Wednesday, February 20, 2013

ಅರಿಶಿನವಲ್ಲದ ಹಳದಿ....ಕುಂಕುಮವಿಲ್ಲದ ಕೆಂಪು!


ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ  ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ  ಪ್ರಜ್ವಲಿಸುವುದವನಂದೇ      

ನಿಮ್ಮದೋ ಹಳದಿ ಕೆಂಪು ನಾನಾ ಬಣ್ಣಗಳು 
ನಡುಮಧ್ಯೆ ಗಾಜಿನ ಸೂರುಗಳು,
ಕಾವಲಿಗೆ ಬೆದರು ಗೊಂಬೆಗಳ ಸಾಲುಗಳು
ಗುಮ್ಮನೆ ಕೂತ ಅವನಿಗೂ ಕಳ್ಳರ ಭಯ ನಿಮ್ಮಲ್ಲಿ 
ಚಿಲಕವಿರುವ ಗುಡಿಯೊಳಗೂ ತೀರದ ಬವಣೆಗಳು  

ನಿಮ್ಮಯ ಒಂದು ಊಟಕ್ಕೋ,
ಕುದುರೆ ಓಟಕ್ಕೋ,ಆಳುವ ಚಟಕ್ಕೋ
ಅವನು ನುಚ್ಚಾದ,ಮಿನುಗುವ ನೂರಾದ  
ಇಂಚಿಂಚು ಬಿಂಬದೊಳು ಕತ್ತರಿಸಿದ ಕೈಯಾದ,
ಬರಿಯ ಕಣ್ಣು ಕುಕ್ಕುವ ಮೆರಗಾದ.

ಅಲ್ಲೊಬ್ಬ ಕುಂಟ ಅಜ್ಜ,
ಕೂರುತ್ತಾನೆ ಅವನ ಕಾಯುತ್ತಾನೆ
ಹಸ್ತವ ಚಾಚುತ್ತಾನೆ ಕೇಳಿದರೆ ಹುಡುಕುತ್ತಾನೆ 
ಕಡೆಗೆ ದೇವರೆಂದು ನಿಮಗೆ ತಲೆ ಬಾಗುತ್ತಾನೆ

ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ  ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ  ಪ್ರಜ್ವಲಿಸುವುದವನಂದೇ!   

11 comments:

  1. ಚೆನಾಗಿದೆ ವೈಶು..
    ಬರಿತಾ ಇರಿ...
    ಅಲ್ಲಿ "ಅಲ್ಲೊಬ್ಬ ಕುಂಟ ಅಜ್ಜ...."ಎಂಬಲ್ಲಿ ಕವನದ ಓಟ ಸ್ವಲ್ಪ ಜಾಸ್ತಿಯಾಯಿತೇನೋ ಅನಿಸಿತು..
    ನೋಡಿ ಇದು ನನಗನಿಸಿದ್ದಷ್ಟೇ...
    ಹಮ್ ಅದಕ್ಕೂ ಅದರ ಹಿಂದಿನ ಸಾಲುಗಳಿಗೂ,ಮುಂದಿನ ಸಾಲುಗಳಿಗೂ ಯಾಕೋ ಅಂತರ ಜಾಸ್ತಿ ಆಯ್ತಾ ಅಂತ ಅನಿಸ್ತಿದೆ...
    ಒಂದ್ಸಲ ನೋಡಿ...
    ನಮಸ್ತೆ :)

    ReplyDelete
  2. ಕವನದ ಆರಂಭವೇ ಬಂಡಾಯದ ಧ್ವಜಾರೋಹಣ.

    ಕವನ ಕವನಗಳಲೂ ಅಚ್ಚರಿ ಮೂಡಿಸುವ ನಿಮ್ಮ ಪ್ರತಿಭೆ ಇನ್ನಷ್ಟು ಪ್ರಕಾಶಮಾನವಾಗಲಿ.

    ReplyDelete
  3. ಅರಿಶಿನವಲ್ಲದ ಹಳದಿ....ಕುಂಕುಮವಿಲ್ಲದ ಕೆಂಪು! ಚಂದದ ಕವಿತೆ... ಸಂಕೋಲೆಗಳ ಮೆಟ್ಟಿ ನಿಲ್ಲುವ ದಿಟ್ಟ-ಸೌಮ್ಯ ದನಿ, ಹಿಡಿಸಿತು :-)

    ReplyDelete
  4. ಗುಡಿಗೂ ಚಿಲಕ , ಗಾಜಿನ ಸೂರಿನ ಲೋಕದಲ್ಲಿ ನಡೆವ ನೇಹವೆಲ್ಲ ಬಂಧವೇ .
    ಮೀರ ಬೇಕೆಂಬ ನಿಮ್ಮ ತುಡಿತ ಚೆನ್ನಾಗಿ ವ್ಯಕ್ತವಾಗಿದೆ

    ReplyDelete
  5. ಆತ್ಮಾಭಿಮಾನದ ಅಖಂಡ ಬಲ ಪ್ರದರ್ಶನ ಮಾಡುವಂಥ ಭಾವ. ಅದು ಎಲ್ಲರಲ್ಲೂ ಇರಬೇಕು. ಆಗಲೇ ಯಾರಿಲ್ಲದೆಯೂ ಬದುಕೆವೇಂಬ ವಿಶ್ವಾಸ ಮೂಡೋದು. ಕವನ ಆಶಯಕ್ಕಿಂತ ಹೆಚ್ಚಿನದನ್ನ ಅರ್ಥ ಮಾಡಿಸೋದು ಖರೆ ಜೆರ್ರಿ.. ಬಹಳ ಒಳ್ಳೆಯ ಕವನ. ನಿನ್ನಿಂದ ಮತ್ತೊಂದು ಅಚ್ಚರಿ..!! ಈ ಅಚ್ಚರಿ ಕೊಡುವ ಪ್ರಕ್ರಿಯೆಗಳು ನಿರಂತರವಾಗಿರಲಿ.

    ReplyDelete
  6. ವೈಶು ವಿಭಿನ್ನವಾದ ದಿಟ್ಟ ಟಿಪಿಕಲ್ ವೈಶು ಬರಹ.ಕವನದುದ್ದಕ್ಕೂ ಆತ್ಮಾಭಿಮಾನದ ಹೊನಲು ಎದ್ದು ಕಾಣುತ್ತದೆ.
    "ಅರಿಶಿನವಲ್ಲದ ಹಳದಿ....ಕುಂಕುಮವಿಲ್ಲದ ಕೆಂಪು" ಶೀರ್ಷಿಕೆಯಲ್ಲಿಯೇ ಎಲ್ಲವನ್ನೂ ಹೇಳಿ ಮುಗಿಸಿದ್ದೀಯ.ಸಮಾಜದ ಕೀಳು ನೋಟಗಳನ್ನು,
    ಅಧ್ಯಾತ್ಮಿಕ ನಿಲುವನ್ನು ಬೆರೆಸಿ ಬರೆದದ್ದು ತುಂಬಾ ಇಷ್ಟವಾಯಿತು.ಹೀಗೆ ಬರೆಯುತ್ತಿರು.:-)

    ReplyDelete
  7. ಉತ್ತಮ ವಿಚಾರಧಾರೆ, ಸಶಕ್ತ ಕವನ!

    ReplyDelete
  8. ದೇವರಾಣೆ ನನಗೆ ಅರ್ಥಾ ಆಗ್ಲಿಲ್ಲಾ :(

    ನಿನ್ನ ಬರವಣಿಗೆಯ ಕ್ವಾಲಿಟಿ ದಿನದಿಂದ ದಿನಕ್ಕೆ ನಿಳುಕಲಾರದಷ್ಟು ಎತ್ತರಕೆ ಹೊಗುತಿದೆ......

    ನೀನು ಕೂಡಾ ..............

    ReplyDelete