Thursday, March 23, 2017

ಕಾಣದ ಬೇಡಿ: ಬಂಧನದ ಹಂಗಿಲ್ಲ

ಚಿತ್ರ ಕೃಪೆ: ಮದನ್ ಕುಮರ್
ಆ ದೈತ್ಯ ಬಿಲ್ಡಿಂಗಿನ  ಒಂಬತ್ತನೇ ಮಹಡಿಯ ಒಂದು  ಬೃಹತ್ ಗಾಜಿನ ಕಿಟಕಿಯ ಒಳ ಇಣುಕಿದರೆ ಎದುರಾಗುವುದು ಶುಭ್ರ ಬಿಳಿಯ ವಾತಾವರಣವುಳ್ಳ ಕೊಠಡಿ. ಅಲ್ಲಿರುವ ಪ್ರತಿಯೊಂದು ವಸ್ತುವು ಎಲ್ಲ ಬಣ್ಣಗಳನ್ನು ತನ್ನೊಳಗೆ ಅಡಗಿಸಿಕೊಂಡ ಬಿಳಿಯ ಬಣ್ಣದಾಗಿದ್ದವು.ಅಲ್ಲೇ ಬಲಕ್ಕೆ ಒಂದು ಮೂಲೆಯಲ್ಲಿ ಮೇಲಿಂದ ಕೆಳಕ್ಕೆ ಜೋತುಬಿದ್ದಂತಿದ್ದ ಬಿಳಿ ಬಣ್ಣದ ಪರದೆಗಳ ನಡುವೆ ಮಲಗಿದ್ದ ರಚನ  ಕಣ್ಣು ಬಿಟ್ಟು ಒಮ್ಮೆ ಕೊಠಡಿಯ ಸುತ್ತಾ ನೋಡಿದಳು. ತನ್ನ ಬೆಡ್ಡಿನ ಪಕ್ಕದ ಮೇಜಿನ ಮೇಲಿದ್ದ  ಖಾಲಿ ಪುಸ್ತಕದ ಹಾಳೆಯ ಮೇಲೇ ತನಗೆ ಆಗಷ್ಟೇ ಬಿದ್ದ  ಕನಸನ್ನು ದಾಖಲಿಸಲು ಮುಂದಾದಳು. ಅವಳೆಲ್ಲಾ ಕನಸುಗಳನ್ನು  ಹೀಗೆ  ಬರೆದಿಡುತ್ತಿರಲಿಲ್ಲ. ತುಂಬಾ ದಿನಗಳ ನಂತರ  ತನ್ನ  ದೀರ್ಘಕಾಲದ ಅನಾರೋಗ್ಯಕ್ಕೆ ಬಿಡುಗಡೆ ಸಿಕ್ಕಿರುವ  ಸೂಚನೆ ಇತ್ತು, ಅವಳು ಅಂದು ಕಂಡ ಆ  ಹಗಲುಗನಸಿನಲ್ಲಿ. ಅದಲ್ಲದೆ ಅಂದು  ಮುಂಜಾನೆಯಷ್ಟೇ ಡಾಕ್ಟರ್ ಅವಳು  ಚೇತರಿಸಿಕೊಂಡಿರುವ ಬಗ್ಗೆ  ಸಂತಸ ಪಟ್ಟು ಅಸ್ಪತ್ರೆಯವಾಸದಿಂದ ಮುಕ್ತಗೊಳ್ಳಬಹುದೆಂಬ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ರಚನಾ ಪುಸ್ತಕದ ಪಕದಲ್ಲೇ ಇದ್ದ ಪೆನ್ ಹಿಡಿದು  ಬರೆಯ ತೊಡಗಿದಳು. ಯಾಕೋ ಬರೆಯುವ ಶುರು ಶುರುವಿನಲ್ಲಿ ಆಕೆಯ ಕೈ ನಡುಗಿದವು......ಒಂದು ಕಡುಗತ್ತಲ ಭಾವಿಯಲ್ಲಿ ರಚನಾಳನ್ನು ಆಕೆಯ ಪತಿ ಹರ್ಷ, ತನ್ನ ತೋಳುಗಳಿಂದ ಮೇಲೆತ್ತಿದ್ದಾನೆ.ಹಾಗೆ ಎತ್ತಿದ್ದ  ರಚನಾಳ  ಕೈಗೆ ಸಿಕ್ಕ ಬಳ್ಳಿಯೊಂದನ್ನು ಹಿಡಿದು ಅವಳಲ್ಲಿದ್ದ ಶಕ್ತಿಯನ್ನೆಲ್ಲ ಪ್ರಯೋಗಿಸಿ ಮೇಲೇರುತ್ತಿದ್ದಾಳೆ . ಆಯಾಸವಾದಗೆಲ್ಲ ಆಕೆ ಒಮ್ಮೆ ಹಿಂದಿರುಗಿ  ನೋಡುತ್ತಿದ್ದಳು. ಹರ್ಷ ಅವಳತ್ತ  ಮುಗುಳ್ನಗುತ್ತಾ ಮೇಲೆರಲು ಪ್ರೇರೇಪಿಸುತ್ತಿದ್ದ  . ಆ ನಗು ನೋಡುತ್ತಿದ್ದಂತೆ ರಚನಾ ಇನ್ನಷ್ಟು ಬಲ ಹಾಕಿ ಮೇಲೇರುತ್ತಿದ್ದಳು. ಅದೆಷ್ಟೋ ಗಳಿಗೆಯ ಸತತ ಪ್ರಯತ್ನದ ನಂತರ ಕಡೆಗೂ ಭಾವಿಯ ಮೇಲ್ತುದಿ ತಲುಪಿದಳು. ಇನ್ನೇನು ಅಲ್ಲಿಂದ ಹೊರಬಂದು ಆ ಅದ್ಭುತ ಜಗತ್ತನೊಮ್ಮೆ ನೋಡಬೇಕ್ಕೇನ್ನುವಷ್ಟರಲ್ಲಿ ಆ ಬಳ್ಳಿ ಕಳಚಿ ರಚನಾ ಮತ್ತೊಮ್ಮೆ ಕತ್ತಲ ಕಂದರದೊಳಗೆ ಬಿದ್ದಳು. ರಚನಾ ಇದನ್ನು ಬರೆಯುವಾಗ ಬೆವರುತಿದ್ದಳು....ಬಿದ್ದ ರಚನಾಳನ್ನು ಹರ್ಷ ಗಟ್ಟಿ ತಬ್ಬಿ ಸಮಾಧಾನಿಸಿದ,ಮಣ್ಣನ್ನು ಅಗೆದು ಹೊಸ ದಾರಿ ಮಾಡಿಕೊಂಡು  ಹೋಗೋಣವಂತೆ ಚಿಂತಿಸಬೇಡ ಎಂದು ಮುಗುಳ್ನಕ್ಕ .ಇಬ್ಬರು ಮಣ್ಣನ್ನು ಕೊರೆಯಲು ಶುರುವಚ್ಚಿಕೊಂಡರು. ಹಗಲು ರಾತ್ರಿ ಹಸಿವು ಬಿಸಿಲು ಮಳೆ ಸಿಡಿಲು ಇದ್ಯಾವುಗಳ ಪರವೇ ಇಲ್ಲದಂತೆ ಅದೆಷ್ಟು ಲೆಕ್ಕವಿಲ್ಲದಷ್ಟು ದಿನ ಅಗೆದರೋ ಕಡೆಗೂ ಸೂರ್ಯನ ಒಂದು ಕಿರಣ ಗೋಚರಿಸಿತು. ಹರ್ಷ ಒಮ್ಮೆ ಹೊರ ನೋಡಿ ರಚನಾಳನ್ನು ಮೊದಲು ಮೆಲ್ಲನೆ ಹೊರದೂಡಿದ. ರಚನಾ ಹೂವಿನ ತೋಟ ಒಂದರಲ್ಲಿ ನಿಂತಿದ್ದಳು.ಪಕ್ಕದಲ್ಲಿ ಹಣ್ಣಿನ ತೋಟವು ಇತ್ತು. ಹರ್ಷನನ್ನು ಹೊರಕ್ಕೆಳೆದು  ಅಲ್ಲಿದ್ದ ಹಣ್ಣೊoದನ್ನು ಕೊಟ್ಟಳು .ಅಮೃತದಂತೆ ಸಿಹಿ ಇದ್ದ ಆ ಹಣ್ಣನ್ನು ಇಬ್ಬರು  ತಿಂದರು. 
"ಇದು ಸ್ವರ್ಗವೇ??!"


ಎಂದು ಆಶ್ಚರ್ಯದಿಂದ  ಹುಬ್ಬೇರಿಸಿದಳು  ರಚನ...

ಹರ್ಷ ಮತ್ತೆ ನಕ್ಕ. "ಇದೇನೇ ಆಗಿರಲಿ ಆ ಭಾವಿಯಾಚೆಗಿನ ಜಗತ್ತು ಇದ್ದಕ್ಕಿಂತಲೂ ಅದ್ಭುತವಾಗಿರಲು ಸಾಧ್ಯವೇ ಇಲ್ಲ  ಬಂಗಾರಿ"ಎಂದ. 


ರಚನಾ ಮೊದಲ ಬಾರಿ ಆ ರಾತ್ರಿ ಅತ್ತಿದ್ದಳು 
"ನೀವೇನೇ ಹೇಳಿ , ಆ ಜಗತ್ತು ಈ ಜಗತ್ತು ಹೇಗೆ ಇರಲಿ, ಅಲ್ಲಿಂದ ಇಲ್ಲಿಯವರೆಗಿನ ನಿಮ್ಮೊಂದಿಗಿನ ರೋಚಕ ಪ್ರಯಾಣವೇ ಒಂದು  ಅದ್ಭುತ" ಎಂದು ಕಣ್ಣರಳಿಸಿದಳು.
ಹರ್ಷ ಅವಳ ಮೇಲೆ ಹೂವಿನ ಮಳೆ ಸುರಿಸಿದ.ಇಬ್ಬರು ನಕ್ಕರು.


ರಚನಾ ಎಲ್ಲವನ್ನೂ ದಾಖಲಿಸಿ  ಸ್ವಲ್ಪ ವಿಶ್ರಮಿಸಲು ಮುಂದಾದಳು. ಅವಳಿಗಿನ್ನೂ  ನಿದ್ದೆಯ  ಮಂಪರು  ಬಿಟ್ಟಿರಲಿಲ್ಲ...
ಅಷ್ಟರಲ್ಲಿ ಒಂದು ಹುಡುಗಿ ರಚನಳಗಿಂತಲೂ ವಯಸ್ಸಿನಲ್ಲಿ ಚಿಕ್ಕವಳು, ಅವಳ ಕೋಣೆಯ ಕಡೆ ಬರುತ್ತಿರುವುದನ್ನು ಗಮನಿಸಿದಳು. ಬಂದವಳೇ ನೇರವಾಗಿ ರಚನಾಳನ್ನು ಮಾತನಾಡಿಸಲು ಮುಂದಾದಳು... 


"ಅಕ್ಕಾ ನೀವು ರಚನ ನಾ? " 

"ಹೌದು.. ನೀವ್ಯಾರು ಅಂತ ಗೊತ್ತಾಗ್ಲಿಲ್ಲ" ಅಂದಳು ರಚನ. ಪಕ್ಕದಲ್ಲೇ ಇದ್ದ ಚೇರ್ ಎಳೆದು ಇಲ್ಲಿ ಕೂರಬಹುದಾ, ಎಂದು ಸನ್ನೆ ಮಾಡಿದಳು. 
ರಚನ ಶಂಕಿಸುತ್ತ, "ಯಾರು ನೀವು?" ಎಂದು ಕೂರಲು ಅನುಮತಿ ಕೊಟ್ಟಳು. 

"ಗಾಬರಿ ಬೇಡ ಅಕ್ಕಾ.. ನಾನು ಆಶಾ ಅಂತ. ಇಲ್ಲಿಗೆ ಡಾಕ್ಟರ್ ನ ನೋಡೋಕೆ ಅಂತ ಬಂದಿದ್ದೆ, ನಿಮಗಿರುವ ಖಾಯಿಲೆ ನನಗೂ ಆವರಿಸಿದೆ. ಡಾಕ್ಟರ್  ನಿಮ್ಮ ಬಗ್ಗೆ ಹೇಳಿದ್ರು... 
ನೀವಿನ್ನೇನು ಗುಣಮುಖರಾಗಿ ಹೊರಡುವವರಿದ್ದೀರಿ ಎಂದು ತಿಳೀತು. ಅದಕ್ಕೆ  ಮಾತಾಡಿಸೋಣಾ ಅಂತ ಬಂದೆ. 
ನಿಜಕ್ಕೂ ಈ ಖಾಯಿಲೆಯಿಂದ ಬಿಡುಗಡೆ ಸಿಕ್ಕಿದೆಯಾ?" ಎಂದು ಹತಾಶೆಯಿಂದ ಕೇಳಿದಳು."ನನಗೆ ಈ ವಿಪರೀತ ತಲೆ ನೋವು ಸಾಕಾಗಿ ಹೋಗಿದೆ..  ಜೀವನ ಪರ್ಯಂತ ಈ ಬಾಧೆ ಹೇಗೆ ತಡೆಯೋದು.? ತಗೋಳೋ ಮೆಡಿಸಿನ್ ಗಳಿಂದ ಡಿಪ್ರೆಶನ್ ಕೂಡಾ ಅಪ್ಪಿಕೊಂಡಿದೆ.! ಬದುಕೇ ಬೇಡವೆನ್ನುವಷ್ಟು ಜಿಗುಪ್ಸೆಗೆ ಒಳಗಾಗಿಬಿಟ್ಟಿದ್ದೀನಿ. ಅದರಲ್ಲೂ ಇತ್ತೀಚೆಗೆ ಕನಸುಗಳು ಲೆಕ್ಕವಿಲ್ಲದಷ್ಟು ಬೀಳುತ್ತವೆ.... ಎಷ್ಟರ ಮಟ್ಟಿಗೆ ಅಂದ್ರೆ, ಯಾವುದು  ಕನಸು, ಯಾವುದು ನನಸು ಅಂತಾನೂ ತಿಳಿಯಲು ಅಸಾಧ್ಯವಾಗಿಬಿಟ್ಟಿದೆ..! ಒಂದರ ಹಿಂದೆ ಮತ್ತೊಂದು ಹೀಗೆ.... ಸದ್ಯಕ್ಕೆ ನೆಮ್ಮದಿಯ ಸಾವೊಂದಷ್ಟೇ ಮುನ್ನೋಡುತ್ತಿದ್ದೇನೆ." ಎಂದು ಒಂದೇ ಸಲಕ್ಕೆ ಎಲ್ಲಾ ನೋವ ತೋಡಿಕೊಂಡು  ಮೂಕಿಯಂತೆ ಕೂತಳು..  


ರಚನಳಿಗೆ ತಾನು ಏಳು ತಿಂಗಳಿಂದ ಪಟ್ಟ ನರಕಯಾತನೆ ನೆನಪಾಗಿ ಮತ್ತೆ ಮೈ ಜುಮ್ಮ್ ಎಂದಿತು. 
ಆ ಕ್ಷಣ ಆ ಹುಡುಗಿ ಅವಳಿಗೆ ತನ್ನಂತೆಯೇ ಕಂಡಳು.

ಅವಳ ಕಣ್ಣಲ್ಲಿ ನೀರು ಹರಿಯುತ್ತಿತ್ತು. 
ರಚನ ಅವಳ ಕೈ ಹಿಡಿದು "ನೋಡು ನಾನು ಈ  ಖಾಯಿಲೆಯಿಂದ ಆದಷ್ಟು ಚೇತರಿಸಿಕೊಂಡಿದ್ದೀನಿ, ನನ್ನಂತೆ ನೀನೂ ಈ ಯುದ್ಧವನ್ನು ಗೆದ್ದೇ ಗೆಲ್ಲುತ್ತೀಯಾ, ಮೆಡಿಸಿನ್ ನಿನ್ನ ಗುಣ ಮಾಡುತ್ತದೆ ಅನ್ನೋ ನಂಬಿಕೆ ಇಟ್ಕೊ. ಆದರೆ ಈ ಡಿಪ್ರೆಶನ್'ನೊಂದಿಗೆ ನೀನೇ ಹೋರಾಡಬೇಕು.ಮಾನಸಿಕ  ಸ್ಥೈರ್ಯ ಎಂದಿಗೂ  ಕಳೆದುಕೊಳ್ಬೇಡ.. ಇನ್ನು, ಕನಸು-ನನಸು ಈ ಎರಡರ ನಡುವಿನ ವ್ಯತ್ಯಾಸದ ಚಿಂತೆ ಬಿಟ್ಟುಬಿಡು. ಎರಡರಲ್ಲೂ ನೀ ಸಂಪೂರ್ಣವಾಗಿ  ಬದುಕು,ಎರಡರಲ್ಲೂ  ಗೆಲ್ಲುವುದೊಂದನ್ನೇ ಗುರಿ ಮಾಡಿಕೊ, ಆಗ ನೋಡು ಇದ್ಯಾವುದರ ಚಿಂತೆಯಿಲ್ಲದೇ ನೆಮ್ಮದಿಯಾಗಿರಬಹುದು. ನೀನು ಪೂರ್ತಿಯಾಗಿ ಗುಣ ಆಗಬಲ್ಲೆ ಎಂಬ ನಂಬಿಕೆಯನ್ನು ಸದಾ ಪೋಷಿಸು, ಖಂಡಿತ ಗುಣಮುಖಳಾಗುತ್ತೀಯ" ಎಂದು ಆ ಹುಡುಗಿಯನ್ನು ಸಮಾಧಾನಿಸಿ ಕಳುಹಿಸಿ ಕೊಟ್ಟಳು


ಅಷ್ಟರಲ್ಲಿ ಹರ್ಷ ಆಸ್ಪತ್ರೆಯ ಬಿಲ್ ಪಾವತಿಸಿ ಬಂದಿದ್ದ. ಬಂದವನೇ, "ಎದ್ದು ಬಿಟ್ಟಿದ್ದೀಯ, ಸಾರಿ ತುಂಬಾ ಜನ ಇದ್ದಿದ್ರಿಂದ ಬಿಲ್ಲಿಂಗ್ ಲೇಟ್ ಆಯ್ತು, ಒಬ್ಳನ್ನೇ ಬಿಟ್ಟು ಹೋಗಿದಕ್ಕೆ ಬೇಜಾರಿಲ್ಲ ತಾನೇ ಬಂಗಾರಿ?" ಅಂದ. 


'ಇಲ್ಲಾ' ಎಂದು ತಲೆಯಾಡಿಸುತ್ತ ಕಣ್ಣುಜ್ಜಿ ಕೊಂಡು, "ನಾನು ಎದ್ದು ಸುಮಾರ್ ಹೊತ್ತಾಯಿತು. ರೀ , ನೀವು ಆ ಹುಡುಗಿಯನ್ನ ನೋಡಿದ್ರಾ?"  ಕೇಳಿದಳು.

"ಯಾವ್ ಹುಡ್ಗಿ ಹೇಳು?" 

"ರೀ ಸ್ವಲ್ಪ ಹೊತ್ತಿಗೆ ಮುಂಚೆ  ನನಗೊಂದು ಸೊಗಸಾದ  ಕನಸು ಬಿದಿತ್ತು ಈಗ ನೆನಪಾಗ್ತಿಲ್ಲ, ಅಲ್ಲಿ ಆ ಪೇಪರಿನಲ್ಲಿ ಬರೆದಿಟ್ಟಿದಿನಿ ಆಮೇಲೆ ಓದಿಕೊಳ್ಳಿ. ಮತ್ತೆ ಈಗಷ್ಟೇ ಹೋದಳಲ್ಲ ಆ ಹುಡುಗಿಯನ್ನು  ನೋಡಿದ್ರಾ?" ಎಂದು ಮತ್ತೊಮ್ಮೆ ಕೇಳಿದಳು.

ಹರ್ಷ, "ಹ್ಮ್ಮ್" ಎಂದು ತಲೆಯಾಡಿಸುತ್ತ,  ಏನನ್ನೋ ಯೋಚಿಸತೊಡಗಿದ. ಮಂಜಾಗಿದ್ದ ತನ್ನ ಕನ್ನಡಕವನ್ನ ತೆಗೆದು ಬಟ್ಟೆಯಲ್ಲಿ ಒರೆಸಿಕೊಂಡು ಆ ಬೃಹತ್ ಗಾಜಿನ ಕಿಟಕಿಯ ಬಳಿ ಮೆಲ್ಲನೆ ಹೋಗಿ ನಿಂತ...ಏಳು ತಿಂಗಳ ಹಿಂದೆ ಮೊದಲ ಬಾರಿ ರಚನ ಆ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಇಂಥದ್ದೇ ಕಿಟಕಿಯ  ಬಳಿ ನಿಂತು ಎದುರಿಗೆ ಕಾಣುತ್ತಿದ್ದ ಹಸಿರು ಮರಗಳ ಸಾಲು ನೋಟವ ಕಂಡು, ತನ್ನ  ದುಃಖವನ್ನೆಲ್ಲಾ ನುಂಗಿದ್ದ. 
ಇಂದೇಕೋ ಆ ಮರದ ಸಾಲುಗಳ ನೋಟ ಅವನಿಗೆ ಜಿಗುಪ್ಸೆ ತರುತ್ತಿವೇ.. 

"ರೀ ಅವಳ್ಯಾಕೆ ಬಂದಿದ್ಳು ಅಂತ ಕೇಳೋಲ್ವಾ??" ನಡೆದುದ್ದೆಲ್ಲವನ್ನ ಹೇಳುವ ಕುತೂಹಲದಲ್ಲಿ ಕೇಳಿದಳು ರಚನ. 

'ಹಾ... ಬಂಗಾರಿ.ಆ ಮರದ ಸಾಲುಗಳನ್ನು ನೋಡಿದ್ಯಾ? ಸುತ್ತಲೂ ನಿಂತಿರೋ ಈ ಕಾಂಕ್ರೀಟ್ ಸಿಟಿ  ಮಧ್ಯೆ ಅದು ಬಂಧಿತವಾದಂತಿದೆ ಅಲ್ವಾ. ಅದೆಷ್ಟು ಉಸಿರು ಗಟ್ಟಿಕೊಂಡು ವಾಸಿಸುತ್ತಿದೆಯೋ " 

"ರೀ...." ಒಂದು ಕ್ಷಣ ಮೌನವಾಗಿ ಆ ಬೃಹತ್ ಕಿಟಕಿಯ ಹೊರಗೆ ದೂರದಲ್ಲಿ ಬೇಲಿಯಂತೆ ಕಂಡ ಆ ಮರಗಳ ಸಾಲುಗಳ ನೋಡಿದಳು.

"ನಂಗೇನೋ ಈ ಬಿಲ್ಡಿಂಗೇ ಬಂಧಿತ ಅಂತ ಅನಿಸ್ತಿದೆ. ಆ ಮರಗಳು ಎಷ್ಟು ಸ್ವಚ್ಚಂದವಾಗಿವೆಯಲ್ಲ" ಎಂದ ಅವಳ ಮಾತಿಗೆ ಹರ್ಷ 'ಇಲ್ಲ ' ಎಂಬಂತೆ  ತಲೆಯಾಡಿಸಿ  ಮತ್ತೆ ಮಂಜಾದ ಕನ್ನಡಕವನ್ನ ಒರೆಸಿಕೊಂಡ.

 ಅಷ್ಟರಲ್ಲಿ, "ರೀ ರೀ ಅಲ್ಲಿ ನೋಡಿ ನಿಮ್ಮ ಬಂಧಿತ   ಮರವೊಂದರಿಂದ ಈಗಷ್ಟೇ ಯಾವುದೊ ಹಕ್ಕಿ ಬಾನಿಗೆ ಹಾರಿತು....." 
ರಚನ ಹಾಗನ್ನುತ್ತಿದಂತೆ ಹರ್ಷ  ರಚನಾಳ ಬಳಿ ಹೋಗಿ ಅವಳನ್ನು ತಬ್ಬಿ ಹಿಡಿದ....
"ರೀ ಏನಾಯ್ತು.....? ಅದಿರ್ಲಿ,  ನಿಮಗೆ ಗೊತ್ತಾ? ಆ ಹುಡುಗಿಗೂ ನನ್ನಂತೆಯೇ ಖಾಯಿಲೆ, ನೀವು ನನಗೆ ಧೈರ್ಯ ತುಂಬಿದ ಹಾಗೆ ನಾನು ಅವಳಿಗೆ ಧೈರ್ಯವಾಗಿರಲು ಹೇಳಿದ್ದೀನಿ...
ನಾ ಮಾಡಿದ್ದು ಸರಿ ಅಲ್ವಾ..!?" ಅಂದಳು. ಹರ್ಷನಿಗೆ ಮಾತು ಬರಲಿಲ್ಲ... ಒಂದು ಕೈಯಲ್ಲಿ ಅವಳನ್ನು ಹಾಗೆಯೇ ತಬ್ಬಿ ಹಿಡಿದು ಇನ್ನೊಂದು ಕೈಯಲ್ಲಿ ಆ ಖಾಲಿ ಹಾಳೆಯನ್ನ ಬೆಡ್ಡಿನ ಕೆಳಗೆ ಅವಿಸಿಟ್ಟ........ 

ರಚನ ಮತ್ತೊಮ್ಮೆ ಅವನ ತೋಳಿನಲ್ಲೇ ನಿದ್ರೆಗೆ ಜಾರಿದಳು.......

4 comments:

 1. ಮಾನಸಿಕ ಸಮಸ್ಯೆಯ ಕಥೆಯನ್ನು ಸುಂದರವಾಗಿ ರಚಿಸಿದ್ದೀರಿ. ಅಭಿನಂದನೆಗಳು.

  ReplyDelete
  Replies
  1. ಧನ್ಯವಾದಗಳು ಸರ್😊

   Delete
 2. "ಕನಸು ಮತ್ತು ನನಸು ಇವೆರಡರ ನಡುವಿನ ವ್ಯತ್ಯಾಸದ ಚಿಂತೆಯನ್ನೇ ಬಿಟ್ಟುಬಿಡು"
  ಈ 1 ಮಾತಲ್ಲೇ ಇಡೀ ಕಥೆಯ ಸಾರವನ್ನ ನೀ ಹೇಳಿರುವ ರೀತಿ ತುಂಬಾ ಡೀಪ್ ಆಗಿ ಯೋಚ್ನೆ ಮಾಡೋ ಹಾಗ್ ಮಾಡ್ತು....
  ಆ ಹುಡುಗಿ ಬಂದಿದ್ದು, ನೀ ಅದರ ಬಗ್ಗೆ ಬರೆದಿದ್ದು, ಎಲ್ವೂ ಕನಸೇ ಆಗಿದ್ರೂ ಕೂಡ, ಅವೆಲ್ಲವೂ ಕನಸಾಗಿದ್ದವು ಅನ್ನೋದನ್ನ ಅವಳರಿವಿಗೆ ಬರುವ ಮುಂಚೇಯೇ ಅವನ್ನೆಲ್ಲಾ ಮರೆಮಾಚುತ್ತ, ಅವಳನ್ನ ಮಗುವಿನ ಥರ ಆರೈಕೆ ಮಾಡುತ್ತಿದ್ದ ಅವಳ ಬಾಳಗೆಳೆಯನ ಬಗ್ಗೆ ನೆನೆದರೆ ಗೊತ್ತಾತುತ್ತೆ... ನೀ ಮೇಲೆ ಬರೆದಿರೋ ಆ 1 ಸಾಲು ಎಷ್ಟೊಂದು ನಿಜ ಅಂತ :-) (ಅದೇ, ಅವ್ಳು ತನ್ನ ಆರೊಗ್ಯದ ಸಮಸ್ಯೆಗಳ ಜೊತೆಗೆ ಮಾಡಿದ ಹೋರಾಟದಲ್ಲಿ ಅವನ ಪ್ರೀತಿ ತುಂಬಿದ ಆರೈಕೆಯ ಪಯಣದ ಜಗತ್ತೇ ಅವಳನ್ನ ಬದುಕಿಸಿತ್ತು ಅನ್ನೋ ಸಾಲು)


  ಆ ಬಿಲ್ಡಿಂಗುಗಳು, ಆ ಹಕ್ಕಿ...... ಇಂಥ ಉಪಮೆಗಳು :-)


  ಬದುಕಿನ ಜೊತೆಗೆ ಅವಳು ಮಾಡಿದ ಸಂಘರ್ಷದ ಕಥೆಯನ್ನ ನೀ ಚಿತ್ರಿಸಿರುವ ರೀತಿಗೆ ಸಲಾಮು. :-)

  ಇದನ್ನ 1 ಶಾರ್ಟ್ ಫಿಲಂ ಕೂಡ ಮಾಡ್ಬಹುದೇನೋ....

  ಬರೀತಾ ಇರು ಯಾವಾಗ್ಲೂ :-)

  ReplyDelete
 3. ಕತೆ ತುಂಬಾ ಚೆನ್ನಾಗಿದೆ.

  ReplyDelete