Thursday, March 21, 2013

ಮೋಹಿನಿ ಗಾನ :

ಚಿತ್ರಕೃಪೆ : ಅಂತರ್ಜಾಲ


ದೇಹದೊಳಗೊಂದು ಮನಸ
ಮನಸಿನೊಳಗೊಂದು ದೇಹವ
ಹೊತ್ತು ನಡೆಯುವ ಹರಿಣಿ
ಸಂತೆ ಹಾದಿಯಲಿ ಸಿಕ್ಕಲೊಬ್ಬಳು
ಅಲಂಕಾರಿಣಿ

ಸುಕೋಮಲ ಚರ್ಮದವಳಲ್ಲ
ನುನುಪಿನ ಗಲ್ಲ ಅವಳಿಗಿಲ್ಲ
ಗುನುಗುವ ಕಂಠವೋ ಬಲು ಗಡಸು
ಆದರೇನು ಮನದೊಳಗೆ ಸ್ಪುರಿಸುವುದು
ಮೃದು ಭಾವದ ಮೋಹಿನಿ ಗಾನ!

ಅವಳಂದಳು,
ಮುಚ್ಚಿಡಲಾರದೆ ತೆರೆದಿಟ್ಟೆ
ಬಿಕ್ಕಲ್ಲಾರದೆ ಅರಚಿ ನಿಟ್ಟುಸಿರಬಿಟ್ಟೆ
ಹುಟ್ಟ ಮನೆಗೆ ಕಳ್ಳ ಅತಿಥಿಯಾದೆ
ನೆರಳಿಲ್ಲದೆ ಫಲವಿಲ್ಲದೆ
ಊರಿಗೆ ದಂಧೆಯ ಸರಕಾದೆ
ಬೇಡುತ ಸೆರಗೊಡ್ದುವೆ
ಧರ್ಮವಿದ್ದರೆ ಕೊಟ್ಟುಬಿಡು,
ಹಿಡಿಗಾಸ


ಬರಿ ಬೀಜ ಹೊತ್ತರೆ ಮಾತ್ರ ಮರವೇನೆ?
ಮರವೆಂದರೆ ನೂರು ಬೇರು ಹತ್ತು ರೆಂಬೆ
ಬಳ್ಳಿಗೆ ಆಶ್ರಯ ನೀಡಬಲ್ಲ ಕರುಳು
ಜೀವಿಗೆ ತಂಪನುಣಿಸುವ ನೆರಳು

ಬಿಟ್ಟುಬಿಡು,
ಧರ್ಮ ದೂರವಿಟ್ಟ ಋತು
ಮರ ಬೇಡದ ನೆರಳು
ನಿನಗೇಕೆ,ಅದಕೆ ಕೊರಗೇಕೆ?

ಅವಳಂದಳು ,
ಬೆಳಕಿನ ಮದುಮಗಳ ನಿಶೆಯ ಹವಣಿಕೆಗೆ
ಅಂದು ಸುತ್ತಲು ಬೆಂಕಿ
ಹೃದಯದ ಮುದ್ದಣಕೆ ಹೊರಗಿನ ಕಾವು
ಕತ್ತಲ ವಿಧವೆಯ ಗೆಜ್ಜೆಯ ಕಂಪನಕೆ
ನೆಲವದು ಸಡಿಲು
ನೃತ್ಯದ ಅಮಲಿಗೆ ಕೆಂಪಿನ ಹೊನಲು

ಬಲ್ಲೆಯಾ ಇಂತಹ ಅನುರಾಗವಾ?
ಕಂಡೆಯ ಈ ಪರಿ ಆರ್ತನಾದವಾ?

ಎರಡು ಜೀವಗಳ ಒಂದಾಗಿಸಿ
ಹುಟ್ಟಿದೆವು ನಾವೆಲ್ಲ
ಎರಡು ಜನ್ಮವ ಒಂದಾಗಿಸಿ
ಅವತರಿಸಿರುವೆ ನೀ
ಪಡೆದಿದ್ದಕಲ್ಲ ಶಾಪವ
ಹರಸುವ ದಿವ್ಯ ಕರ್ಮಕ್ಕಾಗಿ
ಕಳೆಯಲಿಕ್ಕಲ್ಲ ಪಾಪವ
ಗಳಿಸುವ ಸೆರಗಿನ ಪುಣ್ಯಕ್ಕಾಗಿ

ಅವಳ ಸೆರಗಿಗೆ ಕೈಗೆ ಸಿಕ್ಕಿದಷ್ಟು ತುರುಕಿ
ಪಿಸುಗುಟ್ಟಿದೆ
ಕೇಳು,ಅರಿವಿದೆ ಹೆಣ್ಣು ಜನ್ಮಕೆಲ್ಲಾ
ನಮ್ಮಯ ಮನದ ದೀಪವು ಒಂದೇ
ಅದರ ಜ್ವಾಲೆಯ ಮೂಲವು ಒಂದೇ.

17 comments:

  1. ಎಲ್ಲಾ ಹೆಣ್ಣುಗಳು ದನಿಯ ಬಿಂಬಿಸುವ ಕೊನೆಯ ಸಾಲುಗಳು
    ಚೆನ್ನಾಗಿದೆ ವೈಶಮ್ಮ

    ReplyDelete
  2. Hijada samudaayada bagge anukampavide haage avara varthane inda kelavomme baya besaravaagide.nice to see a poem on dem.
    ಬಿಟ್ಟುಬಿಡು,
    ಧರ್ಮ ದೂರವಿಟ್ಟ ಋತು
    ಮರ ಬೇಡದ ನೆರಳು
    ನಿನಗೇಕೆ,ಅದಕೆ ಕೊರಗೇಕೆ? And girl u write with a heart n a thought keep them coming,as usual loved dis piece vaishu.:-)

    ReplyDelete
  3. ಉತ್ತಮ ಕವನಕ್ಕಾಗಿ ಅಭಿನಂದನೆಗಳು.

    ReplyDelete
  4. "ಹೃದಯದ ಮುದ್ದಣಕೆ ಹೊರಗಿನ ಕಾವು" ವಾವ್ ವೈಶೂ ಇಲ್ಲಿನ ಪ್ರತಿ ಸಾಲಾಲೂ ಪದೇ ಪದೇ ಓದಿಸಿಕೊಳ್ಳುವ ತಾಕತ್ತಿದೆ. ಸೂಪರ್ರೂ...

    ReplyDelete
  5. ನಂಬಲಾರದ ಸ್ಥಿತಿ ಮತ್ತೊಮ್ಮೆ ಇದು ನಿನ್ನ ಕವನವಾ ಅಂತ..!! ಕವನ ಒಂದು ತೂಕವಾದರೆ.. ಅದರೊಳಗಿನ ವಿಚಾರ ಒಂದು ತೂಕ.
    ಸಮಾಜದೊಳಗೆ ಸ್ಥಾನ ಮಾನಗಳಿದ್ದೂ ಸ್ಥಿತಿ ಗತಿಗಳಿಗಾಗಿ ಹೋರಾಡುವ ನಮ್ಮ ಪಾಡೇ ರೌರವ.. ಸ್ಥಿತಿಯೂ ಇಲ್ಲದ ಸ್ಥಾನಮಾನವೂ ಇಲ್ಲದ.. ಒಂದು ಸಣ್ಣ ಪರಿಗಣನೆ ಕೂಡಾ ಇಲ್ಲದ ಮಂಗಳ ಮುಖಿಯರ ಬದುಕ ತೆರೆದಿಡುವ ಚಿತ್ರಣ.. ನಿಜ ಅವರ ಪಾಡು ಯಾರಿಗೂ ಬರಬಾರದ ಕೇಡು.

    ಕವನ ತುಂಬಾ ಇಷ್ಟವಾಯ್ತು ಜೆರ್ರಿ.. :)

    ReplyDelete
  6. ಚೆನಾಗಿದೆ..ಬರೆಯುತ್ತಿರಿ..

    ReplyDelete
  7. ಇಷ್ಟು ದೊಡ್ಡ ಕವನ ವ್ಯಾಚ್ಯಾರ್ಥವಾಗಿರಬಹುದು ಎಂದು ಭಾವಿಸಿದ್ದೆ, ಆದರೆ ಕವನ ಓದಿಸಿಕೊಂಡಿದೆ. ಎರಡು ಹೆಣ್ಮನಗಳನ್ನು ಒಂದೇ ಕವನದ ಭೂಮಿಕೆಗೆ ತರುವ ಪ್ರಯತ್ನ ವಿಶಿಷ್ಟವಾಗಿ ನಿಲ್ಲುತ್ತದೆ. ಅದಕ್ಕೊಂದು ಭೇಷ್ ಹೇಳಲೇಬೇಕು

    ಕೆಲವೆಡೆ ಎರಡು ಹೆಣ್ಣಿನ ಮನಸ್ಸುಗಳನ್ನು ಒಂದೇ ಸಂಭಾಷಯಣೆಯಲ್ಲಿ ಸಮೀಕರಿಸುವಲ್ಲಿ ಇನ್ನಷ್ಟು ಪಕ್ವತೆ ಬೇಕಿತ್ತೇನೋ ಎನಿಸುತ್ತದೆ. ಅದು ಕವಯತ್ರಿಯ ಮಾತುಗಳೋ ಇಲ್ಲ ಮೋಹಿನಿಯ ಮಾತುಗಳೋ ಎಂಬ ಗೊಂದಲ ಓದುಗನನ್ನು ಕಾಡುತ್ತದೆ. ಸಾಹಿತ್ಯ ಕೃಷಿಯನ್ನು ಮುಂದುವರೆಯುತ್ತಾ ಅದು ಸರಿ ಹೋಗುತ್ತದೆ. ಬೆರಳಚ್ಚು ತಪ್ಪುಗಳ ಬಗ್ಗೆ ಸ್ವಲ್ಪ ನಿಗಾ ವಹಿಸಿ, ಶುಭವಾಗಲಿ.

    - ಪ್ರಸಾದ್.ಡಿ.ವಿ.

    ReplyDelete
  8. ಮಂಗಳಮುಖಿಯರ ಅಂತರಾಳದ ತುಮುಲಗಳನ್ನ ಪದಗಳಲ್ಲಿ ಹೆಣೆಯುವ ನಿನ್ನ ಕವನ ಮನಸಿಗೆ ನಾಟುವಂತಿದೆ. ಪ್ರತಿಯೊಂದು ಸಾಲೂ ಕೂಡ ಅವರ ಅಸಹಾಯಕತೆಯನ್ನ ಬಿಂಬಿಸುತ್ತಿದೆ, ಟಿಪಿಕಲ್ ವೈಶೂ ಕವನ. ಇಂಥಹ ಭಿನ್ನ-ಭಿನ್ನ ಪ್ರಭಾವಿ ಕವನಗಳು/ಬರಹಗಳು ಇನ್ನಷ್ಟು ನಿನ್ನಿಂದ ಹೊರಹೊಮ್ಮಲಿ.

    & ಸತೀಶ್ ಹೇಳಿದ ಹಾಗೆ ನನಗೇನೂ ಅಚ್ಚರಿಯಾಗುತ್ತಿಲ್ಲ :p ನಿನ್ನಿಂದ ನಾ ಇಂಥಹ ಬರಹಗಳನ್ನ expect ಮಾಡಿದ್ದೆ :)

    ReplyDelete
    Replies
    1. ಕೊನೆಯದಾಗಿ, ಬರಿ ಮಂಗಳಮುಖಿಯರಿಗೆ ಮಾತ್ರವಲ್ಲ, ಹೆಣ್ಣಿಗೂ ಕೂಡಾ ಅಂತರಾಳದಲ್ಲಿ ಸುಡುವ ಜ್ವಾಲೆಗಳಿವೆ ಅಂತಾ ನೀ ಹೇಳಿರುವ ರೀತಿ ಇಷ್ಟವಾಯಿತು :)

      Delete
  9. Yshu.....
    Its only you, who can write like this.
    Am proud of myself, you know why..... coz am your Fan :).......

    Roopa

    ReplyDelete
  10. 'ಮೋಹಿನಿ ಗಾನ' ಕವನ ಚೆನ್ನಾಗಿದೆ....
    'ಸುಕೋಮಲ ಚರ್ಮದವಳಲ್ಲ
    ನುನುಪಿನ ಗಲ್ಲ ಅವಳಿಗಿಲ್ಲ
    ಗುನುಗುವ ಕಂಠವೋ ಬಲು ಗಡಸು
    ಆದರೇನು ಮನದೊಳಗೆ ಸ್ಪುರಿಸುವುದು
    ಮೃದು ಭಾವದ ಮೋಹಿನಿ ಗಾನ'
    ಸೌಂದರ್ಯ ಎಂದರೆ ಮನದ ಸಕಾರಾತ್ಮಕ ಭಾವಗಳು,
    ಇವುಗಳ ಬಣ್ಣ ಎಂದಿಗೂ ಆಕರ್ಷಕ,
    ಕವಿತೆ ಮೂಲಕ ಇಂಥ ಇವುಗಳನ್ನ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ... ಅಭಿನಂದನೆ...ಧನ್ಯವಾದ

    ReplyDelete
  11. ಎಲ್ಲಿದ್ದಿರಿ ವೈಶು ...ಎಷ್ಟು ದಿನ ಆಯ್ತು ಇಲ್ಲಿ ಬಂದು ?

    ReplyDelete
  12. ನಿಮ್ಮ ಕವಿತೆ ತುಂಬಾ ಭಾವನಾತ್ಮಕವಾಗಿದೆ."ಹುಟ್ಟ ಮನೆಗೆ ಕಳ್ಳ ಅತಿಥಿಯಾದೆ " ನಿಜಕ್ಕೂ ಮನ ಮುಟ್ಟುವ ಸಾಲುಗಳು .

    ReplyDelete
  13. Wonderful composition, keep writing. Thanks

    ReplyDelete
  14. ಉತ್ತಮ ಮಾಹಿತಿಗಾಗಿ
    https://kannadinfodesk.blogspot.com/?m=1

    ReplyDelete