ಚಿತ್ರಕೃಪೆ: ಮದನ್ ಕುಮಾರ್ |
ಅಮ್ಮ ಕಾಯುತ್ತಾಳೆ ...
ಎಣ್ಣೆ ತುಂಬಿದ,
ದೀಪವಿಡಿದು,
ಸರ್ವೋದಯದ...
ಸುಖಕ್ಕಾಗಿ !
ಅಲ್ಲೆಲೋ ಕುಂತಿ ಮಕ್ಕಳಂತೆ,
ಐವರು ಮತ್ತೋರ್ವನಿರಬಹುದು,
ಬೇರೆ ಬೇರೆಯಾಗಿ
ಸಾಲಿನಲಿ ..
ಯಾರಿಂದಲೋ ಎರವಲು ಪಡೆದ,
ಪಂಜೆಂಬ,
ಅಫೀಮನು ಹಿಡಿದು ಇತ್ತಲೇ ಬರುತ್ತಿದ್ದಾರಂತೆ..
ಅಮ್ಮ ಕಾಯುತ್ತಾಳೆ ...
ಎಣ್ಣೆ ತುಂಬಿದ,
ದೀಪವಿಡಿದು,
ಸರ್ವೋದಯದ...
ಸುಖಕ್ಕಾಗಿ !
ಒಬ್ಬ ಮುಂದೆಂದರೆ ...
ಇನ್ನೊಬ್ಬನ್ನನ್ನು ಹಿಂದಿಕ್ಕಿರಲೇ ಬೇಕು,
ಹಿಂದುಳಿದಿದ್ದು ಯಾರೆಂಬುದ....
ತಿಳಿಯದಂತೆ!
ಕನವರಿಕೆಯಲಿ...
ತಾ ಮುಂದು ನಾ ಮುಂದು,
ಜಿಗಿಯುತ್ತಲೇ ಮುನ್ನುಗುತ್ತಿದ್ದಾರೆ,
ಯಾರಿಂದಲೋ ಎರವಲು ಪಡೆದ,
ಪಂಜೆಂಬ,
ಅಫೀಮಿನ ಉನ್ಮಾದದಲಿ...
ಮುಂದಿರುವವರು ಹಿಂದಿರುವನೊಬ್ಬನನ್ನು ,
ಸುಟ್ಟೇ ಬಿಟ್ಟಿದ್ದಾರೆ...
ಅಷ್ಟರಲ್ಲೊಬ್ಬ ಆರ್ಭಟಿಸುತ್ತಾನೆ,
"ರಾವಣನನ್ನು ಸುಟ್ಟಿದಾಯ್ತೆ .. "
ಸುಟ್ಟವನನ್ನು ಹಿಂದಿಕ್ಕಿ
ಮತ್ತೆ ಜಿಗಿಯುತ್ತಲೇ ಸಾಗುತ್ತಿದ್ದಾರೆ
ತಾ ಮುಂದು ನಾ ಮುಂದು ..
ಒಬ್ಬ ಮುಂದೆಂದರೆ ...
ಇನ್ನೊಬ್ಬ ಹಿಂದಿರಲೇ ಬೇಕೆಂಬ,
ಅರಿವಿಲ್ಲದಂತೆ ..
ನಿಜ ಗಮ್ಯದ ಪರಿವಿಲ್ಲದಂತೆ!
ಅಮ್ಮ ಒಳಗೊಳಗೇ ಆಶಿಸುತ್ತಾಳೆ,
ದಮಯಂತಿ ನಳರಂತೆ,
ಶಕುಂತಲೆ ದುಷ್ಯಂತರಂತೆ,
ರಾಮ ಅಹಲ್ಯೆಯರಂತೆ ,
ಶಬರಿಯಂತೆ....
ಶಾಪ - ವಿಮೋಚನೆಗಳೆರಡು
ಇರಬಹುದಂತೆ.
ಅಮ್ಮನ ಮಕ್ಕಳoತು
ದಾರಿಯುದ್ದಕ್ಕೂ ಒಬ್ಬೊಬ್ಬರನ್ನು ಸುಡುತ್ತಾ
ಇವನೇ ಸತ್ತನೆಂದು ಅವನು
ಅವನೇ ಸತ್ತಿರಬೇಕೆಂದು ಇವನು
ತಾ ಮುಂದು ನಾ ಮುಂದು...
ಸಾಗಿರುವರು ಜಿಗಿಯುತ್ತಲಿ
ಉನ್ಮಾದದಲಿ...
ಓಯ್! ಗೊತ್ತಿಲ್ಲ ಯಾರಿಗೂ
ಅಲ್ಲಿ ಸಾಗುತ್ತಿರುವುದು ..
ಬರಿಯ ಶವಗಳ ಮೆರವಣಿಗೆಯಂತೆ!
ಮತ್ತೆ ಅಮ್ಮ??
ಅವಳಿನ್ನೂ ಕಾಯುತ್ತಿದ್ದಾಳೆ,
ಎಣ್ಣೆ ತುಂಬಿದ,
ದೀಪವಿಡಿದು,
ಸರ್ವೋದಯದ...
ಸುಖಕ್ಕಾಗಿ!