ಕುಮಾರ ಪರ್ವತ |
ಕುಮಾರ ಧಾರೆ |
ಬೆಂಗಳೂರಿನಿಂದ ಸಕಲೇಶಪುರ ತಲುಪಿ ಅಲ್ಲಿಂದ ಶಿರಾಡಿ ಘಾಟಿನ ರಸ್ತೆ ಹಿಡಿದು ಅಂಕು ಡೊಂಕಿನ ತಿರುವುಗಳ ಉದ್ದಕ್ಕೂ ಕಾಣುವ ವನ ರಾಶಿಯ ಸೌಂದರ್ಯ ಸವಿಯುತ್ತ ೩೦ ಕಿಲೋಮೀಟರ್ ಕೆಳಗಿಳಿದರೆ ಗುಂಡ್ಯ ಸಿಗುತ್ತದೆ.ಗುಂಡ್ಯದ ಸಮೀಪ ಎಡಕ್ಕೆ ಸಾಗುವ ನೇರ ದಾರಿಯಲ್ಲಿ ೨೨ ಕಿ-ಲೋಮೀಟರ್ ಚಲಿಸುತ್ತ ಹೋದರೆ ನಮ್ಮನ ಸ್ವಾಗತಿಸೋದು ಕುಮಾರ ಧಾರೆ ಹೊಳೆ.ಪ್ರಕೃತಿಯ ಮಡಿಲಿಂದ ನಿರ್ಮಲವಾಗಿ ಊರಿನತ್ತ ಹರಿಯುವ ಹೊಳೆಯ ಮೇಲೆ ಗಟ್ಟಿಯಾಗಿ ಚಾಚಿಕೊಂಡಿರುವ ಸೇತುವೆ ದಾಟಿ ಹೆಬ್ಬಾಗಿಲು ಸಮೀಪಿಸುತ್ತಲೇ ತನ್ನ ತಾನೇ ಕಣ್ಣುಗಳು ಅರಳಿಕೊಳ್ಳುತ್ತವೆ ಕೈಗಳು ಪ್ರಕೃತಿಗೆ ವಂದಿಸುತ್ತವೆ ಮನದಲ್ಲೇನೋ ಪುಳಕ ಸುಬ್ಬಪ್ಪನನ್ನ ಕಾಣುವ ಕಾತುರ ಹಿಮ್ಮಡಿಗೊಳ್ಳುತ್ತೆ.ಸುಬ್ಬಪ್ಪ ನನಗ್ಯಾವತ್ತು ದೇವರೆನಿಸಲೇ ಇಲ್ಲ ಅವನು ಗೆಳೆಯನಷ್ಟೇ ಆಪ್ತ.ಎಂದಿಗೂ ಭಯ ಉಲ್ಬಣಿಸಿದಿಲ್ಲ ಭಕ್ತಿಗಿಂತ ಅವನಲ್ಲಿ ಸ್ನೇಹ ಅಂಕುರಿಸಿದ್ದೆ ಜಾಸ್ತಿ.
ಕುಕ್ಕೆ ಸುಬ್ರಹ್ಮಣ್ಯ |
ಸಣ್ಣತರಲ್ಲಿ ನಾಗಪ್ಪ ಊರಿನ ನಮ್ಮ ಮನೆಯ ಹಿತ್ತಲಿಗೆ ಬಂದಾಗ ಅಬ(ಅಜ್ಜಿ) ಒಂದು ಮೊಟ್ಟೆ ಇಟ್ಟು ಕೈ ಮುಗಿಯಲು ಹೇಳುತ್ತಿದ್ದಳು.ನಮ್ಮೂರಿನಲ್ಲಿ ಆ ದಿನಗಳಲ್ಲಿ ದಾರಿಗೊಂದು ಕೆರೆ ಹಾವು ನೋಡ ಸಿಗುತ್ತಿತ್ತು .ಕೆಲವೊಮ್ಮೆ ಸರ್ಪಾಧಿಪತಿ ನಾಗಪ್ಪನ ದರುಶನವು ಆಗುತ್ತಿತ್ತು.ಅಷ್ಟಿದ್ದರು ಅಲ್ಲಿ ಹಾವು ಕಡಿದು ತೊಂದರೆಗಿಡಾದವರು ಮರಣವನಪ್ಪಿದವರೆ ಇಲ್ಲ.ಮನೆ ಮಕ್ಕಳಿಗೆ ಇಷ್ಟು ಸಲುಗೆ ಕೊಟ್ಟಿರುವ ದೇವರಲ್ಲಿ ಭಯ ಭೀತಿ ಎಲ್ಲಿಂದ ಆವರಿಸಿಕೊಳ್ಳಬೇಕು ಹೇಳಿ? ಹಾಗೆ,ನಾವೂ ಕೂಡ ಅದಕ್ಕೆ ಕಿಟಲೆ ಮಾಡುವುದಾಗಲಿ ತೊಂದರೆ ಕೊಡೋದಾಗ್ಲಿ ಮಾಡಿದ್ದಿಲ್ಲ ಬಿಡಿ.ಅದನ್ನ ಕಂಡು ತೀರ ಬೆದರೋದು ಇಲ್ಲ.ಅದರ ಸುದ್ಧಿಗೆ ನಾವು ಹೋಗಲ್ಲ ನಮ್ಮ ಸುದ್ಧಿಗೆ ಅದು ಬರೋಲ್ಲ ಥೇಟ್ ಬೆಂಗಳೂರಿನ ನೆರೆ ಕೆರೆಯವರಂತೆ!ಕಂಡಾಗ ಕೈ ಮುಗಿಯುವುದಷ್ಟೇ.ಎಲ್ಲಾ ಪುಣ್ಯ ಕ್ಷೇತ್ರದಲ್ಲೂ ಇಂತದೊಂದು ಅದ್ಬುತ ಅಗೋಚರವೆನಿಸುವ ಹುಬ್ಬೇರಿಸುವಂತ ಸಂಗತಿಗಳು ಇದ್ದೆ ಇರುತ್ತವೆ.ನಾವು ಸಾಕ್ಷಿಯಾಗುವ ಅದ್ಬುತಗಳಿಗೆ ಅಲ್ಲಿನ ಜನರು ಪಾಲಿಸಿಕೊಂಡು ಬಂದಿರುವ ಜೀವನಶೈಲಿ ಅವರಿಗೂ ಪರಿಸರಕ್ಕೂ ಇರುವ ಸಂಪರ್ಕ ಹೊಂದಾಣಿಕೆಯೂ ಒಂದು ಕಾರಣ,ಅದಕ್ಕೆ ಪೂರಕವಾಗಿ ಇವೆಲ್ಲ ಆಗುತ್ತವೆ ಅಂದರೆ ಉತ್ಪ್ರೇಕ್ಷೆಯಲ್ಲ .ಹಿಂದೊಮ್ಮೆ ಇಡಿ ಭಾರತ ಭೂಮಿಯೇ ಪುಣ್ಯ ಕ್ಷೇತ್ರವಾಗಿತಂತ್ತೆ.ಈಗಾ ಹಾಗೆಂದರೆ ನಿಶ್ಚಯವಾಗಿ ಪಾಪ ಗಂಟು ಬೀಳಬಹುದು! ನಮ್ಮದು ಇಂದಿಗೂ ಪುಣ್ಯ ಭೂಮಿಯೇ ನಿಜ,ನಾವು ನಿವಾಸಿಗಳು ಪುಣ್ಯತ್ಮರಾಗಿ ಉಳಿದಿಲ್ಲವಷ್ಟೇ.
ಸಾಮಾನ್ಯವಾಗಿ ಕುಕ್ಕೆ ಸುಬ್ಬಪ್ಪನಲ್ಲಿಗೆ ಗ್ರಹ ದೋಷಗಳಿಂದ ನರಳುತಿರುವವರು ಮಕ್ಕಳಿಲ್ಲದವರು ಮದುವೆ ಆಗದವರು ಮತ್ತೆ ಪ್ರಮುಖವಾಗಿ ಅರೋಗ್ಯ ಸಮಸ್ಯೆಯಿಂದ ಅದರಲ್ಲೂ ಚರ್ಮ ರೋಗ ಭಾದಿತರು ಹರಸಿ ಕೊಳ್ಳುತ್ತಾರೆ ಮೂರೆ ಹೋಗುತ್ತಾರೆ.ದಿನಲೂ ಸಾವಿರಾರು ಜನರನ್ನು ಆಕರ್ಷಿಸುವ ಈ ದೇವರಿಗೆ ವರ್ಷಕೊಮ್ಮೆ ಮಾರ್ಗಶಿರ ಮಾಸದಲ್ಲಿ ಉತ್ಸವವೊಂದು ಜರಗುತ್ತದೆ.ಅದುವೇ ಚಂಪಾ ಷಷ್ಠಿ ಉತ್ಸವ.
ಬ್ರಹ್ಮರಥ - ಚಂಪಾ ಷಷ್ಠಿ,2012 |
ಮಡೆ ಮಡೆಸ್ನಾನ -ಚಂಪಾ ಷಷ್ಠಿ,2012 |
ಚಂಪಾ ಷಷ್ಠಿ,2012 |
ಮತ್ತೆ ಇಲ್ಲಿನ ಆವರಣದೊಳಗೆ ಊಟ ಮಾಡಲು ಒಂದು ಪ್ರತ್ಯೇಕ ಮೇಲ್ ವರ್ಗದವರಿಗೆ ಮಾತ್ರ ಅವಕಾಶವಿದೆ.ಸಾಮಾನ್ಯ ಭಕ್ತಾ ವೃಂದ ಅವಕಾಶವಂಚಿತರಾಗಿದ್ದಾರೆ.ಇಲ್ಲಿ ನಿಜವಾದ ಫಲಾನುಭವಿಗಳು ದೇವರ ಸನ್ನಿಧಿಯಲ್ಲಿ ಎಲೆ ಊಟ ಮಾಡಿದವರ ಅಥವಾ ಅದರಲ್ಲಿ ಉರುಳುವವರ ಅನ್ನೋದು ನನ್ನ ವಯಕ್ತಿಕ ಗೊಂದಲಗಳಲ್ಲೊಂದು.ಗರ್ಭಗುಡಿಯ ಒಳಗಿನ ಪ್ರವೇಶಕ್ಕಾದರು ಮಡಿ ಮೈಲಿಗೆ ಮೊದಲಾದ ಸಬೂಬುಗಳು ಒಪ್ಪುವಂತದ್ದು,ಆದರೆ ದೇವಸ್ಥಾನದ ಆವರಣದೊಳಗೆ ಕೇವಲ ಒಂದು ವರ್ಗಕ್ಕೆ ಮಾತ್ರ ಪ್ರಸಾದ(ಎಲೆ ಊಟ) ಸ್ವೀಕರಿಸಲು ಹಕ್ಕು ನೀಡಿದ್ದಾರೆ.ಎಲ್ಲ ಜಾತಿ ಧರ್ಮದವರಿಗೂ ಓಡಾಡುವ ಅವಕಾಶವಿರುವಾಗ ಊಟದ ವಿಷಯದಲ್ಲಿ ಮಾತ್ರ ಬೇರೆಲ್ಲರಿಗೂ ನಿರ್ಭಂದನೆ ಯಾಕೆ? ಇದಕ್ಕುತ್ತರ ಸಾಕ್ಷಾತ್ ನಮ್ಮ ಸುಬ್ಬಪ್ಪನೆ ನೀಡಬೇಕೆನೋ.ಆದರೆ ಯಾಕೋ ಏನೋ ಇವೆಲ್ಲದಕ್ಕಿಂತಲೂ ಸುದ್ಧಿ ಆಗಿದ್ದು ಮಡೆ ಮಡೆಸ್ನಾನದಿಂದ ಮಲೆಕುಡಿಯ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ.
ಕುಕ್ಕೆ ಸುಬ್ಬಪ್ಪ ತಮ್ಮ ಇಷ್ಟಾರ್ಥ ನೆರವೇರಿಸಲಿಯೆಂದು ದೋಷ ಕಾಯಿಲೆಗಳು ಗುಣವಾಗಲೆಂದು ಹರಕೆ ಹೊರುವ ಅಥವಾ ನೆರವೇರಿಸಿದಾಗ ಕೃತಜ್ಞರಾಗಿ ಹರಕೆ ತೀರಿಸುವ ಪದ್ದತಿಯಾಗಿ ಈ ಮಡೆ ಸ್ನಾನಗಳು ಆಚರಣೆಗೆ ಬಂದವು.ಇದು ಶತಮಾನಗಳಿಂದಲೂ ಊರಿನನವರು ನಡೆಸಿಕೊಂಡು ಬಂದಿರುವಂತಹ ಸಂಪ್ರದಾಯ.ಅಸಲಿಗೆ ಇದರಲ್ಲಿ ತೊಡಗಿಸಿಕೊಳ್ಳೋಕೆ ಯಾವತ್ತು ಯಾರನ್ನು ಒತ್ತಾಯಿಸಿದಿಲ್ಲ.ಭಕ್ತರು ಸ್ವಯಿಚ್ಚೆಯಿಂದ ಮನಸೋಪೂರ್ವಕವಾಗಿ ನಡಿಸುವ ಸೇವೆಯಿದು.ಮಜಾ ಏನಂದರೆ ಇಂದು ಇಲ್ಲಿ ಮಡೆಸ್ನಾನ ಸೇವೆಯಾಗಲಿ ಮಡೆ ಮಡೆಸ್ನಾನ ಸೇವೆಯಾಗಲಿ ಅಲ್ಲಿನ ಮೂಲ ನಿವಾಸಿಗಳಿಗಿಂತಲೂ ಪರ ಊರಿನವರು ಮಾಡುವುದನ್ನ ಹೆಚ್ಚು ಕಾಣಬಹುದು.ಇನ್ನು ಅವರನ್ನೆಲಾ ಬಲವಂತದಿಂದ ಮಾಡಿಸುವ ಪ್ರಶ್ನೆಯ ಏಳುವುದಿಲ್ಲ ಎಲ್ಲ ಅವರವರ ನಂಬಿಕೆಗೆ ಶ್ರದ್ದೆಗೆ ಬಿಟ್ಟಂತ ವಿಚಾರಗಳು.ಆದರೆ ಎಲ್ಲೆಡೆ ಇದು ಪ್ರಚಾರವಾಗಿದ್ದು ಮಾತ್ರ ಕೇವಲ ಒಂದು ಜನಾಂಗ ನಡೆಸುತ್ತಿರುವ ಸೇವೆಯೆಂದು! ಪುರಾತನ ಕಾಲದಿಂದಲೂ ಸ್ವಯಿಚ್ಛೆಯಿಂದಲೇ ಮಡೆ ಮಡೆಸ್ನಾನವನ್ನು ಇಲ್ಲಿನ ಮಲೆಕುಡಿಯ ಜನಾಂಗದವರು ಸೇರಿದಂತೆ ಬ್ರಾಹ್ಮಣರು ಆಚಾರಿಗಳು ಮುಸುಲ್ಮಾನರು ಬೇರೆ ಇತರರೂ ಮಾಡುತ್ತಾ ಬಂದಿದ್ದಾರೆ.
ಪಂಚಮಿ ರಥ - ಚಂಪಾ ಷಷ್ಠಿ,2012 |
ಆದರೆ ಇದೀಗ ಈ ಪುಣ್ಯ ಕ್ಷೇತ್ರ ದೇಶಾದ್ಯಂತ ಹೆಚ್ಚು ಪ್ರಸಿದ್ಧಿ ಹೊಂದಿದ್ದೆ ತಡ ಕಟ್ಟು ಕಥೆಗಳು ಹಬ್ಬತೊಡಗಿವೆ.ಕಳೆದ ವರ್ಷ ಮಡೆ ಸ್ನಾನದ ನೆಪದಲ್ಲಿ ದಲಿತರಾದ ಮಲೆಕುಡಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪ್ರತಿಬಿಂಬಿಸಲಾಯಿತು.ಕರ್ನಾಟಕ ತಮಿಳುನಾಡಿನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇದ್ದರೂ ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ ಅಲ್ಲವೇ? ಹಾಗೆಯೇ ಇಲ್ಲಿಯೂ ಆದದ್ದು ಎಂದುಕೊಳ್ಳಿ.ಮೇಲ್ ವರ್ಗದ ಜನ ಮತ್ತು ದಲಿತ ಮಲೆಕುಡಿಯರ ನಡುವೆ ಎಲ್ಲವೂ ಸರಿ ಇದೆ ಎನ್ನಲಾಗದು.ದೇವಸ್ಥಾನದ ಆಡಳಿತ ಪರಿವಿಧಿಯಲ್ಲಿ ಎಲ್ಲರಿಗೂ ಸಮಾನ ಹಕ್ಕು,ಉದ್ಯೋಗಾವಕಾಶಗಳು ನೀಡಲಾಗಿಲ್ಲ ಎಂಬ ಕೂಗು ಇಲ್ಲಿ ಕೇಳಿ ಬರುತ್ತದೆ.ಒಳ ಜಗಳ, ಒಂದು ವರ್ಗದ ಮೇಲ್ಗೈ,ದಬ್ಬಾಳಿಕೆ ಇದ್ದದ್ದೇ ...ಹಾಗಂತ ತಮ್ಮ ಅಸ್ಥಿತ್ವ ಪ್ರತಿನಿಧಿಸುವ ತಮ್ಮ ಹೊಟ್ಟೆಪಾಡು ನೀಗಿಸುತ್ತಿರುವ ಎಲ್ಲದಕ್ಕೂ ಮಿಗಿಲಾಗಿ ಭಾವನಾತ್ಮಕ ಸಂಭಂದವಿರುವ ದೇವಸ್ಥಾನದ ಆಚರಣೆಗಳ ವಿರುದ್ದ ತಮ್ಮ ಜನಾಂಗದ ಹೆಸರನ್ನು ಅಸ್ತ್ರವಾಗಿ ಬಳಸಿಕೊಂಡು ಇಲ್ಲದ ಆರೋಪಗಳ ಮಳೆಗರಿಸಿದರೆ ಯಾರು ತಾನೇ ಸುಮ್ಮನಿದ್ದಾರು ಹೇಳಿ? ಅಷ್ಟಕ್ಕೂ ಮಲೆಕುಡಿಯರಿಗೂ ಈ ದೇವರಿಗೂ ಹತ್ತಿರದ ನಂಟಿದೆ.ಊರಿನಲ್ಲಿ ಇವರನೊಳಕೊಂಡಂತೆ ಒಂದು ಕಥೆ ಕೇಳಿ ಬರುತ್ತದೆ.ಯುಗಗಳ ಹಿಂದೆ ಈ ಪ್ರದೇಶದ ಮಲೆಗಳಲ್ಲಿ ಕಾಡ್ಗಿಚ್ಚು ಹತ್ತಿಕೊಂಡಿತಂತೆ.ಬೆಂಕಿಯ ನಡುವೆ ದಿಗ್ಬಂದನವಾಗಿದ್ದ ದೇವ ಸರ್ಪವೊಂದರ ನರಳುವಿಕೆಯಾ ಕೂಗು ಭೇಟಿಗೆಂದು ಹೋಗಿದ್ದ ಮಲೆಕುಡಿ ಜನಾಂಗದ ಪೂರ್ವಜರ ಕಿವಿಗೆ ಬಿದ್ದಿತಂತೆ.ಸರ್ಪದ ದಯನೀಯ ಸ್ಥಿತಿ ಕಂಡು ಅದನ್ನ ಬೆಂಕಿಯಿಂದ ರಕ್ಷಿಸಿ ತಾನು ತಂದ ಕುಕ್ಕೆ ಯಲ್ಲಿ ಇಟ್ಟುಕೊಂಡು ಬೆಟ್ಟದ ಕೆಳಗೆ ನಡೆಯುತ್ತಿದ್ದಾಗ ನಿನಗೆ ಭಾರವೆನಿಸಿದ ಜಾಗದಲ್ಲಿ ನನ್ನನಿಳಿಸು ಎಂಬ ಅಶರೀರ ವಾಣಿ ಕೇಳಿತಂತೆ.ಆ ಮಾತಿನಂತೆ ಅದು ಭಾರವಾಗ ತೊಡಗಿದ ಜಾಗದಲ್ಲಿ ಇಳಿಸಲಾಯಿತು.ಆದರೆ ಆ ಸ್ಥಳ, ಬೆಂಕಿಯ ಭಯದಿಂದ ಬೆಂದಿದ್ದ ಸರ್ಪಕ್ಕೆ ಕ್ಷೇಮವೆನಿಸದ ಕಾರಣ ಅದು ಅಲ್ಲಿಂದ ಸುಮಾರು ಹೆಜ್ಜೆಯ ದೂರದಲ್ಲಿ ಸುತ್ತಲೂ ನೀರು ಹರಿಯುವಂತ ಸ್ಥಳದಲ್ಲಿ ತನ್ನನ್ನು ಬಿಡುವಂತೆ ಸೂಚಿಸಿತಂತೆ.ಸರ್ಪವನ್ನು ಮೂಲವಾಗಿ ಇಳಿಸಿದ ಸ್ಥಳವೆ 'ಆದಿ ಸುಬ್ರಹ್ಮಣ್ಯ' ಎಂದು ಪ್ರಸಿದ್ದವಾಯಿತು ಅಲ್ಲಿನ ಗರ್ಭ ಗುಡಿಯಲ್ಲಿ ಇಂದಿಗೂ ಕೇವಲ ಹುತ್ತವನ್ನು ಮಾತ್ರ ಕಾಣಾಬಹುದಾಗಿದೆ.ದರ್ಪಣತೀರ್ಥ ಹಾಗು ಕುಮಾರ ಧಾರೆ ನದಿಯು ಕುಕ್ಕೆ ದೇವಸ್ಥಾನ ಪ್ರದೇಶದ ಸುತ್ತಲೂ ಹರಿದು ಹೋಗುತ್ತದೆ.ಕುಕ್ಕೆ ಯಲ್ಲಿ ಹೊತ್ತು ತಂದದ್ದಕ್ಕೆ ಸರ್ಪ ನೆಲೆಸಿದ ಸುತ್ತಲೂ ನೀರಿರುವ ಜಾಗ "ಕುಕ್ಕೆ ಸುಬ್ರಹ್ಮಣ್ಯ" ಎಂದು ನಮಾಕರಣಗೊಂಡಿದೆ ಎಂಬುದಾಗಿ ಕಥೆ ಸಾರುತ್ತದೆ.ಹಾಗಾಗಿಯೇ ಇಲ್ಲಿನ ದೇವಸ್ಥಾನದ ಪದ್ದತಿಯನ್ನು ದೂಷಿಸುತ್ತಿರುವವರ ಎದುರು ದೇವಸ್ಥಾನದ ಮಲೆಕುಡಿಯ ಕಾರ್ಮಿಕರು ಸಿಡಿದೆದ್ದಿದ್ದು.ಇಡಿ ಮಲೆಕುಡಿಯ ಸಮುದಾಯ ಇವರ ಬೆನ್ನ ಹಿಂದೆ ನಿಂತ್ತಿದ್ದು.ಅಂದು ಪ್ರತಿಭಟಿಸಲು ಬಂದ ದಲಿತ ಮುಖಂಡರು, ತಮ್ಮ ವಿರುದ್ದ ನಿಂತ ದಲಿತ ಮಲೆಕುಡಿಯರ ಕುರಿತಾಗಿ,"ನೀವೆಲ್ಲಾ ದೌರ್ಜನ್ಯವನ್ನು ಸಹಿಸುತ್ತಿರುವ ಅನಾಗರಿಕರು" ಎಂದಾಗಲೇ ಅವರೊಡನೆ ಕೈ ಕೈ ಮಿಲಾಯಿಸಿ ಕಡೆಗೆ ಜೈಲಿಗೂ ಹೋಗಿ ಬಂದರು.ಮಲೆಕುಡಿಯರ ಈ ವರ್ತನೆ ಹಿಂದೆ ಮೇಲ್ವರ್ಗ ಜನರ ಆಡಳಿತ ಮಂಡಳಿಯ ಕುಮ್ಮಕ್ಕಿತ್ತೆಂದು ಹೇಳುವವರು ಇದ್ದಾರೆ.ಅದು ಒಂದು ಮಟ್ಟಿಗೆ ಸರಿಯೂ ಹೌದು ಯಾಕಂದರೆ ಆರೋಪ ಮೇಲ್ವರ್ಗದ ಜನ ಹಾಗು ಮಲೆಕುಡಿಯರಿಬ್ಬರಿಗೂ ಸಂಭಂದಿಸಿದ್ದು ಇದಕ್ಕೆ ಇಬ್ಬರೂ ಕೂಡಿ ಪ್ರತಿಭಟಿಸಬೇಕಿತ್ತು.ಸರ್ವರೆದುರು ದಲಿತ ಸಂಘಟನೆಗಳು ನಿರ್ಮಿಸಿದ ಗೊಂದಲಕ್ಕೆ ಉತ್ತರಿಸಬೇಕಿತ್ತು ಹಾಗಾಗಿದ್ದರೆ ಇದು ಇಷ್ಟು ದೂರ ಮುಂದುವರೆಯುತ್ತಿರಲಿಲ್ಲವೇನೋ.
ಮಡೆ ಮಡೆಸ್ನಾನ ದಿಂದ ಕಷ್ಟಗಳು ಪರಿಹಾರವಾಗಿತೆ,ಕಾಯಿಲೆಗಳು ಗುಣವಾಗಿತೆ ಅನ್ನೋ ಪ್ರಶ್ನೆಗಳು ಹಲವರದ್ದು.ಹಾಲು ಕುಡಿಯುವ ಎಳೆಗೂಸು ಮಾತ್ರ ಅಮ್ಮನ ಹಾಲಿನ ರುಚಿ ಬಲ್ಲದು ಅಲ್ಲವೇ? ಅಂತೆಯೇ ಅದು ಕೆಟ್ಟಾಗ ಮಗುವಿನ ರುಚಿಗೆ ಆರೋಗ್ಯಕ್ಕೆ ತಕ್ಕದಾಗಿ ಶೋಧಿಕರಿಸಿ ಉಣಿಸ ಬೇಕೇ ಹೊರತು ನಾವು ದೊಡ್ಡವರ ನಾಲಿಗೆಗೆ ಅದು ಎಷ್ಟು ಸಲ್ಲುತ್ತದೆ ಅನ್ನೋದರ ಮೇಲಲ್ಲ.ಹಾಗೆ ಧರ್ಮ ದೇವರನ್ನೋಳಗೊಂಡ ನಂಬಿಕೆಯೊಂದು ಮೌಡ್ಯತೆ ಎಂದು ಬಿಂಬಿತವಾದ ಹಿನ್ನಲೆಯಲ್ಲಿ ಅದನ್ನು ಆಸ್ತಿಕರ ದೃಷ್ಟಿಕೋನದಿಂದ ಚರ್ಚಿಸಬೇಕೆ ವಿನಹ ನಾಸ್ತಿಕರ ದೃಷ್ಟಿಕೋನ ಇಟ್ಟುಕೊಂಡು ವಾದಕ್ಕಿಳಿಯುವುದು ಸಮಂಜಸವಲ್ಲ.ಮಡೆ ಸ್ನಾನದಿಂದ ಅರೋಗ್ಯ ವೃದ್ಧಿಸುತ್ತದೆ ರೋಗ ರುಜಿನಗಳು ಇಲ್ಲವಾಗುತ್ತದೆ ದೇವರ ಕೃಪೆಗೆ ಪಾತ್ರರಾಗುತ್ತೇವೆ ಎಂಬುದು ಜಾತ್ಯಾತಿತಾರಾದ ಭಕ್ತರ ನಂಬಿಕೆ.ಧಾರ್ಮಿಕ ನಂಬಿಕೆಗಳನ್ನ ಪ್ರಶ್ನಿಸುವ ಅಧಿಕಾರ ನಮ್ಮ ಸಂವಿಧಾನ ಸರ್ಕಾರಕ್ಕೆ ನೀಡಿದೆ.ಧಾರ್ಮಿಕ ನಂಬಿಕೆಗಳನ್ನ ಒಬ್ಬರ ಮೇಲೆ ಬಲವಂತಾವಾಗಿ ಹೇರಿದಾಗ ಅದರಿಂದಾಗಿ ಒಬ್ಬ ವ್ಯಕ್ತಿಗೆ ಅಥವಾ ಸಮೂಹಕ್ಕೆ ಮಾನಸಿಕ ದೈಹಿಕ ಹಿಂಸೆ ತೊಂದರೆಗಳಾದಾಗ ಅಂತಹುಗಳನ್ನು ತಡೆಯುವ ನಿಷ್ಕ್ರಿಯೇಗೊಳಿಸುವ ಹಕ್ಕೂ ಸರ್ಕಾರಕ್ಕಿದೆ.ಈ ಆಚರಣೆಯಲ್ಲಿ 'ಎಂಜಿಲಿನ' ಮೇಲೆ ಉರುಳುತಿದ್ದಾರೆ ಅನ್ನುವುದ ಬಿಟ್ಟರೆ ಬೇರೆ ಯಾವ ತರನಾದ ದೌರ್ಜನ್ಯವು ಯಾರ ಮೇಲೂ ನಡೆಯುತ್ತಿಲ್ಲ.ಹಾಗಾಗಿ ಇಡಿ ಆಚರಣೆಯನ್ನೇ ಸಾರಾಸಗಟು ವಿರೋಧಿಸುವುದು ಎಲ್ಲಿಯ ನ್ಯಾಯ? ಈ ವರ್ಷ ಎಂದಿನಂತೆ ಮಡೆ ಸ್ನಾನ ನಡೆಸಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿತು.ಕೊಂಚ ತಿದ್ದು ಪಡಿಯೊಂದಿಗೆ ಇದನ್ನ ಮುಂದುವರಿಸುವುದು ಒಳಿತೆಂಬುದು ನನ್ನ ವಯಕ್ತಿವ ಭಾವನೆ.
ಸಾಮಾಜಿಕ ಸೋಂಕನ್ನ ತಡೆಗಟ್ಟುವ ಬದಲು ಅವನಿನ್ನೂ ದ್ವಿಗುಣಗೊಳಿಸುವ ಅಂತರವನ್ನು ಬೆಳೆಸಲು ಪುಷ್ಟಿ ಕೊಡುವ ಸಮೂಹಗಳ ಪ್ರಯತ್ನಗಳು ಆಗಾಗ ನಡೆಯುತ್ತಲೆ ಇರುತ್ತಾವೆ.ಎಲ್ಲರಿಗು ಅವರವರದೇ ಸಮರ್ಥನೆಗಳಿರುವುದರಿಂದ ಇಲ್ಲಿ ಯಾರದ್ದು ತಪ್ಪುಯಾರದ್ದು ಸರಿ ಎಂದು ನಿರ್ದಿಷ್ಟವಾಗಿ ಹೇಳಾಲಾಗದು.ಮೇಲ್ ವರ್ಗದವರು ಹಾಗು ಆಡಳಿತ ಮಂಡಳಿಯೂ ಆರೋಪ ಹೊತ್ತರು ಸಂಯಮ ಕಾಯ್ದು ಕೊಂಡಿದ್ದು ಪ್ರಶಂಸನೀಯ.ಇನ್ನಾದರೂ ಅವರು ದೇವಸ್ಥಾನದ ಕಾರ್ಯಗಳಲ್ಲಿನ ಎಲ್ಲಾ ವಿಭಾಗದಲ್ಲೂ ತೊಡಗಿಸಿಕೊಳ್ಳಲು ಊರಿನ ಇತರ ವರ್ಗದ ಜನರಿಗೂ "ಸಮಾನವಕಾಶ" ದೊರಕಿಸಿಕೊಡುವಂತಾಗಲಿ.ಮಲೆಕುಡಿಯರು ತಾವು ಹಿಂದುಳಿದವರು ಅಂದು ಕೊಂಡರೆ ಎಂದಿಗೂ ಹಿಂದೆಯೇ ಉಳಿದು ಬಿಡುತ್ತಾರೆ.ಅದನ್ನ ಬಿಟ್ಟು ಅವರು ಪರದೆಯ ಮುಂದೆ ಬರಬೇಕು.ಇದನ್ನು ಸಂಭಾಳಿಸಿದಂತೆ ಅವರೆಲ್ಲ ಸಮಸ್ಯೆಗಳಿಗೂ ಸಂಘ ಸಂಸ್ಥೆಗಳ ನೆಚ್ಚದೆ ತಾವೇ ಧೈರ್ಯವಾಗಿ ಮುನ್ನುಗ್ಗಿ ಪರಿಹಾರ ಹುಡುಕಿಕೊಳ್ಳುವಂತಾಗಬೇಕು.ಒಂದು ವರ್ಗಕ್ಕೆ ಅನ್ಯಾಯ ವಾಗುತ್ತಿದೆ ಎಂಬ ವಿಷಯ ಕಿವಿಮೀಟಿದಾಗ ಸಂಭಂದ ಪಟ್ಟ ಸಂಘಟನೆಗಳು ಹೋರಾಟಕ್ಕಿಳಿಯುವುದು ಸಹಜವೇ.ದಲಿತ ಸಂಘಟನೆಯೂ ಅದನ್ನೇ ಮಾಡಿದೆ.ಆದರೆ ಅದಕ್ಕೂ ಮುನ್ನ ಬಂದ ಸುದ್ಧಿಗಳ ವಿಷಯ ಮಂಥನವಾಗಬೇಕಿತ್ತಲ್ಲವೇ? ಸತ್ಯಸಥ್ಯತೆಗಳ ಪರಿಶೀಲನೆ ನಡಿಸಬೇಕಿತ್ತು.ಯಾವುದೇ ಸಂಘದ ಹೋರಾಟವಾಗಿರಲಿ ಸುಮ್ಮನೆ ಗಲಭೆ ಸೃಷ್ಟಿಸುವ ಬದಲು ಅದನ್ನಾಶ್ರಯಿಸಿರುವ ಜನರ ಅಭಿವೃದ್ಧಿ ಪರನಾಗಿ ಚಿಂತನೆ ನಡಿಸಬೇಕು.ಪ್ರಚಲಿತವಾಗಿರುವ ಸುಳ್ಳಿನ ಪದರುಗಳ ಸರಿಸಿ ನಿಜ ಸಮಸ್ಯೆಯನ್ನು ಸಂಘಟನೆಗಳು ಗುರುತಿಸುವಂತಾಗಬೇಕು.
ಸಮಸ್ಯೆಗಳ ವಿರುದ್ದ ಹೋರಾಡುವು ಮನೋಭಾವಕಿಂತಲೂ ಯಾವ ಸಮಸ್ಯೆಯನ್ನು ಆಯ್ದುಕೊಂಡರೆ ಎತ್ತಿಡಿದರೆ ಅಧಿಕ ಜನರ ಗಮನ ಸೆಳೆಯಬಹುದು ಬೆಂಬಲಗಳಿಸಬಹುದು ಪ್ರಚಾರ ಗಿಟ್ಟಿಸಿಕೊಳ್ಳಬಹುದೆಂಬ ಲೆಕ್ಕಾಚಾರಗಳೇ ಮೇಲೈಸುತ್ತಿವೆ ಎಲ್ಲೆಡೆ.ಅಲ್ಲಿ ಸಮಸ್ಯೆ ಇರಲಿ ಬಿಡಲಿ ಹೆಚ್ಚು ಮನ್ನಣೆ ಸಿಗುವುದೆಂದರೆ ಸಮಸ್ಯೆಗಳಿಗೆ ನವ ಹುಟ್ಟು ಕೊಟ್ಟು ಬಿಡುತ್ತಾರೆ.....ಅದಕ್ಕೊಂದು ನಿದರ್ಶನ ಮಡೆ ಮಡೆ ಸ್ನಾನದಲ್ಲಿನ ಮಲೆಕುಡಿಯರ ದೃಷ್ಟಾಂತ!