಗಾಳಿಗೆ ತಲೆದೂಗುತ್ತಿವೆ ಸೂರ್ಯ ಅವುಗಳ ಮಧ್ಯೆ ನುಸುಳಿ ಇವಳ ಮೈ ಸ್ಪರ್ಶಿಸುವಲ್ಲಿ ಎಡವುತ್ತಿದ್ದಾನೆ.ಇವಳು ಆ ಗೋಡೆಗಳೇ ಎಷ್ಟೋ ಬೆಚ್ಚನೆಯ ಭಾವ ನೀಡಿದ್ದವು ಅಂತ ಸಿಟ್ಟಾದಳು.ಅಂಗಳದೆಲ್ಲೆಡೆ ಎಡತಾಕಿದರು ಉಪಯೋಗವಾಗಲಿಲ್ಲ.ಬೀದಿಗೆ ನಿಲ್ಲಲ್ಲು ಸಾಧ್ಯವಿಲ್ಲದ ಮಾತು,ಮನೆಯ ಬೇಲಿಯು ಬಲಿಷ್ಟವೆ,ಏನಿದ್ದರು ತನ್ನ ಪರಿಮಿತಿಯಲ್ಲೇ ಎಲ್ಲವ ದಕ್ಕಿಸಿಕೊಳ್ಳಬೇಕು.ಕೋಪ ನೆತ್ತಿಗೆರುತ್ತಿದಂಗೆ ಕಣ್ಣು ಕೆಂಪಾಗಿಸಿಕೊಂಡು ಮರದ ಬಳಿ ಬಂದು ನಿಂತಳು.ಸಿಹಿ ಸಿಹಿ ನೆನಪುಗಳು ಅವಳ ಆವರಿಸಿತು.ಆಗಿನ್ನೂ ಪುಟ್ಟವಳು ಅಪ್ಪ ಗಿಡಗಳ ಅದೆಲ್ಲಿಂದಲೋ ತಂದು ನೆಟ್ಟಿದ್ದ,ದಿನ ನೀರು  ಹುಯ್ಯುತ್ತ ಅದರ ಆರೈಕೆ ಮಾಡುತ್ತಿದ್ದ.ಇವಳೋ ಅಪ್ಪನ ಮಗಳು,ಅವನು ಬಿಂದಿಗೆ ನೀರು ಸುರಿದರೆ ಇವಳು ತನ್ನ ಪುಟ್ಟ ಕೈಗಳ ತುಂಬಾ ತಂಬಿಗೆ ಹಿಡಿದು ನೀರೆರೆಯುತ್ತಿದ್ದಳು.ಆ ಗಿಡಗಳೇನು ಬೇಡಿಕೊಂಡಿರಲಿಲ್ಲ,ಅವುಗಳು ಅವಳಂತೆ ಆಗಿನ್ನೂ ಮಾತು ಕಲಿತಿರಲಿಲ್ಲ.ಅವಳು ದೊಡ್ಡವಳಾದಾಗ ಅಜ್ಜಿ ಪೂಜೆಗೆ ಮೂಲೆಯಲ್ಲಿದ್ದ ಅಲಸಿನ ಮರ ಆಯ್ದು ಕೊಂಡಿದ್ದರು.ಇವಳು ಪೂಜೆ ಮಾಡಿ ಮುಗಿಸಿದಳು.ಇವಳಿಗೆ ಮಾತು ಚೆನ್ನಾಗಿಯೇ ಹೊರುಳುತ್ತಿತ್ತು ಆದರೆ ಆಯ್ಕೆಯ ಸ್ವತಂತ್ರವಿರಲಿಲ್ಲ.ಆ ಮರವೇನು ಕೇಳಿಕೊಂಡಿರಲಿಲ್ಲ,ಅದಿನ್ನೂ ಮಾತು ಕಲಿತಿರಲಿಲ್ಲ.ತದನಂತರ ಆ ಮರ ಫಲವತ್ತಾಗಿ ಬೆಳೆದು ಅದರಲ್ಲಿ ರುಚಿಕರ ಹಣ್ಣುಗಳು ಬಿಡಲಾರಂಬಿಸಿತು.ನೋಡಿದೀರ  ನನ್ನ ಮೊಮ್ಮಗಳು ಪೂಜೆ ಮಾಡಿದ ಮರ ಅದಕ್ಕೆ ಇಷ್ಟೊಂದು ರುಚಿ ಅದರ ಹಣ್ಣುಗಳು ಎಂದು ಅಜ್ಜಿ ಹಣ್ಣು ಚಪ್ಪರಿಸಿದ್ದಾಗಲೆಲ್ಲ ಸಿಕ್ಕ ಸಿಕ್ಕವರಿಗೆ ಹೇಳಲು ಮರೆಯಲಿಲ್ಲ.ಇವಳಿಗೂ ಹಾಗೇ ಅನಿಸ ತೊಡಗಿತು ಆ ಮರ ತನ್ನ ಋಣದಲ್ಲಿದೆ ಅನ್ನೋ ದರ್ಪ ಮನೆ ಕಟ್ಟಿತ್ತು.ಚಳಿಗೆ ರೋಮ ಸೆಟೆದು ನಿಂತವು,ಸಿಟ್ಟೇರಿ ಈ ಮರವ ಇಂದು ಕಡಿದೆ ಬಿಡಬೇಕೆಂದು ಕೊಡಲಿ ಕೈಗೆತ್ತಿಕೊಂಡಳು.ಸುಡುವ ಬೇಸಿಗೆಯ ನೆನಪಾಯ್ತು,ಮರದ ತಂಗಾಳಿ ಆಗವಳಿಗೆ ಹಿತ ನೀಡುತ್ತಿದ್ದವು.ಕೊಡಲಿ ಜಾರಿತು.ಮರ ತನ್ನನ್ನು ತನಗಾಗಿ ಯಾರು ಬೆಳೆಸಲಿಲ್ಲ ಪ್ರೀತಿಸಲಿಲ್ಲವೆಂದು ಕೊನೆಗೂ ಮೌನವ ಮುರಿದು ಜೋರು ಅಳತೊಡಗಿತು.ಪರಿತಪನೆಯೋ.. ಪಶ್ಚ್ಯತಾಪವೋ...ಗೊತ್ತಾಗದಂತೆ,ಇವಳೂ  ಅಳ ತೊಡಗಿದಳು.ಸುತ್ತಲಿದ್ದ ಮರಗಳು ಸ್ಪಂದಿಸುವಂತೆ ಅಳ ತೊಡಗಿದವು.ಊರಿನೆಲ್ಲಾ ಮರಗಳು ಜೋರು ಕೂಗಲಾರಂಬಿಸಿದವು.ಅಳು ಕೂಗಾಯಿತು.ವಿವಿಧ ಭಾವಗಳು ಸೇರಿ  ಕೂಗನ್ನು ಇಂಪಾಗಿಸಿದವು.
*
ಜನರೆಲ್ಲಾ ಆ ಸಮೂಹ ಆಲಾಪನೆಯ ಆಲಿಸುವಲ್ಲಿ ಮಗ್ನರಾದರು.ಮುಂದೊಂದು ದಿನ  ಕೂಗು ಸತ್ತೊಯ್ತು.ಅವಳ,ಮರದ, ಗೋಳು ಯಾರ ಕಿವಿಗೂ ಬೀಳಲೇ ಇಲ್ಲ.

Friday, January 25, 2013

ಸಿದ್ಧಾರ್ಥನ ಮಡದಿ ಯಶೋಧರೆ!

ಚಳಿಗಾಲದ ಸಂಜೆ ಅದು.ಜನನಿಬಿಡವಿಲ್ಲದೆ  ನೀರವ ಮೌನ ಆವರಿಸಿದ ಪಾರ್ಕಿನ ಒಂದು ಕಲ್ಲು ಬೆಂಚು ಅವಳ ಉಪಸ್ಥಿತಿಯಿಂದ ಬೆಚ್ಚಗಾಗಿದೆ.ಹಳದಿ ಹೂವಿನ ರಾಶಿ ಹರಡಿಕೊಂಡು ಕೈಲಿದ್ದ ಸೆವಂತಿಯ ಪಕಳೆಗಳ ಒಂದೊಂದೇ  ಕೀಳುತ್ತ  ಮೆಲ್ಲಗೆ ಮನಸಿನಲ್ಲಿ ಹೇಳಿಕೊಳ್ಳುವಂತೆ ಮಾತುಗಳ ಉಸುರುತ್ತ ಕುಳಿತ್ತಿದ್ದಾಳೆ ಆಕೆ.ಮೃದು ಹಸಿರು ಬಣ್ಣದ ಸೀರೆ,ಅಲ್ಲಲ್ಲಿ ಸೇವಂತಿ ಹೂವಿನ ಚಿತ್ತಾರವಿರುವ ಕಪ್ಪನೆಯ ಸ್ವೆಟರ್,ಹಸ್ತಗಳಿಗೆ ಅದೇ ಬಣ್ಣದ ಮ್ಯಾಚಿಂಗ್ ವುಲನ್ ಗ್ಲೌಸ್,ಪಾದಗಳಿಗೆ  ಸಾಕ್ಸ್ ತೊಟ್ಟು ಕೊಳದಲ್ಲಿ ಹಲ್ಲು ಕಿರಿಯುತ್ತಿದ್ದ  ಸೂರ್ಯನ ಬಂಗಾರದ ರೂಪವ ನೋಡುತ್ತಿದ್ದ  ಅವಳ ಕಳೆಗುಂದಿದ ಕಣ್ಣುಗಳಲ್ಲಿ  ವಿಶ್ವಾಸವಿಲ್ಲ.ಆದರೆ ಬೆರಳುಗಳಿಗಿವೆ! ಅದರಿಂದಲೇ ಅವುಗಳು ಆ ಸೇವಂತಿ ದಳಗಳನ್ನು  ಹವಿಸಾಗಿ ಅರ್ಪಿಸುತ್ತಿದ್ದಾವೆ.

ಬೆಳಗೆ ನಡೆದ ಜಗಳ ಅವನ ಮೇಲಿದ್ದ ಅಷ್ಟು ವರ್ಷದ  ಪ್ರೀತಿಯನ್ನು ಕಿತ್ತುತಿಂದಿತ್ತು.ಎಷ್ಟು ದಿನ ಅಂತ ನೋವನ್ನು ಸಹಿಸಿಕೊಳ್ಳೋದು ಅತ್ತೆಯ ಚುಚ್ಚು ಮಾತುಗಳು,ಅವನ ನಿರ್ಲಕ್ಷತೆ.ನಾನೇ  ಎಲ್ಲಾದರು   ದೂರ ಮರೆಯಾಗಿ ಹೊರಟುಬಿಡಬೇಕು ಅನ್ನೋ ಆಲೋಚನೆಯಲ್ಲಿ  ಮುಳುಗಿತ್ತು ಅವಳ ಮನಸು.

ಮತ್ತೊಮ್ಮೆ, ಬೆರಳುಗಳು  "ಹೋಗುವುದಾ? ಬೇಡವ?... ಹೋಗುವುದಾ? ಬೇಡವ?... ಹೋಗುವುದಾ? ಬೇಡವ?......"ಎಂದು  ಒಂದೊಂದಾಗೆ ಹೂವುಗಳ ಬಲಿಕೊಡುವ ಆಟ ಶುರು ಮಾಡಿದ್ದವು.

 'ಇಲ್ಲ!!' ಬೆರಳುಗಳು  ಸ್ಥಬ್ದವಾದವು.ನನ್ನ ಹುಚ್ಚು ಮನಸಿನ ಚಂಚಲತೆಗೆ ಇವುಗಳಾದರು ಯಾಕೆ ಬಲಿಯಾಗಬೇಕು? 'ನನ್ನ ಅವನ  ಪ್ರೀತಿಯ  ಭಾರಿ ಮೊತ್ತವ  ನಾವೇ ತೆತ್ತುತ್ತೇವೆ' ಅನ್ನುತ್ತಾ  ಛಿದ್ರವಾಗದೆ ಉಳಿದ ಹೂವಗಳ  ಹೆಕ್ಕಿಕೊಂಡು ಕೊಳಕ್ಕೆ ಹಾಕುವ ಇರಾದೆಯಿಂದ ಅಲ್ಲಿಂದ ಏಳಲು ಹೊರಟ ಅವಳನ್ನು ಹಿಂದಿನಿಂದ  ಯಾರೋ ಕೈ ಹಿಡಿದು ಎಳೆದರು.

ಅವಳು ಬೆಂಚಿನಿಂದ ಅಲುಗಾಡಲಿಲ್ಲ.'ಈ ನಿರ್ಜನ ಸ್ಥಳದಲ್ಲಿ ಇದ್ಯಾರು ನನ್ನ ಕೈ ಹಿಡಿದವರು'ಒಳಗಿಂದ ಬಂದ ಆ ಮಾತು ತಾನಿಲ್ಲಿ ಒಂಟಿ ಹೆಂಗಸು ಎಂಬುದ ನೆನಪಿಸಿದ ಅರೆಕ್ಷಣದಲ್ಲಿ ಆ  ಭೀಕರ ಚಳಿಯಲ್ಲೂ  ಬೆವರ ತೊಡಗಿದಳು.ಕೂತ್ತಲ್ಲೇ ನಡುಗಿದಳು,ಗಾಬರಿಗೆ  ಹೃದಯದ ಬಡಿತವು  ಹೆಚ್ಚಾಯಿತು.

ಕಳ್ಳನಿರಬಹುದು?ಕಟುಕನ?ಅಥವಾ ದುಷ್ಟನ? ತಿರುಗಿ ನೋಡೇ ಬಿಡೋಣ ಅನಿಸಿತು.ಆದರೆ ಧೈರ್ಯ ಸಾಲದೇ ಮೆಲ್ಲಗೆ ಕಣ್ಣಂಚನ್ನು  ಓರೆ ಮಾಡಿ ನೋಡಲು ಪ್ರಯತ್ನಿಸಿದಳು,ಏನು ಕಾಣಲಿಲ್ಲ.ಅತ್ತಿದ್ದರ ಪ್ರಭಾವವೋ ಏನೋ  ಕಣ್ಣುಗಳೆಲ್ಲ ಪದರು ಪದರು ಅಂದುಕೊಳ್ಳುತ್ತಾ,ನೆಲಕ್ಕೆ ಕಣ್ಣು ನೆಟ್ಟಳು,ಅವಕ್ಕೆ ಚರ್ಮದ ಚಪ್ಪಲಿ ಧರಿಸಿದ  ಪಾದಗಳು ಸೆರೆಯಾದವು.ಓ ಗಂಡಸೆ! ಎದೆ ಧಗ್ ಎಂದಿತು.ಸಾವರಿಸಿಕೊಂಡು ಇನ್ನೊಮ್ಮೆ ಕಣ್ಣು ಚಿಕ್ಕ ಮಾಡಿ ಸೂಕ್ಷ್ಮಾವಾಗಿ ಪಾದಗಳನ್ನು ಗಮನಿಸಿದಳು.ಸುಕ್ಕಾದ ಮೈ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ ಉಗುರು ಸುತ್ತು,ಏನಿದ್ದರು ಎಪ್ಪತ್ತರ ಆಸು ಪಾಸಿನ ಮುದುಕ,ಸಧ್ಯ ನಿರುಪದ್ರವಿ ಎಂದು ಅವನೆಡೆಗೆ ಮುಖ ತಿರುಗಿಸಿದಳು.
 
"ಯಾರು ನೀವು?ನನ್ನ ಕೈ ಯಾಕೆ ಹಿಡಿದಿರಿ?" ಸಿಟ್ಟು ತಂದುಕೊಂಡು ಕೇಳಿದಳು ಅವಳು.
 "ನಾನು ಇಲ್ಲೇ ಆಚೆ ಬೀದಿಯಲ್ಲಿ ಮನೆ.ನೀವ್ಯಾರು? ಹೀಗ್ಯಾಕೆ ಒಬ್ಬರೇ ಈ ಮರದಡಿ ಕೂತಿದ್ದೀರ?" ಗಂಭೀರವಾಗಿ ಪ್ರಶ್ನಿಸಿದ ಮುದುಕ.

"ನಿಮಗ್ಯಾಕೆ ಅದೆಲ್ಲ? ನೀವೇನು ನನ್ನ ನೆಂಟರೆ? ಈ ಪಾರ್ಕ್ ನಿಮ್ಮದೇ?ಅಥವಾ ಈ ಮರ ನಿಮ್ಮದೇ?" ಅಂದಳು.ಅಷ್ಟಕ್ಕೂ ಯಾರು ಈ  ಮುದುಕ? ತುಂಬಾ ಹೊತ್ತಿನಿಂದ ನನ್ನ ಚಲನವಲನಗಳ  ಗಮನಿಸಿರಬೇಕು,ನಾನೆಲ್ಲಿ ಕೊಳ್ಳಕ್ಕೆ ಹಾರಿಕೊಳ್ಳುತ್ತೇನೋ ಅನ್ನೋ ಭಯದಿಂದ ಕೈ ಹಿಡಿದಿದ್ದಾನೆ ಅನಿಸುತ್ತೆ.

"ಹಾಗಲ್ಲ ಈ ಜಾಗ ಅಷ್ಟು ಸುರಿಕ್ಷಿತವಾಗಿಲ್ಲ,ಒಂಟಿಯಾಗಿ ಇಲ್ಲೆಲ್ಲಾ ಬರಬಾರದು ಕಣಮ್ಮ"  ಕೈಯಿಂದಲೇ ಸ್ವಲ್ಪ ಜರಗಿ ಅಂತ ಸೂಚಿಸಿ ಬೆಂಚಿನ ಮೇಲೆ ಅವಳ ಬಲಕ್ಕೆ ಕುಳಿತ.

"ನೋಡಿ ಇವ್ರೆ...ನನಗೆ ಬುದ್ಧಿ ಹೇಳೋ ಅಗತ್ಯ ಇಲ್ಲ ಅದೇನಿದ್ದರು ನನ್ನ ಗಂಡನಿಗೆ ಹೇಳಿ.ಅವನಿಂದಲೇ ಈ  ಸ್ಥಿತಿ ಬಂದಿರೋದು"

"ಓ ಹಾಗ,ಸರಿ ಅವನ ಹೆಸರೇನು?ಎಲ್ಲಿಯವನು? ನಿಮ್ಮಿಬ್ಬರ ಮಧ್ಯ ಬಂದಿರುವ ಸಮಸ್ಯೆಯಾದರೂ ಏನಮ್ಮ?"

 "ಅವನ ಹೆಸರು ಸಿದ್ಧಾರ್ಥ.ನೋಡಿ ಇವ್ರೆ...ನಿಜ ಹೇಳ್ತೀನಿ,ನನ್ನ ಗಂಡನಿಗೆ ಸ್ವಲ್ಪವು ಜವಾಬ್ದಾರಿ ಇಲ್ಲ.ತುಂಬಾ ನಿರ್ಲಕ್ಷೆತೆವುಳ್ಳ  ಮನುಷ್ಯ ಅವನ ಕಾಯಕವೇ ಅವನಿಗೆ ದೊಡ್ಡದು. ಕೆಲಸದ ನೆಪ ಹೇಳಿ ಮುಂಬೈಗೆ ಹೋಗಿದ್ದಾನೆ.ಹೋದವನು ಈ ಕಡೆ ಮುಖ ಹಾಕಿಲ್ಲ.ಮತ್ತೆ ಮನೇಲಿ ಅತ್ತೆಯ ಪಿರಿಪಿರಿ ಬೇರೆ ಹಾಗಾಗೆ ಎಲ್ಲರನ್ನು ಬಿಟ್ಟು ತೆರಳುವ ಯೋಚನೆ ಮಾಡಿದ್ದೀನಿ ಅಂದಾಗೆ ನಿಮ್ಮ ಹೆಸರು?" ಒಂದೇ ಉಸಿರಿನಲ್ಲಿ ಉತ್ತರ ಹೇಳಿ ಪ್ರಶ್ನೆಯು ಹಾಕಿದಳು.

"ಹೌದೌದು ಗಂಡ ಹೆಂಡಿರ ನಡುವೆ ಅತ್ತೆ ಮಾವಂದಿರು ಮೂಗು ತೂರಿಸಬಾರದು.ವಯಸ್ಸಾದ ಮೇಲೆ ಮಕ್ಕಳನ್ನು ದೂರದಿಂದಲೇ ನೋಡಿ ಸಂತೋಷಿಸಬೇಕು.ಗಂಡನಾಗಿ ಅವನು ನಿನ್ನನ್ನು ತನ್ನೊಂದಿಗೆ ಕರೆದುಕೊಂಡು  ಹೋಗಬೇಕಿತ್ತು ಅದುವೇ  ಧರ್ಮ,ಸರಿಯಾಗಿದೆ ನಿನ್ನ ಹಂಬಲ.ನನಗ್ಯಾಕೋ ನಿನ್ನ ಗಂಡ ಸರಿಯಿಲ್ಲ ಅನಿಸುತ್ತಿದೆ.",

"ನೋಡಿದ್ರ ಇವ್ರೆ, ನಿಮಗೂ ಹಾಗೆ ಅನಿಸಿದೆ.ಮದುವೆಯಾದ ಹೊಸತರಲ್ಲಿ ಎಷ್ಟು ಖುಷಿಯಿತ್ತು ಗೊತ್ತ? ದಿನ ಗುಲಾಬಿ ಹೂವು ತಂದು ಮೂಡಿಸುತ್ತಿದ್ದ ತುಂಬಾ ಪ್ರೀತಿಸುತ್ತಿದ್ದ.ನೀ ದಾರಿ ತಪ್ಪಿದರೆ  ಆ ದಾರಿಗೆ ಸವಾಲಾಕುತ್ತೇನೆ ಹೊರತು ನಿನ್ನನೆಂದು  ದುಷಿಸೋಲ್ಲ ಎಂದಿಗೂ ಮನಸ ನೋವಿಸಲ್ಲ.ಯಾವುದೇ ವಿಷ ಗಳಿಗೆ ಎದುರಾದರು ನಿನ್ನ  ಕೈ ಮಾತ್ರ ಬಿಡೋಲ್ಲ ಅನ್ನುತ್ತಿದ್ದ.ಆಮೇಲೆ ಏನಾಯ್ತು ಅಂದ್ರೆ... ಎಲ್ಲಂದರಲ್ಲಿ ಯಾರ ಯಾರ ಮನೆಯಲ್ಲೋ ಅಪರಿಚಿತರ ನಡುವೆ ಇರಲು ಬಿಟ್ಟು ಮರೆಯಾಗಿದ್ದಾನೆ ನನಗೂ ಸಾಕಾಗಿದೆ.ಅಷ್ಟಿಷ್ಟು ಪಾಡು ಪಟ್ಟಿಲ್ಲ ನಾನು ಮಗುವ ಕಟ್ಟಿಕೊಂಡು.ಮೊದಲೆಲ್ಲ ಗುಲಾಬಿ ಹೂವಿನ ದಳಗಳ ಕಿಳುತ್ತ ಅವನಿಗಾಗಿ ಕಾಯುತ್ತಿದ್ದೆ.ಇಗಾ  ಸೇವಂತಿಗೆಗೆ ಬಂದಿದ್ದೇನೆ.ಅಂದಾಗೆ ನಿಮ್ಮ ಹೆಸರು?" ಕಣ್ಣೀರಾಡಿದಳು.

"ನನ್ನ ಹೆಸರ........?? ನೆನಪಿಲ್ಲ.....ವಯಸ್ಸಾಯ್ತು ಒಂದೂ ನೆನಪಿರೋಲ್ಲ....ನನ್ನ ಹೆಸರು ಬಂದು...ಅದಿರಲಿ ನೀನು ಕಣ್ನೀರಿಡೊದನ್ನ ಮೊದಲು ನಿಲ್ಲಿಸು.ನೀನೆಳುವುದ ನೋಡಿದರೆ ನಿನ್ನ ಗಂಡ ನೀಚನೆ ಇರಬೇಕು,ಎಷ್ಟೊಂದು ಮಾನಸಿಕ ಉಪಟಳ ನೀಡಿದ್ದಾನೆ.ಅಂತವನನ್ನ ಬಿಟ್ಟು ಬಂದಿದ್ದೆ ಒಳ್ಳೆದಾಯ್ತು ಬಿಡು."

ಅವಳ  ಸೆರಗಲಿದ್ದ ಹೊವಗಳ ಕಂಡು,ತಡಿ ಆ ಹೂವುಗಳನ್ನ ನಾನೇ ಕೊಳಕ್ಕೆ ಹಾಕುತ್ತೇನೆ ಎನ್ನುತ್ತಾ ಪಕ್ಕದಲ್ಲಿದ್ದ ಕೊಳ್ಳದ ನೀರಿನಲ್ಲಿ  ಅವನೆಲ್ಲಾ ತೇಲಿ ಬಿಟ್ಟ.

ಅಲ್ಲಾ,ಯಾಕೆ ಈ ಮುದುಕ ಒಂದೇ ಸಲ ನನ್ನ ಗಂಡ ಕೆಟ್ಟವನು ಅನೋದನ್ನ ಒಪ್ಪಿದ?ನನ್ನ ಓಲೈಸಲು ನೋಡುತ್ತಿರಬಹುದೇ? ಛೆ...ಈ ವಯಸ್ಸಿನಲ್ಲಿ ಅಂತ ದುರ್ಬುದ್ದಿ ಇರಲಿಕ್ಕಿಲ್ಲ.

"ಮುದುಕಪ್ಪ ನಿಮ್ಮ ಮನೆ ಎಲ್ಲಿದೆ? ನಿವ್ಯಾಕೆ ಇಲ್ಲಿಗೆ ಬಂದಿರುವಿರಿ? ನಿಮ್ಮ ಮಕ್ಕಳು ಹೆಂಡತಿ ಯಾರು ಜೊತೆ ಬರಲಿಲ್ಲವೇ?"

"ಮಗ ಸೊಸೆ ಲಂಡನ್ನಲ್ಲಿದ್ದಾರೆ.ಎರಡು ವರ್ಷಕೊಮ್ಮೆ ಬರುತ್ತಾರೆ.ಕಂಪ್ಯೂಟರನಲ್ಲಿ ವಾರಕೊಮ್ಮೆ ಮಾತಿಗೆ ಸಿಗ್ತಾರೆ.ನನ್ನ ಹೆಂಡತಿಗೆ ಅದೆ ಕೊರಗು,ಜೊತೆಗೆ ವಿಚಿತ್ರ ಕಾಯಿಲೆ ಬೇರೆ,ಯಾವುದೋ ಹಳೆ ಗುಂಗಿನಲ್ಲಿರುತ್ತಾಳೆ.ಮಾನಸಿಕವಾಗಿ ತುಂಬಾ ದುರ್ಬಳಲು.ಆಗಾಗ ನನ್ನಿಂದ  ದೂರವಾಗ್ತಾಳೆ.ಅವಳಿಲ್ಲದೆ ಮನೆ ಮನಸು ಎಲ್ಲ ಖಾಲಿ ಎನಿಸಲು ಶುರುವಾಗುತ್ತೆ.ಈ ಜಗತ್ತಿನಲ್ಲಿ ಒಬ್ಬರದ್ದು ಒಂದೊಂದು ಸಮಸ್ಯೆ ಕಣಮ್ಮ."
ಪರವಾಗಿಲ್ವೆ ಈ ಮುದುಕ ಈ ವಯಸ್ಸಿನಲ್ಲೂ ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಾನೆ.ಮತ್ತೆ ಇವರ ಸೊಸೆಗಿಂತಲೂ ನಾನೆ ಮೇಲೂ ಒಬ್ಬಳನ್ನೇ ಬೇಡ ಅತ್ತೆ ಮಾವರನ್ನು ಕರೆದುಕೊಂಡು ಹೋಗೋಣ ಅಂದಿದ್ದೆ.ಅಲ್ಲ,ಅವರಿಬ್ಬರನ್ನು ಬಿಟ್ಟು ನಾನು ತಾನೇ ಹೇಗಿರಲಿ? ಮದುವೆಯಾದ ಮೊದಲನೆಯ ದಿನವೇ ವಯಸ್ಸಾದ ಕಾಲಕ್ಕೆ ಇಲ್ಲಿಗೆ ಬಂದು ಸಾಯುವ ನಿರ್ಧಾರ ಮಾಡಿ ಆಗಿದೆ,ಇಗಾ ನಿನ್ನೊಡನೆ ಮುಂಬೈಗೆ ಕರೆದುಕೊಂಡು ಹೋಗು ಅಂದ್ರೆ ಸುತರಾಮ್ ಒಪಲಿಲ್ಲ. ಫೋನಿನಲ್ಲೂ  ಆಗೋಲ್ಲ ಅಂತ ಜಗಳಕ್ಕಿಳಿಯುತ್ತಾನೆ.ಗಂಡನಿಲ್ಲದೆ ಹೀಗೆ  ಯಾರ ಯಾರ ಮನೆಲೋ ಇರಬೇಕು.ಅವಳಿಗೆ ಸಂಕಟ ತಡೆಯಲಾಗಲಿಲ್ಲ ಕಣ್ಣೀರು ಉಕ್ಕಿ ಬಂತು.ಅಲ್ಲಿಂದ ಏಳಲು ನೋಡಿದಳು.

ಅಷ್ಟರಲ್ಲಿ "ಕುಳಿತುಕೊಂಡೆ ಮಾತಾನಾಡೋಣವ?"

"ಹಹಹ...ನಾನೇನು ಆತ್ಮಹತ್ಯೆ ಮಾಡಿಕೊಳ್ಳೋಲ್ಲ ಹೆದರ ಬೇಡಿ.ಮುಖ ತೊಳೆದು ಬರುತ್ತೇನೆ"ಎಂದಳು.

"ಹಾಗಲಮ್ಮ ಅದು...ಕೊಳದ ಬಳಿ ಸಂಜೆ ಹೊತ್ತು ಹೆಣ್ಣು ಮಕ್ಕಳು ಅಡ್ಡಾಡ ಬಾರದು.ಅದರಲ್ಲೂ ಮುಖ ತೊಳಿಯುವುದಾಗಲಿ ನೋಡಿಕೊಳ್ಳುವುದಾಗಲಿ ಮಾಡಲೇ ಕೂಡದು."ಅನ್ನುತ್ತ ಸ್ವಲ್ಪ ಸಮಯ ಮೌನಕ್ಕೆ  ಶರಣಾದ.
ಅಯ್ಯೋ ಕತ್ತಲಾಯ್ತಲ್ಲವ ಈ ಮುದುಕಪ್ಪನ ಪ್ರವೇಶದಿಂದ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ.ಇಲ್ಲಿಂದ ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಿದ್ದಾಗಲೆ,
"ನೋಡಮ್ಮ ಕತ್ತಲಾಗ್ತಿದೆ ಮನೆ ಬಿಟ್ಟು ಬಂದಿದ್ದೀಯ.ಇಲ್ಲಿ ಈ ಮರದಡಿ ವಿಪರೀತ ಚಳಿ.ಬೇಕಿದ್ದರೆ ಇವತ್ತೊಂದು ದಿನ ನನ್ನ ಮನೇಲಿ ಇರುವಂತೆ,ನಾಳೆ ನಿನ್ನ ಗಂಡ ಅದೇ ಆ ಬೇಜವಾಬ್ದಾರಿ ಮನುಷ್ಯನ ಕರಿಸಿ ನ್ಯಾಯ ಪಂಚಾಯತಿ ಮಾಡೋಣವಂತೆ ಏನಂತಿಯಾ ?"

 "ನೋಡಿ ಇವ್ರೆ...ನಿಮ್ಮಂತವರೆ ನನ್ನ ಪಾಲಿಗೆ ನಿಲ್ಲೋದು,ಕಷ್ಟಕ್ಕೆ ನೆರವಾಗೋದು.ಹೀಗೆ ಯಾವಾಗಲು ಎಲ್ಲೆಲ್ಲೊ ಯಾರ ಯಾರಾ ಮನೆಯಲೋ ಇರಬೇಕಾಗುತ್ತೆ.ಹೆಸರು ಮುಖಗಳು ನೆನಪಿಗೆ ಹೊಳಿತಿಲ್ಲ.ಆದರೆ ಎಷ್ಟೋ ತಿಂಗಳಿಂದ ಈ ತಿರುಗಾಟ ನಡೆದಿದೆ."
 "ಪರವಾಗಿಲ್ಲ ಬಿಡಮ್ಮ ನನಗೇನು ತೊಂದರೆ ಇಲ್ಲ.ಆದರೆ ಒಂದು ಮಾತು ಕೊಡಬೇಕು,ಇಲ್ಲಿಂದ ಹೊರಟ ಮೇಲೆ ಮತ್ತೆ ಅಳ ಬಾರದು ಆಯ್ತಾ?." ಆಯಿತು ಎಂಬಂತೆ ಆಕೆ  ತಲೆ ಆಡಿಸಿದಳು.

"ನಡಿ ಹೊರೋಡೋಣ ", ಪಕ್ಕದಲ್ಲಿ ಇಟ್ಟಿದ್ದ  ಕನ್ನಡಕವ ನೋಡಿ ಅದನ್ನ ಎತ್ತಿಕೊಳ್ಳಲು ಸೂಚಿಸಿದ.ಅದು ನನ್ನದಲ್ಲ ಎಂದೇಳಿ ಅಲ್ಲಿಂದ ರಭಸವಾಗಿ ಎದ್ದಳು.ಕಾಲು ಹಿಡಿದುಕೊಂಡಿತು.ಅವಳಿಗೆ ಮುಂದೆ ನಡೆಯುವ ಬಲ ಬರಲಿಲ್ಲ.ಅಷ್ಟರಲ್ಲೇ ಮುದುಕ ದೂರದ ಬೆಂಚಿನ ಮೇಲಿದ್ದ ಇನ್ನೊಂದು ವಾಕಿಂಗ್ ಸ್ಟಿಕ್ ತಂದು ಕೊಟ್ಟ,

"ನಿಧಾನವಾಗಿ ನಡಿ.ಇಲ್ಲೇ  ಪಕ್ಕದ ಬೀದಿಯಲ್ಲೇ ಮನೆ." ಅನ್ನುತ್ತಾ,ಅವಳ ಬೆಂಚಿನ ಮೆಲ್ಲಿದ್ದ ಕನ್ನಡಕವ ತನ್ನ ಕುರ್ತಾ ಜೇಬಿಗೆ ಇಳಿಸಿಕೊಂಡ.

 *

ಐದು ವರ್ಷಗಳಿಂದ ಜರಗುತ್ತಿರುವ ಈ ದೃಶ್ಯಕ್ಕೆ ಸಾಕ್ಷಿಯಾಗುವ ಸೂರ್ಯನಿಗೆ ಮಾತ್ರ ವಯಸ್ಸಾದರೂ ಮರುವಿನ ರೋಗ ಹತ್ತಲೇ ಇಲ್ಲ.ಎಂದಿನಂತೆ ಆ ಜೋಡಿ ನಡೆದು ಹೊಗುವುದನ್ನ  ಮಂಜು ಮಂಜಾಗಿಸಿಕೊಂಡೇ  ನೋಡುತ್ತಾ ಕಣ್ಣು ಮುಚ್ಚಿದ.   

Tuesday, January 22, 2013

ಸಮಾನತೆಯೆಂಬ ಕತ್ತಲಿಂದ,ಬೆಳಕೆಂಬ ಅಪರಿಚಿತನೆಡೆಗೆ !

ಸೂರ್ಯ ರಶ್ಮಿಯ  ಸ್ಪರ್ಶ ಉಷ್ಣತೆಯ ಅರಿಯದ  ದಟ್ಟವಾದ ಕಾಡದು.ಹಗಲೋತ್ತಲೇ ಕೊಳ್ಳಿ ಹಿಡಿದು ಸಾಲು ಸಾಲು ಜಾಣ ಜೀವಿಗಳು ಬೆವರುತ್ತ ಮರಗುತ್ತ ಪ್ರಾರ್ಥಿಸುತ್ತ ನಡೆಯುತ್ತಿದ್ದಾರೆ.ಕೆಲವು ಜಾಣರಿಗೆ ಸೂರ್ಯನ ಬೆಳಕು ಕವಿಯ ಕಲ್ಪನೆಯ ಸಾಲುಗಳಲ್ಲಿ ಪ್ರಾಸಕ್ಕಾಗಿ ಅರಳುವ  ಮಿಥ್ಯ,ಇತರರಿಗೆ ಅದು ಆ ಕಾಡಿನಷ್ಟೇ ಅಪೂರ್ವ ಸತ್ಯ.
ಅದರಲೊಂದಷ್ಟು ಜಾಣರು "ಈ ಪಂಜನ್ನು ಹಿಡಿದಿರುವುದಾದರು ಯಾಕೆ? ಇದಿಲ್ಲದೆಯೂ ಇಷ್ಟು ಕಾಲ ಏಕತೆಯ ಕತ್ತಲ್ಲಿನಲ್ಲಿ ಜೀವಿಸಿಲ್ಲವೇ "ಎಂದು,ಅದನ್ನೆಸೆದು ಅಲ್ಲೇ ತಟಸ್ಥರಾದರು.
ತಾವು ಹಿಡಿದಿರುವ  ಮಾಧಕ ಬೆಳಕಿನಲ್ಲಿ  ವಿಕ್ಷಿಪ್ತ  ಆಕರ್ಷಣೆಯಿದೆ,ಆ ರವಿಕಿರಣಗಳನೊಮ್ಮೆ  ದರ್ಶಿಸಲೇ ಬೇಕೆಂದು  ಪಣ ತೊಟ್ಟು ಇತರ ಜಾಣರು ವೇಗಾವಾಗಿ ಮುನ್ನಡೆದರು.
"ನೋಡಿದಿರಾ,ಏಕತಾನತೆಯ ಮುರಿದ  ಈ ಬೆಳಕಿನಲ್ಲಿ  ನಾವೆಲ್ಲ ಬೇರೆ ಬೇರೆಯಾಗೇ ಕಾಣುತ್ತಿದೇವೆ,ವರ್ತಿಸುತ್ತಿದೇವೆ...ದೀವಟಿಗೆಯ ದಿವ್ಯಾಗ್ನಿ ಅನನ್ಯತೆಯ ಸಾರುತ್ತಿದೆ"   ಉದ್ಧರಿಸಿದ  ಒಬ್ಬ .
"ಬೆಳಕಿನ ಹುಡುಕಾಟದಲ್ಲಿ  ಎಷ್ಟೊತ್ತು ಹೀಗೆ ಸಾಗೋದು? ಹಚ್ಚಿದ ಕೊಳ್ಳಿ ಇನ್ನೇನು  ಆರಿ ಹೋಗುವುದರಲ್ಲಿದೆ...ಆಮೇಲೆ ಎತ್ತ ಸಾಗುತ್ತಿದೇವೆ ಅನ್ನೋ ಅರಿವಿಲ್ಲದೆ  ಚಲಿಸಬೇಕಾಗಬಹುದು"  ಹಲುಬಿದ ಇನ್ನೊಬ್ಬ.
"ಸರಿ ಹಾಗಿದ್ದರೆ,ಬೆಳಕ್ಕನ್ನು ನಮ್ಮಿಂದ ಕಿತ್ತುಕೊಂಡದ್ದು ಈ ಕತ್ತಲು ಕಾಡು,ಇದನ್ನೇ ಕೊಳ್ಳಿಯಿಂದ ಸುಟ್ಟು  ಸೇಡು ತೀರಿಸಿಕೊಳ್ಳೋಣ"ಎಂದವನೇ ಕಾಡಿಗೆ ಕಿಡಿ ಹಚ್ಚಿದ.ಅವನ ಮಾತಿಗೆ ಒಮ್ಮತಿಸಿ ಉಳಿದ ಸಂಗಡಿಗರು  ಕಾಡನ್ನು ಉರಿಸಿದರು.
ಇಡಿ ಕಾಡು ಉರಿಯಲಾರಂಭಿಸಿತು,ಅಲ್ಲಿದ್ದ ಹಲವರು ಉರಿದು ಬೂಧಿಯಾದರು.
*
ದೂರದಲ್ಲಿ ತಟಸ್ಥರಾದವರು, ಅರ್ಧ ಬೆಂದವರು ಬೋಳು ಬಯಲಿನಲ್ಲಿ  ಚೆಲ್ಲಿದ ಸೂರ್ಯನ ಉಜ್ವಲ ಬೆಳಕ ಕಂಡು ಬೆದರಿ ಬೆಚ್ಚಿ ಕಿರುಚುತ್ತ  ಸತ್ತ  ಕಾಡನ್ನು ಅರಸುತ್ತಾ  ಓಟಕಿತ್ತರು.

Saturday, January 19, 2013

ಪುಟಾಣಿ....: ಕಥೆಯ ಒಳಾಂಗಣದ ಸುತ್ತಾ

ಚಿತ್ರಕಲೆ: ವೈಶಾಲಿ ಶೇಷಪ್ಪ
"ಎಲ್ಲ ರಾಮಾಯಣ ಮುಗಿಯುವಷ್ಟರಲ್ಲಿ ರಾತ್ರಿ ಎಂಟಾಗಿತ್ತು.ಬಿನ್ನಭಿಪ್ರಾಯಗಳಿಗೆ ಮುಕ್ತಿ ಹಾಡಿದ ಖುಷಿಯೊಂದಿಗೆ ಅಪ್ಪ ಎಂದಿನಂತೆ ಜಗಲಿ ಮೇಲೆ ಬೀಸುತಿದ್ದ ತಣ್ಣನೆ ತಂಗಾಳಿಗೆ ಮೈಯೊಡ್ಡಿ ಎಲೆ ಅಡಿಕೆ ಜಗಿಯುವುದರಲ್ಲಿ ಮಗ್ನರಾದರು"-- ಹೀಗೆ ಅನರ್ಘ್ಯ ತನ್ನ ಹೊಸ ಪುಸ್ತಕದ ಹನ್ನೊಂದನೆಯ ಭಾಗಕ್ಕೆ ಅಂತ್ಯ ಹಾಡಿ ರಶ್ಮಿ ತಂದಿಟ್ಟಿದ್ದ ಊಟದ ಬಾಕ್ಸ್ ತೆರೆದು ಶಾಸ್ತ್ರಕ್ಕೆ ಒಂದೆರೆಡು ತುತ್ತು ನುಂಗಿ ನಿದ್ರಾ ದೇವಿ ಮಡಿಲಿಗೆ ಜಾರಲು ಪ್ರಯತ್ನಿಸಿದಳು.

ಅನರ್ಘಳ "ಪುಟಾಣಿ" ಕಾದಂಬರಿಯ  ಮೂರು ಭಾಗಗಳು ಜನಪ್ರಿಯತೆಯ ಉತ್ತುಂಗಗಕ್ಕೆ ಏರಿ ಸಿಹಿ ತಿನಿಸಂತೆ  ಮಾರಟವಾದ ಹಿನ್ನಲೆಯಲ್ಲಿ ಪ್ರಕಾಶಕರು ಅದರ ನಾಲ್ಕನೆಯ ಭಾಗ ಹೊರ ತರಲು ಉತ್ಸುಕರಾಗಿದ್ದರಲ್ಲದೇ ಒಂದು ತಿಂಗಳಲ್ಲಿ ಮುಂದಿನ ಭಾಗವನ್ನು ಬರೆದು ಮುದ್ರಣಕ್ಕೆ ಕಳಿಸಿಕೊಡಬೇಕೆಂದು ಅನರ್ಘ್ಯಳ ಮೇಲೆ ಒತ್ತಡ ತಂದಿದ್ದರು.ಅನರ್ಘ್ಯಳಿಗೆ ತನ್ನ ಬ್ಯಾಂಕ್ ಕೆಲಸದ ನಡುವೆ ಬರವಣಿಗೆ ಎಂದು ಹೊರೆ ಎನಿಸಿರಲಿಲ್ಲ.ನಾಲ್ಕು ವರ್ಷದ ಅವಧಿಯಲ್ಲಿ ಆರಕ್ಕೂ ಹೆಚ್ಚು ಪುಸ್ತಕಗಳ ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಅತಿ ಕಿರಿಯ ಲೇಖಕಿ ಅವಳು.ಕವಿತೆ ಕಥೆ ನಾಟಕ ಹೀಗೆ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿ ಪರಿಣಿತಳೆನಿಸಿಕೊಂಡ ಅನರ್ಘ್ಯ ತನ್ನದೆಯಾದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಳು.ಅದರಲ್ಲೂ ಅವಳ ಮೊದಲ ಮುದ್ರಿತ ಕಾದಂಬರಿ "ಪುಟಾಣಿ" ಅನರ್ಘ್ಯಳಿಗೆ ದೊಡ್ಡ ಓದುಗರ ಬಳಗವನ್ನು ಕಟ್ಟಿಕೊಟ್ಟಿತ್ತು.

*

ಅತ್ತ ಆ ಜಗತ್ತಿನಲ್ಲಿ  ಎಲೆ ಅಡಿಕೆ ಜಗಿಯುತ್ತಿದ್ದ ಪುಟಾಣಿಯ ಅಪ್ಪನ ನೋಡಿ ಅಮ್ಮ ಮೂಗು ಚೂಪು ಮಾಡಿಕೊಂಡಳು.
"ಏನ್ರಿ ಇದು ನಿಮ್ಮದು ಇಷ್ಟೆಲ್ಲಾ ಅವಾಂತರಗಳು ನಡೆದ ನಂತರವೂ ಏನು ಆಗಿಲ್ಲವೆಂಬಂತೆ ತಣ್ಣಗೆ ಕೂತಿದ್ದಿರಲ್ಲ ....ಅಲ್ರಿ,ನಾಳೆಯ ಚಿಂತೆಯೇ ಇಲ್ಲವೇ ನಿಮಗೆ" ಎಂದು ಗೊಣಗಾಡಿದಳು.
"ಯಾಕೆ ಗೊಣಗುತ್ತೀಯ ಮಾರಾಯ್ತಿ,ಆ ದೇವರು ಇಟ್ಟಂಗೆ ಆಗುತ್ತೆ.ನಮೆಲ್ಲ ಯೋಜನೆಗಳನ್ನ ತಲೆ ಕೆಳಕ್ಕೆ ಮಾಡಲು ಅವನಿರುವಾಗ ನಾನ್ಯಾಕೆ ತಲೆ ಕೆಡಿಸಿಕೊಳ್ಳಲ್ಲಿ ಹೇಳು?ಅವನಂತೆಯೇ ಎಲ್ಲವು ನಡೆಯುವಾಗ ಚಿಂತೆ ಮಾಡಿ ಪ್ರಯೋಜನವಾದಿತೇ ?"ಅನ್ನುತ್ತ ಸಿಹಿ ಅಡಿಕೆಯ ನೀರನ್ನು  ಹೀರಿ ಕೊಂಡ.

ಅಪ್ಪ ಹಾಗೆ ಅಗಿದು ಅಗಿದು ಎಲೆ ಅಡಿಕೆ ಅಸ್ವಾಧಿಸುವ ಚಟ ಪುಟಾಣಿಯ ಅಮ್ಮನಿಗೆ  ಅಸಯ್ಯವೆನಿಸುತಿತ್ತು.ಆ ರೀತಿ ತಿನ್ನುವುದರಿಂದಲೇ ಆತ ಅಷ್ಟು ನಿಶ್ಚಿಂತೆಯಿಂದಿರಲು ಸಾಧ್ಯವಾಗುತ್ತಿರಬೇಕೆಂಬ  ಗುಮಾನಿ ಇದ್ದುದ್ದರಿಂದ ಅಪ್ಪನ  ಅಭ್ಯಾಸವನ್ನ  ಸಹಿಸಿಕೊಳ್ಳುತ್ತಿದ್ದಳು ಆಕೆ.

ಅಷ್ಟರಲ್ಲಿ ಎಡವುತ್ತಾ ಬಂದ ಪುಟಾಣಿಯ ತಮ್ಮ,"ನಿಮ್ಮದಾದರು ಪರವಾಗಿಲ್ಲ ಎಷ್ಟೋ ಸಲ "ತಮ್ಮ ಕುಣಿಯುತ್ತಿದ್ದ" ಅನ್ನೋದರಲ್ಲಿ ನನ್ನ ಕಥೆ ಅಂತ್ಯ ಗೊಳಿಸಿ,ದಿನಗಟ್ಟಲ್ಲೇ ಕುಣಿಯುತ್ತಲೇ ಇರಬೇಕಾದ ಪರಿಸ್ಥಿತಿಗೆ ದೂಡಿದ್ದಾನೆ ಗೊತ್ತ ಆ ನಿಮ್ಮ ತಿಕ್ಕಲು ದೇವರು" ಎಂದು ಮೂಗು ಮುರಿದ.ಆತ ಕೆಳಗಿಳಿದು ಬರಲಿ ಅವನ ಮೂಗು ಹಿಡಿದು ಕೇಳುತ್ತೇನೆ ಅಂತ ತನ್ನ ಪಾಡಿಗೆ ತಾನೆ ಏನೇನೋ ಮಾತಾಡಿಕೊಂಡ ಪುಟಾಣಿಯ ತಮ್ಮ.

"ಮೊನ್ನೆ ವಾಕಿಂಗೆಂದು ಹೋದಾಗ ಆ ದಾರಿ ಹೋಕ ಆಲ್ಕೆಮಿಸ್ಟ್ ಹುಡುಗ ಸಿಕ್ಕಿದ್ದ.ಅವನು ಮರುಭೂಮಿ,ಈಜಿಪ್ಟ್ ಎಲ್ಲಾ  ಸುತ್ತಿ ನಿಧಿಯೊಂದಿಗೆ ಮರಳಿ ಬಂದು ಇಲ್ಲಿ ಆ 
ನಾಲ್ಕನೆಯ ಮಹಡಿಯಲ್ಲಿ ವಾಸವಾಗಿದ್ದನಂತೆ.ಅವನಿಗಿರೋ ಅದೃಷ್ಟ ನಮಗಿಲ್ಲ ನೋಡು...ಅತ್ತ ದೇಶಾನು ಸುತ್ತಲಿಲ್ಲ ಇತ್ತ ಯಾವ ನಿಧಿಯು ದಕ್ಕಿಸಿಕೊಂಡಿಲ್ಲ"ಅಪ್ಪನ ಜಗಿತ ಇನ್ನು ಹೆಚ್ಚಾಗ ತೊಡಗಿತ್ತು.

"ನೀವು ಚಪ್ ಚಪ್ ಮಾಡಿದ್ದು ಸಾಕು ಸ್ವಲ್ಪ ಬಾಯಿಗೆ ಬಿಡುವು ಕೊಡಿ.ಹೋದ ಸಲ ಗಿರಿಜಾಳ ಸೀಮಂತದಲ್ಲಿ ಅವಳ ಪಕ್ಕದ ಕೆಂಪು ಮನೆಯ ಒಡತಿ ಜೊತೆ ಹರಟಿದ್ದೆ.ಅವಳ ಜೀವನಕ್ಕೆ ಹೋಲಿಸಿದರೆ  ನಮ್ಮದು ಸಾವಿರ ಪಾಲು ಮೇಲು.  ದೇವರ ಕೃಪೆಯಿಂದ ತಂಪಾಗಿದ್ದೀವಿ" ಅನ್ನುತ್ತ ಮಗ್ಗಲು ಬದಲಾಯಿಸಿದಳು ಅಮ್ಮ.

"ಮೇಲಿರುವವನ ಬಗ್ಗೆ ಹಾಗೆಲ್ಲ ಹಗುರವಾಗಿ ಆಡಿಕೊಳ್ಳಬೇಡಿರೋ ಅವನು ನಮ್ಮ ಹಣೆ ಬರಹ ಬರೆಯದೆ  ಹೋಗಿದ್ದರೆ ನಾವ್ಯಾರು ಹುಟ್ಟುತ್ತಲೇ  ಇರಲಿಲ್ಲ.ಬೇಡದ ಮಾತಾಡಿ ಬಾಯಿ ನೊವಿಸಿಕೊಳ್ಳೋ ಬದಲು ಸುಮ್ಮನೆ ಮಲಗಬಾರದ" ತನ್ನ ಕೊಣೆಯಿಂದ ಕೆಮ್ಮುತ್ತಲೇ ಗದರಿದ ತಾತನ ಮಾತು ಕೇಳಿ ಎಲ್ಲರು ಮೌನಕ್ಕೆ ಶರಣಾದರು.

ಈ ರಾತ್ರಿ ಎಷ್ಟುದ್ದ ಇರಬಹುದು? ಅಮ್ಮ ಹೇಳಿದ ಹಾಗೆ ಅಕ್ಕ ನಮ್ಮನೆಲ್ಲ ಬಂದು ಯಾವಾಗ ಸೇರಬಹುದು?ಎಂದು ಲೆಕ್ಕ ಹಾಕುತ್ತಿದಂಗೆ ತಲೆ ತೂಗಿ ರೆಪ್ಪೆ ಮುಚ್ಚಿದ ಪುಟಾಣಿಯ ತಮ್ಮ.

*

ಅನರ್ಘ್ಯಳಿಗೆ ಅಂದು ರಾತ್ರಿ ನಿದ್ದೆಯೇ ಹತ್ತಲಿಲ್ಲ.ರಶ್ಮಿ ಜೊತೆಗಿನ ಮಾತುಕತೆ  ಅವಳಿಗೆ ಹಳೆಯದೆಲ್ಲವನ್ನು ನೆನಪಿಸಿತ್ತು.
ರಶ್ಮಿ ತೀರ ಈ ನಡುವೆ ಅಂದರೆ ಅನರ್ಘ್ಯ ಲೇಖಕಿ ಎಂದು ಗುರುತಿಸಿಕೊಂಡ ನಂತರವಷ್ಟೇ ಅವಳಿದ್ದ ಮಹಿಳಾ ಹಾಸ್ಟೆಲ್ ಗೆ ಬಂದು ಹೋಗಿ ಮಾಡುತ್ತಿದ್ದಳು.ರಶ್ಮಿಯ ತಾಯಿ  ಮತ್ತು ಅನರ್ಘ್ಯಳ ಅಮ್ಮ ಜಾನಕಿ ಒಡ ಹುಟ್ಟಿದ್ದ ಅಕ್ಕ ತಂಗಿಯರು.

ಮಾಧವ ಜನಿಕಿಯರದ್ದು ಸುಖಿ ಸಂಸಾರ.ರಜನೀಶ ರಾಯರು ತಮ್ಮ ಕುಡಿಯಾದ ಮಾಧವ ರಾಯರಿಗೆ ಇದ್ದ ಅಪಾರ ಅಸ್ತಿಯನ್ನು ಬರೆದಿಟ್ಟು ವಿಧಿವಶರಾಗಿದ್ದರು.ಅನರ್ಘ್ಯ ಮಾಧವ ಜಾನಕಿ ದಂಪತಿಗಳ ಒಬ್ಬಳೇ ಮಗಳು.ಅನರ್ಘ್ಯ ಹುಟ್ಟಿದ್ದು ಕೊಪ್ಪದಲ್ಲಿ. ನಂತರ ವ್ಯವಹಾರಕ್ಕೆಂದು  ಮಾಧವ ರಾಯರು ಮನೆಯೊಂದನ್ನು ಬಿಟ್ಟು ತೋಟ ಗದ್ದೆ ಸೇರಿದಂತೆ ಎಲ್ಲ ಅಸ್ತಿಯನ್ನು ಮಾರಿ ಅದರ ಮೇಲೊಂದಿಷ್ಟು ಸಾಲ ಪಡೆದು ಹಾಸನದಲ್ಲಿ ಹೊಸ ಪ್ಲಾಸ್ಟಿಕ್ ಫ್ಯಾಕ್ಟರಿ ಒಂದನ್ನು ತೆರೆದಿದ್ದರು.ಹೀಗೆ ಸಂಸಾರ ಸಮೇತ ಅವರುಗಳು ಹಾಸನಕ್ಕೆ ವಲಸೆ ಬರಬೇಕಾಯಿತು.ಮಗಳನ್ನು  ಯಾವುದೇ ಕುಂದು ಕೊರತೆ ಇಲ್ಲದಂತೆ ಸುಖವಾಗಿ ಬೆಳೆಸಬೇಕೆಂಬ ಕನಸಿನ ಧೋಣಿ ಹತ್ತಿದ್ದ  ಮಾಧವ ದಂಪತಿಗಳು ಅದರಲ್ಲೇ  ವಿಹರಿಸುತ್ತಿದ್ದ ದಿನಗಳವು.ವರುಷಗಳು ಹರುಷದಲ್ಲಿ ಕಳೆದು ಹೋಗುತಿದ್ದವು,ಮುದ್ದು ಮಗಳು ಅನರ್ಘ್ಯಳನ್ನು ಅಲ್ಲಿಯೇ ಒಂದು ಶಾಲೆಗೇ ದಾಖಲಿಸಿದ್ದರು.

ತೊದಲು ನುಡಿಯ ಪುಟ್ಟ ಅನರ್ಘ್ಯ ಬೆಳೆಯ ತೊಡಗಿದಂತೆ ಶಾಲೆಯ ಸಹಪಾಟಿಗಳಿಗಿದ್ದ ಅಣ್ಣ ಅಕ್ಕ ತಂಗಿಯರೊಂದಿಗಿನ  ಒಡನಾಟವ ನೋಡಿ  ತನಗೂ ತಂಗಿ ತಮ್ಮ ಬೇಕೆನ್ನೋ ಆಸೆ ಅವಳಲ್ಲೂ  ಚಿಗುರೊಡೆಯಿತು.ಅವಳಿಗೆ ತಮ್ಮ ತಂಗಿಯಿಲ್ಲದ ಕೊರತೆ ಯಾವ ಮಟ್ಟಿಗೆ ಕಾಡಿತ್ತೆಂದರೆ ಯಾರಾದರು ನಿನಗೇನೂ ಬೇಕು ಪುಟಾಣಿ ಅಂತ ಕೇಳುವುದೇ ತಡ ಪಟ್ಟನೆ "ತಮ್ಮ ತಂಗಿ"ಎಂದು ಹಂಬಲದ ಕಣ್ಣುಗಳಿಂದ ಉತ್ತರಿಸುತ್ತಿದ್ದಳು.ಜಾನಕಿ ಎರಡನೇ ಮಗುವಿಗೆ ಗರ್ಭಿಣಿಯಾದಾಗ ಅಪ್ಪ ಅಮ್ಮ ತನಗಾಗಿ ತಮ್ಮ ತಂಗಿ ಕರೆದುಕೊಂಡು ಬರುವವರಿದ್ದಾರೆ ಎಂದು ಶಾಲೆಯಲ್ಲಿ ಎಲ್ಲರಿಗು ಹೇಳಿಕೊಂಡು ನಲಿದಿದ್ದಳು ಅನರ್ಘ್ಯ.ಆದರೆ ಜಾನಕಿಗೆ ನಾಲ್ಕು ತಿಂಗಳಾಗಿದ್ದಾಗ ಆ ಸುಖಿ ಸಂಸಾರಕ್ಕೆ ಬರ ಸಿಡಿಲು ಬಂದೊಡೆಯಿತು,ಮಾಧವ ರಾಯರು ನಡೆಸುತ್ತಿದ್ದ ಪ್ಲಾಸ್ಟಿಕ್ ಫ್ಯಾಕ್ಟರಿ ಬೆಂಕಿ ಅನಾಹುತದಲ್ಲಿ ಕರಗಿ ಹೋಗಿತ್ತು.ಹಾಗೊಂದು ಆಗಿ ಹೋದ ಅವಘಡದಿಂದ ಕೈ ಸುಟ್ಟು ಕೊಂಡು ವಿಪಾರಿತ ಸಾಲ ಬಾಧೆಯಿಂದ ತತ್ತರಿಸಿ ಹೋಗಿದ್ದ ರಾಯರು,ಮುಂದೆ ಪರಿಸ್ಥಿತಿ ಸುಧಾರಿಸದೆ ಹೋದರೆ ಮತ್ತೆ ಕೊಪ್ಪಕ್ಕೆ ಯಾವುದೊ ಧೃಡ ನಿರ್ಧಾರ ಮಾಡಿಕೊಂಡು ಮರಳೋದೆಂದು ನಿರ್ಧರಿಸಿದರು.ನಡೆದ ದುರಂತದ ಬಿಸಿ ಅನರ್ಘ್ಯಳಿಗೆ ತಟ್ಟದಂತೆ ಅಷ್ಟು ದಿನ ನೋಡಿಕೊಂಡ ಅವಳ  ಅಪ್ಪ ಅಮ್ಮ,ಕಡೆಗೂ ಸೋತು ಬೇರೆ ದಾರಿ ಇಲ್ಲದೆ  ಅಂದುಕೊಂಡ ಹಾಗೆ ಕೋಪಕ್ಕೆ ಬಂದಿಳಿದರು.ಅಲ್ಲಿ ನಡೆಯಲಿರುವ ದುರಂತದ ಸುಳಿವಿಲ್ಲದೆ ಹಸಿರು ಸಿರಿವಂತಿಕೆ ಹೊದ್ದು ನವ ವಧುವಿನಂತೆ ಕಂಗೊಳಿಸುತ್ತಿತ್ತು ಆ ಭಾಗದ ಮಲೆನಾಡು.ದಿನ ಅಳುತ್ತಿದ್ದ ಅಮ್ಮನ್ನ ಕಣೀರು ಓರೆಸುತ್ತಿದ್ದ  ಅನರ್ಘ್ಯ  ಮನೆಯ ದಾರಿಯಲ್ಲಿ  ಹೋಗುವಾಗ ಸುರಿಯುತ್ತಿದ್ದ ತುಂತುರು ಮಳೆಯನ್ನೂ ನೋಡಿ "ಮಳೆ ಅಂದ್ರೆ ಮೇಲೆ ಯಾರೋ ಅಳುತ್ತಿದ್ದರೆ ಅಲ್ಲವ ಅಪ್ಪ?ನಾನು ದೊಡ್ಡವಳಾದ ಮೇಲೆ ಅವರೆಲ್ಲರ ಕಣೀರು ಒರೆಸುವೆ" ಎಂಬವಳ ಮುಗ್ದ ಮಾತನ್ನು ಆಲಿಸಿದ ಮಾಧವ ರಾಯರು ತೋಳಲ್ಲಿದ್ದ ಅವಳನಿನ್ನು ಬಿಗಿಯಾಗಿ ತಬ್ಬಿ ಕಣ್ಣ ತುಂಬಿಕೊಂಡು ಮನೆ ಸೇರಿದರು.

ಸಂಜೆ  ಪಕ್ಕದ ಮನೆಯ ಪಚ್ಚಿ ಮತ್ತು ಚಿಟ್ಟೆಯೊಂದಿಗೆ ಆಟದಲ್ಲಿ ಮುಳುಗಿ ಹೋಗಿದ್ದ ಅನರ್ಘ್ಯಳನ್ನ ಜಾನಕೀ ರಾತ್ರಿ ಏಳಕೆಲ್ಲ ಊಟದ ನೆಪ ಹೇಳಿ ಮನೆಗೆ ಕರೆದೊಯ್ದಳು.ವಲ್ಲದ ಮನಸಿನಿಂದಲೇ ಅಳುತ್ತ ಬಂದ ಅನರ್ಘ್ಯಳಿಗೆ ಊಟ ಮಾಡಿಸಿ ಅಂಗಳದಲ್ಲಿದ್ದ ಚಂದಮಾಮನ ತೋರಿಸಿ ಸಮಾಧಾನ ಮಾಡಿದ್ದ ಜಾನಕಿಯ  ಮುಖದಲ್ಲಿ ಮೂಡಿದ್ದ ವಿಚಿತ್ರ ಮಂದಹಾಸ ಕಂಡ ಅನರ್ಘ್ಯ "ಯಾಕಮ್ಮ ಇಷ್ಟು ಖುಷಿಯಾಗಿದ್ದೀಯ" ಎಂದು ಕೇಳಿದ್ದಳು.
"ನಮ್ಮೆಲ್ಲ ಕಷ್ಟಗಳು ಇಂದು ಪರಿಹಾರವಾಗುತ್ತದೆ ಪುಟ್ಟ ಅದಕ್ಕೆ ಈ  ಖುಷಿ"ಎಂದು ಸುಮ್ಮನಾದಳು ಜಾನಕಿ.

ಅಂದು ರಾತ್ರಿ ಮಾಧವ ಜಾನಕಿ ಊಟ ಮುಗಿಸುತ್ತಿದಂತೆ ಮನೆ ಪಕ್ಕದಲ್ಲಿದ್ದ ಭಾವಿಯ ಬಳಿ  ಕುಳಿತು ಏನೇನೋ ಮಾತಾಡಿದರು.ಅನರ್ಘ್ಯ ಅದ್ಯಾವುದರ ಪರಿವಿಲ್ಲದೆ ತಾನು ಅಪ್ಪ ಅಮ್ಮ ಹೇಗೆ  ಕಾಣುತ್ತಿದ್ದೇವೆಂದು ತಿಳಿಯಾದ ಭಾವಿ ನೀರಿನಲ್ಲಿ ಬಗ್ಗಿ ಬಗ್ಗಿ ಪ್ರತಿಬಿಂಬ ಹುಡುಕಳು ಪ್ರಯತ್ನಿಸುತ್ತಿದಂತೆ ಮೇಲಿಂದ ಅಲಸಿನ ಮರದ ಎಳೆ ಕಾಯಿಗಳು ಭಾವಿಗೆ ಧುಮುಕಿ ನೀರನ್ನು ಕದಲಿಸಿ ಅವಳ ಮುದ್ದು ಮುಖವನ್ನು ಕೆಂಪಾಗಿಸಿದ್ದವು.

ಅಲ್ಲಿಂದ ಮೂವರು ಮನೆಯೊಳಕ್ಕೆ ಹೋಗುತಿದ್ದಂತೆ ಸೋತಂತಿದ್ದ ಜಾನಕಿಯ ಮುಖ ನೋಡಿ ತಾವೇ ಹಾಲು ತಂದು ಅನರ್ಘ್ಯಳಿಗೆ ಕುಡಿಸಿದರು ಮಾಧವ ರಾಯರು.ಹಾಲು ಕುಡಿದ ಅನರ್ಘ್ಯಳನ್ನ ಎಂದಿನಂತೆ ಮುದ್ದಾಡಿ ಮಧ್ಯದಲ್ಲಿ ಮಲಗಿಸಿಕೊಂಡು ಚಿರ ನಿದ್ರೆಗೆ ಜಾರಿದ್ದರು ಮಾಧವ ದಂಪತಿಗಳು.ಅನರ್ಘ್ಯ ಅವಳ ತಂದೆ ತಾಯಿಯನ್ನು ಜೀವಂತ ನೋಡಿದ್ದು ಅದೇ ಕೊನೆ.ಮಾಧವ ಜಾನಕೀ ಕಡೆಯ ಬಂಧುಗಳು ಪುಟ್ಟಾಣಿ ಅನರ್ಘ್ಯಳನ್ನು ಒಳ್ಳೆಯ ಆಡಳಿತವಿದ್ದ ಅನಾಥ ಮಕ್ಕಳ ಆಶ್ರಮಕ್ಕೆ ಸೇರಿಸಿದ್ದೆ ತಾವು ಮಾಡಿದ್ದ ದೊಡ್ಡ ಉಪಕಾರವೆಂಬಂತೆ ಬೀಗಿದ್ದರು.

ತನ್ನ ಅಪ್ಪ ಅಮ್ಮನೊಂದಿಗೆ ಕಳೆದ ಕ್ಷಣಗಳೇ ಒಂಟಿ ಅನರ್ಘ್ಯಳನ್ನ ಸದಾ ಜೀವಂತ ಇರಿಸಿದ್ದು.ಅಂದು ಅಪ್ಪನ ಬದಲು ಅಮ್ಮ ಹಾಲು ತಂದು ಕೊಟ್ಟಿದ್ದರೆ ತಾನು ಅಂದೇ ಅವರೊಂದಿಗೆ ಸಾಯುತ್ತಿದ್ದೆ ಅಪ್ಪನಿಗೆ ವಂಶ ಬೆಳೆಯುವುದೇ ಮುಖ್ಯವೆನಿಸಿತ್ತೇನೋ ಅಮ್ಮನಿಗೆ ಸುಳ್ಳು ಹೇಳಿ ನನ್ನ ಹಾಲಿನಲ್ಲಿ ವಿಷ ಬೆರೆಸದೆ ಕೊಟ್ಟು ಬಿಟ್ಟಿರಬೇಕು ಎಂದೆನಿಸಿತ್ತು ಅನರ್ಘ್ಯಳಿಗೆ.ಅವರ ಗುಂಗಿನಲ್ಲೇ ಓದಿನ ನಡುವೆ ಸಮಯ ಸಿಕ್ಕಾಗೆಲ್ಲ ಕಥೆಗಳ ಬರೆಯುತ್ತಿದ್ದಳು.ಅದರಲ್ಲಿ ಅಪ್ಪ ಅಮ್ಮ ಹುಟ್ಟದ ತಮ್ಮ ತಾತ ಜೀವಂತವಾಗುತ್ತಿದ್ದರು.ಆ ಕಥೆಗಳಲ್ಲೇ ಅವರೆಲ್ಲ ಜೀವಿಸ ತೊಡಗಿದರು.

ಅನರ್ಘ್ಯ ಬಿ ಕಾಂ ಮುಗಿಸಿ ಬ್ಯಾಂಕ್ ನೌಕರಿ ಹಿಡಿದಾಗ ಸಾಹಿತ್ಯ ಆಸಕ್ತಿ ಇಟ್ಟುಕೊಂಡಿದ್ದ ಅದೇ ಬ್ಯಾಂಕಿನ ಮ್ಯಾನೇಜರ್ ಪರಿಚಯಸ್ತ ಪ್ರಕಾಶಕರಿಗೆ ಅನರ್ಘ್ಯಳ ಪ್ರತಿಭೆಯ ಬಗ್ಗೆ ಹೇಳಿಕೊಂಡಿದ್ದರು.ಅಲ್ಲಿಂದ ಅನರ್ಘ್ಯ ಲೇಖಕಿಯಾಗಿ ದೊಡ್ಡ ಮಟ್ಟಿಗೆ  ಬೆಳೆದು ನಿಂತಳು.ಅನರ್ಘ್ಯಳ ಪುಟಾಣಿ ಕಾದಂಬರಿ ಹಾಗೆ ಇನ್ನು ಹಲವು ಕಥಾ ಸಂಕಲನಗಳು ಬಿಡುಗಡೆಯಾದವು.ಆದರೆ ಅನರ್ಘ್ಯಲಿಗೆ ಹೆಸರು ಕೀರ್ತಿ ತಂದು ಕೊಟ್ಟಿದ್ದು ಅವಳ "ಪುಟಾಣಿ" ಕಾದಂಬರಿ.ಅದಾಗಲೇ ಮೂರು ಭಾಗದಲ್ಲಿ ಹೊರ ಬಂದ ಆ ಕಾದಂಬರಿಯ ನಾಲ್ಕನೆ ಭಾಗದ ಬಿಡುಗಡೆಯ ಸಿದ್ದತೆಗಳು ನಡೆದಿದ್ದವು.ಅನರ್ಘ್ಯಳ "ಪುಟಾಣಿ" ಕಾದಂಬರಿ  ಲವಲವಿಕೆಯಿಂದ  ಕೂಡ್ಡಿದಾಗಿದ್ದು, ಅದರಲ್ಲಿನ ಕಥೆಗಳು ದುಃಖದಲ್ಲಿ ಕೊನೆಗೊಳ್ಳುತ್ತಿರಲಿಲ್ಲ.ಸಂಸಾರದ ಚಿಕ್ಕ ಪುಟ್ಟ ಹಾಸ್ಯ ಸನ್ನಿವೇಶಗಳನ್ನ ಸುಖಿ ಸಂಸಾರದ ಸೂತ್ರಗಳನ್ನ ಮನುಷ್ಯರ ನಡುವಿನ ಪರಸ್ಪರ ಬಾಂಧವ್ಯವನ್ನು ಸರಳವಾಗಿ ತೆರೆದಿಡುತ್ತಿದ್ದ ಆ ಕಾದಂಬರಿ ಎಲ್ಲರ ಮನ ಗೆದ್ದಿತ್ತು.ಅದು ಪುಟಾಣಿ ಎಂಬ ಲೇಖಕಿಯ ಆತ್ಮಕಥನ ಎಂದೇ ಜನರು ನಂಬಿಕೊಂಡಿದ್ದರು.ಎಷ್ಟೊಂದು ಸುಖಜೀವಿ ಈ ಪುಟಾಣಿ ಮತ್ತವಳ  ಸಂಸಾರ ಅದರಂತೆಯೇ  ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವಷ್ಟು ಪರಿಣಾಮ ಬೀರಿತ್ತು ಪುಟ್ಟಾಣಿ ಕಾದಂಬರಿ.

ಅನರ್ಘ್ಯ ಲೇಖಕಿಯಾಗಿ ಪ್ರಚಲಿತಕ್ಕೆ ಬಂದ ನಂತರ ಅವಳನ್ನು  ದೂರವಿಟ್ಟಿದ್ದ ನೆಂಟರೆಲ್ಲ ಹತ್ತಿರವಾಗ ತೊಡಗಿದರು.ಅದರಲ್ಲೂ ಅವಳ ಚಿಕ್ಕಮ್ಮನ ಮಗಳಾದ ರಶ್ಮಿಗೆ ಅನರ್ಘ್ಯಳೆಂದರೆ ವಿಶೇಷ ಪ್ರೀತಿ ಗೌರವ.ಕವನ ಕಥೆ ಬರೆಯುವ ಗೀಳಂಟ್ಟಿದ್ದ ರಶ್ಮಿಗೆ ಅನರ್ಘ್ಯಳೇ ತನ್ನ ಬರವಣಿಗೆಯ ಬೆಳವಣಿಗೆಗೆ ಸರಿಯಾದ  ಮಾರ್ಗದರ್ಶಿಯೆಂದು ಅವಳ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಳು. ವರ್ಷಗಳಿಂದ ಹಾಸ್ಟೆಲ್ ಊಟ ತಿನ್ನುತಿದ್ದ ಅನರ್ಘ್ಯಳಿಗೆ ತಾನೇ ಬಾಕ್ಸ್ ತಂದು ಬಲವಂತವಾಗಿ  ತಿನ್ನಿಸಿ ಹೋಗುತ್ತಿದ್ದಳು ರಶ್ಮಿ. ರಶ್ಮಿ ರಶ್ಮಿ ಯಂತಹ ಜನರು ಎಷ್ಟೇ ಹತ್ತಿರವಾಗಲು ಪ್ರಯತ್ನಿಸಿದರೂ ಅನರ್ಘ್ಯಳಿಗೆ ಮಾತ್ರ ತನ್ನ ಕಲ್ಪನೆಯ ಜಗತ್ತನ್ನೇ ಹಚ್ಚಿಕೊಂಡು ಅದರಲ್ಲೇ ಖುಷಿ ಕಾಣುತ್ತಿದ್ದಳು ಅವಳು.

ಆದರೆ ಮೊದಲ ಬಾರಿಗೆ ಅಂದು ರಶ್ಮಿ ಅನರ್ಘ್ಯಳನ್ನು ವಾಸ್ತವಕ್ಕೆ ಎಳೆಯಲು ಪ್ರಯತ್ನಿಸಿದ್ದಳು.
"ಅಕ್ಕ ತ್ರಿವೇಣಿ ತೇಜಸ್ವಿನಿ ವೈದೇಹಿ ಭಾಗ್ಯಲಕ್ಷ್ಮಿ ಇವುರುಗಳ ಸಾಲಿನಲ್ಲಿ  ನಿಲ್ಲುವ ಅರ್ಹತೆ ಇರುವವಳಾಗಿ ಅನರ್ಘ್ಯ ಅನ್ನೋ ಹೆಸರು ಬಿಟ್ಟು "ಪುಟಾಣಿ" ಎಂದು ಪರಿಚಯಿಸಿಕೊಳ್ಳುತಿಯಲ್ಲ,ಪೆದ್ದು ಕಣೆ ನೀನು" ತಲೆ ಕುಟುಕಿದ್ದಳು ರಶ್ಮಿ.ರಶ್ಮಿಯ ಮಾತಿಗೆ ಅನರ್ಘ್ಯ ಪ್ರತಿಕ್ರಿಯಿಸಿರಲಿಲ್ಲ.
"ಅಲ್ಲವೇ ನನ್ನನ್ನೇ ನೋಡು ನದಿ ಗುಡಿ ಬೆಟ್ಟ ಗುಡ್ಡ  ಸೂರ್ಯ ಚಂದ್ರ ಅವನು ಇವನು ಬಾಹ್ಯ ಮುಖ ಅಂತರಾತ್ಮ ಬಾಳು ಬಾಂಧವ್ಯ ಹೀಗೆ ಏನೆಲ್ಲಾ ಬರೆಯುತ್ತೇನೆ ಆದರು ನಿನ್ನ ಬರವಣಿಗೆಯ ಮುಂದೆ ನಂದೆಲ್ಲ ಸಪ್ಪೆ ಅನಿಸಿಬಿಡುತ್ತದೆ,ಅಂತಹ ನಾನೇ ವಿರಾಂಗಿನಿ ಅನ್ನೋ ಕವ್ಯನಾಮದೊಂದಿಗೆ ಕವಿಯತ್ರಿ ಅಂತ ಬೀಗುವಾಗ ನಿನ್ಯಾಕೆ ಈ "ಪುಟ್ಟಾಣಿ" ಅಂತ ಸಿಲ್ಲಿ ಹೆಸರಿನಲ್ಲಿ ಬರೆಯುತ್ತಿರುವೆ?? ಯುವ ಲೇಖಕರನ್ನ ಗುರುತಿಸುವುದೇ ಕಡಿಮೆ ಅಂತದರಲ್ಲಿ ನಿನಗೆ ಸನ್ಮಾನಗಳಿಗೆ ಕರೆ ಬಂದರು ನಿರಾಕರಿಸುತ್ತಿ,ನಿನ್ನ ಧೋರಣೆ ಸ್ವಲ್ಪವು ಸರಿ ಕಾಣೋಲ್ಲ.ನನ್ನ ಕಾಲೇಜಿನಲ್ಲಿ ನಿನಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ..ಅವರಿಗೆಲ್ಲ ಪುಟಾಣಿ ನನ್ನ ಅಕ್ಕ ಅನರ್ಘ್ಯ ಅಂದರೆ ಯಾರು ನಂಬಲು ತಯ್ಯಾರೆ ಇಲ್ಲ ಗೊತ್ತ?ದೊಡ್ಡ ಮಟ್ಟದಲ್ಲಿ ಮುಖಸಹ ಪರಿಚಯ ಮಾಡಿಕೊಳ್ಳೋಕೆ ನಿನಗೇನೆ?"
"ನನಗದ್ಯಾವುದು ಬೇಕಿಲ್ಲ ಕಣೆ,ನಾನು ಬರೆಯೋದು ನನ್ನ ಖುಷಿಗೆ ನಾನು ನನ್ನಿಷ್ಟದಂತೆ ಅದರಲ್ಲಿ ಸಂತೋಷವಾಗಿ ಜೀವಿಸೋಕೆ"ಎಂದಿದ್ದಳು ಅನರ್ಘ್ಯ.
"ಕಥೆಗಾರ ಮುಖಕ್ಕಿಂತ ತನ್ನ  ಪ್ರತಿಭೆಗೆ ಮಾನ್ಯತೆ ಸಿಗಬೇಕೆಂದು ಅದು ಎಲ್ಲಡೆ ಪಸರಿಸಬೇಕೆಂದು ಅಶಿಸುತ್ತಾನೆ ನಿಜ ಆದರು ನಿನ್ನ ಕಾದಂಬರಿಯಂತೆ ನಿನ್ನ ಸುಂದರ ಮುಖವು ಜನರಿಗೆ ಪರಿಚಯವಾಗೋದು ಬೇಡವೇನೆ?ನೀನೆರಿರುವ  ಎತ್ತರ ನಿನಗೆ ತಿಳಿದಿಲ್ಲ. ಸರಿ,ನಾಳೆ ನನ್ನ ಪತ್ರಿಕಾ ಮಿತ್ರನೊಬ್ಬ  ನಿನ್ನ ಸಂದರ್ಶನ ತಗೊಳಕ್ಕೆ ಬರುತ್ತಾನೆ ನೀನು ತಯ್ಯಾರಿರು" ಎಂದು ಹೇಳಿ ಹೋಗಿದ್ದಳು ರಶ್ಮಿ.

*

 "ನಿಮ್ಮ ಹೆಸರು ಪುಟಾಣಿನ?"  ಆ ಘೋಸ್ಟ್ ರೈಟರ್ ಇವಳೇನಾ ಅನ್ನೋ ಅನುಮಾನದಿಂದಲೇ ಕೇಳಿದ ಸಂದರ್ಶನಕಾರ.
"ಹೌದು...ಅಲ್ಲ.....ನನ್ನ ಹುಟ್ಟು ಹೆಸರು ಅನರ್ಘ್ಯ,ಚಿಕ್ಕವಳಿದ್ದಾಗ ಪ್ರೀತಿಯಿಂದ ಪುಟಾಣಿ ಎಂದು ಕರೆಯುತ್ತಿದ್ದರು"
"ವಾಹ್! ಅನರ್ಘ್ಯ ಎಷ್ಟು ಚೆಂದದ ಹೆಸರು,ಅದೇ ಸೊಗಾಸಗಿದೆ ಅಲ್ವೇ?"
"ನನಗೇನೋ ಪುಟಾಣಿಯೇ ಚೆಂದ ಎನಿಸುತ್ತದೆ"
"ಓ....ಆಯ್ತು,'ಪುಟಾಣಿ'ಯವರೇ ತಾವು ಹುಟ್ಟಿದ್ದು ಯಾವ ವರುಷ?"
"ನಾನಿನ್ನು ಹುಟ್ಟಲಿಲ್ಲ"
" ಅಂದರೆ??"
"ಎಲ್ಲರು ಸತ್ತ ದಿನ ಹುಟ್ಟುತ್ತಾರೆ,ನಾನು ಹಾಗೆಯೆ."
"ಅಂದರೆ????"
"ಜನರ ನಿಜವಾದ ಪರಿಚಯವಾಗೋದು ಸತ್ತ ದಿನ ತಾನೇ? "
"ನೀವು ಹುಟ್ಟಲೇ ಇಲ್ಲ ಅಂದ್ರೆ ಸಾಯೋದು ಹೇಗೆ?"
"ಹುಟ್ಟಿಲ್ಲ ಹೌದು ಆದರೆ ಉಸಿರಾಡುತ್ತಿದ್ದಿನಲ್ಲ....ಹಾಗಾಗಿ ಸಾಯುತ್ತೇನೆ."
"ನೀವು ತುಂಬಾ ವಿಚಿತ್ರವಾಗಿ ಮಾತಾಡುತ್ತೀರ 'ಅನರ್ಘ್ಯ'....ಅದಿರಲಿ,ನೀವು ಇಷ್ಟು ದಿನ ಸಂದರ್ಶನ ಕೊಡಲು  ನಿರಾಕರಿಸುತ್ತಿದ್ದಿದ್ದು??"
"ಎಲ್ಲಿ ಕೊಲೆಯಾಗಿ ಹೋಗ್ತೀನೋ ಅನ್ನೋ ಭೀತಿಯಿಂದ,ನನಗೆ ಸಹಜ ಸಾವು ಇಷ್ಟ ನೋಡಿ"
ಅನರ್ಘ್ಯಳ ಮಾತು ಕೇಳಿ ಕಕ್ಕಾಬಿಕ್ಕಿಯಾದವ ಚೇತರಿಸಿಕೊಂಡು,
" ಎಲ್ಲಿ ನಿಮ್ಮ ಅಮ್ಮ ಅಪ್ಪ ತಮ್ಮ ತಾತ ಕಾಣುತಿಲ್ಲವಲ್ಲ,ಸ್ವಲ್ಪ ಅವರ ಪರಿಚಯವೂ ಮಾಡಿ ಕೊಡಿ.ನಿಮ್ಮ ಕಥೆಗಳಲ್ಲಿ ಅವರು ನಮ್ಮನ ಸಕತ್ ನಗಿಸುತ್ತಾರೆ ಒಮೊಮ್ಮೆ ಅಳಸುತ್ತಾರೆ,ಅದರಲ್ಲೂ ನಿಮ್ಮ ತಾತ ಅಂತೂ ಕಾಡಿಸುತ್ತಾರೆ."
"ನಿಜವ?ಸಂತಸದ ವಿಷಯ,ಆದರೆ ನನಗಿನ್ನು ಅವರ ಪರಿಚಯ ಸರಿಯಾಗಿ ಆಗಿಲ್ಲ"
"ಅಂದರೆ ಪುಟಾಣಿ ನಿಮ್ಮ ಆತ್ಮ ಚರಿತ್ರೆ ಅಲ್ಲವೇ? ಕಾಲ್ಪನಿಕವೇ?"
"ಹಾಂ....ಉಂಹು...ಅವರು ಇದ್ದಾರೆ...ಇಲ್ಲಿ ನೋಡಿ ನಾನು ಉಸಿರಾಡುತ್ತಿರುವುದಕ್ಕೆ ಅವರೇ  ಕಾರಣ.ಆದರವರ ಸಂಪರ್ಕ ಸಾಧ್ಯವಾಗುತ್ತಿಲ್ಲವಷ್ಟೇ."
  "ಒಹ್...ನಿಮಗೆ ಮದುವೆ ಆಗಿದೆಯೇ?"
"ನೀವು ನನ್ನ ಪುಸ್ತಕಗಳ ಬಗ್ಗೆ ಕೇಳಿದರೆ ಒಳಿತು"
"ಅವುಗಳ ಬಗ್ಗೆ ನೀವು ಗೊಂದಲವಾಗಿ ಉತ್ತರಿಸುತ್ತೀರಾ,ಅದೇನೇ ಇರಲಿ ನೀವು ಅತ್ಯುತ್ತಮ ಲೇಖಕಿ ಅನ್ನುವುದರಲ್ಲಿ ಸಂಶಯವಿಲ್ಲ,ನಿಮ್ಮ ಮೊದಲ ಸಂದರ್ಶನ ನನಗೆ ಸಿಕ್ಕಿದ್ದು ನನ್ನ ಪುಣ್ಯ"ಎಂದು ಅನರ್ಘ್ಯಳ ಫೋಟೋ ತೆಗೆಯುವುದರಲ್ಲಿ ಅದೊಂದು ಸಂದರ್ಶನ ಮುಕ್ತಾಯಗೊಂಡಿತು.
 
*

"ಮದುವೆ ಮನೆಯಿಂದ ಹಿಂದಿರುಗಿದ ಅಮ್ಮ ಅಪ್ಪ ಪುಟಾಣಿಯನ್ನು ಮನೆಯಲ್ಲಿ ಕಂಡು ಸಂತೋಷಿಸಿದರು,ಅವರೆಲ್ಲ ಎಂದಿನಂತೆ ಕ್ಯಾರಂ ಆಟದಲ್ಲಿ ನಿರತರಾದರು"---ಅನರ್ಘ್ಯ ಕಾದಂಬರಿಯ ಅಂತ್ಯ ಹಾಡಿ ನಿರ್ಲಿಪ್ತ ಭಾವದೊಂದಿಗೆ ಕುಳಿತಳು.ಅದನ್ನೆಲ್ಲ  ಮೇಲ್ ಮಾಡಿ ಗಾಡಿಯಲ್ಲಿ ಹಾಸನಕ್ಕೆ ತೆರಳಿದಳು.

ವೇಗದ ಗಾಳಿಯನ್ನು ಸೀಳಿಕೊಂಡು ಹೊರಟ  ಅನರ್ಘ್ಯಳ ಗಾಡಿ ಅವಳ ಹಳೆ ಮನೆಯ ಮುಂದೆ ಬಂದು ನಿಂತಿತು.ಕಾರ್ ಇಳಿದು ಮನೆಯತ್ತ ನಡೆದು ಹೋಗುವಾದ  ಮೂಗಿಗೆ ಬಡೆದ ಮಾವಿನ ಚಿಗುರಿನ ವಾಸನೆ ಅಲ್ಲೇನು ಬದಲಾಗಿಲ್ಲ ಎಂದು ಸೂಚಿಸಿತ್ತು  ಅನರ್ಘ್ಯಳಿಗೆ.ಮನೆಯ ಅಂಗಳದಲ್ಲಿದ್ದ ಭಾವಿಯಲ್ಲಿ ಅನರ್ಘ್ಯ ತನ್ನ ಮುಖವನ್ನು ನೋಡುತ್ತಾ ಕುಳಿತಳು.ಅಪ್ಪ ಅಮ್ಮನ ಮಾತು ಕಥೆ ಶುರುವಾಗಿತ್ತು.ಅಲ್ಲಿಂದ ಅಪ್ಪ ಅಮ್ಮ ಅನರ್ಘ್ಯ ಒಳಗೆ ನಡೆದರು,ಅಮ್ಮ ಸೋತ ಮುಖದೊಂದಿಗೆ ತಾನೇ ಹಾಲು ತಂದು ಅನರ್ಘ್ಯಳಿಗೆ ಕುಡಿಸಿದಳು.ಅನರ್ಘ್ಯಳನ್ನು ಎಂದಿನಂತೆ ಮುದ್ದಾಡಿ ಮಧ್ಯದಲ್ಲಿ ಮಲಗಿಸಿಕೊಂಡು ಚಿರ ನಿದ್ರೆಗೆ ಜಾರಿದರು.

ಅನರ್ಘ್ಯ ಮತ್ತೆಂದು ಕಣ್ನ್ ತೆರೆಯಲೇ ಇಲ್ಲ.

*

ಕೊನೆಗೂ ಬಂದ  ಪುಟಾಣಿಯನ್ನು  ನೋಡಿ  ತಮ್ಮ  ಕುಣಿದಾಡಿದ.ಮದುವೆ ಮನೆಯಿಂದ ಹಿಂದಿರುಗಿದ ಅಮ್ಮ ಅಪ್ಪ ಪುಟಾಣಿಯನ್ನು ಮನೆಯಲ್ಲಿ ಕಂಡು ಸಂತೋಷಿಸಿದರು.ಅಪ್ಪ ಅಮ್ಮ ತಮ್ಮ ಪುಟಾಣಿ ಕ್ಯಾರಂ ಆಟ ಆಡುವುದರಲ್ಲಿ ನಿರತರಾದರು.ಅನರ್ಘ್ಯ ತನ್ನ ಹೊಸ ಜಗತ್ತಿನಲ್ಲಿ ಲೀನಳಾದಳು.

Friday, January 11, 2013

ಸಂಜೆಗತ್ತಲಲ್ಲಿ ಮಿನುಗಿದ ದೇವಗನ್ನಡಿ...

ನೆನ್ನೆ ಬೇಗ ಮನೆಗೆ ಬಂದವಳಿಗೆ ಏನೋ ನಿರುತ್ಸಾಹ ದಣಿವು ಸಂಕಟ ಆವರಿಸಿಕೊಂಡಿದ್ದರಿಂದ  ನೇರ ಹಾಸಿಗೆಯ  ಮೇಲೆ ಬೋರಲು ಬಿದ್ದೆ.ಅದೆಷ್ಟೊತ್ತು ಕಣ್ಣಚ್ಚಿದೇನೋ ಗೊತ್ತಾಗದೆ ಮೈ ಮುರಿಯುತ್ತ  ಗೋಡೆಗೆ ಜೋತು ಬಿದಿದ್ದ ಹಳೆಯ ಗಡಿಯಾರವನ್ನು ದಿಟ್ಟಿಸಿದೆ.ಅದಾಗಲೇ ಚಿಕ್ಕ ಮುಳ್ಳು  ೬ ಕ್ಕೆ ನೇಣು ಬಿಗಿದು ಕೊಂಡಿತ್ತು.ದೀಪ ಹಚ್ಚುವ ಸಮಯ ಮನೆಯಲ್ಲಿ ಮಲಗಬಾರದು ಅಮ್ಮನ ಮಾತುಗಳು ಸೈರನ್ನಿನಂತೆ ನೆನಪಾಗಿ ಚಂಗ್ ಎಂದು ಅರೆಕ್ಷಣದಲ್ಲಿ ಎದ್ದು ಅಮ್ಮನ ಹುಡುಕಿ ಹೊರಟೆ.ಅವಳೆಲ್ಲೂ ಆಚೀಚೆ ಕಾಣದಿದ್ದಾಗ ದೇವರ ಕೊಣೆ ಹೊಕ್ಕಿರುವುದು ಧೃಡವಾಗುತ್ತಿದಂತೆ ಸಣ್ಣ ನಿಟ್ಟುಸಿರು ಹೊರಬಂತು.ದಿನವೇ ಹಾಗಿತ್ತು,ಬೆಳಗ್ಗೆ ಎದ್ದಾಗಳಿಂದ ಆ ವರೆಗೂ ಸರಾಸರಿ ಮೂರು ಸಾವಿನ ಸುದ್ಧಿಗಳು ಅಪ್ಪಳಿಸಿದ್ದವು.ಸತ್ತಿದ್ದು ನನ್ನ ಪರಿಚಯದವರಲ್ಲ,ಪರಿಚಯಸ್ತರ ಪರಿಚಯದವರು.ಅವರಿಗೂ ಪರಿಚಯವಿತ್ತು ಎಂದು ಖಾತ್ರಿಯಾಗಿ ಹೇಳುವುದಕ್ಕೆ ಬರೋಲ್ಲ.ಕೆಲವರು ಶೂನ್ಯದಲ್ಲಿ ಒಂದಾಗಿ  ಕಣ್ಮರೆಯಾಗುತ್ತಾರೆ,ಹಲವರು ಖಂಡಮಂಸ ಸಮೇತ ಬದುಕಿರುವಾಗಲೇ  ಕಳೆದು ಹೋಗಿರುತ್ತಾರೆ ಅರ್ಥವಾಗದೆ ಉಳಿದುಬಿಡುತ್ತಾರೆ.

*
ಬೇಸರ ಕಳೆಯಲು ಹಳೆ ಚಟದಂತೆ ಆಯಾಸದ ಕಣ್ಣುಗಳೊಂದಿಗೆ ನನ್ನ ರೂಮಿನ ಬುಕ್ ಶೆಲ್ಫಿನತ್ತ ಕೈಯಾಡಿಸಲು ಮುಂದಾದೆ.ತಕ್ಷಣ ಎದುರಿಗೆ ಇಟ್ಟಿದ್ದ ಪುಟ್ಟ ಹೊಸ ಪುಸ್ತಕವೊಂದು ಸೆಳೆಯಿತು.ಮನೆಯಲ್ಲಿ ನನ್ನ ಬಿಟ್ಟರೆ ಇನ್ಯಾರು ಓದಿನ ಅಭಿರುಚಿ ಹೊಂದಿಲ್ಲ,ನಾನು ಇಡದೆ ಯಾವುದೇ ಹೊಸ ಪುಸ್ತಕ ಶೆಲ್ಫಿನಲ್ಲಿ ಜಾಗ ಮಾಡಿಕೊಳ್ಳುವುದು ಅಸಾಧ್ಯವಾದರೂ ಸತ್ಯವೆಂಬಂತೆ ಆ ಪುಸ್ತಕ ಮೊಳೆ ಹೊಡೆಸಿಕೊಂಡು ಅಲ್ಲಿ ಕುಳಿತಿತ್ತು.ಕೂತುಹಲದಿಂದಲೇ ಅದನ್ನೆತ್ತಿಕೊಂಡೆ.ಪುಸ್ತಕ ತೆರೆಯುತ್ತಿದಂತೆಯೇ ಪುಟಗಳಲ್ಲಿ ಅರಿಶಿನ ಕುಂಕುಮದ ಬೆರಳಚ್ಚುಗಳು!ಅದ ತಿರುವುತ್ತಿದಂಗೆ  ನೆನಪಾಯಿತು ಎರಡು ದಿನಗಳ ಹಿಂದೆಯಷ್ಟೇ ಕೆಲವು ಕನ್ನಡ ಪುಸ್ತಕಗಳನ್ನು ಆರ್ಡರ್ ಮಾಡಿದ್ದೆ.ಅವುಗಳು  ನಾನಿಲ್ಲದಾಗ ಮನೆಗೆ  ಡೆಲಿವರಿ ಆಗಿವೆ,ಆದರೆ ಎಂದೂ ಪುಸ್ತಕಗಳ ತೆಗೆದು ಓದದವರು  ಇದೇನಿದು ಅಚಾನಕ್ ಕವರ್ ತೆಗೆದು ಇಣುಕಿದಾರಲ್ಲ ಎಂದು ಆಶ್ಚರ್ಯ ಉಂಟಾಯಿತು.ಮುಖಪುಟದತ್ತ  ಗಮನವಿಟ್ಟು ನೋಡಿದಾಗ ಹೊಳೆಯಿತು ಈ ಬೆರಳಚ್ಚುಗಳ ಹಿಂದೆ ಅಮ್ಮನದೇ ಹಸ್ತವಿರಬೇಕು.ಯಾಕಂದರೆ "ದೇವರ ಹುಚ್ಚು" ಸ್ವಲ್ಪ ಅವಳಿಗೂ ಇದೆ,ಮುಖಪುಟದ ಮೇಲೂ,ಒಳಗಿನ ಬೆರಳಚ್ಚಿನ  ಬಣ್ಣದಲ್ಲೂ ಅದೇ ಪ್ರತಿಫಲಿಸುತಿತ್ತು.ದೇವರ ಹುಚ್ಚು ಪುಸ್ತಕವ ಹೊಸ ದೈವ ಸ್ತೋತ್ರವುಳ್ಳ  ಪುಸ್ತಕವೆಂಬ ತಪ್ಪು ಗ್ರಹಿಕೆಯೊಂದಿಗೆ  ಕಣ್ಣಾಡಿಸಿ ಗುರುತು ಬಿಟ್ಟಿದಳು ಅಮ್ಮ.ಹಾಗೆ ಅದು,ಅಮ್ಮನಿದ್ದ ಕಡೆಯಲ್ಲ ದೇವರ ಗುರುತಿರುತ್ತದೆ,ದೇವರಿದ್ದ ಕಡೆಯಲ್ಲ ಅಮ್ಮನ ನೆರಳು ಸೋಕಿರುತ್ತದೆ.ಅದೇಗೋ ಆ ಇಲ್ಲದ ದೇವರು ಅಮ್ಮನಿಗೆ ಸಿಕ್ಕಿಬಿಟ್ಟಿದ್ದ ಪೂರ್ಣವಾಗಿ ಅರ್ಥವಾಗಿಬಿಟ್ಟಿದ ಅಥವಾ ಅರ್ಥವಾಗಿದ್ದಾನೆ ಎಂಬ ಅನೂಹ್ಯ ಶ್ರದ್ದೆ ಭಕ್ತಿಯೊಳಗೆ  ನೆಮ್ಮದಿ  ಕಾಣುತ್ತಿದ್ದಳು.ಅದರಲ್ಲೇ  ತಲೀನಲಾಗುತ್ತಿದ್ದಳು  ಅಮ್ಮ.ಅವಳಿಗೆ ಅವನು ದಕ್ಕಿದಷ್ಟು ನನಗೆಂದು ದಕ್ಕಲಿಲ್ಲ.

ಶಾಲೆಯಲ್ಲಿ ಗುರುಗಳು ಅಮ್ಮನಲ್ಲಿ ದೇವರ ಕಾಣಬೇಕು ಎಂದು ಬೋಧಿಸಿಕೊಂಡೆ ಕಾಣದ ದೇವರ ಬಗ್ಗೆಯೂ ಭಕ್ತಿ ಆಸೆ ಎಲ್ಲೆ ಮೀರಿದ ನಿರೀಕ್ಷೆಗಳ ಹುಟ್ಟಿಸುತ್ತಿದ್ದರು,ಅದ ವಿಮರ್ಶಿಸಿ ಪ್ರಶ್ನಿಸುವಷ್ಟು  ಪ್ರಜ್ಞೆ  ಆಗಿರಲಿಲ್ಲ.ಬುದ್ಧಿ ಬಲಿತಂತೆಯೇ  ಮೂಡಿದ ಸರಣಿ ಅನುಮಾನಗಳಿಗೆ  ಉತ್ತರಿಸಲು ಅಂತಹ ಗುರುಗಳು ಮರು ಸಿಗಲಿಲ್ಲ,ಅದ್ಯಾಕೋ ಬಾಲ್ಯದಲ್ಲಿ ಕಲಿಸಿದ  ಅದೊಂದು ಪಾಠ ಮಾತ್ರ  ಮನಸಿನಲ್ಲಿ ಇಳಿದರು ಹೆಚ್ಚಿನ ಕಾಲ ಗಟ್ಟಿ ನಿಲ್ಲಲಿಲ್ಲ.ಮೊದಲಿಗೆ ಕಾಣದ ದೇವರ ವ್ಯಾಕರಿಣಿಸಿ ನಂತರ ಅಮ್ಮನಲ್ಲಿ ದೇವರ ಕಾಣುವುದನ್ನು ಕಲಿಸುವ ಅನಿವಾರ್ಯತೆಯಾದರು ಏನಿದೆ ಯಾರಿಗಾದರು? ನಂಗಂತೂ ಆ ಪಾಠ ಅನವಶ್ಯಕವೆನಿಸಿದಷ್ಟೇ  ಗೋಜಲು ಗೋಜಲುಮಯ.ಹಕ್ಕಿಗೆ ತನ್ನ ರೆಕ್ಕೆಯ ಮೌಲ್ಯವು ಹಾರುವುದು ಕರಗತವಾಗುತಿದ್ದಂತೆ ತಿಳಿಯದೆ ಹೋಗುವುದೇ? ಅರಿಯದೆ ಉಳಿಯುವುದು  ಭಾನಿನ ಎತ್ತರ.ಹಾರಿದಷ್ಟು ಮೇಲಕ್ಕೇರುವ ಭಾನು ಭ್ರಮೆಯೇ ಎನಿಸಲಾರಂಬಿಸುತ್ತದೆ.ಶಿಶು ಮಂದಿರದಲ್ಲಿ ಅನಾಥ ಶಿಶುಗಳ ಕಂಡ  ದಿನವೇ ದೇವರಂತ  ಅಮ್ಮ ಬೇಡವೆನಿಸಿದಳು ಅವಳು ಗಾಳಿಯಲ್ಲಿ ಲೀನವಾಗುವುದೋ  ಅಥವಾ ಕಲ್ಲಾಗುವುದೋ  ನನಗೆ ಬೇಕಿರಲಿಲ್ಲ.ಅಸಲಿಗೆ ಅಮ್ಮನಲ್ಲಿ ದೇವರಿಗಿಂತ,ದೇವರಲ್ಲಿ ಅಮ್ಮನನ್ನು  ಹುಡುಕುವ ತುರ್ತಿತ್ತು ನನಗೆ.

*
ಆ ಸಂಜೆಗತ್ತಲ ತಣ್ಣಗಿನ ನೀರವ  ಮೌನದಲ್ಲಿ ಅಮ್ಮ-ದೇವರುಗಳು ಜಂಜಾಟದ ಮಧ್ಯೆ  ರಾಧಾ ನೆನಪಾದಳು.ಎಲ್ಲರ ಬದುಕಲ್ಲಿ ಒಬ್ಬ ರಾಧೆ ಎಂದಾದರೂ ಬಂದೇ ತೀರುತ್ತಾಳೆ,ಬಂದಿಲ್ಲವಾದರೂ ಆಕೆಯ ಬಗ್ಗೆಗೆ ಎಲ್ಲಾದರೂ ಕೇಳಿಯೇ ತೀರುತ್ತೇವೆ.ಅವಳ ಬರುವಿಕೆಯಲ್ಲಿ ಇರುವಿಕೆಯಲ್ಲಿ ಸಾಂಗತ್ಯದಲ್ಲಿ ಮನಸಲ್ಲೊಂದು ವಿನೂತನ ಪ್ರೀತಿಯ ಅನುಭೂತಿ ಸಫಲಿಸುತ್ತದೆ ಅಂತವಳ ಪ್ರೀತಿ ತ್ಯಾಗದಿಂದಲೇ ಜಗತ್ತಿನ ಸಂಭಂದಗಳಲ್ಲಿ ಅನನ್ಯ ಭಾವವೊಂದು ಸಮ್ಮಿಲಿತವಾಗಿವೆ.ಹೌದು ರಾಧೆ ಹೆಣ್ಣಾಗಿ ಹೆಚ್ಚು ಸಲ್ಲುತ್ತಾಳೆ,ಹಾಗೆಂದು ಆಕೆ ಕೇವಲ ಹೆಣ್ಣಾಗಿಯೇ ಸಂಭವಿಸಬೇಕಂತಿಲ್ಲ.ರಾಧೆಯಂತೆ ಪ್ರೀತಿಯಲ್ಲಿ ಮಿಂದು ಅದರಲ್ಲೇ ಸಂಚರಿಸಿ ಕಳೆದು ಹೋಗುವ ಯಾವುದೇ ವಸ್ತುವಿನಲ್ಲಿ  ಪ್ರಾಣಿಯಲ್ಲಿ  ಮನುಷ್ಯನಲ್ಲಿ ರಾಧೆಯ ಅಂಶ  ಬೆರೆತಿರುತ್ತದೆ.ಆದರೆ  ನನ್ನರಿವಿನ ರಾಧೆ ಅಂದರೆ "ರಾಧಕ್ಕ" ವ್ಯಕ್ತಿ-ಪ್ರೀತಿಯಲ್ಲಿ ಮುಳುಗಿದ್ದ ಮಾಹಿತಿಯಿಲ್ಲ  ಆದರೆ ಅವಳ ಹೆಸರಂತೂ ರಾಧಾ,ಅವಳು ಕಳೆದು ಹೋಗಿದ್ದಳೆನ್ನುವುದು ಮಾತ್ರ ನಿಜ!

ಅದು ಕಾಲೇಜ್ ಸೇರಿದ ಮೊದಲ ದಿನಗಳು,ದೂರದ ಕಾಲೇಜ್ ಗೆ ನಿತ್ಯದ ಬಸ್ಸಿನ ಪ್ರಯಾಣದ ತೊಂದರೆಗಳು ಬೇಡವೆಂದು ಅಪ್ಪ ಮನೆಯ ಹತ್ತಿರವೇ  ಇದ್ದ ಪಿ ಯು ಕಾಲೇಜ್ಗೆ  ಸೇರಿಸಿದ್ದರು.ಮುಂದಿನ  ಶಿಕ್ಷಣಕ್ಕೆ ಯು ವಿ ಸಿ ಇ ಗೆ  ಸೇರಿ ಅದೇ ಪರಿಸ್ಥಿತಿ ಎದುರಾದಾಗ  ಅಷ್ಟು ಯೋಚಿಸಲಿಲ್ಲ ಅಪ್ಪ.ದಡ ಸೇರಬೇಕಾದರೆ ಸಮುದ್ರವನ್ನು ಒಮ್ಮೆಯಾದರು ಈಜಿಯೇ ತೀರಬೇಕು.ಆಳ ತಿಳಿಯದೆ ಸಮುದ್ರ ದಾಟಿಬಿಟ್ಟರೆ,ಅದ ದಾಟಿದ ಸಂಭ್ರಮದಲ್ಲಿ ಮನಸು ನಲಿಯುವುದಿಲ್ಲ,ಹೆಮ್ಮೆಯ ಭಾವವು ಹೊಮ್ಮುವುದಿಲ್ಲ.ಆದರು ಒಂದಿಂಚು ನೀರು ತಾಕದಂತೆ  ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಆದಷ್ಟು ಬೆನ್ನಿನ ಮೇಲೆ ಹೊತ್ತೊಯ್ದು ದಾಟಿಸಿ ಬಿಡಬೇಕೆಂಬ ಪೋಷಕರ ಹಂಬಲ,ತ್ಯಾಗ -ಪ್ರೀತಿಯ ಉದಾಹರಣೆಯ ಸಂಕೇತ.

ನಾನು ದಾಖಲಾಗಿದ್ದ ಪಿ ಯು ಕಾಲೇಜಿಗೆ  ತಲುಪಲು ಮನೆಯಿಂದ,ಮುಖ್ಯ ರಸ್ತೆ ಹಿಡಿದರೆ  ಸುಮಾರು ೨ ಕಿಲೋ ಮೀಟರ್,ಕಾಲು ದಾರಿಯಲ್ಲಾದರೆ ಒಂದೂವರೆ ಕಿಲೋ ಮೀಟರ್ ನಡೆದು ಸಾಗಬೇಕಿತ್ತು.ನಾವು ಗೆಳೆತಿಯರು ಸೇರಿದಂತೆ ನಮ್ಮ ಕಾಲೇಜ್ ಗೆ ಆ ಮಾರ್ಗವಾಗಿ ಬರುತ್ತಿದ್ದ ಬಹುತೇಕರು ಕಾಲು ದಾರಿಯೇ ಹಿಡಿಯುತ್ತಿದ್ದರು.ಧಾರ್ಮಿಕ ಭಾವನೆಗಳನ್ನು  ಶಾಲಾ ಕೊಟ್ಟಡಿಗಳ ಹೊಸ್ತಿಲೊಳಕ್ಕೆ  ದಾಟಿಸದ,ವಿಧ್ಯಾರ್ಥಿಗಳ  ಮನಸಿನೊಳಗೆ  ಭೇದಗಳ ಕಹಿ ನುಗ್ಗಿಸದ,ಧಾರ್ಮಿಕ ಸ್ಪರ್ಶವುಳ್ಳ ವಾತಾವರಣದಲ್ಲಿ ನೆಲೆನಿಂತ ವಿದ್ಯಾ ಸಂಸ್ಥೆಗಳು ಬಿತ್ತುವ ಶಿಕ್ಷಣ ಮೌಲ್ಯಧಾರಿತವಾಗಿರುತ್ತದೆ ಅನ್ನುವ ನಂಬಿಕೆವುಲ್ಲವಳು ಹಾಗೆಯೇ ಅಂತಹ ವಾತಾವರಣದಲ್ಲೇ  ಬೆಳೆದು ಬಂದವಳು ನಾನು.ಇದೊಂದು ವಿಚಾರದಲ್ಲಿ ದೇವರು ನಂಬಲಾರ್ಹ,ಸಹ್ಯ ವೆನಿಸುತ್ತಿದ್ದ,ಅಥವಾ ಅವನ ಸಹ್ಯವಾಗಿಸಲು ಇವೆಲ್ಲ ಬೆಳೆಸಿಕೊಂಡು ಬಂದರೆ? ಗೊತ್ತಿಲ್ಲ.ನಾನು ಶಾಲೆ ಕಲೆತದ್ದು  ಕ್ರಿಶ್ಚಿಯನ್ ಕಾನ್ವೆಂಟ್ ಒಂದರಲ್ಲಿ ಮತ್ತೆ ಪಿ ಯು ಸೇರಿದಾಗ ನಾವು ನಿತ್ಯ ಹಾದು ಹೋಗುತ್ತಿದ್ದ ಕಾಲೇಜಿನ  ಸಮೀಪದ ಕಾಲು ದಾರಿಯಲ್ಲಿ ಗಣೇಶ ದೇವಸ್ಥಾನವೊಂದು ಸ್ಥಾಪಿತವಾಗಿತ್ತು.ಅದೇ ದೇವಸ್ಥಾನ ಹಾದಿಯ ಆಸು ಪಾಸಿನಲ್ಲೋ  ಕಸದ ತೊಟ್ಟಿ ಬಳಿಯಲ್ಲೋ ಇತ್ತಿಚಿಗಿನ  ಕೆಲವು ವರ್ಷಗಳ  ಕೆಳಗೆ ಒಬ್ಬಳು ಸಿಗುತ್ತಿದಳು.ಹರಕಲು ಬಟ್ಟೆ,ಬಟ್ಟೆಯೋಳಗೊಂದು ಬಟ್ಟೆ ಮೇಲಿನ ಉಡುಪಿಗೂ ಕೆಳಗಿನ ಉಡುಪಿಗೂ ಯಾವುದೇ ಹೊಂದಿಕೆಯಿಲ್ಲದ ಬಣ್ಣ ಬಣ್ಣಗಳ ತೇಪೆವುಳ್ಳ  ಅಂಗಿ ಲಂಗ ಧರಿಸಿ ಒಮ್ಮೆ  ಹಲ್ಲುಕಿರಿಯುತ್ತಾ ಇನ್ನೊಮ್ಮೆ ಮುನಿಸಿಕೊಳ್ಳುತ್ತ ಮಗದೊಮ್ಮೆ ತನ್ನ ಕೆದರಿದ ಕೂದಲ ಗುಂಗುರನ್ನು ಬೆರಳಿಗಿಂತಲೂ ಒಂದಿಚ್ಚು ಉದ್ದ ಕಾಣುತ್ತಿದ್ದ ಉಗುರಿನಲ್ಲಿ ಆಡಿಸುತ್ತ  ವಿಲಕ್ಷಣ  ಮುಖಭಾವನೆ ಮೂಡಿಸಿ  ಚಿಕ್ಕವರೆಲ್ಲರಲ್ಲೂ  ಭಯ ಹುಟ್ಟಿಸುತ್ತಿದ್ದ  ೩೫ ವರ್ಷದ ಹೆಂಗಸವಳು,ಅವಳೇ  ನಮ್ಮ ರಾಧಕ್ಕ.         

ಮೊದಲ ದಿನ ರಾಧಕ್ಕ ನೋಡಿದಾಗ ಗುಂಪಿನಲ್ಲಿ  "ಅಯ್ಯೋ ಹುಚ್ಚಿ ರಾಧಕ್ಕಅಟ್ಟಿಸಿಕೊಂಡು ಬರುತ್ತಿದ್ದಾಳೆ ಓಡ್ರೋ" ಧ್ವನಿ ಕೇಳುತ್ತಲೇ ಎಲ್ಲರೊಂದಿಗೆ ಕಾಲು ಕಿತ್ತಿದ್ದೆ.
"ಯು ರಸ್ಕಾಲ್ ಕಿಡ್ಸ್,ಜಸ್ಟ್ ವೇಟ್ ಅಂಡ್ ಸೀ" ಅನ್ನುತ್ತ ಕಲ್ಲು ಹಿಡಿದು ನಮ್ಮಿಂದೇ  ಗದರುತ್ತಾ ಬರುತ್ತಿದ್ದಳು.ಅವಳನ್ನ ಪೋಷಿಸುತ್ತಿದ್ದದ್ದು ದೇವಸ್ಥಾನದ ಪ್ರಸಾದ,ಮೋರಿಗೆ ಬೀಳುತ್ತಿದ ಉಳಿದ ತಿಂಡಿ ತಿನಿಸುಗಳು.ಕೆಲವೊಮ್ಮೆ ತೀರ ದುಸ್ಥಿತಿಯಲ್ಲಿರುತ್ತಿದ್ದ ಅವಳಿಗೆ ಹತ್ತಿರದ ಮನೆಯ ಹೆಂಗಸರು ನೋಡಲಾಗದೆ  ಬಟ್ಟೆ ಊಟ ಕೊಡುತ್ತಿದ್ದರಂತೆ.

ಒಂದು ದಿನ ದೇವಸ್ಥಾನದ ಪ್ರಸಾದ ತಿನ್ನುತಿದ್ದ ಅವಳ ಬಳಿ, ಒಳಗೆ ಭಯ ಹೊರಗೆ ಕೃತಕ ಧೈರ್ಯ ತುಂಬಿಕೊಂಡು  ಬಿಮ್ಮನೆ ನಿಂತು ಬಿಟ್ಟೆ.ಪಕ್ಕದಲ್ಲೇ ಲೆಕ್ಕ ಮಾಡಿ ಕೂಡಿಸಿ ಇಟ್ಟಿಕೊಂಡಿದ್ದ ಕಲ್ಲುಗಳ ಆಯ್ದು ನನ್ನ ಮೇಲೆ ಎರಗಿದಳು.ಸಧ್ಯ ಕಲ್ಲೇ ತಾನೇ ಚಾಕು ಅಲ್ಲವಲ್ಲ ಏನು ಮಾಡುವಳೋ ನೋಡೋಣ ಎಂದು ಬಂಡತನದೊಂದಿಗೆ ಕಣ್ಮುಚಿ ನಿಂತಲ್ಲೇ  ಬೇರೂರಿದೆ.ಸ್ವಲ್ಪ ಸಮಯದ ನಂತರ ಕಣ್ಣ ತೆರೆದು ನೋಡಿದವಳಿಗೆ ಕಂಡಿದ್ದು ಕೆಳಗೆ ಬಿದ್ದ ನನ್ನ ದುಪ್ಪಟ್ಟವ ಮೃದುವಾಗಿ ಸವರುತ್ತಿದ್ದ ರಾಧಕ್ಕ. "ಹೌ ಮಚ್ ಇಟ್ ಕಾಸ್ಟ್?ನೈಸ್ ವೆರಿ ನೈಸ್" ಎಂದು ಜೋರು ನಗುತ್ತಿದಂತೆ ಅತ್ತು ಬಿಟ್ಟಿದಳು.

ಅವತ್ತಿನಿಂದ ರಾಧಕ್ಕನಿಗೆ ಹಿಡಿದ  ಹುಚ್ಚು ನನ್ನ ಕಣ್ಣಿನಲ್ಲಿ  ಗುಣವಾಗಿತ್ತು.ರಾಧಕ್ಕ ಯಾಕೆ ಹುಚ್ಚಿಯಾದಳು ಅವಳಿಗೆ ತನ್ನವರು ಅಂತ  ಯಾರು ಇರಲಿಲ್ಲವ? ಇವೆಲ್ಲವೂ ಕೊನೆಯ ವರೆಗೂ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿತ್ತು.ಎಷ್ಟು ಕೇಳಿದರು ಅವಳು ಹೇಳುತ್ತಿದ್ದದು,"ಐ ಆಮ್ ರಾಧಾ,ಬಿ.ಎ,ಡಿಗ್ರಿ" ಎಂದಷ್ಟೇ.ಎಲ್ಲಾದರೂ ಇಂಗ್ಲಿಷ್ ನ್ಯೂಸ್ ಪೇಪರ್ ಸಿಕ್ಕರೆ ಜೋರಾಗಿ ಓದಿ ಖುಷಿಯಿಂದ ನಲಿಯುತ್ತಿದ್ದಳು.ಕೆಲವರು ಅವಳ ಇಂಗ್ಲಿಷಿನ  ಧಾಟಿ ಕಂಡು ಹೊಟ್ಟೇ ಉರಿದು ಅವಳು ಓದಿ ಓದಿಯೇ ಹುಚ್ಚಿ ಆಗಿರಬೇಕು ಎಂದು ಆಡಿಕೊಳ್ಳುತ್ತಿದ್ದರು.ಅಸಲಿಗೆ ರಾಧಕ್ಕ ಕನ್ನಡಿಯಾಗಿದ್ದಳು,ಅವಳಿಗೆ ಅವಳು ಎಂದೂ ಕಾಣಲೇ ಇಲ್ಲ!ತಾನ್ಯಾರು ಎಂಬುವುದೇ ಮರೆತಿದ್ದಳು.ಭಯ ಬಿದ್ದು ಓಡಿದವರ ಹಿಂದೆ  ಆಕೆಯು ಓಡುತ್ತಿದ್ದಳು,ಕಲ್ಲು ಬೀಸಿದವರ ಮೇಲೆ ಕಲ್ಲು ಬೀಸುತ್ತಿದ್ದಳು.ನಿಂತವರ ಪಕ್ಕದಲ್ಲಿ ನಿಲ್ಲುತ್ತಿದ್ದಳು,ನಗುತ್ತಿದ್ದಳು ಅರಚುತ್ತಿದ್ದಳು ಅಳುತ್ತಿದ್ದಳು,ತಬ್ಬಿಕೊಂಡವರ ತಬ್ಬಿಕೊಳ್ಳುತ್ತಿದಳು.ಆದರೇಕೋ ಅತ್ಯಾಚಾರವೆಸಗಿದವರ ಮೇಲೆ ಅತ್ಯಾಚಾರವೆಸಗಳು ಅರಿಯದೆ ಸುಮ್ಮನಾಗಿಬಿಟ್ಟಿದಳು.ಕಡೆಗೆ ಭೂಮಿಗೆ ಬಾರದ ಕಂದಮ್ಮನೊಂದಿಗೆ  ನರಳಿ ಪ್ರಾಣಬಿಟ್ಟಿದಳು ಮುಗ್ದ ರಾಧೆ.
ನನ್ನೊಳಗೆ ಉಳಿದ  ರಾಧಾಳ ಪ್ರತಿಬಿಂಬ ನನ್ನ ದೃಷ್ಟಿಯಲ್ಲಿ ದೇವರನ್ನು ಕಲ್ಲಾಗಿಸಿತ್ತು.

*

"ಎಷ್ಟೊತ್ತು ಮಲಗೋದು?ಏನಾಯಿತು ಬಾಗಿಲು ತೆಗಿ"ಅಪ್ಪ  ಬಾಗಿಲು ಬಡೆಯುತ್ತಿದ್ದದು ಕೇಳಿತು.ದಿನದ ಆಯಾಸ  ಮರೆಯಲು ಮೂರು ಗಂಟೆ ಒಬ್ಬಳೇ ಚಿಲಕ ಹಾಕಿಕೊಂಡು ಲೋಕದ ಪರಿವಿಲ್ಲದಂತೆ ಯೋಚನೆಯಲ್ಲಿ ಮುಳುಗಿ ಹೋಗಿದ್ದವಳಿಗೆ ಎಚ್ಚರವಾಯಿತು.
"ಬಂದವಳು ಯಾರನ್ನು ಮಾತನಾಡಿಸದೆ ರೂಮಿನಲ್ಲಿ ಸೇರಿ ಇಷ್ಟೊತ್ತಾದರು ಎದ್ದಿಲ್ಲವೆಂದರೆ  ಏನು ತಿಳಿಯಬೇಕು ನಾವು" ಅಮ್ಮ ಸ್ವಲ್ಪ ಗಾಬರಿಯಲ್ಲಿ ಕೇಳಿದಳು.
"ಅರ್ಧ ಗಂಟೆಯಿಂದ ಬಾಗಿಲು ಬಡಿಸಿ ನೀ ಐದು ವರ್ಷದವಳಾಗಿದ್ದಾಗ ಮೆಜೆಸ್ಟಿಕ್ ನಲ್ಲಿ  ಕಳೆದು ಹೋದ ದೃಶ್ಯಗಳು ನೆನಪಾಗುವಂತೆ ಮಾಡಿದೆಯಲ್ಲ"ಅಂದರು ಅಪ್ಪ ಕಂಗಾಲಾಗಿ.

ಹೌದು... ನಾನು ಅಂದು ಕಳೆದು ಹೋಗಿದ್ದರೆ.............

ಕೊಚ್ಚಿದ ಎಳೆ ನೀರು ಕೈಗಿತ್ತು,ಕುಡಿದು ಊಟಕ್ಕೆ ಬಾ ಎನ್ನುತ್ತಾ ನಡೆದು ಹೋದ ಅಪ್ಪ ಅಮ್ಮನ ನೋಡಿ ಯಾಕೋ ದೇವರು ಕೆಲವರ ಪಾಲಿಗೆ ಅಮ್ಮನಂತಾಗುತ್ತಾನೆ ಅನಿಸಿಬಿಟ್ಟಿತು.......

*
ದೇವರು ರಾಧೆಯಾಗಿದ್ದ.



Saturday, January 5, 2013

ಹಳತು : ಹನಿಮುತ್ತು.....

ಮುನ್ನುಡಿ

ಕಡಲ ತೀರದ  ಬಳಿ ಹಾಗೆಲ್ಲ ಹರವಿ ಕೂರುವಂತಿಲ್ಲ.ಸುತ್ತು ಊರಗಲ ಮರಳಿನ ರಾಶಿ ಶಾಕ ಹೆಚ್ಚಿಸುತ್ತದೆ ಹರಿದು ಬರುವ ನೀರು  ತನ್ನ ಕಾಲಂಚಿಗೆ ಸಿಕ್ಕಿದ್ದೆಲ್ಲವನ್ನೂ ತೇವಗೊಳಿಸಿಬಿಡುತ್ತದೆ.ಆದರೆ ಇವಳು ಮಾತ್ರ ಇನ್ನು ಅಲ್ಲಿಯೇ ಗಟ್ಟಿ ನಿಂತಿದ್ದಾಳೆ  ಬಂಡೆಗಳೊಂದಿಗೆ ಸ್ಪರ್ಧೆಗಿಳಿದವಳಂತೆ.ವರ್ಷಗಳ ನೀರಿನ ಹರಿತ ಅವಳನ್ನೊಂದಿಂಚು ಕರಗಿಸಿಲ್ಲ.ಗಳಿಗಳಿಗೆ  ಅಂತರಂಗವ
ಅಲೆ ಅಲೆಯಾಗಿ ಸ್ಪರ್ಶಿಸುತ್ತಿರುವ ಈ ಕಡಿಲಿಗಿರೋ ಅಂತಃಕರಣ ನಿನಗಿಲ್ಲವಾಯಿತು ಎಂದು ಅವಡುಗಚ್ಚುತ್ತಾಳೆ.ಅವನು ಅದೆಂದೋ ರಮಿಸಿದ ರೀತಿಗೆ  ಇವಳ ಮನಸಿನಲ್ಲಿ ಎಂದೂ ನಿಲ್ಲದ ಕದಲಿಕೆಯೊಂದು ಮಿಡುಕುತ್ತಿದ್ದೆ.ಎಂದಿನದೋ ಹೃದಯದ ಗರ್ಭ ಹೊರಲು ಆಗದೇ  ಇಳಿಸೋಕೆ ಬಾರದೇ  ಕ್ಷಣ ಕ್ಷಣವೂ ತನ್ನ ಅಸ್ಥಿತ್ವವ  ಮಿಡಿಯುತ್ತಿದೆ.ಪಾಪ ಅವಳ ಕನಸನ್ನೊತ್ತ  ಧೋಣಿ ತೇಲಿತೋ ಮುಳುಗಿತೋ.. ಇನ್ಯಾವ ದಡವಾದರು ಸೇರಿಕೊಂಡಿತೋ? ಒಮ್ಮೆ ಮೀನುಗಾರನ ಗೆಳತಿ ಇಗಾ "ಹನಿಮುತ್ತುಗಳ ಕಡಲೊಡತಿ" ಆಗಿರುವ ಮಲ್ಲಿಯಂತು ಕಾಯುತ್ತಲೇ ಇದ್ದಾಳೆ. ದಡದ ಹೊಲಸುಗಳ ಮಧ್ಯೆ ನಿಂತು ಕಂಪು ಸೂಸುತ್ತ ಎಲ್ಲ ಕಂಪನಗಳ ಎದರಿಸುತ್ತ!
ಕವನ:
ಮುಸುಕು ಮುಸುಕಾಗಿ ಕಂಡ
ನನ್ನ ನಾಳೆಗಳಿಗೆ
ನಾಲಿಗೆ ದುಷಿಸಿದ್ದು
ಸೋತ ಮನವನಲ್ಲ
ಕಾಡಿಗೆ ಕಣ್ಣುಗಳನ್ನ

ಅಲ್ಲೊಂದು ಇಲ್ಲೊಂದು ಬೀಳೂ
ಬರಗಾಲದ ಹನಿಯಂತೆ
ಕೇಳದ ಗುಬ್ಬಿಯ ಚಿಲಿಪಿಲಿಯಂತೆ
ಅಪರೂಪಕೊಮ್ಮೆ
ಒಡಲ ಹಸಿ ಕನಸುಗಳು
ನಸು ನಕಿದ್ದವು

ಮನದೊಳಗೆ ಅರಳಿದ
ಮುತ್ತಿನ ನಗುವನ್ನೇ
ಪೋಣಿಸಿ ನೆನಪಾಗಿಸಿದರು
ಬಾಳಾ ನಾಳೆಯ ಪುಟವ
ಶೃಂಗರಿಸಿದ್ದು ಕೇವಲ
ಕಣ್ಣೀರ ಬಿಂದುಗಳು

ಪುಟ ತಿರುವಿದಾಗ ಕಂಡಿದ್ದು
ದಾರಿಯ ತುಂಬೆಲ್ಲಾ
ಕೊಟ್ಟ ಪ್ರೀತಿಯ ಸಾಲದ
ರಂಗು ರಂಗಿನ
ಹೆಜ್ಜೆಯ ಗುರುತು
ಮುನ್ನಡೆದದ್ದು ಮಾತ್ರ ಕೈಚೆಲ್ಲಿ
ಬರಿಗೈಯಲ್ಲಿ

ರೇಶಿಮೆಯ ಹುಳುವಿಗೆ
ನೋಡ ಸಿಗದ ನೈದ ರೆಶಿಮೆಯಂತೆ
ನನ್ ಎದೆಯ ಒಲವನ್ನು
ಕನಸಿನಿಂದ ನನಸಿನೆಡೆಗೆ
ರವಾನಿಸಿ
ನಾನು ನನಸೆಂಬ ಕನಸಿನೊಳಗೆ
ತಂಗಿಬಿಟ್ಟೆ!


ಅಂತ್ಯ:

ಮೆಲ್ಲ ಮೆಲ್ಲಗೆ
ಉಸಿರು ಸೋಕಿಸದಂತೆ
ಒಂದೊಂದೇ ಎಳೆಗಳ ಬಿಡಿಸಿ
ಗುಪ್ತಗಾಮಿನಿಯ ಅರಳಿಸಿ
ಮುತ್ತಿನಂತ ನಿನ್ನನ್ನಂದು, ನಾ
ಹುದುಗಿಸಿ ಇರಿಸಿದ್ದ
ಇಂಗದ ಕ್ಷೀರ ಸಾಗರವ,
ಗೆಲುವಿನ ನಗೆ ಬೀರಿ
 ಭೇದಿಸುತ್ತಾ,
ಕಾಲ ಕಾಲಕ್ಕೆ ಕೊಡಕದೆ
ಅವಶೇಷಗಳಂತಿದ್ದ
ಗೆದ್ದಲು ಹತ್ತದ,
ಚಿನ್ನದ ಕಣಗಳ ಕಣಜದ
ಧೂಳನೆಲ್ಲಾ,
ಉಸಿರಿನಲೆ ಕೆಣಕಿ ಹಿಯಾಳಿಸಿ
ನಿನ್ನ ಜೋಪಾನವಾಗಿ ಬಚ್ಚಿಟ್ಟಿದ್ದ
ಕಪ್ಪು ಹೊದಿಕೆಯ,
ಮೇಲೆಲ್ಲಾ  ನೂರನೇ ಬಾರಿ ಹುಡುಕಿಸಿದರು
ನೀ ಸಿಗಲಿಲ್ಲವಲ್ಲ ಗೆಳೆಯ!
ಮನಸು ಬಲಿತರೂ 
ಯುಗಗಳೇ ಸರಿದು 
ಕಣ್ಣಿಗೆ ಪೊರೆ ಬಂದರು
ನೀ ಇಂದೂ ಕಣ್ಣೊಳಗೆ
ನೆಲೆಸಿರುವೆಯಾದರು
ಬಿಂಬವಾಗಲ್ಲ
ನುಚ್ಚು ನೂರದ ಬಿಂಬದ ಧೂಳಾಗಿ
ನಿನ್ನನೆ ಅರಿಸುತ್ತಿದ್ದ ಎನ್ನೋಳಗಿಂದ
ಮತ್ತೊಮ್ಮೆ ನೀ ಜಾರಿ ಬಿದದ್ದು
ನೆನಪಿನ ಸಿಹಿ ಜೇನಾಗಲ್ಲ 
ನೋವಿನ ಹನಿ ಮುತ್ತುಗಳಾಗಿ 
ನೋವಿನ ಹನಿ ಮುತ್ತುಗಳಾಗಿ......

ಬ್ಲಾಗ್ ಶುರು ಮಾಡಿ ಎರಡು ತಿಂಗಳಾಯ್ತು,ನನ್ನ ಪ್ರಪ್ರಥಮ ಬ್ಲಾಗ್ ಪೋಸ್ಟ್ ಗೆ  ತಲುಪುವ ಲಿಂಕ್ ಕೆಳಗಿದೆ  :  http://vaishalisheshappa.blogspot.in/2012/11/blog-post.html#comment-form

Tuesday, January 1, 2013

ಜಾರಿದ ನಕ್ಷತ್ರ.....

ಚಿತ್ರಕೃಪೆ:ಅಂತರ್ಜಾಲ
ಬೆಳದಿಂಗಳ ರಾತ್ರಿ ನೋವ್ವು ಕೊಡದೆಯೇ ಹುಟ್ಟಿದವಳಂತೆ ನಾನು."ಸದಾ ಮಿನುಗುತ್ತಲಿರಬೇಕು ಇವಳು"ಬಯಸಿ ಬಯಸಿ ಪ್ರೀತಿಯಿಂದ ನಕ್ಷತ್ರ' ಎಂದು ನಾಮಕರಿಸಿದರು ಅಪ್ಪ.ಆಗಲೆ ಗೀಚಿ ಆಗಿತ್ತು ಹಣೆಬರಹವ,ನಿನ್ನನು ದೂರದಿಂದಲೇ ನೋಡಿ ಖುಶಿಸುವವರು ನಾವೆಂದು.

ನಾನು ಹತ್ತಿರವಿದಷ್ಟು ಅವರ ಸುಖಿ ಮನಸಲ್ಲೊಂದು ಭಾರದ ಕಿಡಿ, ಸರೀ.... ಹೊಗೆಯಾಡಿಸುತ್ತಿತ್ತು,ಹತ್ತಿಕೊಂಡಿದ್ದು ಯಾವ ಯುಗದ್ದಲೆಂದು ಗೊತ್ತಾಗದೆ! ಅಧುನಿಕತೆಯೂ ಅದ ತಣ್ಣಾಗಾಗಿಸುವ ಉಪಕರಣ ಅವಿಷ್ಕಾರಿಸಲಿಲ್ಲ,ಅಮ್ಮ ಆಗಾಗ ನೀನು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಅಂತ ನಲುಗುತ್ತಿದ್ದಳು.

"ನಾನು ಸದಾ ನಿಮ್ಮೊಂದಿಗೆ ಗುರುತಿಸಿಕೊಳ್ಳಬೇಕು,ನನ್ನ ಬಾಳ ಭಾನಿನ ಚಂದಿರ,ನೀನು ಮತ್ತು ಅಪ್ಪ" ನಾನು ಉಸುರಿದೆ ಕಟ್ಟಳೆಗಳ ಮುರಿದು,ಎಲ್ಲರಂತಾಗಳು ಒಪ್ಪದೇ.

"ಆ ಚಂದಿರನೂ ಅಂತರವಿಟ್ಟು ಕೊಂಡಿರುವನು ಮಗಳೇ ಅದುವೇ ಪ್ರಕೃತಿ ನಿಯಮ" ಅಮ್ಮ ಹನಿಯಾದಳು.
"ನಮ್ಮ ಕಾಲದನಂತರ ಗತಿಯೇನು?ಅಣ್ಣ ತಮ್ಮ ಅಕ್ಕ ಯಾರು ಆಗುವುದಿಲ್ಲ ನಿನಗಾಗ" ಅಪ್ಪ ಮೇಲಕ್ಕೆ ಕೋಪದಿ ಅರ್ಭಟಿಸಿದರು,ಒಳಗೊಳಗೆ ಮೆತ್ತಾದರು.
ಯಾರು ಆಗುವುದಿಲ್ಲವೇ?ಅದನ್ನರಿತವಳಲ್ಲವೇ ನಾನು....ಎಲ್ಲವ ಕಂಡಿದ್ದೆ,ಯಾರ ಸಾಮಿಪ್ಯದಲ್ಲೂ ಆ ವಾತ್ಸಲ್ಯ ದೊರಕುತ್ತಿರಲಿಲ್ಲ.ಸ್ನೇಹ ಪ್ರೀತಿಗಳೇನೋ ತೋಳು ಚಾಚಿದ್ದವು,ಆ ಅಪ್ಪುಗೆಯಲ್ಲಿ ನಾನು ಬರಡಾಗಿದ್ದೆನಷ್ಟೇ.

ಬಂಧು ಬಳಗದವರನ್ನು ಕೂಡಿಸಿದರು,ನಾನು ನನ್ನ ನಿರ್ಧಾರವನ್ನು ತಿಳಿಸಿದೆ,ನಾನಾಯ್ದ ಜೀವನವ ಘೋಷಿಸಿದೆ.ಒಬ್ಬ ಮಾವ ಮಾತ್ರ ಗಂಟಲೇರಿಸಲು ಮುಂದಾದ.ಮಿಕ್ಕವರು ಮಾತಾಡಿ ಸುಖವಿಲ್ಲವೆಂದು ಅದಾಗಲೇ ಜಾಗ ಕಿತ್ತಿದ್ದರು.
"ನೀನಿಲ್ಲದೆಯೂ ಜೀವಿಸುತ್ತಾರೆ ಅವರು.ನೀನು ಕೂಡ.ಮನುಷ್ಯ ಯಾವ ಸಂದರ್ಭದಲ್ಲೂ ಯಾರಿಲ್ಲದೆಯೂ ಜೀವಿಸಬಲ್ಲ..ಜೀವಿಸುವ ಕ್ರಿಯೆ ತಂತಾನೇ ಆಗುವಂತದ್ದು ಅದನ್ಯಾರೂ ತಡೆಯಾಲಾರರು" ಅಂದ.
"ನನ್ನದು ಜೀವಿಸುವ ಹಂಬಲವಲ್ಲ ಬಾಳುವ ಹಂಬಲ.ನಾನೀಗೆ  ಇರಲು ಬಯಸುವೆ,ಮರಕ್ಕೆ ಆತುಕೊಂಡ ಬಳ್ಳಿಯಂತೆ,ಅಲ್ಲೇ ಗೂಡು ಕಟ್ಟುವ ಹಕ್ಕಿಯಂತೆ"
"ಹೀಗೆ  ಇರುವೆಯೆಂದರೆ ಏನು ಅರ್ಥ? ಬೇಕಿದ್ದರೆ ಸನ್ಯಾಸಿನಿ ದೀಕ್ಷೆ ಪಡೆ,ಗೌರವದಿಂದ ನಡಿಸಿಕೊಳ್ಳುವರು"ನುಡಿದ ಧರ್ಮಕ್ಕಂಟಿಕೊಂಡವ.
ಹಾಗೆಲ್ಲ ಸನ್ಯಾಸಿನಿ ಆಗಿಬಿಡಲು ಹುಟ್ಟಿನ ಮೂಲವಾ ಸವಿಂದಾಚೆಗಿನ ಸತ್ಯವ ಹುಡುಕುತ್ತಾ ಹೊರಟವಲ್ಲಲ್ಲ ನಾನು.ಅದೆಲ್ಲ ಗಮ್ಯವಲ್ಲದು ನನ್ನ ಪಾಲಿಗೆ,ಆ ಕಾಣದವನ ಆರಾಧನೆಯಷ್ಟೇ.
ಕಾಣುವ ಅಪ್ಪ ಅಮ್ಮನ ಸೇವೆ ಮಾಡುತ್ತಾ ಜೀವ ಸವಿಸಲು ಬಿಕ್ಷುವಿನ ಮುಖವಾಡ ಬೇಕೇ?

ಇದೆಲ್ಲ ಕಂಡ ಅವನೊಬ್ಬ ನಿತ್ಯ ಅಣಕಿಸುತ್ತಾನೆ.ಅವನವರಿಗೆ ಕಣ್ಣಿರದಿದ್ದರು ಕಂಡಿತ್ತು,ನನ್ನವರೆಲ್ಲಾ ಕಣ್ಣಿದ್ದರು ಕುರುಡರಾದರು.ಕೆಟ್ಟ ಸತ್ಯಗಳಿಗೆಲ್ಲಾ ಕಣ್ಣಾದರೂ.

ಅಪ್ಪನ ಜವಾಬ್ದಾರಿಯ ಹೊರೆ,ಅಮ್ಮನ ಬಿಡದ ದುಗುಡ,ಸಮಾಜದ ವಿವಿಧ ಕರ್ಮಕಾಂಡಗಳ ಹೊತ್ತಿಗೆ ನನ್ನನು ಕುಗ್ಗಿಸಿತು. ನಾನೆಷ್ಟಾದರು ಅವರೆದುರು ಕ್ಷುದ್ರ'ಳಲ್ಲವೇ?? ಅವಕೆಲ್ಲಾ ಮಣಿದು ತಲೆ ಬಗ್ಗಿಸಿದೆ.ಜಾರಿದ ಬಿಂದುವನ್ನು ಅರಿಯುವಲ್ಲಿ ಕೈ ಹಿಡಿದವ ಸೋತ,ಎಲ್ಲರನ್ನೂ ಗೆಲ್ಲಿಸಲು ಹಿಡಿದ ಕೈಯನಿನ್ನು ಬಿಗಿ ಹಿಡಿದೆ.ಇಷ್ಟೆಲ್ಲಾ ಮಾಡುವಲ್ಲಿ ನಾನು ಹೆಣವಾಗಿದ್ದೆ ಎಲ್ಲರು  ಇಗಾ ಹೆಣ್ಣಾದಳು ಎಂದು ಕೊಂಡಾಡಿದರು.
ಎಲ್ಲರಿಗೂ ಎಂದದಾರೊಮ್ಮೆ ಹೊಟ್ಟೆಕಿವುಚಿದಾಗ ಅನಿಸದೆ ಇರಲಾರದಂತೆ....ನನಗೂ ಅನಿಸಿತ್ತು,ನಾನೂ ಗಂಡಸಾಗಬೇಕಿತ್ತು! ಅವನಂತೆ ಆ ಶ್ರವಣನಂತೆ!

"ಅವಳನ್ನು ಹನಿಯಾಗಿಸಿ ಅಲ್ಲಿಂದ ತಂದರು,
ಇವಳನ್ನು ಹೂವಾಗಿಸಿ ಅಲ್ಲಿಗೆ ಕಳಿಸಿದರು...
ಒಳಗೊಳಗೆ ಉರಿದಳು,
ದೂರಕ್ಕೆ ಮಿನುಗಿದಳು..
ನಕ್ಷತ್ರ ಆಗಾ ಹೊರಟವಳು,
ಧೂಳ ಕಣಗಳ ಧೂಮಕೇತುವಾದಳು...
ಅಲಿಲ್ಲಿ ಅಲಿದು,
ಕೊನೆಗೊಮ್ಮೆ ಅವಳಂತೆಯೇ ಜಾರಿದಳು,
ತವರಿನ ಸೆಳೆತಕ್ಕೆ....
ತನ್ನನೇ ಬೂಧಿಯಾಗಿಸಿ,
ಜೀವಕೋಶಗಳ ಉಗಮವ ಪೋಷಿಸಿ
ಇಲ್ಲಿಯೇ ಸಮಾಧಿಯಾಗಳು ಆಶಿಸಿ..."