ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ ಪ್ರಜ್ವಲಿಸುವುದವನಂದೇ
ನಿಮ್ಮದೋ ಹಳದಿ ಕೆಂಪು ನಾನಾ ಬಣ್ಣಗಳು
ನಡುಮಧ್ಯೆ ಗಾಜಿನ ಸೂರುಗಳು,
ಕಾವಲಿಗೆ ಬೆದರು ಗೊಂಬೆಗಳ ಸಾಲುಗಳು
ಗುಮ್ಮನೆ ಕೂತ ಅವನಿಗೂ ಕಳ್ಳರ ಭಯ ನಿಮ್ಮಲ್ಲಿ
ಚಿಲಕವಿರುವ ಗುಡಿಯೊಳಗೂ ತೀರದ ಬವಣೆಗಳು
ನಿಮ್ಮಯ ಒಂದು ಊಟಕ್ಕೋ,
ಕುದುರೆ ಓಟಕ್ಕೋ,ಆಳುವ ಚಟಕ್ಕೋ
ಅವನು ನುಚ್ಚಾದ,ಮಿನುಗುವ ನೂರಾದ
ಇಂಚಿಂಚು ಬಿಂಬದೊಳು ಕತ್ತರಿಸಿದ ಕೈಯಾದ,
ಬರಿಯ ಕಣ್ಣು ಕುಕ್ಕುವ ಮೆರಗಾದ.
ಅಲ್ಲೊಬ್ಬ ಕುಂಟ ಅಜ್ಜ,
ಕೂರುತ್ತಾನೆ ಅವನ ಕಾಯುತ್ತಾನೆ
ಹಸ್ತವ ಚಾಚುತ್ತಾನೆ ಕೇಳಿದರೆ ಹುಡುಕುತ್ತಾನೆ
ಕಡೆಗೆ ದೇವರೆಂದು ನಿಮಗೆ ತಲೆ ಬಾಗುತ್ತಾನೆ
ನಿಮ್ಮಯ ಬೀದಿ ದೀಪಗಳ ಅಗತ್ಯವಿಲ್ಲಯೆನಗೆ
ನಾನೇನಿದ್ದರು ಚಂದ್ರನ ಪ್ರೇಮಿ
ಅಮಾವಾಸ್ಯೆಯ ದಿನ ಗತಿಯೇನೆಂದು ಕೆಣಕದಿರಿ
ಅಣು ಅಣುವಿಗೂ ವಿರಹಾಗ್ನಿ ತಾಕಿರಲು
ಪರಾಕಾಷ್ಠೆಯಲಿ ನನ್ನೊಳಗೆ ಪ್ರಜ್ವಲಿಸುವುದವನಂದೇ!